ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 4..

ಮೂಲ: ಸುಸಾನ್ ಗ್ಲಾಸ್ಪೆಲ್
ಕನ್ನಡಕ್ಕೆ: ಜೆ ವಿ ಕಾರ್ಲೊ

ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ ಹೆಚ್ಚಿನ ಬರಹಗಳು ಲಿಂಗ ತಾರತಮ್ಯದ ವಸ್ತುವನ್ನೊಳಗೊಂಡಿವೆ.

A Jury of Her Peers, ಸುಸಾನ್ ಪತ್ರಕರ್ತೆಯಾಗಿ, ಜಾನ್ ಹೊಸ್ಯಾಕ್ ಎಂಬುವವನ ಕೊಲೆಯನ್ನಾಧರಿಸಿ ವರದಿ ಮಾಡಿದ ಒಂದು ಘಟನೆಯನ್ನಾದರಿಸಿ ಹೆಣೆದ ಕತೆ. ‘ಹೆಣ್ಮಕ್ಕಳಿಗೆ ಏನು ಗೊತ್ತಾಗುತ್ತೆ?’ ಎಂಬ ಗಂಡಸರ ತಾತ್ಸಾರದ ನಡುವೆ, ತಮ್ಮ ಸ್ತ್ರೀ ಸಹಜ ತರ್ಕದಿಂದ ಇಬ್ಬರು ಗೃಹಿಣಿಯರು ಒಂದು ಕೊಲೆಯ ವಿಶ್ಲೇಷಣೆ ನಡಿಸಿ ಬಿಡಿಸುವ ಕತೆ ‘ಖಾಲಿ ಪಂಜರ’

ಭಾಗ – 4

ಮಿಸೆಸ್ ಪೀಟರ್ಸ್ ಅತ್ತ ತಿರುಗಿದಾಗ ಮಾರ್ತಾ ತನ್ನ ಹೊಲಿಗೆಯನ್ನು ಮಿನ್ನಿಯ ಹೊಲಿಗೆಯೊಂದಿಗೆ ಹೋಲಿಸಿ ನೋಡಿದಳು. ಅವಳಿಗೆ ಹೆಚ್ಚು ವ್ಯತ್ಯಾಸವೇನೂ ಕಾಣಿಸಲಿಲ್ಲ. ಅವಳು ಬಿಚ್ಚಿದ್ದ ಬಟ್ಟೆ ತುಂಡಿನ ಬಗ್ಗೆ ಅವಳು ಯೋಚಿಸಿದಳು. ಅದನ್ನು ಹೊಲಿಯುತ್ತಿರುವಾಗ ಮಿನ್ನಿಯ ಮನಸ್ಸಿನಲ್ಲಿ ಯಾವ ಥರದ ಬಿರುಗಾಳಿ ಎದ್ದಿರಬಹುದು ಯಾರಿಗೊತ್ತು? ತನ್ನ ಮನಸ್ಸನ್ನು ಶಾಂತವಾಗಿಸಲು ಮಿನ್ನಿ ಈ ಹೊಲಿಗೆಯನ್ನು ಹಾಕಿರಬಹುದೇನೋ?
ಮಿಸೆಸ್ ಪೀಟರ್ಸ್ಳ ದನಿ ಅವಳ ಯೋಚನಾಲಹರಿಯನ್ನು ತುಂಡರಿಸಿತು.

“ಇಲ್ಲೊಂದು ಹಕ್ಕಿಯ ಪಂಜರವಿದೆ ಮಿಸೆಸ್ ಹೇಲ್!” ಅವಳು ಹೇಳುತ್ತಿದ್ದಳು. “ಮಿನ್ನಿ ಯಾವುದಾದರೂ ಹಕ್ಕಿ ಸಾಕಿದ್ದಳೇ?”
“ನನಗೆ ಗೊತ್ತಿಲ್ಲ ಮಿಸೆಸ್ ಪೀಟರ್ಸ್ ,” ಪಂಜರವನ್ನು ದಿಟ್ಟಿಸುತ್ತಾ ಮಾರ್ತಾ ಉತ್ತರಿಸಿದಳು. “ನಾನು ಇಲ್ಲಿಗೆ ಬಂದು ಬಹಳ ಸಮಯವಾಯಿತು. ಕಳೆದ ವರ್ಷ ಒಬ್ಬ ಗಿಳಿಗಳನ್ನು ಕಡಿಮೆ ಬೆಲೆ ಎಂದು ಮಾರಲು ಬಂದಿದ್ದ. ಮಿನ್ನಿ ಕೊಂಡಿರಬಹುದೇನೋ? ಮಿನ್ನಿ ಚೆನ್ನಾಗಿ ಹಾಡುತ್ತಿದ್ದಳು.”

ಮಿಸೆಸ್ ಪೀಟರ್ಸ್ ಮತ್ತೊಮ್ಮೆ ಅಡುಗೆ ಕೋಣೆಯೊಳಗೆ ದೃಷ್ಟಿ ಹಾಯಿಸಿದಳು.

“ಈ ಮನೆಯೊಳಗೆ ಒಂದು ಹಕ್ಕಿಯ ಕಲ್ಪನೆಯನ್ನು ಮಾಡುವುದೂ ಕೂಡ ಹಾಸ್ಯಸ್ಪದವೆನಿಸುತ್ತದೆ!” ಎನ್ನುತ್ತಾ ಮಿಸೆಸ್ ಪೀಟರ್ಸ್ ನಕ್ಕಳು. “ಇಲ್ಲದಿದ್ದರೆ ಅವಳಿಗೆ ಪಂಜರವೇಕೆ ಬೇಕಿತ್ತು? ಹಕ್ಕಿಗೆ ಏನಾಯಿತೊ?” ಅವಳು ಮತ್ತೊಮ್ಮೆ ಸುತ್ತ ನೋಡಿದಳು,
“ಬಹುಶಃ ಬೆಕ್ಕು ಹಿಡಿದು ತಿಂದಿರಬೇಕು!” ಎನ್ನುತ್ತಾ ಮಾರ್ತಾ ಹೊಲಿಗೆಯಲ್ಲಿ ಮಗ್ನಳಾದಳು.

“ಇಲ್ಲ, ಇಲ್ಲ! ಮಿಸೆಸ್ ರೈಟ್ ಬೆಕ್ಕುಗಳಿಗೆ ತುಂಬಾ ಹೆದರುತ್ತಾಳೆ. ನಿನ್ನೆ ಅವಳನ್ನು ಬಂಧಿಸಿ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಅದೇ ಹೊತ್ತಿಗೆ ನಮ್ಮ ಬೆಕ್ಕೂ ಅಲ್ಲಿಗೆ ಬಂದಿತು. ಅದನ್ನು ನೋಡಿ ಮಿಸೆಸ್ ರೈಟ್ ಎಷ್ಟೊಂದು ಹೆದರಿದಳೆಂದರೆ, ದಯವಿಟ್ಟು ಬೆಕ್ಕನ್ನು ಹೊರಗೆ ಹಾಕಿ ಎಂದು ದುಂಬಾಲು ಬಿದ್ದಳು!”
“ನನ್ನ ತಂಗಿ ಜೆಸ್ಸಿ ಕೂಡ ಹಾಗೆಯೇ! ಬೆಕ್ಕುಗಳೆಂದರೆ ಹೆದರಿ ಓಡಿಹೋಗುತ್ತಾಳೆ!” ಮಾರ್ತಾ ನಗುತ್ತಾ ಹೇಳಿದಳು.
ಮಿಸೆಸ್ ಪೀಟರ್ಸ್ ಮಾತನಾಡಲಿಲ್ಲ. ಮಾರ್ತಾ ತಲೆ ಎತ್ತಿ ಮಿಸೆಸ್ ಪೀಟರ್ಸ್ ಕಡೆ ನೋಡಿದಳು. ಅವಳು ಪಂಜರವನ್ನು ಮೇಲೆ ಕೆಳಗೆ ಸೂಕ್ಷ್ಮವಾಗಿ ನೋಡುತ್ತಿದ್ದಳು.

“ನೋಡಿ, ಈ ಪಂಜರದ ಬಾಗಿಲನ್ನು ಬಲಾತ್ಕಾರದಿಂದೆಂಬಂತೆ ಎಳೆದು ತೆರೆದಿದ್ದಾರೆ. ನೋಡಿ ಇಲ್ಲಿ, ಬಾಗಿಲು ತುಂಡೇ ಆಗಿದೆ…”
ಮಾರ್ತಾ ಹತ್ತಿರಕ್ಕೆ ಹೋದಳು.
“ಯಾರೋ ಬಲವಾಗಿ ಎಳೆದಿದ್ದಾರೆ!..”
ಅವರಿಬ್ಬರ ಕಣ್ಣುಗಳು ಪ್ರಶ್ನಾರ್ಥಕವಾಗಿ, ದಿಗಿಲಿನಿಂದ ಮತ್ತೊಮ್ಮೆ ಸಂಧಿಸಿದವು. ಸ್ವಲ್ಪ ಹೊತ್ತು ಅವರಿಬ್ಬರೂ ಮಾತನಾಡಲಿಲ್ಲ.
“ಅವರಿಗೆ ಪುರಾವೆ ಬೇಕಿದ್ದರೆ ಅಗೋ ಅದು ಇಲ್ಲಿದೆ!! ಈ ಮನೆ ನನಗೆ ದಿಗಿಲು ಹುಟ್ಟಿಸುತ್ತಿದೆ ಮಿಸೆಸ್ ಹೇಲ್. ನೀವು ನನ್ನೊಟ್ಟಿಗೆ ಇಲ್ಲಿ ಬರಲು ಒಪ್ಪಿದ್ದಕ್ಕೆ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.” ಪಂಜರವನ್ನು ಮೇಜಿನ ಮೇಲಿಟ್ಟು ಕುಳಿತುಕೊಂಡಳು ಮಿಸೆಸ್ ಪೀಟರ್ಸ್ . “ನೀವು ಇಲ್ಲದಿದ್ದಲ್ಲಿ ನಾನೊಬ್ಬಳೇ ಇಲ್ಲಿ ಹೇಗೆ ಕುಳಿತುಕೊಂಡಿರುತ್ತಿದ್ದೆ ಎಂದು ಯೋಚಿಸಲೂ ಭಯವಾಗುತ್ತದೆ!”

“ನೀವು ಹೇಳುತ್ತಿರುವುದೂ ನಿಜಾನೇ ಮಿಸೆಸ್ ಪೀಟರ್ಸ್ . ಹಾಗಾಗಿದ್ದಿದ್ದರೆ ನಿಮ್ಮ ಪರಿಸ್ಥಿತಿ ನನಗೆ ಊಹಿಸಲೂ ಆಗುತ್ತಿರಲಿಲ್ಲ.” ಮಾರ್ತಾ ಈಗ ಶಾಂತಳಾಗಿದ್ದಳು. ಹೊಲಿಯುತ್ತಿದ್ದ ಬಟ್ಟೆಯ ತುಂಡನ್ನು ಅವಳು ತನ್ನ ತೊಡೆಗಳ ಮೇಲಿಟ್ಟಳು. “ನನಗೆ ಈಗ ಅನ್ನಿಸುತ್ತಿದೆ. ನಾನು ಆಗಾಗ ಮಿನ್ನಿಯನ್ನು ಭೇಟಿಯಾಗಲು ಬರಬೇಕಿತ್ತು.” “ಆದರೆ ನೀವು ನಿಮ್ಮದೇ ಸಾವಿರ ಕೆಲಸಗಳಲ್ಲಿ ವ್ಯಸ್ತರಾಗಿರುತ್ತಿದ್ದಿರಿ..”

“ಹಾಗೇನಿಲ್ಲ ನಾನು ಬಿಡುವು ಮಾಡಿಕೊಂಡು ಬರಬಹುದಿತ್ತು. ಕಾರಣವೇನೆಂದರೆ ನನಗೆ ಇಲ್ಲಿ ಬರಲು ಇಷ್ಟವಾಗುತ್ತಿರಲಿಲ್ಲ. ಈ ಮನೆಯ ವಾತಾವರಣ ನನಗೆ ಹಿಡಿಸಿರಲಿಲ್ಲ. ಇದೊಂದು ಪ್ರೇತಕಳೆಯ ಒಂಟಿ ಮನೆ. ನಾನು ಅಪರೂಪಕ್ಕಾದರೂ ಮಿನ್ನಿಯನ್ನು ನೋಡಲು ಬರಬೇಕಿತ್ತು.. ಅದು ಈಗ ಅನಿಸುತ್ತಿದೆ.” ಆದರೆ ಅವಳು ಕಾರಣ ಕೊಡಲಿಲ್ಲ.
“ನೀವೇ ನಿಮ್ಮನ್ನು ದೋಷಿಯೆಂದು ಆರೋಪಿಸಿಕೊಳ್ಳಬೇಡಿ ಮಿಸೆಸ್ ಹೇಲ್. ಬಹಳಷ್ಟು ಸಂಗತಿಗಳು ಅವು ಘಟಿಸಿದ ನಂತರವೇ ನಮಗೆ ಕೆಲವೊಂದು ಸಂಗತಿಗಳ ಬಗ್ಗೆ ಗೊತ್ತಾಗುವುದು.”

“ಮಕ್ಕಳ ಗದ್ದಲವಿಲ್ಲದ ಇಂತ ಭೂತದ ಮನೆಯಲ್ಲಿರುವುದು ಒಂದು ಹೆಣ್ಣಿಗೆ ದೊಡ್ಡ ಶಾಪವೇ ಎನ್ನಬಹುದು. ಜಾನ್ ರೈಟ್ ಕೆಲಸದಿಂದ ಮನೆಗೆ ಬರುವವರೆಗೆ ಮಿನ್ನಿ ಒಬ್ಬಳೇ ಈ ಮನೆಯಲ್ಲಿ ಹೇಗೆ ಕಾಲಕಳೆಯುತ್ತಿದ್ದಳು ಎಂದು ಯೋಚಿಸಲೂ ಕಷ್ಟವಾಗುತ್ತದೆ… ನಿಮಗೆ ಜಾನ್ ರೈಟ್ ಗೊತ್ತೇ ಮಿಸೆಸ್ ಪೀಟರ್ಸ್ ?”
“ವಯುಕ್ತಿಕವಾಗಿ ಅವರು ನನಗೆ ಪರಿಚಯವಿಲ್ಲ. ಆದರೆ, ಪೇಟೆಯಲ್ಲಿ ಬಹಳ ಸಲ ನೋಡಿದ್ದೇನೆ. ಎಲ್ಲರೂ ಒಳ್ಳೆಯ ಮನುಷ್ಯ ಅನ್ನುತ್ತಾರೆ.”

“ಮನುಷ್ಯ ಒಳೆಯವನೇ..” ಮಾರ್ತಾ ಹೇಳಿದಳು. “ಕುಡಿಯುತ್ತಿರಲಿಲ್ಲ. ಕೊಟ್ಟ ಮಾತಿಗೆ ತಪ್ಪಿದವನಲ್ಲ. ಯಾರ ಬಳಿಯೂ ಸಾಲ ಬಾಕಿ ಇರಿಸಿರಲಿಲ್ಲ. ಆದರೆ ತುಂಬಾ ಕಠೋರ ಮನುಷ್ಯನಾಗಿದ್ದ ಮಿಸೆಸ್ ಪೀಟರ್ಸ್ . ಅವನೊಟ್ಟಿಗೆ ಒಂದು ದಿನ ಕಳೆಯುವುದೆಂದರೆ ಒಂದು ಕಲ್ಲಿನ ಮೂರ್ತಿಯ ಜೊತೆಯಲ್ಲಿ ಇದ್ದಂತೆ.” ಅವಳ ದೃಷ್ಟಿ ಮೇಜಿನ ಮೇಲಿದ್ದ ಪಂಜರದ ಮೇಲೆ ಹೋಯಿತು. “ಮಿನ್ನಿ ಒಂದು ಹಕ್ಕಿ ಸಾಕಿ ಕೊಂಡಿದ್ದಳೆಂದರೆ ನನಗೆ ಕಿಂಚಿತ್ತೂ ಆಶ್ಚರ್ಯವಾಗುತ್ತಿಲ್ಲ.”
ಒಮ್ಮೆಲೇ ಅವಳು ಪಂಜರದ ಕಡೆಗೆ ಬಾಗಿದಳು. ಸ್ವಲ್ಪ ಹೊತ್ತಿನ ನಂತರ, “ಮಿಸೆಸ್ ಪೀಟರ್ಸ್ , ಇದರೊಳಗಿದ್ದ ಹಕ್ಕಿಗೆ ಏನಾಯ್ತು ಎಂದು ನೀವು ಭಾವಿಸುತ್ತಿರಾ?” ಎಂದು ಕೇಳಿದಳು.

ಮಿಸೆಸ್ ಪೀಟರ್ಸ್ ಭುಜ ಕುಣಿಸುತ್ತಾ, “ಏನೋ ಕಾಯಿಲೆಯಿಂದ ಸತ್ತಿರಬೇಕು?” ಮಿಸೆಸ್ ಪೀಟರ್ಸ್ , ಪಂಜರದ ಬಾಗಿಲನ್ನು ಪೂರ್ತಿಯಾಗಿ ತೆರೆದು ಹೇಳಿದಳು. ಅವರಿಬ್ಬರೂ, ಒಟ್ಟಿಗೇ ಪಂಜರದೊಳಗೆ ಇಣುಕಿ ನೋಡಿದರು.

“ನಿಮಗೆ ಮಿನ್ನಿಯ ಪರಿಚಯವಿತ್ತೇ ಮಿಸೆಸ್ ಪೀಟರ್ಸ್ ?”
“ನಿನ್ನೆ ಅವಳನ್ನು ಬಂಧಿಸಿ ಮನೆಗೆ ಕರೆತರುವವರೆಗೂ ನಾನು ಆಕೆಯನ್ನು ನೋಡಿರಲಿಲ್ಲ.
“ಮಿನ್ನಿಯ ಬಗ್ಗೆ ಹೇಳುವುದಾದರೆ, ಅವಳು ಈ ಹಕ್ಕಿಯಷ್ಟೇ ಪಾಪದ ಬೋಳೇ ಹೆಣ್ಣು ಎನ್ನಬಹುದು. ಸ್ವಲ್ಪ ಹೆದರುಪುಕ್ಕಲಿಯೂ ಹೌದು. ಇಂತಾ ಮಿನ್ನಿ ಇಷ್ಟೊಂದು ಬದಲಾಗಿದ್ದಳೆಂದರೆ ನಂಬಲಿಕ್ಕೇ ಆಗುತ್ತಿಲ್ಲ.”
ಮಾರ್ತಾ ತುಂಬಾ ಹೊತ್ತು ಯೋಚಿಸುತ್ತಾ ಕುಳಿತುಕೊಂಡಳು. ನಂತರ, “ಮಿಸೆಸ್ ಪೀಟರ್ಸ್ , ಮಿನ್ನಿಗಾಗಿ ನೀವು ಕೊಂಡೊಯ್ಯುತ್ತಿರುವ ವಸ್ತುಗಳೊಂದಿಗೆ ದಯವಿಟ್ಟು ಈ ಬಣ್ಣದ ಬಟ್ಟೆ ತುಂಡುಗಳನ್ನೂ ಕೊಂಡೋಗಿ. ಲಾಕಪ್ಪಿನಲ್ಲಿ ವೇಳೆ ಕಳೆಯಲು ಮಿನ್ನಿಗೆ ಸಹಾಯವಾಗಬಹುದು.”

“ಒಳ್ಳೇ ಸಲಹೆ ಮಿಸೆಸ್ ಹೇಲ್!” ಮಿಸೆಸ್ ಪೀಟರ್ಸ್ ಖುಷಿಯಿಂದ ಹೇಳಿದಳು. ಮಿನ್ನಿಯ ಸಂಕಷ್ಟಗಳಲ್ಲಿ ತನ್ನದೂ ಸಹಾಯ ಹಸ್ತ ಕೂಡಿಸಲು ಅವಕಾಶ ಸಿಕ್ಕಿದ್ದಕ್ಕೆ ಅವಳಿಗೆ ಸಂತೋಷವಾಯಿತು. ಇದಕ್ಕೆ ಯಾವುದೇ ಅಕ್ಷೇಪಗಳಿರಲಾರದು ಅಲ್ಲವೇ?” ಎನ್ನುತ್ತಾ ಅವಳು ಹೊಲಿಗೆ ಬುಟ್ಟಿಯ ಕಡೆಗೆ ತಿರುಗಿದಳು.

“ಇಲ್ಲಿ ಒಂದು ಕೆಂಪು ಬಟ್ಟೆಯ ತುಂಡು ಇದೆ.” ಮಾರ್ತಾ ಬಟ್ಟೆಯ ತುಂಡನ್ನು ಎತ್ತಿ ಹಿಡಿದು ಹೇಳಿದಳು. ಆ ಬಟ್ಟೆಯ ಕೆಳಗೆ ಒಂದು ಸಣ್ಣ ಪೆಟ್ಟಿಗೆ ಇತ್ತು. “ಇದರೊಳಗೆ ಬಹುಶಃ ಅವಳ ಹೊಲಿಗೆ ಸಾಮಗ್ರಿಗಳಿರಬೇಕು..” ಎನ್ನುತ್ತಾ ಅವಳು ಆ ಪೆಟ್ಟಿಗೆಯನ್ನು ಎತ್ತಿದಳು. “ಎಷ್ಟೊಂದು ಸುಂದರವಾದ ಪೆಟ್ಟಿಗೆ! ನನಗನಿಸುತ್ತೆ ಈ ಪೆಟ್ಟಿಗೆ ಮಿನ್ನಿ ಮದುವೆಯಾಗುವ ಮುಂಚಿನಿಂದಲೂ ಅವಳ ಬಳಿ ಇತ್ತು.”

ತಕ್ಷಣವೇ ಅವಳ ಕೈ ಮೂಗಿಗೆ ಹೋಯಿತು.

“ಓ, ಗಾಡ್!” ತಂತಾನೆ ಅವಳು ಉದ್ಗರಿಸಿದಳು.

ಸನಿಹಕ್ಕೆ ಬಂದ ಮಿಸೆಸ್ ಪೀಟರ್ಸ್ ಕೂಡ ಹಾಗೇ ಹಿಂದಕ್ಕೆ ಹೆಜ್ಜೆ ಹಾಕಿದಳು.

“ಇಲ್ಲಿ ಈ ರೇಷ್ಚೆ ಬಟ್ಟೆಯೊಳಗೆ ಏನನ್ನೋ ಮುಚ್ಚಿಟ್ಟಿದಂತಿದೆ! ದುರ್ವಾಸನೆ ತಡೆಯೋಕಾಗ್ತಿಲ್ಲ!!”ನಡುಗುವ ಕೈಗಳಿಂದ ಮಾರ್ತಾ ರೇಷ್ಮೆ ಗಂಟಿನ ಒಂದು ಅಂಚನ್ನು ದೂರದಿಂದ ಹಿಡಿದು ಎತ್ತಿದಳು.

“ಒಹ್!.. ಮಿಸೆಸ್ ಪೀಟರ್ಸ್ , ಇದು.. ಇದು..” ಅವಳ ಬಾಯಿಂದ ಮಾತುಗಳು ಹೊರಡಲಿಲ್ಲ.
ಮಿಸೆಸ್ ಪೀಟರ್ಸ್ ಹತ್ತಿರಕ್ಕೆ ಬಂದಳು.

“ಅದು ಹಕ್ಕಿ!!..” ಮಿಸೆಸ್ ಪೀಟರ್ಸ್ ಆಶ್ಚರ್ಯದಿಂದ ಉಲಿದಳು.

“ಹೌದು. ಆದರೆ ಅದರ ಗೋಣು ನೋಡಿದಿರಾ ಮಿಸೆಸ್ ಪೀಟರ್ಸ್ ? ದೇವರೇ!… ಅದರ ಗೋಣನ್ನು ತಿರುಚಿ, ತಿರುಚಿ ಮುರಿದಿದ್ದಾರೆ ನೋಡಿದಿರಾ?” ಮಾರ್ತಾ ಪೆಟ್ಟಿಗೆಯನ್ನು ಮಿಸೆಸ್ ಪೀಟರ್ಸ್ ಕಡೆಗೆ ತಿರುಗಿಸಿದಳು.

ಪೋಲಿಸ್ ಆಫೀಸರನ ಹೆಂಡತಿ ಮೂಗನ್ನು ಅದುಮಿಡಿದು ಆ ಪೆಟ್ಟಿಗೆಯ ಮೇಲಕ್ಕೆ ಬಾಗಿದಳು.

“ಯಾರೋ ಹಕ್ಕಿಯ ಗೋಣನ್ನು ಮುರಿದು ಸಾಯಿಸಿದ್ದಾರೆ.” ಅವಳು ತೀರ್ಪಿತ್ತಳು.

ಮತ್ತೊಮ್ಮೆ ಅವರಿಬ್ಬರ ಕಣ್ಣುಗಳೂ ಒಂದನ್ನೊಂದು ಸಂಧಿಸಿದವು. ಈ ಭಾರಿ ಮೆಲ್ಲಗೆ ತೆರೆದುಕೊಂಡ ಸತ್ಯ ಅವರನ್ನು ಕಂಗೆಡಿಸಿತ್ತು. ಮಿಸೆಸ್ ಪೀಟರ್ಸಂಳ ದೃಷ್ಟಿ ಹಕ್ಕಿಯ ಮೇಲಿಂದ ಬಲಪ್ರಯೋಗ ಮಾಡಿ ಮುರಿದಿದ್ದ ಪಂಜರದ ಬಾಗಿಲೆಡೆಗೆ ಹೋಯಿತು. ಅಷ್ಟರಲ್ಲಿ ಹೊರಗಿನಿಂದ ಹೆಜ್ಜೆಗಳ ಸಪ್ಪಳ ಕೇಳಬರತೊಡಗಿತು. ಮಾರ್ತಾ ಪೆಟ್ಟಿಗೆಯನ್ನು ತಕ್ಷಣ ಬುಟ್ಟಿಯೊಳಗಿಟ್ಟು ಅದರ ಮೇಲೆ ಬಟ್ಟೆಯ ತುಂಡುಗಳನ್ನು ಮುಚ್ಚಿದಳು. ಮಿಸೆಸ್ ಪೀಟರ್ಸ್ ನಿಂತೇ ಇದ್ದಳು. ಪೋಲಿಸ್ ಆಫೀಸರ್ ಮತ್ತು ವಕೀಲ ಒಳಕ್ಕೆ ಬಂದರು.

“ಗುಡ್. ಏನಂತಿರಾ ಲೇಡಿಸ್?” ಒಲೆಯ ಮೇಲೆ ಕೈ ಹರವುತ್ತಾ, ಮುಖದ ಮೇಲೆ ನಗುವನ್ನು ತಂದು ವಕೀಲ ಕೇಳಿದ. “ಈಗ ನೀವು ಯಾವ ತೀರ್ಮಾನಕ್ಕೆ ಬಂದಿದ್ದಿರಿ? ಮಿಸೆಸ್ ರೈಟ್ ಆ ಬಟ್ಟೆ ತುಂಡುಗಳನ್ನು ಕೌದಿ ಹೊಲೆಯಲೋ ಅಥವಾ ಹೆಣೆಯಲು ಶುರುಮಾಡಿದ್ದಳು?” “ಅವಳು ಅವುಗಳನ್ನು ಹೆಣೆಯಲು ಹೊರಟಿದ್ದಳೆಂದು ನಾವು ತೀರ್ಮಾನಿಸಿದೆವು” ಮಿಸೆಸ್ ಪೀಟರ್ಸ್ ನಗುತ್ತಾ ಹೇಳಿದಳು.“ಒಹ್! ಕುತೂಹಲಕರ!!” ಅವನೆಂದ. ಆದರೆ ಅವನ ದನಿಯಲ್ಲಿ, ಮುಖದಲ್ಲಿ ಕಿಂಚಿತ್ತೂ ಕುತೂಹಲ ಕಾಣಿಸಲಿಲ್ಲ. ಅವನ ಸಂಚಾರಿ ಕಣ್ಣುಗಳಿಗೆ ಪಂಜರ ಕಾಣಿಸಿತು.

“ಪಂಜರ ಖಾಲಿ ಕಾಣಿಸುತ್ತಿದೆ? ಹಕ್ಕಿ ಎಲ್ಲಿ? ಹಾರಿ ಹೋಗಿದೆ ಏನೋ?”

“ಬೆಕ್ಕು ಹಿಡಿದು ತಿಂದಿರಬೇಕು.” ಮಾರ್ತಾ ನಿರುದ್ವೇಗದಿಂದ ಹೇಳಿದಳು.

ವಕೀಲ ಏನನ್ನೋ ಯೋಚಿಸುತ್ತಾ ಅಡುಗೆಮನೆಯಲ್ಲಿ ಅತ್ತಿತ್ತ ನಡೆದಾಡತೊಡಗಿದ.

“ಇಲ್ಲಿ ನಿಮಗೆ ಬೆಕ್ಕು ಏನಾದರೂ ಕಂಡಿತೇ?” ಅವನು ಹೀಗೇ ಕೇಳಿದ.

ಮಾರ್ತಾ ಪೋಲಿಸ್ ಆಫೀಸರನ ಕಡೆಗೆ ನೋಡಿ,“ನಾವು ನೋಡಲಿಲ್ಲ.” ಎಂದು ಹೇಳಿದಳು.

ಅವಳ ಉತ್ತರ ವಕೀಲನ ಮಿದುಳಿಗೆ ತಲುಪಿದಂತೆ ಕಾಣಿಸಲಿಲ್ಲ. “ಇಲ್ಲಿ ಹೊರಗಿನಿಂದ ಯಾರೂ ಒಳಬಂದಿರುವ ಯಾವುದೇ ಪುರಾವೆಗಳು ಕಾಣಿಸುತ್ತಿಲ್ಲ.” ಪೋಲಿಸ್ ಆಫೀಸರನ ಕಡೆಗೆ ತಿರುಗಿ ಅವನು ಹೇಳಿದ. “ಮನೆಯದ್ದೇ ಹಗ್ಗ! ನಡೀರಿ ನಾವು ಮತ್ತೊಮ್ಮೆ ಮೇಲಕ್ಕೆ ಹೋಗೋಣ. ನನಗ್ಯಾಕೋ ಸಮಧಾನವಾಗುತ್ತಿಲ್ಲ. ಮನೆಯವರದ್ದೇ…” ವಕೀಲನ ಮುಂದಿನ ಮಾತುಗಳು ಅವರಿಗೆ ಕೇಳಿಸಲಿಲ್ಲ. ಮಹಡಿಯ ಬಾಗಿಲು ಅಷ್ಟರಲ್ಲಿ ಮುಚ್ಚಿತ್ತು.

ಅವರಿಬ್ಬರೂ ಮತ್ತೆ ಮೌನಕ್ಕೆ ಶರಣಾದರು. ಮಾರ್ತಳೇ ಮೊದಲು ಬಾಯ್ದೆರೆದಳು:
“ಅವಳು ಹಕ್ಕಿಗಳನ್ನು ತುಂಬಾ ಪ್ರೀತಿಸುತ್ತಿದ್ದಳು… ಅದಕ್ಕೇ ಅವಳು ಅದನ್ನು ಪೆಟ್ಟಿಗೆಯಲ್ಲಿ ದಫನ್ ಮಾಡಿದ್ದಾಳೆ!”
“ನಾನು ಸಣ್ಣವಳಿದ್ದಾಗ….” ಕನಸಿನಲ್ಲೆಂಬಂತೆ ಮಿಸೆಸ್ ಪೀಟರ್ಸ್ ಹೇಳತೊಡಗಿದಳು…” ಅವಳು ಎರಡೂ ಕಣ್ಣುಗಳನ್ನು ಮುಚ್ಚಿದ್ದಳು. “…ನನ್ನ ಬಳಿ ಬೆಕ್ಕಿನ ಮರಿಗಳಿದ್ದವು. ನಾನು ಮರಿಗಳಿಗಿಂತ ಕೊಂಚ ದೂರದಲ್ಲಿದ್ದೆ. ಅಲ್ಲಿಗೆ ತಲುಪುವಷ್ಟರಲ್ಲಿ ಆ ಹುಡುಗ…! ಓ ಗಾಡ್!… ಅವನ ಕೈಯಲ್ಲಿ ಹರಿತವಾದ ಮಚ್ಚಿತ್ತು!..” ತುಟಿಗಳನ್ನು ಬಿಗಿಯಾಗಿ ಅದುಮಿಟ್ಟು ಅವಳು ಸುಮ್ಮನಾದಳು. ಮುಖ ವಿವರ್ಣಗೊಂಡಿತ್ತು. ಮಾತುಗಳು ಗಂಟಲಿನಲ್ಲೇ ಸಿಕ್ಕಿಕೊಂಡಿದ್ದವು. “ಎಲ್ಲರೂ ನನ್ನನ್ನು ಹಿಡಿದಿಡದಿದ್ದರೆ ನಾನು ಅವನನ್ನು ಏನು ಮಾಡುತ್ತಿದ್ದೆನೋ ಏನೋ…” ಅವಳು ಬಿಕ್ಕತೊಡಗಿದಳು.

ಮುಂದೆ ಅವರಿಬ್ಬರು ಮಾತೇ ಆಡಲಿಲ್ಲ. ಸುಮ್ಮನೇ ಶೂನ್ಯವನ್ನೇ ದಿಟ್ಟಿಸುತ್ತಾ ಹಾಗೇ ಕುಳಿತುಕೊಂಡರು.
“ಮನೆಯಲ್ಲಿ ಮಕ್ಕಳಿಲ್ಲದಿರುವ ಅನುಭವ ಹೇಗಿರಬಹುದೆಂದು ಯೋಚಿಸಿದಾಗ ಇಡೀ ದೇಹ ಕಂಪಿಸುತ್ತದೆ.” ಮೌನವನ್ನು ಮುರಿಯುತ್ತಾ ಮಾರ್ತಾ ಹೇಳಿದಳು. “ಮಿಸ್ಟರ್ ಜಾನ್ ರೈಟ್ ಖಂಡಿತವಾಗಿಯೂ ಪಕ್ಷಿ ಪ್ರೇಮಿಯಾಗಿರಲಿಲ್ಲ. ಅದೂ ಹಾಡು ಹಕ್ಕಿಯ ಪ್ರೇಮಿ! ಮದುವೆಯ ಮುನ್ನ ಮಿನ್ನಿ ಚರ್ಚಿನ ಗಾನವೃಂದದಲ್ಲಿ ಹಾಡುತ್ತಿದ್ದಳು. ಅವಳದ್ದು ಸುಮಧುರ ಕಂಠ. ಮದುವೆಯಾದದ್ದೇ ಅವಳ ಹಾಡುಗಾರಿಕೆ ನಿಂತು ಹೋಯಿತು. ಹಕ್ಕಿಯನ್ನು ರೈಟನಲ್ಲದೆ ಬೇರೆ ಯಾರು ಕೊಲ್ಲಲು ಸಾಧ್ಯ?…” ಮುಂದಕ್ಕೆ ಅವಳಿಂದ ಮಾತುಗಳು ಹೊರಡಲಿಲ್ಲ.

ಮಿಸೆಸ್ ಪೀಟರ್ಸ್ ಅಸ್ವಸ್ಥಳಂತೆ ಕಾಣಿಸುತ್ತಿದ್ದಳು.

“ಹಕ್ಕಿಯನ್ನು ಯಾರು ಕೊಂದರೆಂದು ನಮಗೆ ಗೊತ್ತಿಲ್ಲ.”

“ಜಾನ್ ರೈಟನೇ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ.” ಮಾರ್ತಾ ಖಚಿತವಾಗಿ ಹೇಳಿದಳು.

“ಮಲಗಿದ್ದಲ್ಲೇ ಅವನನ್ನು ಕ್ರೂರವಾಗಿ ಸಾಯಿಸಿದ್ದಾರೆಂಬುದನ್ನೂ ನಾವು ಮರೆಯಬಾರದು ಮಿಸೆಸ್ ಹೇಲ್. ಅವನನ್ನೂ ಯಾರು ಸಾಯಿಸಿದ್ದಾರೆಂದೂ ನಮಗೆ ಗೊತ್ತಿಲ್ಲ.” ಅವಳೆಂದಳು.

‘ತನ್ನಷ್ಟಕ್ಕೇ ಹಾಡುತ್ತಿದ್ದ ಹಕ್ಕಿಯ ಕಂಠವನ್ನು ಬಲಾತ್ಕಾರದಿಂದ ಮುಚ್ಚಿಸಿದ್ದು ನನಗೆ ಯಾಕೋ ಯೋಚಿಸಲಿಕ್ಕೂ ಆಗುತ್ತಿಲ್ಲ.’ ತನ್ನಷ್ಟಕ್ಕೇ ಎಂಬತೆ ಮಾರ್ತಾ ಹೇಳಿಕೊಂಡಳು. “ಮೌನ ಎಂದರೇನೆಂದು ನನಗೆ ನನ್ನ ಎರಡು ವರ್ಷದ ಚೊಚ್ಚಲ ಮಗ ತೀರಿಕೊಂಡಾಗಲೇ ಅನುಭವಕ್ಕೆ ಬಂದದ್ದು.” ಎನ್ನುತ್ತಾ ಅವಳೊಂದು ದೀರ್ಘ ಉಸಿರನ್ನು ಎಳೆದಳು. “ಅಚ್ಚ ಬಿಳಿ ಡ್ರೆಸ್ ಉಟ್ಟು ಚರ್ಚ್ ಗಾನವೃಂದದಲ್ಲಿ ಹಾಡುತ್ತಿದ್ದ ಮಿನ್ನಿಯನ್ನು ನೀವು ನೋಡಬೇಕಿತ್ತು ಮಿಸೆಸ್ ಪೀಟರ್ಸ್ !..”
ಇಪ್ಪತ್ತು ವರ್ಷಗಳಿಂದ ಮಿನ್ನಿಯ ನೆರೆಯವಳಾಗಿ ಅವಳಿಗಾಗಿ ತಾನು ಏನೂ ಮಾಡಲಾರದಿದ್ದಕ್ಕೆ ಅವಳು ತನ್ನನ್ನೇ ದೂಷಿಸತೊಡಗಿದಳು. ಪಶ್ಚಾತ್ತಾಪದಿಂದ ಅವಳ ಕಣ್ಣುಗಳಿಂದ ಬಳಬಳನೇ ಕಣ್ಣೀರು ಒಸರತೊಡಗಿತು.

“ನಾನು ಆಗಾಗ ಇಲ್ಲಿಗೆ ಬಂದಿದ್ದರೆ ಎಷ್ಟೊಂದು ಚೆನ್ನಾಗಿತ್ತು!…” ಮಾರ್ತಾ ಬಿಕ್ಕಿದಳು. “ನಾನೂ ಕೂಡ ಅಪರಾಧಿಯೇ. ಆದರೆ ನನಗೆ ಶಿಕ್ಷೆ ಕೊಡುವವರಾರು?” “ನೀವು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೊರಗಬೇಡಿ ಮಿಸೆಸ್ ಹೇಲ್…” ಮಿಸೆಸ್ ಪೀರ್ಸೂಳ ಸ್ವರ ಕಂಪಿಸುತ್ತಿತ್ತು. ಆಕೆ ಗಳಿಗೆಗೊಮ್ಮೆ ಮಹಡಿಯ ಮೆಟ್ಟಲ ಕಡೆಗೆ ನೊಡುತ್ತಿದ್ದಳು.

“ನಾನು ಮಿನ್ನಿಗೆ ಸಹಾಯ ಮಾಡಬಹುದಿತ್ತು” ಅವಳು ಮತ್ತೊಮ್ಮೆ ಬಿಕ್ಕಿದಳು.

“ಒಂದು ಸತ್ತ ಗಿಳಿಗಾಗಿ ನಾವು ಇಷ್ಟೊಂದು ಭಾವೋದ್ರೇಕಗೊಂಡು ಅಳುತ್ತಿರುವುದು ಗಂಡಸರು ನೋಡಿದರೆ, ‘ಹುಚ್ಚು ಹೆಂಗಸರು’ ಎಂದು ನಗಾಡಲಿಕ್ಕಿದ್ದಾರೆ!” ಎಂದು ಮಿಸೆಸ್ ಪೀಟರ್ಸ್ ಹೇಳುವುದಕ್ಕೂ ಅತ್ತ ಮಹಡಿಯಿಂದ ಗಂಡಸರು ಕೆಳಗೆ ಇಳಿಯುವುದಕ್ಕೂ ಸರಿಯಾಯಿತು.

“ನಗಲೂ ಬಹುದು, ನಗದೆ ಇರಲೂ ಬಹುದು.” ಮಾರ್ತಾ ಹೇಳಿದಳು.

“ಏನೂ ಅನುಮಾನವಿಲ್ಲ ಪೀಟರ್..” ವಕೀಲ ಮಾತನಾಡುತ್ತಿದ್ದ. “ಒಂದೇ ಒಂದು ಕೊರತೆ ಏನೆಂದರೆ ಕಾರಣ. ನೀನು ಈ ನ್ಯಾಯದರ್ಶಿಗಳನ್ನು ಚೆನ್ನಾಗಿ ಬಲ್ಲೆ. ಹೆಂಗಸರ ಬಗ್ಗೆಯಂತೂ ಬಲವಾದ ಕಾರಣ ಮತ್ತು ಪುರಾವೆ ಇಲ್ಲದೆ ನಾವು ಏನೂ ಮಾಡಲಿಕ್ಕಾಗುವುದಿಲ್ಲ,” ಮಾರ್ತಾ ತಲೆ ಬಗ್ಗಿಸಿದ್ದಿಂದಲೇ ಮಿಸೆಸ್ ಪೀಟರ್ಸಂಳನ್ನು ನೋಡಿದಳು. ಅಷ್ಟರಲ್ಲಿ ಅಡುಗೆ ಕೋಣೆಯ ಹೊರ ಬಾಗಿಲು ದೂಡುತ್ತಾ ಮಿಸ್ಟರ್ ಹೇಲ್ ಒಳಗೆ ಬಂದ. “ಹೊರಗೆ ತುಂಬಾ ಚಳಿ ಇದೆ. ಆದರೂ ನಾನು ಕೆಲವು ಜನರನ್ನು ಒಟ್ಟುಗೂಡಿಸಿದ್ದೇನೆ. ಅವರು ಹೊರಗೆಲ್ಲಾ ಶೋಧಿಸುತ್ತಿದ್ದಾರೆ.” ಎಂದ, “ನೀವು ಹೋಗಬಹುದು ಪೀಟರ್ಸ್ .” ವಕೀಲ ಹೇಳಿದ. “ನಾನು ಸ್ವಲ್ಪ ಹೊತ್ತು ಇದ್ದು ಏನಾದರೂ ಸುಳಿವು ಸಿಗುತ್ತದೋ ಏನೋ ನೋಡುತ್ತೇನೆ. ನನಗ್ಯಾಕೋ ಸಮಧಾನವಾಗುತ್ತಿಲ್ಲ.

ಏನಾದರೂ ಸಾಕ್ಷಿ, ಪುರಾವೆ ಇರಲೇ ಬೇಕು. ನೀವು, ನಿಮ್ಮ ಸಹಾಯಕ ಫ್ರಾಂಕ್ನನ್ನು ಇಲ್ಲಿಗೆ ಕಳಿಸಿ.”
ಇಬ್ಬರು ಹೆಂಗಸರು ಮತ್ತೊಮ್ಮೆ ಕದ್ದು ದೃಷ್ಟಿ ವಿನಿಮಯ ಮಾಡಿಕೊಂಡರು.
ಪೋಲಿಸ್ ಆಫೀಸರ್ ಮೇಜಿನ ಬಳಿಗೆ ಬಂದು, “ಮಿಸೆಸ್ ಪೀಟರ್ಸ್ , ಮಿಸೆಸ್ ರೈಟ್ಸಳಿಗೆ ಕೊಂಡೊಯ್ಯುತ್ತಿರುವ ವಸ್ತುಗಳನ್ನು ತಪಾಸಿಸುವುದಿದ್ದರೆ ನೋಡಿ ಮಿಸ್ಟರ್ ಹೆಂಡರ್ಸನ್.” ಎಂದ. “ಈ ಹೆಂಗಸರು ಹೆಚ್ಚೆಂದರೆ ಏನು ಕೊಂಡೊಯ್ಯಬಹುದು ಆಫೀಸರ್ ಪೀಟರ್ಸ್ ?” ವಕೀಲ ವ್ಯಂಗ್ಯ ತುಂಬಿದ ದನಿಯಲ್ಲಿ ಹೇಳಿದ.

ಮಾರ್ತಾಳಾ ಕೈ ಹೊಲಿಗೆ ಬುಟ್ಟಿಯಲ್ಲಿದ್ದ ಪೆಟ್ಟಿಗೆ ಮೇಲೆ ಹೋಯಿತು. ತಾನು ಕೈ ಅಲ್ಲಿರಿಸಬಾರದೆಂದು ಅವಳಿಗೆ ಅನಿಸಿತ್ತು. ಆದರೆ ಮನಸ್ಸು ಕೇಳುತ್ತಿರಲಿಲ್ಲ. ವಕೀಲ, ಪೆಟ್ಟಿಗೆಯ ಮೇಲಿದ್ದ ಒಂದು ಬಟ್ಟೆಯ ತುಂಡನ್ನು ಎತ್ತಿಕೊಂಡ. ಅವನು ಬುಟ್ಟಿಯೇ ಎತ್ತಿಕೊಂಡಿದ್ದರೆ ಅದನ್ನು ಹಿಂದಕ್ಕೆ ಎಳೆದುಕೊಳ್ಳಲು ಅವಳು ತೀರ್ಮಾನಿಸಿದ್ದಳು.

ಆದರೆ ವಕೀಲ ಹಾಗೆ ಮಾಡಲಿಲ್ಲ. ಅವನು ನಗೆಯಾಡಿದ. “ಮಿಸೆಸ್ ಪೀಟರ್ಸ್ ನಮ್ಮವಳೇ ಅಲ್ವೇ? ಆಕೆಯ ಮೇಲೆ ನನಗೆ ನಂಬಿಕೆ ಇದೆ! ಪೋಲಿಸ್ ಆಫೀಸರನ ಮಡದಿ ಅಂದ ಮೇಲೆ ನ್ಯಾಯ, ಕಾನೂನು ಕಟ್ಟಳೆಗಳ ಮಡದಿಯೂ ಹೌದು! ಏನಂತೀರಾ ಮಿಸೆಸ್ ಪೀಟರ್ಸ್ ?” “ಕಾನೂನು ಕಟ್ಟಳೆಗಳ ಮಡದಿ!” ಪೋಲಿಸ್ ಆಫೀಸರ್ ಪೀಟರ್ಸ್ ನಗೆಯಾಡಿ ಪಕ್ಕದ ಕೋಣೆಗೆ ಹೋದವನು, “ಮಿಸ್ಟರ್ ಹೆಂಡರ್ಸನ್ ಇಲ್ಲಿಗೆ ಸ್ವಲ್ಪ ಬನ್ನಿ. ಇಲ್ಲಿಯ ಕಿಟಕಿಗಳನ್ನು ಸ್ವಲ್ಪ ನೊಡಿ!” ಎಂದ.

“ಕಿಟಕಿಗಳನ್ನು ಎಂತ ನೊಡುವುದು ಆಫೀಸರ್?” ವ್ಯಂಗ್ಯವಾಗಿ ಉದ್ಗರಿಸುತ್ತಾ ವಕೀಲ ಅತ್ತ ನಡೆದ. ಅಡುಗೆ ಕೋಣೆಯಲ್ಲಿ ಹೆಂಗಸರಿಬ್ಬರೇ ಉಳಿದರು.

ಮಾರ್ತಾ ಕುಳಿತಲ್ಲಿಂದ ಎದ್ದು ನಿಂತಳು. ಭಾವದ್ವೇಗದಿಂದ ಆಕೆಯ ಕೈಗಳು ಬಿಗಿದುಕೊಂಡಿದ್ದವು. ಎಲ್ಲವೂ ಮಿಸೆಸ್ ಪೀಟರ್ಸ್ಳ ಮೇಲೆ ನಿರ್ಭರವಾಗಿತ್ತು. ಯಾವಾಗ ವಕೀಲ ಪೋಲಿಸ್ ಆಫೀಸರನ ಹೆಂಡತಿಯೂ ಕಾನೂನು ಕಟ್ಟಳೆಗಳ ಮಡದಿ ಕೂಡ ಎಂದನೋ, ಅವಳು ಕೊಂಚ ವಿಚಲಿತಳಾಗಿದ್ದಳು. ಅವಳ ದೃಷ್ಟಿ ಮಾರ್ತಾಳ ದೃಷ್ಟಿ ತಪ್ಪಿಸಿಕೊಳ್ಳುವಂತಿತ್ತು. ಮಾರ್ತಾ ಅವಳ ದೃಷ್ಟಿಯನ್ನು ಬಲಾತ್ಕಾರದಿಂದ ತನ್ನೆಡೆಗೆ ತಿರುಗಿಸುತ್ತಾ ಹೊಲಿಗೆ ಬುಟ್ಟಿಯ ಕಡೆಗೆ ಕೊಂಡೊಯ್ದಳು. ಆ ಬುಟ್ಟಿಯಲ್ಲಿ ಅವರಂತೆಯೇ ಇದ್ದ ಸಾಮಾನ್ಯ ಗೃಹಿಣಿಯೊಬ್ಬಳನ್ನು ಅಪರಾಧಿ ಎಂದು ಸಾಬೀತುಪಡಿಸುವ ಜಬರ್ದಸ್ತ್ ಸಾಕ್ಷಿ ಇತ್ತು.

ಕೆಲವು ಕ್ಷಣಗಳಿಗೆ ಮಿಸೆಸ್ ಪೀಟರ್ಸ್ ಮರಗಟ್ಟಿದಳು. ನಂತರ, ಮೈಯಲ್ಲಿ ವಿದ್ಯುತ್ ಸಂಚಾರವಾದತೆ ಹೊಲಿಗೆ ಬುಟ್ಟಿಯಲ್ಲಿದ್ದ ಬಟ್ಟೆತುಂಡುಗಳನ್ನು ಕೆದಕಿ ಪೆಟ್ಟಿಗೆಯನ್ನು ಹೊರತೆಗೆದು ತನ್ನ ಹ್ಯಾಂಡ್ಬ್ಯಾಗಿನಲ್ಲಿ ತುರುಕಲು ವ್ಯರ್ಥ ಪ್ರಯತ್ನ ನಡೆಸಿದಳು. ಅವಳ ಹ್ಯಾಂಡ್ಬ್ಯಾಗ್ ಆ ಪೆಟ್ಟಿಗೆಗಿಂತ ಸಣ್ಣದಾಗಿತ್ತು. ಅಸಾಹಕತೆಯಿಂದ ರೇಷ್ಮೆ ಗಂಟು ಎತ್ತಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಕೈಗಳು ಸತ್ತ ಆ ಹಕ್ಕಿಯನ್ನು ಮುಟ್ಟಲು ತಯಾರಿರಲಿಲ್ಲ. ಅವಳು ಮಾರ್ತಾಳ ಕಡೆಗೆ ನೋಡಿದಳು.

ಅಷ್ಟರಲ್ಲಿ ಬಾಗಿಲಿನ ಹಿಡಿ ತಿರುಗಿಸಿದ ಶಬ್ಧ ಕೇಳಿಸಿತು. ತಕ್ಷಣ ಮಾರ್ತಾ ಆ ಪೆಟ್ಟಿಗೆಯನ್ನು ಮಿಸೆಸ್ ಪೀಟರ್ಸಿಳ ಕೈಯಿಂದ ಕಿತ್ತುಕೊಂಡು ತನ್ನ ದೊಡ್ಡದಾದ ಕೋಟಿನ ಜೇಬಿಗೆ ತುರುಕಿದಳು.
ಅಷ್ಟರಲ್ಲಿ ವಕೀಲ ಮತ್ತು ಪೋಲಿಸ್ ಆಫೀಸರ್ ಒಳಗೆ ಬಂದರು.
“ಒಳ್ಳೇದು ಪೀಟರ್ಸ್, ಒಂದಂತೂ ನಮಗೆ ಮನದಟ್ಟಾಯಿತು. ಮಿಸೆಸ್ ರೈಟ್ ಕೌದಿ ಹೊಲಿಯುತ್ತಿರಲಿಲ್ಲ! ಅವಳು, ಅದು… ಅದಕ್ಕೆ ನೀವೇನೋ ಅಂದಿರಲ್ಲ ಲೇಡಿಸ್, ಮರೆತೇ ಹೋಯ್ತು! ಏನದು?”
ಮಾರ್ತಾ ತನ್ನೆರಡೂ ಕೈಗಳನ್ನು ಜೇಬಿನೊಳಕ್ಕೆ ಇಳಿಸುತ್ತಾ ವಕೀಲರನ್ನು ಎದರುಗೊಂಡು,
“ನಾವದನ್ನು ಹೆಣೆಯುವುದು ಎನ್ನುತ್ತೀವಿ ವಕೀಲ ಸಾಹೇಬರೇ..” ಎಂದಳು.

| ಮುಕ್ತಾಯ |

‍ಲೇಖಕರು avadhi

February 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: