ಕೊಳಲು
ಲಕ್ಷ್ಮಿಕಾಂತ ಇಟ್ನಾಳ್
ಯಾರಿದ್ದೀರಿ, ತೆರೆದ ಮನೆಯಲ್ಲಿ?
ನಾವಿದ್ದೇವೆ, ನಾವು,…. ನಾವೆಂದರೆ?
ನಾನು ಇವಳು ಮತ್ತೆ ಮಗಳು
ಮೂರೇ ಜನಾನಾ?

ಇಲ್ಲ ಇಲ್ಲ, ಪುಟ್ಟ ಖುಷಿ, ವಯಸ್ಸಾದ ಬುದ್ಧಿಯೂ ಇದೆ,
ಈ ಖುಷಿಯಂತೂ ಓಡಾಡಿಕೊಂಡಿರುತ್ತದೆ ನಮ್ಮ ಮುಖಗಳಲ್ಲಿ , ಮನಗಳಲ್ಲಿ
ತಂಗಾಳಿಯಂತೆ…ಮುದವಾಗಿರುತ್ತದೆ,
ಒಂದೇ ಕಡೆಗಿರುವುದಿಲ್ಲ ಅದು….ಬೆಕ್ಕಿನಂತೆ
ಈ ಸಾರಿ ಕೈಗೆ ಸಿಕ್ಕರೆ, …..ಬೆಲ್ಟ್ ಹಾಕಿ ಬಿಡಬೇಕು ಅದಕ್ಕೆ!
ಬುದ್ಧಿಗೆ ಕಾಲಿಲ್ಲ, ಹೀಗಾಗಿ ಬಿದ್ದುಕೊಂಡಿದೆ, ವಟ ವಟ ಹಚ್ಚಿರುತ್ತದೆ,
ನಾವು ಚಹ ಕುಡಿದರೆ, ಕಷಾಯದ ಬಗ್ಗೆ ಹೇಳುತ್ತದೆ,’ ಕುರುಕುರು’ ಮೆದ್ದರೆ, ಊಟದ ಮಾತಾಡುತ್ತದೆ,
ಇನ್ನು ಪಿಜ್ಜಾ ಬರ್ಗರ್ಗಳನ್ನು ಅದರ ಕಣ್ತಪ್ಪಿಸಿಯೇ ತಿನ್ನಬೇಕು,
ಬೆಳಿಗ್ಗೆ ಬೇಗ ಏಳಲು, ವ್ಯಾಯಾಮ ಮಾಡಲು, ವಾಕಿಂಗ್ ಹೋಗಲು ಪೀಡಿಸುತ್ತಿರುತ್ತದೆ,
ಪ್ರತಿಸಾರಿ ಬತ್ತಳಿಕೆಯಿಂದ ನೆಪಗಳನ್ನು ಹುಡುಕುತ್ತಲೇ ಇರುತ್ತೇನೆ ನಾನೂ
ಮಗನ ರೂಮಲ್ಲಿ ಕಾಲಿಟ್ಟರೆ ‘ಖಾಲಿ’ಯೊಂದು ಅಪ್ಪಿ ಬಿಡುತ್ತದೆ
ಆದರೂ ನನಗೆ ಒಂಟಿಯಾಗಲು ಬಿಡುವುದಿಲ್ಲ ಅದು,
ಹಳೆಯ ಘಟನೆಗಳು, ಕಳೆದ ಗಳಿಗೆಗಳನ್ನು ಹೆಗಲೇರಿಸಿ ಬಿಡುತ್ತದೆ,
ಎಷ್ಟೊಂದು ಓದು ಅವನದು, ತೆರೆಗಳಂತೆ ಮುಗಿಯುತ್ತಿರಲೇ ಇಲ್ಲ,
ಅವನಿತ್ತ ತಿರುಗಿದರೆ ನಾನು, ಅತ್ತ ಅಮ್ಮ, ಜೊತೆಯಲ್ಲೆ ಸುಮ್ಮನೆ,
ರಾತ್ರಿ ಬಹುಹೊತ್ತು ಉರಿಯುತ್ತಿತ್ತಲ್ಲವೇ ದೀಪ ಅವನ ರೂಮಲ್ಲಿ,
ಅವ ಮರೆತ ಊಟ, ಕುಡಿಯದ ಹಾಲಿನ ಲೋಟಗಳಿಗೆ ಲೆಕ್ಕವೇ ಇಲ್ಲ
ಬಲು ಅಭಿಮಾನದ ಕೂಸು, ಕಣ್ಣಲ್ಲಿ ಕನಸೇ ಕುಣಿಯುತ್ತಿದ್ದವು,
ಮಲಗಿದಾಗ ತಲೆಯನ್ನು ನೇವರಿಸುತ್ತ ಕುಳಿತುರುತ್ತಿತ್ತು ಜೀವ,
ನಾವೆಂದರೆ ಅದೆಷ್ಟು ಕಾಳಜಿ, ಪ್ರೀತಿ
ಅದು ಹಾಗಲ್ಲ, ….ಅದು ಅವನ ಸ್ವಭಾವ ಇವಳನ್ನುತ್ತಿದ್ದಳು.. .
ಅಕಸ್ಮಾತ್ ಏನಾದರೂ ಹುಡುಕಿ ಹೋದರೆ,
ಕೆಲವೊಮ್ಮೆ ಅವನ ಆ ಶಟರ್ುಗಳು, ಸೂಟುಗಳು ನನ್ನೆಡೆ ದಿಟ್ಟಿಸಿ ನೋಡುತ್ತವೆ,
ಮುಟ್ಟಿದರೆ ಮುತ್ತಿ ಬಿಡುತ್ತವೆ ನೆನಪುಗಳು! ಉಕ್ಕಿಬರುತ್ತವೆ ಕಂಬನಿಗಳು, ಅದೆಲ್ಲಿರುತ್ತವೋ!
ದುಡಿತದ ಕಾಲುಗಳಿಗೆ ಸರಹದ್ದುಗಳು ನೆರೆಮನೆಗಳೀಗ,
ಅವನು ವಿದೇಶದಿಂದ ಬಂದಾಗ ನೋಡಬೇಕು, ಈ ರೂಮಿಗಷ್ಟೇ ಅಲ್ಲ, ಮನೆತುಂಬ ಖುಷಿ ಹೊಕ್ಕುಬಿಟ್ಟಿರುತ್ತದೆ,..,
‘ನಗು’ವಿನ ಕಿಲಕಿಲ ಗೋಡೆ ಬಾಗಿಲುಗಳಿಗೂ…. ಮನೆಯೆಂಬ ಮನೆ ಮಯನ ಮಹಲು…,
ಕಿಟಕಿಗಳು ಖುಷಿ ಹಂಚಿಕೊಳ್ಳುವುದನ್ನು ನೋಡಿದ್ದೇನೆ, ..ತಂಗಾಳಿ ತೀಡಿದಾಗ
‘ಮಲಕೊಳ್ಳಿರಿ ಸಾಕಿನ್ನು’ ಎಚ್ಚರಿಸುತ್ತದೆ ಬುದ್ಧಿ, ನಗು ಕಲರವಕ್ಕೆ ನಿದ್ದೆ ಬರದೇ

ಈ ನಗುವಿಗೂ ಖುಷಿಗೂ ಬಿಟ್ಟಿರದ ವಾತ್ಸಲ್ಯ ,
ಮಗನಿಗೂ ಅಮ್ಮನಿಗೂ ಇರುವ ಹಾಗೆ!
ಆದರೆ ಮಗಳ ರೂಮಲ್ಲಿ ಹೆಚ್ಚಾಗಿ ಏಕಾಂತವೇ ಅವಳ ‘ಸಾಥಿ’
ಊಟವಾಯಿತೇ ಎಂದರೆ, , ಅದೇ ಗೋಣು ಹಾಕುತ್ತದೆ, ಹೂಂ ಉಹೂಂ ಅಷ್ಟೇ..
ಅವಳ ಪರೀಕ್ಷಾ ಸಮಯದಲ್ಲಿ ಅವಳೊಡನೆ ‘ಆತಂಕ ‘ ಬಿಟ್ಟೇ ಹೋಗುವುದಿಲ್ಲ,
ಅವಳೊಡನೆ ಪರೀಕ್ಷಾ ಕೋಣೆವರೆಗೂ ಜೊತೆ ಹೋಗಿರುತ್ತದೆ, ಅಂಥ ಸ್ನೇಹ!
ಆದರೂ ಬರುವಾಗ ಮಾತ್ರ ಹೆಚ್ಚಾಗಿ ಖುಷಿಯೇ ಅವಳನ್ನು ಕರೆತರುತ್ತದೆ
ಮಕ್ಕಳಿವು ನನಗಿಂತ ದೊಡ್ಡವು ಈಗ,
ವರ್ತಮಾನಗಳೀಗ ಇತಿಹಾಸವಾಗಿ ನನ್ನ ಬುದ್ಧಿಯನ್ನು ತಿದ್ದುತ್ತಿರುತ್ತವೆ
ನನ್ನ ತಿಳುವಳಿಕೆಯನ್ನು ಹದಗೊಳಿಸುತ್ತವೆ ಇನ್ನಷ್ಟು
ಇಂತಿಪ್ಪ ಮನೆಯಲ್ಲಿ, ಖುಷಿಯೇ ಕುಣಿಯುತ್ತಿದೆ, ಮನ ಕಾಮನಬಿಲ್ಲಿನ ಶಾಮಿಯಾನಾ,
ಮನೆಯ ಅಂಗಳದಲ್ಲಿ ಹೂವೊಂದು ಅರಳಲಿದೆ
ಇಳಿದು ಬರಲಿವೆ ಚುಕ್ಕಿ ಚಂದ್ರಮರು ಧರೆಗೆ
ತುಂಬಲಿದೆ ಮನೆಯಿದು ನಮ್ಮದು,
ಮನೆಯಲ್ಲಿ ನೆಲೆಸಿದ ಶಾಂತಿಗೆ ಕಾಂತಿ ಬರಲಿದೆ
ಒಲವಿನ, ಗೆಲುವಿನ, ಚಲುವಿನ, ನಲಿವಿನ
ಕಾಮನಬಿಲ್ಲಿನ ರಂಗನು ಹೊತ್ತು
ಖುಷಿ ಬರಲಿದೆ, ಮನೆಗಿನ್ನೊಂದು
ಕಾಲುಗಳು ನೆಲದ ಮೇಲಿಲ್ಲ ನಂದು
ಹೃದಯದ ಹಾಡೀಗ ‘ಶೃತಿ’ ಶುದ್ಧ ಜೇನು
ಎದೆಯಾಳದ ಕರೆಗೆ ರಂಗೋಲಿಯಾದ ಬಾನು
ದೀಪದಾರುತಿಯಾಗಿಹವು ಕಂಗಳು
ನಗುಹೂವಿನ ಕೊಳಲ ಕರೆಗೆ
ಬರಮಾಡಲು ಅಣಿಯಾಗಿವೆ ಮನ,
ನವ ರಾಗದ ವೀಣೆಯ ಶೃತಿಗೆ,
ಹೊಸ ಹಾಡಿನ ಹೊಸ ಕನಸಿನ ಕುಡಿಗೆ!






dear Sir,
reading your poem, I grew envious of you both for the poetry (new way of expression using not so new
words and phrases ) but also for the creation of images of ” blessed and happy tones of sukhee samsaara ” . i thoroughly enjoyed reading the poem
ಶಶಿಕಲಾ ಮೇಡಂ ಜಿ, ತಮ್ಮ ಅನಿಸಿಕೆಗೆ ತಾಕದಷ್ಟು, ನಿಲುಕದಷ್ಟು ಕುಬ್ಜ ನಾನು. ಒಂದೊಳ್ಳೆಯ ನಿಮಂತಹ ಸಹೃದಯಿ ಓದುಗರ ಮುಂದೆ ನಿಲ್ಲಲೂ ಅರ್ಹತೆ ಇರದವನು ನಾನು. ಹೌದು ವಂದನೆಗಳನ್ನು ನಮ್ರನಾಗಿ ಹೇಳುವ ಧೈರ್ಯ ಮಾತ್ರ ತೋರುವೆ. ವಂದನೆಗಳು…. ಮನದಾಳದಿಂದ.
ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಕೊಳಲು ಕವನ ಸೊಗಸಾಗಿದೆ ತಂದೆಯ ಅತಂಕ ತಲ್ಲಣ ಮಕ್ಕಳ ಮೇಲಿನ ಕಾಳಜಿಗಳು ಪ್ರತಿಯೊಂದು ಮನೆಯ ತಂದೆಯ ಕಾಳಜಿಯಾಗುತ್ತದೆ ಹೀಗಾಗಿ ಕವನ ಸಾರ್ವತ್ರಿಕತೆಯನ್ನು ಪಡೆದು ಕೊಳ್ಳುತ್ತದೆ. ಹೊಸ ಹಾಡಿನ ಹೊಸ ಕನಸಿನ ಕುಡಿಗೆ ನಿಮ್ಮ ಕೊಳಲು ಒಂದು ವಾಹಕ.
ಕವಿ ಲೇಖಕ ಹನುಮಂತ ಅನಂತ ಪಾಟೀಲ ಸರ್, ತಾವು ಹಾದು ಬಂದ ಜಾಡಿನಲ್ಲಿ ನಾನೀಗ ತಲುಪಿರುವೆ, ತಂದೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ, ಹೆಚ್ಚು ಪ್ರೀತಿಯನ್ನು ತೋರಿದರೆ ಮಕ್ಕಳು ಕೆಟ್ಟು ಹೋದಾರೆಂಬ ಬೇಗುದಿಯಲ್ಲಿ ಅದನ್ನು ಹೊರಹಾಕಲಾರದೇ, ಒಳ ಹುದುಗಿದ ಪ್ರೀತಿಯನ್ನು ಮಕ್ಕಳೆಡೆ ತೋರಲಾರದೇ, ಹೊರದುಡಿತದಲ್ಲಿ, ತುಡಿತದಲ್ಲಿ ಬರೀ ಬಂಡೆಯಂತೆ ಕಾಣುವ ಅಪ್ಪನೆಂಬ ನೂರಾರು ಬದುಕಿನ ದೋಣಿಯ ಅಂಬಿಗರಲ್ಲಿ ನಾನೂ ಒಬ್ಬ. ಆಗಸದಷ್ಟು ಸಾಗರವಷ್ಟು ಪ್ರೇಮವನ್ನು ಪ್ರೀತಿಯನ್ನು ಎದೆಯಲ್ಲಿ ಬಚ್ಟಿಟ್ಟುಕೊಂಡು ಆಗಾಗ ಬೊಗಸೆಯಷ್ಟನ್ನೇ ನೀಡುವ, ಕರಿಮೋಡದಂತಲ್ಲವೇ ಈ ಅಪ್ಪ. ಹದವಾದ ನೆನಪುಗಳು ಎದೆಗೆ ತಂಪೀವಿ, ನೆನಪುಗಳ ಮೋಡಗಳಲ್ಲಿ ಅದೆಂಥ ಮಳೆ ಈಗ ಎದೆಯೆಂಬ ಅಂಗಳದಲ್ಲಿ, ಬಹುತೇಕರಿಗೆ ಇದು ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಅಂಥವರ ಸಾಲಲ್ಲಿ ಕೊನೆಯವನು ನಾನು…ತಮ್ಮ ಮೆಚ್ಚುಗೆಗೆ ತೀರದ ವಂದನೆಗಳು ಸರ್,
ಇಂಥ ಕವನಗಳನ್ನು ಬರೆಯುವವರೆ ಇಲ್ಲವೇ ಎಂದುಕೊಳ್ಳುತ್ತಿದ್ದೆ, ಖುಷೀ ಖುಷೀ. ನಮಸ್ಕಾರ.
ಲಿಲಿತಾ ಸಿದ್ಧಬಸವಯ್ಯಾ ರವರೇ, ತಮ್ಮ ಆಪ್ತ ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು.
olle kavana manassige muda niditu vandanegalu manyare.
Basavanneppa.Kambar
ಆತ್ಮೀಯ ಬಸನಣ್ಣೆಪ್ಪ ಕಂಬಾರರವರೇ, ಕವನದ ಮೆಚ್ಚುಗೆಗೆ ವಂದನೆಗಳು
tumbaa aatmeeya kavana..
ಎಮ್ ಎಮ್ ಶೇಖ ಮೇಡಂ ಜಿ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು