ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡ್ಯ ರಮೇಶ್ ಕಾಲಂ : ಎಡವಟ್ ಡೈರೆಕ್ಟ್ರು, ಅಡ್ಕಸ್ಬಿ ಆಕ್ಟ್ರು!

ಆಗಿನ್ನೂ ಚಿತ್ರರಂಗಕ್ಕೆ ಬಂದ ಹೊಸತು. ಬಯಾಸ್ಕೋಪಿನೋರ ಬಗ್ಗೆ ಇನ್ನೂ ಭಯಗ್ರಸ್ತನಾಗಿಯೇ ಇದ್ದೆ. ಕಾಸಿದ್ದಾಗಲೂ ಇಲ್ಲದಿದ್ದಾಗಲೂ ಕಟ್ಟಬಹುದಾದದ್ದು ಒಂದೇ: ಕನಸುಗಳು ಮಾತ್ರ! ನಾನೂ ಕನಸಿನ ಬೆನ್ನುಹತ್ತಿದ್ದೆ. ಹೀಗೊಂದು ಸುಂದರ ಸಾಯಂಕಾಲ ನಾಯ್ಡು ಸ್ಟೂಡಿಯೋ ಮೆಟ್ಟಿಲ ಮೇಲೆ ಧುತ್ ಅಂತಾ ಭೆಟ್ಟಿಯಾದ ಒಬ್ಬ ಗೆಳೆಯ ನಿರ್ದೇಶಕ ’ರಮೇಶಾ, ಡ್ರಿಪ್ ಇರಿಗೇಷನ್ ಬಗ್ಗೆ ಡಾಕ್ಯುಮೆಂಟರಿ ಮಾಡ್ತಿದ್ದೀನಮ್ಮ, ನೀನೇ ಹೀರೋ’ ಅಂದ. ಎದೆ ಧಸಕ್ಕಂತು! ಪ್ಯಾದೆಯಾಗಿ ನಕ್ಕೆ. ತುಂಬಾ ಸಂತೋಷ ತೋರಿಸ್ಕೊಂಡ್ರೆ ದುಡ್ಡು, ಕಾಸಿನಲ್ಲಿ ಕುಯಿದುಬಿಡ್ತಾರೆ ಅಂತಾ ಅದುಮಿಕೊಂಡು ಸುಮ್ಮನಾದೆ. ‘ರೇಟು’ ಆಮೇಲೆ ಕೇಳಿದರಾಯ್ತು ಅಂತಾ ಬರೀ ‘ಡೇಟು’ ಕೇಳಿ, ಸಂತಸದಿಂದ ನನ್ನ ರೂಮಿಗೆ ವಾಪಸ್ಸಾದೆ.
ಶೂಟಿಂಗಿನ ದಿನ ಬೆಳಿಗ್ಗೇನೆ ಲೊಕೇಷನ್ಗೆ ಹೋದೆ. ಹೋಗಿ ನೋಡ್ತೀನಿ; ಹಿರೋಯಿನ್ ಆಗಲೇ ಮೂರು ಕೋಟಿನ ಮೇಕಪ್ಪಿನೊಂದಿಗೆ ಹಾಜರಾಗಿದ್ದಳು. ತುಂಬಾ ‘ಬಿಗಿ’, ಗತ್ತು ಗೈರತ್ತಿದ್ದ ‘ಎದೆಗಾತಿ’, ನನ್ನ ಕಡೆ ನೋಡಿ ಹುಬ್ಬೇರಿಸಿ ‘ನ್ಯೂ ಕಮ್ಮರ್ರಾ?’ ಅಂದ್ಲು. ನಾನು ಬಕ್ರಾ ತರಾ ‘ಹೌದು!’ ಅಂದೆ. ಅಷ್ಟ್ರಲ್ಲಿ ಡೈರೆಕ್ಟ್ರು ಬಂದ್ರು. ನನ್ನನ್ನು ಬುಕ್ ಮಾಡಿದಾಗ ಚೆನ್ನಾಗಿಯೇ ಇದ್ದ ಪುಣ್ಯಾತ್ಮ ಈಗ ‘ಅಯ್ಯಪ್ಪ’ನ ಮಾಲೆ ಹಾಕಿ, ಕಪ್ಪು ವಸ್ತ್ರಧಾರಿಯಾಗಿ, ಗಡ್ಡ ಬಿಟ್ಟು, ಹಣೆಗೆ ಗಂಧ ವಿಭೂತಿ ಇಟ್ಟು, ’ರಮೇಶ್ ಸ್ವಾಮಿ ಚೆನ್ನಾಗಿದ್ದೀರಾ?’ ಅಂದಾ. ನಾನು ’ಹೌದು ಸ್ವಾಮಿ’ ಅಂದೆ. ಹಿರೋಯಿನ್ ಕಡೆ ತಿರುಗಿ, ‘ಹಿರೋಯಿನ್ ಸ್ವಾಮಿ ಚೆನ್ನಾಗಿದ್ದೀರಾ?’ ಅಂದ. ಆಕೆ ನಕ್ಕು ನಲಿದು ’ಓ ಕೆ ಸಾರ್’ ಅಂದ್ಲು (ಓಕೆ ಸರ್  ಇದು ಕನ್ನಡ ಟಿವಿ ಹುಡುಗಿಯರ ಪ್ರಾಣಪದ) ಸರಿ, ಎಲ್ಲರಿಗೂ ಆತ ’ಕ್ಯಾಮರಾಮನ್ ಸ್ವಾಮಿ’, ’ಪ್ರೊಡ್ಯೂಸರ್ ಸ್ವಾಮಿ’, ’ಹಿರೋಯಿನ್ ಮದರ್ ಸ್ವಾಮಿ’ ಅನ್ನುತ್ತಿದ್ದ. ಕೊನೆಗೆ ’ಲೈಟ್ಬಾಯ್ ಸ್ವಾಮಿ’, ’ಜನರೇಟರ್ ಸ್ವಾಮಿ’, ’ಸೌಂಡ್ ಎಂಜಿನಿಯರ್ ಸ್ವಾಮಿ’ ಅಂದ. ನಗು ಬಂದ್ರು ತಡಕೊಂಡು ಸುಮ್ನಿದ್ದೆ.
ಶೂಟಿಂಗ್ ಶುರು ಆಗಲಿಕ್ಕೆ ತಯಾರಿಯಾಯ್ತು. ಮೇಕಪ್ಪು, ದಿರಿಸು ಎಲ್ಲಾ ರೆಡಿ. ಹಿರೋಯಿನ್ ಹೋದೆಡೆಯಲೆಲ್ಲಾ ಅವಳ ಅಸಿಸ್ಟೆಂಟ್ ಹುಡುಗ ಕೈಯಲ್ಲಿ ಕೊಡೆ ಹಿಡಿದು ಎಗರಿ ಎಗರಿ ಒಡುತ್ತಿದ್ದದು ನನಗೆ ಕನಿಕರ ಮತ್ತು ತಮಾಷೆಯಾಗಿ ಕಾಣುತ್ತಿತ್ತು. ಆಕೆ ಅವನಿಗೆ ಎದ್ವಾತದ್ವಾ ಬೈಯುತ್ತಲೇ ಇದ್ದಳು.
ಬಿಸಿಲೇರತೊಡಗಿತು. ಬಿಸ್ಲೆರಿಗೆ ಬಾಯೊಡ್ಡಿದಳು ನಟೀಮಣೀ. ಬ್ಲಾಕ್ ನಿರ್ಧರಿಸಿದ ನಮ್ಮ ನಿರ್ದೇಶಕ ನಮಗೆ ಸೂಚನೆ ಕೊಟ್ಟರು. ‘ನೋಡಿ ರಮೇಶ್ ಸ್ವಾಮಿ, ನಾನು ’ಆಕ್ಷನ್’ ಸ್ವಾಮಿ ಅಂದಕೂಡ್ಲೆ ಈ ಕಡೆಯಿಂದ ನೀವು ಸ್ವಾಮಿ ಆ ಕಡೆಯಿಂದ ಹಿರೋಯಿನ್ ಸ್ವಾಮಿ ಸ್ಲೋ ಆಗಿ ಬಂದು ಬಿಗಿಯಾಗಿ ತಬ್ಬಿಕೋ ಬೇಕು ಸ್ವಾಮಿ’ ಅಂದ್ರು.
ನಾನು ‘ಸಾರ್ ನಾನು ಎಲ್ಲಿಂದ ಬರ್ತೀನಿ, ಯಾಕ್ ಬರ್ತೀನಿ, ಏನ್ ಕಾರಣಕ್ಕೆ ತಬ್ಕೊತೀನಿ, ಒಂಚೂರು ಕಥೆ ಹಿನ್ನೆಲೆ ಏನಾದ್ರೂ ಹೇಳಿ ಸಾರ್’ ಅಂದೆ. ಅದಕ್ಕೆ ಆತ ಕೂಲಾಗಿ ‘ಹೇಳಿದಷ್ಟು ಮಾಡಿ ಸ್ವಾಮಿ, ನಾಟಕದಿಂದ ಬಂದೋರು ತಲೆಹರಟೆ ಸ್ವಾಮಿ ನಂಗೊತ್ತು ಮಾಡಿ’ ಲೈಟಾಗಿ ಸಿಡುಕಿದರು. ಸುಮ್ಮನಾಗಿಬಿಟ್ಟೆ. (ಅವತ್ತಿನಿಂದ ಇವತ್ತಿನವರೆಗೂ ಯಾರನ್ನೂ ಯಾಕೆ? ಏನು? ಅಂತ ಕೇಳಿಲ್ಲ. ಕೇಳಿದ್ರೆ ಮನೆಗ್ಹೋಗು ಅಂತಾರೆ!)
ಸರಿ. ಡೈರೆಕ್ಟ್ರು ಆಜ್ಞೆಕೊಟ್ಟರು. ಶೂಟಿಂಗ್ ಶುರು. ’ಆರ್ಟಿಸ್ಟ್ ಸ್ವಾಮಿ ರೆಡಿನಾ?….. ?’, ’ರೆಡಿ ಸರ್.’
’ರಿಫ್ಲರಕ್ಟರ್ ಸ್ವಾಮಿ?’, ’ಓಕೆ ಸಾರ್’
’ಸೌಂಡ್ ಸ್ವಾಮಿ?’- ’ಆಂಡಾ ಸೋಮಿ.’
’ರೋಲಿಂಗ್ ಸ್ವಾಮಿ?’ -’ Yes Sir.’
’Action ಸ್ವಾಮಿ?’ – ಅಂದ್ರು.
ಅದೆಲ್ಲಿಂದಲೋ ಒಂದು ಹಳ್ಳೀ ನಾಯಿ ನುಗ್ಗಿಬಿಡ್ತು.

ಡೈರೆಕ್ಟ್ರು ’ಛೀ ಛೀ, ಏನ್ ನಾಯಿಸ್ವಾಮಿ ನೀವು, ಶಾಟ್ಸ್ವಾಮಿ ಎಲ್ಲಾ ಹಾಳ್ಮಾಡ್ಬಿಟ್ರಲ್ಲಾ ಸ್ವಾಮಿ’ ಅಂತಾ ಗೋಳಾಡಿಬಿಟ್ರು. ಸರಿ ಅಲ್ಲೇ ಇದ್ದ ಪ್ರೊಡ್ಯೂಸರ್ ಸ್ವಾಮಿ ನಾಯಿಸ್ವಾಮಿಯನ್ನು ಓಡಿಸಿದ್ರು. ಮತ್ತೆ ಶೂಟಿಂಗ್ ಶುರು.
’ಎಲ್ಲಾ ರೆಡಿನಾ ಸ್ವಾಮಿ?’
’ರಿಫ್ಲರಕ್ಟರ್ ಸ್ವಾಮಿ?’
’ಸೌಂಡ್ ಸ್ವಾಮಿ?’
’ರೋಲಿಂಗ್ ಸ್ವಾಮಿ?’
’Action ಸ್ವಾಮಿ’ ಅಂದ್ರು.
ಈ ಕಡೆಯಿಂದ ನಾನು ಆ ಕಡೆಯಿಂದ ಹಿರೋಯಿನ್ slow motionನಲ್ಲಿ ಬಂದು ತಬ್ಬಿಕೊಂಡೆವು. ಮೌನ, ಒಂದು, ಎರಡು, ಮೂರುನಿಮಿಷ ಆಯ್ತು. ಡೈರೆಕ್ಟ್ರು Cutಏ ಹೇಳಿಲ್ಲ ಪುಣ್ಯಾತ್ಮ!
ನನಗೆ ಗಾಬರಿ, ಹಿರೋಯಿನ್ ಕೋಪಾವಿಷ್ಟಳಾಗಿ ಮೈ ಕೈ ಕಾಲು ಎಲ್ಲ ಕೊಡವಿಕೊಂಡು ‘ಏನ್ ಸಾರ್? Cutಏ ಹೇಳ್ಲಿಲ್ಲ ನೀವು’ ಅಂತಾ ತಿರುಗಿದ್ಲು, ಎಲ್ಲಿದ್ದಾನೆ ಡೈರೆಕ್ಟ್ರು? ಪತ್ತೇನೆ ಇಲ್ಲ. ತಂಡಕ್ಕೆ ಇನ್ನಷ್ಟು ಗಾಬರಿ. ನೋಡಿದರೆ ದೂರದಲ್ಲಿ ಆಕಾಶದ ಕಡೆಗೆ ಮುಖ ಮಾಡಿ, ಕೈ ಕಟ್ಟಿ ಕುಳಿತುಬಿಟ್ಟಿದ್ದಾನೆ ಬೆನ್ನು ತಿರುಗಿಸಿ. ನಾನು ಕೂಗಿದೆ –
’ಸಾರ್, ಇದ್ಯಾಕೆ ಸಾರ್ ಆ ಕಡೆ ತಿರುಗಿಕೊಂಡು Cut ಹೇಳ್ದೆ ಕೂತಿದ್ದೀರಿ’
’ನಾವ್ ಮಾಲೆ ಹಾಕಿದ್ದೀವಿ ಸ್ವಾಮಿ. ಅಂಥಾ ಸೀನ್ನೆಲ್ಲಾ ನೋಡ್ಬಾರ್ದು!’ ಅಂದ ಡೈರೆಕ್ಟ್ರು!!
 

‍ಲೇಖಕರು avadhi

6 May, 2013

6 Comments

  1. shashikala

    ramesh avre neevu sakath aagi act maaDthEra ankonDidde Sakath aagi bareetheere antha proove maaDi biTri. nimma lekhana Odi nakku
    nakku.. iTTe. Innashtu nagoke kaaytha iddEni. Munduvaresi nimma barahaana

  2. Gopaal Wajapeyi

    ಹಹಹಹಹಹಹ………….. ಎಷ್ಟು ಚೆನ್ನಾಗಿ ಬರ್ದೀದೀರಿ ‘ಸ್ವಾಮೀ’… ! ಮೊಗ್ಯಾಂಬೋ ಖುಶ್ ಹುವಾ… !

  3. mahantesh

    really nice one Ramesh!!!!!!

  4. keshavareddy handr

    chandada okkani mandya swamy.mudde uppesru tindangyathu.

  5. Indiresh

    ಶಿವಶಿವ! ಸೀನ್ ನೋಡ್ಬಾರ್ದ ಅಂತ ಮುಖ ತಿರುವೀದರೂ ಚಾಲನೆ ಕೊಡಲೋಸುಗ ಬಿಗಿಯಾಗಿ ತಬ್ಬಿಕೋಬೇಕು ಅಂದ್ರಲ್ಲಾ ಡೈರೆಕ್ಟರ್ ಸ್ವಾಮಿ !

  6. Ramesh Gururajarao

    ರಮೇಶ್ ಸ್ವಾಮಿಗಳೇ… ಈ ಆರ್ಟಿಕಲ್ ಸ್ವಾಮೀ ಸಕ್ಕತ್ ಸ್ವಾಮಿ…. ಅವಧಿ ಸ್ವಾಮಿಗೆ ಒಂದು ನಮಸ್ಕಾರ ಸ್ವಾಮಿ…. 🙂 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading