ಭಾಷಾ ವೈವಿಧ್ಯಗಳ ರಂಗಿನಲ್ಲಿ ದಿಲ್ಲಿಯೆಂಬ ಕಾಮನಬಿಲ್ಲು..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

‘ಹಮಾರೇ ಛೋರಿಯಾಂ, ಛೋರೋಂಸೇ ಕಮ್ ಹೇ ಕೇ’, ಎನ್ನುತ್ತಿದ್ದರು ಮಹಾವೀರ್ ಫೋಗಟ್.

ಬಾಲಿವುಡ್ ನಟ ಆಮಿರ್ ಖಾನ್ ಅಭಿನಯದ ‘ದಂಗಲ್’ ಚಿತ್ರದಲ್ಲಿ ಮಹಾವೀರ ಫೋಗಟ್ ಎಂಬ ಪಾತ್ರವೊಂದು ಹೇಳುವ ಮಾತಿದು. ನಮ್ಮ ಹುಡುಗಿಯರೇನು ಹುಡುಗರಿಗಿಂತ ಕಮ್ಮಿಯೇ ಎಂದು ಸವಾಲು ಹಾಕುವ ಧಾಟಿಯಲ್ಲಿ ಹೇಳುವ ಮಾತು. 

ದಂಗಲ್ ಚಿತ್ರವನ್ನು ವೀಕ್ಷಿಸುವಾಗ ನಾನು ಆಫ್ರಿಕಾದ ಒಂದು ಮೂಲೆಯಲ್ಲಿದ್ದೆ. ಹಾಗೆ ನೋಡಿದರೆ ದಂಗಲ್ ಹಿಂದಿ ಭಾಷೆಯ ಚಿತ್ರ. ಆದರೆ ಚಿತ್ರದ ತುಂಬ ಹುಲುಸಾಗಿರುವುದು ಹರಿಯಾಣವೀ ಭಾಷೆಯ ಅಬ್ಬರ. ಏಕೆಂದರೆ ಕಥಾಪಾತ್ರಗಳ ಬಹಳಷ್ಟು ಸನ್ನಿವೇಶಗಳು ನಡೆಯುವುದು ಹರಿಯಾಣಾದಲ್ಲಿ. ನಾನು ದಿಲ್ಲಿಯಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ ಪರಿಣಾಮವಾಗಿ ಹರಿಯಾಣವೀ ಭಾಷೆಯ ಹಿನ್ನೆಲೆಯು ನನಗೆ ಹೆಚ್ಚು ಹತ್ತಿರ. ಹೀಗಾಗಿ ಈ ಭಾಗದ ಪ್ರಾದೇಶಿಕತೆಯನ್ನು ಬಲ್ಲವನಾಗಿ ಚಿತ್ರವು ನನ್ನಲ್ಲಿ ಮೂಡಿಸುವ ಸಂಚಲನವು ನಿಸ್ಸಂದೇಹವಾಗಿ ಉಳಿದವರಿಗಿಂತ ವಿಭಿನ್ನ.  

ಭಾಷೆ ಎನ್ನುವುದರ ಹಿಂದೆ ಅದೆಷ್ಟು ಆಯಾಮಗಳಿರುತ್ತವೆ ನೋಡಿ. ನನಗೆ ಹರಿಯಾಣಾ ನೆಲದ ಸಂಸ್ಕೃತಿಯ ಅರಿವಿಲ್ಲದಿದ್ದರೆ, ನಾನು ದಂಗಲ್ ಚಿತ್ರದಲ್ಲಿ ಬರುವ ಸಂಭಾಷಣೆಗಳನ್ನು ಪ್ರಾಯಶಃ ಗ್ರಾಮ್ಯ ಹಿಂದಿಯೆಂದೇ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೆ. ಏಕೆಂದರೆ ಕೇಳಲು ಹಿಂದಿಗೂ, ಹರಿಯಾಣವೀ ಭಾಷೆಗೂ ಸಾಕಷ್ಟು ಸಾಮ್ಯತೆಯಿದೆ. ಆದರೆ ಹಿಂದಿಗಿರುವಷ್ಟು ಶುದ್ಧತೆಯ ಮೋಹವು ಹರಿಯಾಣವೀ ಭಾಷೆಗಿಲ್ಲ. ಇದೊಂಥರಾ ಕರಾವಳಿಯ ಕನ್ನಡಕ್ಕೂ, ಉತ್ತರ ಕರ್ನಾಟಕ ಭಾಗದ ಕನ್ನಡಕ್ಕೂ ಇರುವ ವ್ಯತ್ಯಾಸದಂತೆ. ಒಟ್ಟಿನಲ್ಲಿ ಹರಿಯಾಣವೀ ಭಾಷೆಯ ಬಗ್ಗೆ ಹೆಚ್ಚು ತಿಳಿದಿಲ್ಲದ ಮಂದಿಗೆ ಅದು ತಕ್ಷಣಕ್ಕೆ ಒಡ್ಡೊಡ್ಡಾದ ಹಿಂದಿಯಂತೆ ಕೇಳಿದರೆ ಅದರಲ್ಲಿ ಅಚ್ಚರಿಯೇನಿಲ್ಲ. 

ದಿಲ್ಲಿಗೆ ಬಂದ ನಂತರ ನನಗೆ ತೆರೆದ ಹಲವು ಬಾಗಿಲುಗಳಲ್ಲಿ ಈ ಬಗೆಯ ಸಾಂಸ್ಕೃತಿಕ ವೈವಿಧ್ಯವೂ ಒಂದು. ಹಿಂದಿ ಭಾಷೆಗೆ ತೆರೆದುಕೊಂಡಷ್ಟಿನ ವೇಗದಲ್ಲಿ ನಾನು ಹರಿಯಾಣವೀ ಭಾಷೆಗೆ ಹೊಂದಿಕೊಂಡಿರಲಿಲ್ಲ. ಮೇಲಾಗಿ ಬಹುತೇಕ ಮಂದಿ ಹರಿಯಾಣವೀ ಭಾಷೆಯನ್ನು ಮಾತನಾಡುವ ಶೈಲಿಯೇ ಒರಟೊರಟಾಗಿರುವ ಪರಿಣಾಮವಾಗಿ, ಅದೇನು ಮಾತಾಡಿದರೂ ನನಗದು ಬೈದಂತೆಯೇ ಕೇಳಿಸುತ್ತಿತ್ತು. ನನ್ನ ಗಾಬರಿಯನ್ನು ಅರ್ಥೈಸಿಕೊಂಡ ಕೆಲ ಬೆರಳೆಣಿಕೆಯ ಮಂದಿ ಇದು ಹಾಗಲ್ಲ, ಹೀಗೆ ಎಂದು ಮನದಟ್ಟು ಮಾಡಿಸುವುದೂ ಇರುತ್ತಿತ್ತು. ಆರಂಭದ ದಿನಗಳಲ್ಲಿ ಇವೆಲ್ಲಾ ಬಹಳ ಗೊಂದಲವನ್ನು ಹುಟ್ಟಿಸಿದಂತಹ ಅಂಶಗಳು. 

ಯಾವ ಹೊಸ ಭಾಷೆಯನ್ನು ಕಲಿಯಬೇಕಾದರೂ, ಮೊದಲು ಆ ಭಾಷೆಯ ಬೈಗುಳಗಳನ್ನು ಕಲಿಯಬೇಕು ಎಂದು ಅದ್ಯಾವ ತತ್ವಜ್ಞಾನಿ ಹೇಳಿಹೋಗಿರುವನೋ ತಿಳಿಯದು. ಹೀಗೆ ದಿಲ್ಲಿಗೆ ಬಂದ ಹೊಸತರಲ್ಲಿ ಜೊತೆಗಾರನಾಗಿ ಸಿಕ್ಕವನು ಓರ್ವ ಪಂಜಾಬಿ. ನಾಲ್ಕೈದು ವರ್ಷಗಳ ಸೀನಿಯರ್ ಕೂಡ. ಪಂಜಾಬಿ ಭಾಷೆಯ ಪರಿಚಯವು ನನಗಾಗಲೇ ತಕ್ಕಮಟ್ಟಿಗಿತ್ತು. ಅಮೃತಾ ಪ್ರೀತಮ್, ಶಿವ್ ಬತಾಲ್ವಿಯಂತಹ ಕವಿಗಳು ಪಂಜಾಬಿಯಲ್ಲಿ ಬರೆದರೂ, ಪಂಜಾಬಿ ಗೊತ್ತಿಲ್ಲದ ನನ್ನಂತಹ ಆಸಾಮಿಗಳಲ್ಲಿ ರೋಮಾಂಚನವನ್ನು ತಂದಿದ್ದರು. 

ಈತನಿಂದಾಗಿ ಇನ್ನು ಪಂಜಾಬಿ ಕಲಿಯಬಹುದು ಎಂಬ ಆಸೆಯಲ್ಲಿ ನಾನು ಕೂತಿದ್ದಾಯಿತು. ಆದರೆ ನನ್ನ ಕಾಯುವಿಕೆಯು ಫಲ ನೀಡಲಿಲ್ಲ. ಆತ ತನ್ನ ಪ್ರತೀಮಾತಿಗೂ, ಪಂಜಾಬಿ ಬೈಗುಳಗಳನ್ನು ಸೇರಿಸಿ ಬಾಯಿತುಂಬಾ ಹೇಳುತ್ತಿದ್ದ. ಅದೊಂದು ತಲೆಬುಡವಿಲ್ಲದ ಅಭ್ಯಾಸವಾಗಿತ್ತು. ಕೊನೆಗೂ ಆಗಿದ್ದೇನೆಂದರೆ ಇವುಗಳನ್ನು ನಿರಂತರವಾಗಿ ಕೇಳುತ್ತಾ ಪಂಜಾಬಿ ಭಾಷೆಯ ಹತ್ತಾರು ಬೈಗುಳಗಳು ನನ್ನ ಸುಪ್ತಪ್ರಜ್ಞೆಯಲ್ಲಿ ಶಾಶ್ವತವಾಗಿ ಸೇರಿಹೋಗಿದ್ದವು. ಸಾಮಾನ್ಯವಾಗಿ ಔಪಚಾರಿಕ ನೆಲೆಯಲ್ಲಿ ಬಳಸುವ ಕೆಲ ಪದಗಳನ್ನು ಹೊರತುಪಡಿಸಿ, ಆತ ನನ್ನಲ್ಲುಳಿಸಿದ್ದ ಪಂಜಾಬಿಯೆಂದರೆ ಇಷ್ಟೇ.

ಒಮ್ಮೆ ನನ್ನ ಈ ಪಂಜಾಬಿ ಪ್ರಸಂಗವು ವಿಚಿತ್ರ ರೀತಿಯಲ್ಲಿ ನನ್ನ ಆತ್ಮೀಯರೊಬ್ಬರಿಗೆ, ಅನಿರೀಕ್ಷಿತವಾಗಿ ತಿಳಿಯುವ ಪರಿಸ್ಥಿತಿಯೂ ಬಂದಿದ್ದಾಯಿತು. ಅಂದು ನನ್ನೊಂದಿಗಿದ್ದ ಹಿರಿಯ ಸಹೋದ್ಯೋಗಿಯೊಬ್ಬರು ಚಂಡೀಗಢ ಮೂಲದವರು. ಅವರ ವೃತ್ತಿ ಜೀವನದ ಸುದೀರ್ಘ ಅನುಭವವೇ ಸುಮಾರು ನನ್ನ ವಯಸ್ಸಿನಷ್ಟಿದ್ದರಿಂದ ನಾನು ಅವರಿಗೆ ಎಳಸು. ನಾವಿಬ್ಬರೂ ಸಿನೆಮಾಪ್ರಿಯರು ಬೇರೆ. ಹೀಗಾಗಿ ಪ್ರಯಾಣದ ನಿಮಿತ್ತ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದ ನಾವಿಬ್ಬರು ಕಾಲಹರಣಕ್ಕೆಂದು ಸಿನೆಮಾ ಒಂದನ್ನು ನೋಡಲು ಶುರುಹಚ್ಚಿಕೊಂಡೆವು. ಅದು ‘ಉಡ್ತಾ ಪಂಜಾಬ್’ ಎಂಬ ಹೆಸರಿನ ಹಿಂದಿ ಸಿನೆಮಾ.

ಅಸಲಿಗೆ ಭಾರೀ ವಿವಾದಗಳನ್ನು ಹುಟ್ಟುಹಾಕಿದ್ದ ‘ಉಡ್ತಾ ಪಂಜಾಬ್’ ಚಿತ್ರದಿಂದ ಏನನ್ನು ನಿರೀಕ್ಷಿಸಬಹುದು ಎಂಬ ಕಲ್ಪನೆಗಳೂ ಅಂದು ನಮಗಿರಲಿಲ್ಲ. ಅಂತೂ ಚಿತ್ರವು ಶುರುವಾದ ಕೆಲ ಹೊತ್ತಿನ ನಂತರ, ಬಹುತೇಕ ಸಂಭಾಷಣೆಗಳಲ್ಲಿ ಪಂಜಾಬಿ ಬೈಗುಳಗಳು ಧಾರಾಳವಾಗಿ ಕೇಳಿಬರಲಾರಂಭಿಸಿದವು. ಗಲಿಬಿಲಿಯಾದ ನಾನು ಕೂತಲ್ಲೇ ಕೊಸರಿಕೊಂಡೆ. ಬಹುಷಃ ಅವರದ್ದೂ ಇದೇ ಪರಿಸ್ಥಿತಿಯಿದ್ದಿರಬಹುದು. ಚಿತ್ರಕಥೆಗೆ ಪೂರಕವಾಗಿದ್ದ ಪಂಜಾಬಿ ಬೈಗುಳಗಳು ಸದ್ಯ ಮುಗಿಯುವ ಸಾಧ್ಯತೆಗಳು ಕಾಣದಿದ್ದಾಗ, ವಿಧಿಯಿಲ್ಲದೆ ಮುಖ-ಮುಖ ನೋಡಿಕೊಂಡೆವು. ಇದೊಳ್ಳೆ ಇಕ್ಕಟ್ಟಿನ ಪರಿಸ್ಥಿತಿ ಎಂಬುದು ನಮಗಿಬ್ಬರಿಗೂ ಅರ್ಥವಾಗಿತ್ತು. 

ಪಂಜಾಬಿ ಭಾಷೆಯ ಈ ಬಗೆಯ ಪ್ರಯೋಗಗಳ ಬಗ್ಗೆ ತಕ್ಕಮಟ್ಟಿನ ಅರಿವಿದ್ದ ನನ್ನನ್ನು ಅವರು ಅಚ್ಚರಿಯಿಂದ ಕಂಡಿದ್ದರು. ದಿಲ್ಲಿಯಲ್ಲಿ ನೆಲೆಸಿರುವ ದಕ್ಷಿಣಭಾರತೀಯನೊಬ್ಬ ಹೊಟ್ಟೆಪಾಡಿಗಾಗಿ ಹೆಚ್ಚೆಂದರೆ ಹಿಂದಿ ಕಲಿತಿರಬಹುದು. ಆದರೆ ಇದು ಪಂಜಾಬಿಯವರೆಗೆ ಸಾಗುವುದು ಬಹುಷಃ ಅವರಿಗೆ ಅನಿರೀಕ್ಷಿತವಾಗಿತ್ತು ಅನಿಸುತ್ತದೆ. ಕೊನೆಗೂ ಅವರಿಗರ್ಥವಾಗಲೆಂದು ಇದರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿದೆ. ಅವರೋ ಸುಮ್ಮನೆ ನಕ್ಕರು. ಅಂತೂ ಹವೆಯಲ್ಲಿದ್ದ ಒತ್ತಡವು ತಿಳಿಯಾದ ನಂತರ ಚಿತ್ರವನ್ನು ಜೊತೆಯಾಗಿ ವೀಕ್ಷಿಸುವುದು ಸವಾಲೆನಿಸಲಿಲ್ಲ.     

ಇದು ನನಗೆ ಅಂತಲ್ಲ. ಹೊಸ ಭಾಷೆಯನ್ನು, ನೆಲದ ಸಂಸ್ಕøತಿಯನ್ನು ಹೊಸದಾಗಿ ಕಲಿಯುವ ಬಹುತೇಕ ಎಲ್ಲರಿಗೂ ಇಂಥಾ ಅನುಭವಗಳು ಆಗಿರುತ್ತವೆ. ಯಾರೇನೇ ಹೇಳಲಿ, ಬಿಡಲಿ. ದಿಲ್ಲಿಯಂತಹ ಕಾಸ್ಮೋಪಾಲಿಟನ್ ಶಹರಗಳಲ್ಲಿ ನೆಲೆಸುವ ಹಲವು ವಲಸಿಗರು ಸ್ಥಳೀಯ ಸಂಸ್ಕೃತಿಯನ್ನು ಹೀಗೆಯೇ ತಮ್ಮ ಕೈಲಾದಷ್ಟು ಕಲಿಯುತ್ತಾರೆ, ತಮಗೆ ದಕ್ಕಿದಷ್ಟು ಅಪ್ಪಿಕೊಳ್ಳುತ್ತಾರೆ. ಹಲವು ಕಾರಣಗಳಿಂದಾಗಿ ಇತರ ಭಾಷೆಗಳೊಂದಿಗೂ ಮುಖಾಮುಖಿಯಾಗುತ್ತಾರೆ. ಇವೆಲ್ಲಾ ಒಂದು ರೀತಿಯಲ್ಲಿ ಒಳ್ಳೆಯದೇ. ಪ್ರವಾಸಗಳು ನಮ್ಮನ್ನು ಕೂಪಮಂಡೂಕರನ್ನಾಗಿಸದೆ, ಅರಿವಿನ ವಿಸ್ತಾರವನ್ನು ಹೆಚ್ಚಿಸುತ್ತಾ ನಮ್ಮನ್ನು ಮತ್ತಷ್ಟು ಪ್ರಬುದ್ಧರನ್ನಾಗಿಸುವುದು ಹೀಗೆ. 

ದಿಲ್ಲಿಯಲ್ಲಿ ಪ್ರತೀವರ್ಷವೂ ಭಾರತೀಯ ಭಾಷೆಗಳ ಸಮಾವೇಶವನ್ನು ಅದ್ದೂರಿಯಿಂದ ಆಯೋಜಿಸಲಾಗುತ್ತದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳ ಸಾಧಕರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸುತ್ತಾರೆ. ಅಸಲಿಗೆ ಮೈಥಿಲಿಯೆಂಬ ಅಷ್ಟಾಗಿ ತಿಳಿದಿಲ್ಲದ ಭಾಷೆಯಲ್ಲಿ ಸಾಹಿತ್ಯವೂ ಸೃಷ್ಟಿಯಾಗುತ್ತಿದೆ ಎಂಬುದು ಅರಿವಾಗಿದ್ದೇ ನನಗೆ ಇಲ್ಲಿನ ವೇದಿಕೆಯಿಂದ. ಹೀಗೆ ಭಾಷಾವೈವಿಧ್ಯವನ್ನು ಧಾರಾಳವಾಗಿ ಹೊಂದಿರುವ ದಿಲ್ಲಿಯು ಅದನ್ನು ಸಂಭ್ರಮಿಸುವುದೂ ಕೂಡ ಈ ಮಹಾನಗರಿಯ ವೈಶಿಷ್ಟ್ಯಗಳಲ್ಲೊಂದು.

ಇದರಿಂದಾಗಿಯೇ ಪಂಜಾಬಿ ಸಹೋದ್ಯೋಗಿಗಳು ನನಗೆ ಕರೆ ಮಾಡಿದರೆ ‘ದಸ್ಸೋ ಜೀ ದಸ್ಸೋ’ (ಹೇಳಿ ಸಾರ್, ಹೇಳಿ) ಎಂದು ಮಾತನ್ನಾರಂಭಿಸುವುದು ಕಷ್ಟವಾಗುವುದಿಲ್ಲ. ಸರ್ದಾರ್ಜಿಯೊಬ್ಬರೊಂದಿಗೆ ಮಾತಿಗಿಳಿದರೆ ಮಾತಿನಲ್ಲಿ ಗೌರವಪೂರ್ವಕವಾಗಿ ‘ಪಾಜಿ’ ಎಂದು ಹೇಳುವುದು ಮರೆತುಹೋಗುವುದಿಲ್ಲ. ಇನ್ನು ನಮ್ಮ ಪ್ರಧಾನಿಗಳು ಮಾತುಮಾತಿಗೆ ‘ಸಬ್ ಚಂಗಾಸಿ’ (ಎಲ್ಲವೂ ಕ್ಷೇಮ) ಎಂದಾಗಲೆಲ್ಲಾ ಅದರ ಅರ್ಥವನ್ನು ಕಂಡುಕೊಳ್ಳಲು ಗೂಗಲ್ ಬಾಬಾನಿಗೆ ಸಲಾಮು ಹೊಡೆಯುವ ಅವಶ್ಯಕತೆಯು ಹುಟ್ಟಿಕೊಳ್ಳುವುದಿಲ್ಲ. 

ಇದು ಇತರ ಭಾಷೆಗಳ ವಿಚಾರದಲ್ಲೂ ಸತ್ಯ. ಬಹುಜನಪ್ರಿಯ ‘ಬೀಡಿ ಜಲೈಲೇ’ ಹಾಡಿನ ಸೃಷ್ಟಿಯ ಹಿಂದಿನ ಕತೆಯನ್ನು ಕವಿ ಗುಲ್ಝಾರ್ ಒಂದು ಕಡೆ ಮನೋಜ್ಞವಾಗಿ ಬರೆಯುತ್ತಾರೆ. ‘ಓಂಕಾರಾ’ ಚಿತ್ರದ ಆ ಪಾತ್ರಗಳು, ಅವುಗಳ ಮನಸ್ಥಿತಿ, ಅಲ್ಲಿನ ಸ್ಥಳೀಯ ಸಂಸ್ಕøತಿ, ಸಾಮಾಜಿಕ-ರಾಜಕೀಯ ಪರಿಸ್ಥಿತಿ… ಹೀಗೆ ಎಲ್ಲವನ್ನೂ ಅವಧಿ ಭಾಷೆಯಲ್ಲಿ (ಇಂದಿನ ಉತ್ತರಪ್ರದೇಶದ ಅವಧ್ ಭಾಗದ ಭಾಷೆ) ಸೊಗಸಾದ ಕಾವ್ಯವಾಗಿಸುತ್ತಾರೆ ಗುಲ್ಝಾರ್. ‘ಭಾಗ್ ಮಿಲ್ಖಾ ಭಾಗ್’ ನಲ್ಲಿ ಮುದ್ದುಮುದ್ದಾಗಿ ಪಂಜಾಬಿ ಮಾತನಾಡುವ ತರುಣ ಮಿಲ್ಖಾ, ‘ಗಂಗಾಜಲ್’ ಚಿತ್ರದಲ್ಲಿ ಬಿಹಾರಿ ಶೈಲಿಯಲ್ಲಿ ಅಬ್ಬರಿಸುವ ಸುಂದರ್ ಯಾದವ್, ‘ಪಹೇಲಿ’ ಚಿತ್ರದಲ್ಲಿ ಇಣುಕುವ ರಾಜಸ್ಥಾನಿ, ‘ಲಾಲ್ ರಂಗ್’ ನ ಹರಿಯಾಣವಿ, ‘ರಯೀಸ್’ ಚಿತ್ರದ ಗುಜರಾತಿ… ಇವೆಲ್ಲಾ ವಿಶಿಷ್ಟ ರೀತಿಯಲ್ಲಿ ನಮ್ಮದಾಗುತ್ತಾ ಹೋಗುವುದು ಕಲೆಯ ಹೆಗ್ಗಳಿಕೆ. ದಿಲ್ಲಿಯಂತಹ  ಕಾಸ್ಮೋಪಾಲಿಟನ್ ಸಂಸ್ಕøತಿಯ ಮಹಾನಗರಿಗಳಲ್ಲಿ ಇದು ದೈನಂದಿನ ಸಂಗತಿಯಂತೆ ನಮಗೆ ಎದುರಾಗುವುದು ಇಲ್ಲಿನ ವಿಶೇಷತೆ.

ದಿಲ್ಲಿ ದಿನಗಳಲ್ಲಿ ಭಾಷೆಯ ವಿಚಾರವಾಗಿ ಕೆಲ ಕೀಟಲೆಯ ದಿನಗಳನ್ನೂ ಕೂಡ ನಾನು ನೋಡಿದ್ದಿದೆ. ನನ್ನ ಮಿತ್ರನೊಬ್ಬ ಮತ್ತೊಬ್ಬನಿಗೆ ಹಿಂದಿಯನ್ನು ಕಲಿಸುತ್ತಾ ಪ್ರಶ್ನೆಯನ್ನು ಉತ್ತರವಾಗಿ, ಉತ್ತರವನ್ನು ಪ್ರಶ್ನೆಯಾಗಿ ಬದಲಾಯಿಸಿ ಕಲಿಸುತ್ತಿದ್ದ. ಉದಾಹರಣೆಗೆ ಪ್ರಶ್ನೆಯಾಗಿ ‘ಕೈಸೇ ಹೈ’ (ಹೇಗಿದ್ದೀರಿ) ಮತ್ತು ಉತ್ತರವಾಗಿ ‘ಠೀಕ್ ಹೈ’ (ಚೆನ್ನಾಗಿದ್ದೇನೆ) ಎಂದು ಸರಿಯಾದ ರೂಪದಲ್ಲಿ ಬಳಸುವುದರ ಬದಲಾಗಿ, ಪ್ರಶ್ನೆಯಾಗಿ ‘ಠೀಕ್ ಹೈ’ ಅನ್ನೂ, ಅದಕ್ಕುತ್ತರವಾಗಿ ‘ಕೈಸೇ ಹೈ’ ಎನ್ನಬೇಕೆಂದೂ ತಪ್ಪುತಪ್ಪಾಗಿ ಕಲಿಸುತ್ತಿದ್ದ. ಇದು ಒಟ್ಟಾರೆಯಾಗಿ ಗೊಂದಲವನ್ನು ಹುಟ್ಟಿಸುವುದರ ಜೊತೆ, ಕೊಂಚ ತಮಾಷೆಯಾಗಿಯೂ ಕಾಣಿಸುತ್ತಿತ್ತು. 

ದಿಲ್ಲಿಯಲ್ಲಿರುವ ಆಯಾ ದೇಶಗಳ ಹಲವು ರಾಯಭಾರ ಕಚೇರಿಗಳು ಮತ್ತು ಅವುಗಳ ಬೆಂಬಲವನ್ನು ಹೊಂದಿರುವ ಸಾಂಸ್ಕøತಿಕ ಕೇಂದ್ರಗಳು ಇಂದು ಸ್ಪ್ಯಾನಿಶ್, ಫ್ರೆಂಚ್ ಸೇರಿದಂತೆ ಹಲವು ಭಾಷೆಗಳನ್ನು ಸ್ಥಳೀಯರಿಗೆ ಕಲಿಸುತ್ತಿವೆ. ಹೀಗಿರುವಾಗ ಇತ್ತ ನಮ್ಮದೇ ದೇಶದ ಭಾಷೆಗಳು ಈ ನಿಟ್ಟಿನಲ್ಲಿ ಹಿಂದುಳಿದಿರುವುದು ಸತ್ಯ. ದಿಲ್ಲಿಯಲ್ಲಿರುವ ಆಯಾ ರಾಜ್ಯಗಳ ಸಾಂಸ್ಕøತಿಕ ಭವನಗಳು, ಇಂಥಾ ವಿನೂತನ ಹೆಜ್ಜೆಗಳನ್ನಿಟ್ಟಲ್ಲಿ ಭಾರತದ ಭಾಷಾವೈವಿಧ್ಯ ಮತ್ತು ಸಾಂಸ್ಕøತಿಕ ವೈವಿಧ್ಯಗಳು ರಾಷ್ಟ್ರರಾಜಧಾನಿಯಲ್ಲೂ ಅರಳುವುದು ಅಸಾಧ್ಯದ ಮಾತೇನಲ್ಲ.

ದಿಲ್ಲಿಯಲ್ಲಿ ಭಾರತದ ಇತರ ಭಾಷೆಗಳ ಚಟುವಟಿಕೆಗಳು ನಡೆಯುತ್ತಿಲ್ಲವೆಂದರೆ ಅದು ಸುಳ್ಳಾಗುತ್ತದೆ. ಆದರೆ ಅವುಗಳು ಸಾಮಾನ್ಯವಾಗಿ ಆಯಾ ಭಾಷೆಗಳನ್ನು ಮಾತನಾಡುವ ಮಂದಿಯ ನಡುವಿನಲ್ಲೇ ಶುರುವಾಗಿ, ಅಲ್ಲೇ ಕೊನೆಯಾಗಿಬಿಡುತ್ತದೆ. ಹಾಗೆ ನೋಡಿದರೆ ಈ ವಿಚಾರದಲ್ಲಿ ಕನ್ನಡವೇ ವಾಸಿ. ದೆಹಲಿ ಕರ್ನಾಟಕ ಸಂಘ, ಗುರ್ಗಾಂವ್ ಕನ್ನಡ ಸಂಘ, ಜೆ.ಎನ್.ಯು ಕನ್ನಡ ಅಧ್ಯಯನ ಪೀಠಗಳು ಭಾಷಾವೈವಿಧ್ಯವನ್ನು ಪಸರಿಸುವ ನಿಟ್ಟಿನಲ್ಲಿ ಹೊಸತನದ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿವೆ.   

ಭಾಷೆಯ ಸೃಷ್ಟಿಯ ಮೊದಲು ಸಂವಹನವು ಇರಲಿಲ್ಲವೆಂದಲ್ಲ. ಆದರೆ ಭಾಷೆಯಿಂದಾಗಿ ಅದಕ್ಕೊಂದು ಚೌಕಟ್ಟು ಸಿಕ್ಕಿತು. ಮುಂದೆ ಅದಕ್ಕೆ ಕಲಾತ್ಮಕತೆಯೂ ಜೊತೆಯಾಗಿ ಕಾವ್ಯ, ನಾಟಕಗಳಂತಹ ಪ್ರಕಾರಗಳ ಸಾಹಿತ್ಯಸೃಷ್ಟಿಗೂ ಕಾರಣವಾಯಿತು. ಈ ಬಗ್ಗೆ ಚಂದದ ಕತೆಯೊಂದಿದೆ.

ಖ್ಯಾತ ಲೇಖಕ ಪೌಲೋ ಕೊಯೆಲೋ ಭಾಷೆಯ ಬಗೆಗಿನ ಘಟನೆಯೊಂದನ್ನು ತನ್ನ ‘ಲೈಕ್ ದ ಫ್ಲೋಯಿಂಗ್ ರಿವರ್’ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಕೊಯೆಲೋ ಒಮ್ಮೆ ಒಂದು ದೇಶಕ್ಕೆ ಪತ್ನಿಯೊಂದಿಗೆ ಪ್ರವಾಸ ಹೋಗಿದ್ದರಂತೆ. ಅಲ್ಲಿ ಆಗ ಭಾರೀ ಚಳಿ. ಮೈದಾನದಂತಿದ್ದ ತೆರೆದ ಪ್ರದೇಶವೊಂದರಲ್ಲಿ ಚಿತ್ರಕಲಾವಿದನೊಬ್ಬ ಕಲಾಕೃತಿಗಳನ್ನು ರಚಿಸುತ್ತಿದ್ದ. ಆತನ ಕೈಗವಸು ಕೊಂಚ ಹರಿದಿದ್ದರಿಂದ ಬೀಸುತ್ತಿದ್ದ ಚಳಿಗಾಳಿಯು ಅವನ ಕೈಗಳನ್ನು ನಡುಗಿಸುತ್ತಿತ್ತು, ಮರಗಟ್ಟುವಂತೆ ಮಾಡುತ್ತಿತ್ತು. ಆದರೂ ಅವನು ಚಿತ್ರಗಳನ್ನು ಬಿಡಿಸದೆ ಹೋಗುವಂತಿಲ್ಲ. ಏಕೆಂದರೆ ಅವನಿಗದು ಹೊಟ್ಟೆಪಾಡು. 

ಇತ್ತ ಚಳಿಗಾಳಿಯನ್ನೂ ಲೆಕ್ಕಿಸದೆ, ನಡುಗುತ್ತಾ ಚಿತ್ರಗಳನ್ನು ಬಿಡಿಸುತ್ತಿರುವ ಚಿತ್ರಕಲಾವಿದನ ಬಗ್ಗೆ ಕೊಯೆಲೋರಿಗೆ ಅನುಕಂಪ ಹುಟ್ಟುತ್ತದೆ. ಕೊಯೆಲೋ ಅವನನ್ನು ಪ್ರೀತಿಯಿಂದ ಮಾತಾಡಿಸುತ್ತಾರೆ. ಆತನೂ ಕೂಡ ಅವರಿಗೆ ಸ್ಪಂದಿಸುತ್ತಾನೆ. ವಿಶೇಷವೆಂದರೆ ಇಬ್ಬರಿಗೂ ಪರಸ್ಪರರ ಭಾಷೆಗಳು ತಿಳಿದಿರುವುದಿಲ್ಲ. ಆದರೆ ಹೇಗೆ ಆ ಸಂಭಾಷಣೆಯು ಮನಸ್ಸನ್ನು ತಟ್ಟಿತು ಎಂದು ಬರೆಯುತ್ತಾರೆ ಕೊಯೆಲೋ. ಸಂವಹನದ ವಿಚಾರದಲ್ಲಿ ಭಾಷೆಗೂ ಮಿಗಿಲಾದ ಸಂಗತಿಯೊಂದು ಮನುಷ್ಯರ ನಡುವೆ ಬೆಸುಗೆಯಾಗುವುದು, ಎದೆ-ಎದೆಗಳ ನಡುವೆ ಸೇತುವೆಯಾಗುವುದು ಹೀಗೆ ಎಂದು ಬರೆಯುತ್ತಾರೆ ಕೊಯೆಲೋ.

ಹಿಂದೊಮ್ಮೆ ದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ನ ತೆರೆದ ಸಭಾಂಗಣದಲ್ಲಿ ಯಕ್ಷಗಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸಭಿಕರಾಗಿ ಸ್ಥಳೀಯರು ಮತ್ತು ಭಾರತದ ವಿವಿಧ ರಾಜ್ಯಗಳ ಕಲಾವಿದರೂ ಸೇರಿದಂತೆ ಸಾಕಷ್ಟು ವಿದೇಶೀಯರೂ ಇದ್ದರು. ಯಕ್ಷಗಾನದ ಮಂಗಳ ಹಾಡಿನ ನಂತರ ಚಪ್ಪಾಳೆಯು ಮುಗಿಲು ಮುಟ್ಟಿದ್ದು, ನಮ್ಮ ಕನ್ನಡದ ಸೊಗಸು ಭಾಷೆಗೂ ಮಿಗಿಲಾದ ಭಾವದಲ್ಲಿ ಅಂದು ಎಲ್ಲರನ್ನೂ ತಟ್ಟಿದ್ದು… ಇತ್ಯಾದಿಗಳಿಗೆ ನಾನಂದು ಸಾಕ್ಷಿಯಾಗಿದ್ದೆ.ಪೌಲೋ ಕೊಯೆಲೋ ಹೇಳಿದಂತೆ ಅಂದು ದಿಲ್ಲಿಯಲ್ಲಿ ಭಾಷೆಗೂ ಮಿಗಿಲಾದ ಭಾವವೊಂದು ನಮ್ಮೆಲ್ಲರನ್ನು ತಟ್ಟಿ ನಮ್ಮನ್ನು ಮಂತ್ರಮುಗ್ಧಗೊಳಿಸಿತ್ತು. ಮತ್ತದು ಕನ್ನಡದ ಮೂಲಕವೇ ಆಗಿತ್ತೆಂಬುದು ನನ್ನ ಮಟ್ಟಿಗೊಂದು ಹಿತವಾದ ಕಾಕತಾಳೀಯ.

‍ಲೇಖಕರು Avadhi

June 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: