ದೇವಭೂಮಿಯಲ್ಲಿ ಕಣ್ಣೆದುರಲ್ಲೇ ಸ್ವರ್ಗಲೋಕ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ನನ್ನೂರಿಂದ ಒಂದು ೧೦-೧೫ ಕಿಮೀ ದೂರದಲ್ಲಿ ಸ್ವರ್ಗ ಅಂತೊಂದು ಊರಿದೆ. ನಾವೆಲ್ಲ ಸಣ್ಣವರಿದ್ದಾಗ, ಕ್ಲಾಸಿನಲ್ಲಿ ಕೂತು, ʻಅವನು ದಿನಾ ಸ್ವರ್ಗದಿಂದ ಬರೋದುʼ, ʻಇವಳ ಮನೆ ಸ್ವರ್ಗದಲ್ಲಿʼ ಎಂದೆಲ್ಲ ಮಾತಾಡಿಕೊಂಡು ನಗುತ್ತಿದ್ದೆವು. ಖಾಸಗಿ ಬಸ್ಸುಗಳೆಲ್ಲ, ವಿಟ್ಲದ ಬಸ್‌ ಸ್ಟಾಂಡಿನಲ್ಲಿ ನಿಂತು ನಮ್ಮ ಬಸ್ಸಿಗೆ ಮೊದಲು ಹತ್ತಲಿ ಎಂಬಂತೆ ಜಿದ್ದಿಗೆ ಬಿದ್ದು ʻಸ್ವರ್ಗ, ಸ್ವರ್ಗʼ ಎಂದು ಕರೆಯುತ್ತಿದ್ದುದು ಕೂಡಾ ನಮಗೆ ಅಷ್ಟೇ ತಮಾಷೆಯ ಸಂಗತಿ. ಖಾಸಗಿ ಬಸ್ಸುಗಳು ಓಡಿಸುತ್ತಿದ್ದ ವೇಗಕ್ಕೆ ಮಾತ್ರ, ಸ್ವರ್ಗದ ಬಸ್ಸಿನಲ್ಲಿ ಕೂತರೆ ನಿಜಕ್ಕೂ ಈ ಬಸ್ಸು ನನ್ನನ್ನು ಸ್ವರ್ಗಕ್ಕೇ ನೇರವಾಗಿ ಕರೆದೊಯ್ಯದಿದ್ದರೆ ಸಾಕು ಎಂದು ಉಸಿರು ಬಿಗಿಹಿಡಿದುಕೊಳ್ಳುತ್ತಿದ್ದೆ. ಒಟ್ಟಾರೆ ಈ ಸ್ವರ್ಗ ಬಿಟ್ಟರೆ, ಆಗ ನಾನು ಸ್ವರ್ಗ ಕಂಡಿದ್ದೆಲ್ಲ ಕನಸಿನಲ್ಲಿ, ಇಲ್ಲವೇ ಟಿವಿಯಲ್ಲಿ.

ನಮಗೆ ಸ್ವರ್ಗ ಎಂದರೆ ಅದೆಂಥದೋ ಪುಳಕ. ಭೂಮಿಯ ಮೇಲಿನ ಚಂದದ ಯಾವುದೇ ದೃಶ್ಯ ಕಂಡರೂ ಮನಸ್ಸು ಬಹುಬೇಗ ಸ್ವರ್ಗದೊಂದಿಗೆ ಅದರ ಕಲ್ಪನೆ ಮಾಡಿಕೊಳ್ಳುತ್ತದೆ. ಆಗ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರಾವಾಹಿಗಳಂತೂ ನಮ್ಮ ಸ್ವರ್ಗದ ಕಲ್ಪನೆಯನ್ನು ಇನ್ನಷ್ಟು ಸರಳ ಮಾಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ೯೦ರ ದಶಕದ ಮಕ್ಕಳ ಮೆದುಳಿನಲ್ಲಿ ಇವೆಲ್ಲ ಕ್ಲಾಸಿಕ್‌ ಚಿತ್ರಗಳು!  ನಾನೇನೂ ಇದಕ್ಕೆ ಹೊರತಲ್ಲ.

ಮೊನ್ನೆ ಮೊನ್ನೆ ಎರಡು ತಿಂಗಳ ಹಿಂದೆ, ಉತ್ತರಾಖಂಡದ ಸಾಂಕ್ರಿ ಹಳ್ಳಿಯಿಂದ ಚಳಿಗಾಲದ ಹಿತವೆನಿಸುವ ಬಿಸಿಲಿನಲ್ಲಿ ಕೇದಾರಕಂಠಕ್ಕೆ ಚಾರಣ ಹೊರಟಿದ್ದೆವು. ಎದುರು ನಾಲ್ಕು ಚೂಪುಚೂಪು  ಹಿಮ್ಮಚ್ಛಾದಿತ ಶಿಖರಗಳು ಜೋಡಿಜೋಡಿಯಾಗಿ ನಿಂತಿದ್ದು ಕಾಣಿಸಿತು. ʻಅರೆ, ಈ ಶಿಖರಗಳು ಒಂಥರಾ ಅದ್ಭುತವಾಗಿ ಕಾಣಿಸ್ತಿವೆಯಲ್ಲ? ಇದ್ಯಾವುದು?ʼ ಎಂದೆ ನಮ್ಮ ಗೈಡ್‌ ಬಳಿ. 

ʻಇದಾ! ಇದು ಸ್ವರ್ಗಾರೋಹಿಣಿʼ ಎಂದ. ʻಸ್ವರ್ಗಾರೋಹಿಣಿಯ ದರ್ಶನ ಇಲ್ಲಿಂದಲೂ ಆಗುತ್ತದೆ ಎಂದು ಗೊತ್ತಿರಲಿಲ್ಲʼ ಎಂದೆ. ʻನಾಲ್ಕು ಶಿಖರಗಳ ಬೇರೆಯದೇ ಆಯಾಮದಿಂದ ದಿವ್ಯದರ್ಶನ ಆಗೋದು ಇಲ್ಲಿಂದಲೇ. ಸಮ್ಮಿಟ್‌ನಲ್ಲಿ ಇನ್ನೂ ಚಂದ ಕಾಣಿಸುತ್ತದೆ, ಅಲ್ಲಿಯೂ ನೋಡುವಿರಂತೆʼ ಎಂದ.

ನಮ್ಮ ಮೂರನೇ ದಿನ ತಲುಪಲಿದ್ದ ಸಮ್ಮಿಟ್‌ನ ಕನಸಿನಲ್ಲಿ ಈ ಸ್ವರ್ಗ ಬರತೊಡಗಿತ್ತು. ಆದರೆ, ದಿಢೀರ್‌ ಬದಲಾದ ಹವಾಮಾನ, ಹಿಮಪಾತದಿಂದ ಇನ್ನೇನು ಒಂದೂವರೆ ಕಿಮೀ ಮಾತ್ರ ಹತ್ತಲು ಬಾಕಿ ಎಂಬಷ್ಟರಲ್ಲಿ ಇಳಿಯುವ ಪ್ರಸಂಗ ಬಂತು. ನೀಲಿಯಾಗಸದ ಕ್ಯಾನ್ವಾಸನ್ನು ಕ್ಷಣಾರ್ಧದಲ್ಲಿ ಬದಲಾಯಿಸಿದ ಮೋಡಗಳು ಹಿಮವಾಗಿ ದಪದಪನೆ ಬೀಳಲಾರಂಭಿಸಿತ್ತು. ನಮ್ಮಿಂದ ಮೊದಲು ಹೋದವರಲ್ಲಿ ಕೆಲವರು ಮೇಲೆ ತಲುಪಿದ್ದು ಕಣ್ಣಿಗೆ ಕಾಣಿಸುವಂತಿತ್ತು. ಹಿಂದೆ ಇದ್ದವರೂ ಎಲ್ಲಿದ್ದರೋ ಅಲ್ಲಿಂದಲೇ ಹಿಂತಿರುಗಿದರು.

ಒಟ್ಟಾರೆ ಕ್ಷಣಾರ್ಧದಲ್ಲಿ ಈ ಇಡೀ ಘಟನೆ, ʻಪ್ರಕೃತಿ ಎಷ್ಟು ನಿಗೂಢ ವಿಸ್ಮಯ, ಮನುಷ್ಯನೆಂಬಾತನ ಆಟಗಳು ಇದರ ಮುಂದೆ ಏನೇನೂ ಅಲ್ಲʼ ಎಂಬ ನಮ್ಮ ನಂಬಿಕೆಯನ್ನು ಇನ್ನೂ ಗಟ್ಟಿಯಾಗಿಸುವಲ್ಲಿ ಮತ್ತೆ ಯಶಸ್ವಿಯಾಯಿತು. ಆದರೆ, ಹೆಪ್ಪುಗಟ್ಟಿ ಕಪ್ಪಿಟ್ಟಿದ್ದ ಆಗಸದಲ್ಲಿ ಒಂದೇ ಒಂದು ಹಿಮಬೆಟ್ಟವೂ ದರ್ಶನ ನೀಡದೆ, ಮಂಜಿನೊಡದೆ ಮಂಜಾದ ನಾವು ನಡೆವ ಹಾದಿಯಷ್ಟೆ ಇಹಲೋಕದ ಸತ್ಯ ಎಂಬಂತೆ ಕಣ್ಣೆದುರಿತ್ತು.

ಅಕ್ಷರಶಃ ಆ ಕ್ಷಣ ಮಹಾಭಾರತದ ಮಹಾಪ್ರಸ್ಥಾನ ಪರ್ವವನ್ನೇ ನೆನಪಿಸಿತು. ಈ ನೆನಪಿಗೆ ಇನ್ನೂ ಪುಷ್ಟಿ ಕೊಡಲು ನಮ್ಮ ಜೊತೆ ಹಿಂದಿನಿಂದಲೇ ನಾಯಿಯೂ ಒಂದಿತ್ತು. ಇನ್ಯಾರೋ ಒಬ್ಬ ಚಾರಣಿಗ ಟೀ ಕುಡಿದು ಬಿಸ್ಕತ್ತು ಪ್ಯಾಕೆಟ್ಟು ತೆರೆದನೋ, ನಾಯಿ ʻನೀನೇ ನನ್ನ ಧರ್ಮರಾಯʼ ಎಂಬಂತೆ ನಮ್ಮನ್ನು ಬಿಟ್ಟು ಅವನ ಬೆನ್ನು ಹಿಡಿದು ಜೊಲ್ಲು ಸುರಿಸತೊಡಗಿತು.

ನಾಯಿಯನ್ನು ಮಾತ್ರ ನನ್ನ ಜೊತೆಗೇ ಇರಿಸುವೆ ಎಂದು ಮಗರಾಯ ಮಾತ್ರ, ʻಮುಂದೆ ತನ್ನ ಹೊಟ್ಟೆಗೇನಿದೆʼ ಎಂಬ ಯೋಚನೆಯೂ ಮಾಡದೆ, ನನ್ನ ಬ್ಯಾಗ್‌ ತಡಕಾಡಿ ಅದೆಲ್ಲಿಂದಲೋ ಮೂಲೆಯಿಂದ ಬಿಸ್ಕತ್ತು ಪ್ಯಾಕೆಟ್ಟು ತೆಗೆದು, ಮತ್ತೆ ನಾಯಿಯನ್ನು ʻಅವನಲ್ಲ, ನಾನೇ ಧರ್ಮರಾಯʼ ಎಂದು ಒಪ್ಪಿಸುವಲ್ಲಿ ಯಶಸ್ವಿಯಾದ. ಇಂತಿಷ್ಟೇ ಎಂದು ಲೆಕ್ಕಾಚಾರ ಹಾಕಿ ಬ್ಯಾಗೊಳಗೆ ಇಟ್ಟಿದ್ದ ಒಂದು ಪ್ಯಾಕೆಟ್ಟಿಡೀ ನಿಮಿಷದಲ್ಲಿ ನಾಯಿ ಬಾಯಿಯೊಳಗೆ ಹೋಗಿ ಕರಗಿದ್ದಕ್ಕೆ ಕಳವಳವಾಗಹತ್ತಿತು. ಇಂತಹ ಚಾರಣಗಳಷ್ಟೇ, ಒಂದು ಹನಿ ನೀರು, ಒಂದು ಬಿಸ್ಕತ್ತಿನ ಬೆಲೆಯನ್ನೂ ನಮಗೆ ಹೇಳಿಕೊಡುವಲ್ಲಿ ಯಶಸ್ವಿಯಾಗುವುದು!

ಇರಲಿ. ಅಂತೂ ಇಂತೂ ಚಾರಣ ಶುರು ಮಾಡಿದಾಗ ಸಿಕ್ಕ ದಿವ್ಯ ದರ್ಶನ ಮತ್ತೆ ಆಗಲಿಲ್ಲ. ಇಳಿಯುವಾಗ ಮತ್ತೆ ಸರಿಯಾದ ಫೋಟೋ ತೆಗೆಯಬೇಕೆಂದುಕೊಂಡೆ. ಆಗಲೂ ಸಿಗಲಿಲ್ಲ, ನೀಲಾಕಾಶದ ಬೆಳ್ಮೋಡಗಳು ಎಲ್ಲವನ್ನು ಬೆಳ್ಳನೆ ಮಾಡಿಬಿಟ್ಟಿದ್ದವು. ಇದನ್ನೇ ದುರಾದೃಷ್ಟ ಎನ್ನುವುದು. ಕಾಡೊಳಗಿನ ಸಫಾರಿಯಲ್ಲಿ ಹುಲಿಯ ದರ್ಶನಕ್ಕೆ ಹೇಗೆ ಅದೃಷ್ಟ ಮಾಡಿರಬೇಕೋ ಹಾಗೆಯೇ, ಶುಭ್ರಾಕಾಶದಲ್ಲಿ ಇಂಥ ಹಿಮಪರ್ವತಗಳನ್ನು ನೋಡಲೂ ಕೂಡ ಅದೃಷ್ಟ ಮಾಡಿರಬೇಕು. ಕಡೇ ಪಕ್ಷ, ಮೊದಲ ದಿನವಾದರೂ ಸಿಕ್ಕದ ಚಿತ್ರ ಸರಿಯಾಗಿದೆಯಾ ಎಂದು ಪರಿಕ್ಷಿಸಿಕೊಂಡೆ. ಪರವಾಗಿಲ್ಲ ಎನಿಸಿ, ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡೆ.

ಕಳೆದ ವಾರದ ಅಂಕಣದಲ್ಲಿ ಚಹಾದ ಕಥೆಯ ಹೇಳಿದ ಮಾಣಾ ಎಂಬ ಉತ್ತರಾಖಂಡದಲ್ಲಿರುವ ಭಾರತದ ಕೊನೆಯ ಹಳ್ಳಿಯ ಮೂಲಕವೇ ಪಾಂಡವರು ತಮ್ಮ ಅಂತಿಮ ಯಾತ್ರೆಯನ್ನು ಪ್ರಾರಂಭಿಸಿದ್ದು ಎಂದು ಬರೆದಿದ್ದೆ. ಹಾಗೆ ನೋಡಿದರೆ ಮಾಣಾ ದಾರಿಯ ಸ್ವರ್ಗಾರೋಹಿಣಿಯ ಚಾರಣದ ಮೊದಲ ಏಳು ಕಿಮೀ ನಾವು ಎರಡು ವರ್ಷದ ಹಿಂದೆಯೇ ನಡೆದಿದ್ದೆ.

ಒಮ್ಮೆ ಚಳಿಗಾಲದ ಹಿಮದಲ್ಲಿ ಒಂದೆರಡು ಕಿಮೀ ಹೋಗಿ ನೋಡಿ ವಾಪಾಸು ಬಂದು, ಇನ್ನೊಮ್ಮೆ ಮಳೆಗಾಲದಲ್ಲಿ ಹಸಿರುದಾರಿಯಲ್ಲಿ, ಮೋಡಗಳೆಡೆಯಲ್ಲಿ ವಸುಧಾರಾ ಜಲಪಾತದವರೆಗೆ ಚಾರಣ ಮಾಡಿದ್ದೆವು. ಅದಾದ ಮೇಲೆ ನಾಲ್ಕೈದು ದಿನ ಚಾರಣ ಮಾಡಿದರೆ ಸತೋಪಂತ್‌ ಎಂಬ ಸ್ಪಟಿಕ ಶುದ್ಧ ಸರೋವರ ಸಿಗುತ್ತದೆ. ಇದನ್ನೂ ದಾಟಿ ದಿನಗಟ್ಟಲೆ ನಡೆದರೆ ಸ್ವರ್ಗಾರೋಹಿಣಿ ಎಂದು ಗೊತ್ತಿತ್ತು. ಆದರೆ ಆಗ ಇದ್ದ ಸಮಯಕ್ಕೆ ಇಷ್ಟೇ ಮಾಡಿ ವಾಪಾಸಾಗಿದ್ದೆವು.

ಮಾಣಾದೊಂದಿಗೆ ಹಲವಾರು ಕಥೆಗಳು ಬೆಸೆದುಕೊಂಡಿವೆ. ವೇದವ್ಯಾಸರು, ಇಲ್ಲೇ ಕೂತು ಮಹಾಭಾರತ ಕಥೆ ಬರೆದರೆಂದು ಹೇಳಲಾಗುವ ವ್ಯಾಸ ಗುಹೆ ಇಲ್ಲಿದೆ. ವ್ಯಾಸರು ಹೇಳುತ್ತಾ ಹೋದ ಕಥೆಯನ್ನು ಬರೆದ ಗಣೇಶನ ನೆನಪಿಗೆ ಗಣೇಶ ಗುಹೆಯೂ ಇದೆ. ಸ್ವಲ್ಪ ನಡೆದರೆ ಸಿಕ್ಕುವ ಗುಪ್ತಗಾಮಿನಿ ಎಂದೇ ನಂಬಲಾಗುವ ಸರಸ್ವತಿ ನದಿ, ಹಿಮಪರ್ವತದೆಡೆಯಿಂದ ಹರಿದು ಬಂದು ದರ್ಶನ ನೀಡಿ ಅಲಕನಂದೆಯೊಂದಿಗೆ ಮಾಯವಾಗುತ್ತಾಳೆ.

ಸರಸ್ವತಿಯನ್ನು ದಾಟಲು ಕಷ್ಟಬಡುವ ದ್ರೌಪದಿಗೆ ಸಹಾಯವಾಗಲೆಂದು ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನು ಪೇರಿಸಿಟ್ಟು ಭೀಮನೇ ಸೇತುವೆ ಮಾಡಿದ ಎಂದು ಹೇಳಲಾಗುವ ಬಂಡೆಯ ಸೇತುವೆಯೂ ಕೂಡ ಈಗಿನ ಸೇತುವೆಗಂಟಿದಂತೆ ಅಡಿಯಿಂದ ಒತ್ತೊತ್ತಾಗಿ ಇರುವಂತೆ ಕಾಣಿಸುತ್ತದೆ. ಒಟ್ಟಾರೆ ಕಲ್ಪನಾ ಲೋಕದು ನೈಜ ದೃಶ್ಯಾವಳಿಗಳೆಲ್ಲ ಕೂಡಿಕೊಂಡು ಹಳೆ ಸಿನೆಮಾವೊಂದು ತ್ರೀಡಿ ಮಾದರಿಗೆ ಪರಿವರ್ತನೆಗೊಂಡು ರಿರಿಲೀಸ್‌ ಆದಂತೆ ಭಾಸವಾಗುತ್ತದೆ.

ಈ ಮಾಣಾ ಎಂಬ ಪುಟ್ಟ ಹಳ್ಳಿ ಸ್ವರ್ಗಕ್ಕೆ ಹೆಬ್ಬಾಗಿಲು ಎಂದರೂ ತಪ್ಪಲ್ಲ. ಮಹಾಭಾರತದ ಕಾಡುವ ಕಥೆಯಾಗಿ ಉಳಿಯುವುದು ಪಾಂಡವರ ಈ ಸ್ವರ್ಗಾರೋಹಣ. ಅವರನ್ನು ಹಿಂಬಾಲಿಸುವ ಯಮಧರ್ಮನ ರೂಪವಾದ ಒಂದು ನಾಯಿ. ದ್ರೌಪದಿಯಿಂದ ಮೊದಲ್ಗೊಂಡು ಭೀಮನವರೆಗೆ ಒಬ್ಬೊಬ್ಬರಾಗಿ ದಾರಿಯಲ್ಲಿ ಮೃತರಾದರೆ ಕೊನೆಗೆ ಸಶರೀರವಾಗಿ ಸ್ವರ್ಗ ತಲುಪುದು ಧರ್ಮರಾಯ ಮತ್ತು ಆತನನ್ನು ಹಿಂಬಾಲಿದ ನಾಯಿ. ತನಗೆ ಮಾತ್ರ ಸುಲಭವಾಗಿ ಸ್ವರ್ಗಕ್ಕೆ ಹೋಗಲು ಅವಕಾಶ ಬಂದರೂ ನಾಯಿಯನ್ನು ಬಿಡಲು ಮನಸ್ಸೊಪ್ಪದ ಧರ್ಮರಾಯ ಈ ಪರೀಕ್ಷೆಯಲ್ಲೂ ಗೆಲ್ಲುತ್ತಾನೆ.

ಹೀಗೆ ಅವರು ಹೋದ ಹಾದಿ ಮಾಣಾದಿಂದಲೇ ಎಂಬುದಕ್ಕೂ ಇಲ್ಲಿ ಸಾಕಷ್ಟು ಕಥೆಗಳಿವೆ. ಮಾಣಾ ದಾಟಿ, ವಸುಧಾರಾ ಜಲಪಾತದ ಹಾದಿಯಾಗಿ, ಧಾನೋ ನೀರ್ಗಲ್ಲುಗಳು, ಲಕ್ಷ್ಮೀವನ, ಸತೋಪಂಥ್‌ ಸರೋವರ, ಸೂರ್ಯಕುಂಡ, ಚಂದ್ರಕುಂಡಗಳೆಲ್ಲವನ್ನೂ ದಾಟಿ ಸ್ವರ್ಗಾರೋಹಿಣಿಯ ಕಡೆ ತೆರಳುತ್ತಾನೆ ಎಂಬುದು ಇಲ್ಲಿನ ಸ್ಥಳೀಯರು ಈ ಮಹಾಪ್ರಸ್ಥಾನಕ್ಕೆ ಕೊಡುವ ಭೌಗೋಳಿಕ ವಿವರಣೆ.

ಇಲ್ಲಿ ಧರ್ಮರಾಯನೂ ಕೂಡಾ ಸ್ವರ್ಗಾರೋಹಿಣಿ ಶಿಖರದ ತುದಿ ಮುಟ್ಟಲು ಹೋಗಿದ್ದಲ್ಲ, ಸ್ವರ್ಗಾರೋಹಿಣಿಯ ನೀರ್ಗಲ್ಲುಗಳನ್ನು ದಾಟಿರುವ ವಿವರಣೆಗಳು ಮಾತ್ರ ಇವೆ. ಹೀಗಾಗಿ ಸ್ವರ್ಗಾರೋಹಿಣಿಯೆಂಬ ಹೆಸರೇ ಪಾಂಡವರ ಈ ಮಹಾಪ್ರಸ್ಥಾನದಿಂದ ಬಂದದ್ದು ಎಂಬ ವಿವರಣೆಗಳು ಇಲ್ಲಿ ಸಿಗುತ್ತದೆ. ಹೀಗಾಗಿ ಈಗಲೂ ಈ ಕಲಿಗಾಲದಲ್ಲಿ ಸ್ವರ್ಗವನ್ನು ಬದುಕಿದ್ದಾಗಲೇ ನೋಡಬೇಕೆಂದರೆ ಸ್ವರ್ಗಾರೋಹಿಣಿಯನ್ನೇರಬೇಕು ಎಂಬುದು ನಂಬಿಕೆ.

ಅಂದಹಾಗೆ, ಎತ್ತರೆತ್ತರದ ಹಿಮಚ್ಛಾದಿತ ಹಿಮಾಲಯ ಪರ್ವತಗಳ ಪೈಕಿ ಸ್ವರ್ಗಾರೋಹಿಣಿಯೇನೂ ಅಂತಹ ಮಹಾ ಎತ್ತರ ಅಂತೇನಿಲ್ಲ. ಆದರೆ, ಎತ್ತರಕ್ಕಿಂತಲೂ, ಇದರ ವಿಭಿನ್ನ ಆಕಾರವೇ ಇದನ್ನು ಹತ್ತಲು ಸವಾಲಾಗಿಸಿದೆ.  ಈ ಚಾರಣವೇನೂ ಸುಲಭವಲ್ಲ. ೬೨೫೨ ಮೀಟರ್ ಎತ್ತರವಿರುವ ಬಹು ಕಠಿಣವಾದ ಚಾರಣ. ಅದರಲ್ಲೂ ಕೊನೆಯ ಹಂತ ಬಹು ಕಷ್ಟವಾದದ್ದು. ೧೯೯೪ರವರೆಗೆ ಸುಮಾರು ೧೫ ಮಂದಿ ಇದನ್ನು ಹತ್ತಲು ಪ್ರಯತ್ನಿಸಿದ್ದಾರೆ. ಶಿಖರವನ್ನು ಪಶ್ಚಿಮದ ಭಾಗದಿಂದ ಹತ್ತಿದವರು ಯಶಸ್ವಿಯಾದರೆ, ದಕ್ಷಿಣದ ಭಾಗದಿಂದ ಹತ್ತಿದವರು, ಸಾಧ್ಯವಾಗದೆ ಮರಳಿದ್ದಾರೆ. ಒಟ್ಟಾರೆ, ಕಣ್ಣೆದುರಲ್ಲೇ ಭವ್ಯವಾಗಿ ಕಾಣುವ ಭೂಲೋಕದ ಸ್ವರ್ಗವನ್ನು ಸಶರೀರವಾಗಿ ನೋಡುವುದೂ ಕೂಡಾ ಸುಲಭವಲ್ಲ.

ಸ್ವರ್ಗಾರೋಹಿಣಿಯದ್ದು ಒಂದು ಕಥೆಯಾದರೆ, ಉಲ್ಲೇಖಗಳ ಪ್ರಕಾರ ಪಾಂಡವರ ಈ ಮಹಾಪ್ರಸ್ಥಾನದ ಹಿಮಶಿಖರ ಸುಮೇರು ಎನ್ನಲಾಗುತ್ತದೆ. ಭೌಗೋಳಿಕವಾಗಿ ಹುಡುಕಿ ನೋಡಿದರೆ ಸುಮೇರು ಕೂಡಾ ಇದೇ ಗಡ್ವಾಲ್‌ ಹಿಮಾಲಯ ಶ್ರೇಣಿಯದ್ದೇ ಒಂದು ಭಾಗವಾಗಿದ್ದು ಇದು ಸ್ವರ್ಗಾರೋಹಿಣಿಗೂ ಇನ್ನೂ ಸ್ವಲ್ಪವೇ ದೂರದಲ್ಲಿದ್ದು ಅದಕ್ಕಿಂತಲೂ ಎತ್ತರದಲ್ಲಿದೆ.

ಅದಕ್ಕೇ ಹೇಳುವುದು ಉತ್ತರಾಖಂಡ ದೇವಭೂಮಿ!

‍ಲೇಖಕರು Avadhi

May 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: