ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತೇಶ ನವಲಕಲ್ ಹೊಸ ಕವಿತೆ – ಅಹಲ್ಯೆಯ ಪ್ರಾರ್ಥನೆ…

ಮಹಾಂತೇಶ ನವಲಕಲ್


ಮುಂಜಾನೆ ಕೊಬ್ಬಿನ ಹಾಲುಂಡು ಕೂಗುವ
ಕೋಗಿಲೆಯ ಕೊರಳಿಗೆ ನಿಷ್ಕಾಮ ಜೇನು ಸುರಿಯಲಿ
ಅಂಥಹ ಕೋಗಿಲೆಗೆ ಆಶ್ರಯ ಕೊಟ್ಟ ಜಮ್ಮೆಯ ಮರವು
ಏಳೇಳು ವಿಭವಾಂತರದಲಿ ಮತ್ತೆ ಹುಟ್ಟಲಿ


ನನ್ನ ಮಾತು ಅನವರತ ಆಲಿಸಿದ
ಆಚಮನ ದರ್ಭೆ ಚಾಪೆಗಳ ಕಣ್ಣೀರ ಕಳೆಬರವ ಕಳೆಯಲಿ
ಮತ್ತೆ ಗಂಧದ ಪರಿಮಳ ಪೂಸಿಕೊಂಡು ಹೊಸಬಟ್ಟೆಗಳಾಗಿ
ನನ್ನ ಮುಂದೆ ಬರಲಿ


ಬಿದಗಿಯ ಚಂದಿರನ ಅದಮ್ಯ ವಿರಹಾಮೃತವು
ತಣ್ಣನೆಯ ಹಿಮದ ಒಡಲು ಸೇರಿ ನಿಷ್ಕ್ರಿಯವಾಗಲಿ
ನವಿಲುಗಳು ಮೃಗಗಳು ಸೊಣಗ ಸಹಿತ ಪ್ರಾಣಿಗಳ
ನಿಶ್ಯೇಷ ಕಾಮಕೇಳಿಗಳೆಲ್ಲ ಯನ್ನ ಕಣ್ಣಿಗೆ ಬೀಳದಿರಲಿ


ಏಳು ಸಮುದ್ರದ ಸುಖ ಹರುಡುವ ಇಂದಿರನ
ಸಾಸಿರ ನಿಮುರುಚೋಹಗಳೆಲ್ಲ ವ್ಯವಕಲಿಸಿ ಒಂದೇ ಆಗಲಿ
ಇಂದಿರನ ಆಸೆಬುರುಕ ಮನಸು ನೀರಿನ ಚಿಲುಮೆಯಾಗಿ
ಜಿಗಿಯುವ ನನ್ನ ಅಂಡಜೀರಿಗೆಗಳನು ಕುಡಿಯದಿರಲಿ


ಸ್ಪಟಿಕದ ನದಿ ಯನ್ನ ಮನಹೊಕ್ಕು
ಸಹಸ್ರಪಾದಗಳ ಅಣುರಿಣಗಳ ಶಬ್ಧ ಮಾಡದಿರಲಿ
ಭೋರ್ಗರೆವ ಆಶ್ರಮದ ದಂಡೆಯ ನದಿಗೆ ಗುರುತರ
ಸಂಯಮದ ಆಣೆಕಟ್ಟು ಕಟ್ಟಲಿ


ಭಗವತಿ ಪಾತ್ರೆಯ ತುಂಬ ಆಸೆಗಳ ವೇಗವರ್ಧಕ
ಲಾವಾರಸಗಳು ಉದಯಿಸದಿರಲಿ
ಗಂಡುಗಳ ಕೊಲ್ಲುವ ಮಿಲನವೇ ಸಾವಾಗುವ
ಶಿವನ ಕುದುರೆಗಳ ಭಾಷೆ ಯನ್ನ ಜ್ಞಾನಕ್ಕೆ ದಕ್ಕಲಿ

‍ಲೇಖಕರು Admin

13 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading