ಮಂಡಲಗಿರಿ ಪ್ರಸನ್ನ
ನೋಬಲ್ ಪ್ರಶಸ್ತಿ ಪರಸ್ಕೃತ, ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸೂಫ್ ಝಾಯಿ ಹೇಳಿಕೆ ಆಧರಿಸಿ ಬರೆದ ಗಜಲ್. ಪತ್ರಕರ್ತ, ಲೇಖಕ ಆಗಿರುವ ಮಂಡಲಗಿರಿ ಪ್ರಸನ್ನ ಅವರು ಇತ್ತೀಚೆಗೆ ಗಜಲ್ ಬರಹದಲ್ಲಿ ಕ್ರಿಯಾಶೀಲರಾಗಿದ್ದಾರೆ.
ನಾನು ನನ್ನ ದನಿಯನು ಎತ್ತುವುದು ಕೂಗಾಡುವುದಕ್ಕಲ್ಲ
ರಸ್ತೆಗಿಳಿಯುದು ಮತ್ತೆ ಪ್ರತಿಭಟಿಸುವುದು ತೋರಿಸುವುದಕ್ಕಲ್ಲ
ಜನರಿಗೆ ಪ್ರೀತಿ ಹಂಚುವುದೆ ನನ್ನ ಉದ್ಯೋಗ ಗೆಳೆಯರೆ
ಅದರಿಂದ ನಾನು ಯಾರು ಯಾರ್ಯಾರನ್ನೋ ದೂರುವುದಕ್ಕಲ್ಲ

ಮಾತನಾಡಲು ಎದೆಯೊಳಗೆ ಶಬ್ದಗಳು ಕುದಿಯುತ್ತಿವೆ
ಕುರ್ಚಿಗೆ ಗಟ್ಟಿಯಾಗಿ ಅಂಟಿ ಕುಳಿತವರ ಇಳಿಸುವುದಕ್ಕಲ್ಲ
ಇನ್ನೊಬ್ಬರ ಕಣ್ಣೊರೆಸುವ ಕೆಲಸ ಸಾಯುವತನ ಮಾಡಬಲ್ಲೆ
ಯಾವುದೋ ಒಳಒಪ್ಪಂದದ ವ್ಯವಹಾರ ಮಾಡುವುದಕ್ಕಲ್ಲ
ಜಗತ್ತಿಗೆ ಶಾಂತಿ ಹಂಚಲು ನಾಚಿಕೆ ಪಡೆನೆಂದಿಗೂ `ಗಿರಿ’
ಗುಂಡು ನನ್ನದೆ ಹೊಕ್ಕು ಹರಿವ ರಕ್ತ ನೋಡಿ ಹೆದರುವುದಕ್ಕಲ್ಲ






0 Comments