ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಬಲೂನು…

ಮಾಲಾ ಮ ಅಕ್ಕಿಶೆಟ್ಟಿ

ಜಾತ್ರೆಯಲ್ಲಿ ಸಿಗುವ
ನೂರೆಂಟು ಸರಕುಗಳು
ಪ್ರಕಾರ, ಮಾಟ, ಬಣ್ಣ
ವಿಧ ವಿಧ ಸಿಂಗರಿಸಿಕೊಂಡ ಗುಡಿಯಂತೆ

ಮಗು ಬಯಸುವ ಹಲವುಗಳಲ್ಲಿ
ಬಣ್ಣದ ಬಲೂನು
ಮಶೀನ್ ಮೂತಿಗೆ ಸಿಕ್ಕಿಸಿ
ಗಾಳಿ ತುಂಬಿ, ದೊಡ್ಡದಾಗಿ ಉಬ್ಬಿ,
ಗಂಟು ಕಟ್ಟಿ, ಆಕಾರ ಕೊಟ್ಟು,
ಕೈಗಿಟ್ಟರೆ ಒಳಗಿರುವ
ರವೆಯಂಥ ಜಿಣುಗು ಕಣಗಳಿಂದ
ಆಕರ್ಷಿಸುವ ಶಬ್ದ ಹೊಮ್ಮಿ
ಬೆಲೆ ಕಟ್ಟಲಾಗದ ಆನಂದ
ಕೊಡುವ ಬಲೂನು
ತುಂಬಾ ಸೋವಿ

ಕೈಯಲ್ಲಿ ಹಿಡಿದು ಮೇಲೆ ಕೆಳಗೆ
ನೂಕಿ ಮತ್ತೆ ಮತ್ತೆ ಬಾಯಗಲಿಸಿ
ಕಣ್ಣರಳಿಸಿ ನೋಡುವ ಮಗುವಿನ
ಸಂತಸಕ್ಕೆಲ್ಲಿ ಸಾಟಿ
ಕೇವಲ ಹತ್ತು ರೂ ಸಿಗುವ ವಸ್ತು
ಪ್ರಸಾದಿಸುವ ಸಂತಸ ನೋಡಿದ
ಆಕಾಶದ ಬಲೂನಾದ ಚಂದ್ರನಿಗೂ
ಹೊಟ್ಟೆಕಿಚ್ಚು ಈಗೀಗ

ಮಗುವಿನ ಸಂತೋಷ
ಪ್ರೌಢರಿಗೂ ಸಿಗುತ್ತಿದ್ದರೆ
ಖರೀದಿಸುತ್ತಿದ್ದಾರೇನೋ ರಾಶಿ ರಾಶಿ
ಬಣ್ಣ ಬಣ್ಣದ ಬಲೂನುಗಳ

ಖುಷಿ ಕೆಲವರಿಗೆ ಅಗ್ಗ
ಇನ್ನುಳಿದವರಿಗೆ ತುಟ್ಟಿ
ಬಲೂನ್ ಆಸೆಯ ಮಗುವಿಗೆ
ಬಲೂನಂಥ ದೊಡ್ಡ ಮನಸ್ಸು
ಬಲೂನ್ ದೇಹದ ಮನುಷ್ಯನಿಗೆ
ಮನಸ್ಸು ರವೆಯಷ್ಟು

‍ಲೇಖಕರು avadhi

27 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading