ಗೋಪಾಲ ವಾಜಪೇಯಿ ಕಾಲಂ: ಇಲ್ಲೀಗೆ ಹರ ಹರಾ..ಇಲ್ಲೀಗೆ ಶಿವ ಶಿವಾ…


‘ಏ ಗೋವಾ’ ಅಂತ ಟಿ ಎಸ್  ನಾಗಾಭರಣ ಮೊನ್ನೆ ಮೊನ್ನೆ ತಾನೇ  ಗೋಪಾಲ ವಾಜಪೇಯಿ ಅವರನ್ನು ಕರೆದಾಗ ನನ್ನ ಕಿವಿ ಚುರುಕಾಯಿತು. ನಾಗಾಭರಣ ಅವರಿಗೆ ಏನು ‘ಖೋವಾ’ ಅಂದ್ರಾ ಅಂತ ಕಿಚಾಯಿಸಿದೆ. ಅವರು ಗೋವಾ ಅಂದ್ರೂ ಸರಿ, ಖೋವಾ ಅಂದ್ರೂ ಸರಿ ಅಂದರು. ಅಂತಹ ಖೋವಾ ವ್ಯಕ್ತಿತ್ವ ಗೋಪಾಲ ವಾಜಪೇಯಿ ಅವರದ್ದು. ಈ ಖೋವಾ ಎಂಬ ವಿಶೇಷಣವನ್ನು ಎಲ್ಲರಿಗೂ ಹಚ್ಚಲಾಗುವುದಿಲ್ಲ. ಆದರೆ ಗೋವಾ ಎನ್ನುವ ಗೋಪಾಲ ವಾಜಪೇಯಿ ಅವರಿಗೆ ಮಾತ್ರ ಖಡಕ್ಕಾಗಿ ಹೊಂದುತ್ತದೆ.
ಗೋಪಾಲ ವಾಜಪೇಯಿ ಅವರ ಹಾಡು ಕೇಳುತ್ತಾ ನಮ್ಮ ಯೌವನವನ್ನು ರೂಪಿಸಿಕೊಂಡವರು ನಾವು. ನಾಗಮಂಡಲದ ಹಾಡುಗಳಂತೂ ನಮ್ಮೊಳಗೇ ಒಂದು ಹಾವು ಹರಿದಾಡಿದಂತೆ ಮಾಡಿದ್ದು ಸುಳ್ಳಲ್ಲ. ಮೊನ್ನೆ ಮೊನ್ನೆ ಅವರ ‘ಕಂಬದಾ ಮ್ಯಾಲಿನಾ ಗೊಂಬೆಯೇ…’ ಹಾಡನ್ನು ರಮೇಶ್ ಗುರುರಾಜ ರಾವ್ ಅವರ ದನಿಯಲ್ಲಿ ಕೇಳಿದ್ದೆ. ಅಷ್ಟೇ ಅನ್ನುವ ವೇಳೆಗೆ ಈಗ ರಂಗಶಂಕರದ ಪ್ರಮುಖರಲ್ಲೊಬ್ಬರಾದ ಟಿ ಜಿ ಬಾಲಕೃಷ್ಣ ಫೋನ್ ಮಾಡಿ ದೂರದೂರಿಗೆ ಹೋಗುವಾಗ ಬಸ್ ನಲ್ಲಿ ಅದೇ ಕಂಬದಾ ಮೇಲಿನ ಗೊಂಬೆಯೇ ಹಾಡು ಹಾಕಿದ್ದನ್ನು ಹೇಳಿದರು.
ಗೋವಾ ಬರೀ ನಾಗಮಂಡಲ ಅಲ್ಲ ಅವರ ಪ್ರತಿಭೆಯ ವಿಶಾಲ ಬಾಹುಗಳು ಅನಂತದೆಡೆಗೆ ವಿಸ್ತರಿಸಿದೆ. ಅವರ ಹಾಡು, ನಾಟಕ ಬಿಡಿ ಅವರ ಫೆಸ್ ಬುಕ್ ಸ್ಟೇಟಸ್ ಗಳೇ ‘ಆಹಾ..’ ಎನ್ನುವಂತಿರುತ್ತದೆ. ಅಂತಹ ಮಾಂತ್ರಿಕ ಶಕ್ತಿ ಅವರ ಲೇಖನಿಗಿದೆ
ಈಗಲೂ ಬಹುತೇಕ ಮಂದಿ ಅಂತರ್ಜಾಲವನ್ನು ಬೆರಗುಗಣ್ಣಿನಿಂದ ನೋಡುತ್ತಿರುವಾಗಲೇ ಗೋಪಾಲ ವಾಜಪೇಯಿ ಅವರು ಲೇಖನಿ ಬದಿಗಿಟ್ಟು ಮೌಸ್ ಹಿಡಿದು  ಅದನ್ನೂ ಧಕ್ಕಿಸಿಕೊಂಡುಬಿಟ್ಟರು. ಹಾಗಿರುವಾಗಲೇ ನಾನು ನಿಮ್ಮ ಅನುಭಭವ ಬರೆದುಕೊಡಿ ಎಂದು ಗಂಟು ಬಿದ್ದದ್ದು. ‘ನಿಮಗೆಲ್ಲಾ ಗೊತ್ತಿದೆಯಲ್ರೀ..’ ಅಂತ ನಾಜೂಕಾಗಿ ಹೇಳಿ ತಪ್ಪಿಸಿಕೊಳ್ಳುವ ಹವಣಿಕೆಯಲ್ಲಿದ್ದರು. ಆದರೆ ಈಟಿವಿಯಲ್ಲಿ ಬಾರೀ ಹತ್ತಿರವಿದ್ದ ನಮ್ಮಿಬ್ಬರಿಗೂ ಒಂದು ಗುಟ್ಟು ಗೊತ್ತಿತ್ತು ನಾನು ಬಿಟ್ಟುಕೊಡುವವನಲ್ಲ ಅಂತ. ಹಾಗಾಗಿ ಅವರು ಕಂಪ್ಯೂಟರ್ ಮುಂದೆ ಕೂಡಲೇಬೇಕಾಯಿತು. ಅದರ ಫಲ ಇಷ್ಟು ವಾರಗಳ ಕಾಲ ಸತತವಾಗಿ ಹರಿದು ಬಂದ ಅವರ ರಂಗ ನೆನಪುಗಳು. ಗೋವಾ ಅವರ ನೆನಪು ಒಂದು ಹಾರ್ಡ್ ಡಿಸ್ಕ್ ಇದ್ದ ಹಾಗೆ. ಒಮ್ಮೆ ಹೊಕ್ಕರೆ ಯಾವ ವೈರಸ್ ಅಟ್ಯಾಕ್ ಮಾಡಿದರೂ ಕುಂದುವಂತಹದ್ದಲ್ಲ. ಅಂತಹದ್ದಲ್ಲ ಎನ್ನುವುದನ್ನು ಅವರೇ ಇಲ್ಲಿನ ಬರಹಗಳ ಮೂಲಕ ಸಾಬೀತುಪಡಿಸಿದ್ದಾರೆ
ಗೋವಾ ಅವರು ಇನ್ನಷ್ಟು ಚಲನ ಚಿತ್ರಕ್ಕೆ ತಮ್ಮ ಲೇಖನಿ ಹರಿತಗೊಳಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ರಂಗ ಅನುಭವಗಳೂ ಒಂದು ಸುತ್ತು ಮುಗಿದಿದೆ ಅವರು ಟಿ ವಿ ಯಲ್ಲಿ ಕೆಲಸ ಮಾಡಿದ ಕಾರಣ ‘ಈಗ ಚಿಕ್ಕದೊಂದು ವಿರಾಮ’ ಎಂದು ರಾಗ ಎಳೆದಿದ್ದಾರೆ. ನಾನೂ ಸಹಾ ಅವರಿಂದ ಮತ್ತೆ ಬರೆಸುವ ಛಲ ಹೊತ್ತೇ ಆಗಲಿ ಎಂದಿದ್ದೇನೆ ಅವರ ಒಡಲೊಳಗೆ ಮೊಗೆದಷ್ಟೂ ಉಕ್ಕುವ ನೆನಪುಗಳಿವೆ. ನಾನು  ಸಂಯುಕ್ತ ಕರ್ನಾಟಕದ ಶ್ಯಾಮರಾಯರ ಬಗ್ಗೆ ಬರೆಯಿರಿ ಎಂದಿದ್ದೇನೆ. ಅವರು ರೇಡಿಯೋ ನೆನಪು ಬರೆಯುತ್ತೇನೆ ಎಂದಿದ್ದಾರೆ ನಮ್ಮಿಬ್ಬರ ಗುದ್ದಾಟದಲ್ಲಿ ಅಂತೂ ಒಂದು ಅಂಕಣ ಅವರಿಂದ ಬರುತ್ತದೆ ಎನ್ನುವುದಂತೂ ಗ್ಯಾರಂಟಿ.
ಈ ಗ್ಯಾರಂಟಿಯೊಂದಿಗೆ ಗೋಪಾಲ ಕಾಕಾ ಅವರಿಗೆ ‘ಅವಧಿ’ಯ ಪರವಾಗಿ, ಓದುಗರ ಪರವಾಗಿ ತುಂಬು ವಂದನೆಗಳನ್ನು ತಿಳಿಸುತ್ತಿದ್ದೇನೆ ಅವರ ಬರಹ ‘ಅವಧಿ’ಯ ಓದುಗರಿಗೆ ರಂಗ ಮೃಷ್ಟಾನ್ನ  ಎಂದರೆ ಅತಿಶಯೋಕ್ತಿಯಲ್ಲ ಅವರೇ ಹೇಳುವ ಹಾಗೆ ‘ಅವಧಿ’ಯ ಅಂಕಣದಿಂದ ಅವರ ಬಳಗ ತುಂಬಾ ವಿಸ್ತಾರಗೊಂಡಿದೆ ಆ ಬಳಗ ಇನ್ನಷ್ಟು ಓದಲು ಕಾಯುತ್ತದೆ ಎಂದು ನೆನಪಿಸುತ್ತಾ ಕಂಬಾರರ ಹಾಡಿನಂತೆ-
‘ಇಲ್ಲಿಗೆ ಹರ ಹರಾ.. ಇಲ್ಲೀಗೆ ಶಿವ ಶಿವಾ.. ಇಲ್ಲಿಗೆ ಈ ಕಥಿ ಸಂಪೂರ್ಣವಯ್ಯಾ..’
ರಂಗ ಭೂಮಿಯ ಬಗ್ಗೆ ಇನ್ನು ಮುಂದೆ ನಮ್ಮ ಜೊತೆ ನೆನಪನ್ನು ಹಂಚಿಕೊಳ್ಳುವವರು ಯಾರು ಎಂದು ನಿಮಗೆ  ಕುತೂಹಲ ಇದೆ ಅಲ್ಲವೇ ?
Wait till next week…

– ಜಿ ಎನ್ ಮೋಹನ್

ಸುಮ್ಮನೇ ನೆನಪುಗಳು – 45

‘ಗುಲಾಮ’ನ ಸ್ವಾತಂತ್ರ್ಯ ಯಾತ್ರೆ!

ಕೆ. ಶ್ಯಾಮರಾಯರು ಒಂದು ಕಾಲಕ್ಕೆ ತುಂಬಾ ಕಷ್ಟಪಟ್ಟವರಂತೆ. ಹುಟ್ಟಿದ ಕೆಲವೇ ವರ್ಷಗಳಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದ ಅವರು ಬಡತನದಲ್ಲೇ ಬೆಳೆದವರು. ಛಲವನ್ನೇ ಬಲವನ್ನಾಗಿ ಮಾಡಿಕೊಂಡು ದೊಡ್ಡವರಾದವರು. ದಾವಣಗೆರೆ ಬಳಿಯ ಕಡ್ಲಬಾಳು ಅವರ ಊರು. ತಾರುಣ್ಯದಲ್ಲಿ ಚಿತ್ರದುರ್ಗದ ತನಕ ಕೆಲಸ ಹುಡುಕಲು ನಡೆದುಕೊಂಡು ಹೋಗಿದ್ದರಂತೆ. ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಇನ್ನೂ ಬೆಳಗಾವಿಯಲ್ಲಿದ್ದಾಗಲೇ ಆ ಬಳಗವನ್ನು ಸೇರಿದ್ದ (1933) ಅವರು ಅದ್ಯಾಕೋ ಯಾರನ್ನೂ ನಂಬದ ಮನೋಭಾವವನ್ನು ಬೆಳೆಸಿಕೊಂಡು ಬಿಟ್ಟಿದ್ದರು. ಅವರದು ಒಂದು ರೀತಿ ‘ಕ್ಷಣ ಚಿತ್ತ ಕ್ಷಣ ಪಿತ್ತ’ ಎಂಬಂಥ ಸ್ವಭಾವ. ಯಾವಾಗ ಬೆನ್ನು ತಟ್ಟುತ್ತಾರೋ ಯಾವಾಗ ಕೆನ್ನೆಗೆ ಬಾರಿಸುತ್ತಾರೋ ಊಹಿಸಲು ಆಗದಂಥ ವ್ಯಕ್ತಿತ್ವ. ಮುಂಜಾನೆಗೆ ನಗುನಗುತ್ತ ಕಚೇರಿಗೆ ಹೋದವ ಸಂಜೆಗೆ ಸಸ್ಪೆನ್ಶನ್ ಆರ್ಡರನ್ನೋ, ಡಿಸ್ಮಿಸ್ಸಲ್ ಆರ್ಡರನ್ನೋ ಹಿಡಿದುಕೊಂಡು ಮನೆಗೆ ಹೋಗುವ ಪ್ರಸಂಗಗಳು ಆ ಕಾಲದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರಿನ ‘ಸಂಯುಕ್ತ ಕರ್ನಾಟಕ’ ಪತ್ರಿಕಾ ಕಚೇರಿಗಳಲ್ಲಿ ನಿತ್ಯದ ನೋಟ. ಅವರು ಮೊದಲು ಶಿಕ್ಷೆ ಕೊಡುತ್ತಿದ್ದರು, ನಂತರ ಅದಕ್ಕೆ ಕಾರಣಗಳನ್ನು ಹೊಂದಿಸಿಕೊಳ್ಳುತ್ತಿದ್ದರು. 1974ರಲ್ಲಿ ‘ಸಂಯುಕ್ತ ಕರ್ನಾಟಕ’ ಪರಭಾರೆ ಮಾಡಲ್ಪಟ್ಟು, ಹೊರಹಾಕಲ್ಪಟ್ಟಿದ್ದ ಅವರು, ಹನ್ನೆರಡು ವರ್ಷ ಕೋರ್ಟಿನಲ್ಲಿ ಬಡಿದಾಡಿ ಗೆಲ್ಲುವ ಮೂಲಕ ಆ ಸೇಡನ್ನು ತೀರಿಸಿಕೊಂಡಿದ್ದರು. 1986ರಲ್ಲಿ ಹೈಕೋರ್ಟು ಲೋಕ ಶಿಕ್ಷಣ ಟ್ರಸ್ಟನ್ನು ಪುನಾರಚಿಸಿದಾಗ, ಹೊಸ ಟ್ರಸ್ಟೀಗಳು ಕೆ. ಶ್ಯಾಮರಾಯರನ್ನೇ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು. ದೈನಂದಿನ ಆಡಳಿತದ ಎಲ್ಲ ಹೊಣೆ ಈ ಕಾರ್ಯದರ್ಶಿಯದೇ. ಹೀಗೆ ಕೆ. ಶ್ಯಾಮರಾಯರು ತಾವು ಡಿಸ್ಮಿಸ್ ಆಗುವಾಗ ಇದ್ದ ಸಿಬ್ಬಂದಿಯ ಮೇಲೆ ‘ಗದಾಪ್ರಹಾರ’ ಶುರುಮಾಡಿದ್ದರು.
1994ರಲ್ಲಿ ನನ್ನನ್ನು ‘ಕಸ್ತೂರಿ’ ಮಾಸಪತ್ರಿಕೆಯ ಸಹ ಸಂಪಾದಕ ಹುದ್ದೆಗೆ ಏರಿಸಿದರಲ್ಲ ಶ್ಯಾಮರಾಯರು, ಆಗಲೇ ಒಂದೆರಡು ವರ್ಷ ನಾನು ಸರಾಗವಾಗಿ ಉಸಿರಾಡಲು ಸಾಧ್ಯವಾದದ್ದು. ಆದರೆ, ಬೇಸಿಗೆಯಲ್ಲಿ ಯಾವಾಗಾದರೊಮ್ಮೆ ಸುಳಿಯುವ ತಂಗಾಳಿ ಕ್ಷಣಮಾತ್ರದ್ದು. ‘ಕಸ್ತೂರಿ’ಯಲ್ಲಿ ಅವರಿವರನ್ನು ವಿನಂತಿಸಿಕೊಂಡು ಬರೆಯಿಸಿ ಪ್ರಕಟಿಸಿದ ಒಂದಷ್ಟು ಲೇಖನಗಳು ನನಗೆ ಅಂಥ ತಂಗಾಳಿಯ ಅನುಭವ ನೀಡಿದ್ದಂತೂ ನಿಜ. ವಿಶೇಷವಾಗಿ ವರಕವಿ ಡಾ. ದ. ರಾ. ಬೇಂದ್ರೆ ಅವರ ‘ಜನ್ಮ ಶತಮಾನೋತ್ಸವ ವರ್ಷ’ದುದ್ದಕ್ಕೂ (1995ರ ಫೆಬ್ರವರಿ ಸಂಚಿಕೆಯಿಂದ ಆರಂಭ) ಬರೆಯಿಸಿ ಪ್ರಕಟಿಸಿದ ‘ಬೇಂದ್ರೆ ನೆನಪುಗಳು’. ಬೇಂದ್ರೆ ಯಾವತ್ತೂ ದಂತಗೋಪುರದಲ್ಲಿ ಕೂತು ಬರೆದವರಲ್ಲ. ಅವರು ಜನರ ಕವಿ. ಜನರೊಂದಿಗೆ ಓಡಾಡಿ, ಒಡನಾಡಿ ಅವರ ಸುಖದುಃಖಗಳಲ್ಲಿ ಒಂದಾದ ಕವಿ. ಬೇಂದ್ರೆ ತಮ್ಮ ಮನೆಗೆ ಬಂದಿದ್ದರು, ತಮ್ಮೊಂದಿಗೆ ಊಟ ಮಾಡಿದ್ದರು, ತಮ್ಮ ಮದುವೆಗೆ ಬಂದಿದ್ದರು ಎಂದು ನೆನಪಿಸಿಕೊಳ್ಳುವ ನೂರಾರು ಜನ ನಮಗೆ ನಾಡಿನಾದ್ಯಂತ ಇಂದಿಗೂ ಸಿಗುತ್ತಾರೆ. ಅಂಥ ಬೇಂದ್ರೆಯವರ ಕುರಿತ ನೆನಪುಗಳ ಪ್ರವಾಹವೇ ನಮಗೆ ಹರಿದು ಬಂತು. ಅವುಗಳಲ್ಲಿ ವಿಭಿನ್ನವೆನಿಸುವ, ವಿಶಿಷ್ಟವೆನಿಸುವ ನಾಲ್ಕು ನೆನಪುಗಳನ್ನು ಆಯ್ದು ಪ್ರತಿ ತಿಂಗಳೂ ಪ್ರಕಟಿಸುತ್ತಿದ್ದೆವು. ಕೆಲವರು ನೆನಪುಗಳೊಂದಿಗೆ ಫೋಟೋಗಳನ್ನೂ ಕಳಿಸುತ್ತಿದ್ದರು. ಆ ಅಂಕಣ ಅದೆಷ್ಟು ಜನಪ್ರಿಯವಾಯಿತೆಂದರೆ ಅವರ ಜನ್ಮಶಮಾನೋತ್ಸವ ವರ್ಷ ಮುಗಿಯುವ ತಿಂಗಳಿಗೆ ನಮ್ಮ ಕೈಯಲ್ಲಿದ್ದ ನೆನಪುಗಳ ಸಂಖ್ಯೆ 500ಕ್ಕೂ ಹೆಚ್ಚು. ಹೀಗಾಗಿ, ಅವುಗಳನ್ನು ಸೋಸಿ ತೆಗೆದು ಉಳಿದವನ್ನು ”ಬೇಂದ್ರೆ : ಎಷ್ಟೊಂದು ನೆನಪುಗಳು…!” ಎಂಬ ಶೀರ್ಷಿಕೆಯಲ್ಲಿ ಪುಸ್ತಕ ವಿಭಾಗದಲ್ಲಿ ಪ್ರಕಟಿಸಿದೆವು (1995ರ ಡಿಸೆಂಬರ್ ಸಂಚಿಕೆ). ”ಇದು ನಮಗೆ ‘ಸಮಾಜಮುಖಿ ಬೇಂದ್ರೆ ದರ್ಶನ’ ಮಾಡಿಸಿದ ಸಂಚಿಕೆ,” ಎಂಬ ಪ್ರಶಂಸೆಯೊಂದಿಗೆ ಅದನ್ನು ಭದ್ರವಾಗಿಟ್ಟುಕೊಂಡ ಓದುಗರೂ ಅನೇಕ. ”…’ಬೇಂದ್ರೆ’ ಅಂದರೆ ಏನು ಎಂದು ಅರ್ಥ ಮಾಡಿಸುವ ಸಾರ್ಥಕ ಸಂಚಿಕೆ…” ಎಂದು ಬಹುತೇಕರು ಕಾಗದ ಬರೆದರು. ಇತ್ತೀಚಿಗೆ ಬೇಂದ್ರೆಯವರ ಬಗ್ಗೆ ಧಾರವಾಡದ ಬೇಂದ್ರೆ ಟ್ರಸ್ಟ್ ಪ್ರಕಟಿಸಿದ ಇಂಥವೇ ನೆನಪುಗಳ ಸಂಗ್ರಹ ಸಂಪುಟ ‘ಬೇಂದ್ರೆ ಅಂದದ್ದು ಆಡಿದ್ದು’ದಲ್ಲಿ ‘ಕಸ್ತೂರಿ’ಯ ಆ ಲೇಖನಗಳಲ್ಲಿ ಕೆಲವನ್ನು ಪ್ರಕಟಿಸಿದ್ದಾರಂತೆ.
(ಇದೇ ಸಂದರ್ಭದಲ್ಲಿ ಹಿರಿಯರಾದ ಸಿ. ಅಶ್ವಥ್ ಜತೆಗೂಡಿ ‘ಜೋಡಿ ಜೀವ’ ಎಂಬ ಧ್ವನಿಸುರಳಿಗೂ, ಕೆ.ಎಮ್.ಎಫ್.ಗಾಗಿ ನಾಗಾಭರಣ ತಯಾರಿಸಿದ ‘ಸಂಗವ್ವಕ್ಕನ ಕಥಿ’  ಎಂಬ ಸಾಕ್ಷ್ಯ ಚಿತ್ರಕ್ಕೂ ಎಂಟೆಂಟು ಹಾಡುಗಳನ್ನು ಬರೆದೆ)
ಮನಕ್ಕೆ ತೃಪ್ತಿ ಕೊಡುವ ಇಂಥ ಅನೇಕ ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿರುವಾಗಲೇ ಶ್ಯಾಮರಾಯರಿಗೆ ಅದೇನನ್ನಿಸಿತೋ, ಪತ್ರಿಕೆ ಸಮೇತ ನನ್ನನ್ನು ಬೆಂಗಳೂರಿಗೆ ವರ್ಗಾಯಿಸಿಬಿಟ್ಟರು. ಆ ಅವಧಿಯಂತೂ ನನ್ನ ವೃತ್ತಿ ಜೀವನದಲ್ಲಿ ಮತ್ತೊಂದು ಸತ್ವಪರೀಕ್ಷೆಯ ಕಾಲ.
ಅದು ಸುಮ್ಮನೆ ವರ್ಗಾವಣೆ ಆಗಿರಲಿಲ್ಲ. ಹಾಗಾಗಿದ್ದರೆ ನನ್ನ ಪಾಡಿಗೆ ನಾನು ರಾತೋರಾತ್ರಿ ಹೊರಟು ಬಂದು ಬೆಂಗಳೂರು ಸೇರಬಹುದಿತ್ತು. ಇಡೀ ಪತ್ರಿಕೆಯ ಜವಾಬ್ದಾರಿಯನ್ನು ಶ್ಯಾಮರಾಯರು ನನ್ನ ತಲೆಯ ಮೇಲೆ ಹೊರೆಸಿದ್ದರಿಂದ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಬೆಂಗಳೂರಿಗೆ ಸಾಗಹಾಕುವ ಹೊಣೆ ನನ್ನದೇ ಆಗಿತ್ತು. ಅದರ ಜತೆ ಜತೆಗೇ ಮುಂದಿನ ಸಂಚಿಕೆಯ ಕೆಲಸವೂ ನಡೆಯಬೇಕಿತ್ತು.
ಅಂತೂ ಬೆಂಗಳೂರಿಗೆ ಬಂದೆ ನೋಡಿ. ಶ್ಯಾಮರಾಯರು ಎಲ್ಲಿಲ್ಲದ ಪ್ರೀತಿ ತೋರಿಸಿದರು. ಬಂದ ಹೊಸತರಲ್ಲಿ ನನ್ನನ್ನು ‘ಈಶಾನ್ಯ ರಾಜ್ಯಗಳ ಯಾತ್ರೆ’ಗೂ ಕಳುಹಿಸಿದರು. ಆ ಮೇಲೆ ಎಂದಿನಂತೆ ಶುರುವಾಯಿತು ಅವರ ಚಾಟಿ ಏಟು.

-೦-೦-೦-೦-೦-

ನಾನು ಬೆಂಗಳೂರಲ್ಲಿ ಮತ್ತೆ ಮರಿ ಹಾಕಿದ ಬೆಕ್ಕಿನಂತೆ ಪದೇ ಪದೇ ವಾಸ್ತವ್ಯ ಬದಲಿಸುತ್ತಲೇ ಇರಬೇಕಾಯಿತು. ಆದರೆ, ಆ ‘ಒಂಟಿತನ’ದ ಬೇಸರವನ್ನು ಕಳೆದು ನನ್ನನ್ನು ಕಾಪಾಡಿದ್ದು ನನ್ನ ರಂಗಭೂಮಿಯ ಗೆಳೆಯರು. ಸಿ. ಅಶ್ವಥ್, ನಾಗಾಭರಣ ಮುಂತಾದವರೊಟ್ಟಿಗೆ ಸಂಜೆಗಳು ಚರ್ಚೆ, ಚೇಷ್ಟೆ, ಹರಟೆಗಳಲ್ಲಿ ಕಳೆಯುತ್ತಿದ್ದವು. ಆಗಲೇ ಏನೇನೋ ಹೊಸ ಆಲೋಚನೆಗಳು ಮೊಳೆಯುತ್ತಿದ್ದವು. ನಾನು ‘ನಾಗಮಂಡಲ’ ಚಿತ್ರಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆಯಲು ಕಾರಣವಾದದ್ದು ಇಂಥ ಚರ್ಚೆಗಳೇ.
ಮತ್ತೆ ಸಿನಿಮಾದವರ ಸಹವಾಸ ಮಾಡಿದ್ದೇನೆಂದು ಗೊತ್ತಾದರೆ ಶ್ಯಾಮರಾಯರು ನನ್ನನ್ನು ಮನೆಗೆ ಕಳುಹಿಸಬಹುದೆಂಬ ಭಯವಿದ್ದೇ ಇತ್ತು. ಅದಕ್ಕಾಗಿ ನಾನು ‘ಗೋಪಾಲ್ ಯಾಜ್ಞಿಕ್’ ಆಗಬೇಕಾಯಿತು. ‘ನಾಗಮಂಡಲ’ ಮುಗಿದ ಮೇಲೆ ಕೇಸರಿ ಹರವೂ ಅವರ ‘ಭೂಮಿಗೀತ’ (ಒಂದು ಹಾಡು), ಗಿರೀಶ ಕಾಸರವಳ್ಳಿಯವರ ‘ತಾಯಿಸಾಹೇಬ’ (ಮುಕ್ಕಾಲು ಪಾಲು ಸಂಭಾಷಣೆ) ಚಿತ್ರಗಳಿಗೆ ಕೆಲಸ ಮಾಡಿದ್ದು ಈ ‘ಛದ್ಮನಾಮ’ದಿಂದಲೇ.
ಆ ಸಂದರ್ಭದಲ್ಲೊಮ್ಮೆ ನಮ್ಮ ಕಚೇರಿಗೆ ಬಂದುಬಿಟ್ಟರು ಕಾಸರವಳ್ಳಿ. ನನ್ನೆದುರಿನ ಕುರ್ಚಿಯಲ್ಲಿ ಕುಳಿತು ಅವರು ಮಾತಾಡುತ್ತಿದ್ದಾಗಲೇ ಆಗಮಿಸಿತು ಶ್ಯಾಮರಾಯರ ಸವಾರಿ.
ನನ್ನ ಎದೆ ಹೊಡೆದುಕೊಳ್ಳತೊಡಗಿತು. ಏನೋ ಕಾದಿದೆ ಎಂದುಕೊಳ್ಳುತ್ತಿರುವಂತೆಯೇ ಸ್ವತಃ ಶ್ಯಾಮರಾಯರೇ ನನಗೆ, ”ಕಾಸರವಳ್ಳಿಯವರ ಬಗ್ಗೆ ಒಂದು ಸಂದರ್ಶನ ಲೇಖನವನ್ನು ಬರೆ,” ಎಂದು ಹೇಳಿ ಹೊರಟು ಹೋದರು…!
ಮುಂದೆರಡು ದಿನಗಳ ನಂತರ ಕಚೇರಿಗೆ ಹೋಗುತ್ತಲೇ ನನಗೆ ಶ್ಯಾಮರಾಯರ ಬುಲಾವು. ಹೋದೆ. ಕೂಡೆಂದರು. ಕಾಫಿ ತರಿಸಿದರು. ಪ್ರೀತಿಯಿಂದ ಮಾತಾಡಿದರು. ‘ಕಸ್ತೂರಿ’ಯನ್ನು ಮತ್ತೆ ಹುಬ್ಬಳ್ಳಿಗೆ ಕಳುಹಿಸಲು ನಿರ್ಧರಿಸಿರುವ ವಿಚಾರ ತಿಳಿಸಿದರು. ನಾನು ಒಳಗೊಳಗೇ ಉಬ್ಬುತ್ತಿರುವುದನ್ನು ಕಂಡು ನಗೆ ಮೂಡಿಸಿಕೊಂಡರು. ಅದು ‘ಖತರ್ನಾಕ್ ನಗೆ’.
”ಆದ್ರ, ನೀ ಇಲ್ಲೇ ಇರಬೇಕು…” ಅಂತ ಮಾತನ್ನು ಅರ್ಧಕ್ಕೆ ನಿಲ್ಲಿಸಿದರು.
‘ಯಾಕೆ?’ ಎಂದು ಅವರನ್ನು ಕೇಳುವ ಹಾಗೂ ಇಲ್ಲ… ಒಪ್ಪಿ ತಲೆಯಾಡಿಸುವಂತೆಯೂ ಇಲ್ಲ. ಸುಮ್ಮನುಳಿದುಬಿಟ್ಟೆ. ಅವತ್ತೇ ಸಂಜೆ ಬಂತು ನನ್ನನ್ನು ‘ಕರ್ಮವೀರ’ದ ಇನ್ ಚಾರ್ಜ್ ಮಾಡಿ, ಬೆಂಗಳೂರಲ್ಲೇ ಉಳಿಸಿಕೊಂಡ ಆರ್ಡರು. ತಿಂಗಳಿಗೊಂದು ಪತ್ರಿಕೆ ಮಾಡಿಕೊಂಡು ಆರಾಮಾಗಿ ಇದ್ದ ನನ್ನನ್ನು ಶ್ಯಾಮರಾಯರು ತಿಂಗಳಿಗೆ ನಾಲ್ಕು ಸಂಚಿಕೆಗಳನ್ನು (ಒಮ್ಮೊಮ್ಮೆ ಐದು) ರೂಪಿಸುವ ಧಾವಂತಕ್ಕೆ ದೂಡಿದ್ದರು. ಅಲ್ಲೆಲ್ಲ ಅವರದೇ ಕೊನೆಯ ವಾಕ್ಯ. ನಾವು ಅದನ್ನು ಪರಿಪಾಲಿಸಬೇಕು, ಅಷ್ಟೇ. ನಮ್ಮ ತಲೆಯನ್ನು ಓಡಿಸುವ ಹಾಗೆ ಇಲ್ಲ. ಅವರು ಹೇಗೆ ಬಯಸುತ್ತಾರೋ ಹಾಗೇ ನಡೆಯಬೇಕು. ಹೊಗಳೆಂದರೆ ಹೊಗಳಬೇಕು, ಉಗುಳೆಂದರೆ ಉಗುಳಬೇಕು. ನನ್ನ ಜೊತೆಗೆ ಗಣೇಶ್ ಕಾಸರಗೋಡು ಇದ್ದರು. ಆ ಕಾರಣಕ್ಕೆ ನಾನು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಆ ಸಮಯದಲ್ಲೇ ನನಗೆ ಕರ್ನಾಟಕ ನಾಟಕ ಅಕಾಡೆಮಿ 1998ರ ಪ್ರಶಸ್ತಿ ಘೋಷಿಸಿದ್ದು. ಅದು ಗೊತ್ತಾಗಿ ಶ್ಯಾಮರಾಯರು ನನ್ನ ಟೇಬಲ್ ತನಕ ನಡೆದು ಬಂದರು. ಬೆದರಿದ್ದ ನನ್ನನ್ನು ಬೆನ್ನು ತಟ್ಟಿ ಅಭಿನಂದಿಸಿದರು. ಮತ್ತು ಹೊರಡುವಾಗ, ”ಇನ್ನ ಮ್ಯಾಲಾದ್ರೂ ಸ್ವಲ್ಪ ಆಫೀಸಿನ ಕೆಲಸ ಮಾಡು…” ಅಂತ ಒಂದೇ ಒಂದು ತೀಕ್ಷ್ಣ ಮಾತನ್ನು ಹೇಳಿ ಹೋದರು.
ಮುಂದೆ ಸ್ವಲ್ಪ ದಿನಗಳಲ್ಲೇ ಕೆಲವು ತಿಂಗಳುಗಳ ಮಟ್ಟಿಗಿನ ಶ್ಯಾಮರಾಯರ ಅಮೆರಿಕ ಯಾತ್ರೆ ಶುರುವಾಯಿತು. ಆದರೂ ಅವರದೊಂದು ಕಣ್ಣು ಇಲ್ಲಿ ನಟ್ಟುಕೊಂಡೇ ಇತ್ತು.
ಅವರು ವಾಪಸ್ಸು ಬರುವ ವೇಳೆಗೆ ‘ಕರ್ಮವೀರ’ದ ಸ್ವರೂಪ ತುಸು ಮಟ್ಟಿಗೆ ಬದಲಾಗಿತ್ತು. ಓದುಗರಿಗೆ ಇಷ್ಟವಾಗಿದ್ದರೂ ಶ್ಯಾಮರಾಯರ ಹಸ್ತಕರಿಗೆ ಅದು ಅಪಥ್ಯವೆನಿಸಿತ್ತು. ಅವರಾಗಲೇ ರಾಯರ ಕಿವಿ ಊದಿಯೂ ಆಗಿತ್ತು. ಮೂಗರ್ಜಿಗಳನ್ನು ಬರೆದೂ ಆಗಿತ್ತು.
ಮರಳಿ ಬಂದ ಕೂಡಲೇ ಶ್ಯಾಮರಾಯರು ಮಾಡಿದ ಮೊದಲ ಕೆಲಸವೆಂದರೆ ‘ಕರ್ಮವೀರ’ದಿಂದ ನನ್ನನ್ನು ಕಿತ್ತು ಹುಬ್ಬಳ್ಳಿಗೆ (ವಾರದ ಪುರವಣಿ ವಿಭಾಗಕ್ಕೆ) ವರ್ಗಾಯಿಸಿದ್ದು. ನನಗೆ ಒಂದು ರೀತಿ ರಿಲೀಫು, ಇನ್ನೊಂದು ರೀತಿ ಎದೆಗುದಿ. ಆ ಎರಡೂ ಭಾವಗಳೊಂದಿಗೆ ಮರಳಿ ‘ಗೂಡು’ ಸೇರಿದೆ.
ಆದರೆ, ಹುಬ್ಬಳ್ಳಿಯ ವಾಸ್ತವ್ಯ ಕೆಲವೇ ದಿನಗಳದ್ದಾಗಿತ್ತು. ಹೋಗಿ ಹದಿನೈದೇ ದಿನಕ್ಕೆ ಮತ್ತೆ ಬೆಂಗಳೂರಿಗೆ ವಾಪಸಾಗಬೇಕೆಂಬ ಆರ್ಡರು. ಅಲ್ಲಿ ಹೋದರೆ ”ಗ್ರಾಮಾಂತರ ಸುದ್ದಿ ವಿಭಾಗದಲ್ಲಿ ಕೆಲಸ ಮಾಡು,” ಅಂತ ಅಪ್ಪಣೆ ಕೊಟ್ಟರು ರಾಯರು.
ಅದು ನನಗಿತ್ತ ಶಿಕ್ಷೆಯೋ ನನ್ನ ಸತ್ವಪರೀಕ್ಷೆಯೋ ಒಂದು ಗೊತ್ತಾಗಲಿಲ್ಲ. ಅಷ್ಟೆಲ್ಲ ವರ್ಷ ನಾನು ಕೆಲಸ ಮಾಡಿದ್ದು ಕೇವಲ ನಿಯತಕಾಲಿಕಗಳಲ್ಲಿ. ಸುದ್ದಿ ವಿಭಾಗದ ಕೆಲಸ ನನಗೆ ತೀರ ಹೊಸತು. ಅದರಲ್ಲೂ ಈ ‘ಗ್ರಾಮಾಂತರ ಸುದ್ದಿ ವಿಭಾಗ’ದ ಕೆಲಸವಂತೂ ಇನ್ನೂ ಗುರುತರವಾದದ್ದು. ಬೇರೆ ಬೇರೆ ಜಿಲ್ಲೆಗಳ ಸುದ್ದಿಗಳನ್ನು ಬೇರೆ ಬೇರೆ ಊರುಗಳ ಎಡಿಶನ್ನುಗಳಲ್ಲಿ ಹಾಕಬೇಕು. ನಾನು ಆಗ ‘ಸಹ ಸಂಪಾದಕ’ನಾದ್ದರಿಂದ ಆ ವಿಭಾಗದಲ್ಲಿ ಯಾರೇ ತಪ್ಪು ಮಾಡಿದರೂ ಅದರ ಹೊಣೆ ನನ್ನದೇ. ಸ್ವಲ್ಪ ಎಡವಟ್ಟಾದರೂ ತಲೆದಂಡವೇ. ಇದು ನನ್ನನ್ನು ಬಲಿಪಶುವನ್ನಾಗಿ ಮಾಡಲು ಹೂಡಿದ ಉಪಾಯವೆಂಬುದು ಮನದಟ್ಟಾಗಿ ಹೋಯಿತು.
ಶ್ಯಾಮರಾಯರು ಹಾಗೆಯೆ. ಯಾರ ಮೇಲೆ ಕೊಪವಿದೆಯೋ ಅವರತ್ತ ತಿರುಗಿಯೂ ನೋಡದ ಸ್ವಭಾವ ಅವರದು. ಅಕಸ್ಮಾತ್ ಎದುರಾದಾಗ ಗೌರವದಿಂದ ನಮಸ್ಕರಿಸಿದರೆ ಆ ಆಸಾಮಿ ಮುಖ ತಿರುವಿಕೊಂಡು ಹೋಗಿಬಿಡುತ್ತಿದ್ದರು. ನಮ್ಮ ಸೆಕ್ಷನ್ನಿಗೆ ಬಂದರೂ ಮುಖ ಸಿಂಡರಿಸಿಕೊಂಡೇ ಇರುತ್ತಿದ್ದರು.
ನಾವೆಲ್ಲಾ ”ಸಂಯುಕ್ತ ಕರ್ನಾಟಕ ಅಂದರೇನೇ ಅನಿಶ್ಚಿತತೆಗೆ ಇನ್ನೊಂದು ಹೆಸರು,” ಅಂತ ಚೇಷ್ಟೆಗೆ ಹೇಳುವುದಿತ್ತು. ಆದರೆ ಅದು ಕೇವಲ ಚೇಷ್ಟೆಯಲ್ಲ, ವಾಸ್ತವ ಎಂಬುದು ನಮಗೆ ಮತ್ತೆ ಮತ್ತೆ ಅನುಭವಕ್ಕೆ ಬರುತ್ತಲೇ ಇರುತ್ತಿತ್ತು. ಯಾರು ನನ್ನ ವಿರುದ್ಧ ಶ್ಯಾಮರಾಯ ಕಿವಿಯೂದಿದ್ದರೋ ಅವರೆಲ್ಲ ‘ಇಲ್ಲದ್ದನ್ನು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುವವ’ರೆಂಬ ಸತ್ಯ ರಾಯರಿಗೆ ಗೊತ್ತಾಗಿಹೋಯಿತು. ನನ್ನನ್ನು ಚೇಂಬರಿಗೆ ಕರೆಸಿಕೊಂಡರು.
”ಸುಮ್ಮಸುಮ್ಮನೆ ತೊಂದರೆ ಕೊಟ್ಟೆ ನಿನಗೆ,” ಅಂದರು. ನಾನು ಸುಮ್ಮನಿದ್ದೆ.
”ಯಾರು, ಏನು ಅನ್ನೋದು ಗೊತ್ತಾಗಿದೆ,” ಅಂದರು. ಅದಕ್ಕೂ ನಾನು ಪ್ರತಿಕ್ರಿಯಿಸದೆ ಕೂತೆ.
”ನಿನ್ನ ಅಲ್ಲಿಂದ ಟ್ರಾನ್ಸ್ ಫರ್ ಮಾಡೀನಿ… ಆರಾಮಾಗಿರು,” ಅಂದರು.
ಹೌದು. ಅವರು ನನ್ನನ್ನು ಟ್ರಾನ್ಸ್ ಫರ್ ಮಾಡಿದ್ದರು. ಹುಬ್ಬಳ್ಳಿಗಲ್ಲ, ವಾಪಸ್ ‘ಕರ್ಮವೀರ’ಕ್ಕೇ… ಕೈದಿಯನ್ನು ಅದೇ ಜೈಲಿನ ಇನ್ನೊಂದು ‘ಸೆಲ್’ಗೆ ಕಳುಹಿಸಿದ ಹಾಗಿತ್ತು ಅದು.
ಒಂದು ಸಂಜೆ ಇದ್ದಕ್ಕಿದ್ದ ಹಾಗೆ ಮಾದೇವ ಬಂದ. ನೆನಪಿದೆಯಲ್ಲ, ನಗುಮುಖದ ಮಾದೇವ. ರಾಯರ ಅಚ್ಚುಮೆಚ್ಚಿನ ಮಾದೇವ. ಬಂದವನೇ ನನಗೊಂದು ಕೆಂಪು ಲಕೋಟೆ ಕೊಟ್ಟು ಒಂದೆಡೆ ಸಹಿ ಹಾಕಿಸಿಕೊಂಡ. ಲಕೋಟೆ ಸಾಕಷ್ಟು ದಪ್ಪವೇ ಆಗಿತ್ತು. ನಾಲ್ಕಾರು ಪುಟಗಳಾದರೂ ಇರಬೇಕು.
ಒಡೆದು ಓದಿದೆ. ನನ್ನ ಮೇಲೆ ಆಪಾದನೆಗಳ ದೊಡ್ಡ ಪಟ್ಟಿಯೇ ಅದರಲ್ಲಿತ್ತು. ಜೊತೆಗೆ, ”ಇತ್ತೀಚಿನ ದಿನಗಳಲ್ಲಿ ನೀವು ಆಡಳಿತ ಮಂಡಳಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅದಕ್ಕೆ ಸೂಕ್ತ ಪುರಾವೆಗಳೂ ನಮಗೆ ದೊರೆತಿವೆ. ಇವೆಲ್ಲ ಹಿನ್ನೆಲೆಯಲ್ಲಿ ನಿಮ್ಮನ್ನು ಕೆಲಸದಿಂದ ಯಾಕೆ ತೆಗೆಯಬಾರದು? ಆದರೂ, ಇಷ್ಟೆಲ್ಲಾ ವರ್ಷಗಳ ನಿಮ್ಮ ಸೇವೆಯನ್ನು ಗಮನಿಸಿ ನಿಮಗೆ ಒಂದು ಅವಕಾಶ ಕೊಡಲು ನಿರ್ಧರಿಸಲಾಗಿದೆ. ಏನೆಂದರೆ, ನೀವಾಗಿಯೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಕ್ಕೆ ಹೋದರೆ ನಿಮಗೆ ಸಂಸ್ಥೆಯಿಂದ ಬರಬೇಕಾದ ಎಲ್ಲವನ್ನೂ ಕೂಡಲೇ ನಗದಾಗಿ ನೀಡಲಾಗುವುದು. ಒಂದು ವೇಳೆ ಏಳು ದಿನಗಳೊಳಗಾಗಿ ನೀವು ಇದಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ ನೀವು ಈ ಎಲ್ಲ ಆಪಾದನೆಗಳನ್ನು ಒಪ್ಪಿಕೊಂಡಿದ್ದೀರೆಂದು ಪರಿಭಾವಿಸಿ ನಿಮ್ಮನ್ನು ಡಿಸ್ಮಿಸ್ ಮಾಡಲಾಗುವುದು…”
ನಾನು ಅದನ್ನು ಓದಿ ಸುಮ್ಮನೆ ಬ್ಯಾಗಿನಲ್ಲಿಟ್ಟುಕೊಂಡೆ. ಮರುದಿನವೇ ನಾಲ್ಕೇ ನಾಲ್ಕು ಸಾಲಿನ ರಾಜೀನಾಮೆ ಪತ್ರವನ್ನು ಬರೆದು ಶ್ಯಾಮರಾಯರ ಚೇಂಬರಿಗೆ ಹೋಗಿ ಕೊಟ್ಟೆ. ಅವರು ಅದನ್ನು ನಿರೀಕ್ಷಿಸಿಯೇ ಇದ್ದರು.
ಏಳನೆಯ ದಿನ ಸಂಜೆ. ಅದೇ ಮಾದೇವ, ಅದೇ ನಗೆಯೊಂದಿಗೆ ಇನ್ನೊಂದು ಕೆಂಪು ಲಕೋಟೆ ತಂದು ಕೊಟ್ಟ. ಮುಟ್ಟಿದ್ದಕ್ಕೆ ನನ್ನಿಂದ ಸಹಿ ಹಾಕಿಸಿಕೊಂಡು ಹೋದ. ಆತ ಆ ಕಡೆ ಹೋಗುತ್ತಿದ್ದಂತೆಯೇ, ನನ್ನಿಂದ ಚಾರ್ಜ್ ತೆಗೆದುಕೊಳ್ಳಲು ತುದಿಗಾಲ ಮೇಲೆ ನಿಂತಿದ್ದ ವ್ಯಕ್ತಿ ದೇಶಾವರಿ ನಗೆ ಬೀರುತ್ತ ಒಳಗೆ ಬಂದ.

-೦-೦-೦-೦-೦-

ನಾನು ರಾತ್ರಿ ನನ್ನಾಕೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ತನಗೆ ಮಧ್ಯಾಹ್ನವೇ ವಿಷಯ ಗೊತ್ತಾಗಿದೆ ಎಂದು ಆಕೆ ಹೇಳಿದಾಗ ನನಗೆ ಅಚ್ಚರಿ. ಅದು ಹೇಗೆ ಅಂತ ಕೇಳಿದರೆ, ”ಇಲ್ಲಿ ಸುತ್ತ ಮುತ್ತ ಅದನ್ನೇ ಮಾತಾಡಿಕೊಳ್ಳುತ್ತಿದ್ದಾರೆ,” ಅಂದಳು.
ಕೇವಲ ತನ್ನ ನೌಕರನನ್ನು ಅಷ್ಟೇ ಅಲ್ಲ, ಆತನ ಮನೆಯ ಜನರನ್ನೂ ಅಧೀರರನ್ನಾಗಿಸುವ ಶ್ಯಾಮರಾಯರ ತಂತ್ರ ಇದು ಎಂಬುದು ತಿಳಿದುಹೋಯಿತು.
ಕೆಲಸ ಕಳಕೊಂಡಾಗಿತ್ತು. ಇನ್ನು ಏನಾದರೂ ಮಾಡಲೇಬೇಕು. ಆಗ ಈಗಿನಷ್ಟು ಪತ್ರಿಕೆಗಳೂ ಇರಲಿಲ್ಲ. ಇದ್ದ ಪತ್ರಿಕೆಗಳಲ್ಲೆಲ್ಲ ನಮ್ಮಂಥ ‘ಹಳೆಯ ಎತ್ತು’ಗಳಿಗೆ ಅವಕಾಶವಿರಲಿಲ್ಲ. ಚಾನಲ್ಲುಗಳೂ ಶುರುವಾಗಿರಲಿಲ್ಲ. ಆಗ ಇದ್ದ ಒಂದೇ ಒಂದು ಖಾಸಗಿ ಚಾನಲ್ ಅಂದರೆ ‘ಉದಯ.’
ಆಗ ಥಟ್ಟನೆ ನೆನಪಾದದ್ದು ಗೆಳೆಯ ನಾಗಾಭರಣ. ಆತ ‘ಉದಯ’ ಚಾನಲ್ಲಿಗೆ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದ. ನನ್ನಲ್ಲೊಂದು ಕತೆ ಇತ್ತು. ಅತೀಂದ್ರಿಯ ಶಕ್ತಿಯುಳ್ಳ ವಿಶಿಷ್ಟ ವ್ಯಕ್ತಿಯೊಬ್ಬನ ಕತೆ. ಇಂಗ್ಲಿಷ್ ಮೂಲದಿಂದ ಸಂಗ್ರಹಿಸಿ, ನಾನೇ ಅನುವಾದಿಸಿದ್ದ ಕತೆ. ‘ಕಸ್ತೂರಿ’ಯಲ್ಲಿ 14 ಕಂತುಗಳ ತಿಂಗಳ ಧಾರಾವಾಹಿಯಾಗಿ ಪ್ರಕಟವಾಗಿದ್ದಂಥ ಕತೆ.
ಕತೆಯನ್ನು ಆಲಿಸಿದ ನಾಗಾಭರಣ, ”ಚಿತ್ರಕಥೆ ಮತ್ತು ಸಂಭಾಷಣೆಯ ಬರೆಯುವ ಹೊಣೆ ನಿನ್ನದೇ,” ಅಂತ ಹೇಳಿಬಿಟ್ಟ. ‘ಕಣ್ಣುಗಳು’ ಹೆಸರಿನಲ್ಲಿ ಆ ವಾರದ ಧಾರಾವಾಹಿ 24 ಕಂತುಗಳಲ್ಲಿ ಪ್ರಸಾರ ಕಂಡಿತು.
ಹಾಗೂ ಹೀಗೋ ಮೂರು ತಿಂಗಳು ಕಳೆಯಿತು. ಆದರೆ ಎಷ್ಟು ದಿನ ಅಂತ ನಿರುದ್ಯೋಗಿಯಾಗಿರಲು ಸಾಧ್ಯ? ಮನೆ-ಸಂಸಾರ ಅಂತ ಜವಾಬ್ದಾರಿ ಇತ್ತಲ್ಲ…
ಏನೇನೋ ಸಾಹಸ ಮಾಡಿದರೂ ತಿಂಗಳೂ ಸಂಬಳ ಬರುವ ನೌಕರಿಯೊಂದಿದ್ದರೆ ನಿಶ್ಚಿಂತೆ.
ಅದೇನು ಕಾರಣವೋ, ಶ್ಯಾಮರಾಯರಿಗೆ ನನ್ನ ಮೇಲೆ ಕರುಣೆ ಉಕ್ಕಿತು. ‘ಬಂದು ಭೆಟ್ಟಿಯಾಗು,’ ಅಂತ ಹೇಳಿಕಳಿಸಿದರು. ಅವರ ಮಾತನ್ನು ಶಿರಸಾವಹಿಸಿದೆ.
ಮತ್ತದೇ ಮೊಸಳೆ ಕಣ್ಣೀರು. ಆ ನಂತರ ‘ಸಂಯುಕ್ತ ಕರ್ನಾಟಕ’ದ ವಾರದ ಪುರವಣಿಯ ಇನ್ ಚಾರ್ಜ್ ಅಂತ ಹುಬ್ಬಳ್ಳಿ ಕಚೇರಿಯಲ್ಲಿ ಕೆಲಸ ಮಾಡಲು ಹೇಳಿ, ಮರು ನೇಮಕಾತಿಯ ಆರ್ಡರ್ ಕೊಟ್ಟರು.
1999… ಆ ವರ್ಷ ಕಳೆಯುವುದರೊಳಗಾಗಿ ಏನಾದರೂ ಒಂದು ನಿಟ್ಟು ಮಾಡಿಕೊಳ್ಳಬೇಕು. ಇದು ಸಾಕಷ್ಟು ಯೋಚಿಸಿ ಇಡಬೇಕಾದ ಹೆಜ್ಜೆ. ಮತ್ತೊಂದು ಭದ್ರ ಕೊಂಬೆ ಸಿಕ್ಕ ಮೇಲೆಯೇ ಹಿಡಿದ ಕೊಂಬೆಯನ್ನು ಬಿಡಬೇಕು ಎಂಬ ಬುದ್ಧಿ ಕೋತಿಗೂ ಇರುತ್ತದೆ. ಆ ಸಂದರ್ಭದಲ್ಲಿ ಅಂತ ಕೊಂಬೆಗಳಾವೂ ನನಗೆ ಗೋಚರಿಸಿರಲಿಲ್ಲ.
ಹಾಗಿರುವಾಗ ಒಂದು ಮುಂಜಾವಿನಲ್ಲಿ ಬಗಲಿಗೆ ಹಸಬಿಯನ್ನು ಹಾಕಿಕೊಂಡು ಬಂದರು ನೋಡಿ ಜಯತೀರ್ಥ ಜೋಶಿ. ನನಗಾಗ ಆತ ಯಾಕಾದರೂ ಬಂದನೋ ಮಾರಾಯ ಅನ್ನಿಸದೆ ಇರಲಿಲ್ಲ. ಜೋಶಿ ಆಗ ಬೆಳಗಾವಿ ವಿಭಾಗೀಯ ವಾರ್ತಾಧಿಕಾರಿ. ಏಳು ಜಿಲ್ಲೆಗಳಿಗೆ ಆತನೇ ಮುಖ್ಯಸ್ಥ. ಅಂಥ ಜವಾಬ್ದಾರಿಯ ನಡುವೆಯೇ ಜಯತೀರ್ಥ ಅಲ್ಲಲ್ಲಿ ಹೋಗಿ ತಂಡಗಳಿಗೆ ನಾಟಕಗಳನ್ನು ನಿರ್ದೇಶಿಸುತ್ತಿದ್ದ ದಿನಗಳವು. ನಾನಂತೂ ನಾಟಕದಿಂದ ದೂರವೇ ಉಳಿದು ಐದಾರು ವರ್ಷಗಳಾಗಿತ್ತು. ಕಚೇರಿಯ ನಾಟಕವೇ ದೊಡ್ಡದಾಗಿತ್ತಲ್ಲ…
ಮೊದಲಿನ ಹಾಗೆ ನಾನು ಬಂದವರೊಂದಿಗೆ ಕ್ಯಾಂಟೀನಿಗೆ ಹೋಗುವ ಹಾಗಿರಲಿಲ್ಲ. ಕೂಡಲೇ ಸುದ್ದಿ ಶ್ಯಾಮರಾಯರನ್ನು ತಲಪುತ್ತಿತ್ತು. ಜೋಶಿಗೆ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ವಿವರಿಸಿದೆ. ಸಂಜೆ ಮನೆಗೆ ಬರುವುದಾಗಿ ಹೇಳಿ ಆತ ಜಾಗ ಖಾಲಿ ಮಾಡಿದರು.

-೦-೦-೦-೦-೦-

ಜೋಶಿ ಯಾಕೆ ಬಂದದ್ದು ಅಂತ ನನಗೆ ಚೆನ್ನಾಗಿ ಗೊತ್ತಿತ್ತು. ಆ ಮೊದಲಿನ ನನ್ನ ಮೂರು ತಿಂಗಳ ‘ನಿರುದ್ಯೋಗಪರ್ವ’ದ ಸಂದರ್ಭದಲ್ಲಿ ಒಮ್ಮೆ ಜೋಶಿಯನ್ನು ಕಂಡಿದ್ದೆ. ”ಒಂದು ಹೊಸಾ ನಾಟಕಾ… ನನಗ ಒಂದಿಷ್ಟು ಹಾಡುಗಳನ ಬರದುಕೊಡಬೇಕ್ರೀ,” ಅಂತ ಆಗಲೇ ನಾಟಕದ ಹೆಸರು ಹೇಳಿದ್ದರು ಜೋಶಿ.
ಸವದತ್ತಿಯ ತಂಡಕ್ಕೆ ಮಾಡಿಸಲೆಂದು ಆಗ ಜೋಶಿ ಕೈಗೆತ್ತಿಕೊಂಡಿದ್ದ ನಾಟಕ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ…’ ಅದೊಂದು ಅನುವಾದಿತ ಕೃತಿ.
ಅದರ ಮೂಲ ‘Dilemma of a Sultan’ ಅಂತಲೋ ಏನೋ. ಅರಬ್ ಲೇಖಕ ತೌಫಿಕ್ ಅಲ್ ಹಕೀಮ್ ಬರೆದದ್ದು. ಆತ ಒಬ್ಬ ಪ್ರಮುಖ ಅರಬ್ ನಾಟಕಕಾರ. ಇಜಿಪ್ಟಿನ ಲೇಖಕರಲ್ಲಿ ಆತನಿಗೆ ಬಹುದೊಡ್ಡ ಸ್ಥಾನ. ಆತ ಆಯ್ದುಕೊಳ್ಳುತ್ತಿದ್ದ ವಸ್ತು, ರಚನಾ ಶೈಲಿ ಮತ್ತು ಪ್ರಸ್ತುತೀಕರಣದ ರೀತಿಯೇ ಭಿನ್ನವಾದದ್ದು. ಆತನ ಬದುಕಿನ ಹಿನ್ನೆಲೆಯನ್ನು ಒಂದಿಷ್ಟು ಗಮನಿಸಬೇಕು.

1898ರ ಅಕ್ಟೋಬರ್ 9ರಂದು ಅಲೆಕ್ಸಾಂಡ್ರಿಯಾದಲ್ಲಿ ಜನಿಸಿದ ತೌಫಿಕ್ ಅಲ್ ಹಕೀಮ್. ತಂದೆ ಈಜಿಪ್ಟಿನ ಶ್ರೀಮಂತ ನ್ಯಾಯಾಧೀಶ. ತಾಯಿ ಒಬ್ಬ ಟರ್ಕಿಶ್. ಕೈರೋದಲ್ಲಿ ಕಾನೂನು ಓದಿ, 1925ರಲ್ಲಿ ಪದವಿ ಪಡೆದ. ಮುಂದಿನ ಓದನ್ನು ಪ್ಯಾರಿಸ್ಸಿನಲ್ಲಿ ಪೂರೈಸಿ, ಅಲ್ಲಿಂದ ಮರಳಿದ ಮೇಲೆ ಆತ ಅಲೆಕ್ಸಾಂಡ್ರಿಯಾದಲ್ಲಿ ಡೆಪ್ಯೂಟಿ ಪ್ರಾಸಿಕ್ಯೂಟರ್ ಆಗಿ ಕೆಲಸ ಆರಂಭಿಸಿದ. ಅಲ್ಲಿಯ ‘ಅಖಬಾರ್ ಅಲ್ ಯೋಮ್’ ಎಂಬ ಪತ್ರಿಕೆಯಲ್ಲಿ ಪತ್ರಕರ್ತನಾಗಿಯೂ, ಈಜಿಪ್ಟಿನ ರಾಷ್ಟ್ರೀಯ ಗ್ರಂಥಾಲಯದ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ. ಹೀಗೆ ಕಾನೂನಿನ ಜತೆಜತೆಗೇ ಮುಂದುವರಿಯಿತು ಆತನ ಸಾಹಿತ್ಯದ ನಂಟು. ಬರೆದದ್ದು ಒಟ್ಟು 26 ಕೃತಿಗಳು. ಆ ಪೈಕಿ ಏಳು ನಾಟಕಗಳು. ಉಳಿದವು ಕಾದಂಬರಿಗಳು, ಆಧ್ಯಾತ್ಮಿಕ ಕಥೆಗಳು, ಆಧ್ಯಾತ್ಮಿಕ ಪ್ರಬಂಧಗಳು, ಆತ್ಮಕಥೆ, ಹಾಗೂ ಕೆಲವು ಬೇರೆ ಭಾಷೆಯಿಂದ ಅನುವಾದಿಸಿದ ಕೃತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಆತ ಕೃತಿ ರಚಿಸಿ ಪ್ರಕಟಿಸಿದ್ದರೂ ತೌಫಿಕ್ ಅಲ್ ಹಕೀಮ್ ‘ನಾಟಕಕಾರ’ನೆಂದೇ ಪ್ರಖ್ಯಾತಿ ಪಡೆದ.
ಆದರೆ ಸಮಕಾಲೀನರು ತೌಫಿಕ್ ಅಲ್ ಹಕೀಮನನ್ನು ‘ಸ್ತ್ರೀ ದ್ವೇಷಿ’, ‘ಸ್ತ್ರೀ ವಿರೋಧಿ ಮನೋಭಾವದವ’ (misogynist) ಎಂದೇ ಚಿತ್ರಿಸುತ್ತ ಬಂದರು. ಇದಕ್ಕೆ ಕಾರಣ ತನ್ನ ತರುಣ ವಯದಲ್ಲಿ ಆತ ‘ಸ್ತ್ರೀ ವಿರೋಧಿ ನಿಲುವಿನ’ ಲೇಖನಗಳನ್ನು ಬರೆದದ್ದು ಹಾಗೂ ಸಾಮಾನ್ಯಕ್ಕಿಂತ ಹೆಚ್ಚೆನ್ನಬಹುದಾದಷ್ಟು ಕಾಲದವರೆಗೆ ಬ್ರಹ್ಮಚಾರಿಯಾಗಿಯೇ ಉಳಿದದ್ದು. ಹೀಗಾಗಿ, ತೌಫಿಕ್ ಅಲ್ ಹಕೀಮನಿಗೆ ‘ಅಡೂ ಅಲ್ ಮರಾ’ (‘ಸ್ತ್ರೀ ಶತ್ರು’) ಎಂಬ ಅಡ್ಡ ಹೆಸರು ಅಂಟಿಕೊಂಡಿತು. ಮಧ್ಯ ವಯಸ್ಸು ಮೀರಿದ ಮೇಲೆ ಅಂತೂ ಇಂತೂ ಮದುವೆಯಾದ ತೌಫಿಕ್ ಅಲ್ ಹಕೀಮನಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಜನಿಸಿದರು. 1987ರ ಜುಲೈ 23ರಂದು ನಿಧನ ಹೊಂದಿದ ತೌಫಿಕ್ ಅಲ್ ಹಕೀಮನನ್ನು ಕೊನೆತನಕ ನೋಡಿಕೊಂಡವಳು ಆತನ ಮಗಳೇ.
ಅದೇನೇ ಇರಲಿ, ಅರಬ್ ನಾಟಕ ಸಾಹಿತ್ಯಕ್ಕೆ ಆತನ ಕೊಡುಗೆ ಅನುಪಮವಾದದ್ದು. ಇಂಥ ತೌಫಿಕ್ ಅಲ್ ಹಕೀಮನ ಹೆಸರಿನಲ್ಲಿ ಅಲೆಕ್ಸಾಂಡ್ರಿಯಾದಲ್ಲೊಂದು ರಂಗ ಮಂದಿರ ನಿರ್ಮಿಸಲ್ಪಟ್ಟಿದೆ. ಇದು ಆ ಪ್ರತಿಭಾವಂತನಿಗೆ ಸಂದ ಬಹು ದೊಡ್ಡ ರಾಷ್ಟ್ರ ಮರ್ಯಾದೆ.
ಆತನ ‘Dilemma of a Sultan’ ನಾಟಕವನ್ನು ಕನ್ನಡಕ್ಕೆ ತಂದವರು ಎಂ.ಎಸ್.ಕೆ. ಪ್ರಭು. ಅವರು ಕನ್ನಡದ ಹಿರಿಯ ಕಥೆಗಾರ ಮತ್ತು ನಾಟಕಕಾರ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದ ಅವರ ಪೂರ್ಣ ಹೆಸರು ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು. ಮೈಸೂರಿನವರು (ಜನನ : 1938 ಜುಲೈ 15). ಮಹಾಮೌನಿ. ಸದಾ ಚಿಂತನೆಯಲ್ಲೇ ತೊಡಗಿರುತ್ತಿದ್ದರು. ಅವರು ಧಾರವಾಡ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ. ತಿಂಗಳೆರಡು ತಿಂಗಳಿಗೊಮ್ಮೆಯಾದರೂ ಬಾನುಲಿ ನಾಟಕಗಳಲ್ಲಿ ಭಾಗವಹಿಸಲಿಕ್ಕೆಂದು ಅಲ್ಲಿ ಹೋಗುತ್ತಿದ್ದೆ. ಆಗೆಲ್ಲ ಪ್ರಭು ಅವರನ್ನು ಭೇಟಿಯಾಗದಿದ್ದರೆ ಏನೋ ಕಳಕೊಂಡಂತೆ. ಅವರ ಚೇಂಬರಿಗೆ ಹೋದರೆ ಒಂದು ಆತ್ಮೀಯ ಸ್ವಾಗತ, ಒಂದು ಚಹ ಮತ್ತು ಒಂದು ಸಿಗರೇಟು ಗ್ಯಾರಂಟೀ. ಸ್ವಭಾವತಃ ಅವರು ಮಿತಭಾಷಿ. ಮಾತಾಡಿದರೂ ಮೃದುವಾದ ನಾಲ್ಕೇ ನಾಲ್ಕು ಮಾತು. ಅವರು ಹುಬ್ಬಳ್ಳಿಗೆ ಬಂದರೂ ಅಷ್ಟೇ : ಚಹಾದ ಜೋಡಿ ಚೂಡಾ ಮತ್ತು ಯಾವುದೋ ನಾಟಕ ಇಲ್ಲವೇ ಕಥೆಯ ಬಗ್ಗೆ ಸ್ವಲ್ಪ ಚರ್ಚೆ…
ಆ ಹೊತ್ತಿಗಾಗಲೇ ಅವರ ‘ಬಕ’ ನಾಟಕ ನೋಡಿದ್ದೆ. ಅದು ತುರ್ತು ಪರಿಸ್ಥಿತಿಯನ್ನು ನೆನಪಿಸುವ ಮತ್ತು ವಿಡಂಬಿಸುವ ಸ್ವತಂತ್ರ ನಾಟಕ. ಆ ನಂತರ ಬೆಂಗಳೂರಿನ ‘ರಂಗ ಸಂಪದ’ ತಂಡ ಹುಬ್ಬಳ್ಳಿಯಲ್ಲಿ ಪ್ರದರ್ಶಿಸಿದ ‘ಮಹಾಪ್ರಸ್ಥಾನ’ವಂತೂ ನಮ್ಮನ್ನು ‘ಆ’ ಎಂದು ಬಾಯಿ ತೆರೆದು ಕೂರುವಂತೆ ಮಾಡಿತ್ತು. ಅದು ಯೂಜಿನಿ ಅಯನೆಸ್ಕೋನ ‘ಎಕ್ಸಿಟ್ ದಿ ಕಿಂಗ್’ ನಾಟಕದ ರೂಪಾಂತರ. (ನಿರ್ದೇಶನ : ಸುಪ್ರಸಿದ್ಧ ಧ್ವನಿ ತಜ್ಞ, ವಸ್ತ್ರ ವಿನ್ಯಾಸಕ ಶ್ರೀ ಎಚ್. ವಿ. ವೆಂಕಟಸುಬ್ಬಯ್ಯ). ಇದೇ ನಾಟಕ ಧಾರವಾಡ ಆಕಾಶವಾಣಿಯಲ್ಲಿ ಮುಂದೊಮ್ಮೆ ಬಾನುಲಿಗೆ ಅಳವಡಿಸಲ್ಪಟ್ಟಿತು. ಆದರೆ, ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ದೀರ್ಘ ಕಾಲದ ಅಸ್ವಾಸ್ಥ್ಯದ ಕಾರಣದಿಂದ ಅದರ ಪ್ರಸಾರದ ದಿನ ಮತ್ತೆ ಮತ್ತೆ ಮುಂದೂಡಲ್ಪಡುತ್ತಲೇ ಹೋದ ನೆನಪು ನನಗೆ. ‘ಸಿಸೆರೊ’ ಅವರ ಇನ್ನೊಂದು ನಾಟಕ. ಪ್ರಭು ಬರೆದ ‘ಕಡೇ ಗಲ್ಲಿ ಕಡೇ ಮನೆ…’ ಕಿರು ನಾಟಕವನ್ನು ನಾವು ‘ಕಸ್ತೂರಿ’ಯ ವಿಶೇಷಾಂಕವೊಂದರಲ್ಲಿ ಪ್ರಕಟಿಸಿದೆವು. ಪ್ರಭು ಕನ್ನಡದ ಪ್ರಮುಖ ಕತೆಗಾರರೂ ಹೌದು. ‘ಗರ’, ಬೆತ್ತಲೆ ಅರಸನ ರಾಜರಹಸ್ಯ’, ಮತ್ತು ‘ಮುಖಾಬಿಲೆ’ ಅವರ ಕಥಾ ಸಂಕಲನಗಳು. ಕೆಲವು ಅನುವಾದಿತ ವಿದೇಶೀ ಕಥೆಗಳ ಸಂಕಲನವೂ ಪ್ರಕಟವಾಗಿದೆ.
ಕನ್ನಡದ ಪ್ರಖ್ಯಾತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರ ಆಪ್ತ ಸ್ನೇಹಿತರಲ್ಲೊಬ್ಬರು ಪ್ರಭು. ಇಬ್ಬರಲ್ಲೂ ಎರಡು-ಮೂರು ವರ್ಷಗಳ ವಯಸ್ಸಿನ ಅಂತರ ಇರಬೇಕು. ಡಾ. ಭೈರಪ್ಪ ತಮ್ಮ ಕೃತಿಗಳನ್ನೆಲ್ಲ ಹಸ್ತಪ್ರತಿಗಳ ರೂಪದಲ್ಲೇ ಅವರಿಗೆ ಓದಲು ನೀಡಿ, ಅವರ ಅಭಿಪ್ರಾಯ ಕೇಳುತ್ತಿದ್ದರು. ಅಂಥ ಆತ್ಮೀಯತೆಯ ಮೂರ್ತಿ ಪ್ರಭು ನಮ್ಮನ್ನಗಲಿದಾಗ (ಕ್ರಿ.ಶ. 2000) ಅವರಿಗೆ ಕೇವಲ 62 ವರ್ಷ. ಅದು ಸಾಯುವ ವಯಸ್ಸೇನೂ ಆಗಿರಲಿಲ್ಲ. ಮುಂದೆ ಕ್ರಿ.ಶ. 2001ರಲ್ಲಿ ಪ್ರಕಟವಾದ ತಮ್ಮ ‘ಮಂದ್ರ’ ಕೃತಿಯನ್ನು ಈ ಅಗಲಿದ ಗೆಳೆಯನಿಗೆ ಅರ್ಪಣೆಗೈದ ಡಾ. ಭೈರಪ್ಪ ಅಲ್ಲಿ ಬರೆದ ಸಾಲು ನೋಡಿ – ”ಚಿಕ್ಕವರು. ಸರದಿ ಮುರಿದಿರಿ ಏಕೆ?” (ಸಾವಿನ ಸರದಿ.)
ಇಂಥ ಪ್ರಭು ತುಂಬಾ ಸರಳವಾದ ಶೈಲಿಯಲ್ಲಿ ಈ ನಾಟಕವನ್ನು ಅನುವಾದಿಸಿಕೊಟ್ಟಿದ್ದಾರೆ. ಹೀಗಾಗಿ ಇದು ಅನ್ಯದೇಶೀ ಕಥಾ ವಸ್ತು ಎಂದು ನಮಗನಿಸುವುದೇ ಇಲ್ಲ.

-೦-೦-೦-೦-೦-

ಈ ನಾಟಕಕ್ಕೆ ಎಲ್ಲೆಲ್ಲಿ ಹಾಡುಗಳು ಬೇಕು ಅಂತ ಜೋಶಿ ವಿವರಿಸಿ, ಹಸ್ತಪ್ರತಿಯನ್ನು ಕೊಟ್ಟು ಹೋದರು ನೋಡಿ… ಆ ಮೇಲೆ ಸುಮ್ಮನೆ ನಾಟಕವನ್ನು ಓದತೊಡಗಿದೆ. ಅಚ್ಚರಿ ಎಂದರೆ ಒಮ್ಮೆ ಕೈಗೆತ್ತಿಕೊಂಡವ ಅದನ್ನು ಕೆಳಗಿಟ್ಟದ್ದು ಪೂರ್ತಿ ಓದಿ ಮುಗಿಸಿದ ಮೇಲೆಯೇ. ಗಂಭೀರವಾದ ಅಂಥ ವಸ್ತುವನ್ನೂ ಒಂದು ರೀತಿಯ ವಿಡಂಬನಾತ್ಮಕ ಶೈಲಿಯಲ್ಲಿ ಪ್ರಸ್ತುತಗೊಳಿಸಿರುವ ಕೃತಿಕಾರನ ಬಗ್ಗೆ, ಅನುವಾದಕನ ಬಗ್ಗೆ ಎಲ್ಲಿಲ್ಲದ ಗೌರವ ಮೂಡಿತು.
ಒಂದು ರಾಜ್ಯ. ಅಲ್ಲೊಬ್ಬ ಆರೋಪಿ. ಬೆಳಕಾಗುವ ಮುನ್ನವೇ ಆತನ ತಲೆ ಉರುಳಿಸುವ ಆಜ್ಞೆಯಾಗಿಬಿಟ್ಟಿದೆ. ಆತನ ಅಪರಾಧವಾದರೂ ಏನು? ಅದು ಸಿದ್ಧವಾಗಿದೆಯೆ? ಇಲ್ಲ. ಆದರೂ ಶಿಕ್ಷೆ ಪ್ರಕಟಿಸಲ್ಪಟ್ಟಿದೆ. ಆತ ವಿಚಾರಣೆಗೆ ಒತ್ತಾಯಿಸಿದ್ದಾನೆ. ಆತನ ಅಹವಾಲು ಆ ರಾಜ್ಯದ ಸುಲ್ತಾನರಿಗೆ ತಲಪಿದೆ. ಆ ಬಗ್ಗೆ ಅವರು ಹುಕುಮು ಹೊರಡಿಸಿದ್ದಾರೆ. ಮತ್ತು, ವಿಚಾರಣೆಯ ವೇಳೆಯಲ್ಲಿ ತಾವು ಹಾಜರಿರುವುದಾಗಿ ತಿಳಿಸಿದ್ದಾರೆ. ಕಾಜಿ ವಿಚಾರಣೆ ಶುರುಮಾಡಿದಾಗ ಸುಲ್ತಾನರಿಗೆ ಗೊತ್ತಾಗುವ ವಿಚಾರ ಏನೆಂದರೆ ತಾನು ಒಬ್ಬ ಗುಲಾಮ. ಹಿಂದಿನ ಸುಲ್ತಾನರಿಗೆ ಮಾರಲ್ಪಟ್ಟ ಗುಲಾಮ. ತಂದು ಮಾರಿದಾತ ಈಗ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಯೇ. ಆತ ಹಾಗೆ ಹೇಳಿಕೊಂಡು ತಿರುಗಾಡಿದ್ದೇ ಒಂದು ‘ಅಪರಾಧ.’
ಸುಲ್ತಾನನಿಗೆ ದಿಗ್ಭ್ರಮೆ. ಸುಲ್ತಾನನಾದರೂ ತಾನಿನ್ನೂ ಗುಲಾಮಗಿರಿಯಿಂದ ಮುಕ್ತನಾಗದ ವ್ಯಕ್ತಿ. ಹಾಗಿದ್ದರೆ ಮೊದಲು ಮುಕ್ತನಾಗಬೇಕು. ಅದಕ್ಕೇನು ಮಾಡಬೇಕು ಅಂತ ಕಾಜಿಗೆ ಕೇಳಿದರೆ ಆತ, ”ಧಾರ್ಮಿಕ ಕಾನೂನಿನ ದೃಷ್ಟಿಯಲ್ಲಿ ತಾವು ಒಬ್ಬ ಗುಲಾಮ. ಕಾನೂನಿನ ಪ್ರಕಾರ ಗುಲಾಮ ಅಂದ್ರೆ ಒಂದು ವಸ್ತು ; ಒಂದು ಚರ ಸ್ವತ್ತು. ತಮ್ಮ ಬದುಕು ಸಾವುಗಳ ಮೇಲೆ ಸರ್ವಾಧಿಕಾರವಿದ್ದ ಮರ್ಹೂಮ್ ಸುಲ್ತಾನರು ತಮ್ಮನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ತಾವಿನ್ನೂ ಒಂದು ಸ್ವತ್ತು. ಚರ ಸ್ವತ್ತು. ಬೇರೆ ಪ್ರಜೆಗಳಿಗಿರೋ ಸಾಮಾನ್ಯವಾದ ವ್ಯಾವಹಾರಿಕ ಸ್ವಾತಂತ್ರ್ಯ ಕೂಡ ತಮಗಿಲ್ಲ…” ಎನ್ನುತ್ತಾನೆ.
ಹಾಗಿದ್ದರೆ ತನ್ನ ಬಿಡುಗಡೆ ಹೇಗೆ? ಎಂಬುದೇ ಸುಲ್ತಾನನೆದುರು ಇರುವ ದೊಡ್ಡ ಪ್ರಶ್ನೆ. ಕಾನೂನಿನ ಪ್ರಕಾರ, ಸರಕಾರದ ಚರ ಸ್ವತ್ತಾಗಿರುವ ಗುಲಾಮನನ್ನು ಹರಾಜು ಹಾಕಬೇಕು. ಮತ್ತು, ಹರಾಜಿನಲ್ಲಿ ಆತನನ್ನು ಖರೀದಿಸಿದ ವ್ಯಕ್ತಿಗೆ ಮಾತ್ರ ಗುಲಾಮನನ್ನು ಬಿಡುಗಡೆ ಮಾಡುವ ಹಕ್ಕು ಇರುವುದು…

ಒಂದು ಕ್ಷಣ ಆ ಗುಲಾಮೀ ಸುಲ್ತಾನನನ್ನು ಕಣ್ಣೆದುರು ತಂದುಕೊಂಡೆ.
ನನ್ನ ಸ್ಥಿತಿಗೂ ಆ ಸುಲ್ತಾನನ ಸ್ಥಿತಿಗೂ ಬಹಳ ಅಂತರವೇನಿಲ್ಲ ಅನಿಸಿತು. ಪಾಡೇ ಹಾಗಿರುವಾಗ ಇನ್ನು ಹಾಡು ಹುಟ್ಟುವುದಾದರೂ ಹೇಗೆ? ಮತ್ತೆ ಮತ್ತೆ ನನಗೆ ನನ್ನ ಬಿಡುಗಡೆಯದೇ ಯೋಚನೆ. ಆದರೆ ಬಿಡಿಸಿಕೊಂಡಷ್ಟೂ ಬಂಧನ ಬಿಗಿಯಾಗುತ್ತಿತ್ತು.
ಹೌದು. ಆಗಲೇ ವಿಜಯ ಸಂಕೇಶ್ವರ್ ‘ವಿಜಯ ಕರ್ನಾಟಕ’ ಪತ್ರಿಕೆ ಶುರುಮಾಡುವ ಭರಾಟೆಯಲ್ಲಿದ್ದರು. ಎಲ್ಲ ಪತ್ರಿಕೆಗಳ ಅನುಭವೀ ಕೈಗಳೂ ಸಂಕೇಶ್ವರರ ಎದುರು ಮುಗಿದುಕೊಂಡೇ ನಿಲ್ಲತೊಡಗಿದವು. ತಮ್ಮ ಆಳುಗಳು ಆ ಪಾಳೆಯವನ್ನೆಲ್ಲಿ ಸೇರಿಬಿಡುತ್ತಾರೋ ಎಂಬ ಗುಮಾನಿ ಶ್ಯಾಮರಾಯರಿಗೆ. ಹಗಲಿರುಳು ತಮ್ಮ ಆಳುಗಳ ಮೇಲೆ ನಿಗಾ ಇಡಿಸಿದರು. ಸಂಕೇಶ್ವರರ ಮನೆಯ ಬಳಿ ಒಂದಿಬ್ಬರನ್ನು ಸ್ಥಾಪಿಸಿದರು. ಆದರೂ ಧೈರ್ಯವಿದ್ದವರು ಬೇಡಿಗಳನ್ನು ಕಳಚಿಕೊಂಡು ನುಗ್ಗಿದರು. ಗಂಟೆ ಗಂಟೆಗೆ ಹೊಸ ಹೊಸ ಬುಲಿಟಿನ್ನು : ”ಇವತ್ತು ಇವರು ಸೇರಿದರಂತೆ, ನಾಳೆ ಅವರು ಸೇರಿಕೊಳ್ಳುವವರಿದ್ದಾರಂತೆ…” ಅಂತೆ ಕಂತೆಗಳದ್ದೇ ನಾಟಕ.
ಅಂಥದರಲ್ಲಿ ಜಯತೀರ್ಥ ಒಂದು ರಾತ್ರಿ ನನ್ನ ಮನೆಗೆ ತನ್ನ ಹುಡುಗನೊಬ್ಬನನ್ನು ಅಟ್ಟಿದರು. ನಾನು ಪರಿಸ್ಥಿತಿಯನ್ನು ವಿವರಿಸಿ ಒಂದು ದೀರ್ಘ ಕಾಗದವನ್ನು ಬರೆದು ಕವರಿನಲ್ಲಿಟ್ಟು ಆಗಂತುಕನ ಕೈಯ್ಯಲ್ಲಿಟ್ಟೆ.
ಅದಾಗಿ ಎರಡು ದಿನಕ್ಕೆ ಗುಲ್ಬರ್ಗದಲ್ಲಿ ‘ಸಂಯುಕ್ತ ಕರ್ನಾಟಕ’ದ ಆವೃತ್ತಿ ಆರಂಭೋತ್ಸವ (1999 ನವೆಂಬರ್ 24). ಶ್ಯಾಮರಾಯರು ನನ್ನನ್ನೂ ಅಲ್ಲಿಗೆ ಬರಹೇಳಿದ್ದರು. ದೊರೆಯ ಅಪ್ಪಣೆ. ಗುಲ್ಬರ್ಗದಲ್ಲಿ ಅವರೆದುರು ನಿಂತೆ. ಮಾತನಾಡಲಿಲ್ಲ ಆಸಾಮಿ. ಮುಖ ಬಿಗಿದುಕೊಂಡೇ ಇದ್ದರು. ಸಂಜೆಯವರೆಗೂ ಅವರ ಕಣ್ಣಿನ ಬೆಂಕಿ ನನ್ನನ್ನು ಸಾಕಷ್ಟು ಸುಟ್ಟಿತ್ತು. ಸಂಜೆ ಹುಬ್ಬಳ್ಳಿಗೆ ವಾಪಸಾಗಬೇಕು. ಹೋಗಿ ನಮಸ್ಕರಿಸಿದೆ. ”ಮತ್ತ, ನೀ ಯಾವಾಗಪಾ ಸಂಕೇಶ್ವರನ ಪೇಪರ್ ಸೇರೂದು? ಈಗs ಹೇಳಿಬಿಡು…” ಅಂತ ನಗೆಚಾಟಿಯ ಏಟು ಕೊಟ್ಟರು. ನಾನು ನಕ್ಕು ಸುಮ್ಮನಾದೆ.
ಅಲ್ಲಿಂದ ಬಂದ ಮೇಲೆ, ನನ್ನ ಸುತ್ತಲೂ ಅಷ್ಟೇ ಅಲ್ಲ, ಮನೆಯ ಅಕ್ಕಪಕ್ಕದಲ್ಲೇ ನನ್ನ ಮೇಲೆ ನಟ್ಟಿರುವ ‘ಕಣ್ಣು’ಗಳಿವೆ ಎಂದು ಗೊತ್ತಾದದ್ದು.
ಮುಂದಿನ ಎಂಟತ್ತು ದಿನಗಳಲ್ಲಿ ಸಾಕಷ್ಟು ಜನ ರಾಜೀನಾಮೆ ಕೊಟ್ಟು ‘ವಿಜಯ ಯಾತ್ರೆ’ ಶುರು ಮಾಡಿದರು.
ಅದೊಂದು ರಾತ್ರಿ ‘ನಾನಿನ್ನು ಇಲ್ಲಿಯೇ ಉಳಿದರೆ, ಬಿಡುಗಡೆ ಇಲ್ಲದ ಆ ಗುಲಾಮಿ ಸುಲ್ತಾನನ ಹಾಗೆ ಒದ್ದಾಡುತ್ತಲೇ ಇರಬೇಕಾಗುತ್ತದೆ,’ ಅಂತ ಮತ್ತೆ ಮತ್ತೆ ಅನಿಸತೊಡಗಿತು. ಅದು 1999ರ ಡಿಸೆಂಬರ್ 9ನೆಯ ತಾರೀಖು. ಬೆಳಿಗ್ಗೆದ್ದವನೆ ಮಾಡಿದ ಮೊದಲ ಕೆಲಸವೆಂದರೆ ರಾಜೀನಾಮೆ ಪತ್ರವೊಂದನ್ನು ಬರೆದು ಮಗನ ಕೈಯಲ್ಲಿ ಕಚೇರಿಗೆ ಕಳಿಸಿದ್ದು.
ಮತ್ತು, ಅಂದೇ ಸಂಜೆ ಹೈದರಾಬಾದಿನತ್ತ ‘ಸ್ವಾತಂತ್ರ್ಯ ಯಾತ್ರೆ’ ಹೊರಟದ್ದು.

-೦-೦-೦-೦-೦-

ಇಲ್ಲಿಗೆ ಸುಮ್ಮನೆ ನೆನಪುಗಳ ಒಂದು ಹಂತವನ್ನು ಮುಗಿಸುತ್ತಿದ್ದೇನೆ. ಇದರಲ್ಲಿ ಮುಖ್ಯವಾಗಿ ದಾಖಲಾದದ್ದು ರಂಗಭೂಮಿಯ ನೆನಪುಗಳು. ಇವಕ್ಕೆನೂ ಅಂಥ ಮಹತ್ವವಿದೆ ಎಂಬ ಭಾವನೆ ನನ್ನದಲ್ಲ. ಗೆಳೆಯ ಜಿ.ಎನ್. ಮೋಹನ್ ಒತ್ತಾಯಿಸದಿದ್ದರೆ ಇವನ್ನು ಒಂದೆಡೆ ದಾಖಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಇವನ್ನೆಲ್ಲ ಕಳೆದ ಹತ್ತು ತಿಂಗಳುಗಳಿಂದ ನೀವೆಲ್ಲ ಓದಿ ಸಹಕರಿಸುತ್ತಲೇ ಬಂದಿದ್ದೀರಿ. ಮೆಚ್ಚಿ ಬೆನ್ನು ತಟ್ಟುತ್ತಲೇ ಬಂದಿದ್ದೀರಿ. ಅದಕ್ಕಾಗಿ ಧನ್ಯವಾದಗಳು.
ಇನ್ನೂ ಇಲ್ಲಿ ಬರೆಯಬೇಕಾದ ವಿಷಯಗಳು ಸಾಕಷ್ಟಿವೆ. ‘ಆಕಾಶವಾಣಿ ನೆನಪುಗಳು’, ‘ವೃತ್ತಿ ರಂಗಭೂಮಿಯ ನೆನಪುಗಳು’, ‘ಮಹಾನ್ ನಟರೊಂದಿಗಿನ ನೆನಪುಗಳು,’ ಮತ್ತು ‘ಸಾಹಿತಿಗಳೊಂದಿಗಿನ ನೆನಪುಗಳು’…
ಮುಂದೆಂದಾದರೂ ಸಾಧ್ಯವಾದರೆ ಅವನ್ನೂ ಬರೆದೇನು…
ನಮಸ್ಕಾರ.
 

‍ಲೇಖಕರು G

May 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

25 ಪ್ರತಿಕ್ರಿಯೆಗಳು

  1. ಮಂಜುಳಾ ಬಬಲಾದಿ

    ಅನುಭವಗಳ ಮಹಾಪೂರವನ್ನು ರಸವತ್ತಾಗಿ ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಕ್ಕೆ ಅನಂತಾನಂತ ನಮನಗಳು. ಇನ್ನೂ ನಮೂನೆ-ನಮೂನೆ ನೆನಪುಗಳ ಬುತ್ತಿ ನಿಮ್ಮಲ್ಲಿದೆ ಅಂತ ಹೇಳಿ ಆಸೆ ತೋರಿಸಿದ್ದೀರಿ.. ಹೀಗಾಗಿ ಬೇಜಾರಿಲ್ಲ. ಹೊಸ ಅಂಕಣಕ್ಕೆ ಕಾಯುವಂತೆ ಮಾಡಿದ್ದೀರಿ.. ನಿಮ್ಮ ನೆನಪುಗಳನ್ನು ಹಂಚಿಕೊಂಡ ನಮ್ಮಲ್ಲೂ ಏನೋ ಒಂದು ಧನ್ಯತಾ ಭಾವ 🙂

    ಪ್ರತಿಕ್ರಿಯೆ
  2. Ahalya Ballal

    ಈವರೆಗೆ ನಮ್ಮಲ್ಲಿ ಅನೇಕರಿಗೆ ಗೊತ್ತೇ ಇರದ ರಂಗದ ಹಲವು ಮೂಲೆಗಳ ಮೇಲೆ spotlight ಬೆಳಕು ಚೆಲ್ಲುವಂತೆ ಮಾಡಿದ ಲೈಟಿಂಗ್ ವಿನ್ಯಾಸಕ ಜಿ ಎನ್ ಮೋಹನ್ ಸರ್ ಅವರಿಗೂ ಗೋವಾ ಅವರಿಗೂ ಕರತಾಡನ !
    ಇನ್ನಾ ಶೋ ಮುಗಿದಿಲ್ಲ ಅಂದ್ರಲ್ಲ….. ಲೈನ್ ಬಜಾರದ ಪೇಡೆ ಇನ್ ಮುಂದೆನೂ ಸಿಗ್ತಾವು ಅನ್ನೋ ಖುಶಿ ಸಮಾಧಾನದಿಂದ ನಾವು ಮನಿಗ್ ಹೊಂಟೀವ್ ನೋಡ್ರೀ… :):)

    ಪ್ರತಿಕ್ರಿಯೆ
  3. umesh desai

    ನೆನಪಿನ ದೋಣಿ ಮೊಗೆಮೊಗೆದು ಉಣಸತಿದ್ರಿ…
    ಆ ಅನುಭವದಾಗ ಮಿಂದಿದ್ದು ಖುಷಿ ಆಗೇದ ಗುರುಗಳ…

    ಪ್ರತಿಕ್ರಿಯೆ
  4. ಮಹದೇವ ಹಡಪದ

    ಸಾಧ್ಯವಾದರೆ ಅಲ್ಲ ಸಾರ್ ಸಾಧ್ಯಂತ ಮತ್ತ ನೆನಪಿಗಿಳಿದು ಬರೀರಿ

    ಪ್ರತಿಕ್ರಿಯೆ
  5. Atmananda

    Sir.. neev bardidda ella lekhanagalu nannalli copy aagive! odiddanne innodsaari oduvaaga kooda hosadenusutte! sir… innoo bareeri!

    ಪ್ರತಿಕ್ರಿಯೆ
  6. padmapani

    ಒಂದು ಕಾಲಘಟ್ಟದ ಘಟನಾವಳಿಗಳನ್ನು ನಿಮ್ಮ ಬರಹಗಳ ಟೈಮ್ ಮಷೀನ್ ನಲ್ಲಿ ಕುಳಿತು ಸಂಪೂರ್ಣವಾಗಿ ವೀಕ್ಷಿಸಿ ಬಂದಂತಾಯ್ತುಂಉನ್ದಿನ ಬರಹಗಳಿಗೆ ಕಾಯ್ತಾ ಇದೀವಿ,ಮರೆಯದಿರಿ

    ಪ್ರತಿಕ್ರಿಯೆ
  7. shrikant prabhu

    ಒಂದು ಕ್ಷಣ ರಾಮಚಂದ್ರ ಶರ್ಮಾ ಅವರ ಫೋಟೋ ಏನೋ ಅಂದು ಕೊಂಡೆ.(ತೌಫಿಕ್ ಅಲ್ ಹಕೀಮ್). ನಿಮ್ಮ ಲೇಖನಗಳು ಕೂಡಾ ಹಾಗೇನೇ ಒಂದಕ್ಕೆ ತಳಿಕೆ ಹಾಕಿ ಇನ್ನೊಂದು ಅನ್ನುವ ಹಾಗೆ ಇದುವರೆಗೆ ಏನೆಲ್ಲ ನೆನಪಿಸುತ್ತ ಬಂದಿವೆ. ಧನ್ಯವಾದಗಳು. ಲಗೂನ ವಾಪಸ್ ಬರ್ರಿ.ಕಾಯ್ತೀವಿ.

    ಪ್ರತಿಕ್ರಿಯೆ
  8. ಅನಿತಾ ನರೇಶ್

    nimma open jail na bagge odi achchariyaayitu.. sundaravaagi sihi kahi nenapugalannu ponisiddeeri..

    ಪ್ರತಿಕ್ರಿಯೆ
  9. Dr. Azad Ismail Saheb

    ಗೋಪಾಲಣ್ಣ, ಗತ ನೆನಪುಗಳ ರಸದೌತಣ ನೀಡಿದ್ದೀರಿ. ವಾಸ್ತವಗಳ ಹಿಂದಿನ ಅನುಭವಗಳ ಮತ್ತು ನವಿರು ಹಾಸ್ಯಲೇಪನದ ನಿಮ್ಮ ಬರವಣಿಗೆಯ ಸ್ವಾದ ಈ ಕೆಲ ದಿನಗಳಲ್ಲೇ ನಾನೂ ಕಂಡಿದ್ದು… ಧನ್ಯ ಫೇಸ್ಬುಕ್, ಧನ್ಯ ಬ್ಲಾಗ್ ಲೋಕ ನಿಮ್ಮಂತಹವರನ್ನು ನಮ್ಮಂತಹ ನವ-ಸೀಖಿಯಾಗಳಿಗೆ ಪರಿಚಯಿಸಿದ್ದು. ಘಟಾನು ಘಟಿಗಳ ಒಡನಾಟದಲ್ಲಿ ಮಿದ್ದು ಬಂದಿರುವ ನಿಮ್ಮ ಅನುಭಾಮೃತ ಸಾರ ಇನ್ನೂ ಮುಂದುವರೆಯಲಿ..ನಿಮ್ಮ ಅನುಭವಗಳ ಮೂಲಕ ಕಲಿಕೆಯ ಭಾಗ್ಯ ನಮ್ಮದಾಗಲಿ ಎಂದೇ ಆಶಿಸುತ್ತೇನೆ. ತೌಫೀಕ್-ಅಲ್-ಹಕೀಮ್ ರವರ ಬಗ್ಗೆ ಒಮ್ಮೆ ನನ್ನ ಜೊತೆ ಚಾಟಲ್ಲಿ ಕೇಳಿದಾಗ ವಿಷಯ ಗಹನತೆ ಅರಿವಿರಲಿಲ್ಲ…ಸುಂದರ ಮತ್ತು ಅಮೂಲ್ಯ ಪ್ರಯತ್ನ. ನಾಟಕ -ಕೃತಿ ಬಿಡುಗಡೆಯಾಗಿದೆಯೇ ಆಗಿದ್ದರೆ ಈ ಸಲ ಬಂದಾಗ ಕೊಳ್ಳುತ್ತೇನೆ ಆಗಿರದಿದ್ದರೆ ಕಾಯುತ್ತೇನೆ. ಅಂದಹಾಗೆ “ಡ” ಪದ ಅರಬಿಯಲ್ಲಿಲ್ಲ… ಅದು-ಶತೃ, ವೈರಿ ಅಂತ ಅರ್ಥ. ಮಾನವನ ವಿಷಯಾಸಕ್ತಿ, ಧನದಾಹ ಇವುಗಳನ್ನು ಖುರಾನಿನಲ್ಲಿ “ಅದೂ-ಅನ್-ಮುಬೀನ್” ಅಂದರೆ ಪರಮ-ಪ್ರಧಾನ ವೈರಿ ಎಂದು ಬಣ್ಣಿಸಲಾಗಿದೆ.
    ನಿಮ್ಮ ಮುಂದುವರಿದ ಲೇಖನಗಳಿಗೆ ಕಾಯುತ್ತೇವೆ

    ಪ್ರತಿಕ್ರಿಯೆ
  10. ಉದಯಕುಮಾರ್ ಹಬ್ಬು

    ಶ್ಯಾಮರಾಯರ ಕುರಿತಾಗಿ ಒಂದಿಷ್ಟು ಬೇಸರವಾಯಿತು. ಇಂತಹ ಹಿತ್ತಾಳೆ ಕಿವಿಯವರು ಯಾವುದೇ ರಂಗದಲ್ಲಿದ್ದರೂ ಆ ಕ್ಷೇತ್ರ ಹಾಳುಸುರಿದಂತೆಯೇ ಸರಿ! ಏನೇ ಆಗಲಿ ಗೋಪಾಲ ವಾಜಪೇಯಿಯವರ ನೆನಪುಗಳು ನಮಗೆಲ್ಲ ರಸದೌತಣ ಮತ್ತು ಒಂದಿಷ್ಟು ಜ್ನಾನದ ಶೇಖರಣೆ ಎಂದರೆ ಅತಿಶಯೋಕ್ತಿಯಲ್ಲ. ದಯವಿಟ್ಟು ವಾಜಪೇಯಿಯವರು ಇನ್ನಷ್ಟು ಬರೆಯಬೇಕು. ಗುಲಾಮಸುಲ್ತಾನನ ನಾಟಕದ ಕತೆಯಾಗಲಿ, ಭೈರಪ್ಪ ಮತ್ತು ಪ್ರಭುಶಂಕರರ ನಡುವಿನ ಮಿತ್ರತ್ವವಾಗಲಿ ಅತಿ ರಂಜನೀಯವಾಗಿ ಮೂಡಿಬಂದಿದೆ. ಗೋಪಾಲರಿಗೆ ಕೃತಜ್ನತೆಗಳು. ಉದಯಕುಮಾರ ಹಬ್ಬು, ಕಿನ್ನಿಗೋಳಿ

    ಪ್ರತಿಕ್ರಿಯೆ
  11. ಸುದರ್ಶನ್.ಎನ್

    ನಿಮ್ಮ ಎಲ್ಲ ನೆನಪುಗಳ ಹೊಳೆಯನ್ನು ಹರಿಯಬಿಡಿ… ಎದುರು ನೋಡುತ್ತಿದ್ದೇವೆ.

    ಪ್ರತಿಕ್ರಿಯೆ
  12. shadakshari.Tarabenahalli

    . ‘ಆಕಾಶವಾಣಿ ನೆನಪುಗಳು’, ‘ವೃತ್ತಿ ರಂಗಭೂಮಿಯ ನೆನಪುಗಳು’, ‘ಮಹಾನ್ ನಟರೊಂದಿಗಿನ ನೆನಪುಗಳು,’ ಮತ್ತು ‘ಸಾಹಿತಿಗಳೊಂದಿಗಿನ ನೆನಪುಗಳು’…
    ಮುಂದೆಂದಾದರೂ ಸಾಧ್ಯವಾದರೆ ಅವನ್ನೂ ಬರೆದೇನು…
    PLZ do write here sir…
    i will wait for them…

    ಪ್ರತಿಕ್ರಿಯೆ
  13. Gopaal Wajapeyi

    Thanks ಉದಯಕುಮಾರ್ ಹಬ್ಬು. Naanilli ಭೈರಪ್ಪ ಮತ್ತು ಪ್ರಭುಶಂಕರರ ನಡುವಿನ ಮಿತ್ರತ್ವ kuritu heLilla. ಅದು ‘ಭೈರಪ್ಪ ಮತ್ತು MSK ಪ್ರಭು ನಡುವಿನ ಮಿತ್ರತ್ವ.’

    ಪ್ರತಿಕ್ರಿಯೆ
  14. RENUKA NIDAGUNDI

    ಓದಿ ಮುಗಿಸುವವರೆಗೆ ಆ ಎಲ್ಲ ಘಟನಾವಳಿಗಳೂ ಕಣ್ನ ಮುಂದೆ ಹಾದುಹೋದಂತಾದವು. ಆಕಾಶವಾಣಿ ನೆನಪುಗಳು ಆದಷ್ಟು ಬೇಗನೇ ಮೂಡಿಬರಲಿ…
    ರೇಣುಕಾ ನಿಡಗುಂದಿ
    ನವದೆಹಲಿ

    ಪ್ರತಿಕ್ರಿಯೆ
  15. Sudha ChidanandaGowda

    ನಿಜಕ್ಕು ಮುಗಿಸಿದಿರಲ್ಲ ಸರ್….
    ಇರಲಿ. ಒಂದರ ಮುಕ್ತಾಯ ಇನ್ನೊಂದರ ಆರಂಭ ಎನ್ನುವಂತೆಯೆ ಮುಗಿಸಿ, ನಿರೀಕ್ಷಿಸಲು ಹಚ್ಚಿದ್ದೀರಿ.
    ಅಪರೂಪದ ಘಟನೆಗಳನ್ನು ಭಾಷೆಯ ಬನಿ ಒಸರುವಂತೆ ಓದಲು ಕೊಟ್ಟಿದ್ದೀರಿ.
    ಎಷ್ಟೊಂದು ಶ್ರೀಮಂತರು ಎನಿಸಿತು ನಿಮ್ಮ ವೃತ್ತಿಜೀವನದ ಅನುಭವಗಳನ್ನು ಓದುವಾಗ…
    ಬದುಕು ಸುಂದರವಾಗಿಸುವುದು ಸಂಬಳವಲ್ಲ, ನೌಕರಿಯಲ್ಲ,..ಸ್ಪಂದಿಸುವ ಮನಸು, ಸಂವೇದನೆಯ ಹುಡುಕಾಟ ನಿಮ್ಮನ್ನು ಜೀವಂತವಾಗಿರಿಸಿವೆ.
    ಓದಿದವರನ್ನು ಪರೋಕ್ಷವಾಗಿ ಜಾಗೃತಗೊಳಿಸುವಂತಿವೆ…
    ಅಷ್ಟೆಲ್ಲದರ ನಡುವೆಯೂ ಶಾಮರಾಯರ ಕುರಿತು ಕಹಿಯಾಗಿ ಎಲ್ಲೂ ಶಪಿಸಿಲ್ಲ
    ಬದಲಿಗೆ ಸ್ನೇಹಿತರನ್ನು, ಸಹ ಸಮಾನಾಸಕ್ತರನ್ನು ನೆನಪಿಸಿಕೊಳ್ಳುವತ್ತಲೇ ಕೇಂದ್ರೀಕೃತಗೊಳಿಸಿಕೊಂಡಿದ್ದು ತುಂಬ ಮೆಚ್ಚುಗೆಯಾಯ್ತು.
    ಬೇಗ ಮರಳಿ- ಇನ್ನೊಂದು ನೆನಪಿನ ಗುಚ್ಛದೊಂದಿಗೆ.
    all the best sir.

    ಪ್ರತಿಕ್ರಿಯೆ
  16. subrahmanya

    ಒಂದು ವಾರನೂ ತಪ್ಪದಂತೆ ಓದಿದ ಲೇಖನ ಮಾಲೆ ಇದು. ನಿಮ್ಮ ನೆನಪುಗಳು ನಮಗೆ ದಾರಿದೀಪ ಸರ್. ಆಕಾಶವಾಣಿಯ ನೆನಪುಗಳಿಗೊಸ್ಕರ ಕಾಯುತ್ತಿದ್ದೇವೆ, ಜಾಸ್ತಿ ಕಾಯಿಸಬೇಡಿ .

    ಪ್ರತಿಕ್ರಿಯೆ
  17. Gopaal Wajapeyi

    ನಿಮ್ಮ ಅಭಿಮಾನಕ್ಕೆ ಥ್ಯಾಂಕ್ಸೂರೀ ಸುಬ್ರಮಣ್ಯ… ಸ್ವಲ್ಪ ಉಸಿರಾಡ್ತೀನ್ರಪ್ಪಾ… 🙂
    ಇಷ್ಟು ದಿನ ಎಲ್ಲ ಹೆಳವನಾಗಿ, ಕಿವುಡನಾಗಿ, ಮೂಗನಾಗಿ ಉಸಿರು ಬಿಗಿ ಹಿಡಿದು ಕೂತು ಬರೆದಿದ್ದೀನಿ. ವಿವರಗಳೊಳಗೆ ‘ಜ್ವಾಕಿ’ ತಪ್ಪದ ಹಾಂಗ, ಬರಹದೊಳಗೆ ‘ಜೋಲಿ’ ಹೋಗದ ಹಾಂಗ, ನನ್ನನ್ನೇ ನಾನು ಸಂಬಾಳಿಸಿಕೊಂಡು ಡೆಡ್ ಲೈನಿಗೆ ಸರಿಯಾಗಿ ಬರಹವನ್ನ ‘ಅವಧಿ’ಯ ಅಂಗಳಕ್ಕೆ ತಲಪಿಸಿದ್ದೀನಿ…
    ಅದಕ್ಕೇ ಈಗೊಂದಿಷ್ಟು ಬಯಲಿಗೆ ಬಿದ್ದು, ಕೈಕಾಲು ಜಾಡಿಸಿ, ಮೈ ಮುರಿದು, ಬೇರೆ ನೀರು ಕುಡಿದು, ಬೇರೆ ತಿನಿಸು ಸವಿದು ಗಟ್ಟಿಯಾಗುತ್ತೀನಿ. ಹಾಗೆಯೇ, ಮೊದಲು ಬಾಕಿ ಉಳಿದಿರುವ ಬೇರೆ ಕಳವು ಕೆಲಸಗಳನ್ನು ಮಾಡಿ ಮುಗಿಸಿ ಮತ್ತೆ ನಿಮ್ಮೊಂದಿಗೆ ವಾರ ವಾರವೂ ಮಾತಾಡಲು ಕೂಡುತ್ತೀನಿ…
    ‘ಈಗ ಚಿಕ್ಕದೊಂದು ಬ್ರೇಕ್…’ 🙂

    ಪ್ರತಿಕ್ರಿಯೆ
  18. Gopaal Wajapeyi

    ಕ್ಷಮಿಸಿ, ಒಂದು ತಪ್ಪು ನುಸುಳಿ ಹೋಯ್ತು ಇಲ್ಲಿ …
    ಹಾಗೆಯೇ, ಮೊದಲು ಬಾಕಿ ಉಳಿದಿರುವ ಬೇರೆ ಕೆಲವು ಕೆಲಸಗಳನ್ನು ಮಾಡಿ ಮುಗಿಸಿ ಮತ್ತೆ ನಿಮ್ಮೊಂದಿಗೆ ವಾರ ವಾರವೂ ಮಾತಾಡಲು ಕೂಡುತ್ತೀನಿ…
    ‘ಈಗ ಚಿಕ್ಕದೊಂದು ಬ್ರೇಕ್…’ 🙂

    ಪ್ರತಿಕ್ರಿಯೆ
  19. h g malagi, dharwad

    ನೀವು ಈ ಕಾಲಂ ನಿಲ್ಲಿಸಿದ್ದು (ಮುಗಿಸಿದ್ದಲ್ಲ) ನನಗೆ ನನ್ನ ನೆನಪುಗಳು ಮರೆತೇಹೋದನ್ತಾಯಿತು. ಛೇ ಇನ್ನೂ ನೂರಾದರೂ ಬಂದಿದ್ದರೆ ಚೊಲೋ ಆಗ್ತಿತ್ತು!ನನ್ನ ನೆನಪುಗಳು ತಾಜಾ ಆಗುತ್ತಿದ್ದವು ಅನ್ನಿಸುತ್ತಿದೆ. ಈ ನೆನಪುಗಳೇ ಹಾಗೆ. ನಮ್ಮನ್ನು ಇಲ್ಲಿರಲು ಬಿಡದೇ ಅಲ್ಲಿಯೂ ಹೋಗಲಾರದೆ ತೊಳಲಾಡುವನ್ತೆ ಮಾಡುತ್ತವೆ. ಇರಲಿ ಈ ನಿಮ್ಮ ನೆನಪುಗಳ ಸಂಗ್ರಹವು ಪುಸ್ತಕದಲ್ಲಿ ಬಂದರೆ ಇನ್ನೂ ಚೆನ್ನ!

    ಪ್ರತಿಕ್ರಿಯೆ
  20. arathi ghatikaar

    ಅದ್ಭುತವಾದ ನೆನಪುಗಳ ಮಳೆ , ಮಿಂದ ನಾವೇ ಧನ್ಯರು . ನಮ್ಮ ಸ್ಮ್ರಿತಿ ಪಟಲದಲ್ಲೂ ಶಾಶ್ವತವಾಗಿ ಉಳಿಸಿತು ಈ ಘಟನಾವಳಿಗಳು ,ರಂಗಭೂಮಿಯ ಸನ್ನಿವೇಶಗಳು , ಅವುಗಳ ಹಾದಿಗೆ ಜೊತೆಯಾದ ಕೆಲವು ಪಾತ್ರಧಾರಿಗಳು … ಅಂತೂ ಈ ಸಿಹಿ ಕಹಿ ನೆನಪಿನ ಯಾನ ಮತ್ತೆ ಮುಂದುವರೆಯಲಿ ಅನ್ನುವ ಹಾರೈಕೆ .

    ಪ್ರತಿಕ್ರಿಯೆ
  21. CHANDRASHEKHAR VASTRAD

    ಏನೂ ತಿಳಿದ್ಹಂಗ್ ಆಗೈತಿ! ಗುಲಾಮನ ಸ್ವಾತಂತ್ರ ಯಾತ್ರೆ ಓದಿ ಸಂತೋಷ ಪಡಬೇಕೊ, ಕೊನೆ ಕಂತು ಅಂತ ಬೇಸರ ಪಟ್ಕೋಬೇಕೊ, ಮತ್ತೆ ಮುಂದ ಬರಿತಾರಲ್ಲ ಅಂತ ಸಮಾಧಾನ ಪಡೀಬೆಕೊ! ಒಟ್ಟಿನೊಳಗ ವಾರದ ರಸಗವಳ ಸಧ್ಯಕ್ಕಂತೂ ತಪ್ಪಿದಂತಾಯ್ತು.ಸಂಪಾದಕರು ಇವರನ್ನ ಖೊವಾ ಅಂತ ಗುರುತಿಸಿದ್ದು ನೂರಕ್ಕ ನೂರು ಬರೋಬ್ಬರಿ ಅದ. ಅವರ ಬರವಣಿಗಿ ಕನ್ನಡದ ಖೋವಾನೆ. ಸ್ವಲ್ಪ ದಿನ ವಿಶ್ರಾಂತಿ ತಗೊಂಡು ಮತ್ತ ಅಕ್ಷರ ಪಾಕ ಶಾಲೆಗೆ ಮರಳಲಿ.ಕಾಯ್ತಿರ್ತೀವಿ.

    ಪ್ರತಿಕ್ರಿಯೆ
  22. ಅಶೋಕ ಶೆಟ್ಟರ್

    ಪ್ರಿಯ ಗೋವಾ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಕಚೇರಿಗೆ ನಾನು ೧೯೭೫-೭೬ರಿಂದ ವಾರದಲ್ಲೊಮ್ಮೆ ನಿಯಮಿತವಾಗಿ ಬರುತ್ತಿದ್ದೆ. ಶಾಮರಾಯರು ಬರುವ ಮುಂಚಿನ ನೀವು, ಸನತ್ ಕುಮಾರ್, ಜಿ.ಎಚ್.ರಾಘವೇಂದ್ರ, ಮೊದಲಾದವರು ಅಲ್ಲಿರುತ್ತಿದ್ದ ದಿನಗಳಲ್ಲಿ ಇದ್ದ ಆತ್ಮೀಯ ಅನೌಪಚರಿಕ ನಗುವ ಕೆಲೆಯುವ ಮುಕ್ತ ವಾತಾವರಣ ಮತ್ತು ೧೯೮೬ರಲ್ಲಿ ಅವರು ಬಂದ ನಂತರದ ವಿಲಕ್ಷಣ ಬಿಗುವು,ಮೌನ,ಗುಮಾನಿಗಳ ವಾತಾವರಣ ಎರಡೂ ನನಗೆ ಪರಿಚಿತ. ಆಗಾಗ ನಿಮ್ಮ ವರ್ಗ,ವನವಾಸ ಇತ್ಯಾದಿಗಳ ಕುರಿತು ಅಲ್ಲಿಲ್ಲಿ ಚೂರುಪಾರು ಕೇಳಿದ್ದೆನಾದರೂ ನಿಮ್ಮ ರಂಗಪ್ರೇಮ ಶಾಮರಾಯರಲ್ಲಿ ಒಬ್ಬ ಔರಂಗಜೇಬನನ್ನು ಹುಟ್ಟಿಸಿ ಅವರ ಕಣ್ಣು ನಿಮ್ಮ ಮೇಲೆ ಸದಾ ವಕ್ರವಾಗಿ ಉಳಿಯುವಂತೆ ಮಾಡಿತ್ತು ಎಂಬುದು ಗೊತ್ತಿರಲಿಲ್ಲ. ಆದದ್ದೆಲ್ಲ ಒಳಿತೇ ಆಯಿತು ಎನ್ನಿಸುವಂತೆ ಬಾಳಿದಿರಲ್ಲ. ಅದು ಮುಖ್ಯ. ಮತ್ತೆ ಮರಳಿ ಬಂದು ಇನ್ನಷ್ಟು ಬರೆಯಿರಿ.

    ಪ್ರತಿಕ್ರಿಯೆ
  23. Gopaal Wajapeyi

    ಈ ಅಂಕಣವನ್ನು ಆರಂಭದಿಂದಲೂ ಓದಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ ಡಾ. ನಾ. ದಾಮೋದರ ಶೆಟ್ಟಿ, ಅಶೋಕ್ ಶೆಟ್ಟರ್, ಅಹಲ್ಯಾ ಬಲ್ಲಾಳ್ ಮುಂತಾದ ಎಲ್ಲರಿಗೂ ಧನ್ಯವಾದಗಳು. ವಿಶೇಷವಾಗಿ ‘ಅವಧಿ’ ಬಳಗಕ್ಕೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: