ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುನಾಥ್ ಲತಾ ಕವಿತೆ – ಕಂಬಿಕುಣಿಕೆ…

ಮಂಜುನಾಥ್ ಲತಾ

ತಾಮ್ರದ ತಟ್ಟೆಯಡಿ ಇಟ್ಟಿದ್ದ
ತೂತು ಕಾಸು ಹೆಣಭಾರಕ್ಕೂ ಹೆಚ್ಚು
ತೂಗುತ್ತಿತ್ತು…
ಜೇಬಿಗಿಟ್ಟುಕೊಂಡು ಊರು ಬಿಟ್ಟುಹೋದೆ;
ಜೇಬು ಇನ್ನೂ ಭಾರವಾಗಿತ್ತು!

ತಮಾಷೆಯೆಂದರೆ
ನಾನು ಕಬ್ಬಿಣ ಕಟ್ಟುವ ರೈಲುಕಂಬಿಯ
ದಾರಿಯಲ್ಲಿ
ರೈಲು ಬಂದು ಹೋದ ಇತಿಹಾಸವೇ ಇಲ್ಲ!

ನುಣ್ಪು ಕಂಬಿಗೆ ಸವೆದ ಕಿವಿ ಇಟ್ಟು
ಕೇಳಿದರೆ
ಬೆಳೆದ ಹುಲ್ಲು ಗಾಳಿಯೊಡನೆ ಉಜ್ಜಾಡಿ ಅತ್ತ ಸದ್ದು…
ಮತ್ತೆ ಕೇಳುವ ಹಟಕ್ಕೆ‌ ಬಿದ್ದರೆ
ಕಂಬಿ ಕಟಕಟಿಸಿ ಅತ್ತ ಸದ್ದು

ನೀವು ಕೇಳಿಬಲ್ಲ ಪುರಾತನ ಗೇಲಿ:
‘ತಗಂಡ್ಹೋಗಿ ರೈಲ್ ಕಂಬಿ ಮೇಲಿಡು..!’
ಜೇಬಲ್ಲಿರುವ ತೂತುಕಾಸು,
ಕೈಯಲ್ಲಿ ನಿಂತ ಗಡಿಯಾರ, ಹೃದಯ ಝೇಂಕಾರ
ಯಾವುದನ್ನು ಇಡಲಿ..?
ರೈಲೇ ಹಾಯದ
ಈ ಹಳಿಯ ಮಡಿಲಲ್ಲಿ..!?

ಬರುವಾಗ ರೈಲು ಕೂಗಬೇಕು ತಾನೆ..
ಕಾದಿರುವ ನಾನೇಕೆ ಕೂಗುತ್ತಿದ್ದೇನೆ..?!

‍ಲೇಖಕರು Admin

23 August, 2022

1 Comment

  1. prathibha nandakumar

    ಕವನ ಚೆನ್ನಾಗಿದೆ, ಕೊನೆ ಎರಡು ಸಾಲು ಅದ್ಭುತ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading