ಮಿಲ್ಖಾ ಸಿಂಗ್ ನೆನಪು..

ಕನ್ನಡಕ್ಕೆ: ಪ್ರಸಾದ್ ನಾಯ್ಕ್

ರೇಖಾ ಚಿತ್ರ: ಉದಯ್ ಗಾಂವ್ಕರ್

ಮಿಲ್ಖಾ ಸಿಂಗ್ ಆತ್ಮಕತೆ ‘ರೇಸ್ ಆಫ್ ಮೈ ಲೈಫ್’ ಕೃತಿಯಲ್ಲಿ ಬರುವ ಕೆಲ ಅಸಾಮಾನ್ಯ ನೆನಪುಗಳು:

‘ಇಂಡಿಯನ್ ಆರ್ಮಿಯಲ್ಲಿದ್ದಾಗ ಮೈಮನಗಳು ದಣಿಯುವ ದೈನಂದಿನ ಕಾರ್ಯಗಳ ಹೊರತಾಗಿ ಮುಂಜಾನೆಯೂ, ಸಂಜೆಯೂ ಐದು ತಾಸುಗಳ ಕಾಲ ಕಠಿಣ ಅಭ್ಯಾಸ ಮಾಡುತ್ತಿದ್ದೆ. ಇದು ವಾರಕ್ಕೆ ಏಳು ದಿನ, ವರ್ಷದ ಮುನ್ನೂರೈವತ್ತು ದಿನಗಳ ಕಾಲ ನಿರಂತರ ಸಾಗುತ್ತಿತ್ತು. ರಾಕ್ಷಸಚಳಿಯಾಗಿರಲಿ, ಕೊಲ್ಲುವ ಬಿಸಿಲಾಗಿರಲಿ… ದೈನಂದಿನ ಅಭ್ಯಾಸವನ್ನು ನಾನು ನಿಲ್ಲಿಸುತ್ತಿರಲಿಲ್ಲ. ದಿಲ್ಲಿಯ ನಲವತ್ತು ಡಿಗ್ರಿಯ ರಣಬಿಸಿಲಿನಲ್ಲೂ ಬಕೆಟ್ಟುಗಟ್ಟಲೆ ಬೆವರು ಸಂಗ್ರಹವಾಗುವಷ್ಟು ಓಡುತ್ತಿದ್ದೆ.

ಕೆಲವೊಮ್ಮೆ ನನ್ನ ಓಟದ ವೇಗವನ್ನು ಅದೆಷ್ಟು ಹೆಚ್ಚಿಸುತ್ತಿದ್ದೆನೆಂದರೆ ಓಟ ಮುಗಿಸಿದ ನಂತರ ರಕ್ತವನ್ನೇ ಕಕ್ಕುತ್ತಿದ್ದೆ. ಮುಖವು ಶವದಂತೆ ಪೇಲವವಾಗುತ್ತಿತ್ತು. ಕಣ್ಣು ಕತ್ತಲಾಗಿ, ಪ್ರಜ್ಞೆತಪ್ಪಿ ಬೀಳುತ್ತಿದ್ದೆ. ಇದು ಅಪಾಯಕಾರಿ ಎಂದು ನನ್ನ ಸ್ನೇಹಿತರು, ವೈದ್ಯರು, ತರಬೇತುದಾರರು, ಸಹೋದ್ಯೋಗಿಗಳು ಹೇಳಿದರೂ ನನಗದರ ಕಡೆ ಗಮನವಿರಲಿಲ್ಲ. ನನಗೆ ಈ ಜಗತ್ತಿನ ಅತ್ಯುತ್ತಮ ಅಥ್ಲೀಟ್ ಆಗಬೇಕಿತ್ತು. ಅಷ್ಟೇ!’

‘ಭಾರತ ವಿಭಜನೆಯ ದಂಗೆಗಳು ಭೀಕರವಾಗಿದ್ದವು. ನಾನಾಗ ಪುಟ್ಟ ಬಾಲಕ. ಅಂದು ಅಪ್ಪ ವೀರಯೋಧನಂತೆ ಹೋರಾಡುತ್ತಲೇ ಇದ್ದರು. ‘ಭಾಗ್ ಮಿಲ್ಖಾ ಭಾಗ್’ (ಓಡು ಮಿಲ್ಖಾ, ಓಡು ಇಲ್ಲಿಂದ) ಎಂದು ಬೊಬ್ಬಿರಿಯುತ್ತಾ ರಕ್ತದ ಮಡುವಿನಲ್ಲಿ ಜೀವಬಿಟ್ಟರು. ಅಮ್ಮ ಆಶ್ರಯಕ್ಕೆಂದು ಅರಸಿಹೋಗಿದ್ದ ಪವಿತ್ರ ಗುರುದ್ವಾರವು ನನ್ನ ಕಣ್ಣೆದುರಿಗೆ ಧಗಧಗ ಎಂದು ಹೊತ್ತಿ ಉರಿಯಿತು. ನನ್ನ ಅಣ್ಣಂದಿರಾದ ಆಮೀರ್ ಮತ್ತು ದೌಲತ್ ತಮ್ಮ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಕೈಯಾರೆ ಕೊಂದು ತಾವೂ ದುರ್ಮರಣಕ್ಕೀಡಾದರು. ಒಟ್ಟಿನಲ್ಲಿ ದೇಶ ವಿಭಜನೆಯ ದಂಗೆಯು ನಮ್ಮ ಕುಟುಂಬವನ್ನು ಬರ್ಬರವಾಗಿ ಹೊಸಕಿಹಾಕಿತ್ತು. ನಾನು ಅದ್ಹೇಗೋ ಜೀವ ಉಳಿಸಿಕೊಂಡು ತಪ್ಪಿಸಿಕೊಂಡಿದ್ದೆ. ಆ ಆಘಾತವು ಮುಂದೆ ನನ್ನ ಬದುಕಿನುದ್ದಕ್ಕೂ ಉಳಿದುಹೋಯಿತು’

‘ನಿನ್ನಂಥಾ ಅದೆಷ್ಟು ಚಿಲ್ಲರೆ ಓಟಗಾರರನ್ನು ನಾನು ಕಂಡಿಲ್ಲ’, ಎಂದು ಪಾಕಿಸ್ತಾನಿ ಓಟಗಾರ ಅಬ್ದುಲ್ ಖಲೀಕ್ ನನ್ನನ್ನು ಅಣಕಿಸಿದ್ದ. ಆದರೆ ಅದೇ ಟೂರ್ನಮೆಂಟಿನಲ್ಲಿ ನಾನವನನ್ನು ಮಣಿಸಿದ್ದೆ. ಮುಂದೆ ಪಾಕಿಸ್ತಾನದಲ್ಲೇ ನಡೆದ ಇಂಡೋ-ಪಾಕ್ ಸ್ಪೋಟ್ರ್ಸ್ ಟೂರ್ನಮೆಂಟಿನಲ್ಲಿ ಆತನನ್ನು ಮತ್ತೊಮ್ಮೆ ಸೋಲಿಸಿದೆ. ತನ್ನದೇ ನೆಲದಲ್ಲಿ, ತನ್ನದೇ ಅಭಿಮಾನಗಳೆದುರು ಕಂಡ ಸೋಲು ಆತನಿಗೆ ಬಹಳ ನೋವಿನದ್ದಾಗಿತ್ತು. ದುಃಖ ತಡೆಯಲಾರದೆ ಟ್ರ್ಯಾಕಿನಲ್ಲೇ ಗೋಳೋ ಎಂದು ಅತ್ತುಬಿಟ್ಟಿದ್ದ. ನಾನೇ ಹೋಗಿ, ಹಿತವಾಗಿ ಬೆನ್ನು ತಟ್ಟಿ ಆತನನ್ನು ಸಂತೈಸಿದೆ. ಆಟದಲ್ಲಿ ಸೋಲು-ಗೆಲುವುಗಳಿದ್ದಿದ್ದೇ ಮಿತ್ರ ಎಂದು ಸಮಾಧಾನಪಡಿಸಿದೆ. ಅಬ್ದುಲ್ ಖಲೀಕ್ ಮಾಡಿದ್ದ ಕ್ಷುಲ್ಲಕ ಗೇಲಿಯನ್ನು ನಾನು ಮರೆತಿರಲಿಲ್ಲ. ಆದರೆ ಅದನ್ನೇ ಮರಳಿಸುವುದು ನನ್ನ ಸ್ಟೈಲ್ ಅಲ್ಲ.

‘ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರಾಗಿದ್ದ ಅಯೂಬ್ ಖಾನ್ ‘ಮಿಲ್ಖಾ, ನೀನಿವತ್ತು ಓಡಿಲ್ಲ. ಅಕ್ಷರಶಃ ಹಾರಿಬಿಟ್ಟೆ’ ಎಂದು ಅಭಿನಂದಿಸಿದರು. ಇಂದು ನನ್ನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ‘ಫ್ಲೈಯಿಂಗ್ ಸಿಖ್’ (ಹಾರುವ ಸಿಖ್) ಬಿರುದನ್ನು ಸೃಷ್ಟಿಸಿದ್ದೇ ಅಯೂಬ್ ಖಾನ್. ಆ ದಿನ ಮಹಿಳೆಯರ ವಿಭಾಗದತ್ತ ನಾನು ನಡೆದುಹೋಗುವಾಗ ಹಲವು ಪಾಕಿಸ್ತಾನಿ ಮಹಿಳೆಯರು ತಮ್ಮ ಬುರ್ಖಾ ಎತ್ತಿ ನನ್ನನ್ನು ಕುತೂಹಲದಿಂದ ನೋಡುತ್ತಿದ್ದರು. ಇವನ್ಯಾರಪ್ಪಾ ಅನ್ನುವಂತೆ! ಈ ಸಂಗತಿಯು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಬಹಳ ಸುದ್ದಿಯಾಗಿತ್ತು’

‘ನಿವೃತ್ತಿಯ ದಿನಗಳ ನಂತರ ಅಕಾಡೆಮಿ ಶುರು ಮಾಡಿದೆ. ಹಲವು ಮಕ್ಕಳು ನನ್ನ ಬಳಿ ಬಂದು ‘ನಾನೂ ಮಿಲ್ಖಾ ಸಿಂಗ್’ ಆಗಬೇಕು ಎಂದು ಉತ್ಸಾಹದಲ್ಲಿ ಬರುತ್ತಿದ್ದರು. ನಾಲ್ಕೈದು ದಿನಗಳ ಕಠಿಣ ತರಬೇತಿಯ ನಂತರ ಹೈರಾಣಾಗಿ ಕೈಲಾಗದವರಂತೆ ಓಡುತ್ತಿದ್ದರು. ನಿಮಗೇನನ್ನಿಸುತ್ತೆ? ಮಿಲ್ಖಾ ಸಿಂಗ್ ಆಗುವುದೇನು ಸುಲಭದ ಮಾತೇ? ಅದು ಚಿಟಿಕೆ ಹೊಡೆಯುವಷ್ಟು ಸರಳವಲ್ಲ. ಮಿಲ್ಖಾ ಸಿಂಗ್ ಆಗಲು ಬದುಕಿನಲ್ಲೊಂದು ಸ್ಪಷ್ಟ ಗುರಿ ಇರಬೇಕು. ಆ ಗುರಿಯನ್ನು ತಲುಪಲು ಎಲ್ಲವನ್ನೂ ಮುಡುಪಾಗಿಡಬಲ್ಲ ಧೈರ್ಯ, ತಾಳ್ಮೆ, ಕಠಿಣ ಪರಿಶ್ರಮ ಎಲ್ಲವೂ ಬೇಕು. ಜಗತ್ತಿನ ಬೆಸ್ಟ್ ಅಥ್ಲೀಟ್ ಆಗುವುದು ಹುಡುಗಾಟದ ಮಾತಲ್ಲ’

‘ಓರ್ವ ತಂದೆಯಾಗಿ ಮಿಲ್ಖಾ ಸಿಂಗ್ ಅದ್ಭುತ ವ್ಯಕ್ತಿಯೇ ಹೌದು. ಅವರು ನನ್ನೊಂದಿಗೆ ಅಪ್ಪನಿಗಿಂತ ಹೆಚ್ಚಾಗಿ ಗೆಳೆಯನಂತಿದ್ದರು. ನನ್ನ ಬದುಕಿನ ಮೊದಲ ಡ್ರಿಂಕ್ ನಾನು ಕುಡಿದಿದ್ದು ನನ್ನ ಅಪ್ಪನೊಂದಿಗೆಯೇ ಹೊರತು ನನ್ನ ವಯಸ್ಸಿನ ಹುಡುಗರೊಂದಿಗಲ್ಲ. ಅಪ್ಪ ಹೇಳಿಕೊಟ್ಟ ಒಂದು ಪಾಠವು ಸದಾ ನನ್ನ ಪೊರೆದಿದೆ. ಅದೇನೆಂದರೆ: ಅಸಾಧ್ಯ ಅನ್ನುವಂಥದ್ದು ಈ ಜಗತ್ತಿನಲ್ಲಿ ಏನೂ ಇಲ್ಲ. ನಿನ್ನ ಗುರಿಯನ್ನು ತಲುಪುವುದು ನಿನಗೆಷ್ಟು ಮುಖ್ಯ ಎಂಬುದೇ ಯಶಸ್ಸಿನತ್ತ ನಿನ್ನನ್ನು ಕರೆದೊಯ್ಯುತ್ತದೆ’. – ಚಿರಂಜೀವ್ ಮಿಲ್ಖಾ ಸಿಂಗ್ (ಮಿಲ್ಖಾ ಸಿಂಗ್ ಪುತ್ರ, ಪದ್ಮಶ್ರೀ ಪುರಸ್ಕಾರ ವಿಜೇತರು)

ಮಿಲ್ಖಾ ಸಿಂಗ್ ತನ್ನ ದೇಹವನ್ನು ತ್ಯಜಿಸಿರಬಹುದು. ಆದರೆ ಎಂದೆಂದಿಗೂ ದಂತಕತೆಯಾಗಿ ಉಳಿಯಲಿದ್ದಾರೆ.

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: