ಶ್ರೀವಿಭಾವನ
1
ನಿನ್ನೆ ಸಂಜೆ
ಕೆಂಡದಂತೆ ಕಾಯ್ದಿದ್ದ ನಗರದಲ್ಲಿ
ಮೊದಲ ಮಳೆಯ ಖುಷಿ ಕೆಲವರಿಗೆ
ಫೇಸ್ಬುಕ್, ವಾಟ್ಸಾಪ್, ಟ್ವಿಟರ್ನಲ್ಲಿ
ಸಂಭ್ರಮಾಚರಣೆ
ಎಸಿ ಬಸ್, ಕ್ಯಾಬ್ಗಳಲ್ಲಿ ಕುಳಿತಿದ್ದವರಿಗೆ
ಆದೇನೋ ಹೊಸ ಖುಷಿ, ರೋಮಾಂಚನ
ಹನಿ ಸೋಕಿಸಿಕೊಳ್ಳದಿದ್ದರೂ
ವರ್ಷಧಾರೆಯ ಪುಳಕ
ಮೊಬೈಲ್ನಲ್ಲಿ ಒಂದಿಷ್ಟು
ಚಿತ್ರಗಳ ಆಲ್ಬಂ
ಹ್ಯಾಶ್ಟ್ಯಾಗ್ಗಳ ಪ್ರವಾಹ
ಬೊಗಸೆ ತುಂಬಾ ಮಳೆ ಹನಿ ಹಿಡಿದುಕೊಳ್ಳಲಾಗದ
ಬೇಸರ…ವೀಕೆಂಡ್ನಲ್ಲಿ ಮಳೆ ಸುರಿದರೆ
ಟೇರೆಸ್ನಲ್ಲಿ ಒದ್ದೆಯಾಗುವ ಕನಸು
2
ಮೆಜೆಸ್ಟಿಕ್ನಲ್ಲಿ ಒಂಟಿ ತಾಯಿ ಮಗು
ಎಲ್ಲಿಂದಲೋ ಬಂದವರು
ತಾಯಿ-ಮಗು ಇಬ್ಬರದ್ದೂ ಖಾಲಿ ಹೊಟ್ಟೆ.
ಈಗಷ್ಟೇ ಜ್ವರ ಬಿಟ್ಟ ಮಗು
ಹನಿಹೊತ್ತ ಗಾಳಿಗೆ ಮತ್ತೆನಾದರೂ ಆದೀತೆ ಎಂಬ
ಕಳವಳ ತಾಯಿಗೆ
ಕಾಲ ಕೆಳಗೆ ತುಂಬಾ ಕೆಸರ ನೀರು
ಗಂಟೆ ಕಳೆದರೂ ಬಾರದ ಬಸ್ಸು
ಟ್ರಾಫಿಕ್ ಜಾಮ್ನ ಕಾಟ ಬೇರೆ
ಮನೆ ತಲುಪುವುದು ಇನ್ಯಾವಾಗಲೋ
ಮಳೆರಾಯನಿಗೆ ಹಿಡಿ ಶಾಪದ ಬಿಸಿ.
3
ಮನೆ ಹಾದಿ ಹಿಡಿದೆ
ಮಳೆ ನಿಂತಿತ್ತು….ಏನೋ ಖುಷಿ ಖುಷಿ ಫೀಲಿಂಗ್
ಸ್ವಲ್ಪ ದೂರ ನಡೆದಾಗ ಗೊತ್ತಾಯಿತು
ಗಟಾರದ ನೀರು ರಸ್ತೆ ಮೇಲೆ ಹರಿದಿದೆ
ಎಚ್ಚರಿಕೆಯಿಂದ ಹೆಜ್ಜೆ ಹಾಕಿದರೂ
ಮನೆ ಮೆಟ್ಟಿಲು ತುಳಿದಾಗ
ಕಾಲು ತುಂಬಾ ಕೆಸರು, ಆದೇನೋ ವಾಸನೆ
ನೆನಪಾಯಿತು, ಊರಿನ ಮೊದಲ ಮಳೆಯ ದಿನಗಳು
ಆದರೆ ನೆನಪುಗಳೀಗ ಫ್ರೇಂನ ಬಂಧಿಗಳು





0 Comments