ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಯಾಕೆ ಗೊತ್ತೆ ಪ್ರಿಯೆ, ನಾನು ನಿನ್ನನ್ನು ದ್ವೇಷಿಸುತ್ತೇನೆ' -ಎಚ್ ಎಲ್ ಪುಷ್ಪ ಕವನ

ಪ್ರೇಮ ಸಿದ್ಧಾಂತಗಳು

ಎಚ್ ಎಲ್ ಪುಷ್ಪ

-1
“ಸದಾ ಕುಡಿದ ಸ್ಥಿತಿಯಲ್ಲಿರು”
“ಏನನ್ನು?”
“ಏನನ್ನಾದರೂ – ವೈನ್, ಕಾವ್ಯ, ಸಜ್ಜನಿಕೆ, ಋಜತ್ವ
ಯಾವುದಾದರೂ ಸರಿ” – ಎಂದ ಬಾದಿಲೇರ್
ಅದನ್ನು ಓದಿದ ಲೆನಿನ್ ಮಿಂಚು ಗಡ್ಡದ ಗೆಳೆಯ
ಕುಡಿದ, ಕುಡಿದೇ  ಕುಡಿದ
ಕುಡಿಯುತ್ತಲೇ ರಾಶಿಗಳುದ್ದಕ್ಕೆ ಬೆಳೆಯುತ್ತಲೇ ಹೋದ
ಕನಸುಗಣ್ಣಲ್ಲಿ ಬಣ್ಣ ತುಳಿಕಿಸುತ್ತಾ,
ಪ್ರಿಯೆ ಬಾ,
ತತ್ವಗಳಿಂದ ದೂರವಾಗಿ
ಮತ್ತ ಲೋಕಕ್ಕೆ ಪ್ರಮತ್ತರಾಗುವ
ಸ್ವರ್ಗಕ್ಕೆ ಕಿಚ್ಚಿಕ್ಕುತ್ತಾ ನಗ್ನರಾಗುವ
ನಿರ್ಲಜ್ಜೆಯಲಿ ನಿಮಗ್ನರಾಗುವ
ಖೋಟಾ ನೋಟಿನ ಕೃತಕ ಹೆಣ್ಣುಗಳೇ ಅತ್ತ ಸಾಗಿ
ಲಜ್ಜೆ ತುಳುಕಿಸುವ ನನ್ನ ಹೆಣ್ಣೆ ಇತ್ತ ಬಾ
ನಿನ್ನ ಸಂಗದಲ್ಲಿ
ನನ್ನ ಕನವರಿಕೆಗಳ ದೋಣಿ ತೇಲಿ ಬಿಡುವೆ
ದ್ವೇಷ, ನಿರಾಶೆ, ಕಹಿ ತುಂಬಿದ
ಒಣ ತುಟಿಗಳಿಂದ
ಹೀರುವೆ, ಹೀರುತ್ತಾ ಸಾಗುವೆ

-2
ಬಾ ಮುದ್ದಿನ ಕನ್ನೆ
ಬೆಕ್ಕಿನಂತೆ ಮೇಲೆರಗು
ನನ್ನ ರಹಸ್ಯ ಕಂದರಗಳನ್ನು ಕೆದಕಿ, ಕೆದಕಿ
ಸೀಳುತ್ತಾ, ಆಳಗಳನ್ನು ಕೆಣಕುತ್ತಾ ನಿರಾಳತೆಯಲ್ಲಿ
ನರಸತ್ತ ಲೋಹದೆದೆಯಲಿ
ಮಿದು ಮಾಂಸದ ಮಿಡಿತವನ್ನು
ಮೆಲ್ಲಗೆ ಮಿಡಿಸುತ್ತಾ ಹೋಗು

-3

ಬಾ ಮುದ್ದಿನ ಬೆಕ್ಕೆ
ಸುಖ ನಿನಗೆ ಬೇಡವೇ ಬೇಡ
ನಿನ್ನ ಅಸಂತೃಪ್ತಿಯ ಮುಖ
ಒಣಗಿದ ತುಟಿ, ನಿನ್ನೆದೆಯ ಬಿಕ್ಕುಗಳ ತುಕ್ಕು
ನನ್ನೆದೆಯಲ್ಲಿ ಪ್ರೇಮದ ಸೆಲೆಯನ್ನು ಉಕ್ಕಿಸುತ್ತದೆ
ನಿನ್ನ ಮೈಯ ತಂಪು
ಚಿಕ್ಕಂದಿನಲ್ಲಿ ನನ್ನಮ್ಮ
ಸೆರಗ ಬೀಸುತ್ತಾ ಜೋಗುಳ ಹಾಡಿ
ನಸು ಬಿಸಿ ತೊಡೆಯಲಿ
ನನ್ನ ಮುಚ್ಚಿ ತಟ್ಟುತ್ತಾ ಕಮ್ಮನೆ ಮಲಗಿದ್ದು
ಕಣ್ಣೆದುರು ನಿಲ್ಲುತ್ತದೆ.
-4
ಪ್ರಿಯೇ,
ನೀನೆಂದೂ ಬುದ್ಧಿವಂತಳಾಗುವುದು ಬೇಡ
ಆಗ ನಿನ್ನ ಕಣ್ಣಲ್ಲಿ ಕೌತುಕ ಕುಣಿಯುತ್ತೆ
ಮಾಸದ ಹೊಳಪಿರುತ್ತೆ
ನನ್ನ ಕುರಿತ ಸೋಜಿಗ ಹುಸಿಯಾಗಿ
ನಿನ್ನ ಮುಗ್ಧ ಕಣ್ಣುಗಳಲ್ಲಿ ನಾನೊಂದು ಮಿಂಚಿನ ಹುಳವಾಗಿ ಬಿಡುತ್ತೇನೆ
ನೀ ಬುದ್ಧಿವಂತೆಯಾದರೆ
ನನ್ನ ಬಗ್ಗೆ ತಿರಸ್ಕಾರ ಮೂಡಿ
ಹೊಳಪು ಮಾಸುತ್ತೆ
ನಿನ್ನ ನುಣುಪು ಮುಖದ ಮೇಲೆ
ದರಿದ್ರಬುದ್ಧಿ ರೇಖೆಗಳು ಮೂಡುತ್ತೆ
ಬುದ್ಧಿ ಮತ್ತೆಯ ನಟಿಸಲು ಹೋಗಿ
ಮುದಿ ಸೂಳೆಯಾಗುತ್ತಾ
ಮುಖ್ಯವಾಗಿ ನನ್ನಿಂದ ದೂರವಾಗುತ್ತಾ
ಮತ್ತೆ ಖೋಟಾನೋಟಿನ ಹೆಂಗಸಾಗಿ
ನನ್ನ ಮುಂದೆ ಪ್ರತ್ಯಕ್ಷವಾಗುತ್ತಿ.
-5
ಗೆಳತಿ, ಸದಾ ಕುಡಿತದ ಕೈಗೊಂಬೆಯಾಗಿದ್ದಾಗ
ನಿನ್ನ ಕಣ್ಣಲ್ಲಿ ಮಿಂಚು ಕಾಣಿಸುತ್ತೆ
ನಿನ್ನ ನಿರಾಶೆಯ ತುಟಿಗಳು ನಗುಸೂಸಿ
ನನ್ನ ಅಸಂಖ್ಯ ಚುಂಬನದ ಮಳೆಯಲ್ಲಿ ನಿರ್ಜೀವವಾಗುತ್ತಾ ಹೋಗಬೇಕು
ಯಾಕೆ ಗೊತ್ತೆ ಪ್ರಿಯೆ, ನಾನು ನಿನ್ನನ್ನು ದ್ವೇಷಿಸುತ್ತೇನೆ
ಹಾಗೆ ನಿನ್ನನ್ನು ಪ್ರೀತಿಸುತ್ತೇನೆ ಕೂಡಾ.
 

‍ಲೇಖಕರು avadhi

1 November, 2014

2 Comments

  1. mmshaik

    nice..very nice.!

  2. lalithasiddabasavaiah

    ಪದ್ಯ ಓದುವ ಖುಷಿ ಕೊಟ್ಟಿತು ಪುಷ್ಪ, ಧನ್ಯವಾದ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading