ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಿಳೆಯನ್ನು ನಾವು ನೋಡುವ ರೀತಿ ನಮ್ಮ ಸಾಮಾಜಿಕ ಮೌಲ್ಯಗಳನ್ನು ನಿರ್ಧರಿಸುತ್ತದೆ..

ಏನೆಂದು ಬರೆಯಲಿ ಏನೆಂದು ಹೇಳಲಿ ?

ದೆಹಲಿಯಲ್ಲಿ ನಡೆದ ಘಟನೆ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ. ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ. ದೆಹಲಿಯಲ್ಲಿ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ನಾನು ಬರೆದ ಲೇಖನದ ಕೆಲವು ಸಾಲುಗಳಿವು. ಈ ವಾಕ್ಯಗಳನ್ನು ಬರೆಯುವಾಗ ನಾನೂ ಈ ಮನುಕುಲದ ಒಂದು ಭಾಗವಾಗಿದ್ದೇನೆ, ಎಲ್ಲೋ ಒಂದು ಕಡೆ ಇಂತಹ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಿದ್ದೇನೆ, ಪ್ರತಿಭಟನೆ ಮಾಡದಿರುವ ಮೂಲಕ, ಮೌನ ವಹಿಸುವ ಮೂಲಕ, ತಟಸ್ಥ ನಿಲುವು ತಾಳುವ ಮೂಲಕ ಅಥವಾ ಸಾಮಾನ್ಯ ಘಟನೆ ಎಂದು ಪರಿಗಣಿಸುವ ಮೂಲಕ ಇಂತಹ ಕ್ರೌರ್ಯಗಳನ್ನು ಕಂಡೂ ಕಾಣದಂತೆ ಇದ್ದೇನೆ ಎಂಬ ಅಳುಕು ಮನಸ್ಸಿನಲ್ಲಿ ಕಾಡುತ್ತಿತ್ತು. ಹೌದಲ್ಲವೇ ? ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿನ ಪುರುಷ ಮಹಾಶಯರಿಂದ ಅತ್ಯಾಚಾರ ಹಲ್ಲೆಗೊಳಗಾಗಿ ಪರದೇಶಿಯಾಗಿ ಸಾಯುವ ಮಹಿಳೆಯ ಮೃತ ದೇಹವನ್ನು ಟಿವಿ ಪರದೆಯ ಮೇಲೆ ನೋಡುವಾಗ ಇನ್ನೆಂತಹ ಭಾವನೆ ಮೂಡಲು ಸಾಧ್ಯ ? ಪದೇ ಪದೇ ನಮ್ಮನ್ನು ನಾಗರಿಕ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ನಮ್ಮ ಅಂತರಾಳದ ಆತ್ಮವನ್ನು ತಟ್ಟಿ ಕೇಳೋಣವೇ ಎಂದು ಈಗ ಅನಿಸುತ್ತಿದೆ.

ದೆಹಲಿಯ ಯುವತಿ ತನ್ನ ಇಹಲೋಕದ ಯಾತ್ರೆ ಮುಗಿಸಿದ್ದಾಳೆ. ಆದರೆ ಆಕೆಯ ಧೈರ್ಯ, ಬದುಕುವ ಛಲ ಇನ್ನೂ ಜೀವಂತವಾಗಿದೆ. ಇದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ಮೇಣದ ಬತ್ತಿಗಳಿಂದ ಕಾಣುವ ಸಂಗತಿಯಲ್ಲ. ಭಾರತದ ಪ್ರತಿಯೊಬ್ಬ ಮಹಿಳೆಯ ಮನಸ್ಸಿನಲ್ಲೂ ಅಗೋಚರ ಮೇಣದ ಬತ್ತಿಗಳು ಇಂದು ಹೊತ್ತಿರುತ್ತವೆ. ಉದರದೊಳಗಿನ ಕಿಚ್ಚು ಸಾಕು ಬತ್ತಿಯನ್ನು ಹೊತ್ತಿಸಲು. ಅಲ್ಲವೇ ? ಯುವತಿಯ ಅಕಾಲಿಕ ಮರಣಕ್ಕೆ ಯಾರನ್ನು ದೂಷಿಸುವುದು ? ನಮ್ಮ ರಾಜಕಾರಣಿಗಳಿಗೆ ತಮಗೇ ಅರಿವಿಲ್ಲದೆ ಹೆಣ್ಣು ಮಕ್ಕಳನ್ನು ಹೆತ್ತಿರುವುದೇ ಒಂದು ಹಿರಿಮೆ. ಹಾಗಾಗಿ ಹೆಣ್ಣುಮಕ್ಕಳ ತಂದೆಯರಾಗಿ ಅವರಿಗೆ ಭಾರತೀಯ ಮಹಿಳೆಯರ ನೋವು ಶೀಘ್ರವಾಗಿ ತಟ್ಟುತ್ತದೆ, ಅರಿವಾಗುತ್ತದೆ. ಇನ್ನು ಕೆಲವರಿಗೆ ಪ್ರತಿಭಟನಾ ನಿರತ ಯುವತಿಯರ ಮೈಮಾಟ, ಅಲಂಕಾರ, ಉಡುಪುಗಳು ಪ್ರಧಾನವಾಗಿ ಕಾಣುತ್ತವೆ. ಪಾಪ ಈ ಯುವತಿಯರ ಭಾವನೆಗಳನ್ನು ಅರಿಯುವ ಸಂವೇದನೆ ಇರಬೇಕಲ್ಲವೇ ? ಈ ಸಂವೇದನೆಯನ್ನು ರೂಪಿಸಲಾಗುವುದಿಲ್ಲ. ಇದು ಸಮಾಜದ ಆಂತರ್ಯದಿಂದ ಸೃಷ್ಟಿಯಾಗಬೇಕು.

ಖ್ಯಾತ ಬಂಗಾಲಿ ಲೇಖಕ ಶರತ್ ಚಂದ್ರ ಚಟರ್ಜಿ ತಮ್ಮ ಕೃತಿಯೊಂದರಲ್ಲಿ ಹೀಗೆ ಹೇಳುತ್ತಾರೆ ಓ ಭಾರತೀಯ ಮಹಿಳೆಯರೇ ನೀವು ಪೂರ್ವ ಜನ್ಮದಲ್ಲಿ ಏನು ಕರ್ಮ ಮಾಡಿ ಈ ದೇಶದಲ್ಲಿ ಮಹಿಳೆಯರಾಗಿ ಜನಿಸಿದ್ದೀರಿ, ಇಲ್ಲಿ ಪುರುಷರಿಗೆ ಸಂವೇದನೆಯೇ ಇಲ್ಲ . ಎಷ್ಟು ಸತ್ಯ. 150 ವರ್ಷಗಳ ಹಿಂದೆ ದಾರ್ಶನಿಕರು ಹೇಳಿದ ಮಾತನ್ನ ಇಂದಿಗೂ ಸತ್ಯ ಎಂದು ಸಾಕ್ಷಾತ್ಕರಿಸುತ್ತಿರುವ ಭಾರತದ ಪುರುಷ ಸಮಾಜಕ್ಕೆ ಆತ್ಮಗೌರವ ಇದ್ದರೆ ಈ ಘಟನೆ ಅದನ್ನು ಜಾಗೃತಗೊಳಿಸಬೇಕು.

ಹಳಿ ಹಳಿದು ಸಾಕಾಗಿ ಹೋಗಿದೆ. ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿಲ್ಲ, ರಾಜಕಾರಣಿಗಳಿಗೆ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ, ಸರ್ಕಾರಗಳಿಗೆ ಮಹಿಳೆಯರು ಮತಬ್ಯಾಂಕಿನ ಒಂದು ಘಟಕದಂತೆ, ಸಾರ್ವಜನಿಕರಿಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಸರ್ವೇಸಾಮಾನ್ಯ ಸಂಗತಿ, ಸಂಪ್ರದಾಯವಾದಿಗಳಿಗೆ ಆಧುನಿಕತೆಯೇ ಅಪರಾಧಿ, ಅತ್ಯಾಚಾರಿಗಳಲ್ಲ. ಮೂಲಭೂತವಾದಿಗಳಿಗೆ ಸದಾ ಪ್ರಚೋದನೆ, ಪ್ರಚೋದನಕಾರಿ ಉಡುಪುಗಳ ಚಿಂತೆ. ಮೈ ಮುಚ್ಚುವಂತೆ ಬಟ್ಟೆ ಧರಿಸಿದರೆ ಅತ್ಯಾಚಾರ ನಡೆಯುವುದಿಲ್ಲ ಎಂಬ ಭ್ರಮೆ. ಮಾಧ್ಯಮಗಳಿಗೆ ಇಂತಹ ಘಟನೆಗಳು ಮಾರುಕಟ್ಟೆ ವೃದ್ಧಿಯ ಅಸ್ತ್ರಗಳು. ನ್ಯಾಯಾಂಗಕ್ಕೆ ಯಾವುದೇ ಘಟನೆಯಾದರೂ ನ್ಯಾಯಬದ್ಧವಾಗಿ ವಿಚಾರಣೆಗೊಳಪಟ್ಟು ಸಾಕ್ಷ್ಯಾಧಾರಗಳನ್ನಾಧರಿಸಿ ನ್ಯಾಯ ವಿತರಿಸುವ ಕರ್ತವ್ಯ ಪ್ರಜ್ಞೆ. ಇಂತಹ ಪರಿಸ್ಥಿತಿಯಲ್ಲಿ ಹಳಿಯುವುದು ಯಾರನ್ನು ?

ಈ ಪ್ರಶ್ನೆ ಮೃತಪಟ್ಟ ಯುವತಿಯ ಮನದಲ್ಲೂ ಮೂಡಿರಬಹುದು. ಹಲವರಿಗೆ ಗಲ್ಲು ಶಿಕ್ಷೆ ನೀಡುವುದರಿಂದ, ನಪುಂಸಕರನ್ನಾಗಿ ಮಾಡುವುದರಿಂದ, ಉಗ್ರ ಶಿಕ್ಷೆ ವಿಧಿಸುವುದರಿಂದ ಮೃತಳ ಆತ್ಮಕ್ಕೆ ಶಾಂತಿ ದೊರೆಯಬಹುದು. ಆದರೆ ಆತ್ಮಸಾಕ್ಷಿಯೇ ಇಲ್ಲದ ಸಮಾಜವನ್ನು ಸುಧಾರಿಸಬಲ್ಲದೇ ? ಪ್ರತಿ ಬಾರಿ ಇಂತಹ ಘಟನೆ ಸಂಭವಿಸಿದಾಗಲೂ ಈ ಪ್ರಶ್ನೆ ಉದ್ಭವಿಸುತ್ತದೆ. ಪೊಲೀಸ್ ಪಹರೆ ಬಿಗಿಯಾಗಿದ್ದರೆ ಇಂತಹ ಅಮಾನವೀಯ ಘಟನೆಗಳು ಸಂಭವಿಸುವುದಿಲ್ಲ ಎಂದು ಭಾವಿಸಲಾಗುತ್ತಿದೆ. ಆದರೆ ಲಾಕಪ್ನಲ್ಲಿ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯರನ್ನು ಕೇಳಿನೋಡಿ ? ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಅನೈತಿಕತೆ ಕಡಿಮೆಯಾಗುತ್ತದೆ. ನಿಜ. ಆದರೆ ಕಾಲೇಜಿನ ಕೊಠಡಿಗಳಲ್ಲಿ ಸಂಭವಿಸುವ ಅತ್ಯಾಚಾರಗಳಿಗೆ ಏನೆಂದು ಹೇಳೋಣ ? ಕೋಮು ಗಲಭೆಗಳಲ್ಲಿ ಪರಸ್ಪರ ಸಾಮುದಾಯಿಕ ದ್ವೇಷಕ್ಕೆ ಬಲಿಯಾಗುವ ಸಾವಿರಾರು ಮಹಿಳೆಯರಿಗೆ ಈವರೆಗೂ ನ್ಯಾಯ ದೊರೆತಿಲ್ಲವಲ್ಲಾ ? ಯಾರು ಹೊಣೆ. ಅದೊಂದು ಕಹಿ ಘಟನೆ ಮರೆತು ಬಿಡಿ, ಈಗ ಅಪ್ಪಿಕೊಳ್ಳಿ ನಾನು ನಿಮ್ಮೊಡನಿದ್ದೇನೆ ಎಂದು ಉಪನ್ಯಾಸ ನೀಡುವ ನೇತಾರರು ಇಂತಹ ನೂರಾರು ಅತ್ಯಾಚಾರಗಳನ್ನು ಕಂಡೂ ಕಾಣದಂತೆ ಇದ್ದಾಗ ಯಾವ ಮೇಣದ ಬತ್ತಿಯೂ ಉರಿಯಲಿಲ್ಲವೇಕೆ ? ಅಲ್ಲಿ ಅತ್ಯಾಚಾರಕ್ಕೊಳಗಾದವರು ಅನ್ಯ ಧರ್ಮೀಯರೆಂದೇ ಅಥವಾ ನಿಮ್ನ ವರ್ಗದವರೆಂದೇ ಅಥವಾ ಅತ್ಯಾಚಾರಕ್ಕೆ ಒಳಗಾಗಲು ಅರ್ಹರೆಂದೇ ? ಇನ್ನೂ ಏನೇನೋ ಪ್ರಶ್ನೆಗಳು ಉದ್ಭವಿಸುತ್ತಿವೆ.

ಮಹಿಳೆಯನ್ನು ನಾವು ನೋಡುವ ರೀತಿ, ಮಹಿಳೆಯ ದೇಹವನ್ನು ಪರಿಭಾವಿಸುವ ರೀತಿ ನಮ್ಮ ಸಾಮಾಜಿಕ ಮೌಲ್ಯಗಳನ್ನು ನಿರ್ಧರಿಸುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ಸಂಸ್ಕೃತಿಯನ್ನು ನಿರ್ಧರಿಸಲು ಒಂದು ಮಾನದಂಡವನ್ನು ಅನುಸರಿಸಬಹುದು. ಒಬ್ಬ ಅಪರಿಚಿತ ಪುರುಷ ಮತ್ತು ಮಹಿಳೆ ಒಟ್ಟಾಗಿ ಹೋಗುತ್ತಿರುವಾಗ ನಮ್ಮ ಮನದಲ್ಲಿ ಎಂತಹ ಭಾವನೆ ಮೂಡುತ್ತದೆ ಎನ್ನುವುದರ ಮೇಲೆ ನಮ್ಮ ಸಾಂಸ್ಕೃತಿಕ ನೆಲೆಗಟ್ಟು ನಿರ್ಧಾರವಾಗುತ್ತದೆ. ಅದೇ ರೀತಿ ಓರ್ವ ಮಹಿಳೆಯನ್ನು ಒಬ್ಬಂಟಿಯಾಗಿ ನೋಡಿದಾಗ ಮೂಡುವ ಭಾವನೆಗಳೂ ನಮ್ಮ ಧೋರಣೆಗಳನ್ನು ನಿರ್ಧರಿಸುತ್ತದೆ. ಮಧ್ಯರಾತ್ರಿಯಲ್ಲಿ ಮುಕ್ತವಾಗಿ ನಡೆದಾಡುವ ಮಹಿಳೆಯ ಬಗ್ಗೆ ಮಹಾತ್ಮಾಗಾಂಧಿಯ ಹೇಳಿಕೆಯನ್ನು ಸದಾ ಪಠಿಸುತ್ತೇವೆ. ಆದರೆ ನಮ್ಮ ಹೆಣ್ಣುಮಕ್ಕಳನ್ನು ಮುಕ್ತವಾಗಿ ಕಳುಹಿಸಲು ಅಂಜುತ್ತೇವೆ ಅಥವಾ ಹಿಂಜರಿಯುತ್ತೇವೆ. ಎರಡೂ ಸಾಮಾಜಿಕ ಪರಿಸರದ ಪ್ರಭಾವವೇ ಎಂದು ಹೇಳಬೇಕಿಲ್ಲ. ಈ ಅಂಜಿಕೆ, ಹಿಂಜರಿಕೆ ಏಕೆ ? ಇದು ಎಲ್ಲರನ್ನು ಕಾಡಬೇಕಾದ ಪ್ರಶ್ನೆ.

ಈ ಪ್ರಶ್ನೆಗಳಿಗೆಲ್ಲಾ ಉತ್ತರ ಅಡಗಿರುವುದು ಮನುಕುಲದ ಇತಿಹಾಸದಲ್ಲಿ ಮತ್ತು ಭಾರತೀಯ ಸಂಸ್ಕೃತಿಯಲ್ಲಿ. ಪುರಾಣಗಳಲ್ಲಿ ಉಲ್ಲೇಖವಾಗುವ ಉನ್ನತ ಆದರ್ಶದ ಮಹಿಳೆಯರ ಚಿತ್ರಣ ನಮ್ಮ ಧೋರಣೆಯನ್ನು ಬದಲಿಸುವುದಿಲ್ಲ. ಅಥವಾ ಪುರಾಣಗಳಲ್ಲಿ ವ್ಯಕ್ತವಾಗುವ ಮಹಿಳಾ ವಿರೋಧಿ ಘಟನೆಗಳ ಚಿತ್ರಣ ನಮ್ಮನ್ನು ಜಾಗೃತಗೊಳಿಸುವುದಿಲ್ಲ. ವಾಸ್ತವ ಜಗತ್ತಿನಲ್ಲಿ ಜೀವಿಸೋಣ. ಇಲ್ಲಿ ನಮ್ಮೆಲ್ಲರನ್ನು ನಿಯಂತ್ರಿಸುತ್ತಿರುವುದು ಆಧುನಿಕತೆಯನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡೇ ಸಮಾಜವನ್ನು ನಿಯಂತ್ರಿಸುತ್ತಿರುವ ನವ ಉದಾರವಾದದ ಧೋರಣೆ. ಸಾಂಪ್ರದಾಯಿಕವಾಗಿ ಪುರುಷ ಸಮಾಜದ ಸ್ವತ್ತು ಎಂದೇ ಪರಿಗಣಿಸಲಾಗುವ ಮಹಿಳೆಯನ್ನು ನವ ಉದಾರವಾದ ಕೇವಲ ಭೋಗದ ವಸ್ತುವನ್ನಾಗಿ ಪರಿಗಣಿಸುತ್ತಿಲ್ಲ, ಗ್ರಾಹಕ ವಸ್ತುವನ್ನಾಗಿ ಪರಿಗಣಿಸುತ್ತಿದೆ. ಈ ಗ್ರಾಹಕ ಸಂಸ್ಕೃತಿಯನ್ನು ಪೋಷಿಸುವ ಕಾರ್ಪೊರೇಟ್ ನಿಯಂತ್ರಿತ ಮಾಧ್ಯಮಗಳೇ ಇಂದು ಮೇಣದ ಬತ್ತಿ ಮೆರವಣಿಗೆಯನ್ನು ವೈಭವೀಕರಿಸುತ್ತಾ ತಮ್ಮ ಮಹಿಳಾ ಪರ ಸಂವೇದನೆಯನ್ನು ಪ್ರದರ್ಶಿಸುತ್ತಿವೆ. ಇದನ್ನು ಹಿಪೋಕ್ರಸಿ ಅಥವಾ ಠಕ್ಕುತನ ಎನ್ನಬಹುದಲ್ಲವೇ ?

ಮಹಿಳೆಯರ ಸಂರಕ್ಷಣೆ ಕಾನೂನು, ನ್ಯಾಯಾಲಯ, ಪೊಲೀಸ್, ರಾಜಕಾರಣ ಮತ್ತು ಸಂಸತ್ತಿನಲ್ಲಿ ಅಂಗೀಕೃತವಾಗುವ ಮಹಿಳಾ ಸಂರಕ್ಷಣಾ ಕಾಯ್ದೆಗಳಿಂದ ಸಾಧ್ಯವೇ ಎಂಬ ಪ್ರಶ್ನೆ ಎದುರಾದಾಗ ಈ ದೇಶದ ಪ್ರಜ್ಞೆ ಸ್ತಬ್ಧವಾಗುತ್ತದೆ. ಏಕೆಂದರೆ ಗಾಂಧೀಜಿಯ ಹೇಳಿಕೆಗೆ ಏಳು ದಶಕಗಳು ತುಂಬಿವೆ. ಭಾರತ ದೇಶ ಆರು ದಶಕಗಳ ಸ್ವತಂತ್ರ ಜೀವನ ಪೂರೈಸಿದೆ. ಈವರೆಗೂ ಇದು ಸಾಧ್ಯವಾಗಿಲ್ಲ. ಹೆಣ್ಣು ಮಕ್ಕಳಿರುವ ಸಂಸದರು ನಮ್ಮನ್ನು ಆಳುತ್ತಿದ್ದಾರೆ ಎಂಬ ಭ್ರಮೆಯಿಂದಲೇ ಈ ದೇಶದ ಮಹಿಳೆಯರು ಸಂತೃಪ್ತರಾಗಬೇಕಿದೆ. ದೆಹಲಿ ಘಟನೆಯ ಆರೋಪಿಗಳನ್ನು ಗಲ್ಲಿಗೇರಿಸಿ ಅಭ್ಯಂತರವಿಲ್ಲ (ವ್ಯಕ್ತಿಗತ ವಿರೋಧದ ಹೊರತಾಗಿಯೂ), ಆದರೆ ಪಂಜಾಬ್ನ ಬೆಂಕಿಯಲ್ಲಿ, ಕಾಶ್ಮೀರದ ಹಿಮಗಡ್ಡೆಗಳಲ್ಲಿ, ಆಂಧ್ರ-ಛತ್ತಿಸ್ಘಡ-ಝಾರ್ಖಂಡಿನ ಅರಣ್ಯಗಳಲ್ಲಿ, ಒರಿಸ್ಸಾದ ಬೆಟ್ಟ ಗುಡ್ಡಗಳಲ್ಲಿ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ, ಕೋಮು ಗಲಭೆಗಳಲ್ಲಿ, ಮಣಿಪುರದ ಅಗೋಚರ ರಸ್ತೆಗಳಲ್ಲಿ ಮಹಿಳೆಯರನ್ನು ತಮ್ಮ ತೃಷೆ ತೀರಿಸುವ ಅಸ್ತ್ರಗಳನ್ನಾಗಿ ಬಳಸಿ ಬಿಸಾಡಿರುವ ಪುರುಷ ಸಮುದಾಯವನ್ನು ಏನು ಮಾಡಬೇಕು ? ಇವರ ಪೈಕಿ ಸೈನಿಕರೂ ಇದ್ದಾರಲ್ಲಾ ? ಪೊಲೀಸರೂ ಇದ್ದಾರಲ್ಲಾ? ರಾಜಕಾರಣಿಗಳೂ ಇದ್ದಾರಲ್ಲಾ ? ಸಮಾಜದ ಗಣ್ಯರೂ ಇದ್ದಾರಲ್ಲಾ ? ಎಷ್ಟು ಕುಣಿಕೆಗಳು ಬೇಕು. ಲೆಕ್ಕ ಹಾಕೋಣವೇ ? ಆತ್ಮಶಾಂತಿಗಾಗಿ ಅಲ್ಲ, ಆತ್ಮ ತೃಪ್ತಿಗಾಗಿಯೂ ಅಲ್ಲ, ಸುಧಾರಣೆಯ ಬೆಳಕಿನ ಕಿಂಡಿಯನ್ನು ಅರಸುವ ಒಂದು ಭರವಸೆಯ ಕೊಂಡಿಗಾಗಿ.

‍ಲೇಖಕರು G

30 December, 2012

5 Comments

  1. Mohan V Kollegal

    ಒಳ್ಳೆಯ ಲೇಖನ ಸರ್… ಯೋಚಿಸಬೇಕಾದ ವಿಚಾರಗಳು… ವಂದನೆಗಳು…

  2. Purnachandra

    ಸಮಾಜದ ಮೌಲ್ಯಗಳು, ಹೆಣ್ಣನ್ನು ನೋಡುವ ಬಗೆ ಬದಲಾಗಬೇಕೆಂಬ ಕಳಕಳಿ ಕುರಿತು ಎರಡು ಮಾತಿಲ್ಲ. ಅದು ಸಾರ್ವತ್ರಿಕ ಸತ್ಯ. ಆದರೆ, ಇದೊಂದರಿಂಲೇ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದೇನಿಲ್ಲ. ಸಮಾಜವೊಂದು ಕಾನೂನು, ಕಟ್ಟಳೆಗಳ ಮೂಲಕವೂ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ನಿಜ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾದರೆ ಅಥವಾ ಆತನನ್ನು ನಿರ್ವೀಯನನ್ನಾಗಿ ಮಾಡಿದರೆ ಅತ್ಯಾಚಾರದ ಸಂಖ್ಯೆ ಕಡಿಮೆಯಾಗುವುದಿಲ್ಲ. ಅಂತೆಯೇ ಈ ಯಾವ ಶಿಕ್ಷೆಗಳು ಇರದಿದ್ದರೂ, ಅತ್ಯಾಚಾರ ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ ಎಂದೇನೂ ಇಲ್ಲ. ಆದರೆ ಇಂಥಾ ಕ್ರಮಗಳು ಸಮಾಜದಲ್ಲಿ ಒಂದಿಷ್ಟು ಭಯ ಮೂಡಿಸುವುದು ಹಾಗೂ ಸಂತ್ರಸ್ತ ಕುಟುಂಬಗಳಲ್ಲಿ ಒಂದಿಷ್ಟು ಧೈರ್ಯ ತರುವುದು ಸುಳ್ಳೇನೂ ಅಲ್ಲ. ಹಾಗಾಗಿ, ಇಂಥಾ ಘಟನೆಗಳು ನಡೆದಾಗ, ಪ್ರತಿಭಟನೆಗೆ ಇಳಿದ ಜನರ ವಿರುದ್ಧ(ಅವರು ದಿಲ್ಲಿಯುವರು, ಮಧ್ಯಮ ವರ್ಗದವರು, ದಿಲ್ಲಿಯಲ್ಲಿ ಆದರೆ ಮಾತ್ರ ಪ್ರತಿಭಟಿಸುವವರು) ಹಾಗೂ ಅವರು ಭಾವೋದ್ವೇಗಕ್ಕೆ ಒಳಗಾಗಿ ಮೊಳಗಿಸುವ ಘೋಷಣೆಗಳನ್ನು ಮುಂದಿಟ್ಟುಕೊಂಡು, ಆ ಎಲ್ಲರೂ ದಡ್ಡರು ಎಂದು ಉದ್ದುದ್ದ ಬರೆಯುವುದು ಕೂಡ ಸರಿಯಾದ ಕ್ರಮವಲ್ಲ.
    ಎಲ್ಲ ಸಮಸ್ಯೆಗಳನ್ನು ಫಿಲಾಸಫಿಕಲ್ ಆಗಿ ನೋಡುವುದು ಕೂಡ ಒಂದು ರೀತಿಯ ಫ್ಯಾಷನ್ ಹಾಗೂ ನಾನು ಇತರರಿಗಿಂತ ಭಿನ್ನ ಎಂಬ ಪ್ರತಿಷ್ಠೆಯ ದ್ಯೋತಕವೇನೋ. ವಿಚಾರಕ್ಕಿಂತ ಬದುಕು ದೊಡ್ಡದು, ರಚನಾತ್ಮಕ ಕ್ರಿಯೆ ಇನ್ನೂ ದೊಡ್ಡದು.
    – ಪೂರ್ಣಚಂದ್ರ ಮೈಸೂರು

    • ದಿವಾಕರ ನಾ

      ಮಾನ್ಯ ಪೂರ್ಣಚಂದ್ರ ,
      ಇಲ್ಲಿ ನಾನು ದೆಹಲಿಯ ಪ್ರತಿಭಟನಾಕಾರರನ್ನು ಖಂಡಿಸಿಲ್ಲ. ಅಥವಾ ದಡ್ಡರು ಎಂದೂ ಪರಿಭಾವಿಸಿಲ್ಲ. ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಪರಿಣಾಮ ವ್ಯಾಪಕವಾಗಿದೆ ನಿಜ. ನನ್ನ ಬರವಣಿಗೆ ಭಿನ್ನವಾಗಿ ಕಂಡರೆ ಅದು ನನ್ನ ಸೈದ್ಧಾಂತಿಕ ನೆಲೆಗಟ್ಟಿನ ಪ್ರಭಾವವಷ್ಟೆ. ಪ್ರತಿಷ್ಠೆಯ ದ್ಯೊತಕವಲ್ಲ. ಅಥವಾ ಪ್ರತಿಷ್ಠೆಗಾಗಿ ಹೀಗೆಯೇ ಬರೆಯಬೇಕೆಂದು ಬರೆದದ್ದಲ್ಲ. ನಿಜ ಹೇಳಬೇಕೆಂದರೆ ನಿನ್ನೆ ಕಚೇರಿಯಿಂದ 9 ಗಂಟೆಗೆ ಬಂದು ಒಂದು ತಾಸಿನ ವೇಳೆಯಲ್ಲಿ ಬರೆದ ಲೇಖನ ಇದು. ಯುವತಿಯ ಮೃತ್ಯುವಿನಿಂದ ನೊಂದು ಮನದಾಳದಿಂದ ಹೊರಬಂದ ಲೇಖನ ಇದು. ನಿಜ. ದೆಹಲಿಯ ಘಟನೆಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ದೇಶದ ಇತರೆಡೆಗಳಲ್ಲಿ ದಿನನಿತ್ಯ ಇಂತಹ ಸಾವಿರಾರು ಘಟನೆಗಳು ಸಂಭವಿಸುತ್ತಿರುತ್ತವೆ. ಆದರೆ ನಮ್ಮ ಪ್ರಚಾರ ಪ್ರಿಯ, ಟಿಆರ್ ಪಿ ಪ್ರೇರಿತ ಮಾಧ್ಯಮಗಳಿಗೆ ಇದು ಸುದ್ದಿಯಾಗುವುದಿಲ್ಲವೇಕೆ ? ಅಥವಾ ಯುವತಿಯ ಮೇಲಿನ ಅತ್ಯಾಚಾರವನ್ನು ಪ್ರತಿಭಟಿಸುತ್ತಿರುವ ಕೆಲವು ಸಂಘಟನೆಗಳು, ವಿಶೇಷವಾಗಿ ಎಬಿವಿಪಿ,ಬಿಜೆಪಿ ಮಂಗಳೂರಿನ ಹೋಂ ಸ್ಟೇ ಮತ್ತು ಪಬ್ ಪ್ರಕರಣಗಳ ಸಂದರ್ಭದಲ್ಲಿ ಅತ್ಯಾಚಾರಿಗಳ ಪರ ನಿಲುವು ತಾಳಿದ್ದೇಕೆ ? ನನ್ನ ಪ್ರಶ್ನೆ ಇಷ್ಟೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷಯೇ ಸರಿ ಎಂದಾದರೆ ಈ ದೇಶದಲ್ಲಿ ಯಾರು ಯಾರನ್ನು ಗಲ್ಲಿಗೇರಿಸುತ್ತೀರಿ. ಅತ್ಯಾಚಾರ ಮಾಡಿದನವಷ್ಟೇ ಅಪರಾಧ ಪ್ರೇರೇಪಿಸಿದವನ, ಪ್ರಚೋದಿಸವನೂ ಹೊಣೆಗಾರನಾಗಿರುತ್ತಾನೆ. ಇದು ನನ್ನ ಲೇಖನದ ಕೊನೆಯ ಪ್ಯಾರಾದಲ್ಲಿ ಸ್ಪಷ್ಟವಾಗಿದೆ. ಉತ್ತರ ಎಲ್ಲಿ ಹುಡುಕುವಿರಿ ? ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸದ ಹೊರತು ಕಾನೂನು ಕ್ರಮಗಳು ಫಲಕಾರಿಯಾಗುವುದಿಲ್ಲ. ಇದು ಐತಿಹಾಸಿಕ ಸತ್ಯ. ಅಲ್ಲವೇ ?

      ನಾ ದಿವಾಕರ

  3. Rehana sulthana

    sir… nive bareda lekana nijvaglu thumba chennagide nanu hemmepaduthene nimma baravanigeya bagge…but ondu mathu sir aparadiyannu gallugerisuvudu jeevavadi shikshe koduvudu alla sari sir aadre idrinda bereyavaru pata kalithare antha heluvudu sudda sullu….intha gatanegalu punaravathisthane iruthade idakkela kone anthane iruthade antha anisudilla …but onde mathu gandasre thammanna badalaiskoll beku innondu namma desadalliro Amalupadarthagalige break haka beku aavaga mathra namma desa Gandiji helida rama rajya aagoke sadya….

  4. thimmappa vk kadaba

    bahala arthapurna lekhana…………prastutha samajakke hidida kaigannadi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading