ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರೋ ಹಚ್ಚಿಟ್ಟ ಅಗ್ನಿಕುಂಡ

ನಟರಾಜು ಮಲ್ಲಸಿಂಗನಹಳ್ಳಿ

ಹುಟ್ಟಿ, ಬೆತ್ತಲೆ ತೊಡೆದು
ಬಟ್ಟೆ ತೊಟ್ಟಿತು ದೇಹ;
ಕಾಲ ಸಂದಂತೆ
ಹಸಿವ ಕಲಿಯಿತು ಚರ್ಮ
ಹದಗೊಂಡ ತನು
ಮುದಗೊಳ್ಳ ಬಯಸಿತು
ಬರಡಾದ ಭೂಮಿ ಎದೆತೆರೆದು
ಮಳೆಯ ಕಾದಂತೆ

ಹಸಿ ಕತ್ತಲೆಯ ಕೂಡಿ
ತುಸು ಹೈರಾಣಾದ ಗಾಳಿ
ಲಾಟೀನು ಗಾಜಿನಂತಾ ರೂಮು 
ಕಮಟು ವಾಸನೆ
ನುಣ್ಣಗೆ ಮೆತ್ತಿಕೊಂಡ ಬೆಳಕು
ಮೈಗೆ ಎಣ್ಣೆ ಹಚ್ಚಿದಂತೆ.
ಬತ್ತಿಯ ತುದಿಗೆ ಕುಣಿವ ಸೊಡರು
ಹಸುಗೂಸು ಅತಿಸುಖದಿ ಕೈಯ ಜಾಡಿಸಿದಂತೆ


ಕದ್ದು ನೋಡುವ ಕಣ್ಣು
ಸಣ್ಣ ಛಳಿ ಎದೆಯಲ್ಲಿ
ಬಳಿಯಲ್ಲೇ ಯಾರೋ ಹಚ್ಚಿಟ್ಟ 
ಅಗ್ನಿಕುಂಡ
ಉಸಿರು ಬಿಟ್ಟಾಗೊಮ್ಮೆ 
ನಿಗಿನಿಗಿ ಹೊಳೆವ ಕೆಂಡ
ತೋರು ಬೆಚ್ಚಗಿನ ಬೆವರು
(ತಣ್ಣೀರಲಿ ಮಿಂದು ಝಳಝಳ)

ಉಟ್ಟಲ್ಲಿಂದ ಕಟ್ಟಿಡುವನಕ
ಬೆಚ್ಚಗಿಡುವ ಅರಿವೆ:
ತೊಳೆವಾಗ ತೋರಿದ್ದು 
ಬೆತ್ತಲೆಯ ವಿಶ್ವರೂಪ
ಹಾವಂತೆ ಹರಿವ ನೊರೆ
ಕಳಚಿ ಕೊಳೆಯ ಪೊರೆ
ನಿರಾಳ ಬಿಸಿಲಿಗೆ ಹರವಿಕೊಂಡು
ಚುರುಕು ಝಳಕೆ
ಮೈಯ ಮಾರಿಕೊಂಡು
ಗರಿಗರಿ
ರೆಕ್ಕೆ 
ಮೂಡಿ
ಮನಕೆ
ತಾಕಿತೊಂದು ಕಿರುನಗೆ
ಅರಳಿಸಿ ನೂರು ಮಲ್ಲಿಗೆ 
ಒಮ್ಮೆಗೆ

ಮತ್ತೆ ಕೂಡಿ ಬಂತು 
ಋತು
ಹೊಸ ಬಯಕೆ
ಹವಣಿಕೆ
ಸಾಲು ಸಾಲು…

‍ಲೇಖಕರು Avadhi

30 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading