ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಗೆದ್ದ ಪಾರ್ಥನ ಸರದಿಗೆ ಕಾಯಬೇಕು ಇನ್ನೆರಡು ವರ್ಷ..

ದ್ರೌಪದಿಯ ಸ್ವಗತ..?

-ಡಾ.ಶಿವಾನಂದ ಕುಬಸದ


“ಐದೂ ಜನ ಹಂಚಿಕೊಳ್ಳಿರಿ…”
ಅರ್ಥವಿಲ್ಲದ ಅಪ್ರಯತ್ನ ಮಾತಿಗೆ
ಕ್ಷಣಮಾತ್ರದಲ್ಲಿ ಹಂಚಿಹೋಗಿಬಿಟ್ಟೆ
ಅರಸ ಗೆದ್ದು ತಂದ ನಿರ್ಜೀವ ಸೊತ್ತಿನ ಹಾಗೆ…
 
ರಾಜಮಾತೆ ಕುಂತಿ ಅವಳ ಅತಿರಥ
ಮಹಾರಥ ಧರ್ಮದುರಂಧರ ಪುತ್ರರು
ಯೋಚಿಸಲಿಲ್ಲೊಂದರಘಳಿಗೆ
ನನ್ನ ಮನದಲ್ಲೇನಿರಬಹುದೆಂದು
 
ಮೊದಲ ವರ್ಷ ಧರ್ಮನ ಮಹಿಷಿ
ಮುಂದೆ ವರ್ಷಕ್ಕೊಬ್ಬನ ಮಡದಿ
ಮೈಯ ಹಂಚಿಕೊಳ್ಳಬಹುದು ಒಂದಿಷ್ಟು
ಕಷ್ಟಪಟ್ಟು, ಆದರೆ ಮನಸ್ಸನ್ನು…?
 
ಯಜ್ಞಾಗ್ನಿಯಿಂದ ಉದ್ಭವಿಸಿದವಳ
ಸಮಾಧಾನಿಸಲು ಪತಿವ್ರತೆಯ ಪಟ್ಟ
ಮನಗೆದ್ದ ಪಾರ್ಥನ ಸರದಿಗೆ
ಕಾಯಬೇಕು ಇನ್ನೆರಡು ವರ್ಷ
 
ಬಿಲ್ಲಿಗೆ ಹೆದೆಯೇರಿಸಿ ತಿರುಗು ಮೀನಿನ
ಕಣ್ಣಿಗೆ ಗುರಿಯಿಟ್ಟವಗೆ ಹೇಗೆ ಅರ್ಥವಾಗಬೇಕು
ಹೆಣ್ಣು ಮನಸಿನ ಬಯಕೆಯೇನೆಂದು
ಒಂದೇ ಮಾತಿಗೆ ಹ್ಞೂಂಗುಟ್ಟಿಬಿಟ್ಟ
ಗೆದ್ದು ತಂದವಳನ್ನು ಹಂಚಿಕೊಳ್ಳಲು
 
ಇಂದ್ರಪ್ರಸ್ಥದಲಿ ನನ್ನ ಬಿಸಾಕಿ ಅತ್ತ
ತೀರ್ಥಯಾತ್ರೆಯ ನೆಪದಲಿ ಹೊರಟೇ ಬಿಟ್ಟ
ತಿರುಗಿ ಬಂದಾಗ ಮತ್ತೆ ಮೂರು
ಹೆಣ್ಣುಗಳ ಪಡೆದು ಸುಭದ್ರೆಯನ್ನು
ಜೊತೆಯಾಗಿಸಿಕೊಂಡು ಬಂದ
 
ಐದು ಜನರಲ್ಲಿ ಹಂಚಿಹೋದವಳೆಂದೇ
ಇರಬೇಕು ದುರ್ಯೋಧನ ದುಶ್ಯಾಸನ
ಕೀಚಕ ಕರ್ಣರು ನನ್ನೆಡೆ ಹಾಗೆ ನೋಡಿದ್ದು
ಎಷ್ಟು ಗಂಡಂದಿರಿದ್ದೇನುಪಯೋಗ ನನ್ನ
ಸೆರಗು ಸಭೆಯಲಿ ಚೆಲ್ಲಾಡಿ ಹೋಯಿತು
 
ಭೀಮಸೇನನೊಬ್ಬ ಕೀಚಕನ ಮುಗಿಸಿದ
ದುರ್ಯೋಧನನ ತೊಡೆ ಸೀಳಿ ದುಶ್ಯಾಸನನ
ಎದೆರಕ್ತ ಬಗಿದು ನನ್ನ ತುರುಬು ತಿದ್ದಿದ
ಆದರೇನು ಅಭಿಮನ್ಯುವಿನ ಮಹತು
ನನ್ನ ಮಕ್ಕಳಿಗಿಲ್ಲ ಅವರು ತಮ್ಮ
ಹೆತ್ತವರನುಳಿಸಲು ಹೇಳಹೆಸರಿಲ್ಲದಾದ
ಉಪ ಪಾಂಡವರು ಮಾತ್ರ…..!!
 

‍ಲೇಖಕರು avadhi

25 March, 2014

8 Comments

  1. ashwini rao.k.n.

    Super very nice sir..

  2. pratibha kage

    nice

  3. KBS

    grate

  4. samyuktha

    “ಎಷ್ಟು ಗಂಡಂದಿರಿದ್ದೇನುಪಯೋಗ ನನ್ನ
    ಸೆರಗು ಸಭೆಯಲಿ ಚೆಲ್ಲಾಡಿ ಹೋಯಿತು”…………ee saalugala horatu padisi, kavana mechchugeyayitu.

  5. kusuma

    Chennagide.

  6. mmshaik

    tumba chennagide..

  7. Aarvind

    Quite impressive as always.

  8. Anonymous

    suuuuuuuuuuuper sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading