ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಕುಮಾರ ಮಡಿವಾಳರ ಕವಿತೆ – ಗೊಂಬೆ…

ರಾಜಕುಮಾರ ಮಡಿವಾಳರ

ಇಲ್ಲೇ ಇದೆ ಇನ್ನು ಆ ಗೊಂಬೆ
ಆ ಮುಗ್ಧ ಹುಡುಗಿ ಬಿಟ್ಟು ಹೋದ
ತನ್ನದೇ ಮೂಗಿನ ನೆರಳಂತಹ ಮುದ್ದು ಗೊಂಬೆ.
ಮಾತಿಗಿಳಿಯುತ್ತೇನೆ ಕಸ್ಟಮರ್ ಇರದ
ಖಾಲಿ ಸಮಯದಲ್ಲಿ ಮಕಮಲ್ಲು ಮೆತ್ತನೆ
ಕಿವಿ ಜಗ್ಗಿ ಕೇಳುತ್ತೇನೆ, ಬೇಸರವೆ ನಿನಗೆ?
ಇದು ಇಲ್ಲಿ ಇದ್ದುದ ಮರೆತು ಎಲ್ಲೆಲ್ಲಿ ಹುಡುಕಿ,
ಎಷ್ಟು ಅತ್ತಿರಬೇಕು? ಸಣ್ಣಗೆ ಶುರುವಾದ ಬೇಸಿಗೆಯ
ನಡು ಮಧ್ಯಾಹ್ನದ ಬಿಸಿಲಲ್ಲಿ ತಣ್ಣಗೆ ನೆನೆದು ನಗುತ್ತೇನೆ.


ಗಾಢ ನಿದ್ರೆಯಿಂದೆಚ್ಚೆತ್ತು ಗೊಂಬೆ-
ಬೇಕು, ರಚ್ಚೆ ಹಿಡಿದು ಅಮ್ಮನ ಕಾಡಿದ್ದ
ನೆನಪಿಸಿ ಆರ್ದ್ರಗೊಳ್ಳುತ್ತೇನೆ.
ಚಾಕ್ಲೆಟ್ಟು ಬಿಸ್ಕತ್ತು ಐಸ್ಕ್ರಿಮು
ಏನಿಲ್ಲ ಹೇಳಿ ಅಂಗಡಿಯಲ್ಲಿ ?
ಎಲ್ಲ ತನ್ನ ಬೆರಗುಗಣ್ಣಲಿ ನೋಡಿ-
ಕೇಳುತ್ತದೆ, ರಾಜೀ
ಇವತ್ತು ಬರ್ತಾಳಲ್ವಾ ಹುಡುಗಿ?
ಬಂದು ಕರೆದೊಯ್ತಾಳಲ್ವ ನನ್ನನವಳ ಮನೆಗೆ?
ಮುಂಗೈಯ್ಯೇ ಇರದ ಮೊಂಡುಗೈ
ಹಿಡಿದು ನನ್ನ ಗಲ್ಲಕೆ ತೀಡಿಕೊಳ್ಳುತ್ತ
ಬರ್ತಾಳೆ ಕಣೋ ಗೊಂಬೆ, ನನ್ನ ನಂಬೆ.!
ಕುಳಿತಲ್ಲೆ ಕುಣಿದಂತೆ ಕಾಣುತ್ತದೆ ಗೊಂಬೆ
ಮಾತು ಜೀವ ಇದೆ ಇಲ್ಲ ಅನ್ನುವದರದಲ್ಲ
ಜೀವ ಇರಲಿ ಬಿಡಲಿ, ಗೊಂಬೆಯೋ? ಮಗಳೋ?
ತಾಯಿಲ್ಲದ್ದು ಬಾಯಿ ಇಲ್ಲದ್ದು ಅನ್ನುವದಂತೂ ಖರೇ..
ಜಗದ ಎಲ್ಲ ಮಕ್ಕಳಿಗೂ ಮರೆತ ಗೊಂಬೆ ನೆನಪಾಗಲಿ,
ಸಂತೆಯೊಳಗಿನ ಗೊಂಬೆ ಸಂತೆಯೊಳಗೆ
ಕಳೆದು ಹೋಗದಿರಲಿ.

‍ಲೇಖಕರು avadhi

11 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading