ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಸೋರೆ ಹೊಸ ಕವಿತೆ –ನನ್ನದೊಂದು ಕವಿತೆ ಓದಬೇಕಿದೆ…

ಮಂಸೋರೆ

ನನ್ನ ಸಹೋದರಿ ಸಹೋದರರು ಸಾಗಿದ,
ಡಾಂಬರಿನ ರಸ್ತೆಯ ಮೇಲೆ,
ರೈಲ್ವೇ ಹಳಿಗಳ ನಡುವೆ ಚದುರಿದ ರೊಟ್ಟಿ,
ಹರಿದ ನೋಟಿನ ಮೇಲೆ ಮೂಡಿದ,
ಮಾಸಿದ ಗುರುತಿನ, ರಕ್ತಸಿಕ್ತ ಹೆಜ್ಜೆಯ ಇತಿಹಾಸದ ಪುಟಗಳ ನಡುವೆ,
ನನ್ನದೊಂದು ಕವಿತೆ ಓದಬೇಕಿದೆ.

ವಿಶ್ವಗುರುವಿನ ಭಾರತದ,
ವಿಶ್ವಮಾನವ ಮಗುವಿನ,
ಲಂಗ, ಅಂಗಿಯ ಮೇಲೆ ಮೂಡಿದ,
ಜಾತಿಯ ರಕ್ತದ ಚಿತ್ತಾರದ,
ಒಣಗಿದ ಕಲೆಯ ನಡುವೆ,
ನನ್ನದೊಂದು ಕವಿತೆ ಓದಬೇಕಿದೆ.

ಮೃಗೀಯವಾಗಿ ಮೈಮೇಲೆ ಎರಗಿ,
ಮನಸು, ದೇಹವ ಪರಚಿ,
ಹರಿದು, ಸುಟ್ಟು, ತಿಂದು-ತೇಗಿ,
ಗಂಗೆಯಲಿ ಮಿಂದೆದ್ದು ಬಂದು,
ಯತ್ರ ನಾರ್ಯಸ್ತು ಪೂಜ್ಯಂತೇ
ಎಂದು ಜಪಿಸುವ,
ಹೆಣ್ಣು ಉಟ್ಟ ಬಟ್ಟೆಯ ಮೊದಲಿಸುವ,
ಕೊಳೆತ ಪುರುಷ ನಾಲಿಗೆಗಳ ನಡುವೆ,
ನನ್ನದೊಂದು ಕವಿತೆ ಓದಬೇಕಿದೆ.

ಮೃಷ್ಟಾನ್ನ ಬೆಳೆವ,
ಸಮೃದ್ಧವಾದ ಈ ನೆಲದಲಿ,
ಅನ್ನ ತಿನ್ನುವ ಕೈಗಳಿಗೆ,
ಉಸಿರು ಒದಗಿಸುವ ಕೊರಳಿಗೆ,
ಹಸಿ ನೆತ್ತರವ ಅಂಟಿಸಿ,
ಕೊಲೆಗಾರರನ್ನಾಗಿಸುವ, ಕೊಲೆಯಾಗಿಸುವ,
ಕೊಳೆತ, ಕಮಟು ವಾಸನೆಯ ಧರ್ಮಗಳ ನಡುವೆ,
ನನ್ನದೊಂದು ಕವಿತೆ ಓದಬೇಕಿದೆ.

ಕಾಯಲು ಮರೆತ ಚೌಕೀದಾರರ ನಡುವೆ,
ಸಂವಿಧಾನ ಮರೆತ ನಾಯಕರ ನಡುವೆ,
ಕತ್ತು ಹಿಸುಕಿದ ಕಾನೂನಿನ ನಡುವೆ,
ಶಾಹಿ ಒಣಗಿದ ಲೇಖನಿಗಳ ನಡುವೆ,
ಮಾತು ಮರೆತ ಪ್ರಜೆಗಳ ನಡುವಿನ
ಪ್ರಜಾಪ್ರಭುತ್ವ ದೇಶದ, ಸ್ವತಂತ್ರ ಭಾರತದಲ್ಲಿ
ನನ್ನದೊಂದು ಕವಿತೆ ಓದಬೇಕಿದೆ.

‍ಲೇಖಕರು Admin

9 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading