ಪಿ ಪಿ ಉಪಾಧ್ಯ ಸರಣಿ ಕಥೆ 68- ಅನಂತ ತನ್ನ ಕಥೆ ಹೇಳಲು ತೊಡಗಿದ…

ಪಿ ಪಿ ಉಪಾಧ್ಯ

ಕೊನೆಯ ಸಲ ನೋಡಿದ ಅನಂತನಿಗೂ ಈ ಅನಂತನಿಗೂ ತುಂಬ ವ್ಯತ್ಯಾಸ ಕಂಡಿತು. ಒಂದು ಕಾಲದಲ್ಲಿ ಈ ಅಣ್ಣ ತಮ್ಮಂದಿರೊ೦ದಿಗೆ ಮಾತನಾಡಲೂ ತಯಾರಿಲ್ಲದಿದ್ದ ಅವ ಇಂದು ಇವರ ಉತ್ತರದ ನಿರೀಕ್ಷೆಯಲ್ಲಿ ನಿಂತಿದ್ದಾನೆ. ಆದಿಯೇ ನಿಧಾನವಾಗಿ ಹೇಳಿದ ‘ಇಬ್ಬರೂ ಇಲ್ಲ.. ತೀರಿ ಹೋಗಿ ಹನ್ನೆರಡು ವರ್ಷಗಳೇ ಕಳೆದವು. ಮೊದಲು ಅಪ್ಪ. ನಂತರ ಎರಡೇ ತಿಂಗಳಲ್ಲಿ ಅದೇ ದುಃಖದಲ್ಲಿ ಅಮ್ಮನೂ ಸತ್ತಳು. ಕೊನೆಯ ಕ್ಷಣದಲ್ಲಿ ಅವರಿಬ್ಬರೂ ನಿನ್ನ ನಿರೀಕ್ಷೆಯಲ್ಲಿಯೇ ಇದ್ದರು’ ಆಗಲೇ ಒಸರಲು ಪ್ರಾರಂಭವಾಗಿದ್ದ ಅನಂತನ ಕಣ್ಣಲ್ಲಿ ಈಗ ಧಾರಾಕಾರವಾಗಿ ನೀರು. ‘ತಪ್ಪು ಮಾಡಿದೆ ನಾನು..  ತಪ್ಪು ಮಾಡಿದೆ.. ಯಾರೊಡನೆ ಕ್ಷಮೆ ಕೇಳಲಿ..’

‘ಎರಡು ಬಾರಿಯೂ ನಿನ್ನನ್ನು ಸಂಪರ್ಕಿಸಲು ನಾವು ಪ್ರಯತ್ನ ಪಟ್ಟೆವು. ಸಾಧ್ಯವೇ ಆಗಲಿಲ್ಲ. ಮೊದ ಮೊದಲು ನಿನ್ನ ಬಗ್ಗೆ ಸುದ್ದಿ ಹೇಳುತ್ತಿದ್ದ ಆ ಶಂಕ್ರನಿಗೂ ನೀನು ಆಗ ಎಲ್ಲಿದ್ದೀಯೆಂದು ತಿಳಿದಿರಲಿಲ್ಲ.. ಹಾಗಾಗಿ ನಿನಗೆ ಸುದ್ದಿ ಕೊಡಲೂ ಆಗಲಿಲ್ಲ’

‘ತಪ್ಪು ನನ್ನದೇ.. ಮೊದಲಿನಿಂದಲೂ ನಾನೇ ತಾನೇ ತಪ್ಪು ಮಾಡುತ್ತಿದ್ದುದು…  ನಿಮ್ಮೆಲ್ಲರ ಸಂಪರ್ಕದಲ್ಲಿ ಇದ್ದಿದ್ದರೆ ಹೀಗಾಗುತ್ತಿತ್ತೇ’ ಅಳುತ್ತಲೇ ಹೇಳಿದ ಅನಂತ.

‘ಇರಲಿ ಬಿಡು ಆದದ್ದು ಆಯಿತು. ಏನು ನಿನ್ನ ಕಥೆ.. ಏನು ಮುಂದಿನ ಯೋಜನೆ..’

‘ನಾನು ಇನ್ನು ಮುಂದೆ ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇದ್ದು ಬಿಡುತ್ತೇನೆ. ನಿಮ್ಮ ಜೊತೆಯಲ್ಲಿಯೇ’ ಅದೂ ನೀವಿಬ್ಬರೂ ಒಪ್ಪಿದರೆ ಮಾತ್ರ…’ ಮಾತಿನಲ್ಲಿ ನೋವು ಹೊರಹೊಮ್ಮುತ್ತಿತ್ತು.

‘ಅಲ್ಲ ನಿನ್ನ ಹೆಂಡತಿ ಮಕ್ಕಳು…’ ಕೇಳಬೇಕೋ ಬೇಡವೋ ಎನ್ನುವ ಸಂಶಯದಲ್ಲಿಯೇ ಆದಿ ತಡೆ ತಡೆದು ಕೇಳಿದ್ದ.

‘ಅದೆಲ್ಲ ದೊಡ್ಡ ಕಥೆ ಮಾರಾಯಾ.. ಈಗ ಹೇಳಿ ಕೊಳ್ಳಲು ನಾಚಿಕೆ ಆಗುವುದೂ ಇಲ್ಲ ನನಗೆ. ನೋವೂ ಇಲ್ಲ. ಎಲ್ಲ ಹೇಳುತ್ತೇನೆ. ಈಗ ಯಾವುದಕ್ಕೂ ಸ್ವಲ್ಪ ಹೊಟ್ಟೆಗೆ ಏನಾದರೂ ಹಾಕಿಕೋಬೇಕು’ ಆದಿ ಕೂಡಲೇ ಅಡಿಗೆಯ ಅಮ್ಮನಿಗೆ ಕೂಗು ಹಾಕಿದ.

‘ಏನಿದೆ ತಿನ್ನಲು..”

‘ದೋಸೆ ಹಿಟ್ಟಿದೆ. ಮಾಡಿ ಕೊಡಲಾ..’

‘ಖಂಡಿತ..’ ಆದಿಗಿಂತ ಮೊದಲೇ ಅನಂತ ಉತ್ತರಿಸಿದ್ದ.

ಮೂವರಿಗೂ ತಟ್ಟೆ ಹಾಕಿ ಕೂಡ್ರಿಸಿದ ಆಕೆ ಹುಯ್ದು ಕೊಡುತ್ತಿದ್ದ ದೋಸೆಯನ್ನು ಮೆಲ್ಲುತ್ತಿದ್ದಂತೆಯೇ ಅನಂತ ತನ್ನ ಕಥೆ ಹೇಳಲು ತೊಡಗಿದ.

ಅಮೆರಿಕದಲ್ಲಿ ಕಲಿಯಲು ಹೋದ ನಾನು ಅಲ್ಲಿಯೇ ಕೆಲಸಕ್ಕೆ ಸೇರಿದ್ದೂ ಹೌದು. ಒಳ್ಳೆಯ ಗ್ರೇಡಿನಲ್ಲಿ ಪಾಸು ಮಾಡಿದ್ದರಿಂದ ಕೂಡಲೇ ಕೆಲಸ ಸಿಗುವುದೂ ಕಷ್ಟವಾಗಲಿಲ್ಲ. ಒಳ್ಳೆಯ ಸಂಬಳ ಬೇರೆ. ಅಲ್ಲಿಗೆ ಹೋದವನೇ ನಾನು ಮಾಡಿದ ದೊಡ್ಡ ತಪ್ಪು ನನ್ನ ಮನೆಯವರ ಸಂಪರ್ಕ ಕಡಿದುಕೊಂಡದ್ದು. ನನಗೆ ಏನು ಶನಿ ತಗುಲಿತ್ತೋ ಏನೋ. ಇಂಡಿಯಾದವರು, ಅದೂ ಊರಿನವರು ಯಾರಾದರೂ ಅಲ್ಲಿ ಸಿಕ್ಕರೆ ಅವರೊಂದಿಗೆ ನನ್ನ ಕುಟುಂಬದ ಬಗ್ಗೆ ಹೇಳುತ್ತಲೇ ಇರಲಿಲ್ಲ. ಯಾರಾದರೂ ಒತ್ತಾಯ ಮಾಡಿ ಕೇಳಿದರೆ ಏನೋ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಎಲ್ಲಿಯವರೆಗೆಂದರೆ ಅಂತ್ಯ ಯಕ್ಷಗಾನ ತಂಡದೊ೦ದಿಗೆ ಬಂದಾಗಲೂ ನಾನು ಅವನನ್ನು ನೋಡಲು ಬರಲೇ ಇಲ್ಲ. ಅಲ್ಲಿದ್ದ ನಮ್ಮ ಊರಿನ ಸುತ್ತ ಮುತ್ತಿನ ಊರಿನವರೇ ತುಂಬಾ ಮಂದಿ ಹೋದಾಗಲೂ ನಾನು ಒಲ್ಲೆ ಎಂದಿದ್ದೆ. ಅಷ್ಟೇ ಅಲ್ಲ.

ಅಂತ್ಯ ನನ್ನ ತಮ್ಮ ಎನ್ನುವುದನ್ನೂ ಅವರಿಗೆ ಹೇಳಲಿಲ್ಲ. ಕಾರ್ಯಕ್ರಮ ನೋಡಿಕೊಂಡು ಬಂದ ಅವರಲ್ಲೇ ಕೆಲವರು ಹೇಗೋ ವಿಷಯ ತಿಳಿದುಕೊಂಡು ಬಂದವರು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗಲೂ ನಾನು ಬದಲಾಗಲಿಲ್ಲ. ಅದಕ್ಕಿಂತ ಹೆಚ್ಚಿನದೇನೂ ಮಾಡಲು ಅವರೂ ರೆಡಿಯಿರಲಿಲ್ಲ ಯಾಕೆಂದರೆ ಆಗಲೇ ಅವರೆಲ್ಲರಿಗಿಂತ ಎರಡರಷ್ಟು ಸಂಬಳ ಬರುವ ಕೆಲಸದಲ್ಲಿ ಇದ್ದೆನಲ್ಲ ನಾನು. ಅದೆಲ್ಲ ಹಾಗೆ ನಡೆಯುತ್ತಿರುವಾಗಲೇ ನನಗೆ ಗಂಟು ಬಿತ್ತು ನೋಡಿ ಒಂದು ಪಿಶಾಚಿ. ಅದೊಂದು ಪಿಶಾಚಿಯೇ. ಹಾಗೆಂದು ಹೇಳದೆ ಬೇರೆ ದಾರಿಯೇ ಇಲ್ಲ. ನನ್ನ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು.

ಒಂದಷ್ಟು ದಿನ ನನ್ನ ಪೀಯೇ ಆಗಿಯೂ ಇದ್ದವಳು. ಪೀಯೇ ಆಗಿದ್ದಷ್ಟು ದಿನವೂ ಏನೂ ತೋರಿಸಿಕೊಳ್ಳದವಳು ಬೇರೆ ವಿಭಾಗಕ್ಕೆ ಹೋದದ್ದೇ ನನ್ನ ಮೇಲೆ ಪ್ರೀತಿ ತೋರಿಸಲು ಪ್ರಾರಂಭಿಸಿದ್ದಳು. ದಿನಕ್ಕೊಂದು ಬಾರಿಯಾದರೂ ಏನಾದರೂ ನೆವ ಹೇಳಿಕೊಂಡು ನನ್ನ ಛೇಂಬರಿಗೆ ಬರುತ್ತಿದ್ದಳು. ಮೊದ ಮೊದಲು ನಾನೂ ಅವಳ ಆ ತೆರನ ನಡತೆಯನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ..

। ಇನ್ನು ನಾಳೆಗೆ ।

‍ಲೇಖಕರು Admin

July 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: