ರವಿರಾಜ ಸಾಗರ್ ಓದಿದ ‘ಮಿಠಾಯಿ ಮಾಮ’

ರವಿರಾಜ ಸಾಗರ್ ಮಂಡಗಳಲೆ

ಇತ್ತೀಚಿಗೆ ನಮ್ಮ ರಾಜ್ಯದಲ್ಲಿ ಹೊಸ ತಲೆಮಾರಿನ ಸಾಕಷ್ಟು ಶಿಕ್ಷಕರು ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ. ನಾನು 2008ರಲ್ಲಿ ಮಕ್ಕಳ ಮಂದಾರ ಪತ್ರಿಕೆಯನ್ನು ಮಕ್ಕಳ ಬರಹಗಳ ಸೃಜನಶೀಲ ವೇದಿಕೆಯಾಗಿ ಆರಂಭಿಸಿದಾಗ ಹೊಸ ತಲೆಮಾರಿನ ಮಕ್ಕಳ ಪುಸ್ತಕಗಳನ್ನು ಪರಿಚಯಿಸಲು ತಡಕಾಡಿದಾಗ ಕೆಲವೇ ಕೆಲವರು ಕಾಣಿಸುತ್ತಿದ್ದರು. ಈಗ ಪ್ರತಿವರ್ಷ ಕನಿಷ್ಠ  ಇಪ್ಪತ್ತಕ್ಕಿಂತ ಹೆಚ್ಚಿನ ಶಿಕ್ಷಕರು ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.  ರಾಜ್ಯದಲ್ಲಿ ಸಾಹಿತ್ಯ ಕೃಷಿಗಿಳಿದ ಶಿಕ್ಷಕರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಈಗ ಮಿಠಾಯಿ ಮಾಮನಾಗಿ ಬಂದ ವೀರೇಶ್ ಅವರು ಸಹ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ಆಶಾದಾಯಕ ಭಾವನೆ ಮೂಡಿಸಿದ್ದಾರೆ.

“ಬೇಕೇ ಬೇಕೇ ಮಿಠಾಯಿ ಎನ್ನುತಾ
ಮಿಟಾಯಿ ಮಾಮ ಬರುತ್ತಾನೆ
ಸಿಹಿ ಸಿಹಿ ಹೊತ್ತು ತರುತ್ತಾ
ಬಾಯೊಳು ನೀರನು ತರುತ್ತಾನೆ” ಎನ್ನುತ್ತಾ ಮಕ್ಕಳಿಗೆ ಸಾಹಿತ್ಯ ಸಿಹಿಯನ್ನೂ ಮೊದಲ ಕವಿತೆಯಲ್ಲಿಯೇ ಉಣಬಡಿಸಿದ್ದಾರೆ.

“ಚರಕವ ಹಿಡಿದ ತಾತನ ಪಟವು
ದುಡಿಮೆಯ ಹಿರಿಮೆಯ ಕಲಿಸೈತಿ
ಸತ್ಯ ಶಾಂತಿ ಅಹಿಂಸೆಯ ಪಾಠವು
ನಮ್ಮ ಬಾಳಿಗೆ ಬೆಳಕನು ಫಲಿಸೈತಿ.

ಅನುದಿನ ನಾನು ಅಜ್ಜನ ಮಾರ್ಗದಿ
ನಡೆಯುವ ಆಸೆಯ ಮೊಳೆದೈತಿ
ಒಂದಿನ ನಾನು ಆಗುವೆ ಗಾಂಧಿ
ಎನ್ನುವ ಭಾವವು ಬೆಳೆದೈತಿ!”

ಈ ಕವಿತೆಯುದ್ದಕ್ಕೂ ಗಾಂಧಿಯ ಸೇವಾ ಬದುಕನ್ನು ಮಕ್ಕಳಿಗೆ ಸ್ಪೂರ್ತಿಯಾಗಿಸಲು ತೆರೆದಿಡುವ ಕವಿತೆ ಆಗಿದೆ.ಗಾಂಧೀಜಿ ಬಗ್ಗೆ ಕವಿತೆ ಬರೆಯದ ಮಕ್ಕಳ ಕವಿಗಳೇ ಇಲ್ಲ.ಬಹುತೇಕ ಎಲ್ಲ ಮಕ್ಕಳ ಕವಿಗಳಿಗೂ ಗಾಂಧೀಜಿ ಕವಿತೆಯ ವಸ್ತು. ವೀರೇಶ್ ಕುರಿ ಅವರೂ ಸಹ ಗಾಂಧೀಜಿಯ ತತ್ವಾದರ್ಶಗಳನ್ನು ಮಕ್ಕಳಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ.

ತುಂಟ ಬೆಕ್ಕು, ಬಾ ಬಾ ಗುಬ್ಬಿ, ನಮ್ಮೂರ ಕೆರೆ, ಕಾಗೆ ಮತ್ತು ಮಗು, ಬಾರಲೇ ಕೋಳಿ, ಇರುವೆ ಇರುವೆ, ಚೆಲುವ ಚಿಟ್ಟೆ, ಆಕಳು ಕರುವೇ, ಕುರಿಮರಿ, ಮುಂತಾದ ಮಕ್ಕಳ ಕವಿತೆಗಳು ಮಕ್ಕಳನ್ನು ಪರಿಸರಕ್ಕೆ ಕರೆದೊಯ್ಯುತ್ತಾ , ಜೊತೆಗೆ ವಯಸ್ಕರನ್ನು ಸಹ  ಈ ಹಿಂದೆ  ನೋಡಿ ಆಡಿ ಬೆಳೆದ ಪರಿಸರದ ಅನುಭವದ ಜೊತೆಗೆ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ.

“ಗುಡಿಯೊಳಗಿಲ್ಲ ದೇವರು ಕಂದ
ಹೇಳುವೆ ಕೇಳು ಮನಸ್ಸಿಟ್ಟು ಚಂದ

ಕರುಣೆ ತುಂಬಿದ ಕಂಗಳಲಿರುವನು
ಬಿದ್ದವರನೆತ್ತುವ ಕರದಲ್ಲಿ ಇರುವನು
ದಿಟವನಾಡುವ ಬಾಯೊಳು ಇರುವನು
ಮತ್ಸರವಿರದ ಹೃದಯದಿ ಇರುವನು”

ಕವಿತೆಯಲ್ಲಿ ಗಂಭೀರವಾದ ಆಶಯಗಳನ್ನು ಮಕ್ಕಳಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ. ಡಾಂಬಿಕತೆ ಭಕ್ತಿಯಲ್ಲಿ ಹುದುಗಿರುವ ಸಮಾಜ ಮಕ್ಕಳಿಗೂ ಅಂತಹ ಡಾಂಬಿಕ ಭಕ್ತಿಯನ್ನು ಬಿತ್ತುತ್ತಿರುವ ಈ ದಿನಗಳಲ್ಲಿ ಮಕ್ಕಳಿಗೆ ಇಂತಹ ಆಶಯಗಳನು ತಿಳಿಸುವ ಅಗತ್ಯವಿದೆ.

ಮಕ್ಕಳಿಗೆ ಬೇಕಾದ ಸರಳವಾದ ಭಾಷೆ, ಹದವಾದ ಕಾವ್ಯ, ಹೆಚ್ಚೇನು ತ್ರಾಸ ತೆಗೆದುಕೊಳ್ಳದ ಸಮಂಜಸವಾದ ಪ್ರಾಸ ಪ್ರಯೋಗ ಕೃತಿಯುದ್ದಕ್ಕೂ ಕಾಣಬಹುದು. ಇಂದು ಮಕ್ಕಳ ಸಾಹಿತ್ಯ ಎಂದರೆ  ಮಕ್ಕಳ ಮನಸ್ಸನ್ನು ರಂಜಿಸುವ, ಒಂದೇ ಓದಿಗೆ ಮಕ್ಕಳಿಗೆ ಇಷ್ಟವಾಗ ಬಲ್ಲ ಪರಿಸರ, ಪ್ರಾಣಿ-ಪಕ್ಷಿಗಳ ಕೇಂದ್ರಿತ ವಿಷಯಗಳು, ನೀತಿ ಮೌಲ್ಯಗಳ ಬೋಧಿತ ಕವಿತೆಗಳೇ  ಮಕ್ಕಳ ಕವಿತೆಗಳು ಎನ್ನುವಷ್ಟು ಪ್ರಧಾನ ಭೂಮಿಕೆಯಲ್ಲಿ  ಬಹುತೇಕ ಮಕ್ಕಳ ಕವಿಗಳು ಆಯ್ದುಕೊಳ್ಳುವ ಕವಿತೆಗಳ ಆವರಣ, ವಸ್ತುವನ್ನೇ ಇವರು ಸಹ ಆಯ್ದುಕೊಂಡಿದ್ದಾರೆ. ತರಗತಿ ಕೋಣೆಯ ಶಿಕ್ಷಕರೇ ಆಗಿರುವುದರಿಂದ  ಮಕ್ಕಳ ಮನ ಮುಟ್ಟಲು ಬೇಕಾದ ಪ್ರಯತ್ನವನ್ನು ಮಾಡಿದ್ದಾರೆ.

ಶಿಕ್ಷಕ ಸಾಹಿತಿ ಮಿತ್ರರಾದ ಅಶೋಕ್ ವಿ ಬಳ್ಳಾ ಇವರು ಮುನ್ನುಡಿ ಬರೆದು ಹಾರೈಸಿದ್ದಾರೆ. ಶ್ರೀಮತಿ ಅರುಣಾ ನರೇಂದ್ರ ಇವರು ಬೆನ್ನುಡಿಯಲ್ಲಿ ಬೆನ್ನುತಟ್ಟಿದ್ದಾರೆ.ಅರವತ್ತು ವೈವಿಧ್ಯಮಯ ಕವಿತೆಗಳಿಂದ ಕೂಡಿದ್ದು,ಮೂರು ಪುಟಗಳ ಈ  ಕೃತಿಯ ಮುಖಬೆಲೆ 110 ರೂಪಾಯಿ ಆಗಿದ್ದು ಗಾನವಿ ಪ್ರಕಾಶನ ಸೋಂಪುರ ಪ್ರಕಟಿಸಿದ್ದಾರೆ. ಶಿಕ್ಷಕ ಮಿತ್ರರ ಈ ಪ್ರಯತ್ನವನ್ನು ಪ್ರೋತ್ಸಾಹಿಸಲು ಮಕ್ಕಳ ಪುಸ್ತಕಗಳನ್ನು ಕೊಂಡು ಮಕ್ಕಳಿಗೆ ಉಡುಗೊರೆಯಾಗಿ ನೀಡೋಣ.

‍ಲೇಖಕರು Admin

July 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: