ಏ ಭಾಯ್ ಜರಾ ದೇಖ್ ಕೆ ಚಲೋ…

ರಾಜೀವ ನಾರಾಯಣ ನಾಯಕ

ರಾಜ್‌ಕಪೂರನ ‘ಮೇರಾ ನಾಮ್ ಜೋಕರ್’ ಪಿಕ್ಚರಿನ ‘ಏ ಭಾಯ್ ಜರಾ ದೇಖ್ ಕೆ ಚಲೋ…’ ಎಂಬ ಒಂದು ಕಾಲದ ಪ್ರಸಿದ್ಧ ಹಾಡಿನ ಸಾಲನ್ನು ಮುಂಬೈನ ಲೋಕಲ್ ಪ್ರಯಾಣದಲ್ಲಿ, ಫುಟಪಾತುಗಳಲ್ಲಿ, ರಸ್ತೆಗಳಲ್ಲಿ ಮತ್ತೆ ಕೇಳಿಸಿಕೊಳ್ಳುವಂತಾಗಿದೆ.

ಎಂತಹ ಭೀಡ್‌ನಲ್ಲೂ ಭಿಡೆಯಿಲ್ಲದೇ ನುಸುಳುತ್ತಿದ್ದ, ಲೀಲಾಜಾಲವಾಗಿ ಮುನ್ನುಗ್ಗುತ್ತಿದ್ದ ಮುಂಬೈಕರ್‌ನ್ನು ಈ ಕೊರೋನಾ ಕಾಲವು ಎರಡು ಗಜ ಅಂತರ ಕಾದುಕೊಳ್ಳುವ ಅನಿವಾರ್ಯತೆ ಜಗ್ಗಿ ಹಿಡಿದಿದೆ. ಕ್ಯೂನಲ್ಲಿ ನಾಲ್ಕಿಂಚು ಜಾಗವಿದ್ದರೂ ‘ಹೇ ಭಾಯ್ ಆಗೇ ಬಡೋ’ ಎಂದು ಹಿಂದಿಂದ ಧಕ್ಕಾ ನೀಡುವವರು, ಮುಂದಕ್ಕೆ ಜಂಪ್ ಹೊಡೆಯುವವರು ಈಗ ತಮ್ಮ ವೇಗಕ್ಕೆ ಕಡಿವಾಣ ಹಾಕಿಕೊಳ್ಳಬೇಕಾಗಿದೆ. ಇಲ್ಲಾಂದ್ರೆ ಹಿಂದಿನಿಂದ ‘ಏ ಭಾಯ್ ಜರಾ ದೇಖ್ ಕೆ ಚಲೋ…’ ‌ಎಂಬ ಆವಾಜು ಕೋರಸ್‌ನಲ್ಲಿ ಕೇಳುತ್ತದೆ!

ಮುಂಬೈಯನ್ನು ಯಾಂತ್ರಿಕ ನಗರ ಎಂದು ಜರಿದವರೂ ಅದರ ಜೀವಂತಿಕೆಯನ್ನು ಕಾಣದಿರಲಾರರು. ದೇಶದ ಎಲ್ಲೆಡೆಯಿಂದ ಬಂದಿರುವ ಜನರು ತಮ್ಮೊಂದಿಗೆ ಆ ಭಾಗದ ಭಾಷೆ, ಸಂಸ್ಕೃತಿ, ದೇಶೀತನದ ಗಂಧವನ್ನು ಹಚ್ಚಿಕೊಂಡೇ ಬರುವುದರಿಂದ, ಅವರೆಲ್ಲ ಮುಂಬೈ ಯಾಂತ್ರಿಕತೆಗೆ ಚಿತ್ತಾರ ಬಿಡಿಸಿದಂತೆ ಭಾಸವಾಗುತ್ತದೆ.

ಮುಂಬೈ ಎಂಬ ಮಹಾತಾಯಿ ಭವ್ಯ ಇಮಾರತುಗಳನ್ನು ಮುಡಿಗೇರಿಸಿಕೊಂಡ ಹಾಗೇ, ಪಕ್ಕದ ಸ್ಲಂನಲ್ಲಿಯ ಜೋಪಡಿಗಳಿಗೂ ಸೆರಗು ಹಾಸಿದ್ದಾಳೆ. ಕ್ರೌರ್ಯ, ಹಿಂಸೆ, ಮತಲಬಿತನ, ವ್ಯಸನಗಳು ವಾಸ್ತವವಾದರೂ, ಮೆಹನತ್ತು, ಚಿಮ್ಮುವ ಚೈತನ್ಯ, ಯಾವುದೋ ಸೆಲೆಯಿಂದ ಜಿನುಗುವ ಮಾನವೀಯ ಸಂವೇದನೆಗಳು ಒಟ್ಟಾರೆ ನಗರವನ್ನು ಪೊರೆಯುವಷ್ಟು ಸಶಕ್ತವಾಗಿದ್ದದ್ದು ಸುಳ್ಳಲ್ಲ!

ಆದರೆ ಈ ಕೊರೋನಾ, ಈ ಲಾಕ್ ಡೌನ್ ಭಾಗದೌಡ್ ಮುಂಬೈ ಕಾಲಿಗೆ ಸರಪಳಿ ತೊಡಿಸಿರುವುದು ನಿಜ. ಮುಂಬೈನ ಜೀವನಾಡಿ ಲೋಕಲ್‌ ಟ್ರೇನುಗಳು ಸ್ಥಗಿತಗೊಂಡು ನೂರಾ ಅರವತ್ತು ದಿನಗಳಾಗಿವೆ. ಈಗ ಅಗತ್ಯ ಸೇವಾಕರ್ಮಿಗಳಿಗಾಗಿ ಮಾತ್ರ ಓಡಾಡುತ್ತಿರುವ ಕೆಲವೇ ಲೋಕಲ್ಲುಗಳ ಮೇಲೆ ಸಾಮಾನ್ಯ ಮುಂಬೈಕರರಿಗೆ ಇನ್ನೂ ಅವಕಾಶವಿಲ್ಲ. ಹೀಗಾಗಿ ಮುಂಬೈನ ಅಸಲಿ ಜಿಂದಗಿ ಖೈದ್ ಆಗಿದೆ. ಎಂದೂ ನಿದ್ರಿಸದ ನಗರ ಅರೆಪ್ರಜ್ಞಾವಸ್ಥೆಯಲ್ಲಿದೆ. ಎಲ್ ನೋಡಿದ್ರೂ ಜನ ಸಾರ್ ಎಂದು ಗೊಣಗುತ್ತಿದ್ದವರೂ, ಮುಂಬೈನ ಚಲನಶೀಲತೆಗೆ ಅದೇ ಜನ ಕಾರಣ ಎಂಬುದನ್ನು ಅರಿಯುತ್ತಿದ್ದಾರೆ.

ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ, ಅಮ್ಚಿ ಮುಂಬೈನ ಮಾನವೀಯ ಮುಖಗಳನ್ನು, ಜೀವಪರತೆಯನ್ನು, ಚಿಕ್ಕಚಿಕ್ಕ ಸಂಭ್ರಮಗಳನ್ನು ಕತೆಗಳಲ್ಲಿ, ಹಲವಾರು ಬರಹಗಳಲ್ಲಿ ಅಭಿವ್ಯಕ್ತಿಸಲು ಪ್ರಯತ್ನಿಸಿದ್ದೆ. ವರ್ಷದ ಹಿಂದೆ ಆಯ್ದ ಸುಮಾರು ಐವತ್ತು ಬರಹಗಳ ಒಂದು ಸಂಕಲನ ಮಾಡುವ ಉಮೇದಿಯಲ್ಲಿದ್ದೆ. ನನ್ನ ನಿಧಾನಗತಿಯಿಂದಾಗಿ ಅದು ಹಾಗೇ ಉಳಿಯಿತು.

ಹಾಗೆ ವಿಳಂಬವಾದದ್ದೇ ಒಳ್ಳೆಯದಾಯಿತೇನೋ! ಈಗಂತೂ ಕೊರೋನಾ ಮತ್ತು ಲಾಕ್ ಡೌನ್ ಮುಂಬೈನ ಚಹರೆಯನ್ನೇ ಬದಲಿಸಿಬಿಟ್ಟಿದೆ; ಬರಹಗಳ ಪ್ರಸ್ತುತತೆಯನ್ನೂಕೂಡ! ಬರಹ ಬಿಡಿ, ಒಗೆದು ಒಣಗಲು ಹಾಕಿರುವಂತೆ ಕಾಣುವ ಈಗಿನ ಮುಂಬೈ, ಬದುಕನ್ನೂ ಅಸಹನೀಯಗೊಳಿಸುತ್ತಿವೆ!

ಈ ಕಷ್ಟದ ಕಾಲದಲ್ಲಿ ನಮ್ಮ ಕನಸುಗಳನ್ನು ಪೊರೆಯುತ್ತಿದ್ದ ಬಾಲಿವುಡ್ ಕೂಡ ಬಿರುಕು ಬಿಡುತ್ತಿದೆ. ಕಂಗನಾ ರನಾವತ್ ಎಂಬ ಬೆಂಕಿಕೆಂಡ ಬಾಲಿವುಡ್‌ನ್ನು ಗಟರ್ ಎನ್ನುತ್ತಿದ್ದಾಳೆ. ಯೌವನದಲ್ಲಿ ನಮ್ಮ ಕಲ್ಪನೆಗೆ ರೆಕ್ಕೆ ಕಟ್ಟಿದ, ಈ ವಯಸ್ಸಿನಲ್ಲಿ ನೆನಪುಗಳನ್ನು ಬೆಚ್ಚಗಾಗಿಸುವ ನಮ್ಮ ಕನಸುಗಳನ್ನೇ ಕೊಳಚೆಗೆಸೆಯುತ್ತಿದ್ದಾಳೆ.

ಸುಶಾಂತನ ಸಾವಿನೊಂದಿಗೆ, ಡ್ರಗ್ಸ್ ಜಾಲವು ಬಹಿರಂಗಗೊಂಡು ಬಾಲಿವುಡ್ಡಿನ ಮುಖವಾಡಗಳು ಕಳಚಿ ಬೀಳುತ್ತಿವೆ. ಹಾದಿ ತಪ್ಪಿದವರಂತೆ ಕಾಣುವ ರಿಯಾ ಚಕ್ರವರ್ತಿ ಮುಂತಾದ ಆಪಾದಿತರನ್ನು ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಾರ್ಯಾಲಕ್ಕೆ ದಿನವೂ ವಿಚಾರಣೆಗಾಗಿ ತರಲಾಗುತ್ತಿದೆ. ಎನ್‌ಸಿಬಿ ಆಫೀಸು ನಮ್ಮ ಆಫೀಸಿನ ಬಿಲ್ಡಿಂಗಿನಲ್ಲೇ ಇರುವುದರಿಂದ ಅಪಾದಿತರು, ಪೋಲೀಸರು, ಸುದ್ದಿಗಾಗಿ ಹದ್ದುಗಳಂತೆ ಕಾದಿರುವ ಮೀಡಿಯಾದವರು-ಇವರನ್ನೆಲ್ಲಾ ದಿನವೂ ದಾಟಿ ಆಫೀಸು ಪ್ರವೇಶಿಸುವುದು ನರಕವಾಗಿದೆ.

ಮಾದಕ ದ್ರವ್ಯಗಳ ಬಗೆಗಿನ ಚಿತ್ರರಂಗದ ನಂಟಿನ ಬಗ್ಗೆ ಅನುಮಾನ ಬರುವ ಸುದ್ದಿಯನ್ನು ನಾವು ಆಗಾಗ ಓದುತ್ತಿದ್ದರೂ, ಅವೆಲ್ಲ ನಮ್ಮ ಕನಸಿನ ಲೋಕಕ್ಕೂ ಕೊಳ್ಳಿ ಇಡುವಷ್ಟು ಶಕ್ತಿಶಾಲಿಯಾಗಿರಲಿಲ್ಲ. ನಮ್ಮ ವ್ಯಕ್ತಿತ್ವನ್ನು ರೂಪಿಸಿದ ಸಿನಿಮಾಗಳ, ನಾವು ಆರಾಧಿಸಿದ ನಾಯಕ ನಾಯಕಿಯರ ಆರಾಧನಾ ಲೋಕ ಹೀಗೆ ಪತನಗೊಳ್ಳುವುದನ್ನು ನಾವೆಂದೂ ಕಲ್ಪಿಸಿರಲಿಲ್ಲ.

ವಾಸ್ತವ ಮತ್ತು ಕನಸಿನ ಲೋಕಗಳೆರಡೂ ಭಗ್ನಗೊಂಡಿರುವ ಅಮ್ಚಿ ಮುಂಬೈ ಭವ್ಯ ಇಮಾರತುಗಳಲ್ಲಿ, ಖಾಲಿ ಜೋಪಡಿಗಳಲ್ಲಿ, ಬಿಕೋ ಎನ್ನುವ ಫ್ಲಾಟಫಾರ್ಮುಗಳಲ್ಲಿ, ಕಾಳುಗಳಿಲ್ಲದ ಕಬೂತರ ಖಾನಾಗಳಲ್ಲಿ, ಪ್ರೇಮಿಗಳಿಲ್ಲದ ಮರೀನ್ ಡ್ರೈವ್‌ನ ಸನ್‌ಸೆಟ್ಟುಗಳಲ್ಲಿ ಬಿಕ್ಕಳಿಸುತ್ತಿರುವಂತೆ ಕೇಳಿಸುತ್ತಿದೆ. ಈ ದುರಿತ ಕಾಲವನ್ನು ಕಾಲವೇ ದಾಟಿಸಬೇಕು!

‍ಲೇಖಕರು Avadhi

September 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Prakash N.

    ಗರ್ದಿಯಿಲ್ಲದ ಮುಂಬೈ ಊಹಿಸುವುದು ಕಷ್ಟ, ಚಿತ್ರಣ ಚೆನ್ನಾಗಿದೆ.

    ಪ್ರತಿಕ್ರಿಯೆ
  2. Shyamala Madhav

    ಈ ದುರಿತ ಕಾಲವನ್ನು ಕಾಲವೇ ದಾಟಿಸ ಬೇಕೆಂಬ ನಿಮ್ಮ ಮಾತು ಇಷ್ಟವಾಯ್ತು, ರಾಜೀವ್. ಎನ್ ಸಿ ಬಿ. ಕಛೇರಿ ಇರುವ ಕಟ್ಪಡದಲ್ಲೇ ಕಾರ್ಯನಿರತರಾಗಿರುವ ನಿಮ್ಮ ಬಗ್ಗೆ ಮರುಕ ವೆನಿಸುತ್ತದೆ. ಕ್ರಿಕೆಟ್ ಕಾಮೆಂಟ್ ರೀತಿ ರಿಯಾ, ರಿಯಾ ಎಂದು ಬೊಬ್ಬೆ ಹೊಡೆವ ಪತ್ರಕರ್ತರ ನಡುವೆ ……….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: