‘ರಾಮಾಯಣ ದರ್ಶನಂ’ ಕುರಿತು ರಾಜೇಗೌಡ ಹೊಸಹಳ್ಳಿ ನೋಟ…

ಎನ್ ಬೋರಲಿಂಗಯ್ಯ

ಶ್ರೀ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಮಹಾ ಕಾವ್ಯವನ್ನು ಕುರಿತು ಈಗಾಗಲೇ ಸಾವಿರಾರು ಲೇಖನಗಳು, ನೂರಾರು ಗ್ರಂಥಗಳು ಒಂದೆರಡಾದರೂ ಉದ್ಗ್ರಂಥಗಳು ಪ್ರಕಟವಾಗಿವೆ. ಇಷ್ಟಾದರೂ ಇಪ್ಪತ್ತನೆಯ ಶತಮಾನದ ಈ ಮಹಾಕೃತಿಯನ್ನು ಕುರಿತು ಹೊಸ ಹೊಸ ಬಗೆಯ ಓದು ಮತ್ತು ವ್ಯಾಖ್ಯಾನಗಳು ಇಲ್ಲಿಗೆ ಮುಗಿಯಿತು ಎನ್ನುವಂತೇನೂ ಇಲ್ಲ.

ಇತ್ತೀಚೆಗೆ ನಮ್ಮ ಡಾ. ರಾಜೇಗೌಡ ಹೊಸಳ್ಳಿ ಅವರು “ರಾಮಾಯಣ ದರ್ಶನಂನಲ್ಲಿ ಆಧುನಿಕ ತತ್ವಾದರ್ಶ ದರ್ಶನ” ಎಂಬ ಫಲವತ್ತಾದ ಸುದೀರ್ಘ ಲೇಖನವೊಂದನ್ನು ಬರೆದು ಪ್ರಕಟಿಸಿರುವುದೇ ಇದಕ್ಕೆ ಸಾಕ್ಷಿ. ಕುವೆಂಪು ಪರ ಮತ್ತು ವಿರೋಧದ ದನಿಗಳಿಂದ ಕೂಡಿರುವ ಎಲ್ಲರೂ ಓದಲೇ ಬೇಕಾಗಿರುವ ಈ ಚಿಂತನಶೀಲ ಲೇಖನ ಎಷ್ಟು ಫಲವತ್ತಾಗಿದೆ ಎಂದರೆ ಆಧುನಿಕ ವಿಶ್ವ ಎದುರಿಸುತ್ತಿರುವ ಎಲ್ಲ ಬಗೆಯ ಪಿಡುಗಿಗೆ ಪರಿಹಾರ ರೂಪವಾದ ದಾರಿ ದೀಪದಂತಿದೆ.

ಈ ಕೆಳಗಿನ ಕೆಲವು ಪ್ರತಿಮಾ ಸ್ವರೂಪದ ಹೇಳಿಕೆಗಳನ್ನು ಗಮನಿಸಿ :
೧) ಅವರ ಮಹಾ ಕಾವ್ಯವೊಂದು ಕಡಲು. ಅದು ಎಷ್ಟು ತಡಕಾಡಿದರೂ ಏನಾದರೂ ಸಿಗುತ್ತಲೇ ಹೋಗುವ ಒಂದು ಮಹಾನಿಧಿ. (ಪುಟ. ೨)

೨) ಕತೆ ಸಾಗಲು ಒಬ್ಬ ರಾಜ ಬೇಕು, ರಾಜಧಾನಿ ಬೇಕು, ಸಮರ ಮಾಡಲು ಎದುರಾಳಿ ಬೇಕು, ಅಲ್ಲಿ ಗೆಲುವು ಸಾಮ್ರಾಜ್ಯ ವಿಸ್ತರಿಸುವ ಮಹಾ ಸಾಹಸವಾಗಬೇಕೆನ್ನುವ ಕಥಾ ಪರಂಪರೆಗಳು ಜಗತ್ತಿನಾದ್ಯಂತ ಇದ್ದವುಗಳೇ ಹೌದು. ಹಾಗಾಗಿ ಇಲ್ಲಿಯೂ ಶ್ರೀರಾಮನಿದ್ದಾನೆ, ಅಯೋಧ್ಯೆ ಇದೆ, ದಶರಥ, ಜನಕ, ಮಿಥಿಲೆ, ಸೀತೆ ಇತ್ಯಾದಿ ಪಾತ್ರಗಳಿವೆ. ಇವೆಲ್ಲವನ್ನೂ ಅವರವರ ಭಾವಕ್ಕೆ ಅವರವರ ಭಕುತಿಗೆ ಅನುಗುಣವಾಗಿ ಜನಪದ ಕವಿಗಳಿಂದ ಹಿಡಿದು ವಾಲ್ಮೀಕಿವರೆಗೆ ಕಥಾ ಹಂದರ ಸೃಷ್ಟಿಯಾಗಿದೆ. ಮುಂದೆ ಜಗತ್ತಿನಾದ್ಯಂತ ಈ ಕಥೆ ಜನಪ್ರಿಯವಾಗಿ ಸೀತೆಗೆ ರಾಮನಿಗೆ ಹೊಂದಿಸುತ್ತಾ ಸಾಗಿದೆ.

ಈ ಸಾಗರೋಪಾದಿಯ ಹರಿವು ಕುವೆಂಪು ಅವರು ಕಥೆ ಹೇಳುತ್ತ ಕಡೆಗೊಂದು ದರ್ಶನಕ್ಕೇರಿಸಲು ಸಹಕರಿಸಿದೆ. (ಪು. ೪)

೩) ಅವರ ನಿಸರ್ಗ ಪ್ರೀತಿ ಮಹಾಕಾವ್ಯದಲ್ಲಿ ಉಕ್ಕುವ ತೊರೆಯಂತಿದೆ. ಅದರೊಳಗೆ ವೈಚಾರಿಕ ನಿಲುವು ಹಾಗೂ ಆಧ್ಯಾತ್ಮ ಘನೀಕರಿಸಿಕೊಂಡಿದೆ. (ಪುಟ. ೭)

೪) ಶಾರದಾ ದೇವಿ ನಿಮಿತ್ತ ಮಾತ್ರದ ರಾಮಕೃಷ್ಣರ ಪತ್ನಿ. ರಾಮಕೃಷ್ಣರು ಆಕೆಯಲ್ಲಿ ಕಾಳಿಕಾದೇವಿಯ ಶಕ್ತಿಯನ್ನು ಕಂಡುಕೊ೦ಡ ಬಗೆ ಶಿವಶಕ್ತಿ ಮೂಲದ ಭಾರತೀಯ ಪರಂಪರೆಗೆ ಹಿಡಿದ ಕನ್ನಡಿ. ಇದು ಗಾಂಧೀಜಿಯ ದಾಂಪತ್ಯಕ್ಕೂ ಅನ್ವಯಿಸುತ್ತದೆ. ಅರವಿಂದರ ಸಾವಿತ್ರಿಯಲ್ಲಿ ಪ್ರತಿಧ್ವನಿಸುತ್ತದೆ. ಸಾವಿಗೆ ಎದುರಾಗಿ ನಿಂತು ಯಮನೊಡನೆ ಗೆದ್ದು ಬಂದ ಸಾವಿತ್ರಿ ರಾವಣನಿಗೆ ಎದುರಾಗಿ ನಿಂತು ತಪಸ್ಸಿನ ಮೂಲಕ ಬಾಗಿ ಬಳುಕಿಸಿದ ಸೀತೆ, ಗೌತಮನ ಶಾಪಕ್ಕೆ ಎದುರಾಗಿ ಶ್ರೀರಾಮ ಸ್ಪರ್ಶದಿಂದ ಮರುಹುಟ್ಟು ಪಡೆದ ಅಹಲ್ಯೆ-ಇವರೆಲ್ಲರೂ ಪುರುಷ ಪ್ರಪಂಚಕ್ಕೆ ಸಹಕರಿಸಿದ ಮಾತೃ ತಪಸ್ವಿ ಜೀವಿಗಳು. (ಪುಟ.೧೧)

೫) ಈ ಭಾಗವು ೧೯೪೨ ರ “ಮಾಡು ಇಲ್ಲವೇ ಮಡಿ” ಎಂಬ ಗಾಂಧೀಜಿ ಕರೆಗೆ ಸಂವಾದಿಯ೦ತಿದೆ. ಅಂದು ಅದು; ಗಾಂಧೀಜಿ ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತನ್ನ ಹಾಜರಿರದಿದ್ದರೂ ಪ್ರಜೆಗಳೆ ನಿರ್ವಹಿಸುವ ಆಂದೋಲನ. ಗಾಂಧೀಜಿ ಜೈಲೊಳಗಿದ್ದರೂ ಸ್ವರಾಜ್ಯದ ಕೂಗು ದಂಗೆ ಎದ್ದಂತೆ ಧ್ವನಿಗೂಡಿಸುತ್ತಿತ್ತು. ಅದು ಭಾರತ ಮಾತೆಯನ್ನು ಬಿಡುಗಡೆಗೊಳಿಸುವ ಕೂಗು. ಇಲ್ಲಿ ಕಪಿಧ್ವಜವು ಸೀತಾದೇವಿಯ ಸೆರೆ ಹುಡುಕಲು, ಬಿಡಿಸಲು ತಕಥೈ ಕುಣಿದು ಕುಪ್ಪಳಿಸುತ್ತಿರುವ ಕೂಗು. ಅಂದು ಶಾಲಾ ಕಾಲೇಜುಗಳ ಹಾಜರಾತಿಯೇ ದೇಶ ದ್ರೋಹ ಎಂಬ೦ಥ ಸನ್ನಿವೇಶ. ಇಲ್ಲಿ ಕಿಷ್ಕಿಂಧೆಯಲ್ಲಿ ಮನೆಮಠ, ಹೆಂಡತಿ, ಮಕ್ಕಳನ್ನು ಬಿಟ್ಟು ಗೆಳೆತನದ ದೊರೆಗೆ ಸರ್ವಸ್ವವನ್ನು ಅರ್ಪಿಸುವ ಪ್ರಜೆಗಳ ಕೂಗು. ‘ಕಷ್ಟಮಿಷ್ಟಂ ಸುಖಮೆ ಸಂಕಟ’ ಎಂಬ ಕಾವ್ಯನುಡಿ ಸರ್ವೋದಯ ಸಮನ್ವಯ ದೃಷ್ಟಿಗೆ ಎರಕ ಹೊಯ್ದಂತಿದೆ. ನಮ್ಮ ಗೀಗಿ ಜನಪದ ಕವಿಗಳು ಹಾಡುವಂತೆ “ಹೇಳ್ಯಾರ ನಮ ಗಾಂಧಿ ಸರದಾರ ನೀವ ನಿಮಗಿನ್ನ ನಾಯಕರು ಹೋರಾಡಬೇಕು ಬಿಟ್ಟು ಮನೆ ಮಠ” ಇದು ಗಾಂಧೀಜಿ ಎಂಬ ಮಹಾತ್ಮನ ಪ್ರಭಾವ. (ಪುಟ. ೫೦)

ಇದು ನಮ್ಮ ಹೊಸಳ್ಳಿ ರಾಜೇಗೌಡ ಅವರು ಏನೋ ಒಂದನ್ನು ನೆಪ ಮಾಡಿಕೊಂಡು ಎಷ್ಟೊಂದು ಸಮನ್ವಿತ ವಿಚಾರಗಳನ್ನು ನಮ್ಮ ಕಿವಿ ಮನಸ್ಸುಗಳಿಗೆ ತುಂಬುತ್ತಿದ್ದಾರೆ ನೋಡಿ. ಶ್ರೀ ರಾಮಾಯಣ ದರ್ಶನದಲ್ಲಿಯ ಆಧುನಿಕ ತತ್ವಾದರ್ಶನವನ್ನ ನೆಪ ಮಾಡಿಕೊಂಡು ಸಮಗ್ರ ವಿಶ್ವ ವ್ಯಾಪಿ ದರ್ಶನಾ ದರ್ಶನಗಳನ್ನು ಸಂಗ್ರಹಿಸಿ ನಮ್ಮ ಮುಂದಿಡುತ್ತಿರುವ ಒಂದು ಸಂಕೀರ್ಣ ಲೇಖನವಿದು. ಇಂಥ ಲೇಖನವನ್ನು ಬರೆಯುವುದಕ್ಕ ಒಂದು ತರಬೇತಿ ಬೇಕಾಗುತ್ತದೆ. ಆ ತರಬೇತಿ ರಾಜೇಗೌಡರಿಗೆ ಹುಟ್ಟರಿವಿನಂತಿದೆ. ಇವರ ಸಮಗ್ರ ಬರವಣಿಗೆಯ ಸ್ವರೂಪ ಕೂಡ ಇದು. ಅದಕ್ಕೆ ಹೊಂದಿಕೊ೦ಡ೦ತೆ ತಮ್ಮದೇ ಆದ ಒಂದು ಭಾಷಾ ಶೈಲಿಯನ್ನು ಅವರು ಸಾಧಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ತುಸು ಸುತ್ತು ಬಳಸುವಂತೆ ಕಂಡರೂ ಜಾಡಿಗೆ ಬಿದ್ದವರಿಗೆ ಸರಾಗವಾಗಿ ಓದಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಈ ಮೇಲಿನ ಉದಾಹರಣೆಗಳನ್ನು ಸೂಕ್ಷ್ಮವಾಗಿ ನೋಡಿದರೆ ಇನ್ನೊಂದು ಮುಖ್ಯ ಸಂಗತಿ ಮನವರಿಕೆಯಾಗದಿರದು. ಅದೆಂದರೆ ರಾಜೇಗೌಡರ ಅದಮ್ಯ ಜೀವನ ಪ್ರೀತಿ. ಕುವೆಂಪು ಜತೆ ಜತೆಯಾಗಿ ಗಾಂಧೀಜಿ, ಪರಮಹಂಸ, ಮಹರ್ಷಿ ಅರವಿಂದ ಘೋಷ್ ಮತ್ತು ವಿವೇಕಾನಂದರ೦ಥ ಮಹಾನ್ ಸಾಧಕ ಚಿಂತಕರನ್ನು ಕೂಡಿಸಿಕೊಂಡು ಪರ್ಯಾಲೋಚಿಸುತ್ತಿರುವ ಶ್ರೀಯುತರು ಸರ್ವಮಾನ್ಯ ಜೀವನ ಸಂವಿಧಾನವೊ೦ದರ ಹುಡುಕಾಟದಲ್ಲಿ ತೊಡಗಿರುವುದು ಕಾಣಿಸುತ್ತಿದೆ. ಅವರ ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಕಾಣಿಸುತ್ತಿದ್ದ ಕಿರು ಲೇಖನಗಳ ಜೀವದ್ರವ್ಯ ಕೂಡ ಇದೇ ಆಗಿತ್ತು.

ನನ್ನ ರಾಜೇಗೌಡರ ಸ್ನೇಹ ತೀರ ಹಳೆಯದೇನಲ್ಲ, ಬರಿಯ ಐದಾರು ವರ್ಷದ್ದು ಮಾತ್ರ. ೨೦೧೪ರಷ್ಟು ಈಚೆಗೆ ಪ್ರಕಟವಾದ ನನ್ನ ‘ಕಡಿವಾಣ’ ಕಾದಂಬರಿಯನ್ನು ನನ್ನ ಹಳೆಯ ಗೆಳೆಯರಾದ ಪ್ರೊ. ಶಿವರಾಮಯ್ಯನವರ ಹತ್ತಿರ ಈಸಿಕೊಂಡು ಓದಿ ಮೆಚ್ಚಿ ಲೇಖನವೊಂದನ್ನು ಬರೆದು ಪ್ರಕಟಿಸುವ ಮೂಲಕ ಹತ್ತಿರವಾದವರು. ಐದಾರು ವರ್ಷಗಳ ಗೆಳೆತನ ಜನ್ಮಾಂತರದ್ದೇನೊ ಎಂಬಷ್ಟು ನಿಕಟವಾಗಿ ಬಿಟ್ಟಿದೆ. ಇದಕ್ಕೆ ನನ್ನ ಕೋರಿಕೆಯ ಮೇರೆಗೆ ರಾಜೇಗೌಡರು ಬರೆದಿರುವ ಈಗ ನಿಮ್ಮ ಕೈಯಲ್ಲಿರುವ ‘ಶ್ರೀ ರಾಮಾಯಣ ದರ್ಶನಂ’ ಕುರಿತ ಅಪೂರ್ವ ಕೃತಿಯೇ ಸಾಕ್ಷಿ. ನಾನು ಈ ಕೃತಿಯನ್ನು ಅಪೂರ್ವ ಎಂದು ಕರೆಯುತ್ತಿರುವುದಕ್ಕೆ ನನ್ನದೇ ಆದ ಕಾರಣವಿದೆ. ರಾಮಾಯಣ ದರ್ಶನವನ್ನು ಕುರಿತು ಇದಕ್ಕಿಂತ ಒಳ್ಳೆಯ ಲೇಖನಗಳಿಗೆ ಕೊರತೆಯಿಲ್ಲದಿರಬಹುದು. ಆದರೆ ರಾಜೇಗೌಡರು ಮೂಲ ಕೃತಿಯನ್ನು ಗ್ರಹಿಸುತ್ತಿರುವ ರೀತಿ ಮತ್ತು ತಮ್ಮ ಗ್ರಹಿಕೆಯನ್ನು ಜಗತ್ತಿನ ವ್ಯಾಪ್ತಿಯಲ್ಲಿ ಮಂಡಿಸುತ್ತಿರುವ ಬಗೆ ತೀರಾ ಸಾಮಾನ್ಯವಾದುದಲ್ಲ. ಇಷ್ಟೊಂದು ತನ್ಮಯತೆಯಿಂದ ಕುವೆಂಪು ಅವರ ಈ ಜಗದ್ವಿಖ್ಯಾತ ಕೃತಿಯನ್ನು ಓದಿದ ಮೇಲೆ ಶ್ರೀ ರಾಜೇಗೌಡರು ಮತ್ತೇನನ್ನು ಓದಬೇಕಾಗಿಲ್ಲ. ಇಷ್ಟೊಂದು ತನ್ಮಯತೆಯಿಂದ ಆ ಕೃತಿಯನ್ನು ಕುರಿತ ಈ ಪರಿಯ ಒಂದು ಸುದೀರ್ಘ ಮತ್ತು ಅಧಿಕೃತ ಅಭಿಪ್ರಾಯಗಳ ಲೇಖನವನ್ನು ಬರೆದ ಮೇಲೆ ಅವರು ಇನ್ನೇನನ್ನು ಬರೆಯಬೇಕಾಗಿಲ್ಲ. ಇದೊಂದು ಸಾರ್ಥಕವಾದ ಕೆಲಸ ಮತ್ತು ಬದುಕು.

ಕೆಲವು ತಿಂಗಳ ಹಿಂದೆ ನಾವು ಕೆಲವು ಗೆಳೆಯರು ‘ಜಾನಪದ ಲೋಕ’ದಲ್ಲಿ ಎರಡು ಮೂರು ಘಂಟೆಗಳ ಕಾಲ ಕುವೆಂಪು ಕುರಿತು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊ೦ಡಿದ್ದೆವು. ನನ್ನ ಮಾತುಗಳಿಂದ ಪ್ರಭಾವಿತರಾಗಿದ್ದ ರಾಜೇಗೌಡರು ಮೊದಲೇ ಸಿದ್ಧವಾಗಿದ್ದ ಈ ತಮ್ಮ ಕೃತಿಯನ್ನು ಮರು ವಿವೇಚಿಸಿ ಮತ್ತೆ ಹತ್ತು ಪುಟಕ್ಕೂ ಹೆಚ್ಚು ವಿಸ್ತರಿಸಿರುವುದಾಗಿ ಹೇಳಿದ್ದರು. ಅದು ಅವರು ನನಗೆ ತೋರಿದ ಗೌರವವೆಂದೇ ಭಾವಿಸುತ್ತೇನೆ. ಅವರ ಈ ಸೌಜನ್ಯಕ್ಕೆ ನಾನು ಋಣಿ.

ಕುವೆ೦ಪು ಎಂಬ ಕಲ್ಪ ವೃಕ್ಷ

ಶಿವರಾಮಯ್ಯ

ಕುವೆಂಪು ಆತ್ಮಕಥನ ‘ನೆನಪಿನ ದೋಣಿಯಲ್ಲಿ’ ಓದುತ್ತಿದ್ದರೆ ‘ಕಲ್ಪ ವೃಕ್ಷ’ದ ಮರ ಕಣ್ಣೆದುರು ನಿಲ್ಲುತ್ತದೆ. ಅಂಡಮಾನ್ ದ್ವೀಪಾಂತರ ಪ್ರವಾಸ ಯಾರಾದರೂ ಹೋಗಿರಬಹುದು. ಆ ಸಮುದ್ರ ದಂಡೆಯಲಿ ಬೆಳೆದು ಬಾಗಿರುವ ತೆಂಗಿನ ಮರಗಳು ಯಾರು ಹಾಕಿ ಹಾರೈಕೆ ಮಾಡಿ ಬೆಳೆದವುಗಳಲ್ಲ; ಎಲ್ಲ ನೈಸರ್ಗಿಕ. ಫಲಿತ ತೆಂಗಿನ ಕಾಯಿ ಕೆಳಗೆ ಉದುರಿ ಪುನಃ ಮರವಾಗಿ ಬೆಳದು ನಿಂತಿರುವುದು ಸೋಜಗ. ಆ ಸಾಲು ಸಾಲುಮರಗಳಿಂದ ಆನೆ ತಲೆ ಗಾತ್ರದ ಕಾಯಿ ತಾನಾಗಿಯೆ ಉದುರುತ್ತವೆ. ಅವು ಎಲ್ಲವೂ ಅಲ್ಲೆ ಮೊಳೆತು ಮರವಾಗಿ ಬೆಳೆಯಲಾರವು.

ಮನುಷ್ಯರು ಸಿಕ್ಕಿದಷ್ಟನ್ನು ಹೆಕ್ಕಿಕೊಳ್ಳುತ್ತಾರೆ. ಮತ್ತೆ ಕೆಲವು ಸಾಗರದಲ್ಲಿ ಬಿದ್ದು ಅಲೆಗಳಲ್ಲಿ ಎಲ್ಲೆಲ್ಲಿಗೊ ತೇಲಿ ಹೋಗಬಹುದು. ಚಂಡಮಾರುತಕ್ಕೆ ಸಿಕ್ಕಿ ತೇಲಿ ಹೋದ ಕಾಯಿ ಚೆನ್ನೈ, ಮಹಾಬಲಿಪುರ ದಂಡೆಗೂ ಮುಟ್ಟಬಹುದು. ಅದಿರಲಿ, ಹೀಗೆ ಸಾಗರ ದಂಡೆಯಲಿ ಬಿದ್ದ ಕಾಯಿ ಎಷ್ಟೋದಿನ ನೀರುಂಡು ತೇಲಿ ಮುಳುಗಿ ಕಡೆಗೊಮ್ಮೆ ಅದೃಷ್ಟವಶಾತ್ ಯಾವುದಾದರೊಂದು ಮರಳು ದಂಡೆಯ ತಂಪಿನಲಿ ಹೂತು ಗಾಳಿ ಮಳೆಬಿಸಿಲಿಗೆ ಬೀತು, ಅದರ ಮೂರು ಕಣ್ಣುಗಳಲಿ ಒಂದು ತಾಯಿಕಣ್ಣುತೆರೆದು, ಮರಿ ಆನೆ ಸೊಂಡಿಲಿನ೦ತೆ ಕರಟದಿಂದ ಮೊಳಕೆ ಬರುವುದೂ ಕೆಳಗೆ ಬೇರು ತಳ ಊರುವುದೂ ನೈಸರ್ಗಿಕ ಚಮತ್ಕಾರ.

ಹಾಗೆ ಮಲೆನಾಡ ಕತ್ತಲೆಗಿರಿಯಲ್ಲಿ ನಿತ್ಯಹರಿದ್ವರ್ಣದ ಕಾಡು ಬೆಳೆದಂತೆ ಬೆಳೆದ ಕವಿ ಕುವೆಂಪು ಕನ್ನಡ ಕಾವ್ಯಲೋಕದ ಮಲೆನಾಡಿನ ಕಾಡೂ ಕರಾವಳಿಯ ಕಲ್ಪವೃಕ್ಷವೂ ಆಗಿ ಭೂ ವ್ಯೋಮ ಆಕಾಸ ಮುಟ್ಟಿ ಬೆಳೆದು ನಿಂತಿದ್ದಾರೆ. ‘ನೆನಪಿನ ದೋಣಿಯಲ್ಲಿ’ನ ಪಾರದರ್ಶಕತೆ ಗಮನಿಸಿದರೆ, ಇದು ಜಾತಿ ಭಾರತದ ಶೂದ್ರಾಂದೋಲನ ಚರಿತ್ರೆ ಎಂಬುದು ನಿತ್ಯ ಚರಿತ್ರೆಯೇ ಆಗುತ್ತದೆ. ಕುವೆಂಪು ಇಟ್ಟ ಹೆಜ್ಜೆ, ಪಟ್ಟಪಾಡು, ದೃಷ್ಟಿ ದಿಟ್ಟತೆ ಗೊಮ್ಮಟ ಸ್ಪಷ್ಟ. ದಿಗಂತ ಚುಂಬಿತ ಈ ಕಲ್ಪವೃಕ್ಷದ ಫಲಿತ ಫಲವೇ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ.
ಕುವೆಂಪು ಬದುಕಿನುದ್ದಕ್ಕೂ ಬರೆದರು ಮತ್ತು ಬರೆದಂತೆ ಬದುಕಿದರು ಸಹಾ. ಇವರು ಮಲೆನಾಡ ವಾಲ್ಮೀಕಿ.

ರಾಮಕೃಷ್ಣರಂತೆ, ಗಾಂಧೀಜಿಯ೦ತೆ ಕುವೆಂಪು ಸಹ ಸಂಸಾರಪ೦ಥ, ಸನ್ಯಾಸಿಪಂಥ ಎರಡನ್ನು ಸಮನ್ವಯ ಗೊಳಿಸಿಕೊಂಡು ಬಾಳಿದವರು. ಕುಪ್ಪಳಿ ಬಳಿಯ ಗುಡಿಸಿಲಿನ ಕರಸಿದ್ಧ ಗಿಡ್ಡಿಯರ ಕತೆ ಎಂತೊ ಅಂತೆಯೇ ಪಂಚವಟಿಯ ಪರ್ಣಕುಟಿಯ ಸೀತಾರಾಮರ ಕತೆಯನ್ನು ಅಷ್ಟೇ ತನ್ಮಯತೆಯಿಂದ ಹಾಡಿದವರು. ಗಾಂಧೀಜಿ ಹೇಳಿದ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಮನುಜಮತ, ವಿಶ್ವಪಥ ಎಂಬ ಪಂಚಮ೦ತ್ರಗಳನ್ನು ಕುವೆಂಪು ತಮ್ಮ ಕಾವ್ಯ ಮುಖೇಣ ಹೇಳಿದವರು. ಲೋಕ ಗ್ರಹಿಕೆಗಾಗಿ ಅವರ ಉದಯರವಿ ಮನೆಯ ಕಿಟಕಿ ಬಾಗಿಲುಗಳು ಸದಾ ತೆರೆದೇ ಇದ್ದವು. ‘ಶ್ರೀ ಸಾಮಾನ್ಯನೆ ಭಗವಾನ್ ಮಾನ್ಯಂ’ ಎಂದ ಗಾಂಧಿ ಮತ್ತು ರಾಮ ಅವರ ಮಹಾಕಾವ್ಯದಲ್ಲಿ ಸಮೀಕರಣಗೊಂಡಿದ್ದಾರೆ. ಗಾಂಧಿ ಎಂತೊ ಅಂತೆ ಕವಿಯೂ ಪ್ರಜಾಪ್ರಭುತ್ವವಾದಿ. ಜಗತ್ತಿನಲ್ಲಿ ಎಷ್ಟು ಜನರಿದ್ದಾರೊ ಅಷ್ಟೂ ಮನುಜಮತಗಳಿವೆ ಎಂದವರು. ವಿವೇಕಾನಂದ ಮೈಮೇಲೆ ಬಂದವರ೦ತೆ ಅವರ ಬದುಕು ಬರಹಗಳನ್ನು ತಮ್ಮ ಸಾಹಿತ್ಯದಲ್ಲಿ ಉಸಿರಾಡಿಸಿದವರು. ಮನೆಯಲ್ಲಿದ್ದೂ ಅನಿಕೇತನರಾಗಿ ಪರಿವ್ರಾಜಕ ಮನೋ ಧರ್ಮದಿಂದ ಲೋಕಾನುಭವ ಪಡೆದವರು. ಗುಡಿ ಚರ್ಚು ಮಸೀದಿಗಳ ಬಿಟ್ಟು ಬನ್ನಿ ಎಂದು ಮತೀಯವಾದಿಗಳಿಗೆ ಕರೆಕೊಟ್ಟ ‘ಜಲಗಾರ’ ಕವಿ ಕುವೆಂಪು.

ಪ್ರಸ್ತುತ ಗಾಂಧಿಯನ್ನು ಮೈಮೇಲೆ ಬರಿಸಿಕೊಂಡ೦ತೆ ಬರೆಯುವ ಹಾಗೂ ಬದುಕಿದ ಡಾ.ರಾಜೇಗೌಡ ಹೊಸಹಳ್ಳಿಯವರಿಗೆ ರಾಮ ಬೇರೆಯಲ್ಲ, ಗಾಂಧಿ ಬೇರೆಯಲ್ಲ ಕುವೆಂಪು ಬೇರೆಯಲ್ಲ. ಈ ತ್ರಿವಳಿ ಕೂಡಿದ ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ’ದಲ್ಲಿ, ಮೇಲೆ ಹೇಳಿದ ಪಂಚಮ೦ತ್ರಗಳ ಪಂಚಾಮ ಹೇಗೆ ಪ್ರವಹಿಸುತ್ತಿದೆ ಎಂಬುದನ್ನು ಕುರಿತು ರಾಜೇಗೌಡರು ‘ಶ್ರೀ ರಾಮಾಯಣ ದರ್ಶನಂ: ಸಮಕಾಲೀನ ತತ್ವಾದರ್ಶ ದರ್ಶನ’ ಎಂಬ ಸುವಿಸ್ತಾರ ಸೃಜನಶೀಲ ವಿಶ್ಲೇಷಣೆ ಮಾಡಿದ್ದಾರೆ. ಮೊದಲಿಗೆ, ಕುವೆಂಪು ಅವರಿಗೆ ಮತ್ತೊಮ್ಮೆ ರಾಮಕತೆಯನ್ನೇ ಹೇಳುವ ಅಗತ್ಯ ಏನಿತ್ತು ಎಂದು ಕಾವ್ಯ ಪ್ರವೇಶ ಮಾಡುವ ಗೌಡರು ಅದಕ್ಕೆ ವರ್ತಮಾನದ ಸಾಕಷ್ಟು ಕಾರಣಗಳನ್ನು ಗುರ್ತಿಸುತ್ತಾರೆ. ಕಾವ್ಯದಲ್ಲಿ ಮುಖ್ಯವಾಗಿ ಅಂತರಗ೦ಗೆಯ೦ತೆ ಹರಿಯುವ ಗಾಂಧಿ ಪ್ರಣೀತ ಸಂಕೀರ್ತನಕ್ಕೆ ಕಿವಿಗೊಟ್ಟು ಆಲಿಸುತ್ತಾರೆ. ಪರಮ ಪುರುಷೋತ್ತಮ ರಾಮನಿಗಿಂತ ‘ರಾಮನಾಮ’ ಗಾಂಧಿಗೆ ಮೂಲ ಮಂತ್ರ. ಇದುವರೆಗೆ ಜಗತ್ತಿನಲ್ಲಿ ಜನಪದ ರಾಮಾಯಣಗಳೂ ಸೇರಿ ನೂರಾರು ರಾಮಾಯಣಗಳಿವೆ. ಆದರೂ ವರ್ತಮಾನದ ‘ಗಾಂಧಿ ಭಾರತಕ್ಕೆ ತೂಕದಲ್ಲೇರುವ ಕನ್ನಡ ರಾಮಾಯಣವಿಲ್ಲ’ ಎಂದು ಕುವೆಂಪು ರಾಮಕತೆಗೆ ಕೈಹಾಕಿದ್ದಾರೆಂದು ರಾಜೇಗೌಡರು ಗುರ್ತಿಸುತ್ತಾರೆ.

ರಾಜೇಗೌಡರಂತೆ ಇದುವರೆಗೆ ಯಾವ ವಿಮರ್ಶಕರೂ ರಾಮಾಯಣ ದರ್ಶನ ಮಹಾಕಾವ್ಯವನ್ನು ಹೊಕ್ಕಾಡಿ ಹೊರಬಂದು ಬರೆದವರಿಲ್ಲ. ಈ ಕಾವ್ಯಕ್ಕೆ ನ್ಯಾಯಸಲ್ಲಿಸುವ ಹಲವಾರು ಸಮೀಕರಣಗಳು ಇವರ ವಿಮರ್ಶೆಯಲ್ಲಿ ತೆರೆದುಕೊಂಡಿವೆ. ಬಿಳಿಯರು v/s ಕರಿಯರು; ರಾಮ v/s ರಾವಣ; ಲಕ್ಷö್ಮಣ v/s ಇಂದ್ರಜಿತು; ರಾಮ v/s ಇಂದ್ರಜಿತು; ಜರ್ಮನಿ v/s ಮಿತ್ರರಾಷ್ಟçಗಳು; ಹಿಟ್ಲರ್ v/s ಇಂದ್ರಜಿತು; ಬ್ರಿಟಿಷ್ ಸೈನ್ಯ v/s ಕಪಿ ಧ್ವಜರು, ಅಯೋಧ್ಯೆ v/s ಕನಕ ಲಂಕೆ, ರಾಮಾಯಣ v/s ಮಹಾಭಾರತ ಹೀಗೆ ಸಮೀಕರಣ ಸಾಗುತ್ತದೆ. ಸಮಕಾಲೀನ ಜಾಗತಿಕ ತತ್ವಾದರ್ಶಗಳು ಈ ವಿಭಿನ್ನ ನೆಲೆಯಲ್ಲಿ ಪುನರ್ ಸ್ಥಾಪಿತಗೊಂಡಿವೆ. ರಾಜೇಗೌಡರು ಈ ಹಿನ್ನೆಲೆಯಲ್ಲಿ ಮಹಾಕಾವ್ಯವನ್ನು ಅನುಸಂಧಾನ ಮಾಡುತ್ತಾರೆ. ಕೆಲವೊಮ್ಮೆ ಪುನರುಕ್ತಿ ಎಂದೆನಿಸಿದರೂ ಅದು ಲೆಕ್ಕಕ್ಕೆ ಬಾರದಂತೆ ಗೌಡರ ಈ ಸುದೀರ್ಘ ಲೇಖನ ಓದಿಸಿಕೊಂಡು ಹೋಗುತ್ತದೆ. ಈವರೆಗೆ ಈ ಮಹಾಕಾವ್ಯದ ಬಗ್ಗೆ ಬಂದಿರುವ ಎಲ್ಲಾ ಲೇಖನಗಳನ್ನೂ ಕುವೆಂಪು ಅವರ ಭಾಷಣ ಮತ್ತು ಲೇಖನಗಳನ್ನು ಇವರು ಗಮನಿಸಿದ್ದಾರೆ. ಸಂದರ್ಭೋಚಿತವಾಗಿ ತಮ್ಮ ಅಭಿಪ್ರಾಯವನ್ನು ಸೂತ್ರ ರೂಪದಲ್ಲಿ ಹೇಳಿ ಸಮರ್ಥನೆಗೆ ಕವಿಯ ಹಾಗೂ ಪೂರ್ವಸೂರಿಗಳ ವಿಮರ್ಶೆಯನ್ನು ಉಲ್ಲೇಖಿಸುತ್ತಾರೆ. ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್’ (ಅಯೋಧ್ಯಾ ಸಂಪುಟ. ಪುಟ. ೧೨೩) ಹಾಗೂ
ನೆಯ್ದಾಳುತಿದೆ ಜಗವನೊಂದತಿವಿರಾಣ್ ಮನಂ
ಸೂಕ್ಷ್ಮಾತಿ ಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯ ಭಾವಮ ನೀಡಿ (ಅಯೋಧ್ಯಾ ಸಂಪುಟ)

ಇದು ಗಾಂಧೀಜಿಯ ಹಾಗೂ ರಾಮನ ಜೀವನದ ಮೂಲ ಮಂತ್ರ ಎಂಬುದನ್ನು ಗೌಡರು ಮೊದಲೆ ಗುರ್ತಿಸಿಕೊಳ್ಳುತ್ತಾರೆ ಹಾಗೆ ಕವಿಗೂ ಸಹ. ರಾವಣತ್ವ ಕರಗಿ ರಾಮತ್ವಕ್ಕೇರಿದ ಕತೆ ಇದು. ಮಹಾನ್ ಪರಿವರ್ತನೆ ನಡೆದಿದೆ ಇಲ್ಲಿ. ಬಿಳಿಯರು ರಾವಣನಂತೆ ಆಕ್ರಮಣಶೀಲರು. ಆದರೆ ರಾಮನಂತೆ ಬಡಬೈರಾಗಿ ಗಾಂಧಿಯ ಎದುರು ನಿಲ್ಲಲಾರದೆ ಹೋದರು.

ಇಂದ್ರಜಿತುವಿನ ಮಗ ರಾವಣನ ಮೊಮ್ಮಗ ವಜ್ರಾರಿಗೆ ರಾಜ್ಯ ಬಿಟ್ಟುಕೊಟ್ಟು ಹೋದ ಶ್ರೀರಾಮ ಎಂಬಲ್ಲಿ ಗಾಂಧೀಜಿಯ ಸ್ವರಾಜ್ಯ ಮೌಲ್ಯ ಇಲ್ಲಿ ಧ್ವನಿಸುತ್ತದೆಯೇ? ಎನ್ನುತ್ತಾರೆ ಗೌಡರು. ಆದರೆ ಈಗ ದೇಶದ ಗತಿ ಏನಾಗಿದೆ? ಒಬ್ಬೊಬ್ಬ ಸಂಸದರೂ, ಒಬ್ಬೊಬ್ಬ ಶಾಸಕರೂ ಕೂಡ ತುಂಡು ರಾಜರಂತೆ ವರ್ತಿಸುತ್ತಿದ್ದಾರೆ- ಗಾಂಧೀಜಿಯ ಗ್ರಾಮ ಸ್ವರಾಜ್ಯಕ್ಕೆ ತಿಲಾಂಜಲಿಕೊಟ್ಟು. ಆದರೂ ಗಾಂಧಿಯನ್ನು ನಾಮ ಮಾತ್ರಕ್ಕೆ ಜಪಿಸುತ್ತಾರೆ ಅವಕಾಶವಾದಿಗಳು. ಇದು ಗೌಡರ ಸಮಕಾಲೀನ ರಾಜಕಾರಣದ ಬಗೆಗಿನ ಅಸಮಧಾನ. ಗಾಂಧಿ ಅಹಿಂಸಾ ತತ್ವ ಗೈರು ಆಗಿ, ಭಾರತ ಹಿಂಸಾರಭಸಮತಿ ಆಗುತ್ತಿರುವುದನ್ನು ಇವರು ಅನೇಕ ಸಮೀಕರಣಗಳಲ್ಲಿ ಗುರ್ತಿಸುತ್ತಾರೆ. ಮಹಾಕಾವ್ಯ ರಚನೆ ೧೯೩೬ ರಿಂದ ೧೯೪೫. ಎರಡನೇ ಮಹಾ ಯುದ್ಧದ ಅವಧಿ. ಹಿಟ್ಲರ್ ಮುಸಲೋನಿ v/s ಮಿತ್ರ ರಾಷ್ಟçಗಳು ಕಾದಾಡಿದವು. ಒಂದೆಡೆ ಬಾಂಬುಗಳ ಬಣವೆ ಮೇಲೆ ಕುಳಿತ ಹಿಟ್ಲರ್, ಇನ್ನೊಂದಡೆ ‘ನಿಕುಂಭಿಲಾ’ ಎಂಬ ಸರ್ವಜಿತ್‌ಯಜ್ಞ ಕಂಕಣ ಬದ್ಧ ಇಂದ್ರಜಿತು.

ಮುಂದಿನ ಇತಿಹಾಸ ಲೋಕ ಕಂಡಿದೆ. ಲೀಗ್ ಆಫ್ ನೇಷನ್ಸ್ ರಚನೆಯಾಯಿತು. ಆದರೂ ಯುದ್ಧ ಪ್ರಸ್ತುತದಲ್ಲಿ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ವಾಲ್ಮೀಕಿಯಲ್ಲಿ ಇಂದ್ರಜಿತು ನಡೆಸುವ ಮಾಯಾಯುದ್ಧ, ಅದರಲ್ಲಿ ಮಾಯಾ ಸೀತೆಯ ಶಿರಶ್ಛೇದ ಮುಂತಾದ ಅದ್ಭುತ ಸನ್ನಿವೇಶಗಳು ಕುವೆಂಪು ಅವರಲ್ಲಿ ಇಲ್ಲ; ಇದು ಸಪ್ಪೆ ಎನಿಸುತ್ತದೆ ಎನ್ನುವ ಗೌಡರ ಮಾತು ನಿಜವೇ.

ಆ ಮೇಲೆ ಮುಂದುವರಿದು ಇಂದ್ರಜಿತು v/s ರಾಮ ಇವರನಿಟ್ಟು ಇಬ್ಬರು ಪಿತೃವಾಕ್ಯ ಪರಿಪಾಲಕರೇ. ಆದರೆ ಇಂದ್ರಜಿತು ಅವಿಚಾರ ಮೂಢ, ಹಿಂಸಾರಭಸ ಮತಿ. ಸೀತಾ ಮೋಹಿತ ತಂದೆ ರಾವಣನ ಬಗ್ಗೆ ಚಕಾರ ಎತ್ತುವುದಿಲ್ಲ. ರಾಮ ಪಿತೃವಾಕ್ಯ ಪರಿಪಾಲನಾರ್ಥ ವನವಾಸಕ್ಕೆ ಬಂದರೆ ಇಂದ್ರಜಿತು ಸರ್ವಜಿತ್ ‘ನಿಕುಂಭಿಲಾ’ ಯಜ್ಞ ಕೈಗೊಂಡ. ಆದರೆ ಹಿಟ್ಲರನಂತೆ ಆತ್ಮಹತ್ಯೆ ಮಾಡಿಕೊಂಡ ಹೇಡಿ ಅಲ್ಲ, ವೀರ ಮರಣ ಹೊಂದಿದ ಸಾಹಸಿ.

ಈ ಸಂದರ್ಭದಲ್ಲಿ ರಾಜೇಗೌಡರು ಇಂದ್ರಜಿತು ಬಗ್ಗೆ ಎತ್ತುವ ಪ್ರಶ್ನೆಯೊಂದು ಮಾರ್ಮಿಕವಾಗಿದೆ. ಇಡೀ ಕಾವ್ಯದಲ್ಲಿ ಎಲ್ಲ ಪಾತ್ರಗಳಿಗೂ ಉದ್ಧಾರದ ಅವಕಾಶವಿದೆ. ಆದರೆ ಇಂದ್ರಜಿತು ಉದ್ಧಾರದ ಬಗ್ಗೆ ಒಂದು ಸೂಚನೆಯೂ ಇಲ್ಲ. ಗೌಡರ ಮಾತು ಸಮಂಜಸವೆ ಆಗಿದೆ. ಇದು ಹೊಸ ಓದಿಗೆ ಒಂದು ಸಾಕ್ಷಿ. ಇಲ್ಲೇ ಇನ್ನೊಂದು ಮಾತನ್ನು ಹೇಳುತ್ತಾರೆ, ಯಜ್ಞನಿರತ ಇಂದ್ರಜಿತುವನ್ನು ಲಕ್ಷಣ ಕೊಂದದ್ದು ಹಾಗೂ ಮರೆಯಲ್ಲಿ ನಿಂತು ರಾಮ ವಾಲಿಯನ್ನು ಕೊಂದದ್ದೂ ಒಂದೇ ಆಯಿತಲ್ಲ. ಅಣ್ಣನಂತೆ ತಮ್ಮ ಎಂಬ ಆಕ್ಷೇಪಬರುತ್ತದೆ. ಇದಕ್ಕೂ ಕಾವ್ಯದಲ್ಲಿ ಸಮಜಾಯಿಷಿ ಇಲ್ಲ. ಗೌಡರ ಸೂಕ್ಷ್ಮ ವಿಮರ್ಶಾ ರೀತಿಗೆ ಇದು ಇನ್ನೊಂದು ನಿದರ್ಶನ.

ಇನ್ನು ‘ದಶಾನನ ಸ್ವಪ್ನ ಸಿದ್ಧಿ’ಯಲ್ಲಿ ರಾವಣ ಕುಂಭಕರ್ಣರು ಲವಕುಶರಾಗಿ ಸೀತಾಮಾತೆಯಲ್ಲಿ ಜನಿಸುತ್ತಾರೆ ಎಂಬ ಉತ್ತರ ರಾಮಾಯಣದ ಕಲ್ಪನೆ ದೂರಾನ್ವಯವಾದರೂ ಕಾವ್ಯಾತ್ಮಕವಾಗಿದೆ. ಪಾಪ! ಇಂದ್ರಜಿತುವಿಗೆ ಇಂಥ ಯಾವ ಉದ್ಧಾರವೂ ಇಲ್ಲ, ಏಕೆ ಎಂಬ ಪ್ರಶ್ನೆ ಉಳಿಯುತ್ತದೆ. ರಘು ವಂಶದ ರಾಮ ಸೋದರರು ಕೂಡಿಬಾಳಿದ್ದು ಗಾಂಧೀ ಪ್ರಜಾಪ್ರಭುತ್ವದ ಮೂಲ ಮಾದರಿ. ಕುವೆಂಪು ರಾಮಾಯಣದಲ್ಲಿ ಇದು ಸಾಕಾರಗೊಂಡಿದೆ ಎಂಬುದನ್ನು ಗೌಡರು ಗುರ್ತಿಸುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಭೂಮಿಕೆ. ಆದರೆ ಚಂದ್ರವ೦ಶದ ಪಾಂಡವ ಕೌರವರ ಕದನ ಕುರುಕ್ಷೇತ್ರವೂ ಇದೇ ಆಗಿದೆ. ಇದರಿಂದ ಕಡೆಗೆ ಆದದ್ದೇನು? ಧರ್ಮರಾಯ ವಿಧವೆಯರ ಸಾಮ್ರಾಜ್ಯ ಆಳುವಂತಾಯಿತು. ರಾಮಾಯಣದ ಕತೆ ಒಳಗೊಳ್ಳುವುದಾದರೆ, ಮಹಾಭಾರತದ ಕತೆ ಹೊರತಳ್ಳುವುದಾಗಿದೆ. ಈ ಮಾದರಿಗಳನ್ನು ಗೌಡರು ಗುರ್ತಿಸುತ್ತಿರುವುದು ಅವರ ಗಾಂಧೀ ಚಿಂತನಕ್ಕೆ ಪ್ರೇರಕವಾಗಿದೆ. ದೊಡ್ಡ ದೇಶದ ದೊಡ್ಡ ಪ್ರಜಾಪ್ರಭುತ್ವ ಗಾಂಧೀ ರಾಮನ ಮಾದರಿಯನ್ನು ಈಗ ಬಿಟ್ಟು ತಪ್ಪು ದಾರಿ ಹಿಡಿಯುತ್ತಿರುವುದಕ್ಕೆ ಗೌಡರು ವಿಷಾದಿಸುತ್ತಾರೆ. ಕೂಡಿ ಬಾಳಿದರೆ ರಾಮಾಯಣ; ಅಗಲಿಕೆಟ್ಟರೆ ಮಹಾಭಾರತ ಇದು ಗಾದೆ ಮಾತು.

ಆರ್ಯ v/s ದ್ರಾವಿಡ ಸಮೀಕರಣ ಕೈಗೆತ್ತಿಕೊಳ್ಳುವ ಗೌಡರು ಆರ್ಯರೆಂದರೆ ಯಾರು? ದ್ರಾವಿಡರೆಂದರೆ ಯಾರು? ಎಂಬುದನ್ನು ರಾಮಾಯಣದ ಒಳಗಿನಿಂದಲೇ ಕುವೆಂಪು ಬಿಡಿಸಿರುವ ಬಗೆಯನ್ನು ಗುರ್ತಿಸುತ್ತಾರೆ. ರಾಮ ಲಕ್ಷ್ಮಣರು ವಿರಾಧನ ಕೊಂದು ಮುನ್ನಡೆಯುವಾಗ, ಸೀತೆ ಬಾಯಿಂದ ಆರ್ಯರು ದಕ್ಷಿಣದ ನೆಲವನ್ನು ಆಕ್ರಮಿಸುವ ಸಾಮ್ರಾಜ್ಯಶಾಹಿ ನೀತಿ ಸರಿಯೆ? ಎಂದು ಕೇಳಿಸುವ ಕವಿ ಆರ್ಯ ದ್ರಾವಿಡ (ದಸ್ಯು)ರ ನಡುವಿನ ಕಲಹಕಾರಣಗಳನ್ನು ಸರ್ವೋದಯ ತತ್ವದ ನೆಲೆಯಲ್ಲಿ ಬಿಡಿಸಿ ಹೇಳುತ್ತಾರೆ. ಯಾವುದು ಕೆಟ್ಟದ್ದೊ (evil) ಅದು ದಸ್ಯು; ಯಾವುದು ಸಹಕಾರ ಭಾವದ್ದೊ ಅದು ಆರ್ಯ (good). ಇದು ಜನಾಂಗ ಆಧಾರದ ವಿಂಗಡಣೆಯಲ್ಲ; ಅದು ಗುಣಧರ್ಮದ ಆಧಾರದ ಮೇಲೆ ನಿಂತಿದೆ. ರಾಮನ ನಡೆ ಹಿಂಸಾತ್ಮಕವಲ್ಲ; ಅದು ಗಾಂಧೀಜಿಯ ಅಹಿಂಸಾ ಮೌಲ್ಯವನ್ನೇ ಕೈವಾರಿಸುತ್ತದೆ. ಗೆದ್ದ ಕನಕ ಲಂಕೆಯನ್ನು ರಾಮ ಲಂಕಾನಾಗರಿಕರಿಗೆ ಬಿಟ್ಟು ಬರುತ್ತಾನೆ. ಹಾಗೆ ಬ್ರಿಟಿಷರು ಸಹ ನೂರಾರುವರ್ಷ ಆಳಿದ ವಸಾಹತುಗಳನ್ನು ಬಿಟ್ಟುಹೋಗಬೇಕು. ಕಾವ್ಯ ಮುಗಿದಾಗ ಇನ್ನೂ ಸ್ವಾತಂತ್ಯ್ರ ಬಂದಿರಲಿಲ್ಲ (೧೯೪೫), ಆದರೂ ಗಾಂಧೀಜಿಯ ಅಹಿಂಸಾ ಸಂದೇಶ ಕುವೆಂಪು ಅವರಲ್ಲಿ ಸಾಕಾರಗೊಂಡಿರುವುದನ್ನು ಗೌಡರು ಗುರ್ತಿಸುತ್ತಾರೆ. ಸಾರಾಂಶ, ಯಾರು ಹಿಂಸಾರಭಸಮತಿಗಳೊ ಅವರೆಲ್ಲ ದಸ್ಯುಗಳು, ಅನಾರ್ಯರು; ಅವರಲ್ಲಿ ಬಿಳಿಯರು ಕರಿಯರು ಎಂಬ ವರ್ಗ ವರ್ಣ ತಾರತಮ್ಯಕ್ಕೆ ಎಡೆಯಿಲ್ಲ. ಜಾತಿ ನಾಶ ಆಗಬೇಕು ಎಂಬುದೇ ಗಾಂಧೀ ತತ್ವ. ಆದರೆ ಗಾಂಧೀಜಿಯನ್ನು ಮರೆತ ಭಾರತ ಈಗ ಏನಾಗಿದೆ?
‘ಏನು ಹೇಳುತ್ತಿದೆ? ವಿಶ್ವಾಮಿತ್ರ ಅಗಸ್ತ್ಯಾದಿಗಳು ಭಾರತದಗಲ ಅಡವಿ ಕುಲದ ನೆಲವನ್ನು ಕೈ ಅಗಲ ಮಾಡಿ ತೋರಿಸುತ್ತಾ ಅಗ್ನಿಯಜ್ಞಗಳ ನೆರವು ಒಡ್ಡಿ ಶ್ರೀರಾಮನಂತಹನನ್ನೆ ನೆಪಮಾಡಿಕೊಂಡು ಆರ್ಯೀಕರಣದತ್ತ ಸಾಗಿ ಅಡವಿಕುಲ ಆದಿವಾಸಿಗಳನ್ನು ಹತಗೈದ ವಿಚಾರವೇ ಭಾರತೀಯ ಸಾಂಸ್ಕೃತಿಕ ಚರಿತ್ರೆ. ಅದೇ ಕರಿಯರನ್ನು ಬಿಳಿಯರು ತುಳಿದು ವಿಸ್ತರಿಸಿದ ಜಾಗತಿಕ ಚರಿತ್ರೆ ಎಂದು ಹೇಳುತ್ತಿದೆ. ಇದಕ್ಕೆ ಶ್ರೀರಾಮನು ಪ್ರತಿನಿಧಿ. ಅನಂತರ ಗಾಂಧೀಜಿ ಕಾಲದಲ್ಲಿ ಬಿಳಿಯ ಬ್ರಿಟಿಷರು ಪ್ರತಿನಿಧಿಗಳು. ಈಗಂತೂ ಅಭಿವೃದ್ಧಿ ಎಂಬ ಹೆಸರಿನಲ್ಲಿ ಇವರೆಲ್ಲರ ಪ್ರತಿನಿಧಿಗಳು ನಾವು. ಅದೇ ಪ್ರಜಾಪ್ರಭುತ್ವದ ಪ್ರಭುಗಳು. ‘ಪಿರಿತನಕೆ ಮಣಿವುದೆ ಕಿರಿಯ ಸಂಸ್ಕೃತಿಗೆ ಮೇಲ್ಮೆ’ ಎನ್ನುತ್ತಿರುವ ಮಹಾಕವಿ ಕುವೆಂಪು ಇದನ್ನು ಒಪ್ಪಿ ನಡೆವಾಗ ಯಾರಿಗೆ ಯಾರು ದಸ್ಯು ಎಂಬ ಚರಿತ್ರೆ ರೂಪುಗೊಂಡಾಗಿದೆ’. (ಪುಟ ೪೬).

ಕುವೆಂಪು ವಾಲ್ಮೀಕಿ ಆದಿಯಾಗಿ ವಿಶ್ವಕವಿಕುಲಕ್ಕೆಲ್ಲ ಋಣಿಯಾಗಿದೆ ನನ್ನ ಕಾವ್ಯ ಎನ್ನುತ್ತಾರೆ. ರವೀಂದ್ರ, ಅರವಿಂದ, ಟಾಲ್‌ಸ್ಟಾಯ್, ರಾಮಕೃಷ್ಣ, ವಿವೇಕಾನಂದ, ಬುದ್ಧ, ಬಸವ, ಅಲ್ಲಮ, ಗಾಂಧಿ ಈ ಎಲ್ಲ ಯೋಗಿ ಪುರುಷರ ತಪಃಶಕ್ತಿಯನ್ನು ಆವಾಹಿಸಿಕೊಂಡವರು ಕುವೆಂಪು. ರಾಮಾಯಣ ಕಾವ್ಯಕ್ಕೆ ಕಾಲ ದೇಶಗಳ ಗಡಿಸೀಮೆಗಳಿಲ್ಲ. ಇವರ ಅಪಾರ ಕಾವ್ಯ ಸಂಸಾರ ಎಲ್ಲೆಡೆಯಿಂದಲೂ ನೂಲ ಎಳೆ ಹಿಡಿದು ಗೂಡು ಕಟ್ಟುತ್ತದೆ. ವಿಜ್ಞಾನಿಗಳ ಮನೋವಿಜ್ಞಾನಿಗಳ ಸಿದ್ಧಾಂತಗಳು ಇಲ್ಲಿ ಕರಗಿ ಹೋಗಿವೆ ಎಂದು ಗೌಡರು ಗುರ್ತಿಸುತ್ತಾರೆ. ರಾವಣನ ರಾವಣತ್ವ ಕಳೆದು ರಾಮತ್ವಕ್ಕೇರಿಸುವ ಪ್ರಕ್ರಿಯೆಯಲ್ಲಿ ಕುವೆಂಪು ಸ್ತ್ರೀರತ್ನ ಮಾಲೆಯನ್ನೇ ಕಾಣುತ್ತಾರೆ; ಚಿತ್ರಿಸುತ್ತಾರೆ. (ಪುಟ ೧೦೨)

ರಾಜೇಗೌಡರ ಓದಿನ ಹರಹು, ಅರಿವಿನ ಆಳ ಹಿರಿದಾದುದು. ಅದಕ್ಕಾಗಿ ಕುವೆಂಪು ಸಮಗ್ರ ಗದ್ಯ ಪದ್ಯ ಸಾಹಿತ್ಯವನ್ನೂ ಮಹಾಕಾವ್ಯ ಕುರಿತು ಈವರೆಗಿನ ಎಲ್ಲಾ ವಿಮರ್ಶ ಕೃತಿಗಳನ್ನು ಹರಡಿಕೊಂಡು ಅಧ್ಯಯನ ಮಾಡಿದವರು. ಆದ್ದರಿಂದ ಕೆಲವು ಅಪವಿಮರ್ಶೆಗೆ ಇಲ್ಲಿ ಉತ್ತರ ಕೊಟ್ಟಿದ್ದಾರೆ. ಮುಖ್ಯವಾಗಿ ನವ್ಯರ ಕಾಲದಲ್ಲಿ ಕುವೆಂಪು ಮಹಾಕಾವ್ಯವೆಂದರೆ ‘ಮದುಮಗಳು’ ಎಂದವರ ಮಾತನ್ನು ತೆಗೆದುಕೊಂಡು ಗೌಡರು ‘ಮದುಮಗಳು’ ನಿಜಕ್ಕೂ ಲೌಕಿಕ ಕಾವ್ಯವೇ. ಆದರೆ ಅವರ ‘ರಾಮಾಯಣ ದರ್ಶನಂ’ ಲೌಕಿಕ ಅಲ್ಲವೆಂದವರಾರು? ಇಲ್ಲಿ ಸಂಪೂರ್ಣವಾಗಿ ಗಾಂಧೀಜಿಯ ಸರ್ವೋದಯ ಸಿದ್ಧಾಂತದ ಸಾಕಾರ ಆಗಿದೆ. ಅದಕ್ಕೆ ಆಧ್ಯಾತ್ಮೀಕರಣ ಎಂದರೇನು? ಅದು ಅಹಿಂಸಾತ್ಮಕ, ತ್ಯಾಗಮೂಲ ಎಂದು ಹೇಳುತ್ತಾರೆ. ಗಾಂಧೀಜಿ ಜೀವಮಾನ ಬದುಕಿ ಬಾಳಿದ್ದು ಸತ್ತಿದ್ದೂ ಸಹ ಇದಕ್ಕಾಗಿ ತಾನೆ? ಇದು ಲೌಕಿಕವಾದರೆ ಅದನ್ನು ಪ್ರತಿಪಾದಿಸುವ ರಾಮಾಯಣವೂ ಲೌಕಿಕವೇ.

“ಮಹಾಕಾವ್ಯ ೧೯೩೬ ಹಾಗೂ ೧೯೪೫ ರ ನಡುವೆ ಸೃಜನವಾದದ್ದು. ವಿಶ್ವ ಸಮರಗಳು ಆಗಿ ಹೋಗಿದ್ದವು. ಗಾಂಧೀಜಿಯೆ೦ಬ ಸೂರ್ಯ ಸ್ವರಾಜ್ಯಕ್ಕಾಗಿ ಕೊರಳೊಡ್ಡಿತ್ತು. ಉಗ್ರಗಾಮಿಯಾಗಿದ್ದ ಅರವಿಂದರು ಜಡಚೇತನವನ್ನು ಚೇತನಗೊಳಿಸಲು ತಪಶ್ಚರ್ಯೆಗೆ ತೊಡಗಿದ್ದರು. ರಾಮಕೃಷ್ಣ ವಿವೇಕಾನಂದರು ಆಧ್ಯಾತ್ಮ ಚಲನೆಗೆ ಕುವೆಂಪು ಅಂತವರನ್ನು ಸೆಳೆದಿದ್ದರು. ಅಹಿಂಸಾಯೋಗ ಸ್ಥಾಪಿತವಾಗುತ್ತಿತ್ತು. ವಿಶ್ವವೇ ಶಾಂತಿಯನ್ನರಸಿ ಕೂಟ ರಚಿಸಿಕೊಳ್ಳುತ್ತಿತ್ತು. ‘ಅಹಂಕಾರಕ್ಕೆ ಬಲಿಕೊಡುವೆಯೇನ್ ಲಂಕಾ ಪ್ರಜಾಸಂಖ್ಯೆಯ’ ಎಂಬ೦ತಹ ಕಾವ್ಯದ ಮಾತು ಹಿಟ್ಲರನಿಗೆ ತಟ್ಟಿ ಅಂತ್ಯ ಕಾಣಿಸಿತ್ತು. ಪ್ರಜಾಪ್ರಭುತ್ವ ವಿಶ್ವವನ್ನಾವರಿಸಿತ್ತು. ಬಲಿಷ್ಠ ಬ್ರಿಟಿಷ್ ಎಲ್ಲಾ ದೇಶಗಳಿಂದ ಕಾಲ್ತೆಗೆಯುತ್ತಿತ್ತು. ಈ ಎಲ್ಲಾ ಧೋರಣೆಗಳು ‘ಶ್ರೀರಾಮಾಯಣ ದರ್ಶನಂ’ ಮೂಲಕ ಬಿತ್ತರಗೊಳ್ಳುತ್ತಿವೆ. ‘ಜನಮನದ ಶಕ್ತಿ ಮೇಣವರಭೀಪ್ಸೆಯೆ ಮಹಾತ್ಮರಂ ನಮ್ಮಿಳೆಗೆ ತಪ್ಪದೆಳೆತರ್ಪುದು ಕಣಾ’ ಎಂಬ ಜಾಬಾಲಿ ನುಡಿಯು ಹೀಗೆ ಮಹಾಕವಿಯ ದರ್ಶನವೂ ಹೌದು”. (ಪುಟ ೧೦೭ )

ಪ್ರಸ್ತುತ ಕುವೆಂಪು ಮಲೆನಾಡು ಕಳೆದು ಹೋಗುತ್ತಿದೆ. ಅಮೆಜಾನ್ ಅರಣ್ಯ ಗರಗಸಕ್ಕೆ ಶಿರವೊಡ್ಡಿದೆ. ಇದು ನಮ್ಮ ಅಭಿವೃದ್ಧಿ ಸಡಗರ. ಭೂ ಜಲ ಆಕಾಶ ಮಂಡಲಗಳೆಲ್ಲ ಮಾಲಿನ್ಯ ಭರಿತ. ನಮ್ಮ ಸರ್ವನಾಶಕ್ಕೆ ನಾವೇ ಬಾಧ್ಯ ಸ್ಥರಾಗುತ್ತಿದ್ದೇವೆ; ಭೂಮಿ ಬರಡಾಗುತ್ತಿದೆ; ನಗರಗಳು ಗೋಸ್ಟ್ ಸಿಟಿಗಳಾಗುತ್ತಿವೆ ಎಂದು ವಿಷಾದಿಸುವ ಗೌಡರು, ಇದಕ್ಕೆಲ್ಲ ಪರಿಹಾರ ಗಾಂಧಿ ಜೀವನ ಕ್ರಮದಲ್ಲಿದೆ. ಅವರ ಶಿಷ್ಯ ವಿನೋಬಾ ಭಾವೆಯವರ ಭೂದಾನ, ಸಂಪತ್ತಿನ ದಾನ, ಶ್ರಮ ದಾನದಲ್ಲಿದೆ; ಆ ಎಲ್ಲ ತಿಳಿವು ಕುವೆಂಪು ರಾಮಾಯಣದಲ್ಲಿ ಹೇಗೆ ಸಾಕಾರಗೋಂಡಿದೆ ಎಂಬುದನ್ನು ಸೂತ್ರಪ್ರಾಯದಲ್ಲಿ ಮಂಡಿಸುತ್ತಾರೆ ಗೌಡರು.

ಗಾಂಧಿ ಭಾರತವನ್ನು, ಗಾಂಧಿ ಸಮಾಜವನ್ನು, ಗಾಂಧಿ ತತ್ವಗಳನ್ನು ಪ್ರಚುರ ಪಡಿಸುವುದಕ್ಕೆ ಕುವೆಂಪು ಅವರಿಗೆ ರಾಮಾಯಣ ಬೇಕಾಗಿತ್ತು. ಹಾಗೇ ರಾಜೇಗೌಡರಿಗೂ ಸಹಾ. ಇವರಿಗೆ ಕುವೆಂಪು ಕಾವ್ಯ ಒಂದು ನೆಪ. ಪ್ರಸ್ತುತ ಗಾಂಧೀಜಿ ಜೀವನ ಸಿದ್ಧಾಂತಗಳನ್ನು ಮರೆತ ದುರಂತಗಳನ್ನು ಪ್ರಸ್ತಾಪಿಸುವುದಕ್ಕೆ. ಇದು ಕಥೆಯಲ್ಲ, ಚರಿತ್ರೆಯಲ್ಲ. ಇದರಲ್ಲಿ ಸಂಪೂರ್ಣ ಸರ್ವೋದಯದ ದರ್ಶನಗಳಿವೆ ಎನ್ನುತ್ತಾರೆ ಗೌಡರು. ಇವರ ಸಮಚಿತ್ತತೆ ಲೇಖನದ ಉದ್ದಕ್ಕೂ ಕೆನೆಗಟ್ಟಿದೆ. ಆದರೂ ಕೆಲ ವಿಮರ್ಶೆಕರ ಅಪವರ್ಗೀಕರಣವೂ ನಡೆದಿದೆ. ಅದನ್ನು ಗೌಡರು ಕಟುವಾಗಿಯೇ ವಿರೋಧಿಸುತ್ತಾರೆ.

“ಆಕಾಶ ನಮಗೆ ದೂರದ ಬೆಟ್ಟ. ಭೂಮಿ ಮೇಲಿನ ಅಡವಿ ಹಾಗೂ ಸಮುದ್ರ ಆಧ್ಯಾತ್ಮದ ಶಿಖರಗಳು. ಅಡವಿ ಹೊಕ್ಕು ಈಚೆಗೆ ಬರುವ ಛಾತಿ ಕಡಲು ಹೊಕ್ಕು ದಾಟಿ ಬರುವ ಹನುಮನ ವಿನ್ಯಾಸ ವಿಮರ್ಶಕರಿಗೂ ಇರಬೇಕಾಗುತ್ತದೆ. ಮಹಾ ಅಡವಿಯಲ್ಲಿ ‘ಮಲೆಗಳಲ್ಲಿ ಮದುಮಗಳು’ ಹಾಗೂ ಮಹಾಕಾವ್ಯ ಬೇರು ಬಿಟ್ಟಿವೆ. ವಿಮರ್ಶಕರು ಆ ಮಹಾ ಅಡವಿಯೊಳು ಹೊಕ್ಕು ಬರುವಾಗ ಅಲ್ಲಿನ ಪ್ರಕೃತಿ ಸಹಚರ್ಯದೊಡನೆಯೇ ಪ್ರಕೃತಿಯ ಮಹಾರೌದ್ರ ತೀಕ್ಷ್ಣತೆಯನ್ನು ಅರಿತಿರಬೇಕಾಗುತ್ತದೆ. ಅಡವಿ ಅರಣ್ಯ ಸಂರಕ್ಷಕರು ಈ ಮಹಾ ಅಡವಿಗೆ ಹೋಗಿ ಬರುವಾಗ ಸುಣ್ಣದ ಬರೆಗಳನ್ನು ಮರಗಳಿಗೆ ಗುರುತು ಹಾಕುತ್ತಾ ಹೋಗಿ ಬರುವ ವಿಚಾರವು ಸ್ಥಳೀಯರ ಅನುಭವದಲ್ಲಿದೆ. ಏಲಕ್ಕಿ ಮುಂತಾದ ಅಡವಿ ಸಂಪನ್ಮೂಲಗಳನ್ನು ಸರ್ಕಾರ ಹರಾಜು ಹಾಕುವುದುಂಟು. ಹಾಗಿದ್ದ ಸಮಯದಲ್ಲಿ ಕಳ್ಳತನಕ್ಕೆ ಹೋದವರು ದಿಕ್ಕುತಪ್ಪಿ ಬರಲಾರದೆ ಅವರ ಎಲುಬು ಹಾಗೂ ಬುರುಡೆಗಳು ಮಾತ್ರ ಯಾವಾಗಲೋ ಸಿಕ್ಕಿರುವುದುಂಟು. ಇತ್ತೀಚೆಗೆ ಟ್ರಕ್ಕಿಂಗ್ ವೀರರು ಸಹಾ ಹೀಗೆ ಸಿಕ್ಕಿಕೊಂಡ ವಿಚಾರ ನಮ್ಮ ಮುಂದಿದೆ. ಹಾಗೆ ವಿಮರ್ಶಕರು ಕುವೆಂಪುವಿನ ಅಡವಿ ಸಾಹಿತ್ಯವನ್ನು ಈಜುವಾಗಲೂ ಇದೇ ಮಾತು ಅನ್ವಯವಾಗುತ್ತದೆ. ಹಿಂದೆ ನವ್ಯರ ಕಾಲದಲ್ಲಿ ಹೀಗಾಗಿದ್ದು ನಿಜ.”(ಪುಟ. ೩೫)

ಕುವೆಂಪು ಅವರಿಗೆ ನೋಬಲ್ ಪ್ರಶಸ್ತಿ ತಪ್ಪಿತೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುವ ಗೌಡರು ಬೇರು ಕೊಯ್ದು ಲೋಕದ ಎದುರು ನೀರು ಹೊಯ್ವ ಈ ದೇಶದ ಜಾತಿ ರಾಜಕಾರಣ ಕುರಿತು ಹೇಳುವ ಮಾತು ಇದು “ಶಂಕರ ಮೊಕಾಶಿ ಪುಣೇಕರ್ ಇಂಗ್ಲಿಷ್ ವಿದ್ವಾಂಸರು. ಕುವೆಂಪು ಇಂಗ್ಲಿಷೆ೦ಬುದನ್ನು ಅರೆದು ನೋಡಿ ಕನ್ನಡಕ್ಕೆ ಭಾಗಿಸಿದವರು. ‘ಶ್ರೀರಾಮಾಯಣ ದರ್ಶನಂ’ ಆಂಗ್ಲ ಭಾಷಾಂತರ ವನ್ನು ಪುಣೇಕರ್ ಎತ್ತಿಕೊಂಡು ಆಗಾಗ ಬಂದು ಕುವೆಂಪು ಎದುರು ಕುಳಿತು ಚರ್ಚಿಸಿ ಅತ್ಯುತ್ತಮವಾಗಿ ಭಾಷಾಂತರಿಸಿದ್ದರು. ಇದು ತಿಳಿದ ತೆಗಳುಭಟ್ಟರು ಹೊಗಳುಭಟ್ಟರ ನೆರವಿನಿಂದಲೇ ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದಲ್ಲಿ ಲಿಖಿತ ಪ್ರತಿಯ ಮೌಲ್ಯಮಾಪನಕ್ಕೆ ಅನುವು ಮಾಡಿಕೊಂಡು ಕೆಲವು ದೋಷಗಳಿವೆ ಎಂದು ಷರಾ ಬರೆದು ಕಾಲನ ಮೂಲೆಗೆ ದೂಡಿದರು. ಕುವೆಂಪುವಿಗೆ ಇದು ಅರಿಯದ ವಿಚಾರವಾಗಿರಲಿಲ್ಲ. ಆಗಲೇ ದೋಷಗಳಿದ್ದರೆ ತಿದ್ದಿ ಪ್ರಕಟಿಸುವುದು ಕಷ್ಟವೂ ಆಗಿರಲಿಲ್ಲ. ಕುವೆಂಪು ಎಂಬ ಋಷಿ ಮೌನವಾದರು. ಪುಣೇಕರ್ ಅಯ್ಯೋ ಈಗಿನಂತೆ xerox ಕೃಪೆ ಇದ್ದಿದ್ದರೆ ಹೊರಗೆಲ್ಲಾದರೂ ಪ್ರಕಟಿಸುತ್ತಿದ್ದೆ ಎಂದು ಕೊರಗಿದ್ದರಂತೆ. ಕುವೆಂಪು ಬದುಕಿರುವವರೆಗೂ ಆಂಗ್ಲ ಅನುವಾದ ಬರದಂತೆ ನೋಡಿಕೊಂಡ ಅದೇ ಶಕ್ತಿಗಳು ಅವರ ಮೃತನಂತರ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಇದೊಂದು ಉತ್ತಮ ಭಾಷಾಂತರವೆ೦ದು ನಾನು ಕುವೆಂಪು ಕೆಲಸ ಮಾಡಿದೆ ಎಂದು ಹೊಗಳಿಸಿಕೊಂಡಿದ್ದು೦ಟು. ಕನ್ನಡಕ್ಕೆ ನೋಬೆಲ್ ಬರುತ್ತಿತ್ತೋ ಇಲ್ಲವೋ ಆ ಮಾತು ಬೇರೆ. ಅದರದು ಪ್ಯಾನಲ್‌ಗೆ ಹೋಗದಂತೆ ನೋಡಿಕೊಂಡಿದ್ದು ಚರಿತ್ರೆ. ಈ ದೇಶದ ವರ್ಣ ಚರಿತ್ರೆ ಏನೆಲ್ಲ ಮಾಡಿದೆ ಮಾಡುತ್ತಿದೆ. ಮಾಡುತ್ತಲೇ ಇರುತ್ತದೆ ಎಂಬುದು ಒಂದು ರಾಷ್ಟ್ರೀಯ ದುರಂತ ಅಷ್ಟೆ”.(ಪುಟ ೧೧೨) ಹೀಗೆ ಮಾತಾಡುವ ಧಾತು ಧಾಷ್ಟ್ರ್ಯ ಎಷ್ಟು ಜನಕ್ಕಿದೆ?

ಕಡೆಯದಾಗಿ, ಡಾ. ರಾಜೇಗೌಡ ಹೊಸಳ್ಳಿಯವರು ತಮ್ಮ ಸ್ವಯಂ ನಿವೃತ್ತಿಯ ನಂತರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿವಹಿಸಿದವರು. ಆದರೂ ಅದಕ್ಕೂ ಪೂರ್ವದಲ್ಲಿ ಜನಪದ ಸಂಗ್ರಹ, ಕಥನ, ಕಾದಂಬರಿ, ವಿಮರ್ಶೆಯಲ್ಲಿ ತೊಡಗಿಕೊಂಡಿದ್ದವರೇ. ವಿಶ್ವವಿದ್ಯಾನಿಲಯಗಳ ಹೆಬ್ಬಾಗಿಲ ಹೊರಗೆ ನಿಂತೇ ಕೆಲಸಮಾಡುತ್ತಾ ‘ತಾಳ ಬಂದೋ ತಂಬೂರಿ ಬಂದೋ’ ಎಂಬ ಮಹಾಪ್ರಬಂಧ ಬರೆದು ಪಿ.ಹೆಚ್.ಡಿ ಪದವಿಗೆ ಭಾಜನರಾದವರು. ಪ್ರಸ್ತುತ ‘ಶ್ರೀರಾಮಾಯಣ ದರ್ಶನಂ: ಸಮಕಾಲೀನ ತತ್ವಾದರ್ಶ ದರ್ಶನ’ ಎಂಬ ಮೌಲ್ಯಾತ್ಮಕವಾದ ೧೨೫ ಪುಟಗಳ ದೀರ್ಘ ವಿಮರ್ಶಾ ಲೇಖನವನ್ನು ಬರೆದು ‘ಇದೆ ಮೊದಲೆಂಬ೦ತೆ’ ಅದರ ಸಾರಸಂಗ್ರಹ ವಿಚಾರಧಾರೆಯನ್ನು ಗ್ರಹಿಸುತ್ತಾರೆ.

ಎರಡು ವರ್ಷದ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಗೌಡರು ಆಸ್ಪತ್ರೆಗೆ ಎಡತಾಗುತ್ತಲೇ ಜೀರ್ಣಾವಸ್ಥೆಯಲ್ಲೂ ತಮ್ಮೆಲ್ಲ ಶಕ್ತಿ ಸಂಚಲನ ಮಾಡಿಕೊಂಡು ಇದನ್ನು ಬರೆದಿದ್ದಾರೆ. ಇಲ್ಲಿರುವ ಒಳನೋಟಗಳನ್ನು ಗುರ್ತಿಸಿದರೆ ಯಾರೇ ಆಗಲಿ ‘ಇದು ಗೌಡರದೇ ಮಾತು’ ಎಂಬ ಛಾಪು ಬಿದ್ದಿದೆ. ಮೈಸೂರಿನ ಪ್ರೊ.ಎನ್.ಬೋರಲಿಂಗಯ್ಯನವರು ಮುನ್ನುಡಿಯಲ್ಲಿ ಗುರ್ತಿಸಿರುವಂತೆ ಗೌಡರು ‘ಇಷ್ಟೊಂದು ತನ್ಮಯತೆಯಿಂದ ಮತ್ತೇನನ್ನು ಓದಬೇಕಾಗಿಲ್ಲ. ಈ ಪರಿಯ ಸುದೀರ್ಘ ಮತ್ತು ಅಧಿಕೃತ ಅಭಿಪ್ರಾಯಗಳ ಲೇಖನವನ್ನು ಬರೆದ ಮೇಲೆ ಅವರು ಇನ್ನೇನನ್ನೂ ಬರೆಯ ಬೇಕಾಗಿಲ್ಲ!’

ದುರಂತವೆ೦ದರೆ, ಎಷ್ಟು ಪ್ರಯತ್ನಪಟ್ಟರೂ ಗೌಡರು ಇದ್ದಾಗಲೇ ಈ ಕೃತಿಯನ್ನು ಮುದ್ರಿಸಿ ತೋರಿಸಲು ಆಗಲಿಲ್ಲ. ಅಷ್ಟರಲ್ಲಿ ಅವರು ಹೋಗೇಬಿಟ್ಟರು. ಈಗ್ಗೆ ಮೂರುತಿಂಗಳ ಹಿಂದೆಯೇ ನನಗೆ ಈ ಲೇಖನ ಕೊಟ್ಟು ‘ನೋಡಿಬಿಡಿ’ ಎಂದಿದ್ದರು. ನನ್ನ ಸೋಮಾರಿತನದಿಂದ ನೋಡಲಾಗಿರಲಿಲ್ಲ ಆ ‘ಪಾಪ ಪ್ರಜ್ಞೆ’ ಕಾಡುತ್ತಿದೆ. ಈ ಮೂಲಕ ಅವರಿಗೆ ಕೃತಜ್ಞತೆ ಸಲ್ಲಬೇಕು.

‍ಲೇಖಕರು Admin

July 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: