ಪ್ರವರ ಕೊಟ್ಟೂರು
ಸ್ನಾನ ಮಾಡಿ
ಹಬೆ ಬುಸುಗುಡುತಿದ್ದ ಹಸಿ ಮೈಯಿ
ಬಚ್ಚಲು ಮನೆಯಿಂದ ಬೆತ್ತಲೆಯಾದಂಥಾ ಗಾಜಿನ ಹೆಜ್ಜೆಗಳು,
ಪಡಸಾಲೆಯಲ್ಲಿ ತೊಡರಿ ಅಂಗಾತ ಬಿದ್ದ
ಮೊಬ್ಬು ಬೆಳಕಲ್ಲಿ,
ನುಣುಪು ನೆಲ
ರಗ್ಗು ಹೊದ್ದಷ್ಟೇ ಬೆಚ್ಚಗಿನ ಸುಖ
ಅನುಭವಿಸುತ್ತಿವೆ
ನಿಧಾನಕ್ಕೆ
ನಶೆ ಏರಿದಂಥಾ ರತಿ,
ಹೂ ಪಕಳೆಗಳ ಅಂಟಿಸಿದಂಥಾ ನುಣುಪು
ಮೈಯೊಳಗಿನ ಕಸುವು ಸೋರಿ
ತಣ್ಣಗಾಗಿ… ನಡುಗುತ್ತಾ…
ಎದೆ ಕಣಿವೆಗುಂಟ ಜಾರಿದ ಹನಿಗಳ ಮೇಲೆ
ಒಂದಷ್ಟಾದರೂ
ಕರುಣೆ ಇರಬೇಕಿತ್ತು

ರಾತ್ರಿಯನ್ನೆಲ್ಲಾ ಹಿಂಡಿ ತೆಗೆದು
ಸೋಸಿ ಆರಿಸಿದರೆ
ಕೂದಲುಗಳಲ್ಲಿ
ಅಂಟಿಕೊಂಡು
ತಬ್ಬಿಕೊಂಡ ಹಾವುಗಳ ಮೈಥುನದ ಗಾಢ ನೆರಳು
ಪರದೆ ಎಳೆದಷ್ಟೂ…. ಏನಿದ್ದೀತು ಒಳಗೆ!!!
ಕಣ್ಣು ಪಿಳಕಿಸದಂತೆ ನೋಡಿದರೆ
ಬಿಡಿಸಲಾಗದಷ್ಟು ಸಿಕ್ಕುಗಳು
ಕೋಣೆಯ
ಮೂಲೆ ಮೂಲೆಗಳಲ್ಲಿ
ಮೌನವನ್ನೆಲ್ಲಾ ಸೀಳಿ
ಬೆಚ್ಚನೆಯ ಕಿಬ್ಬೊಟ್ಟೆಯ ಸುತ್ತ
ಮೂರು ಸಾಸಿವೆ ಗಾತ್ರದ ಗೆಜ್ಜೆಗಳು
ಹೊಕ್ಕಳದಂಚಿಗೆ ಮುಲುಕಾಟದ ಎಂಜಲು
ಎಷ್ಟು ತಿಕ್ಕಿದರೂ ಹೋಗುತಿಲ್ಲ
ಮುಖದ ಮೇಲೆ ಸಣ್ಣಗಿನ ಗಾಳಿಯಂಥಾ ಕಸಿವಿಸಿ






as usaul superb kano…
good pravara
chennagide pravara……