ದುರಿತ ಕಾಲದಲ್ಲಿ ದುರಿತ ಕಾಲವನ್ನೆ ಮಾತಾಡುತ್ತದೆ ಒಂದು ’ಕಾನೂನಾತ್ಮಕ ಕೊಲೆ’
ಎನ್. ರವಿಕುಮಾರ್ ಟೆಲೆಕ್ಸ್
ತಾನು ಸುಭಿಕ್ಷ ಆಡಳಿತ ನೀಡುವುದಾಗಿ ಕಾಡಿನ ಪ್ರಾಣಿಗಳಿಗೆ ಭರವಸೆ ನೀಡಿ ಅವುಗಳನ್ನು ಒಲಿಸಿಕೊಂಡು ಸಿಂಹದ ವಿರುದ್ದ ಚುನಾವಣೆಯಲ್ಲಿ ಗೆದ್ದು ರಾಜನಾಗುವ ತೋಳ ರಾತ್ರಿ ವೇಳೆ ವೇಷ ಮರೆಸಿಕೊಂಡು ಪ್ರಾಣಿಗಳನ್ನು ತಿನ್ನಲಾರಂಭಿಸುತ್ತದೆ. ಇದು ಗೊತ್ತಿಲ್ಲದ ಮರಿಗಳನ್ನು ಕಳೆದುಕೊಂಡ ಪ್ರಾಣಿಗಳು ಕಾಡಿನ ದೊರೆ ತೋಳದ ಬಳಿಯೇ ಬಂದು ಅಹವಾಲು ಸಲ್ಲಿಸುತ್ತವೆ….. ಒಂದು ಕಾನೂನಾತ್ಮಕ ಕೊಲೆ ಹೆಸರಿನ ನಾಟಕದ ಈ ರೂಪಕ ಭಾರತದ ವರ್ತಮಾನದ ಆಡಳಿತಕ್ಕೆ ಕನ್ನಡಿಯಂತೆ ಕಂಡರೆ ಉತ್ಫೇಕ್ಷೆಯಲ್ಲ.
ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಮಾನವಸಂಪನ್ಮೂಲ ಅಂದರೆ ಜನರೇ ದೊಡ್ಡ ಅಡಚಣೆ ಎಂದು ಭಾವಿಸುವ ಸರ್ಕಾರ ತನ್ನ ರಾಜ್ಯದ ಜನರು ತಮ್ಮ ಜೀವಿತ ಅವಧಿಯೊಳಗೆ ಒಮ್ಮೆ ಒಬ್ಬನನ್ನು ಕೊಲ್ಲುವ ಅವಕಾಶ ನೀಡುವ ಕಾಯ್ದೆಯನ್ನು ಜಾರಿಗೊಳಿಸುತ್ತದೆ. ಕೊಲೆ ಅನುಮತಿ ನೀಡಲು ಸಕ್ಷಮ ಪ್ರಾಧಿಕಾರವೊಂದನ್ನೆ ತೆರೆಯಲಾಗುತ್ತದೆ. ಕೊಲೆ ಮಾಡಲು ಬಯಸುವವರು ಈ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ತಾನು ಕೊಲೆ ಮಾಡುವ ವ್ಯಕ್ತಿಯ ವಿವರಗಳನ್ನು ಮತ್ತು ಕಾರಣಗಳನ್ನು ನೀಡಬೇಕು. ಪ್ರಾಧಿಕಾರ ಈ ವಿಷಯವನ್ನು ಕೊಲೆಯಾಗುವ ವ್ಯಕ್ತಿಗೂ ತಿಳಿಸುತ್ತದೆ. ಕೊಲೆ ಎಲ್ಲಿ , ಯಾವಾಗ ಮಾಡಬೇಕು ಎಂಬ ರೂಪುರೇಶೆಗಳನ್ನು ಪ್ರಾಧಿಕಾರದ ಅಧಿಕಾರಿಯೇ ನಿರ್ಧರಿಸುತ್ತಾನೆ. ಈ ಕಾಯ್ದೆ ಪ್ರಕಾರ ಒಬ್ಬ ವ್ಯಕ್ತಿ ಒಂದು ಬಾರಿ ಯಾರನ್ನಾಬೇಕಾದರೂ ಕೊಲೆ ಮಾಡಿದರೆ ಅದಕ್ಕೆ ಶಿಕ್ಷೆ ಇಲ್ಲ. ಆದರೆ ಈ ಕಾಯ್ದೆಯಿಂದ ಸರ್ಕಾರದ ಸಚಿವರು, ಶಾಸಕರು ಮತ್ತು ಅಧಿಕಾರಿಗಳನ್ನು ಹೊರಗಿಡಲಾಗಿರುತ್ತದೆ.
ರಾಜ್ಯದ ವಯಸ್ಕ ವ್ಯಕ್ತಿಗಳಿಗೆ ನೊಟೀಸ್ ನೀಡುವ ಮೂಲಕ ಕೊಲೆ ಮಾಡುವ ’ಒಂದು ಕಾನೂನಾತ್ಮಕ ಕೊಲೆ ಕಾಯ್ದೆ’ ಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸರ್ಕಾರವೇ ತಿಳಿಸುತ್ತದೆ. ಇದನ್ನು ಸದಾವಕಾಶವೆಂದುಕೊಂಡ ಜನರು ಎಂತೆಂಥ ಕಾರಣಗಳನ್ನು ಮುಂದಿಟ್ಟು ಕೊಲೆಗೆ ಅನುಮತಿ ಕೋರಿ ಸರ್ಕಾರದ ಕೊಲೆ ಪ್ರಾಧಿಕಾರಕ್ಕೆ ಅರ್ಜಿಗಳ ರಾಶಿಯೊಂದಿಗೆ ಬಂದು ನಿಲ್ಲುತ್ತಾರೆ… ಈ ಕಾಯ್ದೆಯಡಿ ಯಾರೆನ್ನೆಲ್ಲಾ ಯಾಕಾಗಿ ಕೊಲೆ ಮಾಡಲು ಬಯಸುತ್ತಾರೆ? ಈ ಕಾಯ್ದೆಯನ್ನು ವಿರೋಧಿಸುವ ಪ್ರಜ್ಞಾವಂತ ಸಾಮಾನ್ಯ ವ್ಯಕ್ತಿಯೊಬ್ಬ ಅಂತಿಮವಾಗಿ ಸರ್ಕಾರಕ್ಕೆ ಮೂಡಿಸುವ ಅರಿವಾದರೂ ಏನು? ಎಂಬುದನ್ನು ಸರ್ಕಾರಗಳನ್ನು ಆರಿಸುವ ಹಕ್ಕುಳ್ಳವರಾದ ಜನರು ಅರ್ಥ ಮಾಡಿಕೊಳ್ಳಲು ’ಒಂದು ಕಾನೂನಾತ್ಮಕ ಕೊಲೆ’ ನಾಟಕವನ್ನು ನೋಡಬೇಕು.
ಶಿವಮೊಗ್ಗದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ’ಒಂದು ಕಾನೂನಾತ್ಮಕ ಕೊಲೆ ’ ನಾಟಕ ರಾಜಕೀಯವಾಗಿ, ಸಾಮಾಜಿಕವಾಗಿ ಅತ್ಯಂತ ತಲ್ಲಣಗಳನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ಎದೆಗಾರಿಕೆಯ ರಚನೆ ಮತ್ತು ಪ್ರದರ್ಶನ ಎನ್ನಬಹುದು. ’ದೇವರು ಅರೆಸ್ಟ್ ಆದ’ , ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಮಹತ್ವದ ಕಥಾಸಂಕಲನಗಳನ್ನು ಕೊಟ್ಟ ಕತೆಗಾರ, ಅಂಕಣಕಾರ, ಇಂಗ್ಲೀಸ್ ಉಪನ್ಯಾಸಕ ,ಅನುವಾದಕ ಸೃಜನಶೀಲ ಬರಹಗಳಿಂದ ಗುರುತಿಸಲ್ಪಡುತ್ತಿರುವ ಮಾವಲಿ ಶಿವಕುಮಾರ್ ರಚಿಸಿದ ’ಒಂದು ಕಾನೂನಾತ್ಮಕ ಕೊಲೆ’ ಇತ್ತೀಚೆಗಿನ ವಿಡಂಬನಾತ್ಮಕ ನಾಟಕಗಳ ಸಾಲಿನಲ್ಲಿ ಮಹತ್ವದ್ದು ಎನಿಸುತ್ತದೆ. ಹಾಗೆಂದ ಮಾತ್ರಕ್ಕೆ ಇದೊಂದು ಕೇವಲ ವಿಡಂಬನಾತ್ಮಕ ನಾಟಕ ಎನ್ನಲಾಗದು, ನಮ್ಮನ್ನಾಳುವವರ ಅಧಿಕಾರ ರಾಜಕಾರಣದ ಹುನ್ನಾರಗಳ ಮನೋರೋಗವನು, ಅದೇ ಕಾಲಕ್ಕೆ ಸಮಾಜದ ಜನರು ಹೊಂದಿರಬಹುದಾದ ಮನಃಸ್ಥಿತಿಯನ್ನು ವ್ಯಕ್ತಪಡಿಸುವ ’ಸೋಷಿಯೋ-ಪೊಲಿಟಿಕಲ್ ಕಮ್ ಸೈಕಲಾಜಿಕಲ್ ಥ್ರಿಲ್ಲರ್’ ನಾಟಕ ಎಂದು ಕರೆದಿರುವ ಕೃತಿಕಾರರ ಮಾತು ನಿಜವೆನಿಸುತ್ತದೆ.
ಈ ನೆಲದಲ್ಲಿ ಬುದ್ದ ,ಬಸವಣ್ಣ , ಅಂಬೇಡ್ಕರ್‌ರಂತಹ ದಾರ್ಶನಿಕರೂ ಪ್ರತಿಪಾದಿಸಿದ ಜನಕಲ್ಯಾಣದ ರುಜುಮಾರ್ಗವನ್ನು ರಾಜಕೀಯ ಹೇಗೆಲ್ಲಾ ನೈಪಥ್ಯಕ್ಕೆ ದೂಡಿ ಕಲ್ಯಾಣ ರಾಜ್ಯದ ಹೆಸರಿನಲ್ಲಿ ಜನರನ್ನು ಬೇಟೆಯಾಡಲಾಗುತ್ತಿದೆ ಎಂಬುದಕ್ಕೆ ಕಳೆದ ೧೦ ವರ್ಷಗಳ ದೇಶದ ಆಡಳಿತದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ತನ್ನದೇ ಸರ್ಕಾರವನ್ನು ವಿಮರ್ಶಿಸುವ ಕವಿಯೂ , ಪತ್ರಕರ್ತನೂ, ಕಾಮಿಡಿಯನ್‌ನನ್ನು ಜೈಲಿಗೆ ನೂಕುವ ಪರಿಸ್ಥಿತಿ ಕಣ್ಣೆದುರಿಗೆ ಕಾಣುತ್ತಿದೆ. ಧರ್ಮ,ಜಾತಿ ಹೆಸರಿನಲ್ಲಿ ನಡೆಯುವ ಗುಂಪು ಹತ್ಯೆ, ನೈತಿಕ ಪೊಲೀಸ್‌ಗಿರಿಯಂತಹ ಪ್ರಭುತ್ವ ಪ್ರಾಯೋಜಿತ ದೌರ್ಜನ್ಯಗಳನ್ನು ಸಮರ್ಥಿಸಿಕೊಳ್ಳುವುದೂ ಮತ್ತು ಹುಸಿ ರಾಷ್ಟ್ರೀಯವಾದ ಮತ್ತು ದೇಶಭಕ್ತಿಯ ನೆಪದಲ್ಲಿ ಮನುಷ್ಯ ಮನುಷ್ಯರನ್ನೆ ಬೇಟೆಯಾಡುವ ಹಿಂಸಾ ಮನೋಧರ್ಮವನ್ನು ಸಲೀಸಾಗಿ ನೆಲೆಗೊಳಿಸುತ್ತಿರುವುದನ್ನು ನೋಡಿದಾಗ ’ಒಂದು ಕಾನೂನಾತ್ಮಕ ಕೊಲೆ’ ಅದರ ಪ್ರತಿರೂಪದಂತೆ ಕಾಣುತ್ತಿದೆ. ಪ್ರಶ್ನಿಸುವುದನ್ನು ದೇಶದ್ರೋಹದ ಪರಿಮಿತಿಗೆ ತಂದು ನಿಲ್ಲಿಸಲಾಗಿದೆ.
ದೇಶವೆಂದರೆ ಇಲ್ಲಿ ವಾಸಿಸುವ ಜನರು, ಅಭಿವೃದ್ದಿ ಎಂದರೆ ಆರಂಭಕ್ಕೂ ಅಂತಿಮಕ್ಕೂ ಜನರ ಕಲ್ಯಾಣವೇ ಆಗಿರುತ್ತದೆ ಎಂಬ ಪ್ರಜಾಪ್ರಭುತ್ವದ ಧ್ಯೇಯವನ್ನು ಅಪವ್ಯಾಖ್ಯಾನಗೊಳಿಸುವ ರಾಜಕೀಯ ಶಕ್ತಿಗಳು ’ಕಲ್ಯಾಣರಾಜ್ಯ’ (ವೆಲ್ಫೇರ್ ಸ್ಟೇಟ್) ನಿರ‍್ಮಾಣದ ಹೆಸರಿನಲ್ಲಿ ಕೊಂದು ಬದುಕುವ ಕಾಡಿನ ನ್ಯಾಯವನ್ನು ನೆಲೆಗೊಳಿಸಲು ಹವಣಿಸುತ್ತಲೆ ಇರುತ್ತವೆ. ಇಂತಹ ಸರ್ಕಾರಗಳಿಗೆ ’ಕೊಂದವರುಳಿದರೆ ಕೂಡಲ ಸಂಗಮದೇವ..’ ಎಂಬ ಬಸವಾದಿ ಶರಣರ ಅರಿವಿನ ಪ್ರಜ್ಞೆಯನ್ನು ನೆನಪಿಸುವ ಸಾತ್ವಿಕ ಚಳವಳಿಗಳು ರೂಪುಗೊಳ್ಳಬೇಕು. ಇಂತಹ ಎಚ್ಚರವನ್ನು ಬಿತ್ತುವ ಪ್ರಯತ್ನವನ್ನು ’ಒಂದು ಕಾನೂನಾತ್ಮಕ ಕೊಲೆ’ ನಾಟಕ ಕಟ್ಟಿಕೊಟ್ಟಿದೆ.
ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರಧಾರಿ ಡಾ. ಸತೀಶ್ ಸಾಸ್ವೆಹಳ್ಳಿ ವರ್ತಮಾನದ ಅಧಿಕಾರಸ್ಥ ಪ್ರಭಾವಿ ರಾಜಕಾರಣಿಗೆ ಹೋಲಿಕೆಯಾಗಿ ಕಂಡರೆ ಅದು ರಂಗ ವಿನ್ಯಾಸಕ-ನಿರ್ದೇಶಕ ಹೊಂಗಿರಣಚಂದ್ರು ಅವರ ತಪ್ಪಲ್ಲ. ಪ್ರತಿಭಾನ್ವಿತ ನಟ, ನಿರ್ದೇಶಕನಾಗಿರುವ ಹೊಂಗಿರಣಚಂದ್ರು ’ಒಂದು ಕಾನೂನಾತ್ಮಕ ಕೊಲೆ’ ನಾಟಕವನ್ನು ರಂಗದಮೇಲೆ ಸಮರ್ಥವಾಗಿ ನಿರೂಪಿಸುವಲ್ಲಿ ಕೃತಿಗೆ ನ್ಯಾಯ ಒದಗಿಸಿದ್ದಾರೆ. ಡಾ. ನಾಗಭೂಷಣ್, ಸುಧೀಂದ್ರರಾವ್, ಮಧುರ ಬಿ.ಎಸ್, ಯುವ ಪ್ರತಿಭೆಗಳಾದ ನಿಖಿಲ್ ಆರ್ಯನ್, ಗಣೇಶ್ ಸಹ್ಯಾದ್ರಿ, ತೇಜಶ್ರೀ ಇತರ ನಟರು , ನೈಪಥ್ಯದಲ್ಲಿ ದುಡಿದ ಹರಿಗೆ ಗೋಪಾಲಸ್ವಾಮಿ(ಬೆಳಕು),ವಿದ್ವಾನ್ ನೌಷಾದ್ ಹರ್ಲಾಪುರ (ಗಾಯನ), ವಿಠಲ್ ರಂಗಧೋಳ್ ( ಸಂಗೀತ)… ರಂಗ ಮೆರಗು ನೀಡಿದೆ.
ರಂಗ ಚಟುವಟಿಕೆಗಳಿಗೆ ಒಂದರ್ಥದಲ್ಲಿ ಶಿವಮೊಗ್ಗ ಹದವಾದ ನೆಲವೆಂದೇ ಹೇಳಬಹುದು. ಕಳೆದ 27 ವರ್ಷಗಳಿಂದ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಶಿವಮೊಗ್ಗದ ’ಹೊಂಗಿರಣ’ ಹವ್ಯಾಸಿ ರಂಗ ತಂಡ ಸೃಜನಶೀಲ, ವಿಚಾರ ಪ್ರಚೋದನಾ ನಾಟಕಗಳ ಮೂಲಕ ಸಾಂಸ್ಕೃತಿಕ ವೈಚಾರಿಕತೆಯನ್ನು ಬಿತ್ತುತ್ತಾ ಬಂದಿದೆ. ಮದಗದ ಕೆಂಚವ್ವ, ಏಸೂರುಕೊಟ್ಟರೂ ಈಸೂರು ಕೊಡೆವು, ಯುದ್ಧ್ ಕೀ ಬಾದ್, ಕೃಷ್ಣೇಗೌಡರ ಆನೆ, ಯಹೂದಿ ಹುಡುಗಿ, ಪುಣ್ಯಕೋಟಿಯಂತಹ ಶ್ರೇಷ್ಠ ನಾಟಕಗಳು ಸೇರಿದಂತೆ ೪೩ಕ್ಕೂ ಹೆಚ್ಚು ನಾಟಕಗಳನ್ನು ಕೊಟ್ಟಿದೆ. ಇದಕ್ಕಾಗಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದು ರಂಗತಂಡದ ಹೆಗ್ಗಳಿಕೆ.
ಹೊಂಗಿರಣ ತಂಡದ ಒಂದು ಕಾನೂನಾತ್ಮಕ ಕೊಲೆ ವರ್ತಮಾನಕ್ಕೊಂದು ಕನ್ನಡಿ . ಪ್ರತಿಯೊಬ್ಬರು ಈ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಬೇಕು.
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಾನು ಈ ನಾಟಕವನ್ನು ನೋಡಿದ್ದೇನೆ. ಇಡೀ ನಾಟಕದ ಭಾಷೆಗೆ ಒಂದು ಒಳಿತಿನ ಆತ್ಮವಿದೆ. ಆರಂಭದಿಂದ ಅಂತ್ಯದವರೆಗೂ ಎಲ್ಲಿಯೂ ಮುಂದೇನೆಂಬ ಕುತೂಹಲ ಅರಳುತ್ತಲೇ ಹೋಗುವ ದೃಶ್ಯಗಳು ಪ್ರಾಬಲ್ಯ, ದೌರ್ಬಲ್ಯ ಗಳ ಘರ್ಷಣೆಯನ್ನು ಕಾಣಿಸುತ್ತಲೆ ಕೇಡುಗಳಾಚೆಗಿನ ಎತ್ತರಕ್ಕೆ ನಾಂದಿಯಾಗುತ್ತವೆ. ಬಹಳವೇ ಅರಿವಿನ ಹುಡುಕಾಟಗಳಿಗೆ ಜಾಡು ತೋರುವ ಒಳ್ಳೆಯ ನಾಟಕ. ಕೊಂದವರು ಉಳಿಯಲ್ಲ. ಕಡೆಯ ಭಾಗವಂತೂ ತುಂಬಾ ವಿಶೇಷ.