ಮಾವು… ಮಲ್ಲಿಗೆ… ಕೋಗಿಲೆ…

ಚಂದ್ರಿಕಾ ಹೆಗಡೆ

ಎಲ್ಲರ ಹಾಗೆ ನನಗೂ ಒಂದು ಕನಸಿತ್ತು. ‘ದೂರ ಬೆಟ್ಟದಲ್ಲಿ ಪುಟ್ಟ ಮನೆಯರಬೇಕೂ… ಮನೆಯ ಸುತ್ತ ಹೂವ ರಾಶಿ ಹಾಸಿರಬೇಕೂ… ಜೊತೆಗೆ ಮನೆಯಂಗಳದಲ್ಲಿ ಒಂದು ಮಾವಿನ ಮರ ಇರಬೇಕು, ಮಾವಿನ ಮರಕ್ಕೆ ಒಂದು ಮಲ್ಲಿಗೆ ಬಳ್ಳಿ, ವಸಂತದಲ್ಲಿ ಮಾವು ಚಿಗುರಿ ಮಲ್ಲಿಗೆ ಅರಳಿ ಮಾಮರದಲ್ಲಿ ಕೋಗಿಲೆ ಕುಹೂ… ಕುಹೂ… ಹಾಡಬೇಕು ಎಂದೆಲ್ಲಾ. ನಾವು ಊರಲ್ಲಿ ಮನೆ ಕಟ್ಟಬೇಕೆಂದುಕೊಂಡಾಗ, ಆಹಾ: ! ನನ್ನ ಕನಸು ನನಸಾಗುವ ಸಮಯ ಬಂತು ಎಂದು ಸಂಭ್ರಮದಿಂದ ನಮ್ಮವರ ಬಳಿ ಇಲ್ಲಿ ಊರೊಳಗೆ ಬೇಡ’ ಊರ ಹೊರಗೆ ಕಲ್ಲುಕುಣಿ ಬೆಟ್ಟದಲ್ಲಿ ಜಾಗ ಇದೆಯಲ್ಲಾ ಅಲ್ಲೇ ಮನೆ ಕಟ್ಟೋಣ ಎಂದೆ.

“ಏನು ಹುಚ್ಚಾ ನಿಂಗೆ ? ಗುಡ್ಡದ ಮೇಲೆ ಮನೆ ಕಟ್ಟಲು ಅಲ್ಲಿ ನೀರು ಹೇಗೆ ತರೋದು ? ರಸ್ತೆ ಕರೆಂಟು ಅದೆಲ್ಲಾ ಬೇಡ್ವಾ ?” ಎಂದು ನನ್ನ ಸಂಭ್ರಮದ ಬಲೂನಿಗೆ ಸೂಜಿ ಚುಚ್ಚಿದರು. ಹೌದಲ್ಲಾ ಕನಸೇ ಬೇರೆ, ವಾಸ್ತವವೇ ಬೇರೆ, ನೀರೇ ಇಲ್ಲದಿದ್ದರೆ ಮನೆಯ ಸುತ್ತ ಹೂವ ರಾಶಿ ಹೇಗೆ ಹಾಸುವುದು ! ಸರಿ, ಬೆಟ್ಟದ ಮೇಲೆ ಬೇಡ, ಬೆಟ್ಟದ ತಪ್ಪಲಲ್ಲಿ ನಮ್ಮ ತೆಂಗಿನ ತೋಟ ಇದೆಯಲ್ಲಾ ಅಲ್ಲೇ ಕಟ್ಟೋಣ, ಬೇಕಾದಷ್ಟು ನೀರಿದೆ ಎಂದೆ ಪಟ್ಟು ಬಿಡದೆ.

ತೋಟದ ಸುತ್ತಲೂ ದಟ್ಟ ಕಾಡು, ಪಕ್ಕದಲ್ಲೇ ಜುಳು ಜುಳು ಹರಿಯುವ ಹೊಳೆ, ಸಣ್ಣದೊಂದು ಜಲಪಾತ, ಮಧ್ಯೆ ನಮ್ಮ ಪುಟ್ಟ ಮನೆ ! ಪ್ರಕೃತಿ ಪ್ರೇಮಿಯಾದ ನಾನು ಮನದಲ್ಲೇ ರೋಮಾಂಚನಗೊಂಡೆ. ಆದರೆ ಈ ರೋಮಾಂಚನವೂ ಬಹಳ ಹೊತ್ತು ಉಳಿಯಲಿಲ್ಲ. ಮತ್ತೆ ಅದೇ ಹಾಡು. ಊರಿಂದ ದೂರ, ಒಂಟಿಮನೆ, ಕರೆಂಟ್ ಇಲ್ಲ ರಸ್ತೆ ಇಲ್ಲ, ಹಾಡು ಹಗಲೇ ಕಾಡು ಪ್ರಾಣಿಗಳು ಓಡಾಡುವ ಜಾಗ. ಮೇಲಿಂದ ನಮ್ಮ ಎಂಟು ವರ್ಷದ ಹೆದರು ಪುಕ್ಕಲು ಮಗಳು “ನೀವು ಅಲ್ಲಿ ಮನೆ ಕಟ್ಟೋದಾದ್ರೆ ನಾನಂತೂ ಅಲ್ಲಿಗೆ ಬರೋದಿಲ್ಲ, ಇಲ್ಲೇ ದೊಡ್ಡಪ್ಪನ ಮನೇಲೇ ಇರ್ತೇನೆ” ಅಂತ ಖಡಾಖಂಡಿತವಾಗಿ ಘೋಷಿಸಿಬಿಟ್ಟಳು !

ಸರಿ, ಇನ್ನೇನು ಮಾಡುವುದು , ನಮ್ಮ ಕುಟುಂಬಸ್ಥರೆಲ್ಲಾ ಇದ್ದ ಪಕ್ಕದ ಜಾಗದಲ್ಲೇ ಮನೆ ಕಟ್ಟುವುದಾಯಿತು. ಆ ಜಾಗದಲ್ಲಿ ಒಂದು ದೊಡ್ಡ ಮಾವಿನ ಮರವೇನೋ ಇತ್ತು. ಆದರೆ ಅದನ್ನು ಕಡಿಯದೇ ಮನೆ ಕಟ್ಟಲು ಬರುವಂತಿರಲಿಲ್ಲ. ಅನಿವಾರ್ಯವಾಗಿ ಮನಸ್ಸಿಲ್ಲದ ಮನಸಿನಿಂದ , ಮನೆಮಕ್ಕಳೆಲ್ಲಾ ಹತ್ತಿಳಿದು ಆಡುತ್ತಿದ್ದ ಸಿಹಿಯಾದ ಒಳ್ಳೇ ಜಾತಿ ಹಣ್ಣು ಬಿಡುತ್ತಿದ್ದ ಆ ಮರವನ್ನು ಕಡಿದು ಮನೆ ಕಟ್ಟಿಯಾಯಿತು. ಅದರ ಪಕ್ಕದಲ್ಲೇ ಘಮಘಮಿಸುವ ಹೂವು ಬಿಡುವ ದೇವಲೋಕದ ಪಾರಿಜಾತ ಮರವೊಂದಿತ್ತು.

ರುಕ್ಮಿಣಿಯೂ ನಾನೇ.. ಸತ್ಯಭಾಮೆಯೂ ನಾನೇ ಆಗಿ ಈ ಸ್ವರ್ಗಪುಷ್ಪಕ್ಕೆ ಒಡತಿಯಾಗೋಣವೆಂದರೆ ಆ ಭಾಗ್ಯವೂ ಸಿಗದೆ ಅದನ್ನೂ ಕಡಿಯಬೇಕಾಯ್ತು. ಆದರೂ ಕಡಿಯುವ ಮುನ್ನ ಬೇರೊಂದು ಕಡೆ ಮಾವಿನ ಗಿಡವನ್ನೂ, ಪಾರಿಜಾತದ ರೆಂಬೆಯನ್ನೂ ನೆಟ್ಟು ಬದುಕಿಸಿಕೊಂಡೆವಾದರೂ ಅದು ಮನೆಯಂಗಳದಲ್ಲಿರದೆ ದೂರದಲ್ಲಿತ್ರು.

ಇಷ್ಟಾದ ಮೇಲೆ ಸಮಾಧಾನಕರ ಬಹುಮಾನವೆಂಬಂತೆ ಮನೆಯ ಅಂಗಳದಂಚಿನಲ್ಲಿದ್ದ ಹುಳಿಮಾವಿನ ಗಿಡವೊಂದು ತಾನಾಗಿ ಬೆಳೆದು ನಾಲ್ಕೈದು ವರ್ಷಗಳಲ್ಲಿ ಮರವಾಯ್ತು. ಹುಳಿಯೋ ಸಿಹಿಯೋ ಮಾವಿನ ಮರ ತಾನೇ ಎಂದು ಖುಷಿ ಪಟ್ಟೆ. ಆದರೆ ಈ ಮರ ನನ್ನ ಕನಸಿನಂತೆ ಅಂಗಳದಲ್ಲ ಹರಡಿ ಬೆಳೆಯದೇ ನೇರವಾಗಿ ಆಕಾಶದೆತ್ತರ ಬೆಳೆಯತೊಡಗಿತು. ನಮ್ಮದು ಹೇಳಿಕೇಳಿ ಘೋರಾಕಾರ ಮಳೆ ಬೀಳುವ ಮಲೆನಾಡು. ತಾರಸಿಮನೆ ಈ ಮಳೆಗೆ ತಡೆಯುವುದಿಲ್ಲ. ಏನಿದ್ದರೂ ಹಂಚಿನ ಮನೆಗಳೇ ಸೈ. ಈಗ ಮಳೆಗಾಲದಲ್ಲಿ ಈ ಮಾವಿನ ಮರದ ರೆಂಬೆ ಮನೆಯ ಮೇಲೆ ಬಿದ್ದು ಹಂಚು ಒಡೆಯುವ ಭಯ . ಆದರೆ ಯಾವುದೇ ಕಾರಣಕ್ಕೂ ಈ ಮರವನ್ನೂ ಕಡಿದು ನನ್ನ ಕನಸಿನ ಕೊನೆಯ ರೆಂಬೆಯನ್ನೂ ಬಲಿಕೊಡಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಮನೆಯ ಮೇಲೆ ಬೀಳದಂತೆ ಮೇಲಿನ ಕೊಂಬೆಗಳನ್ನು ಮಾತ್ರ ಕಡಿಯುತ್ತಿರುವುದೆಂದು ತೀರ್ಮಾನವಾಯ್ತು.

ಇನ್ನು ಮನೆಯ ಸುತ್ತ ಹೂವಿನ ರಾಶಿಯನ್ನಾದರೂ ಹಾಸೋಣವೆಂದರೆ , ಮರ್ಕಟಗಳ ತವರು ನನ್ನೂರು. ಒಂದು ದಾಸವಾಳದ ಗಿಡದ ಚಿಗುರನ್ನೂ ಬಿಡದೆ ಬೋಳಿಸಿ ತಿಂದು ಹೋಗುವ ವಾನರಗಳ ಕಾಟದಲ್ಲಿ ಹೂ ಗಿಡಗಳನ್ನು ಬೆಳೆಸುವುದು ಅಸಾಧ್ಯದ ಮಾತು.
ಮಾವಿನ ಮರ ಬೆಳೆದು ದೊಡ್ಡದಾಗುತ್ತಾ ಹೋದಂತೆ ಈ ಮಂಗಗಳ ಕಾಟವೂ ಅತಿಯಾಗಿ ಹೋಯ್ತು. ಖಾಯಂ ಆಗಿ ಈ ಮಾವಿನಮರವನ್ನು ತಮ್ಮ ಅಧಿಕೃತ ನಿವಾಸವನ್ನಾಗಿ ಮಾಡಿಕೊಂಡುಬಿಟ್ಟವು ಅವು. ಸಂಜೆಯಾದ ಕೂಡಲೇ ಮಕ್ಕಳು ಮರಿ, ಸಂಸಾರದ ಸರ್ವ ಸದಸ್ಯರ ಸಮೇತ ಮಾವಿನ ಮರದಲ್ಲಿ ಬಂದು ಕುಳಿತು ರಾತ್ರಿ ಕಳೆಯಲಾರಂಭಿಸಿದವು.

ಬೆಳಗಾಗುತ್ತಲೇ ಎದ್ದು ಹಾರಿ ಕುಣಿದು ಗಲಾಟೆ ಎಬ್ಬಿಸಿ, ಸುತ್ತಮುತ್ತಲೆಲ್ಲಾ ಸರ್ವೇ ಮಾಡಿ, ಇದ್ದ ಅಲ್ಪಸ್ವಲ್ಪ ಗಿಡದ ಚಿಗುರುಗಳನ್ನೆಲ್ಲಾ ಸ್ವಾಹಾ ಮಾಡಿ, ಮನೆ ಮೇಲೆ ಥಾ ..ಥೈ ಥೈ…ಎಂದು ನಾಟ್ಯವಾಡಿ ಹೊರಗೆ ರೌಂಡ್ಸ್ ಹೊರಟರೆ ಮತ್ತೆ ಸಂಜೆಗೆ ಹಾಜರ್ ! ಸಂಜೆಯಿಡೀ ಅವು ಮರದ ಮೇಲೆ ಕುಣಿದು ಕುಪ್ಪಳಿಸಿದ ಹೊಡೆತಕ್ಕೆ ಮಾವಿನಮರದ ಎಲೆ ಕಸಕಡ್ಡಿ ಅಂಗಳದಾ ತುಂಬಾ ಬಿದ್ದು, ಬೆಳಿಗ್ಗೆ ಗುಡಿಸಲು ಹೋದರೆ ಎಲೆಗಳ ಮಧ್ಯದಲ್ಲಿ, ಹಗಲಿಡೀ ತಿಂದುಂಡು ರಾತ್ರಿ ಅರಾಮಾಗಿ ಮರದ ಮೇಲೆ ಕುಳಿತು ಈ ಕೋತೀರಾಯರು ಕೆಳಗೆ ವಿಸರ್ಜಿಸಿದ ಮಲದ ರಾಶಿ !

ಮೂಗು ಮುಚ್ವಿಕೊಂಡು ಗುಡಿಸಿ ಗುಡಿಸಿ ಸಾಕಾಗಿ ತಲೆಕೆಟ್ಟು ಈ ಮಂಗಗಳನ್ನು ಮರಬಿಟ್ಟು ಓಡಿಸಬೇಕೆಂದು ಶತಂಪ್ರಯತ್ನ ಮಾಡಿದರೂ ಸಾಧ್ಯವಾಗದೆ ಕೊನೆಗೆ ಸೋತು ಶರಣಾಗಬೇಕಾಯ್ತು. ನನ್ನ ಕಂಡರಂತೂ ಸ್ವಲ್ಪವೂ ಭಯವಿಲ್ಲ. ದೊಡ್ಡ ಗಾತ್ರದ ಕಪ್ಪು ಮೂತಿಯ ಈ ಗಡವ ಮಂಗಗಳು ಓಡಿಸಲು ಹೋದರೆ ನನ್ನನ್ನೇ ಕೆಕ್ಕರಿಸಿ ನೋಡುತ್ತಾ ಹಲ್ಲುಕಿರಿದು ಹೆದರಿಸುತ್ತಿದ್ದವು. ಅವು ಮರದ ಮೇಲೆ ವಿರಾಜಮಾನರಾಗಿದ್ದಾಗ ಅಪ್ಪಿತಪ್ಪಿ ಕೆಳೇನಾದರೂ ಹೋದಿರೋ ತಲೆಮೇಲೆ ಮೂತ್ರಾಭಿಷೇಕ ಖಂಡಿತ ! ಛೇ ! ಎಷ್ಟೆಂದರೂ ಕೋತಿಬುದ್ದಿ ಅವು ಬಿಟ್ಟಾವೇ !

ನಮ್ಮಕಡೆ ತೋಟದಲ್ಲಿ ಬಾಳೇಕೊನೆಗಳನ್ನು ಮಂಗಗಳಿಂದ ರಕ್ಷಿಸಿಕೊಳ್ಳಲು ಬಾಳೇಕೊನೆಗಳ ಸುತ್ತ ಸೀರೆ ಕಟ್ಟುವ ಪದ್ಧತಿ ಇದೆ. ವಾನರನೆಂದರೆ ಹನುಮಂತನ ಅವತಾರ. ಸೀರೆ ಕಂಡರೆ ಹನುಮನಿಗೆ ಸೀತಾಮಾತೆಯ ನೆನಪಾಗಿ ಬಾಳೆಗೊನೆ ಮುಟ್ಟುವುದಿಲ್ಲ ಎಂದು ಯಾರೋ ಹೇಳಿದ್ದರು. ಈ ಮಂಗಗಳು ನನ್ನನ್ನ ಕೆಕ್ಕರಿಸಿ ನೋಡುತ್ತಾ ಹೆದರಿಸುವಾಗ, ಸೀರೆಯುಡದೇ ನೈಟೀ ಹಾಕಿ ನಿಂತಿರುವ ನಾನು ಅವುಗಳ ಕಣ್ಣಿಗೆ ಸೀತಾಮಾತೆಯಂತೆ ಕಾಣದೇ ಶೂರ್ಪನಖಿಯಂತೆ ಕಾಣುತ್ತಿರಬಹುದೇ !! ಎಂದು ಅನುಮಾನವಾಗಿ ಮರುದಿನದಿಂದ ಸೀರೆ ಉಟ್ಟು ನೋಡುವಾ ಎಂದುಕೊಂಡಿದ್ದೂ ಉಂಟು !

ಅಂತೂ ಈ ಮಂಗಗಳ ಕಾಟಗಳ ಮಧ್ಯೆಯೇ ಕಡೇಪಕ್ಷ ಮಾವಿನಮರದ ಬುಡದಲ್ಲಿ ಒಂದು ಮಲ್ಲಿಗೆಯ ಗಿಡವನ್ನಾದರೂ ಬೆಳೆಸಲೇ ಬೇಕೆಂದು ಛಲತೊಟ್ಟು ಒಂದು ಶುಭ ಮುಹೂರ್ತದಲ್ಲಿ ದುಂಡುಮಲ್ಲಿಗೆಯ ತುಂಡೊಂದನ್ನು ಮರದ ಬುಡದಲ್ಲಿ ನೆಟ್ಟು, ನೀರೆರೆದು, ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿ ಅದು ಚಿಗುರೊಡೆದಾಗ ಅಬ್ಬಾ ! ಗೆದ್ದೆ ! ಎಂದು ಬೀಗಿದೆ. ನೋಡು ನೋಡುತ್ತಿದ್ದಂತೆ ಮಲ್ಲಿಗೆ ಬಳ್ಳಿ ಚಿಗುರಿ ದೊಡ್ಡದಾಗಿ ಮಾವಿನ ಮರವೇರಿ ದೊಡ್ಡ ಹಿಂಡಾಗಿ ಬೆಳೆಯಿತು. ವಸಂತ ಬಂದಾಗ ಮೈತುಂಬಾ ಮೊಗ್ಗು ಬಿಟ್ಟು ಘಮ್ಮೆಂದು ಅರಳಿ ಪರಿಮಳ ಬೀರಿದಾಗ ನನ್ನ ಆನಂದಕ್ಕೆ ಪಾರವೇ ಇಲ್ಲ. ಇಲ್ಲಿಗೆ ನನ್ನ ಮಾವು ಮಲ್ಲಿಗೆಯ ಕನಸೇನೋ ನನಸಾಯ್ತು. ಇನ್ನು ಕೋಗಿಲೆ. ಈ ಕೋಗಿಲೆಯನ್ನೆಲ್ಲಿಂದ ತರುವುದು ? ದಟ್ಟ ಕಾಡು ಗುಡ್ಡ ಬೆಟ್ಟಗಳಿಂದಾವೃತವಾದ ನನ್ನೂರಲ್ಲಿ ಕೋಗಿಲೆಯೇ ಇಲ್ಲ. ದಟ್ಟ ಕಾಡೆಂದರೆ ಈ ಕೋಗಿಲೆಗೆ ಅಲರ್ಜಿಯೋ ಏನೋ ನನಗೆ ಗೊತ್ತಿಲ್ಲ.

ಸ್ವಲ್ಪ ಬಯಲು ಪ್ರದೇಶಗಳಲ್ಲಿ ಹಾರಾಡಿ ಹಾಡಿಕೊಂಡಿರುವ ಕೋಗಿಲೆ ಇಲ್ಲಿ ಮಾತ್ರ ಕಣ್ಣಿಗೂ ಕಾಣುವುದಿಲ್ಲ… ಅದರ ಕೂಗೂ ಕೇಳುವುದಿಲ್ಲ. ಮಾವು ಮಲ್ಲಿಗೆಯ ಜೊತೆಗೆ ಕೋಗಿಲೆ ಇಲ್ಲದಿದ್ದರೆ ನನ್ನ ಕನಸು ಅಪೂರ್ಣ…. ಏನು ಮಾಡುವುದು ? ಪಾರಿವಾಳ ಗಿಳಿಗಳಂತೆ ಅದನ್ನೆಲ್ಲಾದರೂ ಹಿಡಿದು ತಂದು ಮಾವಿನ ಮರದ ಮೇಲೆ ಕೂರಿಸಲಾದೀತೇ? ಎಲ್ಲಿಂದಾದರೂ ಒಂದು ಕೋಗಿಲೆಯ ಮರಿ ತಂದುಕೊಡಿ ಎಂದರೆ ಯಾರಾದರೂ ನಕ್ಕಾರು ಎಂದು ಸುಮ್ಮನುಳಿದೆ. ಒಂದು ಬೆಳ್ಳಂಬೆಳಿಗ್ಗೆ ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಕೋಗಿಲೆಯೊಂದು ಕುಹೂ ಎಂದಾಗ, ನನ್ನ ಮೊರೆ ಕೇಳಿ ಪಾಪ ಈ ಕರುಣಾಮಯಿ ಕೋಗಿಲೆ ಬಂದೇ ಬಿಟ್ಟಿತೇನೋ ಎಂದು ಗಡಬಡಿಸಿ ಸಂಭ್ರಮಿಸಿ ಅಂಗಳಕ್ಕೆ ಬಂದು ಕುತ್ತಿಗೆ ಉದ್ದ ಮಾಡಿ ಕಾದೆ. ಆ ಕೋಗಿಲೆ ಎಲ್ಲಿ ಹೋಯ್ತೋ ಏನೋ…. ಮತ್ತೆಂದೂ ಅದು ಕೂಗಿದ್ದೂ ಕೇಳಲಿಲ್ಲ, ನಮ್ಮೂರ ಕಡೆ ಮುಖವನ್ನೂ ಹಾಕಲಿಲ್ಲ.

ಈ ಕೋಗಿಲೆ ಬರದಿದ್ದರೆ ನಮಗೇನು ಎಂಬಂತೆ ಮಾವೂ ಮಲ್ಲಿಗೆಯೂ ತಮ್ಮ ಪಾಡಿಗೆ ತಾವು ಚಿಗುಚಿಗುರಿ ಬೆಳೆಯುತ್ತಲೇ ಇದ್ದರು. ಒಂದು ದಿನ ಮುಸ್ಸಂಜೆ ಹೊತ್ತಲ್ಲಿ ಪಾರಿವಾಳದ ಜೋಡಿಯೊಂದು ಬಂದು ಮಾವಿನಮರದ ಮೇಲೆ ಕುಳಿತವು. ಆಹಾ ಕೋಗಿಲೆಯಿಲ್ಲದಿದ್ದರೇನು ಈ ಪಾರಿವಾಳವಾದರೂ ಬಂತಲ್ಲಾ ಎಂದು ಸಂತೋಷದಿಂದ ಅವಕ್ಕೆ ಸ್ವಾಗತ ಕೋರಿ ಇಲ್ಲೇ ಉಳಿಯುವಂತೆ ಕೋರಿಕೊಂಡೆ.‌ ಆದರೆ ಇದರಿಂದ , ಈಗಾಗಲೇ ಮಾಮರವನ್ನು ತಮ್ಮದೇ ಮನೆ ಎಂದು ರಿಜಿಸ್ಟರ್ ಮಾಡಿಸಿಕೊಂಡಿದ್ದ ಕಾಗೆಗಳ ಹಿಂಡಿಗೆ ಅಸಾಧ್ಯ ಕೋಪ ಬಂದು ಅವು ಒಟ್ಟಾಗಿ ಕಾ..ಕಾ..ಎಂದು ಕಾಲು ಕೆರೆಯುತ್ತಾ ಈ ಬಡಪಾಯಿ ಪಾರಿವಾಳಗಳನ್ನು ಓಡಿಸಿಬಿಟ್ಟವು.

ಈಗ ಮಾವಿನ ಮರದ ಮೇಲೆ ಮಂಗಗಳು ಮತ್ತು ಕಾಗೆಗಳದ್ದೇ ಸಾಮ್ರಾಜ್ಯ. ದಿನ ಬೆಳಗಾದ ಕೂಡಲೇ ಕುಹೂ..ಕುಹೂ.. ಮಧುರ ಗಾನದ ಬದಲಿಗೆ ಕ್ರಾ…ಕ್ರಾ…. ಕರ್ಕಶ ರಾಗದ ಸುಪ್ರಭಾತ ! ಇರಲಿ ಇದೂ ಒಂದು ಹಕ್ಕಿಯೇ ಅಲ್ಲವೇ ಎಂದು ಸಹಿಸಿಕೊಂಡರೆ , ಮಲ್ಲಿಗೆ ಹೂ ಕೊಯ್ಯಲು ಮಾವಿನಮರದ ಕೆಳಗೆ ಹೋದಾಗ ತಲೆಯ ಮೇಲೇ ಈ ಕಾಕ ಸಮೂಹದ ಬೆಳ್ಳನೆಯ ಪಿಷ್ಟಿಯ ಪ್ರಸಾದ ! ಬಾ..ಬಾ.. ಎಂದು ಗೋಗರೆದು ಕರೆದರೂ ಬಾರದ ಕೋಗಿಲೆ, ಹೋಗು ಹೋಗೆಂದರೂ ಹೋಗದ ಕಾಗೆಗಳ ನಡುವೆ ಮಲ್ಲಿಗೆ ಅರಳಿ ಘಮಘಮಿಸುವಾಗ ಮಾವಿನ ಮರ ಮೈ ತುಂಬಾ ಹುಳಿ ಹುಳಿ ಹಣ್ಣುಗಳನ್ನು ಬಿಟ್ಟು ತೊಪತೊಪನೆ ಕೆಳಗೆ ಉದುರಿಸುತ್ತಿತ್ತು. ಹುಳಿಯಾದರೇನಂತೆ ಘಮ್ಮೆನ್ನುವ ಮಲೆನಾಡ ಅಪ್ಪೆ ಹಣ್ಣು.

ನಮ್ಮ ಕಡೆಯ ವಿಶೇಷ ಪದಾರ್ಥ ಅಪ್ಪೆಹುಳಿ ಮಾಡಲು ಹೇಳಿ ಮಾಡಿಸಿದ ಹಣ್ಣು. ತೊಟ್ಟು ಕಳಚಿ ಕೆಳಗೆ ಬಿದ್ದರೆ ಸಾಕು ಮೂರು ಮನೆಯಾಚೆಗೂ ಪರಿಮಳ ಬೀರಿ, ಆಚೆಮನೆ ಅತ್ತಿಗೆಯರನ್ನೂ ಆರಿಸಲು ಕರೆಯುತ್ತಿತ್ತು ! ಕೋಗಿಲೆ ಬಾರದಿದ್ದರೇನಾಯ್ತು ಕಾಗೆಗಳ ಜೊತೆಗೆ ಇತರ ಚಿಳ್ಳೆ ಪಿಳ್ಳೆ ಹಕ್ಕಿಗಳನ್ನೂ ಮೈಮೇಲೆ ಕೂರಿಸಿಕೊಂಡು ಮಾವಿನಮರ ನಮ್ಮ ಮನೆಯಂಗಳದಲ್ಲಿ ಚಿಲಿಪಿಲಿಗುಟ್ಟುತ್ತಾ ನಿಂತಿತ್ತು.
ಬೇಕೋ ಬೇಡವೋ ಈ ಬದುಕು ಯಾರಾರನ್ನೋ ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಿ ಬೀಸಾಕಿಬಿಡುತ್ತದೆ. ಶರಾವತಿಯ ಮಡಿಲಲ್ಲಿ ಹುಟ್ಟಿ , ಅಘನಾಶಿನಿಯ ಸೆರಗಲ್ಲಿ ಕನಸುಗಳನ್ನು ಕಟ್ಟಿ ನಾನೀಗ ಕುಮುದಾವತಿಯೆಂಬ ನೀರಿಲ್ಲದ ನದಿಯ ತಟಕ್ಕೆ ಬಂದು ಬಿದ್ದಿದ್ದೇನೆ ! ಇಲ್ಲಿ ಒಂದು ಮಾವಿನ ಮರವೇಕೆ ಇಡೀ ಮಾವಿನ ತೋಟವೇ ಇದೆ. ವಿಶೇಷ ಜಾತಿಯ ಸಿಹಿ ಸಿಹಿ ಹಣ್ಣು ಬಿಡುವ ನೂರಾರು ಮರಗಳು ಸುತ್ತಲೂ ಇವೆ.

ಮರದ ಎಲೆ ಎಲೆಯಲ್ಲಿಯೂ ಕುಳಿತು ಹಾಡುವ ಕೋಗಿಲೆಯ ಹಿಂಡೇ ಇದೆ. ವಸಂತ ಬಂದರೆ ಸಾಕು ಮನೆ ಮುಂದಿನ ಮರದಲ್ಲೇ ಕುಳಿತು ಬೆಳಗಿಂದ ಸಂಜೆ ತನಕ ತಲೆ ಚಿಟ್ಟುಹಿಡಿಯುವಂತೆ ಒಂದೇಸಮನೆ ಕುಹು…ಕುಹೂಉ… ಎಂದು ಕೂಗುತ್ತಲೇ ಇರುತ್ತವೆ. ಯಾರೋ ನೆಟ್ಟ ಮಲ್ಲಿಗೆ ಮಾಮರದ ತುಂಬಾ ಹೂವರಳಿಸುತ್ತದೆ… ಆದರೂ “ಯಾರಂಕುಶವಿಟ್ಟೊಡಂ ನೆನೆವುದೆನ್ನ ಮನಂ…” ಎಂಬಂತೆ ನನ್ನ ಮನಸ್ಸು ಆ ಮರ್ಕಟಸಹಿತ ಹುಳಿಮಾವಿನ ಮರವನ್ನೇ ನೆನೆಸುತ್ತದೆ. ಇಲ್ಲರಳುವ ಮಲ್ಲಿಗೆಗೆ ನನ್ನ ಮನೆಯಂಗಳದ ಮಲ್ಲಿಗೆಯ ಘಮವಿಲ್ಲ !
ಪ್ರತಿ ಬಾರಿ ವಸಂತಾಗಮನವಾದಾಗಲೂ, ಎಂದಾದರೊಮ್ಮೆ ಇಲ್ಲಿಂದ ಒಂದು ಕೋಗಿಲೆಯನ್ನು ಬೊಗಸೆಯಲ್ಲಿ ಹಿಡಿದುಕೊಂಡು ಹೋಗಿ ನನ್ನ ಮನೆಯಂಗಳದ ಮಾಮರದ ಮೇಲೆ ಬಿಟ್ಟುಕೊಳ್ಳಬೇಕು ಎನ್ನುವ ಕನಸು ಮಾಮರಗಳ ಜೊತೆಜೊತೆಯಲ್ಲಿಯೇ ಚಿಗುರಿಕೊಳ್ಳುತ್ತಿರಲು, ಕುಹೂ… ಕುಹೂ ಕೂಗುತ್ತಿರುವ ಕೋಗಿಲೆಯ ಜೊತೆಗೆ ದನಿಗೂಡಿಸಿ ಹಾಡಿಕೊಳ್ಳುತ್ತೇನೆ…

ಮಾವು…. ಮಲ್ಲಿಗೆ… ಕೋಗಿಲೇ…

‍ಲೇಖಕರು Admin

March 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: