ಹೀಗೆ ಅಂಬೆ ನನ್ನೊಳಗೆ ಅಂಬೆಗಾಲಿಟ್ಟಳು..

ಜೀಂ……. ಎಂದು ಕೂಗುವ ಜೀರುಂಡೆಗಳ ಸದ್ದು ಮಾತ್ರವೇ ತುಂಬಿರುವ ನನ್ನೂರಿನ ನೀರವ ರಾತ್ರಿ ಮೆಲ್ಲಗೆ ತೆರೆದುಕೊಳ್ಳುತ್ತಿರುವಂತೆ ನಮ್ಮನೆಯೊಳಗೊಂದು ಚಿಕ್ಕ ಪೌರಾಣಿಕ ಜಗತ್ತು ತೆರೆದುಕೊಳ್ಳುತ್ತಿತ್ತು. ಮಬ್ಬುಗತ್ತಲು ಕವಿಯುತ್ತಿರುವಂತೆ ಊಟ ಮುಗಿಸುವ ಅಪ್ಪ, ಮಂಚದ ಮೇಲೆ ಹಾಸಿಗೆಯಲ್ಲಿ ಕುಳಿತು ಒಂದು ರಸಗವಳ ತಿಂದನೆಂದರೆ ಎದುರಿಗೆ ನೇತುಹಾಕಿರುವ ಮದ್ದಲೆ ತನ್ನನ್ನು ಬಾರಿಸೆಂದು ಕರೆಯುತ್ತಿತ್ತು. ಮದ್ದಲೆಯನ್ನು ಮಡಚಿದ ತನ್ನ ಕಾಲಮೇಲಿಟ್ಟು ಬಾರಿಸುತ್ತಾ ಯಕ್ಷಗಾನದ ಹಾಡೊಂದನ್ನು ಗುನುಗುವ ವೇಳೆಗೆ ನಾವು ಮಕ್ಕಳೆಲ್ಲರೂ ನಮ್ಮ ಆಟಗಳನ್ನು ಮರೆತು ಅಪ್ಪನ ಹಾಸಿಗೆಗೆ ದಾಂಗುಡಿಯಿಡುತ್ತಿದ್ದೆವು. “ಸರಿ, ಹೇಳಿ. ಇವತ್ತು ಯಾವ ಪ್ರಸಂಗ?” ಎಂಬ ಅಪ್ಪನ ಪ್ರಶ್ನೆಗೆ ನಾವು ನೆನಪಾದುದೊಂದು ಪ್ರಸಂಗದ ಹೆಸರು ಹೇಳಿದರೆ, ಅಪ್ಪ ಮಾತ್ರ, “ಹೆದರು ಪುಕ್ಕಲರು. ಮಾಡೋದಿದ್ದರೆ ಅಂಬೆ ಮಾಡಿ ನನ್ನೆದುರು ಗೆಲ್ಲಿ ನೋಡುವ?” ಎನ್ನುತ್ತಿದ್ದರು. ಯಾವಾಗಲೂ ನಮ್ಮನ್ನು ಸೋಲಿಸುವ ಅಂಬೆ ನಮ್ಮೆದುರು ನಿಂತು ನಗುತ್ತಿದ್ದಳು.

ಇಂದಾದರೂ ಅಂಬೆಯಾಗಿ ಅಪ್ಪನನ್ನು ಸೋಲಿಸಲೇಬೇಕೆಂಬ ಹಠ ಮತ್ತೆ ನನ್ನಲ್ಲಿ ಚಿಗುರಿ, “ಸರಿ ಹಾಗಾದರೆ, ನೋಡಿಯೇಬಿಡುವ. ಭೀಷ್ಮವಿಜಯವೇ ಇರಲಿ” ಎನ್ನುತ್ತಿದ್ದೆ. ಪಾತ್ರವರ್ಗವೂ ಅಲ್ಲಿಯೇ ಹಂಚಿಕೆಯಾಗುತ್ತಿರಲಾಗಿ, ಅಕ್ಕ, ತಂಗಿಯರು ಅಂಬಿಕೆ, ಅಂಬಾಲಿಕೆಯರು ತಾವೆಂದು ನುಣುಚಿಕೊಳ್ಳುವಾಗ ನನ್ನೊಳಗಿನ ಅಂಬೆ ಮತ್ತೆ ಮಾತಾಗುತ್ತಿದ್ದಳು. ಹೇಳಿಕೇಳಿ ತಾಳಮದ್ದಳೆಯಲ್ಲಿ ಪ್ರವೀಣನಾದ ಅಪ್ಪ ಭೀಷ್ಮನ ಅರ್ಥ ಹೇಳುತ್ತಾ ನನ್ನ ಜನ್ಮವನ್ನು ಜಾಲಾಡುತ್ತಿದ್ದ.

ಎಲಾ ಕಾಶಿರಾಜಕುಮಾರಿಯರೇ,
ನಿಮ್ಮನ್ನು ನಿಮ್ಮಪ್ಪ ಒಡ್ಡಿದ ಪಣದಲ್ಲಿ ನಾನು ಗೆದ್ದು ತಂದಿದ್ದೇನೆ. ಎಲ್ಲ ರಾಜರನ್ನೂ ಸೋಲಿಸಿ, ನಿಮ್ಮನ್ನು ಗೆದ್ದು ತಂದಿದ್ಯಾಕೆ ಬಲ್ಲಿರಾ? ನನ್ನ ತಮ್ಮನಾದ ವಿಚಿತ್ರವೀರ್ಯನಿಗೆ ನಿಮ್ಮನ್ನು ಮದುವೆ ಮಾಡಲೆಂದು. ನಾಳೆಯೇ ಮದುವೆಯ ಏರ್ಪಾಡುಗಳು ನಡೆಯಲಿವೆ. ಕುರುವಂಶದ ಚಕ್ರವರ್ತಿಯಾದ ನನ್ನ ತಮ್ಮನನ್ನು ವರಿಸಿ, ನೂರುಕಾಲ ಸುಖವಾಗಿರಿ.

ಭೀಷ್ಮನ ಮಾತುಗಳು ಮುಗಿಯುತ್ತಿರುವಂತೆಯೇ ಅಂಬಿಕೆ ಅಂಬಾಲಿಕೆಯರಿಬ್ಬರೂ ತಲೆಯಲ್ಲಾಡಿಸಿ ಒಪ್ಪಿಗೆ ಸೂಚಿಸುತ್ತ, ಕುಲೀನ ಮನೆತನದ ಹೆಣ್ಣುಮಕ್ಕಳಂತೆ, “ನಿಮ್ಮಿಚ್ಛೆಯಂತೆ ಆಗಲಿ” ಎಂದು ಬದಿಗೆ ಸರಿಯುತ್ತಿದ್ದರು. ಅಂಬೆ ಮಾತ್ರವೇ ಭೀಷ್ಮನ ಮಾತುಗಳನ್ನು ಒಪ್ಪದೇ ಪಣವನ್ನು ಗೆದ್ದ ನೀನೇ ನನ್ನನ್ನು ಮದುವೆಯಾಗೆಂದು ಹಠಹಿಡಿಯತೊಡಗುತ್ತಿದ್ದಳು. ಮೊದಲಿನ ದಿನಗಳ ಸೋಲಿನಿಂದ ಪಾಠ ಕಲಿತಿದ್ದ ನನ್ನೊಳಗಿನ ಅಂಬೆ ಭದ್ರವಾದ ನೆಲೆಗಟ್ಟಿನ ಮೇಲೆ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಲು ತವಕಿಸುತ್ತಿದ್ದಳು.

ಅಯ್ಯಾ ಭೀಷ್ಮಾ,
ನೀನು ನನ್ನ ತಂದೆ ಒಡ್ಡಿದ ಪಣದಲ್ಲಿ ನಮ್ಮನ್ನು ಗೆದ್ದು ತಂದೆಯೇನೋ ನಿಜ. ಆದರೆ ಅದಕ್ಕೂ ಮುಂಚೆ ಪಣದ ನಿಯಮವನ್ನು ತಿಳಿಯೆ ಎನಿಸುತ್ತದೆ. ಪಣದಲ್ಲಿ ಯಾರು ಗೆದ್ದಿರುವರೋ ಅವರೇ ನಮ್ಮ ವರ ಎಂಬುದು ಪಣ. ನೀನು ಗೆದ್ದಿರುವೆಯೆಂದಮೇಲೆ ನೀನೆ ನಮ್ಮ ವರ. ಆದ್ದರಿಂದ ನೀನೇ ನಮ್ಮೆಲ್ಲರನ್ನು ವರಿಸುವುದು ನ್ಯಾಯ.

ಅಂಬೆಯ ವಾದಕ್ಕೆ ಎದುರೆಂಬುದಿರಲಿಲ್ಲ. ಆದರೆ ಭೀಷ್ಮನೇನು ಸಾಮಾನ್ಯನೆ? ಅವಳ ಮಾತುಗಳು ಬಾಲಿಶ ಎಂಬಂತೆ ನಕ್ಕುಬಿಡುತಿದ್ದ.

ಅಯ್ಯಾ ಅಂಬೆ,
ನೀನು ಅರಮನೆಯೊಳಗೆ ಬೆಳೆದ ಗೊಂಬೆ. ನಿನಗೆ ನನ್ನ ಪೂರ್ವಜೀವನದ ಅರಿವಿಲ್ಲವೆನಿಸುತ್ತದೆ. ಆದರೆ ನಿನ್ನ ತಂದೆಗೆ ಎಲ್ಲವೂ ತಿಳಿದಿದೆ. ನಾನು ಈ ಜನ್ಮದಲ್ಲಿ ಮದುವೆಯಾಗುವುದಿಲ್ಲ ಮತ್ತು ಪಟ್ಟವೇರುವುದಿಲ್ಲವೆಂದು ನನ್ನ ತಂದೆಗೆ ಮಾತು ಕೊಟ್ಟಿರುವೆ. ಹಾಗಾಗಿ ನಿನ್ನನ್ನು ವರಿಸಲಾಗದು. ಅದು ನಿನ್ನ ತಂದೆಗೂ ಗೊತ್ತು. ಸುಮ್ಮನೆ ತಂಗಿಯರಂತೆ ನನ್ನ ತಮ್ಮನನ್ನು ವಿವಾಹವಾಗಲು ಸಮ್ಮತಿಸು.

 

ಅಂಬೆಗೆ ಅದು ನ್ಯಾಯವೆನಿಸುವುದಿಲ್ಲ. ತಂಗಿಯರು ಒಪ್ಪಿದರೆಂದು ಅವಳೊಪ್ಪಲು ಅವಳು ಸಿದ್ಧಳಿಲ್ಲ. ಒಬ್ಬರಂತೆ ಇನ್ನೊಬ್ಬರಿರಬೇಕೆಂಬ ನಿಯಮವೇನಿಲ್ಲವೆಂಬುದು ಅವಳ ನಂಬುಗೆ. ಅವಳೀಗ ಹಠ ಹಿಡಿಯುತ್ತಾಳೆ.

ಅಯ್ಯಾ ಭೀಷ್ಮಾ,
ಮದುವೆಯಾಗೆನೆಂದು ಶಪಥ ಮಾಡಿದ ನೀನು ಸ್ವಯಂವರಕ್ಕೆ ಬಂದುದಾದರೂ ಏಕೆ? ಬ್ರಹ್ಮಚಾರಿಯರಿಗೆಂದು ಇಟ್ಟ ಪಣವಲ್ಲವದು. ನನ್ನ ತಂದೆಗೆ ತಿಳಿದಿರಬಹುದು ನಿನ್ನ ಪ್ರತಿಜ್ಞೆಗಳೆಲ್ಲ. ಆದರವನು ನಿನ್ನನ್ನು ತಡೆಯಲಾರ. ಏಕೆಂದರೆ ನೀನು ಬಲಶಾಲಿಯೆಂಬುದು ಅವನಿಗೆ ಗೊತ್ತು. ನನಗೆ ಅದೆಲ್ಲ ವಿಷಯವೇ ಅಲ್ಲ. ನೀನು ಪಣವನ್ನು ಗೆದ್ದಿರುವೆ, ನನ್ನನ್ನು ಮದುವೆಯಾಗು ಅಷ್ಟೆ.

ಭೀಷ್ಮ ಅಂಬೆಯ ಮಾತಿಗೆ ಕಿಡಿಕಿಡಿಯಾಗುತ್ತಾನೆ. ನಿನ್ನ ತಂದೆಯ ಉದ್ಧಟತನವನ್ನು ತಿಳಿಸಲೆಂದೇ ನಾನಲ್ಲಿಗೆ ಬಂದೆ. ಎಲ್ಲ ರಾಜರಿಗೆ ಆಮಂತ್ರಣ ಕಳಿಸಿದ ಆ ನಿನ್ನ ತಂದೆ ನಮ್ಮ ರಾಜ್ಯವನ್ನು ಮರೆತುದಾದರೂ ಹೇಗೆ? ನಮ್ಮದೂ ಒಂದು ರಾಜ್ಯವಿದೆ, ನಮಗೂ ಪಣವನ್ನು ಗೆಲ್ಲುವ ಶಕ್ತಿಯಿದೆಯೆಂದು ತೋರಿಸಲೆಂದೇ ನಾನಲ್ಲಿಗೆ ಬರಬೇಕಾಯಿತು. ಬಂದು ನಿಮ್ಮನ್ನು ಗೆದ್ದು ತಂದಿದ್ದೇನೆ, ನನ್ನ ತಮ್ಮನಿಗೆ ಮದುವೆ ಮಾಡುತ್ತೇನೆ. ತಪ್ಪೇನಿದೆ ಇದರಲ್ಲಿ ಎಂದು ಕೇಳುತ್ತೇನೆ.

ಅಂಬೆಗೀಗ ಕೋಪ ಬರುತ್ತಿದೆ. ಅವಳಿಗೂ ಅವನ ಅಹಂಕಾರದ ಬಗ್ಗೆ ತಾತ್ಸಾರವೆನಿಸುತ್ತಿದೆ. ಅವಳ ವಾದವನ್ನು ಮುಂದಿಡುತ್ತಿದ್ದಾಳೆ.

ಅಯ್ಯಾ ಶೂರ,
ನಿನ್ನ ಮಾತನ್ನು ಒಪ್ಪುತ್ತೇನೆ. ನನ್ನ ತಂದೆ ನಿಮ್ಮ ರಾಜ್ಯಕ್ಕೆ ಓಲೆ ಕಳಿಸದಿದ್ದುದು ತಪ್ಪೇ ಇರಬಹುದು. ಆದರೆ ಅದನ್ನು ತೋರಿಸಿಕೊಡಲು ನಿನ್ನ ವೀರನಾದ ತಮ್ಮ ಸ್ವಯಂವರಕ್ಕೆ ಬರಬೇಕಲ್ಲದೇ, ಮದುವೆಯಾಗದಿರುವ ನೀನು ಬಂದುದಾದರೂ ಏಕೆ? ಒಂದುವೇಳೆ ನಿನ್ನ ತಮ್ಮನೇ ಬಂದು ಪಣದಲ್ಲಿ ಗೆದ್ದಿದ್ದರೆ ನಾನು ಒಂದಿನಿತೂ ಬೇಸರವಿಲ್ಲದೇ ಅವನನ್ನು ವರಿಸುತ್ತಿದ್ದೆ. ಅದನ್ನು ಬಿಟ್ಟು ಯಾರೋ ಗೆದ್ದುತಂದ ಹೆಣ್ಣನ್ನು ಮದುವೆಯಾಗುವ…

ಭೀಷ್ಮನ ಸಹನೆಯಿಂದು ಮೀರಿದೆ. ಅವಳ ಮಾತನ್ನು ತುಂಡರಿಸಿದ್ದಾನೆ.

ಬಾಯ್ಮುಚ್ಚು ಮನೆಹಾಳಿ. ಯಾರೋ ಗೆದ್ದುತಂದ…. ಎಂದೆಲ್ಲ ಅವಹೇಳನ ಮಾಡಬೇಡ. ನಾನು ಪಟ್ಟವೇರಿಲ್ಲದಿರಬಹದು. ಆದರೆ ಈ ಹಸ್ತಿನಾಪುರದ ಪಟ್ಟದ ರಕ್ಷಕ ನಾನು. ಆ ನೆಲೆಯಲ್ಲಿ ಕಾರ್ಯವೆಸಗಿದ್ದೇನೆ. ನನ್ನ ತಮ್ಮನನ್ನು ಈ ಪರಿಯಲ್ಲಿ ಹೀಗಳೆಯುವ ನೀನು ಅವನನ್ನು ಮದುವೆಯಾಗಲೂ ಯೋಗ್ಯಳಲ್ಲ. ಕೂಡಲೇ ಬಂದ ಜಾಗಕ್ಕೆ ಹೊರಡು. ನಿನ್ನನ್ನು ಕಾಶಿರಾಜ್ಯಕ್ಕೆ ಮುಟ್ಟಿಸುವ ವ್ಯವಸ್ಥೆ ಮಾಡುತ್ತೇನೆ.

ಅಂಬೆಯೀಗ ಸ್ವಲ್ಪ ಶಾಂತಳಾಗಿದ್ದಾಳೆ. ಮತ್ತೆ ತವರಿಗೆ ಮರಳುವುದೆಂದರೆ ಅದು ಪ್ರಾಣ ಕಳಕೊಂಡಂತೆ. ಸ್ವಯಂವರದಲ್ಲಿ ಪಣವಾದ ಹೆಣ್ಣು ಮತ್ತೆ ತಂದೆಯಮನೆಗೆ ಕಾಲಿಡಲಾರಳು. ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳಲೇಬೇಕು. ಅವಳ ಮನಸ್ಸೀಗ ನ್ಯಾಯಾನ್ಯಾಯದ ಯೋಚನೆಯಲ್ಲಿ ಮುಳುಗಿದೆ. ಹೌದು, ಈ ಭೀಷ್ಮ ಬರುವ ಮೊದಲು ಎಲ್ಲ ರಾಜರನ್ನೂ ಗೆದ್ದವನು ಸಾಲ್ವ. ಇವನು ಬಾರದಿರುತ್ತಿದ್ದರೆ ಅವನೇ ವಿಜಯಿಯಾಗುತ್ತಿದ್ದ. ಆದ್ದರಿಂದ ನಿಜವಾಗಿಯೂ ಪಣವನ್ನು ಗೆದ್ದವನು ಅವನೇ. ತಾನು ಅವನನನ್ನೇ ಮದುವೆಯಾಗುವುದು ಸರಿ. ಎಲ್ಲವನ್ನೂ ಅಳೆದುಸುರಿದು ಮಾತಾಗುತ್ತಾಳೆ.

ಅಯ್ಯಾ ಭೀಷ್ಮಾ,
ಸುಮ್ಮನೆ ಒಬ್ಬರನ್ನೊಬ್ಬರು ದೂಷಿಸಿ ಫಲವೇನು? ನಿನ್ನ ನ್ಯಾಯ ನಿನಗೆ. ನನ್ನ ನ್ಯಾಯ ನನಗೆ. ನನ್ನ ಪ್ರಕಾರ ಪಣವನ್ನು ಗೆದ್ದವನು ಸಾಲ್ವದೇಶದ ದೊರೆ. ಅವನಲ್ಲಿಗೆ ನನ್ನನ್ನು ಕಳಿಸಿಬಿಡು. ನಾನವನನ್ನೇ ವರಿಸುತ್ತೇನೆ.

ಇಲ್ಲಿಗೆ ನಮ್ಮ ಒಂದು ಅಂಕ ಮುಗಿದು ಅಪ್ಪ ಮುದಿಬ್ರಾಹ್ಮಣನೊಬ್ಬನನ್ನು ಅಂಬೆಯ ರಕ್ಷಣೆಗೆ ಕಳಿಸುವ ಹಾಸ್ಯದ ಸನ್ನಿವೇಶದ ಬ್ರಾಹ್ಮಣನಾಗಿ ಅಂಬೆಯಾಗುವ ನನ್ನನ್ನು ಪರಿಪರಿಯಾಗಿ ಕಾಡುತ್ತಿದ್ದ. ಕೈಹಿಡಿಯಲೊಲ್ಲೆನೆಂದರೆ ಕೋಲನ್ನಾದದದರೂ ಹಿಡಿಯೆಂದು, ಅಂಬೇ ಎಂದು ಕರೆಯುವುದನ್ನು ಬೇಕಂತಲೇ ದೀರ್ಘಗೊಳಿಸಿ ಅಂಬೇ… ಎಂದು ದನದ ಕರುವನ್ನು ಕರೆಯುವಂತೆ ಛೇಡಿಸುತ್ತಾ ನನ್ನ ಸಹನೆಯೊಂದಿಗೆ ಆಟವಾಡುತ್ತಿದ್ದ. ಉಳಿದವರೆಲ್ಲ ಅವನ ಈ ಆಟದ ತಮಾಷೆಯನ್ನು ಆನಂದಿಸುತ್ತಿದ್ದರೆ, ನಾನು ಮಾತ್ರ ಅಂಬೆಯಂತೆಯೇ ಉರಿಯುತ್ತಿದ್ದೆ.

ಸಾಲ್ವ ಒಲಿದು ಬಂದ ಹೆಣ್ಣಿಗೆ ಒಂದಿನಿತೂ ಕರುಣೆತೋರದೇ ಹೊರಗಟ್ಟಿದ. ಅಂಬೆಗೀಗ ಎರಡೂ ದಾರಿಗಳು ಮುಚ್ಚಿಹೋಗಿವೆ. ಅವಳ ಹೃದಯವೀಗ ಕುದಿಯುತ್ತಿದೆ. ಜೊತೆಯಲ್ಲಿ ಬಂದ ಬ್ರಾಹ್ಮಣನ ಚಿನ್ನದ ಬೇಡಿಕೆ ಜೊರಾಗಿದೆ. ಸಾಲ್ವನಿಗೆ ತನ್ನ ಸೋಲಿನದೇ ಚಿಂತೆ. ನೀನೇ ನನ್ನ ಪಾಲಿಗೆ ವಿಜಯಿ ಎಂಬ ಅವಳ ನಿವೇದನೆ ಅವನನ್ನು ತಟ್ಟುತ್ತಿಲ್ಲ. ಅವನಿಗೆ ಲೋಕದ ಕಣ್ಣಿಗೆ ವಿಜಯಿಯಾಗುವ ಬಯಕೆ. ಅಲ್ಲೇ ಸೋಲಾದ ಮೇಲೆ ಇವಳ ದೃಷ್ಟಿಯಲ್ಲಿ ವಿಜಯಿಯಾದದರೆಷ್ಟು, ಬಿಟ್ಟರೆಷ್ಟು ಎಂದವನ ಆಲೋಚನೆ. ಇಷ್ಟೆಲ್ಲ ದಿನ ಭೀಷ್ಮನ ಅರಮನೆಯಲ್ಲಿದ್ದ ಅಂಬೆಯನ್ನು ಸ್ವೀಕರಿಸಿದರೆ ಜನರೆಲ್ಲ ಭೀಷ್ಮನ ಸೊತ್ತನ್ನು ಇವನು ಅನುಭವಿಸುತ್ತಿದ್ದಾನೆ ಎಂದು ನಗುವರೇನೋ ಎಂಬ ಅಂಜಿಕೆ. ಇವೆಲ್ಲವೂ ಸೇರಿ ಅಂಬೆಯನ್ನವನು ಅಕ್ಷರಶಃ ತನ್ನ ಆಸ್ಥಾನದಿಂದ ಅಟ್ಟಿದ್ದಾನೆ. ಅವಳೀಗ ನಿಜವಾದ ಅರ್ಥದಲ್ಲಿ ಏಕಾಂಗಿ.

ಈಗಲಾದದರೂ ಅಪ್ಪನನ್ನು ಸೋಲಿಸಬೇಕೆಂಬ ಬಯಕೆ ಉಕ್ಕುಕ್ಕಿ ಬರುತ್ತಿತ್ತು. ಮರಳಿ ಬಂದು ಭೀಷ್ಮನಲ್ಲಿಗೆ ನಿಲ್ಲುತ್ತಾಳೆ ಅಂಬೆ.

ಎಲವೋ ಭೀಷ್ಮಾ,
ನನ್ನೆಲ್ಲ ವಿಪತ್ತುಗಳಿಗೆ ನೀನೇ ಕಾರಣ. ಸಾಲ್ವನೂ ನನ್ನನ್ನು ತಿರಸ್ಕರಿಸಿದ್ದಾನೆ. ಈಗ ನೀನೇ ನನ್ನನ್ನು ಮದುವೆಯಾಗು. ಅಂದು ತಂದೆಗಾಗಿ ಒಂದು ಪ್ರತಿಜ್ಞೆ ಮಾಡಿದೆ ಎಂದೆಯಲ್ಲ. ಇಂದು ನನಗಾಗಿ ಇನ್ನೊಂದು ಪ್ರತಿಜ್ಞೆ ಮಾಡಿ ಅದನ್ನು ಮುರಿದುಬಿಡು. ನಾನು ನಿನ್ನನ್ನು ಮದುವೆಯಾಗದೇ ಇಲ್ಲಿಂದ ಕದಲಲಾರೆ.

ಭೀಷ್ಮನ ಬಾಯಲ್ಲೀಗ ಅವಾಚ್ಯ ಶಬ್ದಗಳು ಉರುಳುತ್ತಿವೆ.

ಎಲಾ ಜಾರಿಣಿ,
ಅಂದು ಸಾಲ್ವನ ಹೆಸರು ಹೇಳಿಕೊಂಡು ಅವನಲ್ಲಿಗೆ ಓಡಿದೆ. ಸಾಲ್ವ ನನ್ನನ್ನು ಮದುವೆಯಾಗುತ್ತಾನೆ ಎಂದೆಲ್ಲ ಹೇಳಿದೆ. ಬಹುಶಃ ಸಾಲ್ವ ನಿನಗೆ ಮೊದಲೇ ಪರಿಚಿತನಿರಬೇಕೆಂದು ನಾನು ಬಗೆದೆ. ಅವನೇ ನಿನ್ನನ್ನು ತಿರಸ್ಕರಿಸಿದ್ದಾನೆಂದ ಮೇಲೆ ನಿನ್ನಲ್ಲೇ ಏನೋ ಕೊರತೆಯಿರಬೇಕು. ನೀನು ನನ್ನ ತಮ್ಮನಿಗಲ್ಲ, ನಮ್ಮ ದೇಶದ ಯಾವೊಬ್ಬ ಯುವಕನಿಗೂ ಬೇಡ. ಮೊದಲು ಇಲ್ಲಿಂದ ಹೊರಡು. ಇಲ್ಲವಾದಲ್ಲಿ ಸೇವಕರಿಂದ ನಿನ್ನನ್ನು ಎಳೆದುಹಾಕಿಸುತ್ತೇನೆ.

ತನ್ನ ವಿಧಿಯನ್ನು ಶಪಿಸುವುದಲ್ಲದೆ ಈಗ ಬೇರೆ ವಿಧಿಯಿಲ್ಲ ಅಂಬೆಗೆ. ನಿರಾಶಳಾಗಿ ಅಲ್ಲಿಂದ ಹೊರಟಿದ್ದಾಳೆ. ಕಾಡು ಮೇಡೆನ್ನದೇ ಅಲೆಯುತ್ತಾಳೆ. ತನ್ನ ರೂಪನ್ನು ಕಂಡು ಒಲಿದುಬಂದ ಬೇಡನಿಗೆ ಭೀಷ್ಮನನ್ನು ಸೋಲಿಸೆಂದು ಪಂಥವೊಡ್ಡುತ್ತಾಳೆ. ಹೆದರುವನೇ ಭೀಷ್ಮ? ಅವನನ್ನು ಗಳಿಗೆಯೊಂದರಲ್ಲಿ ಬಡಿದುರುಳಿಸುತ್ತಾನೆ. ಮತ್ತೆ ಅಂಬೆಯ ಅಲೆದಾಟ ಶುರು. ಈ ಸಲ ಸಿಕ್ಕವರು ಮಹಿಮಾನ್ವಿತರೆ. ಭೀಷ್ಮನ ಪರಮಗುರು ಪರಶುರಾಮನಿಗೆ ವಿಷಯವೆಲ್ಲವನ್ನೂ ಹೇಳುತ್ತಾಳೆ ಅಂಬೆ. ಅವರಿಗೂ ಭೀಷ್ಮನದ್ದು ತಪ್ಪೆಂದು ಮನವರಿಕೆಯಾಗುತ್ತದೆ. ಅವನಿಗೆ ಬುದ್ದಿಹೇಳಿ ಮದುವೆ ಮಾಡುವುದಾಗಿ ಮಾತುಕೊಡುತ್ತಾರೆ. ಭೀಷ್ಮ ಗುರುಗಳ ಮಾತಿಗೂ ಕ್ಯಾರೆ ಎನ್ನುವುದಿಲ್ಲ. ಯುದ್ಧಕ್ಕೆ ಆಹ್ವಾನಿಸಿದಾಗಲೂ ತನಗೆ ಜಯವಾಗುವಂತೆ ಹರಸಿ ಗುರುವೆ ಎಂದು ವಿನಯವಂತಿಗೆಯೊಂದಿಗೆ ಸಿದ್ಧನಾಗುತ್ತಾನೆ. ಸೋಲದಿದ್ದರೂ ಗೆಲುವಂತೂ ಗುರುವಿಗೆ ಸಿಗುವುದಿಲ್ಲ. ಅವರೂ ಹಾಗೆಯೇ ಹೊರಟರು. “ನಿನ್ನ ಪ್ರಾರಾಬ್ಧವದು ಮಗಳೆ. ನೀನೇ ಅನುಭವಿಸಬೇಕು. ಹೋಗು ಎಲ್ಲಿಯಾದರೂ ಹೋಗಿ ತಪಸ್ಸು ಮಾಡುತ್ತಾ ಉಳಿದ ಆಯುಷ್ಯವನ್ನು ಕಳೆ” ಎಂದು ಉಪದೇಶಿಸುತ್ತಾರೆ.

 

ಬಹುಶಃ ಜಗತ್ತಿನಲ್ಲಿ ಸುಲಭವಾಗಿ ಮಾಡಲಾಗುವುದೆಂದರೆ ಉಪದೇಶ ಮಾತ್ರವೆನಿಸುತ್ತದೆ. ಮದುವೆಯ ಕನಸು ಹೊತ್ತ ಜೀವವದು. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ನೋವು ಎದೆಯೊಳಗೆ ಹೆಪ್ಪುಗಟ್ಟಿದೆ. ತನ್ನದು ಸರಿಯೆಂಬ ಭಾವ ಇಂದಿಗೂ ಮನದೊಳಗೆ ಗಟ್ಟಿಯಾಗಿದೆ. ತಪ್ಪಿಲ್ಲದ ತನ್ನ ಜೀವನ ಹೀಗಾಯಿತಲ್ಲ ಎಂಬ ಕೊರಗು ಕಾಡುತ್ತಿದೆ. ಇನ್ನೊಬ್ಬರು ಹೇಳಿದಂತೆ ಕೇಳುವ ಯಂತ್ರವಾಗಿ ಬದುಕಲಾರೆನೆಂದು ಮನಸ್ಸು ರಚ್ಚೆ ಹಿಡಿದಿದೆ. ಮುಂದಿನ ದಾರಿ ಕಾಣುತ್ತಿಲ್ಲ. ಇಷ್ಟೆಲ್ಲ ಸಂಘರ್ಷಗಳ ನಡುವೆ ತಣ್ಣಗೆ ಕುಳಿತು ತಪಸ್ಸನ್ನು ಮಾಡಲಾರಳು ಅವಳು. ಬೆಂಕಿಯ ಜ್ವಾಲೆಯಂತೆ ಉರಿದಳು. ಬೆಂಕಿಗೇ ತನ್ನ ಜೀವವನ್ನು ಸಮರ್ಪಿಸಿದಳು. ಬೇಡದವನೊಂದಿಗೆ ಮದುವೆಯಾಗಿ ಬದುಕನ್ನು ಕಾಲದ ಪ್ರವಾಹಕ್ಕೆ ಒಪ್ಪಿಸಲಿಲ್ಲ. ಪ್ರವಾಹದ ವಿರುದ್ಧವಾಗಿ ಈಜುತ್ತ ಸಾಗಿದಳು. ಕೊನೆಯ ಕ್ಷಣದವರೆಗೂ ಜೀವಂತವಾಗುಳಿದಳು.

ನಾನು ಬೆಂಕಿಯಲ್ಲಿ ಹಾರುತ್ತೇನೆಂದು ಪ್ರತಿಜ್ಞೆಗೈದು, ನನ್ನ ದಟ್ಟ ಕೂದಲನ್ನು ಮುಖದ ತುಂಬೆಲ್ಲ ಹರಡಿ, ಆವೇಶ ಬಂದವಳಂತೆ ಗರಗರನೆ ತಿರುಗುತ್ತಾ, “ಭೀಷ್ಮಾ, ನಿನ್ನನ್ನು ಬಿಡಲಾರೆ, ಈ ಜನ್ಮದಲ್ಲಲ್ಲದಿದ್ದರೂ ಇನ್ನೊಂದು ಜನ್ಮವೆತ್ತಿಯಾದರೂ ನಿನ್ನನ್ನು ಕೊಲ್ಲುತ್ತೇನೆ” ಎಂದು ಅಬ್ಬರಿಸಿ ತಣ್ಣಗಾದಮೇಲೆ ಅಪ್ಪ ನಗುತ್ತ ಹೇಳುತ್ತಿದ್ದರು, “ಅಂತೂ ಒಂದು ಪೀಡೆ ತೊಲಗಿತು.” ಆಗ ನನಗೆಷ್ಟು ಕೋಪ ಬರುತ್ತಿತ್ತೆಂದರೆ ಒಂದಲ್ಲ ಒಂದು ದಿನ ಅಂಬೆಯನ್ನು ಗೆಲ್ಲಲೇಬೇಕೆಂಬುದು ಹಠವಾಗಿ ಬೆಳೆಯುತ್ತಿತ್ತು. ಹೀಗೆ ಅಂದು ಆ ನೀರವ ರಾತ್ರಿಗಳಲ್ಲಿ ನನ್ನೊಳಗೆ ತುಂಬಿಕೊಂಡ ಅಂಬೆ ಇಂದಿನವರೆಗೂ ತನ್ನ ಗೆಲುವಿಗಾಗಿ ನನ್ನನ್ನು ಕಾಡುತ್ತಲೇ ಇರುತ್ತಾಳೆ. ವಿನಾಕಾರಣ ಜಾರಿಣಿಯೆಂದು ತನ್ನನ್ನು ಮೂದಲಿಸಿದ ಭೀಷ್ಮನನ್ನು ಕಂಡಾಗಲೆಲ್ಲ ಕಿಡಿಕಾರುತ್ತಾಳೆ. ತನ್ನನ್ನು ಆಶಿಸಿಯೂ ಭೀಷ್ಮನನ್ನು ಗೆಲ್ಲಲಾರದ ಬೇಡನ ಅಸಹಾಯಕತೆಗೆ ಮರುಗುತ್ತಾಳೆ. ಮದುವೆಯಾಘುವ ಹೆಣ್ಣಿಗೆ ತಪಸ್ಸನ್ನಾಚರಿಸುವಂತೆ ಸಲಹೆ ನೀಡಿದ ಪರಮಗುರುಗಳನ್ನು ತಿರಸ್ಕರಿಸುತ್ತಾಳೆ. ಬೆಂಕಿಯಲ್ಲಿ ಬೇಯುತ್ತಲೇ ಮತ್ತೆ ತಣ್ಣಗಾಗಿ ಮಾತನಾಡುತ್ತಾಳೆ.

ನಿಜಕ್ಕೂ ಅಂಬೆಯ ಬದುಕು ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವ ಎಲ್ಲ ಮಹಿಳೆಯರ ಬದುಕೂ ಹೌದು. ಅಂಬಿಕೆ, ಅಂಬಾಲಿಕೆಯರಂತೆ ಪ್ರವಾಹದಗುಂಟ ಸಾಗುವ ಮಹಿಳೆಯರೆಲ್ಲ ನಮಗೆ ಸಂಸ್ಕೃತಿಯ ವಕ್ತಾರರಂತೆ, ಪರಂಪರೆಯ ವಾಹಕರಂತೆ ಕಾಣಿಸುತ್ತಿರುತ್ತಾರೆ. ಆದರೆ ವ್ಯವಸ್ಥೆಯನ್ನು ಪ್ರಶ್ನಿಸುವ ಅಂಬೆಯಂಥವರ ಬದುಕು ಅಪವಿತ್ರವೆನಿಸುತ್ತದೆ, ಪೀಡೆಯೆನಿಸುತ್ತದೆ.

ಒಂದುದಿನ ಅಂಬೆಯನ್ನು ಗೆಲ್ಲಿಸಬೇಕಿತ್ತು ನಾನು ಅನಿಸುತ್ತದೆ. ನನ್ನೊಳಗಿನ ಅಂಬೆ ಆ ದಿನಕ್ಕೆಂದು ಕಾಯುತ್ತಾಳೆ.

‍ಲೇಖಕರು Avadhi

November 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

14 ಪ್ರತಿಕ್ರಿಯೆಗಳು

    • Kumar vantamure

      ಅಂಬೆಯ ಗೊಳು,ಭೀಷ್ಮರ ವ್ಯಕ್ತಿತ್ವ ಚನ್ನಾಗಿ ಬಿಂಬಿತವಾಗಿದೆ.

      ಪ್ರತಿಕ್ರಿಯೆ
  1. ಸುಧಾರಾಣಿ ನಾಯ್ಕ,ಸಿದ್ದಾಪುರ

    ಚೆನ್ನಾಗಿದೆ ನಿಮ್ಮ ಲೇಖನ.ವ್ಯವಸ್ಥೆಯನ್ನು ಪ್ರಶ್ನಿಸುವ ಅಂಬೆಯಂತವರ ಬದುಕು ಅಪವಿತ್ರವೆನಿಸುತ್ತವೆ,ಪೀಡೆಯೆನಿಸುತ್ತವೆ…ನಿಜಕ್ಕೂ ಇಂದಿಗೂ ಸತ್ಯವೇ.

    ಪ್ರತಿಕ್ರಿಯೆ
  2. Sathya munnudi

    ತುಂಬಾ ಚೆನ್ನಾಗಿದೆ ನಿಮ್ಮ ಬರವಣಿಗೆ ಇಷ್ಟ ಅಯಿತ್ತು ಸಾಗಲಿ ಬರವಣಿಗೆ ಮೆರೆಯಲಗಲ್ಲಿ ತಿಳುವಳಿಕೆಯ ಮೆರವಣಿಗೆ

    ಪ್ರತಿಕ್ರಿಯೆ
  3. Ahalya Ballal

    ಅಂದಿನ “ಯುಗಧರ್ಮ” ಹಾಗಿತ್ತಲ್ಲ, ಸುಧಾ.

    “ಸೋಲು-ಗೆಲುವು”, “ತಪ್ಪು-ಸರಿ” , “ಒಳ್ಳೆಯದು-ಕೆಟ್ಟದು” ಎಂದು ನೋಡುವ ಸರಳ ಧ್ರುವೀಕೃತ ಮಾದರಿಯನ್ನು ಪಕ್ಕಕ್ಕೆ ಸರಿಸಿದಾಗ ಇನ್ನೇನೋ ಸಾಧ್ಯವಾಗುತ್ತದೆ, ಎನ್ನುತ್ತಿದೆಯಲ್ಲ ಈ ಯುಗ.

    ನಿಮ್ಮೊಳಗಿನ ಅಂಬೆ ಎಷ್ಟು ಸಹಾನುಭೂತಿಯಿಂದ ಇನ್ನೊಬ್ಬರ ನೋವಿಗೆ ಸ್ಪಂದಿಸುತ್ತಿದ್ದಾಳೆ ನೋಡಿ. ಇದಕ್ಕಿಂತ ಹೆಚ್ಚಿನ ‘ಗೆಲುವು’ ಉಂಟೇ?

    ಇಷ್ಟವಾಯ್ತು ಬರವಣಿಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: