
ಮಹಾಂತೇಶ ನವಲಕಲ್
ಆತ್ಮಸಂಗಾತದ ಉತ್ಕಟತೆ ಕನ್ನಡ ಕಾವ್ಯ ಸಂಧರ್ಭದಲ್ಲಿ, ಕಾವ್ಯದ ಮುಖಾಂತರ ತನ್ನ ಪ್ರಿಯಕರನ ಧೇನಿಸಿದ, ಪ್ರಮೇಯ ಉದಾಹರಣೆ ಕಡಿಮೆ. ಏಕೆಂದರೆ ಹೆಚ್ಚಾಗಿ ಇರುವ ಪೂರ್ವಾಗ್ರಹ, ಇತಿಮಿತಿಗಳು, ಇಂತಹ ಸಾಹಸಗಳಿಗೆ ಇತಿಶ್ರಿ ಹಾಡುತ್ತವೆ. ಆದರೆ ಭಾರತೀಯ ಕಾಲಮಾನದಲಿ ಸ್ಫೋಟಕ ಜ್ವಾಲಾಮುಖಿಗಳು ಅಲ್ಲಲ್ಲಿ ಘಟಿಸಿವೆ. ಇಂತಹ ಜ್ವಾಲಾಮುಖಿಗಳಲಿ, ಕಮಲಾದಾಸ, ಅಮೃತಾಪ್ರೀತಂ ಪ್ರಮುಖರಾಗುತ್ತಾರೆ. ಅಂಥವರ ಸಾಲಿಗೆ ಎಚ್. ಎಸ್. ಮುಕ್ತಾಯಕ್ಕ ಸೇರುತ್ತಾರೆ. ಇವರು ತಮಗೆ ಅನಿಸಿದ್ದನ್ನು ಮುಕ್ತವಾಗಿ ಬರೆಯುತ್ತ ಬಂದಿದ್ದಾರೆ ಪ್ರೀತಿ, ಪ್ರೇಮದಂತಹ ನವಿರು ಭಾವಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ʼನಿನಗಾಗಿ ಬರೆದ ಕವಿತೆಗಳು’ ಸಂಕಲನದಲ್ಲಿಯೂ ಕೂಡ ತಮ್ಮ ಪ್ರಿಯಕರನ ಬಗೆಗೆ ಇರುವ ಪ್ರೀತಿ, ವಿರಹ, ಆತಂಕ, ಕಾಯುವಿಕೆ, ಉತ್ಕಟತೆ ಇತ್ಯಾದಿ ಭಾವಗಳನ್ನು ಮನದುಂಬಿ ಮುಕ್ತವಾಗಿ ವರ್ಣಿಸುತ್ತಾರೆ.
ಈ ಕವನ ಸಂಕಲವು ಸಂಗಾತ ಪ್ರಕಾಶನದವರು ಪ್ರಕಟಿಸಿದ ‘ನಿನಗಾಗಿ ಬರೆದ ಕವಿತೆಗಳು’ ಅಪರೂಪದ ಕವನಸಂಕಲನವಾಗಿದೆ.
ಇಲ್ಲಿನ ಒಂದು ಕವಿತೆ
“ನೀನು ದೂರವಿರುವಿ
ಆದರೂ ದೂರವೇನಿಲ್ಲ.
ಮೈಲುಗಳಿಂದ ದೂರವಿರುವಿ,
ಮಾತು, ಕನಸು, ಕವಿತೆಯಿಂದ
ಹೃದಯಕ್ಕೆ ಹತ್ತಿರವಿರುವಿ.
ಇದೆಂಥ ಅಪೂರ್ವ
ಬಂಧನ ನಮ್ಮದು!
ನಾವು ಜೊತೆಯೂ ಇಲ್ಲ
ಆದರೆ,
ಒಂಟಿಯಾಗಿಯೂ ಇಲ್ಲ!”
ಮಧುವನು ಮೀರಿದ ಪಾರಮಾರ್ಥಿಕ ಜಗತ್ತಿನಲಿ ಜೀವಿಸುವುದು ಪ್ರೇಮಿಗಳಿಗೆ ಮಾತ್ರ ಗೊತ್ತು. ಅಂತೆಯೆ ನೀನು ಎಷ್ಟು ದೂರವಿದ್ದರೂ ನನ್ನ ಎಕಾಂತದಲ್ಲಿ ನೀನುರುವೆ ಎನ್ನುವುದು!
ಪಂಚಭೂತಗಳಾದ, ಗಾಳಿ, ಆಕಾಶ, ಭೂಮಿ, ನೀರು ಬೆಂಕಿ ಇವು ಪ್ರೀತಿಪಾತ್ರರೊಂದಿಗೆ ಸಂವಾದಿಸಲು ಅವಕಾಶ ಮಾಡಿಕೊಡುತ್ತವೆ. ಅಲ್ಲದೆ ಮಳೆ ಮೋಡ, ಬೆಟ್ಟ, ಹೂವು, ಕಣಿವೆ ಕಡಲು ಇಡೀ ಪ್ರಕೃತಿಯೆ ಪ್ರೇಮಿಗಳಿಗೆ ಪರಸ್ಪರ ಪ್ರೀತಿಸಲು, ಒಡನಾಡಲು, ನೆನೆಯಲು ಒಂದು ಸುಂದರ ಬಂಧನದಲಿ ಬಂಧಿಯಾಗಲು ಪ್ರೆರಣೆಯಾಗುತ್ತವೆ. ಅಂತೆಯೆ ಪ್ರೇಮಿಗಳಿಗೆ ಬೇರೆಯದೆ ಒಂದು ಭಾಷೆ ಇದೆ. ಅದಕ್ಕೆ ಲಿಪಿಗಳಿಲ್ಲ, ಸೂತ್ರಗಳಿಲ್ಲ ಯಾವೂವು ಆಂಗಿಕ ಅಭಿನಯದ ಪ್ರಕಾರಗಳಿಗೂ ಅದು ಒಳಪಟ್ಟಿಲ್ಲ. ಈ ಮೊದಲು ನಾನು ಹೇಳಿದಂತೆ ಅದು ಪಾರಮಾರ್ಥಿಕ ತರಂಗಗಳಿಂದ ಸಂಭವಿಸುವ, ಸಂವಹನ ಮಾಧ್ಯಮದಿಂದ ಸಂಭವಿಸುವಂತಹದು.

ಅಲ್ಲಮನ ವಚನದಸಾಲು:
“ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ” ಎಂಬ ಸಾಲು ಇದನ್ನೇ ಧ್ವನಿಸುತ್ತದೆ. ಎಲ್ಲೋ ಇರುವ, ಪ್ರೇಮಿಯ ಕೂಟಕ್ಕೆ ಸಹಾಯಕವಾಗುವ ಹಾಸಿಗೆಯ ಹಂಗು ಬೇಕಿಲ್ಲ ಎಂದು ಅಲ್ಲಮ ಹೇಳುತ್ತಾನೆ. ಗಂಧದ ಪರಿಮಳ ಪಡುವಣದ ಗುಡಿಯೊಳಗಿರುವ ಶಂಖಧ್ವನಿಯ ನಾದವೂ ಸಹ, ಪ್ರೇಮಿಗಳ ಪಾರಮಾರ್ಥ ಮಿಲನಕ್ಕೆ ಸಹಾಯಕವಾಗಿವೆ ಎಂದು ನನ್ನ ಅಭಿಪ್ರಾಯ.
ಸುಖವು ಕ್ಷಣಿಕ. ದುಃಖಗಳು ಕ್ಷಣಿಕ. ಆದರೆ ಸಂದರ್ಭ ಸೃಷ್ಟಿಸುವ ಈ ಭವದ ಉತ್ಪಾದನೆಗಳನ್ನು ಒಂದು ಸೃಷ್ಟಿಯ ಸೊಬಗು ಹೇಳುತ್ತದೆ.

ಈ ಕವಿತೆ ನೋಡಿ….
“………………
…………
ಇದೊಂದು ಸುಖದ ಸಂಜೆಯಾಗಿತ್ತುದೂರದಲಿ ಬೆಟ್ಟದ ಮೇಲೆ
ದೂರದಲಿ ಬೆಟ್ಟದ ಮೇಲೆ
ಇರುಳು, ಮೆಲ್ಲ ಮೆಲ್ಲನೆ ಇಳಿಯುವುದು ಕಂಡೆ;”
ಕಾಣದ ಕಡಲು ಏಕತಾನತೆಯಿಂದ ಬಸವಳಿದಿದೆ. ಅದಕ್ಕೂ ಪ್ರೇಮದ ಉನ್ಮಾದ ಬೇಕಿದೆ. ಪ್ರೇಮಿಗಳನ್ನು ನೋಡಿ ನೋಡಿ ಅದು ಪ್ರೇಮಿಯಾಗುವ ಪರಿಯನ್ನು ಒತ್ತಿ ಒತ್ತಿ ಹೇಳುತ್ತಿದೆ. ಈ ಕೆಳಗಿನ ಪದ್ಯ:
ಒಂದು ದಿನ,
ನೀನು ಸಮುದ್ರಕ್ಕೆ ನನ್ನನು,
ಪರಿಚಯಿಸಿದೆ.
ನನ್ನ ವರ್ಣನೆಯನು ಮಾಡಿದೆ.
ನನ್ನನ್ನೇ ನೋಡುತ್ತಿದ್ದ,
ಶರಧಿಯ ಮನಸ್ಸು
ಹೊಯ್ದಾಡತೊಡಗಿತು.
ಅದರ ಎದೆಮಿಡಿತದ ಸದ್ದೂ
ಮೇರೆ ಮೀರಿತು.
ನಾವು ಅಲ್ಲಿಂದ ಹೊರಟೆವು,
ಹಿಂದುರುಗಿ ನೋಡಿದಾಗ
ಕಡಲು, ನಮ್ಮನು
ಹಿಂಬಾಲಿಸುತಿತ್ತು.
ತನ್ನ ಮೀನು, ಚಿಪ್ಪು ಮುತ್ತು
ಎಲ್ಲ ಅಲ್ಲಿಯೆ ಬಿಟ್ಟು !
ಇಂತಹ ಎಷ್ಟೋ ಕವಿತೆಗಳು ಇಲ್ಲಿವೆ. ಇಲ್ಲಿಯ ಪದ್ಯಗಳು ಪ್ರೀತಿಯ ಪರಾಕಾಷ್ಠೆಯನು, ಉತ್ಕಟತೆಯನು ಹೇಳುತ್ತವೆ. ಇವನ್ನು ಓದಿದಾಗ ಅಮೃತಾ ಪ್ರೀತಂ ಮತ್ತು ಸಾಹಿರ್ ಅವರ ಪ್ರೀತಿ ನೆನಪಾಗುತ್ತದೆ. ಅಮೃತಾ ಸಾಹಿರ್‌ರ ಅಪರಿಮಿತ ಅನನ್ಯ ಪ್ರೀತಿಯು ಅವರ ಅನೇಕ ಕವಿತೆಗಳಲಿ ಹೀಗೆಯೆ ವ್ಯಕ್ತವಾಗಿದೆ. ಯಾವ ನಿರ್ಬಂಧಕ್ಕೂ ಒಳಪಡದ ಪ್ರೀತಿಯೆಂಬ ಅದ್ಭುತ ಭಾವದ ಬಗೆಗೆ ಬರೆದ ಇಂತಹ ಅನೇಕ ಪದ್ಯಗಳನು ತನ್ನ ಒಡಲಳೊಗಿಟ್ಟುಕೊಂಡ ʼನಿನಗಾಗಿ ಬರೆದ ಕವಿತೆಗಳು’ ಸಂಕಲನದ ಕವಿತೆಗಳು ಕನ್ನಡಕ್ಕೆ ದಕ್ಕಿದ ಶ್ರೇಷ್ಠ ಪ್ರೇಮ ಕವಿತೆಗಳು. ಮುಟ್ಟಿದರೆ ಕೈಗೆ ಅಂಟಿಕೊಳ್ಳುವ ಸುಗಂಧದಂತೆ, ಪಾರಿಜಾತದ ನವಿರು ಕಂಪಿನಂತೆ ಇಲ್ಲಿಯ ಕವಿತೆಗಳಿವೆ.
ನಿನಗಾಗಿ ಬರೆದ ಕವಿತೆಗಳು ಕೃತಿಯ ಕುರಿತು ಬರೆದ ವಿಮರ್ಶೆ ಪ್ರೇಮ ಕಾವ್ಯದಭಾಷ್ಷ್ಯೆ ಯಂತಿದೆ.
“ನೀನು ನನ್ನನ್ನು ಕಡಲಿಗೆ ಪರಿಚಯಿಸಿದೆ, ನಾವಿಬ್ಬರೂ ಮರಳಿ ಹೊರಟಾಗ ಕಡಲು ಮ್ಮ್ಮ ಬೆನ್ನಹಿಂದೆ ಬರುತ್ತಿತ್ತು.ಮುತ್ತು ಚಿಪ್ಪುಗಳನ್ನು ಅಲ್ಲಿಯೇ ಬಿಟ್ಟು”
ಈ ಸಾಲುಗಳು ರಸಸ್ವಾದದ ಕೌಶಲ್ಯ ಪೂರ್ಣ ಅಭಿವ್ಯಕ್ತಿ ಯಾಗಿದೆ.
ಸಾಹಿರ್ ಮತ್ತು ಅಮೃತಾ ಪ್ರೀತಂ ಅವರ ಪ್ರೇಮ ಕಾವ್ಯದ ಸಂವೇದನೆಯನ್ನು ಕನ್ನಡಕ್ಕೆ ತಂದ ಮುಕ್ತಾಯಕ್ಕ ಗಝಲ್ ಫಾರ್ಮ್ ಅನ್ನು ಪರಿಚಯಿಸಿ ಕನ್ನಡ ಕಾವ್ಯ ಕ್ಷೇತ್ರದಿಂದ ದೂರವಿರುವಂತೆ ಅನಿಸುತ್ತಿರುವಾಗಲೆ ಈ ಕೃತಿ ಕೊಟ್ಟು ಕಾವ್ಯರಚಿಸಲು ಬೇಕಾದ ಧ್ಯಾನಸ್ಥ ಸ್ಥಿತಿಯನ್ನು ಮನ ಗಾಣಿಸಿದ್ದಾರೆ.
ಡಿ.ಎಂ.ನದಾಫ್; ಅಫಜಲಪೂರ.
moderation.
“ನಿನಗಾಗಿ ಬರೆದ ಕವಿತೆಗಳು” ಕೃತಿಯ ಕುರಿತು ಬರೆದ ವಿಮರ್ಶೆ ಪ್ರೇಮ ಕಾವ್ಯದಭಾಷ್ಷ್ಯೆಯಂತಿದೆ.
“ನೀನು ನನ್ನನ್ನು ಕಡಲಿಗೆ ಪರಿಚಯಿಸಿದೆ, ನಾವಿಬ್ಬರೂ ಮರಳಿ ಹೊರಟಾಗ ಕಡಲು ನಮ್ಮ ಬೆನ್ನ ಹಿಂದೆ ಬರುತ್ತಿತ್ತು. ಮುತ್ತು ಚಿಪ್ಪುಗಳನ್ನು ಅಲ್ಲಿಯೇ ಬಿಟ್ಟು”
ಈ ಸಾಲುಗಳು ರಸಸ್ವಾದದ ಕೌಶಲ್ಯ ಪೂರ್ಣ ಅಭಿವ್ಯಕ್ತಿ ಯಾಗಿದೆ.
ಸಾಹಿರ್ ಮತ್ತು ಅಮೃತಾ ಪ್ರೀತಂ ಅವರ ಪ್ರೇಮ ಕಾವ್ಯದ ಸಂವೇದನೆಯನ್ನು ಕನ್ನಡಕ್ಕೆ ತಂದ ಮುಕ್ತಾಯಕ್ಕ ಗಝಲ್ ಫಾರ್ಮ್ ಅನ್ನು ಪರಿಚಯಿಸಿ ಕನ್ನಡ ಕಾವ್ಯ ಕ್ಷೇತ್ರದಿಂದ ದೂರವಿರುವಂತೆ ಅನಿಸುತ್ತಿರುವಾಗಲೆ ಈ ಕೃತಿ ಕೊಟ್ಟು ಕಾವ್ಯರಚಿಸಲು ಬೇಕಾದ ಧ್ಯಾನಸ್ಥ ಸ್ಥಿತಿಯನ್ನು ಮನ ಗಾಣಿಸಿದ್ದಾರೆ.
ಡಿ.ಎಂ.ನದಾಫ್; ಅಫಜಲಪೂರ.