ಮಾಲತಿ ಗೋರೆಬೈಲ್
ತಾವಿನಲ್ಲಿ
ನೋವ ಬಚ್ಚಿಟ್ಟು
ಹೆರಳ ಮುಡಿಯೊಳಗೆ
ಆಸೆಗಳ ಕಟ್ಟಿಟ್ಟು
ನಗುವ ಚೆಲ್ಲುವ ಅವಳು
ಒಲವ ಸುಗಂಧಿ…
ಸಖನ ಸುಖದಿ ರಮಿಸಿ
ಬಾನ ರಂಗಿನಾಟವ ಮೆರೆಸಿ
ನೆಲವ ತೋಯಿಸಿ
ಕಸುವು ಊಡುವ ಅವಳು
ನಿತ್ಯ ಪ್ರೇಮಬಂಧಿ..

ಪ್ರೀತಿಯ ಸಿಕ್ಕುಗಳ
ಜತನದಲೆ ಬಿಡಿಸಿ
ಹಣೆಯ ಸಿಂಗರಕೆ ಮುತ್ತು ಪೋಣಿಸಿ
ಮೋಹ ಬಲೆಯ ತ್ಯಜಿಸಿ
ಉಸಿರ ನೀಡುವ ಅವಳು
ಕರುಣೆ ವೀಣೆಯ ತಂತಿ..
ಯಶದ ಏಣಿಗೆ ಕಾಲು ಕೊಟ್ಟು
ನಿಶ್ಚಲ ನೇರ ದೃಷ್ಟಿಯಿಟ್ಟು
ಒಳಗೊಳಗೇ ಪ್ರೀತಿಯಿಂದ
ಮುದ್ದಿಸಿ, ಹನಿಗರೆವ ಅವಳು
ಮಹಾಕಾವ್ಯ ಸಂಗಾತಿ..
ದೇಹ ಭಾಷೆಯ ಮರೆತು
ಪ್ರೇಮ ಸುಧೆಯಲಿ ಮಿಂದು
ಬಯಕೆ ಮಾಲೆಯ ಬಿಚ್ಚಿ
ಎದೆಯ ಒಡವೆಯ ತೆರೆದು
ಸತ್ವವಾಗುವ ಅವಳು
ದೂರ ಪಯಣದ ಲಯ,ಗತಿ..
ಸತ್ಯ ಬೆಳಗುವ ಪ್ರಣತಿ…






0 Comments