ರಾ ಬಂದೋಳ್
ಪ್ರಪಂಚವೆಲ್ಲಾ ಚಲಿಸುತ್ತದೆ ಎಂದರೂ
ನಾನು ನಂಬಿರಲಿಲ್ಲ
ಹಾಗೆ ಬರೆಯಲಿಲ್ಲವೆಂದರೆ
ಅಂಕ ಸಿಗುವುದಿಲ್ಲವೆಂದು ಹಾಗೆಯೇ ಬರೆದಿದ್ದೆ
ರೈಲಿನಲ್ಲಿ ಹೋಗುವಾಗ ಗೊತ್ತಾಯಿತು ಹೌದೆಂದು!
ರೈಲು ಚಲಿಸುವ ವಿರುದ್ಧ ದಿಕ್ಕಿಗೆ ನಡೆಯುತ್ತಾ
ಇಡ್ಲಿ ದೋಸೆ ಎಂದು ಕೂಗುತ್ತಾ ಬರುತ್ತಿದ್ದ
ಆಶ್ಚರ್ಯವೋ ಆಶ್ಚರ್ಯ
ಆ ಚಲಿಸುವ ಪ್ರಪಂಚದ ಮೇಲೆ
ಅವನು ಚೀಲವನ್ನು ಹೆಗಲ ಮೇಲೆ
ಹೊರುತ್ತಾ ಇಳಿಸುತ್ತಾ ಸಾಗುತ್ತಿದ್ದ
ಬೇಕಾದವರು ಕೊಂಡು ತಿನ್ನುತ್ತಿದ್ದರು
ಮನೆಯಲ್ಲಿ ತಿಂದ ಹಾಗೆ ತಿನ್ನುತ್ತಿದ್ದರು
ವಾಟರ್ ಬಾಟಲ್ ವಾಟರ್ ಬಾಟಲ್
ಟೀ ಕಾಫಿ ಟೀ ಕಾಫಿ…
ಚೂರೂ ಚೆಲ್ಲುತ್ತಿರಲಿಲ್ಲ…
ಶಾಲೆ ಆಸ್ಪತ್ರೆ ಕಾರ್ಖಾನೆಗಳನ್ನೆಲ್ಲಾ
ಇಲ್ಲಿಯೇ ನಡೆಸಬಹುದು ಅಂದುಕೊಂಡೆ

ಇದು ರಿಸರ್ವೇಶನ್, ಜನರಲ್ ಬೋಗಿ
ಆ ಕಡೆ
ಫೈನ್ ಹಾಕ್ತಾರೆ
ನಾವು ಎಲ್ಲ ಕಡೆಯೂ ದಂಡ ಕಟ್ಟಿಯೇ ಬದುಕುತ್ತಿರುವುದು
ಶಾಲೆಯಲ್ಲಿ ಲೇಟ್ ಅಡ್ಮಿಷನ್ ಫೀ
ಟ್ರಾಫಿಕ್ನಲ್ಲಿ ಹೆಲ್ಮೆಟ್ ಹಾಕಿಲ್ಲ…
ಸಾರ್ ವಿಂಡೋ ಸೀಟು ನಮ್ದು
೯೬ರ ಪಕ್ಕ ಡಬ್ಲ್ಯೂ ಎಂದು ಬರೆದಿದೆ ನೋಡಿ
ಸಾರ್ ನಾವಿಬ್ಬರು ಇದ್ದೇವೆ
ನಮ್ದು ಒಂದು ಸೀಟು ಆ ಕಡೆ ಇದೆ
ನೀವು ಅಲ್ಲಿ ಕೂರಬಹುದಾ?
ಸಾರ್ ಸ್ವಲ್ಪ ಲಗ್ಗೇಜ್ ನೋಡ್ಕೊಳ್ಳಿ
ಇಲ್ಲೇ ಒಂದಕ್ಕೆ ಹೋಗಿ ಬರ್ತೀನಿ
ಬದುಕು ಎಷ್ಟು ಸಹನೀಯ ಇಲ್ಲಿ
ನಿಂತು ಉಚ್ಚೆ ಹೊಯ್ಯುವಾಗ
ಆ ಕಡೆ ಈ ಕಡೆ ಸಿಡಿಯುತ್ತದೆ ಎನ್ನುವುದನ್ನು ಬಿಟ್ಟು
ಮಕ್ಕಳು ಆಗಾಗ
ಚಿಟ್ ಎಂದು ಅಳುತ್ತಾ ಕೂಗುತ್ತವೆ ಎನ್ನುವುದನ್ನು ಬಿಟ್ಟು
ನಿದ್ದೆಗೆ ಜಾರುತ್ತಾ
ಪಕ್ಕದವರು ಭುಜದ ಮೇಲೆ
ತಲೆ ಇಡುತ್ತಾರೆ ಎನ್ನುವುದು ಬಿಟ್ಟು
ಆಗಾಗ ಲಗ್ಗೇಜ್ ಮೇಲೆ ಒಂದು ಕಣ್ಣು
ನೆಟ್ಟಿರಲೇಬೇಕಾಗುತ್ತದೆ ಎನ್ನುವುದನ್ನು ಬಿಟ್ಟು
ನೋಡಿದಷ್ಟೂ ಬಯಲು
ಅಲ್ಲಲ್ಲಿ ತೆಂಗು ಬಾಳೆ ಹೂದೋಟಗಳು
ಅವುಗಳ ಘಮ್ಮೆನ್ನುವ ಪರಿಮಳ
ಎಷ್ಟು ಸುಂದರ ಈ ಕಿಟಕಿಯಿಂದ ಪ್ರಪಂಚ
ಆಗಾಗ ಗಾಳಿಯಲ್ಲಿ ತೇಲಿ ಬರುವ
ಶೌಚಾಲಯದ ವಾಸನೆಯ ಹೊರತು
ಆವಾಗಾವಾಗ ನಿಲ್ಲುವ ರೈಲಿನಲ್ಲಿ
ಜನ ಇಳಿದು
ಈ ಪ್ರಪಂಚದಿಂದ ಇನ್ನೊಂದಕ್ಕೆ
ಲಗ್ಗೇಜ್ ಹೊತ್ತುಕೊಂಡು
ಎಳೆದುಕೊಂಡು ಲೀನವಾಗುತ್ತಾರೆ
ಬೆಳಕಿನ ಸುರಂಗದೊಳಗೆ…






0 Comments