ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಚ್ಚಿಕೊಂಡಿದೆ ಭೂಮಿ ಮಣ್ಣಳತೆಯ ದುಃಖವನ್ನು

ಸುಬ್ಬು ಹೊಲೆಯಾರ್

ನೋವುಗಳ ದಾಖಲಿಸಲೆಂದು
ಹೆಣಗಾಡುತ್ತಿದ್ದೇನೆ
ಬೆರಳುಗಳು ನಿರಾಕರಿಸುತ್ತಿವೆ
ಹಸಿವು, ದಣಿವು, ನೀರಡಿಕೆಗಳನ್ನು
ಭಾವನೆಗಳು ತಣಿಸುವುದಿಲ್ಲವೆಂದು

ಉಮ್ಮಳಿಸಿ ಬರುವ ಅಳುವನ್ನು
ತಡೆಯಲಾರದ ದು:ಖದ ಬಿಕ್ಕಳಿಕೆಗಳು
ಬೆಂದುಹೋದ ಎದೆಗಳಲ್ಲಿ
ನನ್ನ ನಿಟ್ಟುಸಿರುಗಳು ನಿಲ್ಲುತ್ತಿಲ್ಲ
ನೆಲಹಿಡಿದು ನಿಂತ ಪಾದಗಳಿಗೆ ಚಪ್ಪಲಿಗಳ ಸಾಂತ್ವನವೇ !

ನೆಲವನ್ನೇ ಮೈಲುಗಳ ಅಳತೆ ಮಾಡಿ
ನೆಡೆದ ಕಾಲುಗಳಲ್ಲಿ ಒಡೆದ ಇಮ್ಮಡಿಗೆ
ಮುಲಾಮು ಹಚ್ಚಿ ಒಡಲುರಿಯ ತಣಿಸಲಾರದ ಕೈಗಳು
ಇಂತಿ ನಮಸ್ಕಾರ ಹೇಳುತ್ತಿದ್ದಾರೆ.

ದಣಿದ ಕಾಲುಗಳು ರೈಲು ಬರುವುದಿಲ್ಲವೆಂದು
ನಿರಾಳ ನಿದ್ರೆಯರೆಪ್ಪೆ ಮುಚ್ಚಿದ ಕಣ್ಣುಗಳನ್ನೇ
ಹೊಸಕಿ ಹೋದವು
ಜೀವಕೊರಳುಗಳುಗೂಡ್ಸ್ ಡಬ್ಬಿಗಳಿಂದ
ಸಾವು ಪ್ರತಿಭಟಿಸುವುದಿಲ್ಲ, ಪರಿಹಾರಕೂಡ ಕೇಳುವುದಿಲ್ಲ
ಯಾವ ಲಕ್ಷದ ಲಕ್ಷ್ಯವೂ ಅವಕ್ಕೆ ತಿಳಿಯುವುದಿಲ್ಲ ಪ್ರಿಯರೆ.

ಸಾವಿನ ನಿದ್ರೆಗೆ ಜಾರಿದ
ಜನ್ಮದಾತೆಯನ್ನು ಹಿಡಿದು ಅಲುಗಾಡಿಸುವ
ಪುಟ್ಟಕಂದನ ದೃಶ್ಯ ಸೆರೆಹಿಡಿದವರಿಗೆ
“ಮರೆಯಲಾರದ ದು:ಖದ ಸನ್ನಿವೇಶದ ಪ್ರಶಸ್ತಿಯನ್ನ
ಯಾರು ಪ್ರಧಾನ ಮಾಡುತ್ತಾರೆಂದು ಕೇಳಲಾಗುವುದೇ ಗೆಳೆಯ

ತೊಳೆ ತೊಳೆದ ಕೈಗಳಲ್ಲಿ
ಎಷ್ಟು ತೊಳೆಯುವುದು ಈ ಕೈಗಳನ್ನ
ತೊಳೆಯಲಾರದ ಶಬ್ದಗಳು
ಒಂದಾದರೂ ಇವೆಯೇ ಹೃದಯದಲ್ಲಿ
ಇಣುಕಿಇಣುಕಿ ನೋಡಿಕೊಳ್ಳುತ್ತೇನೆ ಮತ್ತೆ ಮತ್ತೆ.

ಬಿರು ಬೇಸಿಗೆಯಲ್ಲಿ ನೋವು ಹಿಂಡುವ
ಬೆವರ ಹನಿಗಳನ್ನ ಯಾವ ಪಾತ್ರೆಯಲಿ ತುಂಬಿಸಿ
ಹಾರುತಿರುವ ಹಕ್ಕಿಗಳ ಬಾಯಾರಿಕೆಯನ್ನು
ತಣಿಸಲಾಗುತ್ತದೆ ಗೆಳೆಯ

ಕಾಲಚಕ್ರಗಳು ತೋಳು ಬಲದಲ್ಲಿ ಹೆತ್ತಪ್ಪನ
ನೂರಾರು ಗಾವುದಗಳ ದಾಟಿ
ಉಸುರುಗಟ್ಟಿ ಉಳಿಸಿದ ಜೀವಚೈತನ್ಯದ ಜ್ಯೋತಿ
ನೆಲದಕವಿತೆಯಂತೆ ಮುಗುಳ್ನಕ್ಕ ಮಗಳಂತೆ
ಇನ್ನಷ್ಟು ಕವಿತೆಗಳನ್ನು ಬರೆಯಲು
ನಾಳೆಗೆ ಉಳಿಸಿದ್ದಾಳೆ ಆಕೆ.

ಮುಗಿಯದ ಈ ದುಃಖವನ್ನ
ಯಾವಗಡಿಯಲ್ಲೂ ನಿಲ್ಲಿಸಲಾಗದು
ಕಾಣಿಸುತ್ತದೆದುಃಖ ನಿಂತಾಗ
ನಡೆದರೆ ಗುರುತು ಉಳಿಯುತ್ತದೆ
ಹೀಗೆ ಹೇಳಿದರು ತಥಾಗತರು
ನಡೆಯುತ್ತಿರೋಣ ನಾವೆಲ್ಲಾ ನಾಳೆಗಾಗಿ
ಎಲೆ ಅಲುಗಾಡುವ ಖುಷಿಯನ್ನು ನೋಡುವ ಸಲುವಾಗಿ.

‍ಲೇಖಕರು Avadhi

6 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading