ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌನ ರಾಗದ ಕವಿತೆ

 

ಸರೋಜಿನಿ ಪಡಸಲಗಿ

ದಟ್ಟ ಕಾನನದೊಡಲ  ಸೀಳಿ
ಹೊರಟ ಒಂಟಿ ದಾರಿಯ
ಮೂಕ  ಪಯಣಿಗ ಈ
ಮೌನ ರಾಗದ ಕವಿತೆ

ಎದೆ ತುಂಬ ಮಣ ಭಾರ
ತಲೆ ತುಂಬ ಸರಕಿನ  ಸಂತೆ
ಕಣ್ತುಂಬ ಗವ್ವೆನ್ನೊ ಕಡುಕತ್ತಲು
ನರ ನರವೂ ಸೆಳೆದು  ಸೋತು
ಚೇತನವೇ ಉಡುಗಿ ಹೋದ
ಮೂಕ ಪಯಣಿಗ ಈ
ಮೌನರಾಗದ  ಕವಿತೆ

ತಂಪೆರೆದ ಹಸಿರು ಸೊರಗಿ
ಮನ ತಣಿಸಿದ ಝರಿ ಬತ್ತಿ
ಆಸರೆಯ ನೆಳಲು ಕರಗಿ
ಬರೀ ಬಿಸಿಲು ಬೆಂಗಾಡು
ದಾರಿ ಗಾಣದ ದಿಕ್ಕು ತಪ್ಪಿದ
ಮೂಕ ಪಯಣಿಗ ಈ
ಮೌನ ರಾಗದ ಕವಿತೆ

ರಪ್ಪೆಂದು  ಬೀಸಿ ಹೊಡೆದ
ಹತ್ತು ದಿಕ್ಕುಗಳ ಬಿರುಗಾಳಿ
ತತ್ತರಿಸಿ  ಥರಥರಿಸಿ
ಉಸಿರ ತಂತಿಲೊಂದು ಸೀಳು
ಧ್ವನಿ ಅಡಗಿ ಹೂತು ಹೋದ
ಮೂಕ ಪಯಣಿಗ ಈ
ಮೌನ ರಾಗದ ಕವಿತೆ

ನೆಲ ಅದುರೆ ಧರೆಗೊರಗಿ
ನಿಸ್ಸಾರ ನಾದ ಹೊಮ್ಮಿಸಿ
ಒಸರೀತು ಮತ್ತೆ ಸೆಲೆ ಎನುತ
ಒಣಗಣ್ಣು ತೇಲಿಸುತ
ಕಾಯುತಿಹ ಒಬ್ಬಂಟಿ ದಾರಿಗ
ಮೂಕ ಪಯಣಿಗ ಈ
ಮೌನ ರಾಗದ ಕವಿತೆ.

‍ಲೇಖಕರು

9 December, 2019

2 Comments

  1. T S SHRAVANA KUMARI

    ಚೆನ್ನಾಗಿದೆ.

    • Sarojini Padasalgi

      ಧನ್ಯವಾದಗಳು ಮೇಡಂ.
      ಧನ್ಯವಾದಗಳು ಅವಧಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading