ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ಯಾರದೋ ಯಾನ ಶುರು..

ಹೊಸ ಸಂವತ್ಸರಕೆ ಮುನ್ನುಡಿ…

-ಜಮುನಾ ರಾಣಿ ಹೆಚ್.ಎಸ್.

ಮತ್ತೆ ನಾನು ಇವತ್ತೂ ಲೇಟು

ದಡಬಡಾಯಿಸುತ್ತಾ ಬಂದು ಎಲ್ಲರ ಹಿಂದಿಕ್ಕಲು

ಪಿ.ಟಿ. ಉಷಾಳನು ಮೀರಿಸುವಂತೆ ಓಡಿ

ಒಳನುಗ್ಗಿ ಏದುಸಿರು ಬಿಡುವಷ್ಟೊತ್ತಿಗೆ

ಅಬ್ಬಾ, ಹಿಡಿಹೃದಯ ಕೈಗೆ ಬರುವಂತೆ

ಬಡಿದುಕೊಳ್ಳುತ್ತಿದ್ದುದು ಕಿವಿಗಳಿಗೂ ಕೇಳುತ್ತಿತ್ತು

ನನ್ನ ನೋಡಿ ಪಡುವಣದಿ ಮುಳುಗುತ್ತಿದ್ದ

ಸೂರ್ಯ ಕೂಡ ನಕ್ಕಂತಿತ್ತು

 

ಪ್ರತಿ ಬಾರಿ ಟ್ರೈನು ಹಿಡಿದಾಗಲೂ

ಇಂತದ್ದೇ ಪರಿಸ್ಥಿತಿ ನನ್ನದು

ಸ್ವಲ್ಪ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ

ಬಹುಶಃ ಬಸ್ಸಿನ ಹಾಗೆ ಈ ಉಗಿಬಂಡಿಯ ಚಾಲಕನಿಗೆ

ನನ್ನ ಮುಖ ಕಾಣುವಂತಿದ್ದರೆ

ಇಷ್ಟೊತ್ತಿಗೆ ಅದೆಷ್ಟು ದಿನಗಳು ಅವನಿಂದ

ಮಂಗಳಾರತಿ ಮಾಡಿಸಿಕೊಳ್ಳಬೇಕಿತ್ತೋ

 

ಇರಲಿ, ಉಸ್ಸಪ್ಪಾ ಎನ್ನುತಾ ಸುಮ್ಮನೆ

ಕುಳಿತಿದ್ದೇನೆ ಕಿಟಕಿಯಾಚೆಗೆ ನೋಡುತಾ

ಮೆಲ್ಲನೆ ಶುರುವಾದ ಬಂಡಿ ನಿಧಾನವಾಗಿ

ನಾಗಾಲೋಟವ ಪಡೆದುಕೊಂಡಿತು

ಹಳ್ಳಿ-ಬಯಲುಗಳೆನ್ನದೆ

ಗಿರಿ-ಕಂದರ, ಬೆಟ್ಟ-ಗುಡ್ಡ, ನದಿ-ಕೊಳ-ಸೇತುವೆ

ಕ್ಷಣಕ್ಷಣಕೊಮ್ಮೆ ಬದಲಾಗತೊಡಗಿತ್ತು ಹೊರಗಿನ ಪಟಗಳು

ನನ್ನೊಳಗೂ ಹೀಗೇನಾ ?

 

ಅಲ್ಲೊಂದಷ್ಟು ಮಾತುಗಳು, ಮೂಲೆಯಲಿ

ಚಿಗುರೊಡೆಯುತ್ತಿರುವ ಹೊಸದ್ಯಾವುದೋ ಕಥೆ,

ಹಳೆಯ ಕಣ್ಣೀರಿನ ಕಲೆಗಳೂ ಬೇಸತ್ತು

ಇನ್ಯಾರದೋ ಮೌನ, ಧ್ಯಾನ ಯಾವ ಜಗತ್ತಿನ ಉಳಿವಿಗೋ…

ಸಂಜೆಗತ್ತಲಲಿ ಸಿಹಿನಿದ್ರೆಯ ಮೊಹರನೊತ್ತಿದ

ಕೇಳಿಸದ ಗೊರಕೆ ಸದ್ದು,

ಎಲ್ಲವನೂ.. ಎಲ್ಲರನೂ ಬಡಿದೆಬ್ಬಿಸಿ

ಚಾಯ್ ಚಾಯ್ ಚಾಯ್ ಚಾಯ್… ಎಂದು

ಆಂತರ್ಯದೊಳಗೆ ಮುನ್ನೆಡೆವ ಬದುಕಿನಂಗೆ

ಟೀ ಮಾರುವವ ಬಿಕರಿ ಮಾಡುತ್ತಿದ್ದಾನೆ

ಯಾವ ಗುಂಗಿಗೂ ಒಳಪಡದೆ

 

ಇಳಿಸಂಜೆ- ಕಡುಗತ್ತಲು- ಬೆಳಕಿನ ಹಾದಿಯೆಡೆಗೆ
ನಿಲ್ದಾಣಗಳ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾ
ಬದುಕನು ಸಾಗುವುದಷ್ಟೇ ಕೆಲಸ
ಜೀವದ ಬಂಡಿಗೆ
ತನ್ನ ಗಮ್ಯದೆಡೆಗೆ
ಯಾರ ಪಯಣದ ಕೊನೆಯಲ್ಲಿ,
ಮತ್ಯಾರದೋ ಯಾನ ಶುರು
ಹೊಸ ಬೆಳಕಿನ ಹಾದಿಯಲಿ ಹೊಸದೊಂದು ದಿನದತ್ತ
ಹೊಸ ಸಂವತ್ಸರಕೆ ಮುನ್ನುಡಿ ಬರೆಯಲು…

‍ಲೇಖಕರು avadhi

1 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading