-ಕೆ.ಎನ್. ಲಾವಣ್ಯ ಪ್ರಭಾ
ಮೌನ ಹಲವಾರು ಬಾರಿ
ನಿಮ್ಮನ್ನು
ಗೊಂದಲಕ್ಕೀಡು ಮಾಡಬಹುದು
ದಿವ್ಯ ಮೌನವೊಂದು
ಧ್ಯಾನವೆಂದೆನಿಸಬಹುದು ಅಥವಾ
ವೈರಾಗ್ಯವೋ , ನಿರ್ಲಕ್ಷ್ಯವೋ
ಎಂದೆನಿಸಲೂಬಹುದು
ಉತ್ತರ ಹೊಳೆದ ಹಾಗೆಯೋ
ಅಥವಾ ಪ್ರಶ್ನೆಯಾಗಿಯೇ
ಉಳಿದುಕೊಂಡಂತೆಯೋ
ಭಾಸವಾಗಬಹುದು
ಅರ್ಥ ಕಳೆದುಕೊಂಡ ಮೇಲೂ
ಜೀವವಿಲ್ಲದ ಸಂಬಂಧಗಳನ್ನು
ಕಾಪಿಡಬಹುದು
ಅಥವಾ
ಕೊನೆಗಾಣಿಸಲೂಬಹುದು
ಸಮ್ಮತಿಯಿದೆಯೆನ್ನಿಸಬಹುದು
ಅಥವಾ
ಅದು ಕೇವಲ ಅರೆಮನಸ್ಸಿನದೆಂದು
ಸಂದೇಹ ಮೂಡಿಸಬಹುದು
ಅಂತರ ಹೆಚ್ಚಿಸಿ ಎರಡು ತೀರಗಳ
ಮರಳಲ್ಲಿ ನಿಂತೇ ಆಟ ನೋಡಿ
ಮಜಾ ತೆಗೆದುಕೊಳ್ಳಬಹುದು
ಮೂರ್ಖನೋ ಜ್ಞಾನಿಯೋ
ವ್ಯತ್ಯಾಸ ಮರೆಮಾಚಬಹುದು
ಯಾವ ಸಂಕಟವೋ ಬಚ್ಚಿಡುವ
ಸಾಹಸವಿರಲೂಬಹುದು
ತಮ್ಮ ಘನತೆಯನ್ನು ಕಾಯುವ
ಜಾಣ್ತನವೂ ಆಗಿರಬಹುದು
ಏನೇ ಇರಲಿ.. ಮೌನ ಬಂಗಾರ
ಬೆಳ್ಳಿಗಿಂತ ಬೆಲೆ ಹೆಚ್ಚು
ಆದರೆ ಮಾತೆಂಬ ಮಾತಿಗೆ ಬಂದರೆ
ಸ್ಪಷ್ಟ ಅಸ್ಪಷ್ಟತೆಗಳ ನಡುವೆ
ಯಾವ ಗೊಂದಲವೂ ಇಲ್ಲ
ನೆನಪಿರಲಿ ಇದು ಬಣ್ಣದ ಮಾತಿಗೆ
ಅನ್ವಯಿಸುವುದಿಲ್ಲ
ಎರಡೇ ದಾರಿ ಮಾತಿನ ರೀತಿಗೆ
ಬೇರೆ ದಾರಿಯೇ ಇಲ್ಲ
ಮಾತು ಮುರಿಯಬಹುದು
ಅಥವಾ ನಡೆಸಿಕೊಡಬಹುದು
ಸಂಬಂಧವನ್ನು ಒಂದೇಟಿಗೆ
ಕಡಿಯಬಹುದು ಅಥವಾ
ಒಂದು ಮಾತಿಗೆ ನೂರಾರು ಭಾವಗಳ
ಮಿಡಿಯಬಹುದು
ಅಂದರೇ…
ಸಮಾಧಿ ಕಟ್ಟಬಹುದು ಅಥವಾ
ಗೋರಿಯ ಮೇಲೂ ಗಿಡ ಬೆಳೆಸಿ
ಹೂವರಳಿಸಿ ತಣಿಸಬಹುದು
ನಾನು ನಿನ್ನನ್ನು ಧ್ವೇಷಿಸುತ್ತೇನೆ
ಅಥವಾ
ನಾನು ನಿನ್ನನ್ನು ಪ್ರೀತಿಸುತ್ತೇನೆ
ಎಂದಷ್ಟೇ ಹೇಳಬಹುದು.
ಮಾತಿಗೆ ಎರಡೇ ಆಯ್ಕೆ
ಆರಿಸಿಕೊಳ್ಳುವುದು ನಿಮ್ಮಿಚ್ಛೆ.
ಅದಕ್ಕೇ ಹೇಳುವುದು –
ಮಾತು ಆಡಿದರೆ ಹೋಯಿತು
ಮುತ್ತು ಒಡೆದರೆ ಹೋಯಿತು






0 Comments