ವೆಂಕಟೇಶ ಚಾಗಿ
ವರುಷದಲ್ಲಿ
ಆಗಾಗ ಬರುತ್ತಿದ್ದ ಮಳೆ
ತನ್ನ ಕಂದಮ್ಮಗಳಿಗೆ
ಇಡೀ ವರುಷಕ್ಕೆ ಬೇಕಾಗುವಷ್ಟು ಹಾಲನ್ನು
ಅಲ್ಲಿ ಇಲ್ಲಿ ಭೂತಾಯಿ ಒಡಲಲ್ಲಿ
ಶೇಖರಿಸಿ ಬಚ್ಚಿಟ್ಟು ಹೋಗುತ್ತಿದ್ದಳು;
ಮಳೆ ಬಂದಾಗಲೂ ಕಂದಮ್ಮಗಳಿಗೆ ಖುಷಿ
ಮಳೆಯ ನಂತರವೂ ಕಂದಮ್ಮಗಳಿಗೆ ಖುಷಿ
ವರುಷ ಪೂರ್ತಿ ಉಂಡು ಬೆಳೆದ ಕಂದಮ್ಮಗಳು
ನೂರಾರು ಸಾವಿರಾರು
ಬೆಟ್ಟಗಳೇ ಬಟ್ಟೆ ತೊಟ್ಟು ಸಂಭ್ರಮಿಸುವಷ್ಟು
ಮಿಕ್ಕ ಸಿಕ್ಕ ಹಾಲೆಲ್ಲಾ ಹರಿದು ಹರಿದು
ಜಗವ ತಣಿಸಿ ಸೇರಾಯ್ತು ಸಾಗರವನ್ನು;
ಆಗಾಗ ಮುನಿಸಿಕೊಳ್ಳುತ್ತಿದ್ದ ಮಳೆ
ಮರಳುವುದು ಆಗಲೋ ಈಗಲೋ
ಅದರೂ ಅವಳಡಗಿಸಿಟ್ಟ ಅಮೃತವು
ಬೆಟ್ಟದ ಜೀವಗಳಿಗೆ ಜೀವಾಮೃತ;

ಕಂದಮ್ಮಗಳಿದ್ದಲ್ಲಿ
ಅವಳ ಕರುಣೆ ಅಘಾದ ಅಪರಿಮಿತ
ಅವಳ ಬದುಕಿನ ಆಸೆ ಕಂದಮ್ಮಗಳ ಬದುಕೇ
ಅಲ್ಲವೇ.
ಯಾವುದೋ ಬಯಲೊಳಗಿದ್ದ ಅವನು
ಬಿಲಕೊರೆದು ಅಗೆದು ಬಗೆದು ಬಂದಿದ್ದಾನೆ
ತನ್ನ ಆಸೆಗಳನ್ನು ಬಿತ್ತಲು
ಬೆಟ್ಟಗಳುಟ್ಟ ಬಟ್ಟೆಯ ಕದಿಯಲು
ಮತ್ತೆ ಬಚ್ಚಿಡಲಾದ ಅಮೃತ ;
ಈಗ ಎಲ್ಲವನ್ನೂ ಕದಿಯಲಾಗುತ್ತಿದೆ
ಎಲ್ಲರಿಗೂ ಗೊತ್ತಾಗುವಂತೆ
ಎಲ್ಲರೂ ಹಟಬಿದ್ದವರಂತೆ
ಎಲ್ಲರಿಗೂ ಅನಿವಾರ್ಯವೆನ್ನುವಂತೆ;
ಕಂದಮ್ಮಗಳ ಆಕ್ರಂದನ
ಮುಗಿಲು ಮುಟ್ಟಿದೆ
ಮಳೆ ಸಿಟ್ಟಾಗಿ ಹುಚ್ಚಿಯಂತಾಗಿದೆ
ಕದಿಯಲು ಬಂದವನ ಆಸೆಯನು ಪೂರೈಸಲು
ಕದಿಯುವವನ ಮನೆ ನುಗ್ಗಿ ಹೋಗಲಾಗಿದೆ
ಮಡಿದ ಕಂದಮ್ಮಗಳ ಆಕ್ರಂದನಕೆ
ಬೆಟ್ಟಗಳೇ ಬಯಲಾಗುತಿವೆ
ಸಿಟ್ಟು , ಸಿಟ್ಟುಗಳ ಉಂಡು ಬೆಟ್ಟವಾಗಿದೆ
ಈಗ ಎಲ್ಲವನ್ನೂ ಬಿಟ್ಟು ಬಿಡಲಾಗಿದೆ
ಯಾರಿಗೂ ಕ್ಷಮೆಯಿಲ್ಲ
ಆದರೆ ಮಳೆಯ ಪಾಠ
ಮತ್ತದೇ ಮಳೆಯ ಹಾಡು
ಅಧಿಕೃತವಾಗಿ ಮಳೆಯ ಪಾಠ..!






0 Comments