ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಸಾವನ್ನ ಕೊಡು ಎಂದು ಕೇಳಿದ ಯುವಕನ ಕಣ್ಣಿನಂತೆ…’

(ಇಲ್ಲಿಯವರೆಗೆ…)

ಚಿಟ್ಟಿಯ ಮನಸ್ಸಿನ ತುಂಬಾ ತುಂಬಿದ್ದು ಒಂದೇ ಪ್ರಶ್ನೆ. ಮುಟ್ಟಿದ್ರೆ ಮಕ್ಕಳಾಗಲ್ಲ ಅಂದ್ರೆ ಮತ್ತೆ ಮಕ್ಕಳಾಗೋದು ಹೇಗೆ? ಆದ್ರೂ ಜೋಸೆಫ ನಂಗೆ ಮಾಡಿದ್ದು ಅವಮಾನ ಅಲ್ಲವ? ಹೀಗೆ ಯೋಚಿಸುತ್ತಿರುವಾಗಲೇ ಸೀನು `ಅತ್ತೆ ನಂಗೆ ಲಂಗು ಮಾ ಪಟನ ಕಥೆ ಹೇಳ್ಲಿಲ್ಲ ಅಂದ್ರೆ ಊತ ಮಾದಲ್ಲ’ ಅಂತ ಹಟ ಹಿಡಿದಿದ್ದ. ಅತ್ತೆ ಅವನನ್ನು ಮುದ್ದು ಮಾಡ್ತಾ `ರಂಗು ಮಹಾ ಪಟ್ಟಣದ ಕಥೆ ಬೇಕೇನೋ ಬಾರೋ’ ಎನ್ನುತ್ತಾ ಅವನನ್ನು ಎತ್ತಿಕೊಂಡು ಮುದ್ದಾಡತೊಡಗಿದ್ದಳು. ಅವಳ ಕೆನ್ನೆಗಳನ್ನು ಹಿಡಿದು `ಹೇಳತ್ತೆ’ ಎಂದು ಮುದ್ದುಗರೆಯತೊಡಗಿದ್ದ. ಪುಟ್ಟಿ ಅವಳ ಎದುರೂಗೆ ಕತೆ ಕೇಳಲು ಕಾಯುತ್ತಾ ಕುಳಿತಿದ್ದಳು. ಇಷ್ಟೆಲ್ಲಾ ಆದರೂ ಚಿಟ್ಟಿ ಯಾಕಿನ್ನೂ ಬಂದಿಲ್ಲ? ಎಂಬ ಅಚ್ಚರಿಯಲ್ಲಿ ಅತ್ತೆ `ಚಿಟ್ಟಿ ಕಥೆ ಕೇಳಲ್ವೇನೇ?’ ಎಂದು ಕರೆದಳು. ನೊಂದ ಮನಸ್ಸಿಗೆ ಯಾವುದೂ ಬೇಕಿರಲಿಲ್ಲ. ಹೊದ್ದ ಮುಸುಗಿನ ಒಳಗಿಂದ `ನಿದ್ದೆ ಬರ್ತ ಇದೆ’ ಎಂದು ಚಿಟ್ಟಿ ಉಸುರಿದ್ದು ಯಾರಿಗೂ ಕೇಳಲಿಲ್ಲ.
`ಅವ್ಳಿಗೆ ಈ ನಡುವೆ ಕೊಬ್ಬು ಜಾಸ್ತಿ ಆಗ್ತಾ ಇದೆ. ಏಯ್ ಅತ್ತೆ ಕರೀತಾ ಇರೋದು ಕೇಳ್ಲಿಲ್ವೇನೇ’ ಎಂದು ಅಮ್ಮ ರೇಗೋಕ್ಕೆ ಶುರು ಮಾಡಿದಳು. ಇನ್ನ ನನ್ನ ಬಿಡಲ್ಲ ಎನ್ನುತ್ತಾ ಮುಸುಗನ್ನು ಕಿತ್ತು ಮನಸ್ಸಿಲ್ಲದ ಮನಸ್ಸಿನಿಂದ ಕಥೆಯನ್ನು ಕೇಳಲು ಕೂತಳು ಚಿಟ್ಟಿ. ಅತ್ತೆ ಮಹಾನ್ ಕಥೆಗಾತಿ, ಕಣ್ಣು ಮೂತಿ ಕೈ ಎಲ್ಲಾ ತಿರುಗಿಸಿಕೊಂಡು ಕಥೆ ಹೇಳಲು ಶುರು ಮಾಡಿದ್ಲು ಅಂದ್ರೆ ಯಾರಾದ್ರೂ ಸರಿ ಮಂತ್ರಮುಗ್ಧರಾಗಿ ಅವಳ ಕಥೇನ ಕೇಳುತ್ತಾ ಕೂತುಬಿಡುತ್ತಿದ್ದರು. ಅತ್ತೆಗೆ ಗೂರಲು. ಅವಳು ಉಸಿರಾಡಿದರೆ ಸುಯ್ಯ್ ಸುಯ್ಯ್ ಎನ್ನುವ ಶಬ್ದ ಅಷ್ಟು ದೂರಕ್ಕೆ ಕೇಳುತ್ತಿತ್ತು. ಗಂಟಲಾಳದ ಕಫವನ್ನು ಕೆಮ್ಮಿ ಕ್ಯಾಕರಿಸಿ ತೆಗೆದು, ಹೊರಗೆ ಹೋಗಿ ಉಗಿದು ಬಂದು ಕಥೆ ಹೇಳಲು ಶುರು ಮಾಡಿದಳು.
`ಅದೊಂದು ದೇಶ ಅಲ್ಲಿಗೆ ಒಬ್ಬ ರಾಜ. ಅವನಿಗೊಬ್ಬಳು ಮಗಳಿದ್ದಳು, ಸುರಸುಂದರಿ’ ಸುಮ್ಮನೆ ಕೂತಿದ್ದ ಪುಟ್ಟಿ `ಅವಳಿಗೆ ಹೆಸರಿಲ್ವಾ’ ಎಂದಳು. ಅತ್ತೆ ತನ್ನ ಕಥೆಗೆ ಅಡ್ಡಲಾಗಿ ಬಂದ ಅವಳ ಕೆನ್ನೆಯನ್ನು ಸವರಿ `ಇತ್ತು, ಅವಳ ಹೆಸರು ಪುಟ್ಟಿ ಅಂತ’ ಎಂದಾಗ ಪುಟ್ಟಿ ಬಿದ್ದು ಹೋಗಿದ್ದ ತನ್ನ ಹಲ್ಲಿನ ಕಿಂಡಿಯನ್ನು ತೋರಿಸುತ್ತಾ `ನಾನೇನಾ?!’ ಎನ್ನುತ್ತಾ ಸಂತೋಷವಾಗಿ ನಕ್ಕಳು. ಚಿಟ್ಟಿಗೆ ಕಥೆಯಲ್ಲಿ ಆಸಕ್ತಿಯಿಲ್ಲ. ಅತ್ತೆ ಕಥೆ ಮುಂದುವರೆಸಿದಳು. `ಆ ರಾಜನಿಗೆ ಒಂದೇ ಚಿಂತೆ ಮಗಳ ಮದುವೆಯದ್ದು. ರಾಜಕುಮಾರಿಯನ್ನ ಮದ್ವೆ ಆಗ್ಬೇಕು ಅಂದ್ರೆ ಒಂದು ಪರೀಕ್ಷೆ ಇರುತ್ತಿತ್ತು. ಅರಮನೆಯ ಬಾಗಿಲ ಬಳಿ ಕಟ್ಟಿರೋ ಗಂಟೆಯನ್ನು ಯಾರು ಬಂದು ಬಾರಿಸುತ್ತಾರೋ ಅವರನ್ನು ರಾಜಕುಮಾರಿಯ ಮುಂದೆ ನಿಲ್ಲಿಸುತ್ತಿದ್ದರು. ರಾಜಕುಮಾರಿ ಅವನನ್ನ ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದಳು. ಅದಕ್ಕೆ ಯಾರು ಉತ್ತರ ಕೊಡುತ್ತಾರೋ ಅವರೇ ರಾಜಕುಮಾರಿಯ ಗಂಡ ಆಗ್ತಾನೆ. ಉತ್ತರ ಹೇಳಿಲ್ಲಾಂದ್ರೆ ನೂರು ಚಡಿ ಏಟು ಅಂತ ಶಿಕ್ಷೆ ವಿಧಿಸುತ್ತಿದ್ದರು. ಸಾಲು ಸಾಲು ಜನ ಎಲ್ಲೆಲ್ಲಿಂದಲೋ ಬಂದ್ರು. ರಾಜಕುಮಾರಿಯ ಪ್ರಶ್ನೆಗೆ ಉತ್ತರ ಕೊಡೋಕ್ಕಾಗ್ಲಿಲ್ಲ. ಅದೇ ಊರಲ್ಲಿ ಒಬ್ಬ ಬಡಬ್ರಾಹ್ಮಣ ಇದ್ದ. ಅವನಿಗೊಬ್ಬ ಮಗ. ಅವನಿಗೆ ರಾಜಕುಮಾರೀನ ನೋಡ್ಬೇಕು ಅನ್ನೋ ಆಸೆ. ನೋಡೇ ಬಿಡೋಣ ಅಂತ ಸೀದ ಬಂದವನೇ ಗಂಟೆ ಬಾರಿಸ್ದ, ರಾಜಕುಮಾರಿ ಮುಂದೆ ನಿಂತ.ರಾಜಕುಮಾರಿ ಪ್ರಶ್ನೆ ಕೇಳಿದ್ಲು `ರಂಗುಮಹಾಪಟ್ಟಣಾನ ನೋಡಿದ್ದೀಯಾ?’ ರಾಜಕುಮಾರಿಯ ಆ ಸೌಂದರ್ಯವನ್ನು ನೋಡಿ ದಂಗಾಗಿ ಹೋಗಿದ್ದ ಅವನಿಗೆ ಮಾತೇ ಬರಲಿಲ್ಲ. ರಾಜಕುಮಾರಿಗೆ ಕೋಪ ಬಂತು. ಅವನಿಗೆ ನೂರು ಚಡಿ ಏಟನ್ನ ಕೊಡಲು ಆಜ್ಞೆ ಮಾಡಿ ಎದ್ದು ಹೋದಳು. . . `ಛಡಿ ಏಟಾ?’ ಚಿಟ್ಟಿಯ ತಲೆಗೆ ತಾನೇ ರಾಜಕುಮಾರಿಯಾಗಿ, ತನ್ನ ಸೌಂದರ್ಯವನ್ನು ನೋಡಿ ದಂಗಾದ ಬಡ ಬ್ರಾಹ್ಮಣನ ಮಗ ಜೋಸೆಫನಾಗಿ ಚಿಟ್ಟಿ ಕಲ್ಪಿಸತೊಡಗಿದಳು.
ಹಿಂದೊಂದು ಸಲ ಇದೇ ಕಥೆಯನ್ನು ಕೇಳಿದಾಗ ಅವಳಿಗೆ ಈ ಕಲ್ಪನೆ ಬಂದಿರಲಿಲ್ಲ. ಹಾಗಾಗಿ ತಾನು ಕೇಳ್ತಾ ಇರೋದು ಹೊಸಾ ಕಥೇನ ಅನ್ನಿಸಿ ಕಥೆಯಲ್ಲಿ ಅವಳಿಗೆ ಆಸಕ್ತಿ ಬಂತು. `ಅವ್ನಿಗೆ ಹಾಗೆ ಹೊಡೆದದ್ದೆ ಸರಿ’ ಎಂದಳು ಸ್ವಲ್ಪ ಜೋರಾಗಿ. ಅತ್ತೆ `ಯಾಕೇ ಚಿಟ್ಟಿ ಪಾಪ ಅಲ್ವಾ ಅವ್ನು ?’ ಎಂದಳು. ತನಗೆ ಅವಮಾನ ಮಾಡಿದ ಆ ಜೋಸೆಫನಿಗೆ ಹಾಗಾಗುವುದೇ ಸರಿಯಲ್ಲವಾ? ಆದ್ರೆ ಅದನ್ನು ಯಾರ ಮುಂದೆ ಹೇಳುವ ಹಾಗಿಲ್ಲ. ಹಾಗೇನಾದ್ರೂ ತಾನು ಅಕಸ್ಮಾತ್ ಬಾಯಿಬಿಟ್ಟು, ಅಮ್ಮ ಮೇರಿಯಮ್ಮ ಕಂಡಾಗ ಏನಮ್ಮ ಆಂತ ಕೇಳೋದು ಮತ್ತೊಂದು ರಗಳೆ ಆಗೋದು ಎಲ್ಲ ಯಾಕೆ? ಆದ್ರೆ ಅತ್ತೆಯ ಪ್ರಶ್ನೆಗೆ ಉತ್ತರ ಕೊಡಲೇಬೇಕು- `ಇಲ್ಲ ಅತ್ತೆ ಉತ್ರ ಗೊತ್ತಿಲ್ಲ ಅಂದ್ಮೇಲೆ ಅವ್ನು ಯಾಕ್ ಬರ್ಬೇಕು. ಅದೂ ರಾಜಕುಮಾರೀನ ನೋಡೋಕ್ಕೆ. ಅದಕ್ಕೆ ಅವನ್ನ ಹೊಡೀಬೇಕು’ ಎಂದಳು ದೃಢವಾಗಿ. ಅತ್ತೆ ನಗುತ್ತಾ `ಏನಾಯ್ತೇ ಚಿಟ್ಟಿ, ಇಷ್ಟೊಂದ್ ಕೋಪ ಮಾಡ್ಕೋತಾ ಇದೀಯಾ’ ಎಂದಳು. ಚಿಟ್ಟಿಗೇ ಏನ್ ಮಾತಾಡ್ಬೇಕು ಅಂತ ತೋಚಲಿಲ್ಲ. ಪುಟ್ಟಿ `ನೀನ್ ಸುಮ್ನಿರೆ ಚಿಟ್ಟಿ, ಅತ್ತೆ ಕಥೆ ಹೇಳು’ ಎಂದಳು.
ಹೀಗೆ ದಿನಾ ರಾಜಕುಮಾರೀನ ನೋಡೋಕ್ಕೆ ಬರೋದು, ಏಟ್ ತಿನ್ನೋದು ಮಾಮೂಲಿ ಆಗಿ ಹೋಯ್ತು. ಅವನಿಗೆ ರಾಜಕುಮಾರೀನ ನೋಡ್ದೆ ಇರೋಕ್ಕೆ ಸಾಧ್ಯಾನೇ ಇಲ್ಲ ಅಂಥಾ ಪ್ರೀತಿ ಬೆಳೆಸ್ಕೊಂಡ್ ಬಿಟ್ಟಿದ್ದ. ಒಂದಿನ ರಾಜಕುಮಾರೀನೇ ಅವನನ್ನ ಕರೆದು `ಅಯ್ಯಾ ನಿನ್ನ ನೋಡಿದ್ರೆ ನಂಗೆ ಅಯ್ಯೋ ಅನ್ನಿಸ್ತಾ ಇದೆ. ನೋಡು ಇನ್ಮುಂದೆ ನೀನು ಬರ್ಬೇಡ’ ಎಂದಳು. ಅದಕ್ಕೆ ಪ್ರತಿಯಾಗಿ `ರಾಜಕುಮಾರಿ ನಿನ್ನ ನೋಡದೆ ನಾನು ಇರೋಕ್ಕೆ ಸಾಧ್ಯ ಇಲ್ಲ ನಾನು ಬಂದೇ ಬರ್ತೀನಿ. ಈ ಜೀವ ಇರೋವರ್ಗೂ’ ಎಂದ. ಅವನ ಉದ್ಧಟತನದ ಮಾತನ್ನ ಕೇಳಿ ಕೋಪಗೊಂಡ ರಾಜಕುಮಾರಿ `ಇವತ್ತು ನಿಂಗೆ ಇನ್ನೂರು ಚಡಿ ಏಟು’ ಎಂದಳು. ಬಡ ಬ್ರಾಹ್ಮಣನ ಮಗನ ಜಾಗದಲ್ಲಿ ಜೋಸೆಫನನ್ನು ಮತ್ತೆ ಮತ್ತೆ ಕಲ್ಪಿಸಿಕೊಂಡ ಚಿಟ್ಟಿಗೆ ಅವನ ಆರ್ತನಾದ ಕಿವಿಯ ಮೇಲೆ ಬಿದ್ದು ಸಂತೋಷವಾಯಿತು. ಇದ್ದಕ್ಕಿದ್ದ ಹಾಗೆ ಚಿಟ್ಟಿಯ ತಲೆಯ ಮೇಲೆ ಕಿರೀಟ ಬಂತು, ಮೈತುಂಬಾ ತಾನೆಂದೂ ಕಂಡು ಕೇಳಿರದ ಆಭರಣಗಳ ರಾಶಿ, ಚಿಟ್ಟಿ ರಾಜಕುಮಾರಿಯಾಗಿ ಸಿಂಹಾಸನದ ಮೇಲೆ ಕೂತು ಜೋಸೆಫ ಕೂಗುವುದನ್ನು ನೋಡುತ್ತಾ ನಗುತ್ತಿದ್ದಾಳೆ. ಇದ್ದಕ್ಕಿದ್ದ ಹಾಗೆ ಸೆಟೆದು ನಿಂತ ಜೋಸೆಫ್ ರಾಜಕುಮಾರಿ ಅನ್ನೋದನ್ನೂ ನೋಡದೆ ` ಚಿಟ್ಟಿ ನಿನ್ನ ಬಿಡ್ತೀನೇನೇ’ ಎನ್ನುತ್ತಾ ತನ್ನನ್ನು ಹೊಡೆಯುತ್ತಿದ್ದ ಚಾಟಿಯನ್ನು ಸೈನಿಕರ ಕಡೆಯಿಂದ ಕಿತ್ತು ನೆಲಕ್ಕೆ ಎಸೆದು ಹೊರಟು ಹೋದ. ಚಿಟ್ಟಿ ಅವನನ್ನು ಹಿಡಿಯಲು ಆಜ್ಞೆ ಮಾಡಿದಳು. ಯಾವ ಸೈನಿಕನ ಕೈಲೂ ಅವನನ್ನು ಹಿಡಿಯಲು ಆಗಲೇ ಇಲ್ಲ. ಚಿಟ್ಟೀಗೆ ತನ್ನ ಕಲ್ಪನೆಯಲ್ಲೂ ಬಲಿಷ್ಠ ಜೋಸೆಫನನ್ನು ಹಿಡಿಯಲು ಆಗಲಿಲ್ಲವಲ್ಲಾ ಎನ್ನುವ ಬೇಸರ ಮೂಡಿ ಅದು ದುಗುಡಕ್ಕೆ ತಿರುಗಿಬಿಟ್ಟಿತ್ತು. ಅಳಲಿಕ್ಕೆ ಶುರು ಮಾಡಿದ್ಲು.
ಅವಳ ಅಳುವನ್ನು ನೋಡಿ ಅತ್ತೆ `ಈಗ್ ತಾನೆ ಹೊಡೀಬೇಕು ಅಂದ್ಯಲ್ಲೆ ಚಿಟ್ಟಿ ಇಷ್ಟ್ ಬೇಗ ಆಳೂ ಬಂತಾ’ ಎಂದು ನಕ್ಕಳು. ಅಜ್ಜಿ ಬುಡ್ಡನಹಟ್ಟಿಯ ಜಮೀನಿನ ಕಡಲೆಕಾಯನ್ನು ಸ್ವಲ್ಪವೂ ಮಣ್ಣಿಲ್ಲದಂತೆ ತೊಳೆದು ಉಪ್ಪು ಹಾಕಿ ಬೇಯಿಸಿ ಕಥಾ ಸಂಭ್ರಮಕ್ಕೆ ಮುಂದಿಟ್ಟಳು. ಕಥೆ ಕೇಳುವಾಗ ಕಡಲೆ ಕಾಯಿ ತಿನ್ನೋದು  ಸಂಪ್ರದಾಯವೇನೋ ಅನ್ನುವ ಹಾಗೆ ಆಗಿಬಿಟ್ಟಿತ್ತು. ಚಿಟ್ಟಿಗೆ ದುಗುಡ ಮರೆಯಾಗಿ ಕಡ್ಲೆಕಾಯಿಯೇ ಮನಸ್ಸಿನ ತುಂಬಾ ತುಂಬಿಕೊಂಡಿತು. ಒಂದೊಂದೇ ಕಡಲೆಕಾಯನ್ನು ತೆಗೆದು ಸಿಪ್ಪೆ ಯ ಒಳಗಿರುವ ಉಪ್ಪು ನೀರನ್ನು ಮೊದಲು ಹೀರಿ ಆಮೇಲೆ ಒಳಗಿನ ಬೀಜವನ್ನು ತಿನ್ನತೊಡಗಿದಳು. `ಸುಬ್ಬಾ ನೀನೂ ತಿನ್ನೋದಲ್ವಾ ಕಾಯಿ ಬಿಸಿಯಾಗಿದೆ’ ಎಂದಳು ಅಜ್ಜಿ. `ನಂಗೇನು ದಿನಾ ಇದ್ದಿದ್ದೇ ನೀವ್ ತಿನ್ನಿ’ ಎನ್ನುತ್ತಾ ಅತ್ತೆ ಕಥೆ ಮುಂದುವರೆಸಿದಳು.
ಏಟು ತಿಂದು ರಾತ್ರಿಯೆಲ್ಲಾ ನರಳುತ್ತಾ ಮಲಗಿದ್ದ ಬ್ರಾಹ್ಮಣನ ಮಗನನ್ನು ಕಂಡು ಅವನ ತಾಯಿ ಸಂಕಟದಿಂದ ಅಳುತ್ತಾ ಕೂತಿದ್ದಾಳೆ.` ಇದೆಲ್ಲಾ ನಿನಗ್ಯಾಕೋ?ಇರೋನೊಬ್ಬ ಮಗ’ ಎನ್ನುತ್ತಾ ತಂದೆ ಅವನನ್ನು ಬೇಡಿಕೊಳ್ತಾ ಇದ್ದಾನೆ. ಆದ್ರೂ ಆ ಹುಡುಗನ ಮನಸ್ಸು ಅಲ್ಲಾಡಲ್ಲ `ನಂಗೆ ರಾಜಕುಮಾರೀನೇ ಬೇಕು. ಅವಳಿಗೋಸ್ಕರ ನಾನು ಜೀವಾನಾದ್ರೂ ಕೊಟ್ಟೆನು’ ಅಂತ ಹಟಕ್ಕೆ ಬೀಳುತ್ತಾನೆ. ಅತ್ತೆ ಕಥೆ ಮುಂದು ವರೆಸಿದಳು. ಚಿಟ್ಟಿಗೆ ಈಗ ಏನಂದ್ರೂ ಜೋಸೆಫನನ್ನು ಆ ಬ್ರಾಹ್ಮಣನ ಜಾಗದಲ್ಲಿ ಕಲ್ಪನೆ ಮಾಡಿಕೊಳ್ಳಲೂ ಆಗ್ತಾ ಇಲ್ಲ. `ಬ್ರಾಹ್ಮಣನ ಮಗ ಇಷ್ಟೊಂದು ಒಳ್ಳೆಯವನು. ಇವನಿಗೆ ಆ ಜೋಸೆಫ ಸಮವಾ? ಮತ್ತೆ ಅವನು ನನ್ನನ್ನು ಬೈದರೆ, ನೋಡ್ಕೋತೀನಿ’ ಅಂದುಕೊಂಡು ಬೇರೆ ಯಾರನ್ನೋ ಅಲ್ಲಿ ನಿಲ್ಲಿಸಲು ಪ್ರಯತ್ನಿಸಿ ಪದೆ ಪದೇ ಸೋತು ಹೋಗುತ್ತಿದ್ದಾಳೆ. ಅತ್ತೆ ಮಾತ್ರ ಕಥೆಗೆ ಹೊಸ ತಿರುವನ್ನು ಕೊಡುವಂತೆ ಮಾತಾಡುತ್ತಲೇ ಇದ್ದಾಳೆ. `ಆಕಾಶ ಮಾರ್ಗದಲ್ಲಿ ಭಟ್ಟಿವಿಕ್ರಮಾದಿತ್ಯ ತಾನು ವಶ ಪಡಿಸಿಕೊಂಡ ಬೇತಾಳನ ಮೇಲೆ ಕೂತು ಹಾದು ಹೋಗುವಾಗ ಆ ಬ್ರಾಹ್ಮಣ ತಾಯಿ ತಂದೆಯರ ಅಳು ಅವನ ಕಿವಿಯನ್ನು ಮುಟ್ಟಿತು. ಅವನೂ ರಾಜ, ಜನರ ಕಷ್ಟಕ್ಕೆ ಮರುಗುವವ. ಸೀದಾ ಆ ಬಡಬ್ರಾಹ್ಮಣನ ಮನೆಯ ಮುಂದೆ ಇಳಿಯುತ್ತಾನೆ. ಅವರ ಕಷ್ಟವನ್ನು ವಿಚಾರಿಸುತ್ತಾನೆ. ಎಲ್ಲಾ ಕಥೆಯನ್ನೂ ಕೇಳಿಕೊಂಡ ಅವನು ತಾನು ನಿಮ್ಮ ಸಮಸ್ಯೆಗೆ ಪರಿಷ್ಕಾರ ಕೊಡ್ತೀನಿ ಎಂದು ಭರವಸೆಕೊಟ್ಟು ಅಲ್ಲಿಂದ ಸಾಗ್ತಾನೆ.
ಹಾಗೆ ಸಾಗಿದ ವಿಕ್ರಮಾದಿತ್ಯ ಮಧ್ಯರಾತ್ರಿಯ ಆ ಹೊತ್ತಿನಲ್ಲಿ ಅರಮನೆಯ ಮುಂದೆ ನಿಲ್ಲುತ್ತಾನೆ. ಮಧ್ಯರಾತ್ರಿ, ಸುಮಾರು ನಾಕು ಗಂಟೆಯ ಹೊತ್ತು ಇಡೀ ದೇಶವೇ ನಿದ್ದೆಯಲ್ಲಿ ಮುಳುಗಿ ಹೋಗಿರುತ್ತದೆ. ರಾಜಕುಮಾರಿ ಅರಮನೆಯಿಂದ ಹೊರಗೆ ಬರುತ್ತಾಳೆ. ಅವಳಿಗಾಗಿ ಅಲ್ಲೊಂದು ಪುಷ್ಪಕ ವಿಮಾನ ಸಿದ್ಧವಾಗಿದೆ. ಅದರಲ್ಲಿ ಹತ್ತಿ ಅವಳು ಆಕಾಶ ಮಾರ್ಗವಾಗಿ ಹೊರಡುತ್ತಾಳೆ. ತನ್ನ ಬೇತಾಳದ ಬೆನ್ನನ್ನು ಹತ್ತಿದ ಭಟ್ಟಿ ವಿಕ್ರಮಾದಿತ್ಯ ಅವಳಿಗೆ ಗೊತ್ತಾಗದ ಹಾಗೇ ಅವಳನ್ನು ಹಿಂಬಾಲಿಸುತ್ತಾನೆ. ಆಕಶಮಾರ್ಗವಾಗಿ ಸಂಚರಿಸುತ್ತಾ ಬಂದ ಅವಳು ಒಂದು ಸುಂದರವಾದ ಜಾಗದಲ್ಲಿ ಇಳಿಯುತ್ತಾಳೆ. ಅಲ್ಲಿ ಒಂದು ಬೋರ್ಡ್ ಇದೆ. ಅದರ ಮೇಲೆ ರಂಗುಮಹಾಪಟ್ಟಣ ಅಂತ ಬರೆದಿದ್ದಾರೆ. ಅಚ್ಚರಿಯಿಂದ ಇದನ್ನೆಲ್ಲ ನೋಡುತ್ತಾ ಇರುವಾಗಲೇ ರಾಜಕುಮಾರಿ ಅಲ್ಲೇ ಇದ್ದ ಕೊಳದಲ್ಲಿ ಸ್ನಾನಕ್ಕೆ ಇಳೀತಾಳೆ. ಅವಳು ಸ್ನಾನ ಮುಗಿಸುವಷ್ಟರಲ್ಲಿ ವಿಕ್ರಮಾದಿತ್ಯ ಊರನ್ನ ನೋಡಿ ಬರೋಕ್ಕೆ ಅಂತ ಹೋಗ್ತಾನೆ. ಅವನಿಗೆ ಆಶ್ಚರ್ಯಾನೋ ಆಶ್ಚರ್ಯ! ಊರಿನಲ್ಲಿ ಎಲ್ಲಿ ನೋಡಿದ್ರೂ ಕಲ್ಲಿನ ವಿಗ್ರಹಗಳೇ. ತರಕಾರಿ ಮಾರ್ತಾ ಇರೋರು, ಊಟ ಮಾಡ್ತಾ ಇರೋರು, ಮಾತಾಡ್ತಾ ಕೂತಿರೋರು, . . . . .ಹೀಗೆ ಎಲ್ಲಾ ಕಲ್ಲೆ. ಇದೆಲ್ಲಾ ನೋಡಿಕೊಂಡು ವಾಪಾಸು ದೇವಸ್ಥಾನದ ಹತ್ರಕ್ಕೆ ಬರೋ ಹೊತ್ಗೆ. ರಾಜಕುಮಾರಿ ಸ್ನಾನ ಮುಗಿಸಿ ದೇವಸ್ಥಾನದಲ್ಲಿದ್ದ ಶಿವಲಿಂಗಕ್ಕೆ ಕಲ್ಯಾಣಿಯಲ್ಲಿ ಬೆಳೆದಿದ್ದ ಕಮಲದ ಹೂವನ್ನು ತಂದು ಪೂಜೆ ಮಾಡಿ, ಮತ್ತೆ ಪುಷ್ಪಕ ವಿಮಾನ ಹತ್ತಿ ಹೊರಡುತ್ತಾಳೆ.
ಇದನ್ನೆಲ್ಲಾ ನೋಡಿದ ವಿಕ್ರಮಾದಿತ್ಯ ಈ ವಿಷಯವನ್ನು ಬ್ರಾಹ್ಮಣ ಯುವಕನಿಗೆ ತಿಳಿಸಿ `ಇವತ್ತು ಹೋಗಿ ಆ ರಾಜಕುಮಾರಿಗೆ ಹೇಳು ರಂಗು ಮಹಾಪಟ್ಟಣ ನೋಡಿದ್ದೀನಿ, ಆ ಊರಲ್ಲಿ ಇರೋದೆಲ್ಲಾ ಕಲ್ಲೇ. ಜನ, ಆಕಳು, ನಾಯಿ, ಹಣ್ಣು ತರಕಾರಿ, ರಾಜ ರಾಣಿ ಎಲ್ಲಾ ಎಲ್ಲಾ ಕಲ್ಲೇ. ಅಲ್ಲೊಂದು ಕಲ್ಯಾಣಿ ಇದೆ. ಅದರ ತುಂಬಾ ಕಮಲದ ಹೂಗಳು ಅರಳಿರುತ್ವೆ. ಬೆಳಗಿನ ಜಾವಕ್ಕೆ ಯಾರೋ ಆ ಲಿಂಗಕ್ಕೆ ಪೂಜೆ ಮಾಡಿರುತ್ತಾರೆ ಅಂತ ‘ ಎಂದು ಹೇಳಿದ. ಆ ಬ್ರಾಹ್ಮಣ ಯುವಕ ಮತ್ತೆ ಬಂದು ಅರ್ಮನೆಯ ಮುಂದಿನ ಗಂಟೆ ಬಾರಿಸಿದ. ರಾಜಕುಮಾರಿಗೆ ಬೇಸರ. ಆದ್ರೂ ನಿಯಮ ಅಂದ್ರೆ ನಿಯಮ. ಚಿಟ್ಟಿಯ ಮನಸ್ಸಿನಲ್ಲಿ ಈಗ ಯಾರನ್ನ ತಂದು ನಿಲ್ಲಿಸುವುದು ಎನ್ನುವ ದೊಡ್ದ ಪ್ರಶ್ನೆಗೆ ಸುಳಿದಾಡುತ್ತಿತ್ತು. ಊರಿಗೇ ಸುಂದರ ಎಂದು ಕರೆಸಿಕೊಳ್ಳುವ ಪಂದಾಳೆ ಕೃಷ್ಣಪ್ಪನವರ ಮೊಮ್ಮಗ, ಸ್ವ್ವಲ್ಪ ಒರಚು ಕಣ್ಣಿನ, ಸದಾ ಟಸ್ ಪುಸ್ ಸೆಂಟು ಹಾಕಿಕೊಂಡು ಘಂ ಎನ್ನುತ್ತಿದ್ದ ಕಾಂಪೌಂಡರ್ ಮುರಳಿಯನ್ನ ನಿಲ್ಲಿಸಿಕೊಳ್ಳಲು ನೋಡಿದಳು. ಅವನು ಯಾವತ್ತೂ ತನ್ನ ಕಡೆ ತಿರುಗಿ ಕೂಡಾ ನೋಡಿರಲಿಲ್ಲ. ಹಾಗಿದ್ದ ಮೇಲೆ ನನ್ನ ಹಿಂದೆ ಬೀಳೋಕ್ಕೆ ಹೇಗೆ ಸಾಧ್ಯ? ಅನ್ನಿಸಿ ಕೈಚೆಲ್ಲಿ ಕೂತಳು. ಅವಳ ಮುಖದಲ್ಲಿ ಜೋಸೆಫನ ರೌದ್ರಾವತಾರದ ಮುಖವೇ ನಿಂತು ಕಥೆಯ ಒಳಗೆ ಹೋಗುವುದಕ್ಕೆ ಅಡ್ಡಿ ಮಾಡುತ್ತಿತ್ತು. ಕೊನೆಗೂ ಮುಖವಿಲ್ಲದ ಯಾವುದೋ ವ್ಯಕ್ತಿಯನ್ನು ತಂದು ನಿಲ್ಲಿಸಿಕೊಂಡು ಸುಮ್ಮನಾಗಿಬಿಟ್ಟಳು ಚಿಟ್ಟಿ.
ತನ್ನೆದುರಿಗಿನ ಬ್ರಾಹ್ಮಣ ಯುವಕನ ಮುಖವನ್ನು ನೋಡದೆ ರಾಜಕುಮಾರಿ `ರಂಗುಮಹಾಪಟ್ಟಣವನ್ನು ನೋಡಿದ್ದೀಯಾ?’ ಎಂದಳು. ಯುವಕ ಅಷ್ಟೇ ದೃಢವಾಗಿ ಹೇಳಿದ `ನೋಡಿದ್ದೇನೆ’. ರಾಜಕುಮಾರಿಗೆ ಅಚ್ಚರಿ. ತಟ್ಟೆಂದು ಅವನ ಕಡೆಗೆ ನೋಡಿದಳು. `ಅಲ್ಲಿನ ವಿಶೇಷತೆ ಏನು?’ ಮತ್ತೆ ಕೇಳಿದಳು. ವಿಕ್ರಮಾದಿತ್ಯ ಹೇಳಿದ್ದನ್ನ ಚಾಚೂ ತಪ್ಪದೆ ಒಪ್ಪಿಸಿದನು. `ಹಾಗಾದ್ರೆ ನಾಳೆ ಅಲ್ಲಿಗೆ ಬಾ’ ಎಂದು ಎದ್ದು ಹೊರಟೇ ಬಿಟ್ಟಳು.’ ಅತ್ತೆ ಕತೆ ಹೇಳುತ್ತಳೇ ಇದ್ದಳು. ಈಗ ಚಿಟ್ಟಿಗೆ ಆ ಯುವಕನಿಗಿಂತ ವಿಕ್ರಮಾದಿತ್ಯನ ಮೇಲೆ ಯಾಕೋ ಮನಸ್ಸು ನಿಲ್ಲಲಾರಂಭಿಸಿತು. ಅರೆ ಇಷ್ಟು ಪರಾಕ್ರಮಿಯಾದ ಹುಡುಗ, ಅದೂ ಮಹಾರಾಜ ರಾಜಕುಮಾರಿಯನ್ನು ಪ್ರೀತಿಸಿದರೆ ಚೆನ್ನಾಗಿರ್ತಾ ಇತ್ತಲ್ವ’ ಅನ್ನಿಸಿತು. ಆದ್ರೆ ಯಾಕೋ ತಾನು ರಾಜಕುಮಾರಿಯಾಗದೇ ವಿಕ್ರಮಾರ್ಕನ ಮುಖವನ್ನೂ ಕಲ್ಪಿಸಿಕೊಳ್ಳಲು ಹೋಗದೆ ಸುಮ್ಮನೆ ಉಳಿದುಬಿಟ್ಟಳು.
ಅತ್ತೆಯ ಕಥೆ ಕೊನೆಯೇ ಇಲ್ಲದೆ ಸಾಗುತ್ತಿತ್ತು `ಯುವಕನಿಗೀಗ ಪ್ರಾಣ ಸಂಕಟ. ವಿಕ್ರಮಾದಿತ್ಯನಿಗೆ ವಿಷಯ ತಿಳಿಸಿದ. `ನಾನಿದ್ದೀನಿ ಯೋಚ್ನೆ ಮಾಡ್ಬೇಡ’ ಅಂದ ವಿಕ್ರಮಾದಿತ್ಯ. ಮಧ್ಯರಾತ್ರಿ ಯುವಕನನ್ನು ಕರೆದುಕೊಂಡು ರಂಗು ಮಹಾಪಟ್ಟಣದ ಕಲ್ಯಾಣಿಯ ಕೊಳದ ಮೇಲೆ ಕೂರಿಸಿ ಹಲ್ಲಿ, ನೊಣ ಆಗಿ ದೇವಸ್ಥಾನದ ಗೋಡೆಯ ಮೇಲೆ ಕೂತರು. ರಾಜಕುಮಾರಿ ಬಂದಳು. ಯುವಕನನ್ನು ನೋಡಿಯೂ ನೋಡದಂತೆ ಪೂಜೆ ಮುಗಿಸಿದಳು. ನಂತರ ಅವನ ಹತ್ತಿರಕ್ಕೆ ಬಂದು `ನೀನು ಇಲ್ಲಿಗೆ ಒಬ್ಬನೇ ಬರೋಕ್ಕಂತೂ ಸಾಧ್ಯ ಇಲ್ಲ. ಹೇಳು ಹೇಗೆ ಬಂದೆ? ಎನ್ನುತ್ತಾ ತನ್ನ ಕತ್ತಿಯನ್ನು ತೆಗೆದಳು . ಬೆದರಿದ ಯುವಕ `ಭಟ್ಟಿ ವಿಕ್ರಮಾದಿತ್ಯ’ ಎನ್ನುತ್ತಾ ಕೂಗಿದ. ಹಲ್ಲಿ ನೊಣ ಆಗಿದ್ದ ವಿಕ್ರಮ, ಭೇತಾಳರು ಪ್ರತ್ಯಕ್ಷ ಆದರು. ಅವರನ್ನ ಹಾಗೆ ನೋಡಿ ಆ ರಾಜಕುಮಾರಿಗೆ ಸಂತೋಷವಾಯಿತು. `ಏನಿದು ನಿನ್ನ ಕಥೆ?’ ಎಂದ ವಿಕ್ರಮಾರ್ಕನಿಗೆ ರಾಜಕುಮಾರಿ `ಇಡೀ ರಂಗು ಮಹಾಪಟ್ಟಣ ಕಲ್ಲಾಗೋಕ್ಕೆ ಕಾರಣ ನಾನೇ’ ಎಂದು ತನ್ನ ಕಥೆಯನ್ನು ಹೇಳಲಿಕ್ಕೆ ಶುರು ಮಾಡಿದ್ಲು.
ಹೆಬ್ಬೆರಳನ್ನು ಬಾಯಿಗೆ ಹಾಕಿ ಸೀನ ಆಗಲೇ ಮಲಗಿಬಿಟ್ಟಿದ್ದ. ಪುಟ್ಟಿ ತೂಕಡಿಸುತ್ತಲೇ ಹುಂ ಎನ್ನುತ್ತಿದ್ದಳು. ಈಗ ಪೂರ್ತಿ ಕಥೆ ಕೂತವಳು ಚಿಟ್ಟಿ ಮಾತ್ರಾ. ಅತ್ತೆ ಅವಳನ್ನು ನೋಡುತ್ತಾ ಕಥೆಯನ್ನು ಮುಂದುವರೆಸಿದಳು.
`ಒಂದು ದಿನ ಅರಮನೆಯ ಮಹಡಿಯ ಮೇಲೆ ತಲೆ ಒಣಗಿಸಿಕೊಳ್ಳುತ್ತಾ ನಿಂತಿದ್ದೆ. ಅದೇ ಹೊತ್ತಿಗೆ ಒಬ್ಬ ಋಷಿ ಆ ದಾರೀಲಿ ನಡೆಯುತ್ತಾ ಬಂದ. ನಾನು ರಾಜಕುಮಾರಿ, ಅಟ್ಟಣಿಕೆಯನ್ನು ಇಳಿದು ಬರುವುದೇ, ನನ್ನ ಪಾಡಿಗೆ ನಿಂತು ತಲೆ ಒಣಗಿಸಿಕೊಳ್ಳುತ್ತಿದ್ದೆ. ಅದನ್ನ ನೋಡಿದ ಋಷಿಗೆ ಕೋಪ ಬಂತು ಅವನು ` ನಿನ್ನ ದುರಹಂಕಾರಕ್ಕೆ ಇದೋ ನನ್ನ ಶಾಪ, ಇಡೀ ರಂಗು ಮಹಾಪಟ್ಟಣ ಕಲ್ಲಾಗಲಿ’ ಎಂದು ಶಾಪ ಕೊಟ್ಟ. ಅದನ್ನ ಕೇಳಿದ ನಂತರವೇ ನನಗೆ ನನ್ನ ತಪ್ಪಿನ ಅರಿವಾಗಿದ್ದು. ನಾನು ಓಡಿ ಬಂದು ಅವನ ಕಾಲನ್ನು ಹಿಡಿದುಕೊಂಡೆ. ನನ್ನ ಪ್ರಾರ್ಥನೆಗೆ ಕರಗಿ, ಕೊಟ್ಟ ಶಾಪವನ್ನು ವಾಪಾಸು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನನಗಾಗಿ ಇನ್ನೊಂದು ಪಟ್ಟಣವನ್ನು ನಿರ್ಮಿಸಿ ಇಲ್ಲಿ ಏನೇನಿತ್ತೋ ಎಲ್ಲವನ್ನೂ ಅಲ್ಲಿ ಕೂಡಾ ಇರುವಂತೆ ಮಾಡಿದರು. ಈ ಶಾಪಕ್ಕೆ ವಿಮೋಚನೆಯಾಗಿ ನ್ಯಾಯದೇವತೆಯ ಪ್ರತಿರೂಪವಾದ ಭಟ್ಟಿ ವಿಕ್ರಮಾದಿತ್ಯ ಇಲ್ಲಿಗೆ ಬಂದು ಯಾವತ್ತು ಎಲ್ಲವನ್ನೂ ಸ್ಪರ್ಷಿಸುತ್ತಾನೋ ಆಗ ನಾನು ನಿರ್ಮಿಸಿದ ಪಟ್ಟಣ ಇಲ್ಲವಾಗಿ ಮತ್ತೆ ರಂಗುಮಹಾಪಟ್ಟಣ ಜೀವಂತವಾಗುತ್ತದೆ ಎಂದರು. ಆದರೆ ನನ್ನ ತಪ್ಪಿಂದ ಇಲ್ಲಿ ಪೂಜೆ ನಿಲ್ಲಬಾರದು ಎಂದು ಪುಷ್ಪಕ ವಿನಾವನ್ನು ಕೊಟ್ಟು ದಿನಾ ಪೂಜಿಸಲು ಅನುವು ಮಾಡಿಕೊಟ್ಟಿದ್ದರು. ಈಗ ನೀವು ಬಂದಿರಿ, ಇನ್ನು ರಂಗು ಮಹಾಪಟ್ಟಣ ಜೀವಂತವಾಗುತ್ತದೆ ನಿಮ್ಮ ಹಸ್ತ ಸ್ಪರ್ಷಕ್ಕೆ ಇಡೀ ಊರೇ ಕಾಯುತ್ತಿದೆ ಬನ್ನಿ’ ಎನ್ನುತ್ತಾ ಕರೆದೊಯ್ದಳು..
ಬ್ರಾಹ್ಮಣ ಯುವಕ ಮತ್ತು ಬೇತಾಳ ಕೂಡಾ ಅವಳ ಜೊತೆ ಸಾಗಿದರು. ವಿಕ್ರಮಾದಿತ್ಯ ಕಲ್ಲಾಗಿದ್ದ ಎಲ್ಲವನ್ನೂ ಮುಟ್ಟುತ್ತಾ ಬಂದ. ಶಿಲೆಗಳೆಲ್ಲವೂ ಜೀವ ತುಂಬಿ ಮನುಷ್ಯರಾಗಿ ಪ್ರಾಣಿಪಕ್ಷಿಗಳಾಗಿ ಪರಿವರ್ತನೆಗೊಂಡು ಸಹಜ ವ್ಯಾಪಾರ ಶುರುವಾಯಿತು. ರಾಜಕುಮಾರಿಯ ವಿಗ್ರಹದ ಬಳಿಗೆ ಬಂದ ವಿಕ್ರಮಾದಿತ್ಯನಿಗೆ ರಾಜಕುಮಾರಿ `ಮುಟ್ಟಿ’ ಎನ್ನುತ್ತಾ ನಕ್ಕಳು. ವಿಕ್ರಮಾದಿತ್ಯ ಮುಟ್ಟಿದ ರಾಜಕುಮಾರಿ ಕುಸಿದು ಕೂತು ಕರಗಿ ಮಾಯವಾದಳು. ನಿಜವಾದ ರಾಜಕುಮಾರಿ ಜೀವಂತವಾಗಿ ವಿಕ್ರಮಾದಿತ್ಯನ ಎದುರು ಕೈ ಮುಗಿದು ನಿಂತಿದ್ದಳು. ಅವಳನ್ನು ಪ್ರ್ರೀತಿಸುತ್ತಿದ್ದ ಬ್ರಾಹ್ಮಣ ಯುವಕನ ಕಣ್ಣಲ್ಲಿ ನೀರು. ವಿಕ್ರಮಾದಿತ್ಯ ಕೇಳಿದ `ಈಗ ನೀನು ಈ ರಾಜ ಕುಮಾರಿಯನ್ನು ಮದುವೆಯಾಗಬಹುದಲ್ಲ?’ ಇದಕ್ಕೆ ರಾಜಕುಮಾರಿಯೂ ಒಪ್ಪಿದಳು. ಆದರೆ ಯುವಕ ಒಪ್ಪಲಿಲ್ಲ. `ನಾನು ಪ್ರೀತಿಸಿದ್ದು ಆ ರಾಜಕುಮಾರಿಯನ್ನು . ಅವಳೇ ಇಲ್ಲದ ಮೇಲೆ ಬೇರೆಲ್ಲಾ ತಗೊಂಡು ಏನು ಮಾಡಲಿ. ನನ್ನ ವಿಗ್ರಹವನ್ನು ಮುಟ್ಟಿಬಿಡಿ. ನನಗೆ ಈ ಜೀವನ ಬೇಡ’ ಎಂದು ತಾನೇ ಕೈ ಹಿಡಿದು ಕರೆದುಕೊಂಡು ಹೋಗಿ ತನ್ನ ವಿಗ್ರಹದ ಮೇಲೆ ಕೈ ಇರಿಸಿದ. ಯಥಾಪ್ರಕಾರ ಆ ವಿಗ್ರಹಕ್ಕೆ ಜೀವ ಬಂದು ಈ ಯುವಕ ಕರಗಿ ಹೋದ. ವಿಕ್ರಮಾದಿತ್ಯ ರಾಜಕುಮಾರಿಯನ್ನು ಆಶೀರ್ವಾದ ಮಾಡಿ ಅಲ್ಲಿಂದ ಮತ್ತೆ ಬೇತಾಳನ ಬೆನ್ನನ್ನು ಹತ್ತಿ ಹೊರಟು ಬಿಟ್ಟ.
ಅತ್ತೆ ಕಥೆ ಮುಗಿಸಿದಳು. ಆದರೆ ಚಿಟ್ಟಿ ಮಾತ್ರ ಕಣ್ಣು ಬಾಯನ್ನು ಬಿಟ್ಟುಕೊಂಡು ಕೇಳುತ್ತಾ ಕುಳಿತಿದ್ದಳು. ಅಕಸ್ಮಾತ್ ಜೋಸೆಫ್ ಕೂಡಾ ಹೀಗೆ ತನ್ನ ಬಗ್ಗೆ ಅಂದುಕೊಂಡಿದ್ದರೆ. . . . . ಈಗ ಅದಲ್ಲ ಪ್ರಶ್ನೆ- ಇದೇ ಕತೆಯನ್ನು ಹಿಂದೆ ಕೇಳಿದಾಗಲೂ ಈ ಯೋಚನೆ ಅವಳ ತಲೆಯಲ್ಲಿ ಸುಳಿದಿರಲಿಲ್ಲ. ವಿಕ್ರಮಾದಿತ್ಯ ಯಾಕೆ ರಾಜಕುಮಾರಿಯನ್ನು ಮದುವೆಯಾಗದೇ ಹೋದ ರಾಜಕುಮಾರಿ ಯಾಕೆ ಒಂಟಿಯಾದಳು? ಇದು ನ್ಯಾಯವಾ ಎನ್ನುವ ಪ್ರಶ್ನೆ ಅವಳ ತಲೆಯಲ್ಲಿ ಸುಳಿದು ಹೋಯಿತು.
ಅಷ್ಟೂ ಕಥೆಯನ್ನು ಹೇಳಿ ಕೊನೆಗೆ `ಈ ಪ್ರಶ್ನೆಗೆ ಉತ್ತರ ಹೇಳದಿದ್ರೆ ನಿನ್ನ ತಲೆ ಒಡೆದು ನೂರು ಹೋಳಾಗಿ ಹೋಗುತ್ತದೆ’ ಎಂದಳು ಚಿಟ್ಟಿ ಭಾರತಿಗೆ. `ಇದೆಲ್ಲ ಕಥೆ ಅಂತ ನಂಗೊತ್ತು ಕಣೆ ನೀನೇನ್ ಹೇಳ್ಬೇಡ. ಹಾಗೆಲ್ಲಾ ಏನೂ ಹೇಳ್ಬೇಡ ಹೋಗು’ ಎಂದಳು ಎಲ್ಲ ತಿಳಿದವಳಂತೆ. `ಹಾಗಾದ್ರೆ ಇದೆಲ್ಲಾ ಏನೂ ನಡೆದೇ ಇಲ್ವಾ?’ ಅಷ್ಟರಲ್ಲಿ ಜೋರಾಗಿ ಹಲಗೆ ಬಡೆದ ಶಬ್ದ ಕೇಳಿತು ಭಾರತಿ ಆ ಕಡೆಗೆ ಓಡಿದಳು. ಏನೋ ಯೋಚಿಸುತ್ತಾ ನಿಂತಿದ್ದ ಚಿಟ್ಟಿ ಕೂಡಾ ಭಾರತಿಯ ಹಿಂದೆ ಹೊರಟಳು. ದೇಹ ತಲೆ ಬೇರ್ಪಟ್ಟ ಕೋಣವೊಂದು ನೆಲದ ತುಂಬಾ ರಕ್ತವನ್ನು ಹರಿಸಿಕೊಳ್ಳುತ್ತಾ ಒದ್ದಾಡುತ್ತಾ ಬಿದ್ದಿತ್ತು. ಚಿಟ್ಟಿಗೆ ಮೈತುಂಬಾ ಜಿಗುಪ್ಸೆ ತುಂಬಿಕೊಂಡಿತು. ಭಾರತಿಯ ಕಡೆಗೆ ನೋಡಿ `ಇದೆಲ್ಲಾ ಯಾಕ್ ಮಾಡ್ತಾರೆ? ಬಹುಶಃ ಯಾವುದೋ ಋಷಿ ಇವುಗಳಿಗೂ ಶಾಪ ಕೊಟ್ಟಿರಬೇಕು’ ಎಂದಳು. ಆ ಕ್ಷಣ ಚಿಟ್ಟಿಗೆ ಬವಳಿ ಬಂದಂತಾಗಿ ಭಾರತಿಯನ್ನು ಹಿಡಿದುಕೊಂಡಳು. ಅವಳ ಸ್ಥಿತಿ ಕೂಡಾ ಬೇರೆ ಇರಲಿಲ್ಲ. ಇಬ್ಬರೂ ದಿಕ್ಕು ತೋಚದವರಂತೆ ನಿಂತರು. ಅಲ್ಲಿದ್ದವರು ಯಾರೋ `ಹೋಗ್ರಮ್ಮಾ ಆಕಡೆಗೆ’ ಎಂದು ಇಬ್ಬರನ್ನೂ ಗದರಿ ಅಲ್ಲಿಂದ ಅಟ್ಟಿದರು. ದೈನ್ಯವಾದ ಕೋಣದ ಕಣ್ಣುಗಳು ಮಾತ್ರ ಚಿಟ್ಟಿಯನ್ನು ಹಿಂಬಾಲಿಸುತ್ತಿದ್ದವು. ರಂಗುಮಹಾಪಟ್ಟಣದ ಸಾವನ್ನ ಕೊಡು ಎಂದು ಕೇಳಿದ ಯುವಕನ ಕಣ್ಣಿನಂತೆ.
 

‍ಲೇಖಕರು avadhi

August 20, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: