ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ಹಗುರಾಗುತ್ತೇನೆ..

ಸಂದೀಪ್ ಈಶಾನ್ಯ

ಮತ್ತೊಂದು ರಹದಾರಿ

ಕಳಚುತ್ತ ಹೋದೆ ನಿಧಾನವಾಗಿ
ಒಂದೊಂದು ಕಳಚಿಬಿದ್ದಾಗಲೂ
ರೆಕ್ಕೆಮೂಡಿದ ಹಕ್ಕಿಯೊಂದರಂತೆ
ಹಾರುತ್ತಾ
ಹಗುರಾಗುತ್ತಾ ಹೋದೆ

ಸಂಜೆ ಧೋ ಎಂದು ಸುರಿದ ಮಳೆಗೆ
ಒದ್ದೆಯಾದ ಪಾರ್ಕಿನ ಬೆಂಚು
ಬಿಸಿಲ ಬಯಸದೆ
ಇರುಳ ಗಾಳಿಗೇ ಒಣಗಿಹೋಗುವಂತೆ
ಒಳಗೇ ಒಣಗಿಹೋದೆ
ಹದವಾದೆ

ಯಾರು ಇರದೇ ಇದ್ದರೂ
ಇನ್ನೂ ಜೀಕುತ್ತಲೇ ಇರುವ
ಉಯ್ಯಾಲೆಯೊಂದನ್ನು ಸೋಜಿಗದ ಕಣ್ಣ ಬಿಂದುಗಳಿಂದ
ನೋಡುವುದನ್ನ ನಾನು ಬೇಕೆಂದೇ ಮರೆತೆ
ಹಟ ಮಾಡಿದೆ
ಯಾರಾದರೊಬ್ಬರು ಜೀಕಿ
ಅಲ್ಲೆಲ್ಲೋ ಅಡಗಿರಬಹುದು ಎಂದು ನನಗೆ ನಾನೇ
ಹೇಳಿಕೊಂಡೆ
ಸಮಾಧಾನಗೊಂಡೆ
ಮತ್ತೆ ಹಗುರಾದೆ

ಮೌನವನ್ನ ವ್ಯಾಖ್ಯಾನ ಮಾಡದೇ ಸುಮ್ಮನೆ
ಒಳಗೊಳ್ಳುತ್ತಾ ಕರಗುತ್ತಾ
ಅನುಭವಿಸುತ್ತ ಹೋದೆ
ಇಲ್ಲಿಯವರೆಗೂ ಅವಳೊಂದಿಗೆ
ಮಾತನಾಡಿದ ಎಲ್ಲವೂ ಕಚ್ಚಾ ಗಾಳಿತುಂಬಿದ ಬಲೂನಿನಂತೆ ಅದೆಷ್ಟು ಸಹಜ ಹಗುರ ಎನಿಸಿತು
ನಂತರ ನಾನು
ನಕ್ಕು ಹಗುರಾಗಲು ಯತ್ನಿಸಿದೆ
ಗೊಣಗಿ ಹಗುರಾಗಲು ಯತ್ನಿಸಿದೆ
ಕಣ್ಣೀರನ್ನು ನಿರಾಳವಾಗಿ ಹೊರಜಾರಿಸಿದೆ
ಕಡೆಗೆ ನಿಜಕ್ಕೂ ಹಗುರಾದೆ

ಈಗ ಶತಮಾನಗಳಿಂದ ಪ್ರಯಾಣಿಕರನ್ನೇ ಕಾಣದ
ಅಜ್ಞಾತ ನಿಲ್ದಾಣದಲ್ಲಿ ನಿಂತಿದ್ದೇನೆ
ಒಬ್ಬನೇ ನಿಂತಿದ್ದೇನೆ
ಒಬ್ಬನೇ ಎಂದರೆ ಒಬ್ಬನೇ ನಿಂತಿದ್ದೇನೆ

ಅಲ್ಲೆಲ್ಲೋ ಕಣ್ಣಿಗೆಟುಕದಷ್ಟು ದೂರದಲ್ಲಿ ರೈಲು ಸೀಟಿ ಹಾಕುತಿದೆ
ಶತಮಾನದ ರೈಲು ನಾನು ಎದುರಿರಾಗಿರುವ ಹಳಿಗಳ ಎದುರೇ ನಿಲ್ಲಲಿ
ಎಂದು ಹಾರೈಸಿಕೊಳ್ಳುತ್ತೇನೆ
ನಾನೇ ಹಾರೈಸಿಕೊಳ್ಳುತ್ತೇನೆ
ನನಗೆ ನಾನೇ ಹಾರೈಸಿಕೊಳ್ಳುತ್ತೇನೆ
ರೈಲು ಬಂದಂತೆ ನೆನೆಯುತ್ತೇನೆ
ಅಣಿಯಾಗುತ್ತೇನೆ
ಹೊರಡಲು ಅಣಿಯಾಗುತ್ತೇನೆ
ಒಬ್ಬನೇ ಹೊರಡಲು ಅಣಿಯಾಗುತ್ತೇನೆ

ಅಲ್ಲೆಲ್ಲೋ ಹಾಡುಗಳನ್ನೇ ಮರೆತ ಹಕ್ಕಿಯಂತೆ
ನನ್ನೊಂದಿಗೆ ನಾನೇ ಉಳಿದ ಕಿರಲು ದನಿಯಲ್ಲಿ
ಹಾಡುತ್ತ ಹರಟುತ್ತ
ಹಗುರಾಗುಬಹುದಾದ ಊರಿಗೆ
ಹೊರಡುತ್ತೇನೆ
ಒಬ್ಬನೇ ಹೊರಡುತ್ತೇನೆ
ಒಬ್ಬನೇ ಎಂದರೆ ಒಬ್ಬನೇ ಹೊರಡುತ್ತೇನೆ

ಹಗುರಾಗುತ್ತೇನೆ
ಮತ್ತೆ ಹಗುರಾಗುತ್ತೇನೆ
ಮತ್ತೆ ಮತ್ತೆ ಹಗುರಾಗುತ್ತೇನೆ

 

 

 

‍ಲೇಖಕರು Avadhi GK

19 March, 2018

2 Comments

  1. nutana doshetty

    haguragabahudaada ooru… ellarigoo bekaagide..

  2. Nasrin

    ತುಂಬಾ ಸೊಗಸಾಗಿದೆ ಕವಿತೆ. …..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading