ಕಿರಣ ಭಟ್ ಕಂಡಂತೆ – ಧರಣಿ ಮಂಡಲ…

ಕಿರಣ ಭಟ್

ಛೆ, ಮಿಸ್ಟೇಕಾಗೋಯ್ತು

ಈ ನಾಟಕದಲ್ಲಿ ಹುಲಿಗಳ ಗುಂಪಿನ ವಿರೋಧ ಪಕ್ಷದ ನಾಯಕ ಶಿಂಗ್ರಿ ಕೂಗ್ತಿದಾನೆ.

ಸಾದತ್ ಹಸನ್ ಮಾಂಟೋ ನ ಎರಡು ಸಾಲಿನ ಕಥೆ ‘ಮಿಸ್ಟೇಕ್’ ನಲ್ಲಿ ಬರುವ ಒಂದು ಸಾಲು ಇದು. ಅಂಥದೊಂದು ಮಿಸ್ಟೇಕ್ ಅಲ್ಲಿ ಆಗಿಬಿಟ್ಟಿರುತ್ತದೆ. ಹೆಚ್ಚಿನವರಿಗೆಲ್ಲ ಈ ಕಥೆ ಗೊತ್ತು.

ಇಲ್ಲೂ ಅಂಥದೊಂದು ದೊಡ್ಡ ಮಿಸ್ಟೇಕ್ ಆಗಿದೆ. ಹುಲಿಗಳ ಗುಂಪಿನ ವಿರೋಧ ಪಕ್ಷದ ನಾಯಕ ಶಿಂಗ್ರಿ ಗುಂಡು ಹೊಡೆಯುವಾಗ ಮಿಸ್ಟೇಕ್ ಮಾಡಿಕೊಂಡುಬಿಟ್ಟಿದ್ದಾನೆ. ಹಾಗಂತ ಅವನಿಗೇನು ಮಂಡೆಬಿಸಿ ಇಲ್ಲ. ಪ್ರೇಕ್ಷಕ, ನಾಟಕ ದ ನಡುವೆ ‘ಮಾಧ್ಯಮ’ ವಾದ ನಿರೂಪಕರಲ್ಲಿ ಭಯ ಹುಟ್ಟಿಸಿ ಅವರನ್ನು ಕಂಟ್ರೋಲ್ ಮಾಡಬಲ್ಲ ಆತ. ನಾಟಕದ ಅಂತ್ಯ ಭಾಗವನ್ನೇ ರಿವೈಂಡ್ ಮಾಡಿಸಿಬಿಡುತ್ತಾನೆ. ಮತ್ತೊಂದು ‘ಹೊಸ ಕಥೆ’ ಹುಟ್ಟುತ್ತದೆ.

ಖಂಡವಿದೆ ಕೋ ಮಾಂಸವಿದೆ ಕೋ ಎಂದು ಪುಣ್ಯಕೋಟಿ ಅರ್ಬುತ ನ ಎದುರು ನಿಂತಿದೆ. ಹಟ್ಟಿಯ ಎಲ್ಲ ದನಗಳೂ ಸತ್ಯಕ್ಕಾಗಿ ಆಗ್ರಹಿಸುತ್ತ ತಾವೂ ಜೊತೆಗೇ ಸಾಯುತ್ತೇವೆ ಎಂದು ಪುಣ್ಯಕೋಟಿಯ ಬೆನ್ನಿಗೇ ಬಂದಿವೆ. ಆದರೆ ಅದಾಗಲೇ ಅರ್ಬುತ ದ ಎದೆಯರಳಿದೆ. ತಾಯ ಕರುಳು ಜಾಗ್ರತವಾಗಿದೆ. ಎದುರಿಗೆ ನಿಂತ ಪುಣ್ಯಕೋಟಿಯ ನೋಡಿದ ಅರ್ಬುತ ನಲ್ಲಿ ಮಿಶ್ರ ಭಾವ. ಅಷ್ಟರಲ್ಲೇ ಮರೆಯಲ್ಲಿ ನಿಂತ ಶಿಂಗ್ರಿ ಗಡಿಬಿಡಿಯಲ್ಲಿ ಗುಂಡು ಹೊಡೆದುಬಿಟ್ಟಿದ್ದಾನೆ. ಆದರೆ ಆತನಿಗೆ ಬೇಕಾಗಿರುವದು ಅರ್ಬುತ ನ ಬಲಿ.

ವ್ಯವಸ್ಥೆಯ ಬದಲಾವಣೆ ಬಯಸುವ, ಮತ್ತು ಅದಕ್ಕಾಗಿ ಆಗ್ರಹಿಸುವ ದನಿಯನ್ನ ಅಳಿಸಬೇಕಾದ ಗುಂಡು ಇನ್ನೂ ಹಾರೇ ಇಲ್ಲ. ಆ ಗುಂಡು ಹಾರಬೇಕಿದೆ. ದನಿಯನ್ನು ಹೊಸಕಿ ಹಾಕುವಂತೆ. ಹಾಗಾಗಿಯೇ ಈ ದೃಶ್ಯ ಈಗ ರೀವೈಂಡ್ ಆಗಿದೆ. ಮತ್ತೆ ಶಿಂಗ್ರಿ ಶೂಟ್ ಮಾಡಿದ್ದಾನೆ.ಈಗ ಹೊಡೆದ ಗುಂಡು ಸರಿಯಾಗಿಯೇ ಅರ್ಬುತ ನ ಬೆನ್ನು ಸೀಳಿದೆ. ಎದೆಯರಳಿದ ಹುಲಿಯ ಎದೆ ಬಿರಿದಿದೆ.

ಹೀಗೆ ಎಚ್.ಎಸ್.ವೆಂಕಟೇಶಮೂರ್ತಿಯವರ, ಮಕ್ಕಳ ನಾಟಕವಾಗಿಯೇ ಬೇರೆ ಬೇರೆ ಕಡೆ ಪ್ರದರ್ಶಿತವಾದ ‘ಧರಣಿ ಮಂಡಲ’ಕ್ಕೆ ಹೊಸ ವ್ಯಾಖ್ಯಾನ ಕೊಡುವದರ ಮೂಲಕ ಒಂದು ಎಪಿಕ್ ನ್ನು ಕಟ್ಟಲು ಶ್ರೀಪಾದ ಭಟ್ ಪ್ರಯತ್ನಿಸಿದ್ದಾರೆ. ನಾಟಕದ ಬುಡದಿಂದಲೇ ಇಂಥದೊಂದು ಸೂಚನೆ ಸಿಗುತ್ತ ಹೋಗುತ್ತದೆ.

ಕರುಳಲ್ಲರಳುವ ಹೂಗಳಿಗಾಗಿ ಪ್ರಾರ್ಥಿಸುವ ದಿನವದು. ಗೊಲ್ಲರ ಹಟ್ಟಿಯ ನೆಲದಲ್ಲಿ ಪುಣ್ಯವರಳಿದ, ಪುಣ್ಯವಳಿದ ದಿನ ಕೂಡ ಹೌದು. ಇದು ಅರ್ಬುತ ಬಲಿಯಾದ ದಿನ. ಹೀಗೆ ನೆನಪಿನ ಕಂಭದ ಸುತ್ತ ಜೊತೆಗೂಡಿದ ಹಸುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ನಾಟಕ, ಕರುಳ ಅರಳಿಸುವಿಕೆಯ, ಹೊಸ ಸಂಬಂಧಗಳ ಬಂಧದ ಕಥನವಾಗುವದರ ಜೊತೆಗೇ ವರ್ತಮಾನಕ್ಕೂ ಸ್ಪಂದಿಸುತ್ತ ಸಾಗುತ್ತದೆ. ಇಂಥ ಪ್ರಸ್ತುತತೆಗಾಗಿ ಶ್ರೀಪಾದ್ ನಾಟಕವನ್ನ ವಿಶಿಷ್ಟವಾಗಿ ವಿನ್ಯಾಸಗೊಳಿಸಿಕೊಂಡಿದ್ದಾರೆ.

ಇಂಥದೊಂದು ಬೆಳವಣಿಗೆ ಹುಲಿಯ ಗುಂಪಿನ ಪ್ರವೇಶದೊಂದಿಗೇ ಪ್ರಾರಂಭವಾಗುತ್ತದೆ. ಆಹಾರ್ಯ ಮತ್ತು ಅಭಿನಯಗಳಲ್ಲಿ, ನಾಟಕದ ಭಾಷೆಯಲ್ಲಿ. ಅರ್ಬುತ ತನ್ನ ಎಂಟ್ರಿ ಯಲ್ಲೇ ಪಟ್ಟೆ ಪಟ್ಟೆ ತುಂಬಿರುವ ಗೋಳವೊಂದನ್ನು ಹೊತ್ತು ಬರುತ್ತದೆ. ಹುಲಿಗಳೆಲ್ಲ ಟೈ ಹಾಕಿಕೊಂಡು ಶಿಸ್ತಾಗಿವೆ. ಸಂಗೀತ ಕೂಡ ವೆಸ್ಟರ್ನ್ ಆಗಿದೆ. ನಿರ್ದೇಶಕರು ಏನನ್ನು ಮುಟ್ಟುತ್ತಿದ್ದಾರೆಂಬುದಕ್ಕೆ ಇಲ್ಲೇ ಸೂಚನೆಯಿದೆ. ಮುಂದೆ ಅದೇ ಗೋಲವೇ ಆಡುಂ’ಬಾಲ್’ ಅಗುತ್ತ, ಸಶಕ್ತವಾದ ರೂಪಕವಾಗುತ್ತ, ಕೊನೆಗೆ ವಿರೋಧ ಪಕ್ಷದ ನಾಯಕ ಶಿಂಗ್ರಿಯ ಕೈಗೆ ಸೇರಿ, ಆತ ಅರ್ಬುತ ನನ್ನು ಶೂಟ್ ಮಡುವದಕ್ಕೂ ಕ್ರೂರ ಸಾಕ್ಷಿಯಾಗುತ್ತದೆ.

ನಾಟಕದುದ್ದಕ್ಕೂ ವರ್ತಮಾನದ ವಿದ್ಯಮಾನಗಳನ್ನು ಸಮೀಕರಿಸುತ್ತ ಹೋಗುವ ಹಲವಾರು ಸೆಳಕುಗಳಿವೆ. ಪ್ರವೇಶದ ಪೀಠಿಕೆಯಲ್ಲೇ ಅರ್ಬುತ ‘ದೇವರು ಮಾಡಿದ್ದೆಲ್ಲ ನನ್ನ ಜಾತಿ ಬಾಂಧವರಿಗಾಗೇ’ ಎಂದು ಹೇಳಿದರೆ, ಇನ್ನೊಮ್ಮೆ ಗಡಿರೇಖೆ ಯ ಪ್ರಸ್ತಾಪವೂ ಬರುತ್ತದೆ. ‘ಮಂದಿ ಗಡಿ ರೇಖೇನೇ ಆಳಿಸಿ ಹಾಕಲಿಕ್ಕೆ ಹತ್ಯಾರು’ ಎನ್ನುತ್ತ ಕಾಡು, ಹುಲ್ಲಿಗಾವಲ ನಡುವಿನ ರೇಖೆಯನ್ನು ಧಿ:ಕರಿಸುತ್ತದೆ. ಅರ್ಬುತ, ಶಿಂಗ್ರಿಯ ಸತ್ಯ ಮತ್ತು ಬದುಕಿನ ನಡುವಿನ ಬಿಸಿ ಚರ್ಚೆಯಲ್ಲಿ ಆಹಾರ ಸಂಸ್ಕೃತಿಯ ಮಾತೂ ಬರುತ್ತದೆ.

ನಾಟಕದ ಕೊನೆಯಂತೂ ತುಂಬ ಮಾರ್ಮಿಕ. ಪುಣ್ಯಕೋಟಿಯ ಹಿಂದೆ ಹುಸಗಳು ಬಂದಿದಾವೆ. ಸತ್ಯಕ್ಕಾಗಿ. ಸತ್ಯದ ಆಗ್ರಹಕ್ಕಾಗಿ. ಅರ್ಬುತ ಬದಲಾಗಿದೆ. ವ್ಯವಸ್ಥೆಯಲ್ಲಿ ಬದಲಾವಣೆ ಬಯಸಿದೆ. ಆದರೆ ಈಗ ಚೆಂಡು, ಕೋವಿ ಡಿಂಗ್ರಿಯ ಕೈಯಲ್ಲಿವೆ. ಇಂಥವರ ದನಿಯಡಗಿಸಲೆಂದೇ ಎತ್ತರದಲ್ಲಿ ಕೋವಿ ಹಿಡಿದು ನಿಂತಿದ್ದಾನೆ ಆತ.

‘ಢಂ’ ಅಂತ ಅರ್ಬುತನ ಎದೆ ಸೀಳಿದೆ ಗುಂಡು. ‘ರಘುಪತಿ ರಾಘವ ರಾಜಾರಾಮ್… ತೀವ್ರ ಸ್ವರದ ಉದ್ಘಾರ. ಜೊತೆಗೇ ಎದೆ ಮೀಟುವ ಆರ್ದ್ರ ಸಂಗೀತ..

ಇಷ್ಟು ಸಾಕು….
ಇಂಥದೊಂದು ಎಪಿಕ್ ನ್ನು ಬ್ಯಾಲೆಯ ರೂಪದಲ್ಲಿ ತುಂಬ ನಿಖರವಾದ, ಸಂಯಮದ ಚಲನೆಗಳೊಂದಿಗೆ ದೃಶ್ಯ ಕಾವ್ಯವಾಗಿಸಿದ್ದು ಸಿದ್ದಾಪುರದ ‘ಒಡ್ಡೋಲಗ’ ದ ನಟರ ಟೀಮ್. ಅಲ್ಲಲ್ಲಿ ಕಾಣುವ ಚೆಂದದ ಕಂಪೋಸಿಷನ್ ಗಳು. ಪೂರಕವಾದ ಅಭಿನಯ. ನಾಟಕದ ಯಶಸ್ಸಿನ ಬಹುಪಾಲು ನಟರಿಗೇ ಸೇರುತ್ತದೆ. ಚೆಂದವಾದ ಕಾವ್ಯದ ಸಾಲುಗಳಿಗೆ ಅಷ್ಟೇ ಪೂರಕವಾದ ಸಂಗೀತ. ಸರಳವಾದ ಸೂಚ್ಯವಾದ ರಂಗಸಜ್ಜಿಕೆ, ಚಿತ್ರಗಳು. ಕಂಪೋಸಿಶನ್ ಗಳನ್ನು ಇನ್ನಷ್ಟು ಚೆಂದಗೊಳಿಸಿದ ಬೆಳಕು. ಎಲ್ಲ ಸೇರಿ ಅಪರೂಪದ ರಂಗಪ್ರಯೋಗವನ್ನು ಕಟ್ಟಿಕೊಟ್ಟಿವೆ.

ನಿರ್ದೇಶಿಸಿದ ಶ್ರಿಪಾದ ಭಟ್ ರಿಗೆ, ಇಂಥದೊಂದು ನಾಟಕವನ್ನ ಸಾಧ್ಯವಾಗಿಸಿದ ಹಿತ್ಲಕೈ ಗಣಪತಿ ಹೆಗಡೆಯವರೆಗೆ. ‘ಒಡ್ಡೋಲಗ’ಕ್ಕೆ ಅಭಿನಂದನೆ.

ಒಡ್ಡೋಲಗ ರಂಗಪಯಣ ಹೊರಟಿದೆ. ನೀವೂ ನಿಮ್ಮೂರಲ್ಲಿ ಆಡಿಸಿ, ನೋಡಿ.

ನಾಟಕ: ಧರಣಿ ಮಂಡಲ
ರಚನೆ: ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಸಂಗೀತ, ವಿನ್ಯಾಸ, ನಿರ್ದೇಶನ: ಡಾ. ಶ್ರೀಪಾದ ಭಟ್
ಸಂಗೀತ ನೆರವು: ಅನುಷ್ ಮತ್ತು ಮುನ್ನ
ನೃತ್ಯ ನೆರವು: ಮಂಜುಳಾ ಸುಬ್ರಹ್ಮಣ್ಯ, ಪುತ್ತೂರು
ಸಹ ನಿರ್ದೇಶನ: ಗಣೇಶ್ಎಂ ಭೀಮನಕೋಣೆ

‍ಲೇಖಕರು Admin

March 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. SUDHA SHIVARAMA HEGDE

    ನೋಡಲೇಬೇಕೆನಿಸುವಷ್ಟು ಚಂದದ ನಿರೂಪಣೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: