ಯೌವನದ ಒಂದು ಸಂಜೆ
ಹಿತ್ತಲ ಬಾಳೆ ಬುಡದಲ್ಲಿ
ಮಲಗಿರುವ ನೆರಳು…
ದಿಬ್ಬದ ಗಂಟಲಲ್ಲಿ
ಇಳಿಯುತ್ತಿರುವ ಸೂರ್ಯ ..
ಅದೇ ತಲೆಬಾಚಿ ಬೊಟ್ಟಿಟ್ಟ ಅಮ್ಮ
ಚೆಲ್ಲಿದ , ಉದುರು ಕೂದಲ ಪಿಡಿಚೆ ..
ಗೂಡು ಸೇರಲು ತವಕಿಸಿ
ನಿಂತ ಕೋಳಿ ಹಿಂಡು ..
ಆಗಸದ ನಿರ್ಜನ ಬೀದಿಗಳಲ್ಲಿ
ಓಡುತ್ತಿರುವ ಮೋಡಗಳು ..
ಗಾಳಿಗೂ ಗಡಿಬಿಡಿ ..
ಸಾಗರದ ಅಂಚಿಗೆ ಅಪ್ಪಳಿಸಿವೆ.. ಅಲೆಗಳು ..
ದಿನವಿಡೀ ದುಡಿದ ಹಗಲು
ನಿದ್ರೆ ತೂಗಡಿಸಿದೆ …
ಇನ್ನೇನು ಸಂಜೆ ಮಲಗಿ..
ರಾತ್ರಿ ಏಳುವ ಸಮಯ ..
ಹಗಲಿನ ಮುಖಕ್ಕೆ ಕಪ್ಪು ಬಳಿಯುತ್ತ …
ಇರುಳು ಮೆಲ್ಲ ಮೆಲ್ಲನೆ..
ಮೇಲೇಳುತ್ತಿದೆ ..
ಹಗಲು ರಾತ್ರಿ ಸಂಧಿಸುವ ಮಬ್ಬು ಮಹೂರ್ತ ….
ಮೈ ಮುರಿಯುತ್ತಿದ್ದಾಳೆ
ನನ್ನೊಳಗಿನ ಅಭಿಸಾರಿಕೆ..
ಅರೆಬಿರಿದ ಮಲ್ಲಿಗೆಗೆ
ಅದೇನೋ ಆತುರ …
ಘಮಿಸುತ್ತಿದೆ ಘಮ್ಮನೆ ..
ಗಾಳಿ ಪರಿಮಳದ ಭಾರ ಹೊತ್ತು
ಚಲಿಸುತ್ತಿದೆ ಕಮ್ಮನೆ..
ತೇಲಿವೆ ಮಿಂಚುಹುಳಗಳು
ದೊನ್ನೆದೀಪದಂತೆ !
ಮಿನುಗುವ ರಾತ್ರಿಯ ಕಂಡು
ಅಲ್ಲಲ್ಲಿ ಇಣುಕುತ್ತಿರುವ ಚುಕ್ಕಿಗಳಿಗೆ ..
ಎಂಥದ್ದೋ ನಾಚಿಕೆ..
ಕುಳಿತಿದ್ದೇನೆ ನಾನು
ಸಂಜೆಯ ತುದಿಯಲ್ಲಿ
ಉಸಿರಾಡುತ್ತಿರುವ ಚಿತ್ರದಂತೆ …
ಸ್ವರದಂತೆ ಸಂಚರಿಸಿದೆ ಆಸೆ
ಎದೆಯ ತಂತಿಯ ಮೇಲೆ ..
ಕರಗುತ್ತಿದ್ದೇನೆ ..
ಕುಳಿತಲ್ಲೇ …..
ಮಲ್ಲಿಗೆಯಂತೆ ಘಮಿಸುತ್ತ,
ಚುಕ್ಕಿಯಂತೆ ನಾಚುತ್ತ ..
ಅರಳುತ್ತಿದ್ದೇನೆ ಯಾರೂ ಕಾಣದಂತೆ
ಎಂದಿನಂತೆ ಈ ಸಂಜೆಯೂ
ಚೆಲುವಾಗಿ ಮುಗಿದಿದೆ ..
ರಾತ್ರಿ ಕಂಬಳಿಯೊಳಗೆ
ಕನಸುಗಳ ಕರೆತಂದು ಬೆಳಗಿಸಿಕೊಳ್ಳುತ್ತೇನೆ
ಇಡೀ ರಾತ್ರಿ ಹೊಳೆಯುತ್ತದೆ …
ಥಳ ಥಳ…..
ಒಡಲು ಉರಿವ ಕರ್ಪೂರ
ಕೊನೆಯರಿಯದ ಮುಗಿಲ ಸಾಲಿನಂತೆ
ಎತ್ತಲೋ ಸಾಗುವ ಮನಸು
ಬೆಳ್ಳಿ ಬೆಳಗುವ ಹೊತ್ತು ಸಕ್ಕರೆ ನಿದ್ದೆ…
ಮತ್ತದೇ ಭವ್ಯ ಬೆಳಗು …
ಸುಡುವ ನಡು ಹಗಲು …
ಪ್ರೇಮಕ್ಕೆ ಬಿದ್ದ ಮನಸು..
ಸುಡು ಸುಡು ಆಸೆಗಳಲಿ ಬೇಯುವ ನಾನು
ಸಂಜೆಯಾಗುವುದನ್ನೇ ಕಾಯುತ್ತೇವೆ …







ಸೊಗಸಾಗಿ ನಾಚುವ ಚಿಕ್ಕೆ ಈ ಕವನ.ರೂಪಕಗಳ ಚಿತ್ರ ಸಂತೆ.ನಿಮ್ಮ ಅಭಿಸಾರಿಕೆ ಈ ಸಂತೆ ಮುಗಿಯುವ ಹೊತ್ತಿಗೆ ಬಂದು ಹಳಹಳಿಸುತ್ತಿರುವ ಪೋರಿಯಂತಾಗಿದ್ದಾಳೆ
nice..
very nice
nice lines
ಹೌದು, ಕಾಯಬೇಕು ಸಂಜೆಗೆ
ಬೆಳಿಗ್ಗೆಯಿಂದ ಕಾಣದ ಮನದನ್ನೆಯನ್ನು ಕಾಣಲು ಓಡುವ ಸೂರ್ಯನ ತಡೆದು ಕಾರಣ ಕೇಳುವ ಬಯಕೆ ನಿಮ್ಮದಾ
ರೂಪಕಗಳ ಮೆರವಣಿಗೆ ಚೆನ್ನಾಗಿದೆ..
nice..
ಕವನ ಚೆನ್ನಾಗಿದೆ