ಜೀವನವೆಂಬ ಪ್ರಯಾಣದಲ್ಲಿ…

ಹಾಡ್ಲಹಳ್ಳಿ ನಾಗರಾಜು ಎಂದರೆ..

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿಯ ಕಡು ಬಡತನದ ರೈತಾಪಿ ಕುಟುಂಬದ ಹಾಡ್ಲಹಳ್ಳಿ ನಾಗರಾಜ್ ಬಿ.ಎಸ್ಸಿ ಪಧವೀಧರರು. ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿರುವ ಶ್ರೀಯುತರು ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದಾರೆ.
ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ಇವರು ಕನ್ನಡ ಸಾಹಿತ್ಯದಲ್ಲೂ ಕೈಯಾಡಿಸಿದ್ದು ಇದೂವರಗೆ ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗು ನಾನು (ಕಥಾಸಂಕಲನಗಳು) ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹಪುರಾಣ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.
ಸುಮಾರು ಮೂರು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗು ಜನಪದ ಗೀತಗಾಯನ ಕಾರ್ಯಕ್ರಮಗಳಿಗೆ ಒತ್ತು ಕೊಡಲಾಗುತ್ತಿದೆ.
 

ಮೊದಲೇ ಹೇಳಿಬಿಡುತ್ತೇನೆ; ಇದು ಪ್ರವಾಸ ಕಥನವಲ್ಲ. ಪ್ರವಾಸದ ದೃಷ್ಟಿಯಿಂದ ಪ್ರೇಕ್ಷಣೀಯ ಸ್ಥಳಗಳಿಗೆ ಎಡತಾಕಿರುವುದು, ಕಾಡು ಮೇಡು ಅಲೆದಿರುವುದು, ಗುಡ್ಡ ಬೆಟ್ಟ ಪ್ರದೇಶದಲ್ಲಿ ಚಾರಣ ಮಾಡಿರುವುದು, ನದಿ ಜಲಪಾತಗಳನ್ನು ಸಂದರ್ಶಿಸಿರುವುದು ಮುಂತಾದ ಅನುಭಗಳುಇರುವುದು ಅದ್ಯಾವುದನ್ನು ಇಲ್ಲಿ ಹೇಳುತ್ತಿಲ್ಲ. ಇಲ್ಲಿ ಹೇಳುತ್ತಿರುವುದು ಬರೀ ಪಯಣದ ವಿಚಾರ. ಪಯಣ ಎಂದರೆ ಪಾದಯಾತ್ರೆ, ಸೈಕಲ್ ಸವಾರಿ, ಸ್ಕೂಟರ್ರೈಡಿಂಗ್, ಕಾರು ಬಸ್ಸಿನಲ್ಲಿ ಪ್ರಯಾಣ, ರೈಲಿನಲ್ಲಿ ಪ್ರವಾಸ ಯಾವುದೂ ಆಗಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮೇಲೆ ತಿಳಿಸಿದ ಯಾವುದೇ ವಿಧಾನದಲ್ಲಾದರೂ ಪ್ರಯಾಣ ಮಾಡುವಾಗಿನ ವಿಶಿಷ್ಟ ಸಂಧರ್ಭ. ಮುಖಾಮುಖಿಯಾಗುವ ವಿಚಿತ್ರ ಸ್ವಭಾವದ ಸಹ ಪ್ರಯಾಣಿಕರು, ಅನುಭವಿಸಿದ ಪಜೀತಿ, ಸಿಲುಕಿದ ಪೇಚಿನ ಪ್ರಸಂಗ ಇವುಗಳನ್ನು ತಿಳಿಸುವುದಷ್ಟೇ ಈ ಲೇಖನ ಮಾಲೆಯ ಉದ್ದೇಶ.

1. ಪ್ರಥಮ ಚುಂಬನಾ….

ಶೀರ್ಷಿಕೆಯನ್ನು ನೋಡಿ, ಇದ್ಯಾವುದೋ ಪ್ರೇಮದ ವಿಚಾರ ಯುವಕ ಯುವತಿಯರು ಅನುಭವದ ವಿಚಾರ ಎಂದು ಬೇಸ್ತು ಬೀಳುವ ಅಗತ್ಯವಿಲ್ಲ. ಇದು ನನ್ನ ಬದುಕಿನಲ್ಲಿ ಮೊದಲ ಪಯಣದ ವಿಶಿಷ್ಟ ಅನುಭವ. ನಮ್ಮೂರು ಮಲೆನಾಡಿನ ಬೆಟ್ಟಗಳ ಬುಡದ ಕಾಡು ಕಣಿವೆಯಲ್ಲಿದ್ದ ಪುಟ್ಟ ಊರು. ಹೆಚ್ಚೆಂದರೆ ಅಲ್ಲಿ ಒಂದಿಪ್ಪತ್ತು ಕುಟುಂಬಗಳು! ವಾರದ ಸಂತೆಗೆ , ಆಸ್ಪತ್ರೆಗೆ ಹೀಗೆ ಯಾವುದಕ್ಕೇ ಆದರೂ ಸಣ್ಣ ಬೆಟ್ಟ ಏರಿ ಕಾಡಿನ ಕಾಲು ದಾರಿಯಲ್ಲಿ ಹೆತ್ತೂರಿಗೆ ಎರಡು ಮೈಲಿ ನಡೆಯಬೇಕಾಗಿತ್ತು. ಅದೂ ದೊಡ್ಡವರು ಮಾತ್ರ. ಆಗಿನ್ನೂ ಮಲೆನಾಡಿನಲ್ಲಿ ‘ಹಡದೆ ಪದ್ದತಿ’ ಜಾರಿಯಲ್ಲಿದ್ದು, ಮಡಿವಾಳರು, ಕ್ಷೌರಿಕರು, ಕುಳುವಾಡಿಗಳು, ವರ್ಷಪೂರ್ತಿ ಮಾಡುವ ಸೇವೆಗೆ ವರ್ಷಕ್ಕೊಮ್ಮೆ ಪ್ರತಿ ಕುಟುಂಬದಿಂದಲೂ ನಿಗದಿತ ಪ್ರಮಾಣದ ದವಸ ಧಾನ್ಯ ತೆಗೆದುಕೊಂಡು ಹೋಗುತ್ತಿದ್ದರು. ಸುಮಾರು ಐವತ್ತು ವರ್ಷದ ಹಿಂದೆ, ಕಾಡು ಬೆಟ್ಟವನ್ನು ಕಡಿದು ಹಾಡ್ಲಹಳ್ಳಿಯಿಂದ ಹೆತ್ತೂರಿಗೆ ಒಂದು ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಯಿತು. ಆಗಿನ್ನೂ ನನಗೆ ಐದಾರು ವರ್ಷ! ಹುಟ್ಟಿದಾರಭ್ಯ ಕಾಡು ಕಣಿವೆಯಲ್ಲೇ ಆಡಿ ಬೆಳೆದಿದ್ದ ನನಗೆ ಒಮ್ಮೆ ಹೆತ್ತೂರನ್ನು ನೋಡಬೇಕೆಂಬ ಆಸೆ ಮೊಳೆತ್ತಿತ್ತು. ಅವಕಾಶಕ್ಕಾಗಿ ಹೊಂಚು ಹಾಕಿ ಕಾದಿದ್ದೆ. ಹೀಗಿರುವಾಗ ಒಮ್ಮೆ ನಮ್ಮ ಎಮ್ಮೆ ಕರುವಿಗೆ ಮೈತುಂಬಾ ಹೇನಾಗಿ ಔಷಧಿಗಾಗಿ ಆಸ್ಪತ್ರೆಗೆ ಹೋಗಬೇಕಾದ ಪ್ರಸಂಗ ಬಂತು. ಆ ದಿನ ಭಾನುವಾರ, ನಮ್ಮೂರು ಪ್ರೈಮರಿ ಶಾಲೆಗೆ ರಜಾ ಇದ್ದುದರಿಂದ ನಮ್ಮಣ್ಣನನ್ನು ಪಕ್ಕದ ಮನೆಯ ಹುಡುಗನೊಂದಿಗೆ ಹೆತ್ತೂರಿಗೆ ಹೋಗಿ ದನದ ಆಸ್ಪತ್ರೆಯಲ್ಲಿ ಔಷಧಿ ತರಲು ನಿಗದಿ ಮಾಡಿದರು.

ಅವರು ಹೊಸ ರಸ್ತೆಯಲ್ಲಿ ನಡೆದು ಹೋಗಿ ಬರುವ ವಿಚಾರ ನೆನೆದು ಸಂಭ್ರಮಿಸುತ್ತಿರುವಾಗ ನನ್ನನ್ನು ಕಳಿಸುತ್ತಿಲ್ಲವಲ್ಲ ಎಂಬ ವ್ಯಥೆಯಾಗತೊಡಗಿತು. ನಾನೂ ಅವರೊಂದಿಗೆ ಹೋಗುವುದಾಗಿ ಹಠ ಹಿಡಿದೆ. ನನ್ನ ಮಾತನ್ನು ಅವರಾಗಲೀ ಮನೆಯವರಾಗಲೀ ಗಣನೆಗೆ ತೆಗೆದುಕೊಳ್ಳಲಿಲ್ಲ. ಅವರ ಪಾಡಿಗೆ ಅವರು ಹೊರಟು ಹೋಗ ತೊಡಗಿದರು. ಅವಕಾಶ ಕೈ ಮೀರಿ ಹೋಗುತ್ತಿರುವುದು ತಿಳಿದು ಅಳತೊಡಗಿದೆ. ತಂದೆ ತಾಯಿಗಳ ಬೆದರಿಕೆಗೆ ಬಗ್ಗದೆ ಚಂಡಿ ಹಿಡಿದೆ. ಅವ್ವನಿಗೆ ನನ್ನ ರೋದನೆ ಕೇಳಿ ಕರುಳು ಚುರುಕ್ ಎಂದಿರಬೇಕು. ‘ಸರಿ ಹೋಗು. ಅಷ್ಟ್ ದೂರ ಧೂಳಲ್ಲಿ ಹೋಗಿ ಬರದು ನಿನ್ನ ಹಣೇ ಬರ. ನಾನೇನು ಮಾಡ್ಲಿ’ ಎಂದಳು. ‘ಬೇಗ ಬೇಗ ಹೋಗು. ಅವರು ಈಗಿನ್ನೂ ಕೆರೆ ಅಪ್ಪಲ್ಲಿ ಹೋಗ್ತಾ ಇರಬಹುದು. ಓಡಿ ಹೋದ್ರೆ ಸಿಕ್ತಾರೆ’ ಎಂದು ಅಪ್ಪನೂ ಅನುಮತಿಸಿದರು. ಹೊಸ ರಸ್ತೆಯಲ್ಲಿ ಪಯಣಕ್ಕೆ ಅನುಮತಿ ದೊರೆತಿದ್ದರಿಂದ ರೋದನೆ ಎಲ್ಲಾ ಇದ್ದಕ್ಕಿದ್ದಂತೆ ನಿಂತು ಹೋಗಿ ಮನಸ್ಸು ಉಲ್ಲಾಸದಿಂದ ಕುಣಿದಾಡುವಂತಾಯಿತು. ಓಡುತ್ತಾ ಎನ್ನವುದಕ್ಕಿಂತ, ಜಿಗಿಯುತ್ತಾ ದೂಳು ತುಂಬಿದ ರಸ್ತೆಯಲ್ಲಿ ಹೋಗತೊಡಗಿದೆ. ಒಂದು ಫರ್ಲಾಂಗ್ ದೂರ ಓಡಿದೆ. ಗೆಂಡಗೆರೆ ಸಮೀಪಿಸಿತು. ಅದರೆ ನಮ್ಮ ಅಣ್ಣ ಕಾಣಲಿಲ್ಲ. ಅವರೆಷ್ಟು ಉಲ್ಲಾಸಭರಿತರಾಗಿದ್ದರೋ ರೆಕ್ಕೆ ಬಂದು ಹಾರಿ ಹೋಗಿಬಿಟ್ಟರೋ ಹೇಗೆ ಎನ್ನಿಸಿತು. ಓಟವನ್ನು ವೇಗಗೊಳಿಸಿದೆ. ಕೆರೆಯ ಮುಂದಿನ ಅಪ್ಪನ್ನು ಹತ್ತಿದರೆ ದಿಣ್ಣೆಯ ತುದಿಯಲ್ಲಾದರೂ ಅವರು ಸಿಕ್ಕಿಯೇ ಸಿಕ್ಕುತ್ತಾರೆಂಬ ಭರವಸೆಯಿತ್ತು.

ಆ ಏರುದಾರಿಯ ಪಯಣ ಏದುಸಿರು ಬರಿಸತೊಡಗಿತ್ತು. ಅಣ್ಣನನ್ನೇ ಗಮನದಲ್ಲಿಟ್ಟುಕೊಂಡು ದಾರಿ ಕ್ರಮಿಸುತ್ತಿದ್ದೆ. ಸಣ್ಣದೊಂದು ತಿರುವು ಬಂತು.  ಮುಂದೆ ದೂರದಲ್ಲೇನೋ  ಸದ್ದು ಕೇಳತೊಡಗಿತು. ಅಲ್ಲಿ ಪ್ರವೇಶಿಸಿದವನೇ ದೃಷ್ಟಿ ಹಾಯುವವರೆಗೂ ನೋಡಿದೆ. ಎಂದೂ ಕಂಡರಿಯದ ಲಾರಿಯೊಂದು ಯಮಸದೃಶವಾಗಿ ಸದ್ದು ಮಾಡುತ್ತಾ ನನ್ನೆಡೆಗೇ ಬರುತ್ತಿದೆ. ಎಲ್ಲಾ ಉಲ್ಲಾಸ ಕರಗಿ ಹೋಗಿ ಮನಸ್ಸಿನ ತುಂಬಾ ಭಯ ತುಂಬಿಕೊಂಡಿತು. ಏನು ಮಾಡಬೇಕೆಂದೇ ತೋಚಲಿಲ್ಲ. ಹೆಜ್ಜೆ ಕೀಳದೆ ನಿಂತೆ. ನೋಡ ನೋಡುತ್ತಲೇ ಆ ಲಾರಿ ನನಗೆ ಸಮೀಪವಾಗತೊಡಗಿತು. ಇನ್ನು ಕೇವಲ ನಾಲ್ಕು ಮಾರು! ನನ್ನ ಮೇಲೆಯೇ ಬಂದು ಬಿಡುತ್ತದೆ! ಹಿಂತಿರುಗಿ ಓಡ ತೊಡಗಿದೆ. ಲಾರಿಯೇನೂ ನಿಲ್ಲಲಿಲ್ಲ ವೊಪಾಂಯ್ ಎಂದು ಕರ್ಕಶವಾಗಿ ಸದ್ದು ಹೊರಡಿಸುತ್ತಾ ಹಿಂದೆಯೇ ಬರುತ್ತಿದೆ. ಓ! ವೇಗವಾಗಿ ಹಿಂದೆಯೇ ಬರುತ್ತಿರುವ ಅನುಭವವಾಗುತ್ತಿದೆ, ಇದು ನನ್ನನ್ನೇ ಹಿಂಬಾಲಿಸಿ ಬರುತ್ತಿದೆ. ಇದರಿಂದ ಉಳಿಗಾಲವಿಲ್ಲ ಎಂದು ಕೊಳ್ಳುತ್ತಾ… ಮಿತಿ ಮೀರಿದ ಭಯ! ಹಿಂತಿರುಗಿ ನೋಡಲು ಸಹ ಧೈರ್ಯವಿಲ್ಲ! ಚಡ್ಡಿಯೆಲ್ಲಾ ಒದ್ದೆಯಾಗಿ ಸೋರತೊಡಗಿತು. ಈ ಲಾರಿ ನನ್ನನ್ನು ಈ ದಿನ ಬಲಿ ತೆಗೆದುಕೊಳ್ಳದೇ ಬಿಡುವುದಿಲ್ಲ!  ಇಲ್ಲವಾದಲ್ಲಿ ನನ್ನ ಹಿಂದೆಯೇ ನನ್ನನ್ನು ಅಟ್ಟಿಸಿಕೊಂಡು ಯಾಕೆ ಬರಬೇಕು! ಕೊನೆಯ ನಿರ್ಧಾರವೆಂಬಂತೆ ಕಣ್ಣು ಮುಚ್ಚಿ ಓಡತೊಡಗಿದೆ. ಯಾರೋ ಗಕ್ಕನೆ ಕೈ ಹಿಡಿದು ಚರಂಡಿಯೊಳಕ್ಕೆ ಎಳೆದುಕೊಂಡರು. ಭಯದಿಂದ ಕಣ್ತೆರೆದು ನೋಡಿದೆ. ಒಡಕುಬಾಯಿಯ ಘಟವಾಣಿ ಹೆಂಗಸು ಮಂಡೆಮ್ಮ ರಟ್ಟೆ ಹಿಡಿದು ನಿಂತಿದ್ದಾರೆ. ಲಾರಿ ನಮ್ಮನ್ನು ದಾಟಿಕೊಂಡು ಮುಂದೆ ಹೋಯಿತು.’ಲಾರಿ ಹಿಂದುಗಡೆ ಬರುವಾಗ ಆಚೆಗೆ ನಿಂತು ಸೈಡ್ ಕೊಡ್ಬೇಕು ಅಂತ ಗೊತ್ತಿಲ್ವೇನೋ ಹುಡುಗಾ’ ಅಂದರು.   ಹತಾಶನಾಗಿದ್ದ ನಾನು ತಲೆ ತಗ್ಗಿಸಿ ನಿಂತಿದ್ದೆ.

2. ಪಯಣಕ್ಕಾಗಿ ತರಬೇತಿ

ಹೆತ್ತೂರು ಮಾಧ್ಯಮಿಕ ಶಾಲೆಗೆ ಸೇರಿದಂದಿನಿಂದ ದಿನನಿತ್ಯ ಸುಮಾರು ಹನ್ನೆರಡು ಕಿಲೋ ಮೀಟರ್ ಪಯಣ ನಡೆದೇ ಇತ್ತು. ಬೆಳಗ್ಗೆ ಎದ್ದರೆ ಗುಡ್ಡ ಏರಿ ಕಾಡು ತೋಟಕ್ಕೆ ನಾಲ್ಕು ಕಿಲೋ ಮೀಟರ್ ಪಯಣ. ಅಲ್ಲಿಂದ ಸೌದೆಯೋ, ಹುಲ್ಲೋ ಹೊತ್ತುಕೊಂಡು ಮತ್ತೆ ವಾಪಸ್ ನಾಲ್ಕು ಕಿಲೋ ಮೀಟರ್ ಮನೆಗೆ ! ಖಾಕಿ ಬ್ಯಾಗ್ ಬಲ ಹೆಗಲಿಗೆ ನೇತು ಹಾಕಿಕೊಂಡು ಶಾಲೆಯ ಕಡೆ ಎರಡು ಕಿಲೋ ಮೀಟರ್ ಓಟ! ಸಂಜೆ ಶಾಲೆ ಬಿಟ್ಟೊಡನೆ ಮತ್ತೆ ಮನೆಯ ಕಡೆ ಎರಡು ಕಿಲೋ ಮೀಟರ್! ಇದೆಲ್ಲದರ ಮಧ್ಯೆ ನಮ್ಮ ಓಡು, ಆಟ ಪಾಟ, ಗೆಂಡಗೆರೆಯ ಈಜು ಎಲ್ಲದಕ್ಕೂ ಬಿಡುವು ಮಾಡಿಕೊಳ್ಳುತ್ತಿದ್ದುದೇ ಆಶ್ಚರ್ಯ! ಆಗ ನಾವು ಕಂಡಿದ್ದ ವಾಹನಗಳೋ ! ಒಂದೆರಡು ಬಸ್ಸು ವಾರದಲ್ಲೊಮ್ಮೆ ಯಾವಾಗಲಾದರೂ ಸಂತೆಯಿಂದ ಸಾಮಾನು ತರುತ್ತಿದ್ದ ಲಾರಿ! ಹೆತ್ತೂರು ಹಾಯ್ದು ಹೋಗುತ್ತಿದ್ದ ಐಗೂರು ಸಾಹುಕಾರರ ಅಂಬಾಸಿಡರ್ ಕಾರು! ಮಿಕ್ಕಂತೆ ಮೋಟರ್ ಸೈಕಲ್ ಹಾಗೂ ಸೈಕಲ್ಲು ಅಲ್ಲಿ ಇಲ್ಲವೇ ಇಲ್ಲ ಎಂಬಷ್ಟು ವಿರಳ! ನಾವು ಸೈಕಲ್ಲನ್ನು ಸನಿಹದಿಂದ ನೋಡಿದ್ದು ಎಂಟನೇ ತರಗತಿಗೆ ಸೇರಿದ ನಂತರವೇ. ಹೊಸದಾಗಿ ಹೈಸ್ಕೂಲ್ ಶುರುವಾಗಿದ್ದರಿಂದ, ಹೊರಗೆ ಪಟ್ಟಣಗಳಲ್ಲಿ ಓದುತ್ತಿದ್ದ ಕೆಲ ಸ್ಥಿತಿವಂತರ ಮನೆಯ ಹುಡುಗರು ನಮ್ಮ ಶಾಲೆಗೆ ಸೇರಿಕೊಂಡಿದ್ದರು. ಆ ಪೈಕಿ ಇಬ್ಬರು ಸೈಕಲ್ಲಗಳನ್ನು ಹೊಂದಿದ್ದು ಅದರಲ್ಲೇ ಕುಳಿತು ಶಾಲೆ ಬರುತ್ತಿದ್ದುದು ನಮ್ಮೆಲ್ಲರ ಅಚ್ಚರಿಗೆ ಕಾರಣವಾಗಿತ್ತು. ಅವರು ಶಾಲೆ ಬಿಟ್ಟ ನಂತರ ಸೈಕಲ್ ಮೇಲೆ ಕುಳಿತು ಸೊಯ್ಯನೆ ಗಾಳಿಯಲ್ಲಿ ತೇಲುವವರಂತೆ ರಸ್ತೆಯಲ್ಲಿ ಇಳಿಮುಖನಾಗಿ ಹೋಗುತ್ತಿದ್ದದನ್ನು ಕೌತುಕದಿಂದ ನೋಡುತ್ತಿದ್ದೆವು.

ನನಗೋ ಕನಸು ಮನಸಿನಲ್ಲೂ ಸೈಕಲೇ ಸುಳಿದಾಡತೊಡಗಿತು. ಹೇಗಾದರೂ ಮಾಡಿ ಸೈಕಲ್ ಮೇಲೇರಿ ಒಮ್ಮೆಯಾದರೂ ಪಯಣ ಹೋಗಬೇಕು ಎಂದು ಆಸೆ ತೀವ್ರವಾಗಿ ಕಾಡತೊಡಗಿತು. ಶಾಲೆಗೆ ಬರುತ್ತಿದ್ದದ್ದೇ ಎರಡು ಸೈಕಲ್, ಅವುಗಳ ಮೇಲೆ ಕುಳಿತುಕೊಳ್ಳುವುದಿರಲಿ ಕೈಯಿಂದ ಮುಟ್ಟಲೂ ಆಸ್ಪದವಿರಲಿಲ್ಲ. ಹೇಗಾದರೂ ಸರಿ. ಸೈಕಲ್ ಸವಾರಿ ಕಲಿಯಬೇಕು. ಜೀವನದಲ್ಲಿ ಒಮ್ಮೆಯಾದರೂ ಸೈಕಲ್ ಮೇಲೆ ಕುಳಿತು ಪಯಣ ಹೋಗಬೇಕು ಎಂಬ ಆಸೆ ಮನದಲ್ಲಿ ಎಡೆಬಿಡದೆ ಕಾಡತೊಡಗಿತ್ತು. ಹೀಗೆಯೇ ಮೂರು ವರ್ಷ ಕಳೆದು ಹೋಯಿತು. ಅಷ್ಟು ದಿನ ಅದುಮಿಟ್ಟುಕೊಂಡಿದ್ದ ಸೈಕಲ್ ಸವಾರಿಯ ಆಸೆ ಈಡೇರುವ ದಿನ ಬಂದೇ ಬಿಟ್ಟಿತು. ಎಸ್ಸೆಸೆಲ್ಸಿ ಪರೀಕ್ಷಾ ಕೇಂದ್ರ ಸಕಲೇಶಪುರವಾದುದರಿಂದ ನಾವು ಅಲ್ಲಿ ಸುಮಾರು ಹತ್ತು ದಿನ ವಾಸ್ತವ್ಯ ಹೂಡಬೇಕಾಗಿ ಬಂದಿತ್ತು. ನಮ್ಮ ಸಂತೋಷಕ್ಕೆ ಪಾರವೆಲ್ಲಿ! ಎಂದೂ ಕಾಣದ ಸಕಲೇಶಪುರ ಪಟ್ಟಣಕ್ಕೆ ಹೋಗುತ್ತಿದ್ದೇವೆ. ಮೇಲಾಗಿ ಹತ್ತುದಿನ ಆಲ್ಲೇ ವಾಸ್ತವ್ಯ! ಅದಕ್ಕೂ ಮಿಗಿಲಾಗಿ ಸೈಕಲ್ ಸವಾರಿ ಕಲಿಯುವ ಆಸೆ ಪೂರೈಸಿಕೊಳ್ಳಲು ಅವಕಾಶದ ಬಾಗಿಲೇ ತೆರೆಯುತ್ತಿದೆ! ನಮಗೆ ಅಲ್ಲಿ ನೆಂಟರು ಅಂತ ಇದ್ದವರು ಬಸ್ಸಿನ ಬಸವಪ್ಪಣ್ಣ ಮಾತ್ರ ಅವರು ಕುಟುಂಬದವರು ಎಲ್ಲಿ ಹೋಗಿದ್ದರೋ ತಿಳಿಯದು. ಮನೆ ಖಾಲಿ ಇತ್ತು. ನಾವು ಐದಾರು ಜನರಿಗೆ ವಾಸ್ತವ್ಯದ ವ್ಯವಸ್ಥೆಯಾಗಿತ್ತು.

ಪರೀಕ್ಷೆಯ ಬರವಣಿಗೆ ಕೆಲಸ ಯಾಂತ್ರಿಕವೆಂಬಂತೆ ನಡೆಯುತ್ತಿತ್ತು. ರಸ್ತೆಯ ಮೇಲೆ ಹೋಗಿ ಬರುವಾಗ ನಮ್ಮ ದೃಷ್ಟಿಯೆಲ್ಲಾ ಸೈಕಲ್ ಷಾಪ್ಗಳ ಮೇಲೆಯೇ. ಸಾಲಾಗಿ ನಿಲ್ಲಿಸಿರುತ್ತಿದ್ದ ಸೈಕಲ್ಗಳು ಕಣ್ಣು ಕುಕ್ಕುತ್ತಿದ್ದರೂ ಅವು ನಮ್ಮ ಕೈಗೆಟಕಬೇಕಲ್ಲಾ! ಆದರೆ ಸಿಕ್ಕಿರುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದೆಂಬ ನಿರ್ಧಾರ ತಳೆದು ಆಗಿತ್ತು. ಬಾಡಿಗೆಗೆ ಸೈಕಲ್ ಪಡೆಯಲು ಬೇಕಾಗುವ ಹಣವನ್ನು ಬಹಳ ದಿನಗಳಿಂದಲೇ ಹೊಂದಿಸಿ ಜೋಪನವಾಗಿ ಇಟ್ಟುಕೊಂಡು ಆಗಿತ್ತು. ಇನ್ನು ಸೈಕಲ್ ಅಂಗಡಿಗೆ ಪರಿಚಯ ಇರುವವರನ್ನು ಕರೆದುಕೊಂಡು ಹೋಗಿ ಸೈಕಲ್ ಪಡೆದು ಸವಾರಿ ಕಲಿಯುವುದೊಂದೇ ಬಾಕಿ! ಅದಕ್ಕೂ ನನ್ನ ಸ್ನೇಹಿತ ದಾರಿ ಹುಡುಕಿದ್ದ. ಪರೀಕ್ಷಾ ಕೇಂದ್ರದಲ್ಲಿ ಸ್ಥಳೀಯನೇ ಆದ ಒಬ್ಬನನ್ನು ಪರಿಚಯ ಮಾಡಿಕೊಂಡು ಸೈಕಲ್ ಪಡೆಯುವ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದ. ಸೋಮವಾರ ಪರೀಕ್ಷೆಯ ಕೊನೆಯ ದಿನ. ಭಾನುವಾರ ಒಂದೇ ದಿನ ಬಿಡುವು. ಸೈಕಲ್ ಕೈಗೆ ಸಿಕ್ಕಿತು. ನಮಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುತ್ತಾರಲ್ಲ ಅಷ್ಟು ಪರಮಾನಂದ! ಸಕಲೇಶಪುರದ ಹುಡುಗನೇ ಅಂಗಡಿಗೆ ಹೋಗಿ ಎಲ್ಲೋ ಹೋಗಬೇಕಿದೆ ಎಂದು ಸುಳ್ಳು ಹೇಳಿ ಒಳ್ಳೆಯ ರಾಲಿ ಸೈಕಲ್ ತಂದಿದ್ದ. ಪಕ್ಕದ ರಸ್ತೆಯಲ್ಲಿ ನಮ್ಮನ್ನು ನಿಲ್ಲಲು ಹೇಳಿದ್ದ. ಆಲ್ಲಿಗೆ ಬಂದವನು ಸೈಕಲ್ಲನ್ನು ನಮಗೆ ಕೊಟ್ಟು ಕುರೋವ್ ಫೀಲ್ಡ್‌ಗೆ  ಹೋಗಿ ಕಲಿಯಿರಿ. ಜಾಗ ಚನ್ನಾಗಿ ವಿಶಾಲವಾಗಿದೆ; ವಾಪಾಸು ಬಂದು ನನ್ನ ಕೈಗೇ ಕೊಡಿ. ಜೋಪಾನ ಎಲ್ಲಾದರೂ ಬೀಳಿಸಿ ಮುರುಕೊಂಡು ಬಂದು ಗಿಂದೀರಿ….. ನೀವಿಬ್ಬರೇ ಹೊಡೆಯಿರಿ ಬೇರೆ ಯಾರ ಕೈಗೂ ಕೊಡಬೇಡಿ ಎಂದು ಎಚ್ಚರಿಕೆಯ ಮಾತು ಹೇಳಿ ಹೊರಟು ಹೋದ.

ನಾವಿಬ್ಬರೂ ಪೀಚು ದೇಹದವರು. ವಯಸ್ಸಿಗೆ ತಕ್ಕಂತೆ ಬೆಳೆದಿರಲಿಲ್ಲ. ಇಬ್ಬರೂ ಸೇರಿ ಸೈಕಲ್ಲನ್ನು ಬ್ಯಾಲೆನ್ಸ್ ಮಾಡುತ್ತಾ ನೂಕಿಕೊಂಡು ಕುರೋವ್ ಫೀಲ್ಡ್ ಕಡೆ ಹೊರಟೆವು. ಎಲ್ಲರೂ ನಮ್ಮನ್ನೇ ಕುತೂಹಲದಿಂದ ನೋಡುತ್ತಿರುವಂತೆನಿಸಿತು. ನಾವಂತೂ ಯಾವುದೇ ದೇವಲೋಕದ ರಥವೇ ನಮ್ಮ ಕೈ ಸೇರಿದವರಂತೆ ಹೆಮ್ಮಯಿಂದ ಬೀಗುತ್ತಾ ನಡೆದಿದ್ದೆವು. ಕುರೋವ್ ಫೀಲ್ಡ್ ಬಂದಿತು. ಹೇಮಾವತಿಯ ದಡದಲ್ಲಿ ಉದ್ದಕ್ಕೂ ಹರಡಿಕೊಂಡಿರುವ ಬಯಲು ಸವಾರಿ ಕಲಿಯಲು ಬಹಳ ಪ್ರಶಸ್ತ ಸ್ಥಳವೆನ್ನಿಸಿತು, ಇನ್ನೊಬ್ಬರು ನೂಕುವುದು ಎಂದು ಮೊದಲೇ ನಿರ್ಧರಿಸಿಕೊಂಡಿದ್ದೆವು. ಎರಡು ಗಂಟೆಯ ಬಾಡಿಗೆಗೆ ಆಗುವಷ್ಟು ಹಣ ಕಿಸೆಯಲ್ಲಿದೆ. ಮೊದಲಿಗೆ ನಾನು ಸೈಕಲ್ ಏರಿ ಕುಳಿತೆ. ಸ್ನೇಹಿತ ಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡು ನೂಕಲು ಅನುವಾದ. ನನಗೋ ಜೀವನನದ ಪರಮಗುರಿ ಈಡೇರಿದಂತೆ ಆನಂದ! ಮನಸ್ಸು ಉಲ್ಲಾಸದ ಹಕ್ಕಿಯಾಗಿತ್ತು. ಸ್ನೇಹಿತ ಸೈಕಲಿನ ಹ್ಯಾಂಡಲ್ ಒಂದು ಕೈಯಲ್ಲಿ ಹಿಡಿದು ಕ್ಯಾರಿಯರ್ ಇನ್ನೊಂದು ಕೈಯಲ್ಲಿ ಹಿಡಿದು ಸೈಕಲ್ಲನ್ನು ಮುಂದೆ ತಳ್ಳುತ್ತಾ ಬಂದಂತೆ ನನಗೆ ಗಾಳಿಯಲ್ಲಿ ತೇಲುತ್ತಾ ಹೋಗುತ್ತಿರುವ ಅನುಭವವಾಗ ತೊಡಗಿತು. ಮೊದಲೇ ಯೋಚಿಸಿದ್ದಂತೆ ಸೈಕಲ್ಲು ಆ ದೊಡ್ಡ ಬಯಲಿನ ಒಂದು ನಿರ್ಥಿಷ್ಟ ಸ್ಥಳದಲ್ಲಿ ಸುತ್ತು ಹಾಕತೊಡಗಿತು. ಐದಾರು ಸುತ್ತು ಬರುವ ವೇಳೆಗೆ ಬ್ಯಾಲೆನ್ಸ್ ಸಿಕ್ಕಂತಾಗಿ ಸ್ವಲ್ಪ ಜೋರಾಗಿ ನೂಕಲು ಹೇಳಿದೆ.

ಅವನಿಗೂ ಉಲ್ಲಾಸ ಬಂದಿತ್ತು. ಸ್ವಲ್ಪ ವೇಗ ಹೆಚ್ಚಿಸಿ ಬಯಲಿನಲ್ಲಿ ಮುಂದೆ ನೂಕತೊಡಗಿದ. ಕಿವಿಯಲ್ಲಿ ಗಾಳಿ ಗುಯ್ ಗುಡುತ್ತಿತ್ತು. ನನ್ನ ಕನಸು ಈಡೇರಿಸಂತೆ, ಯಾವುದೋ ದೂರದ ಊರಿಗೆ ಸೈಕಲ್ನಲ್ಲಿ ಪಯಣ ಹೋಗುತ್ತೆರುವಂತೆ ಭಾಸವಾಗ ತೊಡಗಿತು. ಯಾವುದೇ ಭಯವಿಲ್ಲದೆ. ಗೋಡಾ ಹೈ ಮೈದಾನ್ ಹೈ ಎಂಬಂತೆ ನಮ್ಮ ವಾಹನ ಬಯಲಿನಲಲಿ ಚಲಿಸುತ್ತಲೇ ಇತ್ತು. ಇದ್ದಕ್ಕಿಂದ್ದಂತೆಯೇ ಹೇಮಾವತಿ ನದಿಯ ಕಡೆಯಿಂದ ಯಾರೋ ದಡೂತಿ ಯುವಕ ನಮ್ಮೆಡೆಗೇ ಬರುತ್ತಿರುವಂತೆ ತೋರಿತು. ನನ್ನ ಸ್ನೇಹಿತ ನೂಕುವ ವೇಗ ಕಡಿಮೆ ಮಾಡಿದ. ಎದುರಿಗೆ ಬಂದವನು ಸೈಕಲ್ ಹ್ಯಾಂಡಲ್ಗೆ ಕೈ ಹಾಕಿ ನಿಲ್ಲಿಸಿದ. ಹೊಸ ಜಾಗ , ಹೊಸ ಜನ. ಸೈಕಲ್ ಬೇರೆ ತಡೆದು ನಿಲ್ಲಿಸಿದ್ದಾನೆ. ಆಕಾಶದಲ್ಲಿ ತೇಲುತ್ತಿದ್ದವರನ್ನು ದೊಪ್ಪನೆ ನೆಲಕ್ಕೆ ಒಗೆದಂತಾಯಿತು. ಅವನು ನಮ್ಮಿಬ್ಬರನ್ನು ಸೈಕಲ್ ಸಮೇತ ಒಂದೇ ಕೈಯಲ್ಲಿ ಎಸೆಯ ಬಲ್ಲವನಂತೆ ಕಾಣುತ್ತಿದ್ದ. ನಮ್ಮ ಗಂಟೆ ಹೊಡೆದಂತಾಗಿ ಮಾತೇ ಹೊರಡದಂತಾಗಿತ್ತು. ಇಳಿಯಲೇ ಬೋಸುಡಿಕೆ ಎನ್ನುತ್ತಾ ಸೈಕಲ್ಲನ್ನು ಅಲ್ಲಾಡಿಸಿ ನನ್ನನ್ನು ಕೆಳಕ್ಕುದುರಿಸಿ ತಾನು ಸೈಕಲ್ಲೇರಿ ರಭಸವಾಗಿ ಪೆಡಲ್ ತುಳಿಯ ತೊಡಗಿದ. ನೋಡ ನೋಡುತ್ತಿದ್ದಂತೆಯೇ ಬಲು ದೂರ ಹೋದ ಸೈಕಲ್ ತಿರುವಿನಲ್ಲಿ ಕಣ್ಮರೆಯಾಯಿತು. ಇಬ್ಬರೂ ಕುಸಿದು ಅಳತೊಡಗಿದೆವು. ಇವನ್ಯಾವನು ರಾಕ್ಷಸನಂತೆ ನುಗ್ಗಿ ಬಂದು ಸೈಕಲ್ ಕಿತ್ತುಕೊಂಡು ಹೊರಟೇ ಹೋದನಲ್ಲ! ಸೈಕಲ್ ಕಲಿಯುವುದು ಅಂತಿರಲಿ.

ಅಂಗಡಿಯಿಂದ ಸೈಕಲ್ ಕೊಡಿಸಿದ ಹೊಸ ಸ್ನೇಹಿತನಿಗೆ ಏನು ಹೇಳುವುದು. ಇದು ದೊಡ್ಡ ರಂಪವಾಗುವುದಿಲ್ಲವೇ? ಊರಿಗೆ ಹೋಗಿ ಮನೆಯವರಿಗೆ ಹೇಗೆ ಮುಖ ತೋರಿಸುವುದು? ಇಬ್ಬರೂ ಕುಳಿತಲ್ಲಿಯೇ ಪೇಚಾಡಿಕೊಳ್ಳತೊಡಗಿದೆವು. ಏನೂ ತೋಚದಂತಾದ ನಾವು ಸೈಕಲ್ ಹೋದ ದಿಕ್ಕಿಗೇ ಶೂನ್ಯ ದಿಟ್ಟಿಸುತ್ತಾ ಕುಳಿತಿದ್ದೆವು. ಹಾಗೆಯೇ ಅರ್ಧ ಗಂಟೆ ಕಳೆದಿತ್ತು. ಇನ್ನು ಸೈಕಲ್ ಆಸೆ ಬಿಟ್ಟಂತೆಯೇ ಅಂದು ಕೊಳ್ಳುತ್ತಿರುವಾಗ ನಮ್ಮ ಹಿಂಬದಿಯಿಂದ ಟನ್ ಟನ್ ಎಂದು ಗಂಟೆ ಬಾರಿಸುತ್ತಾ ಜೋರಾಗಿ ಸೈಕಲ್ ಬರುತ್ತಿರುವ ಸದ್ದು ಕೇಳಿಸಿತು. ತಿರುಗಿ ನೋಡಿದೆವು. ಅದೇ ಸೈಕಲ್ ! ಅವನೇ ದೈತ್ಯ! ವೇಗವಾಗಿ ನಮ್ಮ ಬಳಿ ನಮಗೆ ಗುದ್ದಿಸುವಂತೆ ಬಂದವನು ರಾಸ್ತಾ ಛೋಡ್ರೆರೇ ಎನ್ನುತ್ತ ನಮ್ಮಿಬ್ಬರ ಮಧ್ಯೆಯೇ ನುಸುಳಿಕೊಂಡು ಹೋದ. ನಾವು ಭಯದಿಂದ ಒದ್ದೆ ಮುದ್ದೆಯಾಗಿದ್ದೆವು. ಅವರ ಮೋಜು ಮಾಡುತ್ತಾ ಸರ್ಕಸ್ ಮಾಡುವವನಂತೆ ಕುರೋವ್ಫೀಲ್ಡ್ ತುಂಬಾ ಸೈಕಲ್ ಓಡಿಸುತ್ತಿದ್ದ. ಇವನು ಕಳ್ಳ ಇರಲಾರ ವಿಕೃತ ಮನಸಿನವನಿರ ಬೇಕು. ನಮ್ಮನ್ನು ಭಯ ಪಡಿಸಿ ಮಜಾ ಅನುಭವಿಸುತ್ತಿದ್ದಾನೆ ಎನ್ನಿಸಿತು. ಸೈಕಲ್ ಕಲಿಯದಿದ್ದರೂ ಸರಿ ಬಾಡಿಗೆ ಸೈಕಲ್ಲಾದರೂ ವಾಪಸ್ ನಮ್ಮ ಕೈಗೆ ಬಂದರೆ ಸಾಕೆಂದು ಆಸೆಯಿಂದ ಕಾಯ ತೊಡಗಿದೆವು. ಅವನು ಆ ಫೀಲ್ಡ್ ತುಂಬಾ ಯಾವ ಯಾವ ದಿಕ್ಕಿನಲ್ಲಿ ಸೈಕಲ್ ಓಡಿಸಿದನೋ, ಅವನ ಮನದಲ್ಲಿದ್ದ ಆಸೆ ತೀರಿತೋ ಏನೋ ಮತ್ತೆ ಅರ್ಧ ಗಂಟೆಯಲ್ಲಿ ಸೈಕಲ್ ಅದೇ ವೇಗದಲ್ಲಿ ನಮ್ಮೆಡೆಗೇ ಬಂದಿತು. ಬಂದ ವೇಗದಲ್ಲೇ ಗಕ್ಕನೇ ಬ್ರೇಕ್ ಹಾಕಿದ. ಅ ಪರಿಸ್ಥಿತಿಯಲ್ಲೂ ಅವನ ಕೈ ಚಳಕ ಕಂಡು ಬೆರಗಾಗಿ ಹೋದೆವು. ಸ್ಟೈಲಾಗಿ ಸ್ಟ್ಯಾಂಡಿಗೆ ಕಾಲುಕೊಟ್ಟು ಸೈಕಲನ್ನು ಹಿಂದಕೆಳೆದು ನಿಲ್ಲಿಸಿದ. ನಾವು ಧೈರ್ಯದಿಂದ ಅವನೆಡೆಗೆ ನೋಡಿದೆವು. ಹುಂ! ತಗಂಡ್ ಹೋಗಿ ಎನ್ನುತ್ತಾ ಬಂದ ವೇಗದಲ್ಲೇ ಹೊರಟು ಹೋದ. ನಾವು ಸೈಕಲ್ ನೂಕಿಕೊಂಡು ವಿಷಾದದಿಂದ ಪೇಟೆಯ ಕಡೆ ನಡೆಯ ತೊಡಗಿದೆವು.

ಇನ್ನೂ ಇದೆ

ನಾಳೆ ಓದಿ

 

‍ಲೇಖಕರು avadhi

May 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಶ್ರೀನಿವಾಸ ಡಿ. ಶೆಟ್ಟಿ

    ಸೈಕಲ್ ಸವಾರಿಯ ಮೊದಲ ಅನುಭವ ಎಲ್ಲರಿಗು ನೆನಪಳಿಯದ ಸಂಗತಿ. ಹಾಡ್ಲಹಳ್ಳಿ ನಾಗರಾಜ್ ರವರ ನವಿರಾದ ಓಘ ಮನ ತಟ್ಟಿತು.

    ಪ್ರತಿಕ್ರಿಯೆ
  2. Naveen

    Chandada nirupane.. Balyadinda e hothina badukinavaregina nimma e vbhinna Pravasa Kathana odu kutuhala huttiside.. All the Bst…

    ಪ್ರತಿಕ್ರಿಯೆ
  3. mallikarjuna kalamarahalli

    priyare,bahu vrshagala nantara AVADHI Muulaka nimmanu noodide…! tumba santoshavaytu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: