ಹೊಸತನಕ್ಕೆ ತುಡಿವ ಮನ ಹೋಯಿತೆಲ್ಲಿಗೆ? – ಜಿ ಪಿ ಬಸವರಾಜು

ಜಿ ಪಿ ಬಸವರಾಜು

ಸರಿಯಾಗಿ ಒಂದು ಶತಮಾನದ ಹಿಂದೆ ಟಿ.ಎಸ್. ಎಲಿಯಟ್ ಬರೆದ ‘ದಿ ಲೌ ಸಾಂಗ್ ಆಫ್ ಜೆ.ಆಲ್ಫ್ರೆಡ್ ಪ್ರುಫ್ರಾಕ್’ ಪದ್ಯ ಇಂಗ್ಲಿಷ್ ಸಾಹಿತ್ಯದಲ್ಲಿ ಒಂದು ಅಪೂರ್ವ ಘಟನೆಯೆಂದು ಪರಿಗಣಿಸಲ್ಪಟ್ಟಿದೆ. ಈ ಪದ್ಯದ ಶತಮಾನೋತ್ಸವವನ್ನು ಇಂಗ್ಲಿಷ್ ಕಾವ್ಯ ಪ್ರೇಮಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಎಲಿಯಟ್ನ ಪ್ರತಿಭೆ, ಈ ಪದ್ಯದ ಹೊಸತನ, ಅದರ ಹಿಂದಿನ ಹಲವಾರು ಸಾಹಿತ್ಯಕ ಸಂಗತಿಗಳ ಸುತ್ತ ಅನೇಕ ಲೇಖನಗಳು ಪ್ರಕಟವಾಗಿವೆ.
ಆ ಕಾಲದಲ್ಲಿ ಹೊಸ ಅಭಿವ್ಯಕ್ತಿಗಾಗಿ, ವಿಶೇಷವಾಗಿ ಕಾವ್ಯದಲ್ಲಿನ ಪ್ರಯೋಗಗಳಿಗಾಗಿಯೇ ಆರಂಭವಾಗಿದ್ದ (1912) ‘ಪೊಯೆಟ್ರಿ’ ಮಾಸಿಕದಲ್ಲಿ ಪ್ರಕಟಣೆಗೆಂದು ಯುವಕ ಎಲಿಯಟ್ ಈ ಪದ್ಯವನ್ನು ಕಳುಹಿಸಿದಾಗ ಕೂಡಲೇ ಅದಕ್ಕೆ ಮಾನ್ಯತೆ ಸಿಕ್ಕಲಿಲ್ಲ. ಅದರ ಸಂಪಾದಕಿ ಹ್ಯಾರಿಯಟ್ ಮನ್ರೊ ಈ ಪದ್ಯವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಹೊಸ ಬಗೆಯ ರುಚಿಯನ್ನು, ಅಭಿವ್ಯಕ್ತಿಯನ್ನು ಬಲ್ಲವನಾಗಿದ್ದ ಅಮೆರಿಕದ ಕವಿ ಎಜ್ರಾಪೌಂಡ್ ‘ಪೊಯೆಟ್ರಿ’ಯ ವಿದೇಶೀ ಪ್ರತಿನಿಧಿಯಾಗಿದ್ದ. ಪೌಂಡ್ ಈ ಪದ್ಯವನ್ನು ಓದಿ ರೋಮಾಂಚನಗೊಂಡ. ಇಲ್ಲಿನ ತಾಜಾತನ, ಹೊಸ ಜಾಡನ್ನು ಹುಡುಕುವ ಹಂಬಲ, ಅನುಭವದ ಪ್ರಾಮಾಣಿಕತೆಗಳನ್ನು ತಕ್ಷಣ ಗುರುತಿಸಿದ. ‘ನವ್ಯ ಕವಿತೆ’ ಎಂದರೆ ಇದೇ ಎಂಬುದು ಆತನಿಗೆ ಮನದಟ್ಟಾಗಿತ್ತು. ಪೌಂಡ್ ಮನ್ರೋಗೆ ಪತ್ರ ಬರೆದು ಈ ಕವಿತೆಯ ಹೆಚ್ಚುಗಾರಿಕೆಯನ್ನು ತಿಳಿಸಿದ. ‘ನಾನು ಈವರೆಗೆ ಓದಿದ ಅಮೆರಿಕನ್ ಕವಿಯೊಬ್ಬನ ಅತ್ಯುತ್ತಮ ಕವಿತೆ ಇದು’ ಎಂದು ಹೇಳಿ ಈ ಕವಿತೆಯನ್ನು ‘ಪೊಯೆಟ್ರಿ’ಯಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದ. ತನಗೆ ಸಂಪೂರ್ಣ ಒಪ್ಪಿಗೆಯಾಗದಿದ್ದರೂ ಪೌಂಡ್ ಅಭಿಪ್ರಾಯವನ್ನು ತಳ್ಳಿಹಾಕಲಾಗದ ಅನಿವಾರ್ಯತೆಯಲ್ಲಿ ಮನ್ರೊ ಇದನ್ನು ಪ್ರಕಟಿಸಿದಳು. ಮುಂದಿನದನ್ನು ಇತಿಹಾಸ ಹೇಳುತ್ತದೆ. ಎಲಿಯಟ್ ಜಗದ್ವಿಖ್ಯಾತ ಕವಿಯಾದ ನೊಬೆಲ್ ಪ್ರಶಸ್ತಿಯನ್ನೂ ಪಡೆದುಕೊಂಡ. ನವ್ಯ ಕಾವ್ಯದಲ್ಲಿ ಎಲಿಟಯಟ್ನನ್ನು ಹೆಸರಿಸದೆ ಮುಂದೆ ಹೋಗಲು ಸಾಧ್ಯವೇ ಇಲ್ಲದಂಥ ಸಂದರ್ಭ ಒದಗಿಬಂತು.
ಹೊಸದನ್ನು ಗುರುತಿಸಿದ ಕೀರ್ತಿ ಪೌಂಡ್ನದಾಯಿತು. ಅಷ್ಟೇ ಅಲ್ಲ, ಎಲಿಯಟ್ನ ‘ದಿ ವೇಸ್ಟ್ ಲ್ಯಾಂಡ್’ ಕವಿತೆಯನ್ನು ಪೌಂಡ್ ತಿದ್ದಿದ ರೀತಿ ಅದ್ಭುತವಾದದ್ದು. ಎಷ್ಟೋ ಸಾಲುಗಳನ್ನು ಒಡೆದು ಹಾಕಿದ; ಸೂಚ್ಯವಾಗಿ ಹೇಳುವುದನ್ನು ಹಾಗೆಯೇ ಹೇಳಬೇಕೆಂದು ಸೂಚಿಸಿದ. ಮಾತುಗಳು ಹೆಚ್ಚಾದ ಕಡೆ ತೆಗೆದುಹಾಕಿದ. ಅನಗತ್ಯವಾದ ವಿವರಗಳನ್ನು ಕತ್ತರಿಸಿದ. ಧ್ವನಿಶಕ್ತಿಯನ್ನು ಹೆಚ್ಚಿಸಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ. ಎಲಿಯಟ್ ತಂಬ ಗೌರವದಿಂದ, ಪೌಂಡ್ ಕಾವ್ಯಶಕ್ತಿಯ ಮೇಲಿದ್ದ ಅಖಂಡ ವಿಶ್ವಾಸದಿಂದ ಪೌಂಡ್ ತೋರಿದ ದಾರಿಯಲ್ಲಿ ನಡೆದ. ’20ನೇ ಶತಮಾನದ ಕಾವ್ಯದಲ್ಲಿ ನಡೆದ ಕ್ರಾಂತಿಗೆ ಪೌಂಡ್’ ನ ಕೊಡುಗೆ ಬಹಳ ಮುಖ್ಯವಾದದ್ದು ಎಂಬುದನ್ನು ಎಲಿಯಟ್ ಬಹಳ ಮುಕ್ತ ಮನಸ್ಸಿನಿಂದ ಸಾರಿದ.

ಇಂಗ್ಲಿಷ್ ಸಾಹಿತ್ಯದಲ್ಲಿ ರೂಪಪಡೆದ ಈ ನವ್ಯ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳ ಮೇಲೆ ಪ್ರಭಾವ ಬೀರಿತು. ಕನ್ನಡದಲ್ಲಿ ಕವಿ ಎಂ.ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ನಡೆದ ಚಳವಳಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವ್ಯಚಳವಳಿಯ ಹುಟ್ಟಿಗೆ ಕಾರಣವಾಯಿತು. ಪೌಂಡ್ನಂತೆ ಅಡಿಗರೂ ಹೊಸದಕ್ಕೆ ಕಣ್ಣು, ಕಿವಿಗಳನ್ನು ತೆರೆದವರಾಗಿದ್ದರು. ಕವಿಯಾಗಿ ಹೊಸ ಅಭಿವ್ಯಕ್ತಿಯ ಮಾರ್ಗವನ್ನು ಕಂಡುಕೊಂಡ ಅಡಿಗರು ಇದೊಂದು ಚಳವಳಿಯಾಗಿ ರೂಪಪಡೆಯಲು ದುಡಿದರು. ‘ಸಾಕ್ಷಿ’ ಪತ್ರಿಕೆಯ ಮೂಲಕ ಅವರು ಹೊಸ ಪ್ರತಿಭೆಗಳನ್ನು ಹುಡುಕಿದರು. ಹೊಸದನ್ನು ಗುರುತಿಸುವ, ಬೆಂಬಲಿಸುವ, ಓದುಗ ವರ್ಗಕ್ಕೆ ಅದನ್ನು ಅರ್ಥಮಾಡಿಸುವ ಬಹುಮುಖ್ಯ ಹೊಣೆಯನ್ನು ಅಡಿಗರು ಹೊತ್ತುಕೊಂಡರು. ಕನ್ನಡ ಸಾಹಿತ್ಯದಲ್ಲಿ ಅಡಿಗರು ಗುರುತಿಸಿದ ಪ್ರತಿಭಾವಂತರು ಎಷ್ಟು ಎಂಬುದನ್ನು ಈಗ ಲೆಕ್ಕಹಾಕಿದರೆ, ನವ್ಯ ಸಾಹಿತ್ಯದಲ್ಲಿ ಪ್ರಸಿದ್ಧರಾದ ಅನೇಕರು ಕಾಣಿಸುತ್ತಾರೆ. ಈ ಪ್ರತಿಭಾವಂತರಲ್ಲಿ ಅಡಿಗರು ಚಿಮ್ಮಿಸಿದ ಚೈತನ್ಯ, ಹೊಮ್ಮಿಸಿದ ಉತ್ಸಾಹ ಎಷ್ಟು ದೊಡ್ಡದಾಗಿತ್ತು ಎಂಬುದು ನಮಗೆ ಈಗ ಸ್ಪಷ್ಟವಾಗುತ್ತದೆ. ಭಾಷೆ, ಶೈಲಿ, ಅಭಿವ್ಯಕ್ತಿಯ ಹೊಸ ಹೊಸ ಸಾಧ್ಯತೆಗಳು, ರಚನೆ, ವಿನ್ಯಾಸ, ಹೀಗೆ ಎಲ್ಲವನ್ನೂ ಒಂದು ಸಮಗ್ರ ಕಲಾಕೃತಿಯ ಒಟ್ಟಂದವಾಗಿ, ಶಿಲ್ಪವಾಗಿ ಅಡಿಗರು ನೋಡಿದ ರೀತಿ, ಪ್ರಾಮಾಣಿಕತೆಯನ್ನು ಅವರು ಪರಿಭಾವಿಸಿದ, ಗೌರವಿಸಿದ ವಿಧಾನ ಈಗಲೂ ಮೆಚ್ಚುವಂತಿವೆ. ಅಡಿಗರ ಈ ಪ್ರಯತ್ನಕ್ಕೆ ಬೆಂಬಲ ನೀಡುವಂತೆ ‘ಸಂಕ್ರಮಣ’, ‘ಕವಿತಾ’ ‘ಲಹರಿ’, ಮೊದಲಾದ ಅನೇಕ ಸಾಹಿತ್ಯ ಪತ್ರಿಕೆಗಳು ಹುಟ್ಟಿಕೊಂಡು ನವ್ಯ ಎನ್ನುವುದು ಒಂದು ಚಳವಳಿಯಾಗಿ ಬೆಳೆಯಲು ಕಾರಣವಾಯಿತು. ಮುಂದೆ ನವ್ಯ ಬರಹಗಾರರಲ್ಲಿಯೇ ಹುಟ್ಟಿಕೊಂಡ ಕವಲುಗಳು, ಬಂಡಾಯದ ಸಂದರ್ಭದಲ್ಲಿ ಅಡಿಗರನ್ನು ಟೀಕಿಸಿದ, ಮಿತಿಗಳನ್ನು ಗುರುತಿಸಿದ, ಇದೆಲ್ಲವನ್ನು ನಿರ್ಭೀತಿ, ನಿರ್ಭಿಡೆಗಳಿಂದ ಹೇಳಿದ ಪ್ರಯತ್ನದ ಹಿಂದೆ ಕೂಡಾ ಅಡಿಗರು ಹಾಗೂ ಅವರಂಥ ಕೆಲವರು ಬರಹಗಾರರು ಇರುವುದು ಕಂಡುಬರುತ್ತದೆ.
ಸಾಹಿತ್ಯ ಎನ್ನುವುದು ಬದುಕಿನಂತೆಯೇ ನಿರಂತರ ಪ್ರವಾಹ. ಹೊಸ ನೀರು ಬರುವುದು, ಹಳೆಯದು ಕೊಚ್ಚಿಹೋಗುವುದು ಸಹಜ. ಆದರೆ ತನ್ನ ಕಾಲದಲ್ಲಿ ಗಟ್ಟಿಯಾಗಿ ನಿಂತು, ಹೊಸದನ್ನು ಹುಡುಕುವ, ಪರಂಪರೆಯನ್ನು ಗೌರವಿಸುವ, ಮೌಲ್ಯಗಳನ್ನು ಬಿಟ್ಟುಕೊಡದೆ ತನ್ನ ತಲೆಮಾರನ್ನು ಪ್ರಭಾವಿಸುವ ಬರಹಗಾರ ದೊಡ್ಡವನಾಗಿ ಕಾಣುತ್ತಾನೆ. ಇದು ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದಿರುವಂಥದೇ. ಪೌಂಡ್ ಇಲ್ಲದಿದ್ದರೆ ಎಲಿಯಟ್ ಪ್ರತಿಭೆ ತನ್ನ ಹೊಸ ದಾರಿಯಲ್ಲಿ ಚಲಿಸುತ್ತಿತ್ತೆ? ಹೊಸತನಕ್ಕೆ ಎಲ್ಲ ಕಾಲದಲ್ಲೂ ಮಾನ್ಯತೆ ಇರುತ್ತದೆ. ಹೊಸತನಕ್ಕೆ ಮನುಷ್ಯನ ಹುಡುಕಾಟ ನಿರಂತರವಾದದ್ದು.
ಇವತ್ತಿನ ಸಾಹಿತ್ಯ ಸಂದರ್ಭವನ್ನು ವಿಶ್ಲೇಷಿಸುವ ಹಲವರು ನಿರಾಶೆಯ ಧ್ವನಿಯಲ್ಲಿಯೇ ಮಾತನಾಡುತ್ತಾರೆ. ಚರಿತ್ರೆಯನ್ನು ಮುಂದಿಟ್ಟು ತಮ್ಮ ಮಾತುಗಳಿಗೆ ಸಮರ್ಥನೆಯನ್ನು ಕೊಡುತ್ತಾರೆ. ಇದು ಸ್ವಲ್ಪಮಟ್ಟಿಗೆ ನಿಜವೂ ಹೌದು. ಆದರೆ ಹೊಸ ಪ್ರತಿಭೆಗಳು ಇವತ್ತು ಕಾಣಿಸುತ್ತಿಲ್ಲವೆ? ಹೊಸ ದನಿಗಳು ಕೇಳಿಸುವುದಿಲ್ಲವೇ? ಇದೆಲ್ಲವನ್ನು ಕಾಣಿಸುವಂತೆ, ಕೇಳುವಂತೆ ಮಾಡುವ ಮಾಧ್ಯಮಗಳು ಸೊರಗಿರುವುದಂತೂ ನಿಜ. ಕೆಲವು ಮಾಧ್ಯಮಗಳಿಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಬೇರೆ ರೀತಿಯಲ್ಲಿಯೇ ಕಾಣಿಸುತ್ತಿವೆ. ಹಣವನ್ನು ತರುವ ಜಾಹೀರಾತಿನ ಬೆಳಕಿನಲ್ಲಿ ಎಲ್ಲವೂ ಗೌಣವಾಗಿರುವುದೂ ಉಂಟು. ಅಬ್ಬರದ ಪ್ರಚಾರ, ಅದರ ಹಿಂದೆಯೇ ಹೋಗುವ ಹೊಸ ಬರಹಗಾರರು ಒಂದು ಕಡೆಯಾದರೆ, ಹೊಸ ಅಭಿವ್ಯಕ್ತಿಗೆ ಸಮರ್ಪಕ ಎನ್ನಬಹುದಾದ ವೇದಿಕೆಯೇ ಇಲ್ಲವೇನೋ ಎನ್ನುವಂಥ ಪರಿಸ್ಥಿತಿ ಮತ್ತೊಂದೆಡೆ. ಹೆಚ್ಚು ಪ್ರಸಾರದ ಪತ್ರಿಕೆಗಳು ಒಂದು ಕಾಲದಲ್ಲಿ ಸಾಹಿತ್ಯ, ಕಲೆಗಳನ್ನು ಗೌರವದಿಂದಲೇ ನೋಡುತ್ತಿದ್ದವು. ಸಾಕ್ಷಿ, ಸಂಕ್ರಮಣಗಳಂಥ ಹೊಸ ಅಭಿವ್ಯಕ್ತಿಯ ಪತ್ರಿಕೆಗಳಿಗೆ ಬೆಂಬಲವಾಗಿ ಈ ಅಧಿಕ ಪ್ರಸಾರದ ಪತ್ರಿಕೆಗಳು ನಿಂತಿವೆಯೇನೋ ಎನ್ನುವಂಥ ಸಂದರ್ಭವೂ ಕನ್ನಡದಲ್ಲಿ ಇತ್ತು. ಹೊಸ ಪ್ರತಿಭೆಗಳಿಗಂತೂ ಈ ಪತ್ರಿಕೆಗಳು ಬಹುದೊಡ್ಡ ವೇದಿಕೆಯನ್ನು ಒದಗಿಸುತ್ತಿದ್ದವು. ಇದೆಲ್ಲ ಈಗ ಕಣ್ಮರೆಯಾಗಿರುವುದು ಸ್ಪಷ್ಟ.
ಬ್ಲಾಗ್ಗಳು, ಇ-ಪತ್ರಿಕೆಗಳು, ಫೇಸ್ಬುಕ್ಗಳು ಹೀಗೆ ಹೊಸ ಹೊಸ ಮಾಧ್ಯಮಗಳೂ ಈ ಕೊರತೆಯನ್ನು ತುಂಬಿದಂತೆ ಕಾಣುವುದಿಲ್ಲ. ಹೊಸ ಹುಡುಕಾಟದಲ್ಲಿ ತೊಡಗಿರುವವರ ಸಾಹಿತ್ಯ ಕೃತಿಗಳ ಮೌಲ್ಯಮಾಪನವಾದರೂ ಎಲ್ಲಿ ನಡೆಯುತ್ತಿದೆ? ಹೊಸ ಪದ್ಯಗಳ, ಹೊಸ ಕತೆಗಳ, ಹೊಸ ರೀತಿಯ ನಾಟಕಗಳ ಸಂಕಲನಗಳನ್ನು ಪ್ರಕಟಿಸಿದ ಲೇಖಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವಾದರೂ ಎಲ್ಲಿದೆ? ಯಾವುದು ಗಟ್ಟಿ, ಯಾವುದು ಟೊಳ್ಳು ಎಂಬುದನ್ನು ಹೇಳದಿದ್ದರೆ ಬರಹಗಾರ ಎದ್ದುನಿಲ್ಲುವುದು ಕಷ್ಟ. ನಮ್ಮ ಅಕಾಡೆಮಿಗಳಾದರೂ ಈ ಕೆಲಸವನ್ನು ಮಾಡುತ್ತಿವೆಯೇ? ಕಾರ್ಯಕ್ರಮಗಳೇನೋ ಹೆಚ್ಚು ಹೆಚ್ಚು ನಡೆಯುತ್ತಿವೆ; ಹಣದ ಕೊರತೆ ಆಗದಂತೆ ಸಕರ್ಾರಗಳು ನಿಧಿಯನ್ನು ಒದಗಿಸುತ್ತಿವೆ. ಆದರೆ ಯಾವುದು ಸತ್ವಯುತ, ಯಾವುದು ಪೊಳ್ಳು, ಯಾರು ಪ್ರತಿಭಾವಂತ, ಯಾರ ದಾರಿ ಎತ್ತ ಇತ್ಯಾದಿಗಳನ್ನು ಗುರುತಿಸುವವರೇ ಇಲ್ಲದಿದ್ದರೆ ಹೇಗೆ? ಗದ್ದಲದ ಕವಿಗೋಷ್ಠಿಗಳು, ಹಲವು ಮಿತಿಗಳಲ್ಲಿ ನಡೆಯುವ ಕಮ್ಮಟಗಳು ಈ ಕೆಲಸವನ್ನು ಮಾಡಲಾರವು.
ಹಾಗಾದರೆ ಹೊರ ದಾರಿ ಇಲ್ಲವೇ?- ಈ ಪ್ರಶ್ನೆಯನ್ನು ಗಂಭೀರವಾಗಿ ಕೇಳುವವರ ಸಂಖ್ಯೆ ಹೆಚ್ಚಿದರೆ ಅಲ್ಲಿ ಉತ್ತರ ಸಿಗಬಹುದು.
 

‍ಲೇಖಕರು G

July 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. mmshaik

    uttama sandharbhika lekhana..sahittyada ee kaaLji maaduvaware kadime..saahitya sorguttide..sampurna battidaaga ee bhoomi bhoomiyagiralla..ee kaaLjige nannadondu salaam….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: