ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಮತ ಅರಸೀಕೆರೆ ಹೊಸ ಕವಿತೆ- ಅವರೀಗ ಜಾಣರಾಗಿದ್ದಾರೆ

ಮಮತ ಅರಸೀಕೆರೆ

ಬಾಣವೊಂದರಿಂದ ಹೊರಟ ಮತಿಗೇಡಿ ಬಿಲ್ಲೊಂದು ಘಾತಿಸಿದ್ದು ಜೀವಂತ ಕಂಡೂ ಅವರೇನು ಉಸಿರುಬಿಡುತ್ತಿಲ್ಲ

ದುರುಳ ಕಲ್ಲೊಂದು ಎಳೆ ಮಗುವಿನ ಸಿರಿಗಣ್ಣಿಗೆ ತಾಗಿ ಸುಳುಬುಳು ನೀರು ಸುರಿದರೂ ಒರೆಸಲು ಹೋಗುತ್ತಿಲ್ಲ

ಉರಿಬಿಸಿಲ ಧಗೆಯ ಕಿಡಿಯೊಂದು ಗುಡಿಸಲಿನ ಒಣ ಗರಿಕೆಗಳನ್ನು ಸುಡುತ್ತಿದ್ದರೂ ದಾಹವಾರಿಸಲು ಹಿಂಜರಿಕೆ
ಹೊಲದಲ್ಲಿ ಹುಲುಸಾಗಿ ಬೆಳೆದ ಪನ್ನೀರ ಬೆಳೆಗಳಿಗೆ ಹುಳುಹುಪ್ಪಡಿ ಮುತ್ತಿದರೂ ಕಂಡೂ ಕಾಣದಂತಿದ್ದಾರೆ

ಮಾನವೀಯ ಪ್ರತಿಕ್ರಿಯೆಯಿಲ್ಲದ
ಕುತೂಹಲದ ಕುರುಕು ನೋಟ ಅವರದು
ಕಿಡಿಗೇಡಿ ಕತ್ತಿಯೊಂದು
ಮಂದಿರದ ಮೂರ್ತಿ ವಿರೂಪಗೊಳಿಸಿದರೂ
ಕಠಾರಿಯ ಮೊನೆ ಮಸೀದಿಯ ಕಂಬಗಳ
ಕೆತ್ತಿ ಅಂದಗೆಡಿಸಿದರೂ
ಇಗರ್ಜಿ ಶಿಲುಬೆಯ ರೆಂಬೆಗಳೆಲ್ಲಾ
ಚೂರುಚೂರಾಗಿ ಚೆಲ್ಲಾಪಿಲ್ಲಿಯಾಗಿದ್ದರೂ
ಚಾಕು ಚೂರಿ ಬೆಂಕಿಯ ಮೇಲೇನೂ
ಕೋಪಗೊಳ್ಳುತ್ತಿಲ್ಲ
ಹುಲ್ಲೆಯೊಂದರ ಆರ್ತನಾದ ಈ ಬದಿಯದ್ದಲ್ಲ
ಆ ಬದಿಯ ತ್ರಾಸು ತಕರಾರಾಗಿರುವಾಗ
ಇಲ್ಲದ ಉಸಾಬರಿ ನಮಗೇಕೆಂದು
ಶಾಂತಿ ಕಾಪಾಡುವ ಯತ್ನದಲ್ಲಿದ್ದಾರೆ

ಊರೂರ ಬೀದಿಗಳು ಕೆಂಡಾಮಂಡಲವಾಗಿ
ರಸ್ತೆಗಳೆಲ್ಲ ಹೆಜ್ಜೆಯೂರಲೂ ಅಸಾಧ್ಯವಾದಾಗ
ಅವರವರ ಕಾಲುಗಳಿಗೆ ಪಾದರಕ್ಷೆ ತೊಡಿಸಿರುತ್ತಾರೆ
ಉಸಿರಾಟಕ್ಕೆ ತ್ರಾಸವಾಗಿ ಗಿಡಗಂಟಿಗಳು ಬೆವರು ಹರಿಸಿದರೂ ಅಂತವರ ಕಾಪಾಡಲು ತಲೆಯ ಮೇಲೊಂದು ಸೂರು ಭದ್ರ ಸುರಕ್ಷಿತ

ಹಸಿದ ಹೊಟ್ಟೆಗಳಿಗೀಗ ಒಣಹುಲ್ಲು
ಕತ್ತರಿಸಿದರೂ ಭರಪೂರ ಮೇವು,
ಬೆನ್ನ ಹಿಂದೆ ಹರಿದ ಬನೀನಿನಲ್ಲಿ
ದೊರೆಯ ಬಹುಪರಾಕು ಚಿತ್ರ,
ಹಿಡಿ ನೀರು ಬೇಕಾದಾಗ ಬೊಗಸೆಯಲ್ಲಿ
ಹಿಡಿಸಿ ಕುಡಿಸಿದರು ಮೂತ್ರ,
ಗೊತ್ತೇ ಆಗುವುದಿಲ್ಲ ನೋಡಿ
ಸುದ್ದಿಗಳಿಗೇನು ಬರ
ಕಿರುಗಣ್ಣಲ್ಲಿ ಓದಿ ಮರೆತುಬಿಡುತ್ತಾರೆ, ನಂತರ
ಪತ್ರಿಕೆ ಮೂಲೆಗೆಸೆಯುತ್ತಾರೆ.

ಯಾರು ನೊಂದರೆ ಅವರಿಗೇನು?
ಕಾಳಜಿಗೆ ಸಾಕ್ಷಿಯಾಗಿ ಬುದ್ಧನ ಕಿರುನಗುವಿನ ಚಿತ್ರ ಗೋಡೆಯಲ್ಲಿ ತೂಗುತ್ತಿಲ್ಲವೇನು!

ಬೀದಿಯಲ್ಲಿ ಬಿದ್ದ ಹೆಣಗಳ ರಾಶಿಯ
ಫೋಟೋಗಳಿಗೆ ತಪ್ಪದೆ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತ ಮಮ್ಮಲ ಮರುಗುತ್ತಾರೆ

ಅವೇ ಬಾಣ, ಕತ್ತಿ, ಬಂದೂಕಿನ ಮೊನೆಗಳು ನಾಳೆ ಎಲ್ಲರನ್ನೂ ಗುರಿ ತುದಿಯಲ್ಲಿರಬಹುದೆಂಬ
ಬರೀ ಊಹಾಪೋಹದ ಆಲೋಚನೆಯನ್ನು ಬದಿಗೆ ಸರಿಸಿ
ಅವರೆಲ್ಲ ಈಗ ಜಾಣ-ಜಾಣೆಯರಾಗಿದ್ದಾರೆ.

‍ಲೇಖಕರು Avadhi

30 May, 2021

4 Comments

  1. Kiran Bhat

    ಒಳ್ಳೆಯ ಕವಿತೆ.
    ನಿಜ.ಈಗ ಬೇಕಾಗಿರೋದು
    ‘ ನೆಲಕೆ ಕಾಲುಗಳ ಬರವಣಿಗೆ’
    ( ಸಿದ್ಧಲಿಂಗಯ್ಯ)

  2. ನಾ ದಾ ಶೆಟ್ಟಿ

    ಮಮತ, ನಾವೆಲ್ಲರೂ ಹಾಗೆಯೇ ಆಗಿದ್ದೇವೆ. ಒಂದು ಬಗೆಯ ಸ್ಥಿತಪ್ರಜ್ಞತೆ!

  3. km vasundhara

    ಬಹಳ ವಾಸ್ತವದ ಕಟು ಕವಿತೆ..

  4. ಚಂದ್ರಪ್ರಭ ಕಠಾರಿ

    ಸುತ್ತಮುತ್ತಲಿನ ಯಾವುದೇ ನೋವಿಗೆ ಸ್ಪಂದಿಸದ ಆಷಾಢಭೂತಿ ಸಮಾಜದ ಮುಖವನ್ನು ಕವನ ಅನಾವರಣಗೊಳಿಸುತ್ತದೆ, ವ್ಯಂಗ್ಯವಾಗಿ ಕುಟುಕುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading