ಮೂಡಲ್ ಮೋದೂರು ತೇಜ ಓದಿದ ‘ಬುದ್ದನ ಕಿವಿ’

ಮೂಡಲ್ ಮೋದೂರು ತೇಜ

ಕತೆಗಾರ ದಯಾನಂದ ಅವರ “ಬುದ್ಧನ ಕಿವಿ” ಕಥಾ ಸಂಕಲನ ಮೊನ್ನೆಯೇ ಕೈ ಸೇರಿತ್ತು. ಕೆಲಸದ ಒತ್ತಡದಲ್ಲಿ ಓದಲಾಗಿರಲಿಲ್ಲ. ಓದುವ ಕುತೂಹಲವಂತು ಇದ್ದೇ ಇತ್ತು. ಯಾಕೆಂದರೆ ನನ್ನ ಸಮಕಾಲೀನ ಹಿರಿಯ ಕಿರಿಯ ಕಥೆಗಾರರ ಕಥೆಗಳನ್ನು ಓದುತ್ತಾ ಅವರ ಕಥೆಯ ವಸ್ತು, ನಿರೂಪಣಾ ಶೈಲಿ, ಕಥೆ ಹೇಳುವ ತಂತ್ರ ಹೀಗೆ ಎಲ್ಲದರ ಬಗ್ಗೆ ಬೆರಗಿನಿಂದ ಗಮನಿಸುತ್ತಿದ್ದೇನೆ. ಆ ರೀತಿ ಕಥೆ ಹೇಳುವ ತಾಜಾತನ ಉಳಿಸಿಕೊಂಡಿರುವ ನನ್ನ ನೆಚ್ಚಿನ ಕಥೆಗಾರರಲ್ಲಿ ದಯಾನಂದ ಅವರು ಒಬ್ಬರಾಗಿರುವುದರಿಂದ ಈ ದಿನ ಬಿಡುವು ಮಾಡಿಕೊಂಡು ಓದಿದೆ. ನಾನು ಓದಿದ ನಾಲ್ಕು ಕಥೆಗಳ ಬಗ್ಗೆ ನನ್ನ ಅಭಿಪ್ರಾಯ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಅದರಲ್ಲಿ ‘ಸರ್ವೈವಲ್ ಬೆನಿಫಿಟಟ್’ ಎನ್ನುವ ಕಥೆ ಪ್ರಭುತ್ವದ ಜನವಿರೋಧಿ ನಡೆಯನ್ನು ನಾಟಕದ ಮೂಲಕ ಜನರಿಗೆ ತಿಳಿಸುತ್ತಿದ್ದ ನಾಟಕ ತಂಡದವರ ಬಾಯಿ ಮುಚ್ಚಿಸಲು ಪ್ರಭುತ್ವ ಕಂಡುಕೊಂಡ ಸುಲಭ ಉಪಾಯ ಎಂದರೆ, ಅವರಿಗೆ ಸನ್ಮಾನ ಮಾಡಿ, ಪ್ರತಿಯೊಬ್ಬ ಕಲಾವಿದನಿಗೂ ದೊಡ್ಡ ಮೊತ್ತದ ಮಾಶಾಸನ ನೀಡಲು ಆದೇಶ ನೀಡುತ್ತದೆ.

‘ಅಂದಿನಿಂದ ಪ್ರಭುತ್ವಕ್ಕೆ ಇವರಿಂದ ತಲೆನೋವು ಇಲ್ಲವಾಯಿತು’ ಎನ್ನುವುದರೊಂದಿಗೆ ಕಥೆ ಮುಗಿಯುತ್ತದೆ. ಈ ಕತೆಯನ್ನು ಪ್ರಜಾವಾಣಿಯಲ್ಲಿ ಪ್ರಕಟವಾದಾಗಲೇ ಓದಿ, ತುಮಕೂರಿನಲ್ಲಿ ರಂಗನಾಥ ಆರನಕಟ್ಟೆಯವರ ಕಾರುಣ್ಯದ ಮೋಹಕ ನವಿಲುಗಳೆ ಎನ್ನುವ ಕವನ ಸಂಕಲನದ ಸಂವಾದದಲ್ಲಿ ದಲಿತರಾಗುವುದೆಂದರೆ ಎಷ್ಟೊಂದು ಸಡಗರ ಎನ್ನುವ ಕವನ ಕುರಿತು ಎನ್ಕೆ ಹನುಮಂತಯ್ಯ ಅವರ ಮಾಂಸದಂಗಡಿಯ ನವಿಲು ಎನ್ನುವ ರೂಪಕ ಕುರಿತು ಹೇಳುವಾಗ ಈ ಕಥೆಯನ್ನು ಉದಾಹರಣೆಯಾಗಿ ಹೇಳಿದ ನೆನಪಾಯಿತು. ನೂರೈವತ್ತು ವರ್ಷಗಳ ಹಿಂದೆ ಆರ್ವಾಕ್ಸೋವಿಯದಲ್ಲಿ ಒಂದು ಬಡ ನಾಟಕ ತಂಡದ ಕತೆ ಹೇಳುತ್ತಲೇ ವರ್ತಮಾನಕ್ಕೆ ಮುಖಾಮುಖಿಯಾಗುವ ಅಂತಃಶಕ್ತಿ ಈ ಕತೆಗಿದೆ. ಹಾಗಾಗಿಯೇ ಈ ಕತೆ ಓದುಗನನ್ನು ಮತ್ತೆ ಮತ್ತೆ ಕಾಡುತ್ತದೆ. ಈಗಿನ ಪ್ರಭುತ್ವದ ನಡೆಯನ್ನು ನೆನಪಿಸುತ್ತದೆ. ಒಂದು ಕತೆಯ ನಿಜವಾದ ಗೆಲುವು ಎಂದರೆ ಇದೇ ತಾನ

ನನ್ನ ಮನಸನ್ನು ಕಲಕಿದ ಮತ್ತೊಂದು ಕಥೆ ‘ವಾಟ್ಸ್ ಇನ್ ಎ ನೇಮ್’ ಎನ್ನುವ ಈ ಕತೆ ಜಾತಿಯ ಕಾರಣಕ್ಕಾಗಿ ತನ್ನ ಹೆಸರನ್ನೂ ಹೇಳಿಕೊಳ್ಳಲು ಹಿಂಜರಿಯುವವನ ಮನಸ್ಥಿತಿಯ ತೊಳಲಾಟವನ್ನು ಮನಮುಟ್ಟುವಂತೆ ನಿರೂಪಿತಗೊಂಡಿದೆ. ನಮ್ಮ ಸಮಾಜದಲ್ಲಿ ತನ್ನ ಹೆಸರಿನ ಜೊತೆಗೆ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳುವ, ಸೇರಿಸಿಕೊಳ್ಳುವ ಒಂದು ವರ್ಗವಿದ್ದರೆ, ಇನ್ನೊಂದು ವರ್ಗ ಹೆಸರು ಹೇಳಿಕೊಳ್ಳಲೂ ಮುಜುಗರ ಪಡುವ ವರ್ಗವಿದೆ. ಅವರಿಗೆ ಆ ಕೀಳಿರಿಮೆ ಬರಲು ಈ ಸಮಾಜ ನಡೆಸಿಕೊಳ್ಳುತ್ತಿರುವ ರೀತಿಯೇ ಕಾರಣ. ನನ್ನ ದೇಶದಲ್ಲಿ ಬೇರೆಯದು ಯಾವುದೂ ಅಪ್ಡೇಟ್ ಆಗದಿದ್ದರೂ ಜಾತಿ ಮಾತ್ರ ಅಪ್ಡೇಟ್ ಆಗುತ್ತಲೇ ಇದೆ. ಜಾತಿಯ ಕಾರಣಕ್ಕಾಗಿ ಅವಮಾನಕ್ಕೆ ಒಳಗಾಗುತ್ತಲೇ ಇರುವ, ದೌರ್ಜನ್ಯಕ್ಕೆ ತುತ್ತಾಗುತ್ತಿರುವುದನ್ನು ನಿರ್ಲಿಪ್ತವಾಗಿ ನೋಡುತ್ತಿರುವ, ನೋಡಿಯೂ ನೋಡದಂತಿರುವ ಈ ಸಮಾಜಕ್ಕೆ ನೊಂದವರ ನೋವು ಅರ್ಥವಾಗುವುದೇ ಇಲ್ಲ. ಅದನ್ನು ಈ ಕತೆ ಸಮರ್ಥವಾಗಿ ಓದುಗನಿಗೆ ದಾಟಿಸುತ್ತದೆ. ಈ ಕತೆಯನ್ನು ಓದುವಾಗ ನನ್ನ ಓದಿನ ದಿನಗಳಲ್ಲಿ ನನ್ನ ಗೆಳೆಯನ ಅಣ್ಣನ ಮದುವೆ ಮನೆಯಲ್ಲಿ ಉಂಟಾದ ಮುಜುಗರ ನೆನಪಾಯಿತು.

ಬುದ್ಧನ ಕಿವಿ ಎನ್ನುವ ಕತೆ, ಕಮಲದೆಲೆಯ ಮೇಲಿನ ಜಲ ಬಿಂದುವಿನಂತೆ ಈ ಲೋಕಕ್ಕೆ ಅಂಟಿಯೂ ಅಂಟಿ ಕೊಳ್ಳದಂತಿರಬೇಕೆಂಬ ತತ್ವಕ್ಕೆ ಬದ್ಧನಾಗಿ ಬಾಳುವ ಚಿತ್ರ ಕಲಾವಿದ ಬಾಬಿ, ಅವನ ಗೆಳೆತನವನ್ನು ಹಂಬಲಿಸುವ ಕಥೆಯ ನಿರೂಪಕ. ಹೀಗೆ ಲೋಕದ ಎರಡು ಸತ್ಯಗಳನ್ನು ತೂಕ ತಪ್ಪದಂತೆ ಕಾಣಿಸುವ ಕಥೆಗಾರರ ಪ್ರಯತ್ನ ಮೆಚ್ಚಲೇ ಬೇಕು.

ಬೈಬಲ್ ಬಂಪ್ ಎನ್ನುವ ಈ ಕತೆ ಸಫಾಯಿ ಕರ್ಮಚಾರಿಯೊಬ್ಬಳ ಮಗಳು ಸಾಮಾಜಿಕವಾಗಿ, ಆರ್ಥಿಕವಾಗಿ ತುಂಬಾ ಎತ್ತರಕ್ಕೆ ಬೆಳೆದಾಗ ಅದೇ ವೃತ್ತಿ ಮಾಡುವ ಹುಡುಗಿಯೊಬ್ಬಳನ್ನ ‘ಅಫ್ಟ್ರಾಲ್ ಒಬ್ಬ ಹೌಸ್ ಕೀಪಿಂಗ್’ ಎಂದು ಕೋಪದಲ್ಲಿ ಮಾತಾಡಿ, ಆಮೇಲೆ ಆತ್ಮಾವಲೋಕನ ಮಾಡಿಕೊಳ್ಳುವ ಲತಾಳ ಪ್ರಾಮಾಣಿಕ ನಡೆ ಇಷ್ಟವಾಗುತ್ತದೆ.

ಒಟ್ಟಾರೆಯಾಗಿ ಅನಗತ್ಯ ಪದಗಳ ದುಂದುವೆಚ್ಚವಿಲ್ಲದೆ ಕತೆ ಹೇಳುವ ಕುಶಲತೆ ಕಥೆಗಾರರಿಗೆ ಸಿದ್ಧಿಸಿದೆ. ಉಳಿದ ಕತೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಭೇಟಿಯಾಗೋಣ.

‍ಲೇಖಕರು avadhi

February 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: