ಮಧು ಸುಬ್ರಹ್ಮಣ್ಯ ಮೆಚ್ಚಿದ – ʼಮಕ್ಕಳಿಗಾಗಿ ಮಹಾತ್ಮʼ

ಮಧು ಸುಬ್ರಹ್ಮಣ್ಯ

ನಾವು ಸಣ್ಣವರಿರುವಾಗ ಬದುಕಿನ ಹಲವು ಮೌಲ್ಯಗಳನ್ನು ಮಹಾತ್ಮರುಗಳ ಸ್ಪೂರ್ತಿದಾಯಕ ಜೀವನಚರಿತ್ರೆಗಳನ್ನು ಕಥೆಗಳ ಮೂಲಕವೇ ತಿಳಿದುಕೊಂಡೆವು. ಎಳೆ ಮನಸ್ಸುಗಳಲ್ಲಿ ತ್ಯಾಗ, ಮಮತೆ, ಪ್ರೇಮ, ಸ್ವಾಭಿಮಾನ, ಘನತೆ-ಗೌರವ, ಮಾನವತೆಗಳಂತಹ ಮೌಲ್ಯಗಳೇ ಮೈವೆತ್ತ ಕಥೆಗಳು ಗಾಢವಾಗಿ ಅಚ್ಚೊತ್ತುವುವು. ಯಾವ ಕಥೆಗಂಟಿದ್ದ ಯಾವ ಮೌಲ್ಯ ಅದ್ಯಾವ ಮಾಯೆಯಲ್ಲಿ ಮನಸ್ಸಿನ ಕದ ತಟ್ಟಿ ಹೋಯಿತೋ, ನಾವೊಂದಿಷ್ಟು ಮನುಷ್ಯರಾದೆವು.

ಈಗಿನ ಮಿಂಚಿನ ವೇಗದ ಯುಗದಲ್ಲಿ ನಾವೆಲ್ಲ ಅತ್ತ ಸಂಪೂರ್ಣವಾಗಿ ಪೋಷಕರ ಪಾತ್ರದಲ್ಲೂ ತೊಡಗಿಕೊಳ್ಳಲು ಆಗದೆ ಇತ್ತ ಮಕ್ಕಳಿಗೆ ತಿಳಿ ಹೇಳಬೇಕಾದ್ದನ್ನು ತೊರೆದುಕೊಳ್ಳಲಾಗದೆ ತೊಳಲಾಡುತ್ತಿದ್ದೇವೆ. ಈ ಸಮಯದಲ್ಲಿ ಪುಟಾಣಿ ಹೂವಿನಂತಹ ಮಕ್ಕಳ ಕೋಮಲ ಮನಸ್ಸುಗಳಲ್ಲಿ ಮೌಲ್ಯಗಳ ಗಂಧ ತುಂಬಿ ಅವರನ್ನು ಮುಂದಿನ ಭವಿಷ್ಯಕ್ಕೆ ಮಾನವೀಯ ನೆಲೆಗಟ್ಟಿನ ಮೇಲೆ ಕಟ್ಟಿದ ಗಟ್ಟಿ ವ್ಯಕ್ತಿತ್ವವಾಗಿ ಪರಿವರ್ತಿಸಲು ‘ಮಕ್ಕಳಿಗಾಗಿ ಮಹಾತ್ಮ’ದಂತಹ ಪುಸ್ತಕಗಳು ತುರ್ತಾಗಿ ಬೇಕಾಗಿವೆ.

ಈ ಅಗತ್ಯವನ್ನು ಮನಗಂಡ ಸಾಮಾಜಿಕ ಕಳಕಳಿಯುಳ್ಳ ‘ಭಾರತ ಜ್ಞಾನ ವಿಜ್ಞಾನ ಸಮಿತಿ’ಯು ಇಂತಹ ಪುಸ್ತಕವೊಂದನ್ನು ಪ್ರಕಟಿಸುತ್ತಿದೆ. ಈ ಪುಸ್ತಕ ಈಗ ನೇಪಥ್ಯಕ್ಕೆ ಸರಿಯುತ್ತಿರುವ ಗಾಂಧಿಯೆಂಬ ಮಹಾಚೇತನವನ್ನು ಸರಳವಾಗಿ ಆಡಂಬರಗಳಿಲ್ಲದೆ ಮಕ್ಕಳಿಗೆ ಪರಿಚಯಿಸುತ್ತಿದೆ.

ಲೇಖಕ ಉದಯ ಗಾಂವಕಾರ ಕುಂದಾಪುರದ ಸಮೀಪದ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾಗಿದ್ದಾರೆ. ಪ್ರವೃತ್ತಿಯಿಂದ ಅನನ್ಯ ಚಿತ್ರಕಾರರೂ, ಬರಹಗಾರರೂ ಆಗಿರುವ ಇವರು ಬಹು ಸಾಮಾಜಿಕ ಕಳಕಳಿಯ ವ್ಯಕ್ತಿ. ಅವರೇ ರಚಿಸಿರುವ ರೇಖಾಚಿತ್ರಗಳು ಈ ಪುಸ್ತಕವನ್ನು ಅಂದಗೊಳಿಸಿವೆ. ಮಕ್ಕಳಿಗಾಗಿ ನಾಟಕಗಳ ರಚಿಸುತ್ತಾ, ರಂಗಶಿಬಿರಗಳನ್ನು ಸಂಘಟಿಸುತ್ತಾ ಸಮುದಾಯ ರಂಗ ಚಳುವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ತನ್ನ ಸುತ್ತಣ ಪ್ರಪಂಚದೆಡೆಗೆ ಯಾವಾಗಲೂ ತನ್ನ ಜ್ಞಾನ ಚಕ್ಷುವೊಂದನ್ನು ತೆರೆದೇ ಸಾಗುವ ಭಾವಜೀವಿ.

ಇವರ ಈ ಕಿರು ಕಥಾಸಂಕಲನಕ್ಕಾಗಿ ಅವರೇ ಆಸ್ಥೆಯಿಂದ ತಯಾರಿಸಿದ ಚಿತ್ರಗಳು ಈ ಪುಸ್ತಕದೊಳಗೆ ಅಡಗಿ ಕುಳಿತು ಓದುಗರಿಗೆ ಮುದ ನೀಡುತ್ತವೆ. ಐವತ್ತಕ್ಕೂ ಹೆಚ್ಚು ಪುಟ್ಟ ಕಥೆಗಳ ಗುಚ್ಛ ಆಗಾಗ ಬಾಯೊಳಗೆ ಅವಿತು ಕುಳಿತು ಸಿಹಿ ಒಸರುವ ಪುಟ್ಟ ಚಾಕಲೇಟುಗಳಂತೆ ಸ್ವಾದದೊಂದಿಗೆ ಅರಿವನ್ನು ಬೆರೆಸಿ ಮಕ್ಕಳಿಗೆ ನೀಡಬಲ್ಲಂಥವು.

ಈಗಾಗಲೇ ಈ ಪುಸ್ತಕವು ತನ್ನ ಓದುಗರ ಮಡಿಲಿಗೆ ಬೀಳಲು ಸಿದ್ಧವಾಗಿರಬಹುದು ಅಥವಾ ಅದಾಗಲೇ ಹಲವರ ಕೈಯೊಳಗೆ ಕಿಲಕಿಲಗುಡುತ್ತಲೂ ಇರಬಹುದು. ಇಂದಿನ ಗೊಂದಲಮಯ ಸಾಮಾಜಿಕ ಸನ್ನಿವೇಶದಲ್ಲಿ ಗಾಂಧಿಯಂತಹ ಮಹಾನ್ ವ್ಯಕ್ತಿತ್ವವನ್ನು ಮತ್ತೆ ನಮ್ಮೆಲ್ಲರ ನಡುವೆ ತರುವ ತುರ್ತು ಕೆಲಸವಾಗಬೇಕಾಗಿದೆ. ಅದರಲ್ಲೂ ಆ ಪಾತ್ರದ ಮುಖಾಂತರ ಅವರ ಆದರ್ಶಗಳನ್ನು ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಬೇಕಾಗಿದೆ. ಗಾಂಧೀಜಿಯ ಬದುಕು ಮತ್ತು ಆಲೋಚನೆಗಳನ್ನು ಪ್ರತಿಫಲಿಸುವ ಪುಟ್ಟ ಪುಟ್ಟ ಕತೆಗಳು ಇಲ್ಲಿವೆ. ಇಲ್ಲಿರುವ ಕತೆಗಳನ್ನು ಗಾಂಧೀಜಿಯವರ ಆತ್ಮಕತೆ, ಪತ್ರಗಳು ಸೇರಿದಂತೆ ಅನೇಕ ಪ್ರಾಥಮಿಕ ಮೂಲಗಳಿಂದ ಸಂಗ್ರಹಿಸಲಾಗಿದೆ. ಅಲ್ಲಿನ ಕತೆಗಳನ್ನು ಮಕ್ಕಳ ಓದಿಗೊಗ್ಗುವಂತೆ ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ.

ಐವತ್ತೊಂದು ಪುಟಾಣಿ ಪ್ರಸಂಗಗಳನ್ನು ಹೊಂದಿರುವ ‘ಮಕ್ಕಳಿಗಾಗಿ ಮಹಾತ್ಮ’ರ ಕಥೆಗಳು ಸರಳವಾಗಿ ಮಕ್ಕಳಿಗೆ ಮಾನವತಾವಾದದ ಪಾಠ ಹೇಳುತ್ತವೆ. ತಮ್ಮ ಮೊದಲ ಮಾತುಗಳಲ್ಲಿ ಲೇಖಕ ಉದಯ ಗಾಂವಕರ್ ಹೇಳುತ್ತಾರೆ: “ಸ್ವಾತಂತ್ರ್ಯ ಹೋರಾಟದ ನೆನಪುಗಳು ನಿಧಾನವಾಗಿ ನಮ್ಮ ಸ್ಮೃತಿಯಿಂದ ನಶಿಸುತ್ತಿದ್ದಂತೆ ಗಾಂಧೀಜಿಯಂತಹ ವ್ಯಕ್ತಿಗಳ ಕುರಿತೂ ಅವಹೇಳನದ ಮಾತುಗಳು, ಬರೆಹಗಳು ಹಂಚಿಕೆಯಾಗಲು ಆರಂಭವಾಗಿವೆ. ಅವರು ಬದುಕಿರುವಾಗಲೂ ಅವರನ್ನು ವಿರೋಧಿಸಿದವರಿದ್ದರು. ಅವರ ಸಾವು ಅದೇ ಕಾರಣಕ್ಕೆ ಆಗಿರುವುದಲ್ಲವೆ? ಆದರೆ, ಈಗಿನ ಪರಿಸ್ಥಿತಿ ಹಾಗಲ್ಲ; ಗಾಂಧೀಜಿಯವರನ್ನು ಧ್ವೇಷಿಸಲು ಸಾಧ್ಯವಾಗುವಂತಹ ಬರೆಹ, ಭಾಷಣದಂತಹ ಪ್ರಭಾವಗಳು ಅವರ ಕುರಿತು ಏನೇನೂ ತಿಳಿಯದಿರುವ ಮಕ್ಕಳ ಮನಸ್ಸನ್ನು ನಿಧಾನವಾಗಿ ವಿಷಮಯಗೊಳಿಸುತ್ತಿವೆ. ಮಕ್ಕಳಿಗೆ ಗಾಂಧೀಜಿಯವರನ್ನು ಪರಿಚಯಿಸುವ ಜರೂರತ್ತು ಉಂಟಾಗಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸುತ್ತಿರುವ ಮಕ್ಕಳಿಗಾಗಿ ಮಹಾತ್ಮ ಅಂತಹ ಒಂದು ಪ್ರಯತ್ನ.”

ಇನ್ನು ಕಥೆಗಳ ಕಡೆ ತಿರುಗಿದರೆ, “ದೇವರು ಹಿಂಸೆಯನ್ನು ಒಪ್ಪುವುದಿಲ್ಲ” ಕಥೆ ಧರ್ಮಗಳ ಒಳಮರ್ಮಕ್ಕೆ ಹಿಡಿದ ಕನ್ನಡಿಯಂತಿದೆ. ಜಗತ್ತಿನ ಯಾವುದೇ ಧರ್ಮ ಹಿಂಸೆಯನ್ನು ಪ್ರಚೋದಿಸಿಲ್ಲ ಎಂಬ ಸ್ಪಷ್ಟ ನಿಲುವನ್ನು ಬಿಂಬಿಸುತ್ತದೆ. “ಒಂದು ಪುಟ್ಟ ಪೆನ್ಸಿಲ್” ಪ್ರೀತಿ ಹಾಗೂ ಸ್ನೇಹಗಳ ಪ್ರತಿಯಾಗಿ ಗಾಂಧೀಜಿಯವರ ಬದ್ಧತೆ, ಕಾಪಿಟ್ಟುಕೊಳ್ಳುವ ಸಹೃದಯ ಕೋಮಲ ಭಾವಗಳನ್ನು ಬಿಂಬಿಸುತ್ತದೆ.

“ಇನ್ನೊಂದು ಚಪ್ಪಲಿಯೂ ಸಿಗಲಿ” ಎನ್ನುವ ಕಥೆ ಇನ್ನೊಬ್ಬರಿಗಾಗಿ ತೊರೆಯಬಲ್ಲ ತನ್ನತನದ ಹೆಮ್ಮೆಯ ಪ್ರಸಂಗ. ಇಂತಹ ಸದ್ಗುಣಗಳನ್ನು ಬಾಲ್ಯವು ಅರಗಿಸಿಕೊಳ್ಳಬೇಕು. “ಪ್ರೇಮಚಂದರು ಸರ್ಕಾರಿ ಕೆಲಸ ತೊರೆದರು” ಕಥೆ ಇಂತಹ ಇನ್ನೊಂದು ಪ್ರಸಂಗ. ತನ್ನವರಿಗಾಗಿ ತಾನು ಏನನ್ನೂ ಬಿಡಲು ಸಿದ್ಧನಿರಬೇಕು ಎಂಬ ತ್ಯಾಗ ಸಣ್ಣದೇನಲ್ಲ.

“ಆಕಾಶಕ್ಕೆ ಚಾಚಿದ ಕೈಗಳು” ಸತ್ಯ ಮಾರ್ಗದ ಹೋರಾಟದಲ್ಲಿ ಎದುರಾಗುವ ಸವಾಲುಗಳಿಗೆ ಜವಾಬಿನಂತಹ ಪ್ರಸಂಗ. ಇಲ್ಲಿ ಗಾಂಧೀಜಿಯವರನ್ನು ಲೇಖಕರು ‘ವಿಶಿಷ್ಟ ಭಿಕ್ಷುಕ’ ಎಂದು ಕರೆದು ಮನಕಲಕುವಂತೆ ಮಾಡಿದ್ದಾರೆ. ಮಲ್ಲಾಡಿಹಳ್ಳಿ ಗುರುಪೀಠದ ಪೀಠಾಧಿಪತಿಯೊಬ್ಬರು ‘ತಿರುಕ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು ನಮಗೆಲ್ಲಾ ಗೊತ್ತೇ ಇದೆ.

ಹಾಗೆ ಸಂತನೊಬ್ಬ ನಿರಂತರ ದುಡಿಯುವ ಭಿಕ್ಷುಕನು ಜನತೆಗೆ ದಾಸನು ಆಗಿರುತ್ತಾನೆ ಎಂಬುದು ಎಷ್ಟು ಸತ್ಯ ಅಲ್ಲವೇ? ಬರಿಮೈ ಬಂಡಾಯಗಾರ ಎರಡು ಹನಿ ಕಣ್ಣೀರು ತರದೆ ಇರದು. ನಮ್ಮ ತಟ್ಟೆಗಳಲ್ಲಿ ಹೆಚ್ಚಾದ ಅನ್ನವನ್ನು ಎಗ್ಗಿಲ್ಲದೆ ಚೆಲ್ಲುವಾಗ ಯಾವ ಕಹಿ ಭಾವವನ್ನು ತೋರದ ನಾವು ಈ ಪ್ರಸಂಗವನ್ನು ಓದಿದರೆ ಆತ್ಮವಿಮರ್ಶೆ ಮಾಡಿಕೊಂಡು ಕಣ್ಣೀರಾಗುತ್ತೇವೆ.

“ದ್ವೇಷದ ಬೆಂಕಿಯನ್ನು ಪ್ರೀತಿಯ ಹೂವಾಗಿ ಸಬಹುದು” ಎಂಬ ಕತೆ ಇಂದಿನ ತುರ್ತು. ಹಾಗೆ ಇದಕ್ಕೆ ಹೊಂದಿಕೊಂಡಂತೆ “ಜುಟ್ಟು ಮತ್ತು ಜನಿವಾರ” ಧರ್ಮವು ಎಂದು ಜಾತೀಯತೆ ಹಾಗು ದ್ವೇಷವನ್ನು ಬಿತ್ತಬಾರದು ಎಂಬುದಕ್ಕೆ ಸಾಕ್ಷಿ ಪ್ರಜ್ಞೆಯಂತಹ ಪ್ರಸಂಗ. “ಎಲ್ಲರೂ ದೇವರ ಮಕ್ಕಳು” ಪ್ರಸಂಗ ಮಾರ್ಮಿಕವಾಗಿ ನಮ್ಮ ಕಣ್ತೆರೆಸುತ್ತದೆ. ಇದು ಶಾಲೆಯಲ್ಲಿ ಮಕ್ಕಳು ಕೇಳುವ ಹತ್ತು ಹಲವು ಪ್ರಶ್ನೆಗೂ ಉತ್ತರವಾಗಬಹುದು.

ಆಗಿ ಹೋದ ಯಾವುದೇ ಮಹಾನ್ ವ್ಯಕ್ತಿತ್ವವು ಕಾಲದಲ್ಲಿ ನಿಲ್ಲುವುದು ಅದರ ವ್ಯಾಖ್ಯಾನದ ಪ್ರಸ್ತುತತೆಯ ಆಧಾರದ ಮೇಲೆಯೇ‌. ಈ ಕಥಾಗುಚ್ಛವು ಅದರ ಪ್ರತಿರೂಪ. ಹಾಗೆ ಬರೆಯುತ್ತಾ ಹೋದರೆ ಒಂದೊಂದು ಪ್ರಸಂಗವೂ ತನ್ನದೇ ಗುಂಗಿನಲ್ಲಿ ಅರಳುತ್ತಾ ಓದುಗರನ್ನು ಪ್ರಭಾವಿಸುತ್ತದೆ. ಹಾಗಾಗಿ ಈ ಪುಸ್ತಕದ ರುಚಿ ಹತ್ತಿಸುವವರೆಗೆ ಮಾತ್ರ ಕೈಹಿಡಿದು ಕರೆತಂದು ಬಿಟ್ಟಿದ್ದೇವೆ. ಇನ್ನು ನೀವುಂಟು, ನಿಮ್ಮ ಕಲ್ಪನೆಯ ಮಹಾತ್ಮರುಂಟು, ಸಾಧಿಸುವ ಮೌಲ್ಯಗಳುಂಟು.

ಮಕ್ಕಳು ತಮ್ಮ ಅರಿವಿನ ಹರವನ್ನು ಗುರುತಿಸಿಕೊಳ್ಳುವ ಸಮಯದಲ್ಲಿ ಅವರ ಬೌದ್ಧಿಕ ಚೈತನ್ಯವನ್ನು ಇಂದಿನ ಸಾಮಾಜಿಕ ಸಂದಿಗ್ಧದ ಸ್ಥಿತಿಯಿಂದ ಮೇಲೆತ್ತಿ ಸೌಹಾರ್ದ, ಸಹನೆ, ಹೋರಾಟ ಮತ್ತು ತ್ಯಾಗ, ಸ್ವಾತಂತ್ರ್ಯಗಳ ಹೊಳಹಿಗೆ ಮುಖಾಮುಖಿಯಾಗಿಸುವ ಅಗತ್ಯವಿದೆ. ಅವರಿಗೆ ಸತ್ಯ ಮಾರ್ಗದಲ್ಲೇ ಏಕೆ ನಡೆಯಬೇಕೆಂದು ಹೇಳಿ ಅನ್ಯಾಯ ಹಾಗೂ ಅನೀತಿಯನ್ನು ಪ್ರಶ್ನಿಸುವ ಎದೆಗಾರಿಕೆಯ ಫಲವೇನೆಂದು ಮನದಟ್ಟು ಮಾಡಿಕೊಡಬೇಕಾಗಿದೆ.

ಯಶಸ್ಸು ಹಾಗೂ ವಿಜಯದ ಹಾದಿಯಲ್ಲಿ ಆಯ್ದುಕೊಳ್ಳುವ ಸನ್ಮಾರ್ಗವೂ ಎಷ್ಟು ಮುಖ್ಯವೆಂದು ತೋರಿಸಿಕೊಡಬೇಕಾಗಿದೆ. ಕೇವಲ ಗೆಲುವೊಂದೇ ಗುರಿಯಲ್ಲ, ಆ ಗೆಲುವಿಗೆ ಅನುಸರಿಸುವ ಮಾರ್ಗವು ಸತ್ಯದ್ದಾಗಿರಬೇಕು. ಮಾರ್ಗ ಸುಲಭವೆಂದು, ಶ್ರಮರಹಿತವೆಂದು ಮನಸು ಅಸತ್ಯದೆಡೆಗೂ ಹಿಂಸೆಯೆಡೆಗೂ ಪರ ಪೀಡನೆಯ ಕಡೆಗೂ ಹರಿದರೆ ಅದನ್ನು ಅಂಕೆಯಲ್ಲಿಟ್ಟು, ಸತ್ಯವನ್ನೂ ಮನುಷ್ಯತ್ವವನ್ನೂ ಅಪ್ಪಿಕೊಳ್ಳುವ ಬಗೆ ಹೇಗೆ? ಇಂತಹ ಹಲವು ಮಾನಸಿಕ ಸಂಧಿಗ್ಧಗಳಿಗೆ ಈ ಪುಸ್ತಕ ಉತ್ತರವಾಗಬಲ್ಲದು.

ಹಲವೊಮ್ಮೆ ಶಿಕ್ಷಕರಾದ ನಮ್ಮನ್ನು ಪುಟ್ಟ ಮಕ್ಕಳು ಕೇಳುವ ಪ್ರಶ್ನೆಗಳು ಇಂತಹ ಸಂದಿಗ್ಧಕ್ಕೆ ಈಡು ಮಾಡುತ್ತವೆ. “ಮೇಡಂ ದುಡ್ಡು ಸಂಪಾದಿಸಿರುವ ಎಲ್ಲರೂ ಸತ್ಯಮಾರ್ಗದಲ್ಲಿ ನಡೆದಿದ್ದಾರೆಯೇ? ಅಥವಾ ನ್ಯಾಯ ನೀತಿ ಧರ್ಮ ಎಂದರೆ ಈ ಕಾಲದಲ್ಲಿ ದುಡ್ಡು ಸಂಪಾದಿಸಲು ಆದೀತೆ? ಸಮಾಜದಲ್ಲಿ ದೊಡ್ಡ ಮನುಷ್ಯನಾಗಲು ದುಡ್ಡು ಮುಖ್ಯವೋ ಗುಣ ಮುಖ್ಯವೋ? ಹಾಗಾದರೆ ನಾವು ಬರಿ ಗುಣವಂತರಾದರೆ ಸಾಕೆ? ಗುಣದಿಂದ ಮೌಲ್ಯವು ಬೆಲೆಯೂ ಹೆಚ್ಚುತ್ತದೆಯೇ? ಹಾಗಾದರೆ ಈ ಸಮಾಜವು ಹೆಚ್ಚು ಸಂಪಾದಿಸಿದ ಅವರನ್ನೇ ಯಾಕೆ ಗೌರವಿಸುತ್ತದೆ? ಬಡವನನ್ನು ಯಾಕೆ ಯಾರೂ ಪ್ರೀತಿಸುವುದಿಲ್ಲ?” ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಶಿಕ್ಷಕನಿಗೂ ಬಹಳಷ್ಟು ಬೌದ್ಧಿಕ ತಯಾರಿಯ ಅಗತ್ಯವಿದೆ.

ಮಗುವಿನ ಮನಸ್ಸಿನಲ್ಲಿ ಮೌಲ್ಯಗಳೇ ಹೆಚ್ಚು ಎಂಬ ಭಾವವನ್ನು ಬೇರೂರಿಸಲು ‘ ಮಕ್ಕಳಿಗಾಗಿ ಮಹಾತ್ಮ’ ಪುಸ್ತಕವು ಅತ್ಯಂತ ಸಹಕಾರಿಯಾದೀತು. ಚಿಕ್ಕಂದಿನ ಬದುಕಿನಲ್ಲಿಯೇ ಮೌಲ್ಯಗಳು ಉಸಿರಾಡಿದರೆ ಆ ಉಸಿರು ಹಸಿರಾಗಿ ಭವಿಷ್ಯತ್ತಿನಲ್ಲಿ ಜೀವಂತವಾಗಿ ಉಳಿಯುವುದು. ಮೌಲ್ಯಗಳು ಗೆದ್ದಲ್ಲಿ ಮಾನವೀಯತೆಯ ಗೆಲುವು. ಮಾನವೀಯತೆ ಗೆದ್ದರೆ ಅದು ಮನುಕುಲದ ಗೆಲುವು. ಹುತಾತ್ಮ ದಿನಾಚರಣೆಯ ಸಂದರ್ಭ ಈ ಸಂದೇಶ ನಮ್ಮ-ನಿಮ್ಮೆಲ್ಲರ ಹೃದಯವನ್ನು ತಲುಪಿದರೆ ಅದನ್ನು ಭವಿಷ್ಯದ ರಾಯಭಾರಿಗಳಾದ ಮಕ್ಕಳಲ್ಲಿ ಅಚ್ಚಳಿಯದಂತೆ ಬೇರೂರಿಸುವುದು ಕಷ್ಟದ ಕೆಲಸವೇನಲ್ಲ. ಈ ನಿಟ್ಟಿನಲ್ಲಿ ಈ ಪುಸ್ತಕ ನಿಮ್ಮ ಬೊಗಸೆಯಲ್ಲಿ ಭವಿಷ್ಯದ ಚೈತನ್ಯ ತುಂಬಲಿ.

‍ಲೇಖಕರು Admin

January 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: