ಶಿಲ್ಪಶ್ರೀ

ಮತ್ತೆ ಅಪರಿಚಿತರಾಗಿಬಿಡುವ..
ನಾನೆಲ್ಲೋ ನೀನೆಲ್ಲೋ ದೂರಾಗಿ
ಇನ್ಯಾವತ್ತೋ ಮಳೆ ಬರುವ ವೇಳೆ
ಇನ್ಯಾವುದೋ ಬಸ್ಟ್ಯಾಂಡಲ್ಲಿ
ಕಣ್ಣೋಟ ಸಂಧಿಸಿ
ನಗೆಯಾಗುವ ಮೊದಲೇ
ಮತ್ತೆ ದೂರಾಗಿಬಿಡುವ
ಮರೆತುಹೋದ ನಿನ್ನೆಗಳ
ಕನಸ ಮೆಲುಕುಹಾಕುತ್ತಾ
ಸುಮ್ಮನೆ ನಡೆದು ಹೋಗುವಾಗ
ನಿನ್ನುಸಿರು ಸೋಕಿದಂತಾಗಿ
ಹಿಂದಿರುಗಿ ನೋಡುವ ಮೊದಲೇ
ಮತ್ತೆ ಕಳೆದುಹೋಗುವ
ನಿನ್ನ ನೆಚ್ಚಿನ ಪುಸ್ತಕದಲ್ಲಿ
ಅವಿತಿಟ್ಟಿದ್ದ ನವಿಲುಗರಿ
ಇದ್ದಕ್ಕಿದ್ದಂತೆ ಕೈತಾಗಿ
ನೆನಪಿನ ಸುಳಿಯಲ್ಲಿ
ನಾ ಜಾರುವ ಮೊದಲೇ
ಮತ್ತೆ ಅವಿತುಕೊಳ್ಳುವ

ಜಾತ್ರೆಯ ಸಂಭ್ರಮದಲಿ
ಬಳೆ ತೊಟ್ಟುಕೊಳುವಾಗ
ಖಳಕ್ಕೆಂದು ಒಡೆದ ಬಳೆ
ನಿನ್ನ ದನಿಯಲ್ಲಿ ಕೂಗಿದಂತಾಗಿ
ನಾ ಕಂಪಿಸುವ ಮೊದಲೇ
ಮತ್ತೆ ಮರೆಯಾಗಿಬಿಡುವ
ಕನ್ನಡಿಯ ಮುಂದೆ ನಿಂತು
ನನ್ನೊಂದಿಗೇ ನಾ
ಮಾತಾಡುವಾಗ
ಒಳಗಿಂದ ನೀನೆದ್ದು
ಉತ್ತರವಾಗುವ ಮೊದಲೇ
ಮತ್ತೆ ಪ್ರಶ್ನೆಗಳಾಗಿಬಿಡುವ
ಮತ್ತೆ ಅಪರಿಚಿತರಾಗಿಬಿಡುವ..






Awesome
Thank you
saraLa padagaLa bhaava sarapaLi.. very nice
Thank you Yogesh