ಮಹಾಂತೇಶ ಪಾಟೀಲ ಕಂಡಂತೆ ‘ಕಣ್ಣಂಚಿನ ಕಿಟಕಿ’

ಮಹಾಂತೇಶ ಪಾಟೀಲ

ಜಾಕೋಸ್ ಡೆರಿಡಾ: ವಿಮರ್ಶೆಯೆಂದರೆ ಪಠ್ಯದ ಅರ್ಥವನ್ನು ನಿರಂತರವಾಗಿ ಮುಂದೂಡುವುದು.
ಎಫ್.ಆರ್ ಲೀವಿಸ್: ವಿಮರ್ಶೆ ಎನ್ನುವುದು ಕೃತಿಯ ನಿಕಟ ಓದುವಿಕೆಯಾಗಿದೆ.

ಚುನಾವಣೆಯ ಕಹಳೆಯನ್ನು ‘ಕರ್ನಾಟಕ ಕುರುಕ್ಷೇತ್ರ’ಕ್ಕೆ ಹೋಲಿಸುವ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳ ಪ್ರಣಾಳಿಕೆಯು ಜಾಹೀರಾತು ರೂಪದಲ್ಲಿ ಸಮೂಹ ಮಾಧ್ಯಮಗಳಲ್ಲಿ ದಾಳಿಯಿಡುತ್ತಿರುವ ವರ್ತಮಾನವಿದು. ಒಟ್ಟಿನಲ್ಲಿ ರಾಜಕೀಯ ವಿಮರ್ಶೆಯನ್ನು ವಿಸ್ಮೃತಿಗೆ ತಳ್ಳಿ, ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವ ಕೂಗುಮಾರಿ ಭಾಷಣಕಾರರು ಮುಂಗಾರು ಮಳೆಗೆ ಮೊದಲೇ ನಾಯಿಕೊಡೆಗಳಂತೆ ತಲೆಯೆತ್ತಿದ್ದಾರೆ. ಹಾಗೆ ನೋಡಿದರೆ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರಲ್ಲಿ ಕನ್ನಡಿಗರು ಮತ್ತು ಕನ್ನಡವೇ ಇಲ್ಲ. ಇರುವುದೆಲ್ಲಾ ಬಂಡವಾಳಶಾಹಿ ಹೂಡಿಕೆ, ನವಪುರೋಹಿತಶಾಹಿಗಳ ಹುಚ್ಚಾಟ ಮತ್ತು ಜಾತಿವಂತರ ಅಧಿಕಾರದ ತೇವಲುಗಳು; ಇಂತಹ ಸಂದಿಗ್ಧತೆಯಲ್ಲಿ ಸಾಮಾಜಿಕ ವಿಮರ್ಶೆಯು ನೇಪಥ್ಯಕ್ಕೆ ಸರದಿರುವಾಗ ಸಾಹಿತ್ಯ ವಿಮರ್ಶೆ ಮುಂಚೂಣಿಯಲ್ಲಿದೆ ಎನ್ನುವುದು ಅಸಮರ್ಪಕ ಮಾತಾದೀತು. ಸೃಜನಶೀಲ ಬರಹಗಾರರ ಸಂತೆಯಲ್ಲಿ ಸಂಶೋಧಕ, ವಿಮರ್ಶಕರಂತಹ ಸಂತರು ಸಿಗುವುದು ಅಪರೂಪವೆನ್ನುವಂತಾಗಿದೆ. ಅಂತಹದರಲ್ಲಿ ಕಣ್ಣಂಚಿನ ಕಿಟಕಿಯ ವಿನಯ ನಂದಿಹಾಳ ವಿಮರ್ಶಾ ಸಂತನಾಗುವ ಭರವಸೆಯನ್ನು ಮೊದಲ ಸಂಕಲನದಲ್ಲಿ ಮೂಡಿಸಿದ್ದಾರೆ.

ಭಾಷೆಯೊಂದರ ಸಾಹಿತ್ಯ ಮೌಲ್ಯಮಾಪನದಲ್ಲಿ ವಿಮರ್ಶಾ ಪಾತ್ರ ಮುಖ್ಯವಾದುದು. ಸಾಹಿತ್ಯ ಸತ್ವವನ್ನು ವಿಮರ್ಶಾ ತತ್ವಗಳ ಮುಖೇನ ಪರಿಶೀಲಿಸುವ ಕುಶಲ ಕಲೆಯನ್ನು ನಮಗೆ ಸಾಹಿತ್ಯ ಅಧ್ಯಯನಗಳು ಕಲಿಸಿವೆ. ಮಹಾಕಾವ್ಯದಿಂದ ಹಿಡಿದು ಸಣ್ಣ ಬಿತ್ತಿಪತ್ರ ಅಥವಾ ವಾಹನಗಳ ಮೇಲಿನ ಬರಹವನ್ನು ಸಾಹಿತ್ಯವೆಂದು ಈಗೀಗ ಪರಿಗಣಿಸಲಾಗುತ್ತಿದೆ. ಸಾಹಿತ್ಯದ ಸ್ವರೂಪ ಬದಲಾದಂತೆ ಸಾಹಿತ್ಯ ವಿಮರ್ಶೆಯ ಸ್ವರೂಪದಲ್ಲೂ ಬದಲಾವಣೆಗಳ ಸಹಜ. ಓದುಗ/ವಾಚಕ ಕೇಂದ್ರಿತ ವಿಮರ್ಶೆಯು ಸಾಹಿತ್ಯ ಪಠ್ಯಕ್ಕೆ ಒಂದು ಓದೆನ್ನುವುದು ಇರುವುದಿಲ್ಲ. ಹಲವು ಓದುಗಳಿರುತ್ತವೆ. ಪಠ್ಯವೊಂದನ್ನು ಓದುವುದೆಂದರೆ ಅದರ ಅರ್ಥವನ್ನು ನಿರಂತರವಾಗಿ ಮುಂದೂಡುವುದಾಗಿದೆ. ಓದುವಿಕೆಯನ್ನು ನಿಕಟ ಅಥವಾ ಸೂಕ್ಷ್ಮ ಓದು ಮತ್ತು ಮುಕ್ತ ಓದು- ಎಂದು ಗುರುತಿಸಲಾಗುತ್ತದೆ. ವಿನಯ ನಂದಿಹಾಳ ಅವರ ಕಣ್ಣಂಚಿನ ಕಿಟಕಿ- ಲೇಖನಗಳಲ್ಲಿ ನಿಕಟ ಮತ್ತು ಮುಕ್ತ ಓದಿನ ಮಾದರಿಗಳು ಕಾಣಸಿಗುತ್ತವೆ.

ಪ್ರಸ್ತುತ ವಿಮರ್ಶಾ ಬರವಣಿಗೆಯ ತಾತ್ವಿಕತೆಯು ಮಾರ್ಕ್ಸವಾದಿ ಮಾನವತಾವಾದವನ್ನು ಪ್ರತಿನಿಧಿಸುತ್ತದೆ. ಸಾಹಿತ್ಯ ಮತ್ತು ಸಿನಿಮಾ ಎಂದು ಲೇಖನಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಹಳಗನ್ನಡ ಪಠ್ಯ-ಪಾತ್ರ ವಿಶ್ಲೇಷಣೆ, ಹೊಸಗನ್ನಡ ಕೃತಿಗಳ ತಾತ್ವಿಕ ವಿವೇಚನೆ ಮತ್ತು ಸಿನಿಮಾಗಳ ಕಲಾವಿಮರ್ಶೆ- ಹೀಗೆ ಮೂರು ಆಯಾಮಗಳಲ್ಲಿ ವಿಮರ್ಶಕರ ಆಶಯ ಮತ್ತು ಧೋರಣೆಗಳು ಹರಡಿಕೊಂಡಿವೆ. ಅಲ್ಲಿನ ಇಪ್ಪತ್ತೆರಡು ಲೇಖನಗಳು ಒಂದೇ ಕಿಟಕಿಯಲ್ಲಿ ಹಲವು ಕಣ್ಣೋಟಗಳನ್ನು ಓದುಗರಿಗೆ ದರ್ಶನ ಮಾಡಿಸುತ್ತವೆ. ಸಂಶೋಧಕನ ಶಿಸ್ತು, ವಿಮರ್ಶಕನ ತಾತ್ವಿಕತೆ, ಸಿನಿ ವಿಮರ್ಶಕನ ಕಲಾದೃಷ್ಟಿ- ಪ್ರಸ್ತುತ ಲೇಖನಗಳಲ್ಲಿ ಪ್ರಮುಖವಾಗಿ ಕಾಣಸಿಗುತ್ತವೆ.

ಭದ್ರಬಾಹು ಭಟ್ಟಾರರ ಕಥೆಯ ನಂದಿಮಿತ್ರ ಪಾತ್ರದ ವಿಶ್ಲೇಷಣೆ- ಲೇಖನವು ವಡ್ಡಾರಾಧನೆಕಾರ ಪಾತ್ರರಚನೆಯಲ್ಲಿ ಮಾಡುವ ಏರಿಳಿತ, ಚಲನೆ ಮತ್ತು ತಿರುವು- ಅವುಗಳ ಹಿಂದಿರುವ ಸಾಮಾಜಿಕ ರಚನೆಯ ಪ್ರಭಾವವನ್ನು ವಿನಯ ನಂದಿಹಾಳ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಪ್ರಸ್ತುತ ಲೇಖನವು ಸಂರಚನಾವಾದಿ ವಿಮರ್ಶೆಗೆ ಅತ್ತ್ಯುತಮ ಮಾದರಿ. ವಡ್ಡಾರಾಧನೆ ಕೃತಿಯಲ್ಲಿ ಶ್ರಮಿಕ ವರ್ಗದ ಚಿತ್ರಣ-ದಲ್ಲಿ ಸಮಾಜವಾದಿ ವಿಮರ್ಶೆಯ ದೃಷ್ಟಿಕೋನವು ಎದ್ದುಕಾಣುತ್ತದೆ. ಹಳಗನ್ನಡ ಪಠ್ಯಗಳ ವಿಮರ್ಶೆಯಲ್ಲಿ ತೊಡಗಿಸಿಕೊಂಡಿರುವ ಹೊಸತಲೆಮಾರಿನ ಬರಹಗಾರರ ನಿಲುವುಗಳನ್ನು ತಿಳಿಯಲು ವಿನಯರವರ ಬರವಣಿಗೆಯು ನಿದರ್ಶನವಾಗಿದೆ.

ಅಕಥಾ ಕಥಾ-ಸಂತತನದ ನೆಲೆಗಳು- ಲೇಖನದಲ್ಲಿ ಕೇಶವ ಮಳಗಿಯವರ ಕಥೆಗಳ ರಾಚನಿಕ ವಿಶ್ಲೇಷಣೆಯಿದೆ. ಕಥೆಗಳ ಒಳಹೂರಣವನ್ನು ಆಧರಿಸಿ, ಸಂತತನವನ್ನು ಸಮಸ್ಯಾತ್ಮಕ, ಪ್ರಕ್ರಿಯಾತ್ಮಕ, ಸಾಧಿತ ಮತ್ತು ಉಪದೇಶಾತ್ಮಕ ಎಂದು ನಾಲ್ಕು ನೆಲೆಯಲ್ಲಿ ಗುರುತಿಸಿದ್ದಾರೆ. ಈ ಬರಹದಲ್ಲಿ ಸಂತತನದ ಪರಿಭಾಷೆಯನ್ನು ನಿರ್ವಚನೆ ಮಾಡಿ, ಆ ಭೂಮಿಕೆಯಲ್ಲಿ ಕಥೆಯ ಆಶಯವನ್ನು ಸಾಣಿಹಿಡಿಯಲಾಗಿದೆ. ಸಾಮಾಜಿಕವಲ್ಲದ ವ್ಯಕ್ತಿತನವಾಗಲಿ, ಸಂತತನವಾಗಲಿ ಅರ್ಥವಿಲ್ಲದ್ದು ಎನ್ನುವ ಮನೋಧರ್ಮ ವಿಮರ್ಶೆಯಲ್ಲಿ ವ್ಯಕ್ತವಾಗಿದೆ.

ವಿಕ್ರಮ ವಿಸಾಜಿಯವರ ʼರಸಗಂಗಾಧರʼ ನಾಟಕ ಕುರಿತು ವಿನಯರವರು ಹೀಗೆ ವ್ಯಾಖ್ಯಾನ ಮಾಡುತ್ತಾರೆ: ʼರಸಗಂಗಾಧರವು ಓದುವ ನಾಟಕವಾಗಿ ಹೆಚ್ಚು ಪರಿಣಾಮಕಾರಿಯಾಗಿದೆʼ. ಈ ನಾಟಕ ನಾಡಿನಾದ್ಯಂತ ಹಲವು ಪ್ರದರ್ಶನಗಳ ಮೂಲಕ ನೋಡವ ನಾಟಕವಾಗಿಯೂ ಯಶಸ್ಸು ಪಡೆದಿದೆ. ನಾಟಕ ವಿಮರ್ಶೆಯ ಸೂಕ್ಷ್ಮನೋಟಗಳಿಗೆ ಈ ಲೇಖನವು ಉತ್ತಮ ಉದಾಹರಣೆ. ಶಿವಕುಮಾರ ಮಾವಲಿ ಅವರ ʼಟೈಪಿಸ್ಟ್ ತಿರಸ್ಕರಿಸಿದ ಕಥೆಗಳುʼ- ಪುಸ್ತಕ ಶೀರ್ಷಿಕೆಯಲ್ಲಿ ʼಹೊಸ ಮಾದರಿಯ ಕಥೆಗಳ ಸಂಕಲನʼ ಎಂದು ಸ್ವಘೋಷಣೆ ಮಾಡಿರುವ ಅಪಾಯ ಮತ್ತು ಹಾಗೆ ನಿರ್ಧರಿಸಬೇಕಾದವರು ಓದುಗರೇ ಹೊರತು ಕಥೆಗಾರ ಅಲ್ಲ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಆಶಯ ಮತ್ತು ಆಕೃತಿಗಳಲ್ಲಿ ಸಮನ್ವಯದಿಂದ ಕಥೆಗಳು ಹೊಸ ಮಾದರಿ ಅನಿಸಬಹುದೆ ವಿನಹ, ಕಥೆಗಾರರು ಸ್ವಘೋಷಣೆ ಮಾಡುವುದರಿಂದ ಅಲ್ಲ ಎನ್ನುತ್ತಾರೆ. ನಟರಾಜ ಹುಳಿಯಾರವರ ಕಾಮನ ಹುಣ್ಣಿಮೆ ಕುರಿತ ವಿಮರ್ಶೆಯಲ್ಲಿ- ಚಳುವಳಿಯು ಸಾಮಾಜಿಕ ಬದುಕಿನ ಮೇಲೆ ಬೀರಬಹುದಾದ ಪರಿಣಾಮದ ಕಥೆಯಾಗಿದೆಯೆಂದು ಕಾದಂಬರಿಯನ್ನು ಗುರುತಿಸುತ್ತಾರೆ.

ಟಿ.ಡಿ ರಾಜಣ್ಣ (ಅನು) ಸೂರ್ಯಶಿಖರ-ಹೋವರ್ಡ್ ರೋರ್ಕ, ಕೀರ್ತಿನಾತ ಕುರ್ತಕೋಟಿ-ಆ ಮನಿ ನಾಟಕ, ಕಪಿಲ ಹುಮನಾಬಾದ-ಹಾಣಾದಿ: ಕೌದಿ ಮತ್ತು ದುಬ್ಟಿಯ ಬೆಚ್ಚಗಿನ ಅನುಭವ, ಜಾಕ್ ಲಂಡನ್‌ನ ಸ್ಕಾರ್ಲೆಟ್ ಪ್ಲೇಗ್ ಪಿಡುಗಿನ ಕಥನ- ಲೇಖನಗಳಲ್ಲಿ ಕೃತಿಯ ಆಶಯದ ವಿವೇಚನೆಗಿಂತ, ಅವುಗಳ ಪಾತ್ರ ಮತ್ತು ಕಥನ ವಿಶ್ಲೇಷಣೆಯನ್ನು ಪ್ರಮುಖವಾಗಿ ಮಾಡಲಾಗಿದೆ. ಯುವ ವಿಮರ್ಶಕರು ಕೃತಿಯ ಮೌಲ್ಯಮಾಪನದಲ್ಲಿ ಎದುರಿಸುವ ಆರಂಭದ ತೊಡರುಗಳು ಮೇಲಿನ ನಾಲ್ಕು ಬರಹದಲ್ಲಿ ನೋಡುತ್ತೇವೆ.

ಆರಂಭದ ಹತ್ತು ವಿಮರ್ಶಾ ಲೇಖನಗಳು ಕೃತಿಯ ಮೂಕ್ಕಾಲು ಭಾಗವನ್ನು ಆವರಿಸಿವೆ. ಸಿನಿ ವಿಮರ್ಶೆ ಕುರಿತು ಹನ್ನೆರಡು ಲೇಖನಗಳ ಆವರಿಸಿದ್ದು ಕೃತಿಯ ಕಾಲುಭಾಗವನ್ನಷ್ಟೇ. ವಿನಯ ನಂದಿಹಾಳರವರ ಸಿನಿ ಬರಹಗಳು ಡಿ.ಆರ್ ನಾಗರಾಜ್‌ರ ಸಾಹಿತ್ಯ ಕಥನದಲ್ಲಿನ ಸಿನಿ ವಿಮರ್ಶೆಯನ್ನು ನೆನಪಿಸುತ್ತವೆ. ಡಿ.ಆರ್ ಬಳಸುವ ವಿಶಾಲ ತಾತ್ವಿಕವಾದ ಆವರಣವು ಪ್ರಸ್ತುತ ಸಂಕಲನದ ಚಿತ್ರ ವಿಮರ್ಶೆಯಲ್ಲಿ ಕಾಣಲಾರೆವು. ಅವು ಪತ್ರಿಕೆಗಳಲ್ಲಿ ಪ್ರಕಟವಾಗುವ ಸಿನಿ ಪರಿಚಯವಾಗಿರದೆ, ಸಾಹಿತ್ಯ ವಿದ್ಯಾರ್ಥಿಯ ಕಣ್ಣೋಟದ ಚಿತ್ರ ವಿಮರ್ಶೆಗಳಾಗಿವೆ. ಕನ್ನಡ ಸಿನಿಮಾಗಳ ಸಾಹಿತ್ಯಿಕ ವಿಮರ್ಶೆಗೆ ಜೀವ ತುಂಬುವ ಕೆಲಸವನ್ನು ವಿನಯರವರು ಮಾಡಿದ್ದಾರೆ. ಸಿನಿಮಾದ ಮೂಲ ಅಂಶಗಳಾದ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ಸಂಗೀತ, ಅಭಿನಯ, ನೃತ್ಯ, ನಿರ್ದೇಶನ, ಛಾಯಾಗ್ರಹಣ, ವೇಷಭೂಷಣ- ಅವುಗಳು ಸಿನಿಮಾದ ಯಶಸ್ಸಿನಲ್ಲಿ ಎಷ್ಟು ಮಹತ್ವದ ಪಾತ್ರವಹಿಸಿವೆ ಎನ್ನುವುದನ್ನು ವಿಮರ್ಶಕರು ಗುರುತಿಸಿದ್ದಾರೆ.

ಸಾಹಿತ್ಯ ಪಠ್ಯಗಳು ಸಿನಿಮಾ ಆಗುವಲ್ಲಿ ಸಾಧಿಸಿದ ಗಹನತೆಯನ್ನು ಅಮ್ಮಚ್ಚಿ ಎಂಬ ನೆನಪು, ಅಲ್ಲಮ ಮತ್ತು ಮೂಕಜ್ಜಿ- ಚಿತ್ರಗಳ ವಿಶ್ಲೇಷಣೆಯಿದೆ. ಹರಿವು, ಆಕ್ಟ್-೧೯೭೮, ಒಂದು ಶಿಕಾರಿ ಕಥೆ, ಪರೀಕ್ಷಾ, ಗಂಧದ ಗುಡಿ, ದಿ ಡಾರ್ಕ ನೌಟ(ಇಂಗ್ಲಿಷ್), ಚಾರ್ಲಿ, ದ ಗ್ರೇಟ್ ಇಂಡಿಯನ್ ಕಿಚನ್(ಮಲೆಯಾಳಿ), ಪಡ್ಡಾಯಿ(ತುಳು)- ಸಿನಿಮಾಗಳ ವಿಮರ್ಶೆಯಲ್ಲಿ ಅವುಗಳ ಕಲಾತ್ಮಕಯನ್ನು ಮುಖ್ಯವಾಗಿ ವಿಮರ್ಶಕರು ಗುರುತಿಸಿದ್ದಾರೆ. ಕನ್ನಡ ಮತ್ತು ಕನ್ನಡೇತರ ಚಿತ್ರಗಳ ಕುರಿತ ಬರವಣಿಗೆಯಲ್ಲಿ ಒಂದೇ ತೂಕವನ್ನು ಕಾಣುತ್ತೇವೆ. ಅಮ್ಮಚ್ಚಿ ಎಂಬ ನೆನಪು ಕುರಿತು ಬರೆದಷ್ಟೇ ಸಲೀಸಾಗಿ ದಿ ಗ್ರೇಟ್ ಇಂಡಿಯನ್ ಕಿಚನ್ ಸಿನಿಮಾ ಬಗೆಗೆ ಬರೆಯಬಲ್ಲರು. “ಸಿನಿಮಾ ಕಲೆಯು ಹ್ಯೂಮ್ಯಾನಿಷ್ಟಿಕ್ ಆಗಬೇಕಾದ ಅಗತ್ಯವನ್ನು ಅವರೆಲ್ಲಾ ಚಿತ್ರ ವಿಮರ್ಶಾ ಲೇಖನಗಳ ಆಶಯವಾಗಿವೆ. ಸಿನಿಮಾ ಕಲೆಯನ್ನು ಕಮರ್ಶಿಯಲ್ ಮಾಡುವುದರಿಂದ ನೋಡುಗರ ಮೇಲಾಗುವ ನಕಾರಾತ್ಮಕ ಪರಿಣಾಮಕ್ಕಿಂತ, ಕಲಾತ್ಮಕ ಸಿನಿಮಾಗಳು ರಚನೆಯಲ್ಲಿರುವ ʼಸೋಶಿಯಾಲಿಸ್ಟಿಕ್ ಅಪ್ರೋಚ್ʼ ಮುಖ್ಯವೆಂದು ವಿನಯ ನಂದಿಹಾಳ ಭಾವಿಸುತ್ತಾರೆ.

ಅಲ್ಲಿನ ಲೇಖನಗಳನ್ನು ಗಮನಿಸಿದಾಗ ನಮಗೂ ಆ ಕಥೆ, ಕಾದಂಬರಿ, ನಾಟಕಗಳನ್ನು ಓದುವ ಹಾಗೆ ಪ್ರೇರೆಪಿಸಿದಂತೆ, ವಿಮರ್ಶೆಗೆ ಒಳಪಡಿಸಿದ ಸಿನಿಮಾಗಳನ್ನು ನೋಡಬೇಕೆಂದು ಅಪೇಕ್ಷಿಸುವಂತೆ ಮಾಡಿರುವುದು ವಿನಯ ನಂದಿಹಾಳ ಬರವಣಿಗೆಯ ಶಕ್ತಿ. ಸಾಹಿತ್ಯ, ಸಿನಿಮಾ ಮೌಲ್ಯಮಾಪನ ಮಾಡುವಾಗ, ತಮಗೆ ಅನಿಸಿದ್ದು ಹೇಳುವಲ್ಲಿ, ಕೃತಿಯ ಮಿತಿ ಸಾಧ್ಯತೆಗಳನ್ನು ವ್ಯಕ್ತಪಡಿಸುವಲ್ಲಿ ಯಾರ ಮುಲಾಜಿಗೂ ಒಳಗಾಗಿಲ್ಲ. ಈ ನಿಷ್ಪಕ್ಷಪಾತ ಗುಣ, ನಿರ್ಬೀಡೆ ಸ್ವಭಾವ, ತನಗೆ ಕೃತಿಯಲ್ಲಿ ಕಂಡದ್ದನ್ನು ಓದುಗನಿಗೆ ಕಾಣಿಸುವ ಸಹೃದಯತೆ, ಸಾಹಿತ್ಯ-ಸಿನಿಮಾ ಜೀವಪರವಾದಂತೆ ಮಾನಪರವಾಗಬೇಕೆಂಬ ಆಶಯ- ಅವರ ವಿಮರ್ಶಾ ಬರವಣಿಗೆಗೆ ಸಾಕ್ಷಿಪ್ರಜ್ಞೆಯಾಗಿದೆ. ಈ ಕಣ್ಣಂಚಿನ ಕಿಟಕಿಯಿಂದ ಹೊರಬಂದ ಬೆಳಕು, ದರ್ಶನಗಳು ಮತ್ತಷ್ಟು ಸಾಹಿತ್ಯವನ್ನು ಓದಿಗೆ ಒಡ್ಡುವಂತಾಗಲಿ. ಪ್ರಸ್ತುತ ಕೃತಿಗೆ ಬಿ.ಎಂ ಶ್ರೀ ಪ್ರತಿಷ್ಠಾನದಿಂದ ಸೂ.ವೆಂ ಆರಗ ವಿಮರ್ಶಾ ಪ್ರಶಸ್ತಿಯು ವಿನಯ ನಂದಿಹಾಳ ಅವರ ಮೊದಲ ವಿಮರ್ಶಾ ಸಂಕಲನಕ್ಕೆ ದೊರಕಿರುವುದು- ಯುವ ವಿಮರ್ಶಕರ ಬಗೆಗೆ ಭರವಸೆಯನ್ನು ಮೂಡಿದೆ. ಅವರ ಮುಂದಿನ ಬರಹದ ಕುರಿತು ಕುತೂಲಹವಿದೆ.

‍ಲೇಖಕರು avadhi

May 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: