ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-3..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

17.3

ಜೈ ಜೈ ಜೈಸಲ್ಮೇರ್

ನಾನು ನಿರೀಕ್ಷಿಸಿದಂತೆ ನಿಜವಾಗಿಯೂ ಮಳೆ ಇಲ್ಲದಿದ್ದಾಗ ರಾಜಾಸ್ಥಾನಕ್ಕೆ ಹೋಗುವ ಅವಕಾಶ ನನ್ನ  ನಸೀಬಿನಲ್ಲಿತ್ತು. Desert National Parkನ ಪ್ರವಾಸದ ಆಯೋಜನೆಯಿಂದಾಗಿ ರಾಜಾಸ್ಥಾನಕ್ಕೆ ಮತ್ತೊಮ್ಮೆ ಕಾಲಿಟ್ಟೆ. ಹಿಂದಿನೆರಡು ರಾಜಾಸ್ಥಾನದ ಟೂರ್‌ ಖುಷ್ಬೂ ರಾಹುಲರ ಜೊತೆಗಾಗಿದ್ದರೆ ಈ ಸಲದ ಪ್ರವಾಸಕ್ಕೆ ಹೊರಟದ್ದು ಚಂದ್ರಮೌಳಿ ಗಾಂಗೂಲಿ ತಂಡದ ಜೊತೆಗೆ. ಮರಳುಗಾಡಿನಲ್ಲಿ ಮರುಳರಂತೆ ಅಲೆಯುವ ಅವಕಾಶ ಸಿಕ್ಕಿದಾಗ ಬಿಟ್ಟು ಮರುಳರಾಗುವುದುಂಟೆ. ಬೆಂಗಳೂರಿನಿಂದ ಮುಂಬೈಗೆ ತಲುಪಿ, ವಿಮಾನ ಬದಲಿಸಿ ಜೈಸಲ್ಮೇರಿಗೆ ತಲುಪಿದೆ. ದೇಶದ ನಾನಾ ಕಡೆಯಿಂದ ಬಂದ ಹಕ್ಕಿಪ್ರಿಯರು ಒಟ್ಟುಗೂಡಿಕೊಂಡು ಮರಳುಗಾಡಿನಲ್ಲಿ ಹಕ್ಕಿ ಜೈತ್ರಯಾತ್ರೆಗೆ ಜಯವಾಗಲಿ ಎನ್ನುತ್ತಾ ಮುಂದೆ ಹೊರಟೆವು. 

ಜೈಸಲ್ಮೇರಿನಲ್ಲಿ ಎಲ್ಲೆಲ್ಲಿ ನೋಡಲಿ, ಮರಳನ್ನೇ ಕಾಣುವೆ ಎಂದು ಮರಳು ನೆಲೆ ನಮ್ಮನ್ನು ಕೈಬೀಸಿ ಕರೆದಿತ್ತು. ಕೋಟೆನಗರವಾದ ಜೈಸಲ್ಮೇರಿನಿಂದ ನಲವತ್ತೈದು ಕಿ.ಮೀ ದೂರದ ಡಸರ್ಟ್ ನ್ಯಾಷನಲ್ ಪಾರ್ಕಿಗೆ ಸಮೀಪದ ಸ್ಯಾಮ್ನಲ್ಲಿ ನಮಗೆ ಬಿಡಾರದ ವ್ಯವಸ್ಥೆ ಆಗಿತ್ತು. ಟೂರಿಗೆ ಬೇಕಾದ ವ್ಯವಸ್ಥೆಗಳತ್ತ ಹೆಚ್ಚು ಆಸ್ಥೆ ವಹಿಸುವ ಚಂದ್ರಮೌಳಿ ಒಳ್ಳೆಯ ವಸತಿ ವ್ಯವಸ್ಥೆ ಮಾಡಿದ್ದರು. ಇಡೀ ಗುಂಪಿನಲ್ಲಿ ನಾನೊಬ್ಬಳೆ ಮಹಿಳೆ. ಹಾಗಾಗಿ ನನಗೆ ಒಂದು ಪ್ರತ್ಯೇಕ ಕೊಠಡಿ ಸಿಕ್ಕಿತ್ತು. ಎರಡು ಜೀಪುಗಳಲ್ಲಿ ತಂಡ ಸಂಚರಿಸುವ ವ್ಯವಸ್ಥೆ ಮಾಡಿದ್ದರು. ಎರಡು ವಾಹನಗಳಿಗೆ ಸಂಪರ್ಕ ಸ್ಥಾಪಿಸಲು ವಾಕಿ-ಟಾಕಿ ವ್ಯವಸ್ಥೆ ಮಾಡಿದ್ದರೂ ಅದನ್ನು ಬಳಸುವ ಅಗತ್ಯ ಬೀಳದಂತೆ ಬಹುತೇಕ ಒಟ್ಟೊಟ್ಟಿಗೆ ಹೋಗುತ್ತಿದ್ದೆವು. ನನಗೆ ಹತ್ತಲಾಗದೆಂದು ಜೀಪಿನ ಮುಂದಿನ ಸೀಟಿನಲ್ಲಿ ಆಸನ ಕೊಟ್ಟಿದ್ದರು. ಉಳಿದವರು ಹಿಂದಿನ ಸೀಟುಗಳಲ್ಲಿದ್ದರು. ಮುಂದಿನ ಸೀಟಿನಿಂದ ಕೆಳ ಲೆವಲ್ಲಿನಲ್ಲಿ ಫೋಟೊ ತೆಗೆಯುವಾಗ ಕೆಲವು ಸಲ ಉಪಯುಕ್ತ ಎನಿಸಿದರೆ ಕೆಲವು ಸಲ ಕಷ್ಟವಾಗುತ್ತಿತ್ತು. ವಿರುದ್ಧ ದಿಕ್ಕಿನಲ್ಲಿ ತೆಗೆಯುವುದೂ ಸಾಧ್ಯವಿರುತ್ತಿರಲಿಲ್ಲ. ಯಾವುದೇ ವ್ಯವಸ್ಥೆ ಮಾಡಿದರೂ ಎಲ್ಲದರಲ್ಲೂ ಒಂದು ಉಪಯುಕ್ತತೆ ಇದ್ದಂತೆ ಒಂದು ಮಿತಿಯೂ ಇದ್ದೇ ಇರುತ್ತದೆ ಅಲ್ಲವೆ, ಅದು ಅನಿವಾರ್ಯ ಕೂಡಾ. ಇರುವ ವ್ಯವಸ್ಥೆಯಲ್ಲಿಯೂ ಹೆಚ್ಚು ಉಪಯುಕ್ತತೆಯನ್ನು ಮಾಡಿಕೊಳ್ಳುವ ಜಾಣ್ಮೆ, ತಾಳ್ಮೆ ಇರಬೇಕಷ್ಟೆ. 

ವಲಸೆ ಹಾಗೂ ಸ್ಥಳೀಯ ಹಕ್ಕಿಗಳ ನೆಲೆಯಾದ ಮರಳುಭೂಮಿಯಲ್ಲಿ ಹಕ್ಕಿ, ಮರಳು ಎರಡು ಆಕರ್ಷಣೆ ಹುಟ್ಟಿಸುತ್ತವೆ. ಹಕ್ಕಿಗೆ ಮರುಳರಾಗಿ ಹೋಗುವವರು ಇರುವಂತಯೆ, ಮರಳಿಗೆ ಹಕ್ಕಿಗಳಾಗಿ ಹೋಗುವವರೂ ಇದ್ದಾರೆ. ಇಲ್ಲಿಗೆ ನವೆಂಬರಿನಿಂದ ಜನವರಿತನಕ ಪ್ರವಾಸ ಮಾಡಲು ಸೂಕ್ತ ಸಮಯ. ನಾವು ಡಿಸೆಂಬರಿನಲ್ಲಿ ಜೈಸಲ್ಮೇರ್ ಪ್ರವಾಸಕ್ಕೆ ಬಂದೆವು. ಕೊನೆಯರಿಯದ ಮರಳರಾಶಿ ಕಂಡಾಗ ಹಕ್ಕಿಯ ಮರುಳಿಗೆ ಬಿದ್ದು ಇಂತಹ ಮರಳನ್ನೂ ನೋಡಲೂ ಅವಕಾಶ ಆಯಿತಲ್ಲ ಎಂಬ ಸಂಭ್ರಮ. ಮರಳರಾಶಿಯ ಉದ್ದಕ್ಕೂ ಒಂಟೆಗಳು, ಒಂಟೆ ಗಾಡಿಗಳು ಅವಕ್ಕೆ ರಂಗಿನ ಅಲಂಕಾರ, ಅದನ್ನೇರಿ ಸುತ್ತಾಡಲು ಬಂದ ಪ್ರವಾಸಿಗರ ತಂಡಗಳು ಕಣ್ಣಿಗೆ ಬೀಳುತ್ತಿದ್ದವು. ಹಾಗೆಯೇ ಮರಳೇ ತುಂಬಿದ ಕ್ಷಿತಿಜದ ಅಂಚಿನಲ್ಲಿ ಮರೆಯಾಗುವ ಸೂರ್ಯನ ನೋಟಕ್ಕೂ ಮರುಳು ಮಾಡುವ ತಾಕತ್ತಿತ್ತು.

ಮೊದಲ ದಿನ ಮಧ್ಯಾಹ್ನದಿಂದ ಸಫಾರಿ ಶುರುವಾಯಿತು. ಈ ಮರಳುಗಾಡಿನಲ್ಲಿ ಮೊದಲೇ ಟರ‍್ರೆನ್ಗೆ ಹೊಂದಿಕೊಳ್ಳುವ ಬಣ್ಣದ ಹಕ್ಕಿಗಳೇ ಬಹುತೇಕ. ತಕ್ಷಣಕ್ಕೆ ಗುರುತಿಸಲು ಕಷ್ಟ. ಸಣ್ಣಪುಟ್ಟ ಹಕ್ಕಿಗಳ ಬಳಿಗೆ ಹೋಗಿಯೋ ಅಥವಾ ಅವುಗಳ ಚಲನೆಯನ್ನು ಗಮನಿಸಿ ಪತ್ತೆ ಹಚ್ಚಬೇಕಿತ್ತು. ಆದರೆ ದೊಡ್ಡ ಹಕ್ಕಿಗಳಾದ ಈಗಲ್, ವಲ್ಚರ್‌ ನಮ್ಮನ್ನು ನೋಡಿದ ಕೂಡಲೇ ಹಾರಲು ಅಣಿಯಾಗುತ್ತಿದ್ದವು. ಬಹಳ ದಿನಗಳಿಂದ ಕೇಳಿ ಮಾತ್ರ ಗೊತ್ತಿದ್ದ ಬೃಹದ್ಗಾತ್ರದ Cinereous vulture ಕಂಡೆ. ರಾಹುಲ್ ಈ ರಣಹದ್ದಿನ ಎಂಟರಿಂದ ಹತ್ತು ಅಡಿಯಷ್ಟು ವಿಸ್ತಾರವಾದ ರೆಕ್ಕೆಗಳ ಬಗ್ಗೆ ತಿಳಿಸಿ ನೋಡಲೇಬೇಕೆಂಬ ಕುತೂಹಲ ಹುಟ್ಟಿಸಿದ್ದರು. 

ಒಗೆದಿದ್ದ ಒಂಟೆಯ ಶವಕ್ಕೆ Cinereous vulture, Eurasian Griffon Vulture, Indian Vulture  ಕಾಯುತ್ತಾ ಕುಳಿತಿದ್ದವು. ಅಷ್ಟಗಲ ಎಂದಿದ್ದ ರೆಕ್ಕೆಯನ್ನು ಇಷ್ಟೆ ಅಗಲಕ್ಕೆ ಮಡಿಸಿ ಮುದುರಿ ಕೂತಿದ್ದರಿಂದ ಸಿನೇರಿಯಸ್ನ ರೆಕ್ಕೆಯ ಅಗಲ ಗೊತ್ತಾಗಲಿಲ್ಲ. ನಾವೂ ದೂರದಲ್ಲೇ ಗಾಡಿ ನಿಲ್ಲಿಸಿ ನಿಧಾನವಾಗಿ ನಡೆದು ಹೋದೆವು. ಅವುಗಳ ಬಳಿಗೆ ಹೋಗುವ ಮುನ್ನ Cream Collared Courser ಸಿಕ್ಕಿಬಿಟ್ಟವು. ಒಟ್ಟೊಟ್ಟಿಗೆ ಅನೇಕ ಲೈಫರ್‌. ಹತ್ತಿರ ಹೋಗುತ್ತಿದ್ದಂತೆ ರಣಹದ್ದುಗಳು ನಮ್ಮನ್ನೇ ಸೆರೆ ಹಿಡಿಯಲು ಬಂದ ರಣಹದ್ದುಗಳೆಂದು ಭಾವಿಸಿದವೋ ಏನೋ ತಮ್ಮ ಊರಗಲದ ರೆಕ್ಕೆ ತೆರೆದು ಭರ್ ಎಂದು ಹಾರಿಹಾರಿ ಹೋದವು. ಹಾರಿ ದೂರಕ್ಕೆ ಹೋಗಿ ಕುಳಿತವೆ ವಿನಾ ಜಾಗವನ್ನೇನೂ ಖಾಲಿ ಮಾಡಲಿಲ್ಲ. ನಾವಾದರೂ ಏನು ಮಾಡುವುದು `ಹೋಗಲಿ ಬಿಡರಪ್ಪ ನಿಮಗ್ಯಾಕಪ್ಪ ಕಷ್ಟ ಕೊಡುವುದು’ ಎಂದು ಸಾಂತ್ವನಿಸಿ ದೂರದಿಂದ ಕ್ಲಿಕ್ಕಿಸಿಕೊಂಡು ಬಂದೆವು. ಆದರೂ ರಾಹುಲ್ ಹೇಳಿದಂತೆ ಸಿನೇರಿಯಸ್ನ ದೊಡ್ಡ ರೆಕ್ಕೆಗಳನ್ನು ನೋಡಲು ಅದು ಹಾರಿದ್ದರಿಂದ ಸಾಧ್ಯವಾಯಿತು.

ಡಸರ್ಟ್ ನ್ಯಾಷನಲ್ ಪಾರ್ಕಿಗೆ ಬಂದ ನಮ್ಮ ಹುಡುಕಾಟ ಸಹಜವಾಗಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಅಂದರೆ ಜಿ.ಐ.ಬಿಯೆ ಆಗಿತ್ತು, ಆಗಿರಲೇಬೇಕಲ್ಲವೆ! ಮೊದಲ ಸಫಾರಿಯಲ್ಲೇ ಅವು ಸಿಕ್ಕವು ಕೂಡಾ. ಸಿಕ್ಕವು ಎಂದರೆ ಕಾಣಸಿಕ್ಕವು ಎಂದಷ್ಟೆ ಅರ್ಥ. ಜಾಗತಿಕವಾಗಿ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿರುವ ಬಸ್ಟರ್ಡ್ ಇಂಡಿಯಾದಲ್ಲಿಂದು ಕೇವಲ ನೂರೈವತ್ತು ಮಾತ್ರ ಇದ್ದು ಅದರಲ್ಲಿ ರಾಜ್ಯಪಕ್ಷಿಯಾಗಿ ಹೊಂದಿದ ರಾಜಾಸ್ಥಾನದಲ್ಲಿ ನೂರಿಪ್ಪತ್ತೈದು ಬಸ್ಟರ್ಡ್ ಇವೆ. ಅರೆ-ಶುಷ್ಕ ಮತ್ತು ಶುಷ್ಕ ಹುಲ್ಲುಗಾವಲುಗಳಲ್ಲಿ ಮಾತ್ರವೆ ಹೆಚ್ಚಾಗಿ ವಾಸಿಸುವ ಇವುಗಳ ಸಂರಕ್ಷಣೆಗಾಗಿ ದೊಡ್ಡ ತಂತಿಬೇಲಿಯ ಆವರಣ ನಿರ್ಮಿಸಿದ್ದಾರೆ. ಈ ದೈತ್ಯ ಹಕ್ಕಿಗಳು ಬಹುತೇಕ ಆ ಆವರಣದಲ್ಲೇ ಇರುತ್ತವೆ. ಅವುಗಳಿಗಿಂತ ಎತ್ತರವಾಗಿ ಬೆಳೆದ ಹುಲ್ಲುಗಾವಲ ನಡುವೆ ಅಡ್ಡಾಡುವ ಬಸ್ಟರ್ಡ್ ಅನ್ನು ಕಣ್ಣಿಗೆ ತೋರಿಸಲು ಜೀಪಿನ ಟಾಪಿನ ಮೇಲೆ ಹತ್ತಿದರೂ ಕಷ್ಟವೇ ಸರಿ. ಆದರೂ ನೋಡುವ ಪ್ರಯತ್ನ ಕೈಬಿಡಲಿಲ್ಲ. ಬಾ ಬಾ ಬಸ್ಟರ್ಡ್ ಬಾಬಾ ಸನಿಹಕೆ ಬಾ ಎನ್ನುತ್ತಾ ಬಸ್ಟರ್ಡ್ ಹುಡುಕುವಾಗ ದೂರದ ಕುರುಚಲು ಗಿಡದ ಮೇಲೆ Short-eared Owl ಕುಳಿತಿತ್ತು. ಲೈಫರ್ ಆದ ಗೂಬೆಯನ್ನು ಹತ್ತಿರ ಬರಲಿ ಎಂದು ಕಾಯುತ್ತಿದ್ದಷ್ಟು ಅದು ಅಲುಗಾಡುವ ಲಕ್ಷಣವೇ ಕಾಣಲಿಲ್ಲ. ಎಲೆ ಗೂಬೆ ನಿನಗೆ ನನ್ನನ್ನು ಹತ್ತಿರದಿಂದ ನೋಡುವ ಯೋಗವಿಲ್ಲ, ನೀನು ಅನ್ಲಕ್ಕಿ ಎಂದು ಬೈದೆ. ಕೊನೆಗೆ ಮೊದಲ ದಿನವೇ ಬಸ್ಟರ್ಡ್ ನೋಡಿದ ಸಣ್ಣ ಸಮಾಧಾನದೊಡನೆ ಬಿಡಾರಕ್ಕೆ ಮರಳಿದೆವು.

ಮರುದಿನ ಮುಂಜಾನೆಯೆ ನಮ್ಮ ಸವಾರಿ ಮತ್ತೆ ಬಸ್ಟರ್ಡ್ ಕಡೆಗೆ ಸಾಗಿತ್ತು. ಹಾಗೆ ಬೇಲಿಯಂಚಿನಲ್ಲಿ ಹೋಗುತ್ತಿದ್ದಂತೆ Desert fox ಕಾಣಿಸಿಕೊಂಡಿತು. ಓಹೋ ಇಂದೇನೋ ಅದೃಷ್ಟ ಕಾದಿದೆ ಎಂದು ಹೇಳಿಕೊಳ್ಳುವಷ್ಟರಲ್ಲಿ ನಮ್ಮ ಗಾಡಿಯ ಕೆಲವರು ಕೆಳಗಿಳಿದು ನರಿ ಚಿತ್ರಬೇಟೆಗೆ ತೊಡಗಿದರು. ನಾನೋ ಜೀಪಿನಿಂದಲೇ ಕ್ಲಿಕ್ಕಿಸಿದ್ದೆ. ನಮ್ಮ ತಂಡದ ರಣಕಲಿಗಳ ಅಮಿತೋತ್ಸಾಹಕ್ಕೆ ಹೆದರಿದ ನರಿ ದೂರ ದೂರ ಅಲ್ಲೇ ಇರಿ, ಹತ್ತಿರ ಬಂದರೆ ನನಗೆ ವರಿ ಎಂದು ಸಾಕಷ್ಟು ದೂರಕ್ಕೆ ಹೋಗಿ ಕುಳಿತು ಆಕಳಿಸತೊಡಗಿತು. ಆಕಳಿಸಿದ ಮೇಲೆ ತೂಕಡಿಸಬಹುದು, ಕೊನೆಗೆ ಮಲಗಲೂಬಹುದೆಂದು ನಾವೂ ಅದನ್ನು ಅಲ್ಲಿಯೇ ಆಕಳಿಸಲು ಬಿಟ್ಟು ಬಸ್ಟರ್ಡ್ ಬಯಲಿನತ್ತ ಹೊರಟೆವು. ನಮ್ಮ ಗೈಡ್ ಹುಷಾರು ಹುಷಾರು ಎಂದು ಎಚ್ಚರಿಸುತ್ತಲೇ ಇದ್ದ. ಕಾರಣ ಬೇಲಿಯ ಹೊರಭಾಗದಲ್ಲಿ ಎರಡು ಬಸ್ಟರ್ಡ್ಗಳು ಇದ್ದವು. ಎಲ್ಲರಿಗೂ ಅನುಕೂಲ ಆಗಲೆಂದು ಇನ್ನೊಂದು ಜೀಪ್ ಬರುವ ತನಕ ಕಾಯ್ದು ಸಮೀಪಕ್ಕೆ ತೆರಳು ಪ್ಲ್ಯಾನ್ ಇತ್ತು. ಆದರೆ ಈ ಮರಳುಗಾಡಿನಲ್ಲಿ ಎಲ್ಲ ಓಪನ್ ಸೀಕ್ರೆಟ್. ಒಂದಿಂಚು ಚಲಿಸಿದರೂ ಸಿಕ್ಕಿಕೊಳ್ಳುತ್ತಿದ್ದೆವು. ನನ್ನ ಕ್ಯಾಮೆರಾ ಸಿದ್ಧವಾಗಿತ್ತು. ನಾವು ಸಮೀಪಿಸುತ್ತಿದ್ದಂತೆ ಬಸ್ಟರ್ಡ್ಗಳು ದಾಪುಗಾಲು ಹಾಕುತ್ತಾ ರೆಕ್ಕೆ ಬಿಚ್ಚಿಕೊಳ್ಳಲು ಅನುವಾಗುತ್ತಿದ್ದವು. ರೆಡಿ ೧…೨..೩… ರೆಕ್ಕೆ ಬಿಚ್ಚಿ ಮೇಲೇರಿ ಬೇಲಿ ದಾಟಿ ಒಳಗೆ ಹೋಗಿಯೇ ಬಿಟ್ಟವು. ಆದರೆ ಅಷ್ಟರಲ್ಲಿ ಐದಾರು ಕ್ಲಿಕ್ ಆಗಿಬಿಟ್ಟಿದ್ದವು. ಅಷ್ಟು ಮಾತ್ರ ಸಮಾಧಾನ. ಏಕೆಂದರೆ ಹಾರುವ ಬಸ್ಟರ್ಡ್ಗಳನ್ನು ಈ ಕಣ್ಣುಗಳಲ್ಲೂ ತುಂಬಿಕೊಂಡು ಕ್ಲಿಕ್‌ಗಳನ್ನೂ ಮಾಡಿಕೊಂಡಿದ್ದಕ್ಕೆ. ಮರಳಿ ಬರುವಾಗ ಹಾದಿ ಮಧ್ಯೆ ಪಾಪಾಸುಕಳ್ಳಿ ಗಿಡದ ಮೇಲೆ ಹಸಿರುಬಾಲದ ಕಳ್ಳಿಪೀರಗಳು ಒತ್ತೊತ್ತಾಗಿ ಕುಳಿತಿದ್ದವು. ನೂರಾರು ಸಲ ಕ್ಲಿಕ್ಕಿಸಿದರೂ ಮತ್ತೆ ಕ್ಲಿಕ್ಕಿಸಲು ಹಿಂದೇಟು ಹಾಕಲಿಲ್ಲ. 

ಮಧ್ಯಾಹ್ನದ ಸೆಷನ್ನಿನ ಮೊದಲ ಭಾಗ ಬಸ್ಟರ್ಡ್ಗೆ ಮೀಸಲಾಗಿತ್ತು. ಬೇಲಿಗಳ ಅಂಚಿನಲ್ಲಿ ಸವಾರಿ ಹೊರಡುತ್ತಿದ್ದಾಗ ಬೇಲಿಯೊಳಗೆ ನಾಲ್ಕೈದು ಬಸ್ಟರ್ಡ್ ನಿಧಾನವಾಗಿ ಹುಲ್ಲುಗಾವಲಿನಲ್ಲಿ ಹೆಜ್ಜೆ ಹಾಕುತ್ತಿದ್ದ ನೋಟ ಎಲ್ಲರ ಕಣ್ಣ ತುತ್ತಾಯಿತು. ನನ್ನೆರಡೂ ಕ್ಯಾಮೆರಾಗಳೂ ಸಜ್ಜಾದವು. ಬಸ್ಟರ್ಡ್ ದೂರದೂರಕೆ ಹೋಗಿ ಕಾಣೆಯಾಗುವವರೆಗೂ ಕಂಡಾಗಲೆಲ್ಲ ಕ್ಲಿಕ್ ಮಾಡಿದೆವು. ಚಿತ್ರ ಬರುವುದು ಬಿಡುವುದು ನಂತರದ ಸಮಾಚಾರ, ಕ್ಲಿಕ್ ಮಾಡಿಕೊಳ್ಳುವುದು ಸಧ್ಯದ ಕೆಲಸ ಎನ್ನುವುದು ನಮ್ಮ ಖಡಕ್ ಪಾಲಿಸಿಯಾಗಿತ್ತು. ಸಾಕಷ್ಟು ಚೆನ್ನಾಗಿದ್ದ ಚಿತ್ರಗಳು ಸಿಕ್ಕಿದ್ದವು. ಅದರಲ್ಲಿ ಒಂದು ಚಿತ್ರವಂತೂ ಇಂಡಿಯನ್ ಬರ್ಡ್ ಫೇಸ್‌ಬುಕ್ ಅಂಕಣದಲ್ಲಿ ತಿಂಗಳುಗಟ್ಟಲೆ ಮುಖಚಿತ್ರವಾಗಿದ್ದ ಖುಷಿ ನನಗೆ. ಶ್ರಮಪಟ್ಟಿದ್ದಕ್ಕೂ ಸಾರ್ಥಕ. ಸಂಜೆ ಹೊಲ-ಗುಡ್ಡಗಳ ನಡುವೆ ಅಡ್ಡಾಡಿದಾಗ Desert Lark, Black crowned sparrow lark, Red tailed Wheatearಗಳನ್ನು ಕ್ಲಿಕ್ಕಿಸಿ ಸೆರೆಹಿಡಿದು ಬಿಡಾರಕ್ಕೆ ಮರಳುವುದರೊಂದಿಗೆ ಎರಡನೇ ದಿನದ ಪ್ರಯಾಣ ಮುಕ್ತಾಯವಾಗಿತ್ತು.

ಮೂರನೆಯ ದಿನ ಬಸ್ಟರ್ಡ್ ಹಿಂದೆ ಅಲೆಯುವುದರ ಬದಲು ನೀರಿನ ನೆಲೆ ಹುಡುಕಿಕೊಂಡು ಹೋದೆವು. ಮರಳುಗಾಡಿನಲ್ಲಿ ನೀರಿನ ನೆಲೆಗಳೆ ಬಹಳ ಕಡಿಮೆ. ನೀರಿಗಾಗಿ ಹಕ್ಕಿಗಳು ಬರುವ ನಿರೀಕ್ಷೆಯಿಂದ ಹೋದಾಗ Common Starling, Water Pipit, Bimaculated larkಗಳೆ ಅಲ್ಲದೆ Chestnut bellied Sandgrouse ಕೂಡಾ ಸಿಕ್ಕವು. ಆ ದಿನ ಸಂಜೆಯ ಹೊತ್ತಿಗೂ ನೀರಿರುವ ತಾಣ ಹುಡುಕಿ ಹೋದಾಗ Trumpeter Finch ಲೈಫರಾಗಿ ಸಿಕ್ಕಿತು. ನಂತರ ಒಂದು ಗುಡ್ಡದ ಬಳಿ ಸುತ್ತಾಡಿ Desert Wheatear female, Variable Wheatear male, femaleಗಳನ್ನು  ಸೆರೆಹಿಡಿದೆ. 

ಮರಳು ತುಂಬಿದ ತಾಣದಲ್ಲಿ ಹಕ್ಕಿ ಫೋಟೋ ತೆಗೆದರೆ ಒಂದೋ ಮರಳರಾಶಿಯ ಮೇಲೆ ಅಥವಾ ಬೇಲಿಯ ತಂತಿ ಮೇಲೆ ಆಗಿರುತ್ತದೆ. ಗಿಡ ಮರಗಳಲ್ಲಿ ಹಕ್ಕಿ ನೋಡುತ್ತೇವೆಂದರೆ ಗಿಡ ಮರಗಳೇ ಬಹಳ ಅಪರೂಪ. ಹಸಿರು ಹಿನ್ನೆಲೆ ಬೇಕು ಎನ್ನುವುದಂತೂ ಕನಸಿನ ಮಾತಾಗಿತ್ತು. `ಎತ್ತೆತ್ತಲೀಗ ಕಗ್ಗತ್ತಲಾಯ್ತು ಗೊತ್ತಾಗದಾಯ್ತೆ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ’ ಎಂದು ಭಕ್ತ ಕುಂಬಾರ ಪರಿತಪಿಸಿದಂತೆ `ಎತ್ತೆತ್ತಲೀಗ ಮರಳಾಯ್ತು, ಗೊತ್ತಾಗದಾಯ್ತೆ ಮರಳೆ, ಮರಳೆ ಜೈ ಜೈ ಮರಳೆ’ ಎನ್ನುವಂತೆ ಕತ್ತೆತ್ತಿಯೊ ಕತ್ತಿಳಿಸಿಯೋ `ನೋಡಿದಾ ಕಡೆಯೆಲ್ಲ ಅವಳೆ ಅವಳೆ’ ಎನ್ನುವಂತೆ ಮರಳೆ ತುಂಬಿದ ಇಲ್ಲಿ ಒಂದಾಳುದ್ದದ  ಗಿಡವೇ ಹೆಮ್ಮರ. ಸಣ್ಣ ಕುರುಚಲು ಮಾತ್ರ ಅಲ್ಲಲ್ಲಿ ಕಾಣಸಿಗುತ್ತವೆ. ಕೆಲವು ಕಡೆಯಂತೂ ಹಕ್ಕಿಗಳಿಗಿಂತ ಮಿಡತೆಗಳೆ ಹೆಚ್ಚು. ರಾಶಿ ರಾಶಿ ಮಿಡತೆಗಳು. ಹಕ್ಕಿಗಳಿಗೆ ಹಬ್ಬವೋ ಹಬ್ಬ. ಬಹುತೇಕ ಹಕ್ಕಿಗಳ ಪಟ ತೆಗೆಯುವಾಗ ಅವುಗಳ ಕೊಕ್ಕಿನಲ್ಲಿ ಮಿಡತೆಯೂ ಇರುತ್ತಿತ್ತು. ಇಲ್ಲವೇ ಹಕ್ಕಿಗಳು ಮಿಡಿತೆ ಹಿಡಿಯುವಾಟದಲ್ಲಿಯೋ, ಹಿಡಿದು ಆಟ ಆಡಿಸುವುದರಲ್ಲಿಯೋ ನಿರತವಾಗಿದ್ದವು.

ಮರುದಿನ ಬೆಳಿಗ್ಗೆ ಬಹುತೇಕ ಪಾಕಿಸ್ತಾನದ ಬಾರ್ಡರಿಗೆ ೩೦-೪೦ ಕಿ.ಮೀ ತನಕ ಹೊರಟೆವು. ಎತ್ತ ನೋಡಿದರೂ ಖಾಲಿ ಖಾಲಿ ಎನ್ನುವಂತಿದ್ದ, ಅಪರೂಪಕ್ಕೆ ನರ-ವಾಹನ ಸಂಚಾರಗಳಿದ್ದ ದಾರಿ ಅದು. ಲಗ್ಗರ್ ಫಾಲ್ಕನ್ ಬೆನ್ನ ಹಿಂದೆ ಬಿದ್ದಾಗ ಅದೂ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ನಮಗಾಗಿ ಕುಳಿತಿತ್ತು.  ಅದಕ್ಕೆ ಎದ್ದು ಹೋಗುವ ಆಸೆ ಇದ್ದರೂ ಬಕಗಳಂತೆ ಕಾಯುತ್ತಿದ್ದ ನಮ್ಮನ್ನು ದಾಟಿ ಹೋಗುವುದಾದರೂ ಹೇಗೆ? ಹದ್ದಿಗೆ ಹದ್ದಾಗಿ ಕಾಯುವವರು ನಾವು. ಆದರೂ ಅದು ಸಾಕಾಗಿ ಹಾರಿಹೋಗಿ ಮರಳದಿನ್ನೆಯ ಹಿಂದೆ ಕುಳಿತು ಇಣುಕಿ ನೋಡಲಾರಂಭಿಸಿತು. ನಾವೂ ಮುಂದೆ ಹೋದರೆ ನರಿಯೊಂದು ಓಡುತ್ತಾ ಬಂದಿತು. ನಮ್ಮ ಗುಂಪಿನವರು ಅಲರ್ಟ್ ಆದರೂ ನರಿ ಕೈಗೆ ಸಿಕ್ಕದೆ ಪರಾರಿಯಾಗಿ ಚುಕ್ಕಿ ಆಯಿತು.

Eastern Imperial eagle, Black Eared Kite, Short toed snake eagle ಕೂಡ ಲೈಫರ್ ಆದವು. ನಿಧಾನವಾಗಿ ಮತ್ತೂ ಮುಂದಕ್ಕೆ ಹೋದಾಗ ಒಂಟೆಯ ಕಳೇಬರ ತಿನ್ನಲು Common Raven, Red headed Vulture,  White rumped Vulture ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿದ್ದವು. ಎಲ್ಲವೂ ನನಗೆ ಲೈಫರ್‌ಗಳೆ. ದೂರದ ಗುಡ್ಡದ ಮೇಲೆ ಸ್ಟೆಪ್ಪೆ ಈಗಲ್ ಕೂಡಾ ನಾನ್ಯಾಕೆ ಇಲ್ಲಿಗೆ ಹಾರಿ ಬರಬಾರದೆಂಬಂತೆ ಕಾಯುತ್ತಿತ್ತು. ಫೋಟೋ ಸೆಷನ್ ಆದ ಬಳಿಕ ನಾವೂ ಇನ್ನೂ ಅಷ್ಟು ದೂರ ಹೋದೆವು. ಅಲ್ಲಂತೂ ಹೆಸರು ಹೇಳಲೂ ಒಂದು ಗಿಡ ಮರ ಇರಲಿಲ್ಲ. ಆದರೆ ನೆಲದ ಮೇಲೆ ಕಣ್ಣು ಹಾಯಿಸಿದಾಗ  Greater short toed lark, Greater Hoopoe Lark ಮರಳ ಮೇಲೆ ಕುಪ್ಪಳಿಸುತ್ತಾ ತೆವಳುತ್ತಾ ಕೀಟಗಳ ಹುಡುಕಾಟದಲ್ಲಿದ್ದವು. ನಮ್ಮ ಗುಂಪಿನ ಹಲವರಿಗೆ ಕೆಳಗಿಳಿದು ನೆಲದ ಮೇಲೆ ಉರುಳಿ ತೆಗೆಯುವ ಹುಮ್ಮಸ್ಸು ಹೆಚ್ಚಿ ಆ ಪ್ರಯತ್ನವನ್ನೂ ಮಾಡಿದರು. ಎಲ್ಲಿಂದ ತೆಗೆದರೂ ನೆಲದ ಮೇಲೆ ಹಕ್ಕಿ ಇದೆ ಎನ್ನುವುದೇ ಕಾಣದಂತಿದ್ದವು ಅವು. ಆದರೂ ಲೈಫರ್ ಸಿಕ್ಕ ಖುಷಿಗೆ ಎಣೆಯೆಲ್ಲಿದೆ?

ಮಧ್ಯಾಹ್ನದ ಹೊತ್ತಿಗೆ ನಾವು ಬಿಡಾರಕ್ಕೆ ಮರಳಲೇಬೇಕಿತ್ತು. ಏಕೆಂದರೆ ಅಲ್ಲಿಂದ ನಮ್ಮ ಮರುಪಯಣ ಜೈಸಲ್ಮೇರಿಗೆ, ನಂತರ ದೆಹಲಿಗೆ. ಎಲ್ಲರಿಗೂ ಇಪ್ಪತ್ತಕ್ಕೂ ಹೆಚ್ಚು ಲೈಫರ್ ಸಿಕ್ಕಿ ಸಂತೃಪ್ತರಾಗಿದ್ದರು. ಸಂಜೆ ಜೈಸಲ್ಮೇರಿನಲ್ಲಿ ಟ್ರೈನಿಗೆ ಹತ್ತಬೇಕಿದ್ದರಿಂದ ಊಟ ಮುಗಿಸಿ ಗಾಡಿ ಹತ್ತಿದೆವು. ಓಡುವ ಗಾಡಿಯಿಂದಲೇ ಜೈಸಲ್ಮೇರದ ಕೋಟೆಯ ಪಟ ಸೆರೆ ಹಿಡಿದೆ. ನಮ್ಮ ತಂಡ ಬಂದ ನೆನಪಿಗೆ ಸ್ಟೇಷನ್ನಿನಲ್ಲೇ ಒಂದು ಗ್ರೂಪ್ ಪಟ ಹಿಡಿದೆವು. ರೈಲು ಹತ್ತಿ ಮರಳುಗಾಡಿಗೆ ಗುಡ್‌ಬೈ ಹೇಳಿ ಇಡೀ ರಾತ್ರಿ ಪ್ರಯಾಣಿಸಿ ಬೆಳಿಗ್ಗೆ ತಡವಾಗಿ ದೆಹಲಿ ತಲುಪಿದೆವು. ನನ್ನ ಫ್ಲೈಟ್ ಕಥೆ ಏನಾಗುತ್ತದೋ ಎಂಬ ಆತಂಕ ಮಡುಗಟ್ಟಿತ್ತು. ಒಂದೇ ಉಸಿರಿಗೆ ಏರ್‌ಪೋರ್ಟ್ ತಲುಪಿ ಅಲ್ಲಿಂದ ಫ್ಲೈಟ್ ಹತ್ತಿ ನೆಮ್ಮದಿಯ ಉಸಿರು ಬಿಡುತ್ತಾ ಕುಳಿತೆ. ಬೆಂಗಳೂರಿಗೆ ಬಂದಿಳಿದು, ಮಾಮೂಲಾಗಿ ಫ್ಲೈಬಸ್ ಹತ್ತಿ ಸ್ವಸ್ಥಾನಕ್ಕೆ ಮರಳಿದೆ.

‍ಲೇಖಕರು avadhi

May 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: