ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜನೂ, ನಕಲಿಶಾಮನೂ..

ಜಿ.ಪಿ. ಬಸವರಾಜು

ರಾಜನೇ,

ನಕಲಿಶಾಮನೇ,

ಎರಡೂ ಒಂದೇ

ಇಂದಿನ ಈ ರಂಗದಲ್ಲಿ;

 

ಸಿಂಹಾಸನದ ಮೇಲೆ ಕುಳಿತಾಗ

ನಕಲಿಶಾಮ, ಆಗುತ್ತಾನೆ ರಾಜ

ನಗುತ್ತಾನೆ ಎಡಬಿಡಂಗಿ

ನೋಡುತ್ತ ನೋಡುತ್ತ ಪ್ರಜೆಗಳನು

ಕೋಡಂಗಿ ಹಾಕುತ್ತಾನೆ ಹತ್ತಾರು ಲಾಗ

ಅತ್ತ ಇತ್ತ ಕೊಂಬೆಕೊಂಬೆಗೆ ಹಾರುತ್ತಾನೆ

ಜಿಗಿಯುತ್ತಾನೆ ಬಹದ್ದೂರ, ‘ಭಳಿರೇ’ ಎಂದು

ಗಳಹುತ್ತಾನೆ, ಕಾದು ಕುಳಿತ ಒಡ್ಡೋಲಗದ

ವಂದಿಮಾಗಧರು ‘ಭೋ ಪರಾಕ್‍ ’ ಹೇಳುತ್ತಾರೆ

 

ತತ್ವಮಸಿ ಎಂದು ನಗುತ್ತ

ಬಳಿದುಕೊಳ್ಳುತ್ತಾನೆ ಮುಖಕ್ಕೆ ಮಸಿ

ಕರಿಮೀಸೆ ಬಿಳಿಮೀಸೆಯಾದರೂ

ಬೀಳುತ್ತದೆ ಚಪ್ಪಾಳೆ;

 

ಹಾಸುತ್ತಾನೆ ಪಗಡೆಯಾಟಕ್ಕೆ

ಹೊಸ ಹಾಸು

ನಿನ್ನೆಯ ಆಟ ಬೇರೆ

ಇವತ್ತು ಉರುಳುವ

ದಾಳಗಳು ಬೇರೆ

ಸೋತರೂ ಗೆಲ್ಲತ್ತಾನೆ

ಗೆಲುವಿನ ಗೆರೆಗಳನ್ನು

ಅವನೇ ಎಳೆದಿದ್ದಾನೆ

ತನಗೆ ಬೇಕಾದ ಹಾಗೆ

ವಿರೋಧಿಗಳು ಬೆಚ್ಚುವ ಹಾಗೆ;

 

ಗೆಲುವಿಗೊಂದು ಕುಣಿತ

ಹೆಜ್ಜೆಗೆ ತಕ್ಕ ಗೆಜ್ಜೆ

ಚಪ್ಪಾಳೆಗೆ ನಿಂತಿದ್ದಾರೆ ಸುತ್ತ

ಅವನೇ ತಂದ ಮಂದಿ;

ಗೆಲುವೆಂದರೆ ಗೆಲುವು

ಸೋಲೆಂದರೂ ಗೆಲುವು

ಯಾವುದಕ್ಕೂ ಉಂಟು

ಇಲ್ಲೊಂದು ಹೆಜ್ಜೆ, ಕುಣಿತ

ನಕಲಿಶಾಮನ ಮೈಮಣಿತ

 

ಇನ್ನೆಷ್ಟು ಕಾಲ ಇದು

ಕಾಲು ದಣಿದಿವೆ

ನಶೆ ಇಳಿದಿದೆ

ರಾಜ  ಬಿದ್ದಿದ್ದಾನೆ

ಸಿಂಹಾಸನದ ಕೆಳಗೆ-

ಅತ್ತ ಇತ್ತ ಕೈಕಾಲು ಎಸೆದು,

ಆದರೂ ಶಂಖ ಊದುತ್ತಾರೆ

ಚಪ್ಪಾಳೆ ತಟ್ಟುತ್ತಾರೆ

ಗೌರವಾನ್ವಿತ ರಾಷ್ಟ್ರಭಕ್ತರು

 

‍ಲೇಖಕರು avadhi

5 August, 2020

2 Comments

  1. T S SHRAVANA KUMARI

    ಮಾರ್ಮಿಕ ಕವಿತೆ

    • Basavaraju

      ವಂದನೆ. ನೀವು ಓದಿದ್ದು ಸಂತೋಷ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading