ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮುಂಜಾವನ್ನು ಬೀದಿಗೆ ಹಂಚುತ್ತಾಳೆ !' – ಜಾಡಮಾಲಿಯೊಬ್ಬಳ ದಿನಚರಿ

ಜಾಡಮಾಲಿಯೊಬ್ಬಳ ದಿನಚರಿ

ಅರುಣ್ ಜೋಳದಕೂಡ್ಲಿಗಿ

-೧-
ನಸುಕಿನಲಿ ಸೂರ್ಯನ ಎಳೆ ಕಿರಣಗಳು
ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವಿರುವ ಬೀದಿ ಗುಡಿಸೆಂದು ಹಠ ಮಾಡುತ್ತವೆ
ಈ ಗದ್ದಲಗಳ ನಡುವೆ
ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ
ಜಗತ್ತು ಮಗ್ಗಲು ಬದಲಿಸುತ್ತದೆ
 
-೨-
ಪೊರಕೆ ಕನಸು ಕಾಣುತ್ತಿದೆ
ತೆಂಗಿನ ಮರವನ್ನೇ ಉಲ್ಟಾ ಹಿಡಿದು ಬೀದಿಗುಡಿಸಿದಂತೆ
ದಾರಿ ಹೋಕರು ಎಳನೀರು ಕುಡಿದು ತಂಪಾದಂತೆ
ಬಿಸಾಡಿದ ತೆಂಗು ಕಸಬಳಿಯಲು ಅಡ್ಡಾದಂತೆ
ಇವಳಿಗೆ ಏನೆಲ್ಲಾ ಅನ್ನಿಸಿ ಪೊರಕೆಯ ಕನಸ ಕಿತ್ತೊಗೆದು
ಅದಕೆ ಅಂಟಿಕೊಂಡ ಬಿಸಾಡಿದ ಪ್ಲಾಸ್ಟಿಕ್ ಕಪ್ಪುಗಳಲ್ಲಿನ
ತುಟಿಗಳ ಬಿಡಿಸಿ ಗುಡ್ಡೆ ಹಾಕುತ್ತಾಳೆ
ರಾತ್ರಿಯಾಗುತ್ತಲೂ ಈ ತುಟಿಗಳೆಲ್ಲಾ
ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ !
 
-೩-
ಇನ್ನೂ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವ
ಬೀದಿ ಮೇಲಿನ ನಿನ್ನೆಯ ನೆರಳುಗಳ
ಮೆಲ್ಲಗೆ ನಿದ್ದೆಕೆಡಿಸದಂತೆ ಎತ್ತಿ ಕಸದ ತೊಟ್ಟಿಗೆ ತುಂಬಿ
ಅವರ ನೆರಳಿನ ಉಡುಪು ಕೊಳೆಯಾಗದಂತೆ
ಇಸ್ತ್ರಿಯ ಗೀರುಗಳು ಮುಕ್ಕಾಗದಂತೆ ಎಚ್ಚರವಹಿಸಿ
ಭೇದ ಮರೆತು ಕಸದ ತೊಟ್ಟಿಯಲ್ಲಿ ಒಂದಾದ
ಮನುಷ್ಯರ ಛಾಯೆಗಳಿಗೆ ವಂದಿಸಿ
ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳಕಿತಳಾಗುತ್ತಾಳೆ !
-೪-
ಈಗತಾನೇ ಚಲಿಸಿದ ವಾಹನವೊಂದರ ಟಯರ ಗುರುತು
ಹೊಸ ಕಾರಿನದೆಂದು ಗುರುತಿಸಿ
ಗುರುತು ಹಿಡಿದು ಎಳೆದಂತೆ ಕಾರು ಹಿಂದೆ ಬಂದು
ಅವಳ ಕೂರಿಸಿಕೊಂಡು ಮುಂಚಲಿಸುತ್ತದೆ !
ಟಯರಿನ ಚೆಂದದ ಹೆಜ್ಜೆಗೆ ಮನಸೋತು
ಅದು ಅಳಿಸುವ ಮುನ್ನ ಸೀರೆಯ ಅಂಚಿಗೆ ಅಂಟಿಸಿಕೊಳ್ಳುತ್ತಾಳೆ !
ಉಟ್ಟ ಸೀರೆಯಲ್ಲೆಲ್ಲಾ ಕಾರು ಚಲಿಸಿದಂತಾಗಿ
ತಾನು ರಸ್ತೆಯಾಗಿ ಸುಖಿಸುತ್ತಾಳೆ !
ಹೆಜ್ಜೆ ಮೂಡದ ಹಳೇ ಟಯರುಗಳು ಇವಳ ನೋಡಿ
ಮುಸಿಮುಸಿ ನಕ್ಕು ಹೇಳುತ್ತವೆ ನೀನು ನಮ್ಮಂತೆಯೇ..
-೫-
ಮನಕೆ ಭಾರವಾದ ಈಡೇರದ ಕನಸುಗಳ
ಮುಂಜಾನೆ ಕಸದ ಬೆನ್ನಿಗೆ ಕಟ್ಟಿ ಹಗುರಾಗಿ
ಲೋಕದ ನಿನ್ನೆಯ ಪೊರಕೆಯಿಂದ ಗುಡಿಸಿ
ಮುಂಜಾವನ್ನು ಬೀದಿಗೆ ಹಂಚುತ್ತಾಳೆ !
ಈಗವಳು ಕಸಗುಡಿಸುವಾಗ ಬಚ್ಚಿಟ್ಟುಕೊಂಡ
ವಿಮಾನದ ನೆರಳಲ್ಲಿ ಚಲಿಸಿ ಸೂರ್ಯನ ಸೇರಿ
ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ
ಹಗಲ ಭಿಕ್ಷೆಯ ಋಣದ ಭಾರ ಇಳಿಸಲು !
 
ಕಲೆ : ಪುಂಡಲೀಕ ಕಲ್ಲಿಗನೂರ

‍ಲೇಖಕರು avadhi

20 August, 2013

5 Comments

  1. nagraj.harapanahalli

    ವಿಮಾನದ ನೆರಳಲ್ಲಿ ಚಲಿಸಿ ಸೂರ್ಯನ ಸೇರಿ
    ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ
    ಹಗಲ ಭಿಕ್ಷೆಯ ಋಣದ ಭಾರ ಇಳಿಸಲು !
    ಅರುಣ್….ಸಂಶೋಧನೆಗೆ ತಲೆ ಕಡಿಸಿಕೊಳ್ಳುವ ಬದಲು ಈ ತರಹದ ಚೆಂದ ಕವಿತೆ ಬರೀರಿ… ಈ ಕವಿತೆ ಸೋಗಸಾಗಿದೆ.

  2. shanthi k.a.

    maarmika ..

  3. mmshaik

    nice poem..

  4. Neela

    Arun,
    kaavyada jeeva bhaavakke
    yede jhallenditu…
    munjaavu tandavale lokakke belaku kottalu…
    s sooryanalle hudukuve avala…
    neela

  5. ಅನಾಮಿಕ

    “ರಾತ್ರಿಯಾಗುತ್ತಲೂ ಈ ತುಟಿಗಳೆಲ್ಲಾ
    ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ !”
    ಪದ್ಯ ಚೆನ್ನಾಗಿದೆ, ಆದರೆ ಈ ಮೇಲಿನ ಎರಡು ಸಾಲುಗಳ ಭಾವ ಹಿಡಿಸಲಿಲ್ಲ. ವಾಸ್ತವಕ್ಕೆ ದೂರ ಹಾಗೂ ಅಶ್ಲೀಲ ಅಂತ ಅನ್ನಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading