ಯಾಕೊಳ್ಳಿ ಯ ಮಾ ಓದಿದ- ಇರುವುದು ಒಂದೇ ರೊಟ್ಟಿ…

ಒಂದು ರೊಟ್ಟಿಯ ಧ್ಯಾನ…

ಯಾಕೊಳ್ಳಿ ಯ ಮಾ

ಕಿತ್ತೋದ ಉಂಗುಟಕೆ
ಬಾಳೆಯ ಬಚ್ಚಿಯನು ಜೋಡಿಸಿ
ಆ ಈ‌ ಹೊಲಗಳನು ಆನೆಗಾಲಲಿ ಅಲೆದು
ಹೆಕ್ಕಿದ ಸೇಂಗಾ ಬುಡ್ಡಿಯನು
ಅವರಿವರಿಗೆ ಹಂಚುತ್ತಲೆ ಮನೆ‌ ಮುಟ್ಟುವ ಅಪ್ಪ
ಉರಿವ ಎದೆಯ ಒಲೆಯ ಮೇಲೆ
ಕನಸುಗಳ ರೊಟ್ಟಿ ಸುಟ್ಟು
ಕರುಳ ಕುಡಿಗಳನು
ಸಲಹುತ್ತ ನಗುನಗುತ್ತಲೇ ಬಾಳುವ ಅವ್ವ
ಯಾವ ದೇವರುಗಳಿಗೂ ಕಮ್ಮಿ‌ಇಲ್ಲ

ಇವು  ಡಾ. ಸದಾಶಿವ ದೊಡಮನಿಯವರ ‘ಇರುವುದು ಒಂದೇ ರೊಟ್ಟಿ’ ಸಂಕಲನದ ಸಾಲುಗಳು. ಈಚೆಗೆ ಬಿಡುಗಡೆಯ ಭಾಗ್ಯ‌ ಕಂಡಿರುವ ಡಾ. ಸದಾಶಿವ ದೊಡಮನಿಯವರ ಅವರ ಎರಡನೆಯ ಕವನ ಸಂಕಲನ ವಿದು. ಈಗಾಗಲೇ ‘ಧರೆ ಹತ್ತಿ ಉರಿದೊಡೆ’ (ಸಂಯುಕ್ತ ಕವನ ಸಂಕಲನ), ‘ನೆರಳಿಗೂ ಮೈಲಿಗೆ’ (ಸ್ವತಂತ್ರ ಕವನ ಸಂಕಲನ)ಗಳ ಮೂಲಕ, ವಿಮರ್ಶೆ, ಸಂಶೋಧನ ಗ್ರಂಥಗಳ ಮೂಲಕ ಕನ್ನಡ ಸಾರಸ್ವತ ಲೋಕದ ಗಮನ ಸೆಳೆದಿರುವ ಡಾ ದೊಡಮನಿಯವರು ಈಗಾಗಲೇ ಕವಿಯಾಗಿ ತೋರಿಸಿಕೊಂಡಿದ್ದಾರೆ. ಬಡತನದ ಒಳ ಹೊರಗುಗಳನ್ನೆಲ್ಲ ಉಂಡುಟ್ಟು , ಹಸಿವು ಎಂಬುದನು ಹಿಡಿದು ಅಪ್ಪಿ ಅದರೊಳಗಡೆಯೇ ಬಾಳಿದ ಜೀವ, ಅದರ ನಡುವೆ ಸುಡುವಗ್ನಿಯಿಂದೆದ್ದು ಅರಳಿ ನಿಂತ ಗೆಳೆಯ ಸದಾಶಿವ. ಹಾಗಾಗಿಯೇ ಸದಾಶಿವರ ಕವಿತೆಗಳು ಬಡತನವುಂಡ ಒಂದು ರೊಟ್ಟಿಯ‌ ಮಹತ್ವವಿದ್ದ ನಮ್ಮೆಲ್ಲರ ಎದೆಯ ಪದಗಳಾಗುತ್ತವೆ. ಓಹ್ ಇದು ನನ್ನದೇ ಹಾಡು ಎಂದು ಎದೆ ತಟ್ಟುವ಼ಂತೆ‌ ಮಾಡುತ್ತವೆ.

‘ಇರುವುದು ಒಂದೆ ರೊಟ್ಟಿ’  ಕವನ ಸಂಕಲನ ೨೦೨೧ ರಲ್ಲಿ ಚಂದ್ರಭಾಗಾ ಪ್ರಕಾಶನದಿಂದ ಹೊರ ಬಂದಿದೆ. ಕವಿ ಡಾ. ಸದಾಶಿವ ದೊಡಮನಿಯವರ ದಶಕಗಳ ನೋವು- ಭಾವಗಳನ್ನು ಒಡಲೊಳಗಿರಿಸಿಕೊಂಡು ನಿಂತಿದೆ. ಮೊದಲ ಎರಡು‌ ಕವಿತೆಗಳು ಅವ್ವ, ಅಪ್ಪನ ಕುರಿತವುಗಳಾಗಿವೆ. ಈ ಕವಿತೆಗಳ ಅನೇಕ ಸಾಲುಗಳಲ್ಲಿ ಹೊಲ ಹೊಲ ಅಲೆಯುವ ಅಪ್ಪ, ಎದೆಯ ಒಲೆಯಲೆ ರೊಟ್ಟಿ ಸುಡುವ  ಅವ್ವ ಪ್ರತ್ಯಕ್ಷರಾಗುತ್ತಾರೆ. ಗೆಳೆಯ ಸದಾಶಿವ ಅವರು ಅವ್ವ, ಅಪ್ಪನ ನೆನಪಿನಿಂದ ಹೊರಬರಲಾರರು. ಅವರಂತೆ ಅಪ್ಪ, ಅವ್ವನ ದುಡಿಮೆಯಿಂದ ಬದುಕು ಕಟ್ಟಿಕೊಂಡ ಯಾರೂ ಹೊರಬರಲಾರರು. ಅವರೇ ನಮಗೆಲ್ಲ ಸ್ಪೂರ್ತಿ. ಜೀವಂತ ದೇವರುಗಳು. ಅಂತೆಯೇ ಕವಿ ತನ್ನ ಅವ್ವ, ಅಪ್ಪ ಯಾವ ದೇವರಿಗೂ ಕಮ್ಮಿಯಿಲ್ಲ ಎ಼ಂದು ಸಾರುತ್ತಾನೆ. ಮೊದಲ ಕವಿತೆಯಲ್ಲಿಯೇ ಕವಿ ಅವ್ವನನ್ನುಎರಡೆರಡೆ ಪದಗಳಲ್ಲಿ ಹಿಡಿದಿಡುತ್ತಾನೆ.

ಅವ್ವ
ಅಳುಕದ 
ಅಕ್ಷರ

ಕವಿತೆ ಎರಡರಲ್ಲಿ

ಅಪ್ಪ ಬಿತ್ತಿದ ಬೀಜ ಎಂದೂ ಹುಸಿ ಹೋಗಿಲ್ಲ ಎನ್ನುವ ಕವಿ ‘ಅವನ ಕೈಮ್ಯಾಲೆ ಅದೆಷ್ಟೋ ಭಾವಿ‌-ಕೆರೆ-ವಡ್ಡು-ಬಾಂದಾರಗಳು ಜೀವ ತೆರೆದುದನ್ನೂ’ ಚಿತ್ರಿಸುತ್ತಾನೆ. ಹೀಗೆ ಯಾರಿಗೂ ಕೇಡು ಬಗೆಯದ ಸದಾ ದುಡಿಮೆ ಮರೆಯದ ಅಪ್ಪ, ಅವ್ವ ಈ ಸಂಕಲನದುದ್ದಕ್ಕೂ ಕಾಣಸಿಗುತ್ತಾರೆ.

ರೊಟ್ಟಿಯ ಕನಸು ಹಸಿವಿನ ಅನುಭವವಿದ್ದವರಿಗೇ ಗೊತ್ತು. ಒಂದು ರೊಟ್ಟಿಯ ಮಹತ್ವ ಅದರ ಅಭಾವ ವಿದ್ದವರಿಗೇ ಅರಿವಿರುತ್ತದೆ. ಅಂತೆಯೇ ಈಚೆಗೆ ಕನಕಗಿರಿಯ ಕವಿ  ಅಲ್ಲಾಗಿರಿರಾಜ್ ‘ಸರಕಾರ ರೊಕ್ಕವನ್ನು‌ ಮುದ್ರಿಸಬಹುದು ರೊಟ್ಟಿಯನ್ನಲ್ಲ’ ಎಂದದ್ದು. ರೊಟ್ಟಿಗೆ ಬೇಕಾದುದನ್ನು‌ ಹೊಲ ಹೊಲ ತಿರುಗಿ ತರುವ ತಾಕತ್ತು ಇರುವದು  ಅಪ್ಪನಿಗೆ, ಅಪ್ಪ ತಂದುದನ್ನು ಹಿಟ್ಟಾಗಿಸಿ ರೊಟ್ಟಿಯಾಗಿ ತಟ್ಟಿ ಊರೆಲ್ಲರ ಹಸಿವು‌ ಕಳೆವ ಗುಣ ಇರೋದು ಅವ್ವನಿಗೆ ಮಾತ್ರ.

ಕವಿ ‘ಅವ್ವನ ಸಂಕಟ, ಅಪ್ಪನ ಶ್ರಮ ಕಾವ್ಯದ ನೆಲೆಗೆ ಬುನಾದಿಯಾಗಿವೆ’ ಎನ್ನುತ್ತಾರೆ. ಹಾಗಾಗಿಯೇ ಸದಾಶಿವರ ಕವಿತೆಗೆ ಪ್ರಾಮಾಣಿಕತೆ ಪ್ರಾಪ್ತವಾಗಿದೆ. ಮುನ್ನುಡಿ ಬರೆದ ಹಿರಿಯ‌ ಕವಿ  ಸುಬ್ಬು ಹೊಲೆಯಾರ್ ಅವರೇ ‘ಈ ಇರುವುದು ಒಂದೇ ರೊಟ್ಟಿ’ ನನ್ನೊಳಗೆ ಬರೆಯುವ ಶಕ್ತಿಯನ್ನು ಕೊಟ್ಟಿದೆ’ ಎಂದು ಮಾತಾಡಿರುವುದೇ ಡಾ. ಸದಾಶಿವ ಅವರ ಕವಿತೆಗಳಿಗೆ ಬಂದ ಪ್ರಶಸ್ತಿ. ಹಾಗಾಗಿಯೇ ಈ ಕವಿತೆ ಕನ್ನಡದ ಒಂದು ಚೈತನ್ಯದ‌ ದನಿಯಾಗಿಯೋ ಆಶಾಕಿರಣವಾಗಿಯೋ ನಮಗೆ ಕಾಣಿಸುತ್ತದೆ. ಕವಿತೆ ಹೊರಳಬೇಕಾದ ಸದ್ಯದ ದಾರಿಯಿದು ಎನಿಸುತ್ತದೆ. 

ಇಲ್ಲಿರುವ ಡಾ. ಸದಾಶಿವರವರ ೫೦ ಕವಿತೆಗಳು ಸರಳ ರಚನೆಗಳು. ಅವು ಎದೆಯಿಂದೆದೆಗೆ ಹರಿಯುವ ಭಾವದಲೆಗಳು. ಅಲ್ಲಿ ಕಾಠಿಣ್ಯವಿಲ್ಲ. ತನ್ನ ಎದೆಯ ಹಾಡನ್ನು‌ ನಮ್ಮೆದೆಗೆ ರವಾಣಿಸೋ ಹಂಬಲವಿದೆ. ‘ಮನಸುಗಳು‌ ಮಲಿನವಾಗಿವೆ ಗೆಳೆಯಾ’ ಎಂದು‌ ಹೇಳುವ ಕವಿ ನಮ್ಮ‌ ಮಾತು, ಮನಸು, ವಿಚಾರ, ಕಣ್ಣು ಎಲ್ಲ ಅಶುದ್ಧವಾದುದಕೆ ವಿಷಾಧಿಸುತ್ತಾರೆ. ಅವಗಳನ್ನು ಶುದ್ಧಗೊಳಿಸಲು ಹಂಬಲಿಸುತ್ತಾರೆ.

ಕುಡಿ ಬಿಟ್ಟ ಹಾಲ ಬಳ್ಳಿಯ ಎದೆಯ
ಕೆಲದಾರಿ ಹೋಕರು
ತುಳಿದು ಹೋದರು
ಇನ್ನೂ‌ ಕೆಲವರು
ಕೊರಳ ಕುಡಿಯ ಚಿವುಟಿ ಹೋದರು

ಇದಕ್ಕೆಲ್ಲ ಮದ್ದು ಯಾವುದು ಎಂದು ಹ಼ಂಬಲಿಸುತ್ತಾರೆ. 

ಇಲ್ಲಿ ಅಪ್ಪ, ಅವ್ವ  ಕವಿತೆಯ ಹಿಂದಿರುವ ಪ್ರೇರಣೆಯಾದಂತೆ ಮಗಳು ಮುಂದಿನ‌ ಪ್ರೇರಣೆಯಾಗಿದ್ದಾಳೆ. ಅಜ್ಜ ಕಥೆ ಹೇಳಿದರೆ ಮೊಮ್ಮಗಳು ಹೂಂ ಎನ್ನುತ್ತಾಳೆ. ಅವಳು‌ ಮನೆಗೆ ಬಂದಾಗಿನಿಂದ ಮನೆಯೇ ಕಳೆಗಟ್ಟಿದೆ ಮಗಳೇ ಎಂದು ಉತ್ಸಾಹ ತೋರುತ್ತಾನೆ. 

ಅವ್ವನ ಮುದ್ದು ಬಳ್ಳಿ
ಅಪ್ಪನ ಬದುಕ ಸಿರಿ

ಎಂದು ಸಂಭ್ರಮಿಸುತ್ತಾನೆ. ಮರೆಯಾದ‌ ತಮ್ಮನ‌ ನೆನಪಲ್ಲಿ ವ್ಯಸ್ತನಾದ ಕವಿ, ನೋವಿನಿಂದ ‘ನೀನಾಡಿದ ನೆಲದಲ್ಲಿ ನವಿಲಾಡತಾವೋ, ಕೋಗಿಲ ಗಿಳಿವಿಂಡುಗಳು ನಿನ್ನ ನೆನಪ ಹಾಡಿ ಕಿನ್ನುರಿ ನುಡಿಸತಾವೊ’ ಎಂದು ಮರುಗಿ, ‘ಎಲ್ಲಿ ಹುಡುಕಲಿ‌ ತಮ್ಮನೇ’ ಎಂದು ಹಂಬಲಿಸುತ್ತಾನೆ. ಜಗಕೆ ಹಿಡಿ ಪ್ರೀತಿ ಹಂಚುವ ಇರಾದೆ ಕವಿಯದು. ಅಂತೆಯೆ ಬುದ್ಧ ‘ಪ್ರೇಮ ಭಿಕ್ಷು’ವಾಗಿ ಕವಿಗೆ ಕಾಣಿಸುತ್ತಾನೆ.

‘ಅನ್ನ ದೊರೆಗಳೇ’ ಕವಿತೆ ರೈತರ ಸೋಲಿನ, ಸಾವಿನ, ಸಾಲದ ಸುಳಿಯ ಸಂಕಥನ. ‘ಅನ್ನ ಸಂತರ್ಪಣೆ’ ಕವಿತೆಯಲ್ಲಿ ಹಸಿದ ಹೊಟ್ಟೆಗಗಳು ಹಸಿವಿನಿಂದ ನೋಯುವ ಚಿತ್ರವಿದೆ. ‘ಕಟ್ಟುವ ಮುನ್ನ’ ಕವಿತೆ ಮಸೀದೆ‌, ಮಂದಿರ ಕಟ್ಟುವ ಮುನ್ನ ಮನಸು‌ ಕಟ್ಟಿಕೊಳ್ಳಿ ಎಂಬ ಆಶಯ ನುಡಿದಿದೆ. ಮನವ ಕಾಯಲು – ಎಂಬಂತಹ ಕವಿತೆಗಳು ಅನುಭಾವದ ಸೆಳಕುಗಳಿಂದ ಕೂಡಿವೆ. ಚಂಚಲದ ಮನವ ಚಲಿಸದಂತೆ ಮಾಡುವ ಚಿಂತನೆ ಹೇಗೆ? ಎಂದು ಪ್ರಶ್ನಿಸಿದೆ.

ಈ ಸಂಕಲನದ ‘ಚಂದವಳ್ಳಿಯ ಚೆಲುವೆ’, ‘ಒಲವು ಭಾರವೇ ಸಖಿ ಎದೆಗೆ’, ಈ ಸಂಜೆ ಬಂದು ಹೋಗು’ದಂತಹ ಕವಿತೆಗಳು ಪ್ರೇಮಭಾವದ ಸಾಲುಗಳು. ಕವಿತಾ ಸಂಕಲನದ ಮುದನೀಡುವ ರಚನೆಗಳು. ‘ಕನ್ನಡಿ’ ಕವಿತೆಯಲ್ಲಿ

ನಿನ್ನ
ಕಣ್ಣ ಕನ್ನಡಿಯೊಳಗ
ನನ್ನ ಮಾರಿ ಎಷ್ಟ ಚಂದ
ಕಾಣ್ಸತೈತಿ
ಎನ್ನುವ ಕವಿ ಅವಳ ಕಣ್ಣ ಕನ್ನಡಿಯೇ ಸಾಕು ಎಂಬ ಪ್ರೀತಿ, ಸಂಭ್ರಮವನ್ನೂ ತಂದು ಸುರಿದಿದ್ದಾರೆ.

ಕವಿತೆ ವಾಚಾಳಿತನದಿಂದ ಹೊರಬರಬೇಕು, ಕವಿತೆ ವಿವರಣೆಯಾಗುವ, ಜಾಳು ಜಾಳಾಗುವ ಅಪಾಯ ‘ಅಪೂರ್ವ ‘ದಂತಹ ಕವಿತೆಗಳಲ್ಲಿರುವದನ್ನು ಡಾ. ಸದಾಶಿವ ಅವರು ಗಮನಿಸಬೇಕು. ಕವಿತೆಯೆಂದರೆ ಹೇಳಿಕೆಯಲ್ಲ, ವಿವರಣೆಯಲ್ಲ, ಉಪನ್ಯಾಸವಲ್ಲ ಎಲ್ಲವನ್ನು ಒಳಗೊಂಡೂ ಏನೆಲ್ಲವೂ ಆಗಬಲ್ಲ ವಿಶಿಷ್ಠ ರಚನೆ ಎನ್ನುವದು ಕಾವ್ಯ ಮೀಮಾಂಸೆಯನ್ನೇ ಕಲಿಸುವ ಕವಿಗೂ ಗೊತ್ತಿದೆ. ಹಿರಿಯ‌ ಕವಿ ಸುಬ್ಬು ಹೊಲೆಯಾರ್ ಅವರ ‘ಕವಿ ಕೆಲ ಪದ್ಯಗಳನ್ನು ಧ್ಯಾನಿಸಿ ಬರೆದ ಕವಿತೆಗಳು, ಕೆಲವು ತಮಗೆ ತಾವೇ ಯಶಸ್ವಿ ಪಡೆದುಕೊಂಡ ಕವಿತೆಗಳು, ಕೆಲವು ಸಾಲುಗಳು ಕವಿತೆಗಾಗಿಯೇ ಹೊಸೆದ ಸಾಲುಗಳಂತಿವೆ’ ಎಂಬ ಸೂಕ್ಷ್ಮ ಸೂಚನೆಯನ್ನು ಗಮನಿಸಬೇಕು.

ಕವಿ ಯಶಸ್ವಿ ಕವಿತೆ‌ ಕೊಡಬೇಕಾದರೆ ಕವಿತೆ ಹೊಸೆಯದೆ ಧ್ಯಾನಸ್ತ ಸ್ಥಿತಿಯಲ್ಲಿ‌ ಕವಿತೆಯನ್ನು ಧ್ಯಾನಿಸಬೇಕು ಎಂಬ ಸೂಕ್ಷ್ಮ ಅವಲೋಕನ ಅಲ್ಲಿದೆ. ಮುಂದಿನ ರಚನೆಗಳಲ್ಲಿ ಇಂತಹ ಕೆಲವು ಮೀರಬಹುದಾದ ದೋಷಗಳಿಂದ ಮುಕ್ತವಾದ ಅವರು ಇನ್ನಷ್ಟು  ಸಶಕ್ತ ಕಾವ್ಯ ಹೊರಬರಲಿ, ಇನ್ನು ಡಾ ಸದಾಶಿವ ದೊಡಮನಿಯವರು ಕವಿತೆ ಬರೆಯಲು ಯಾವ ಕಾರಣಕ್ಕೂ ನಿಲುಗಡೆ ಬಾರದಿರಲಿ ಎಂದು ಹಾರೈಸುತ್ತೇನೆ. ಅವರ ಒಂದಿಷ್ಟು ಒಳ್ಳೆಯ ಕವಿತೆಗಳನ್ನು ಓದುವ ಅವಕಾಶವಿತ್ತುದಕ್ಕೆ ಅಭಿನಂದಿಸುತ್ತೇನೆ.

‍ಲೇಖಕರು Admin

December 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: