ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭವಿಷ್ಯತ್ಕಾಲ

ಸುನೀತಾ ಬೆಟ್ಕೇರೂರ

ಬರುತ್ತಿದ್ದೇನೆ ನಾನು
ಬೇಡುವುದಿಲ್ಲ
ಹೂವ ಬೆಳೆಸಿ ನಾನು
ಬರುವ
ದಾರಿಗೆಂದು, ನೀವು
ಮುಳ್ಳನ್ಹರಡಿದರೂ
ಮುನ್ನಡೆಯುತ್ತೇನೆ ಕತ್ತ
ಬಗ್ಗಿಸದೆ.

ತರುತ್ತಿದ್ದೇನೆ
ಕನಸಬಂಡಿಯನೊಡನೆ,
ಹರುವ ಬಯಸುತ್ತೇನೆ
ಅವುಗಳ
ಸುತ್ತೆಂಟೂ ದಿಕ್ಕಿಗೂ,
ಕಟ್ಟಿದರೆ ಅಡ್ಡಕಟ್ಟೆ
ಕಿತ್ತೊಗೆಯಬಲ್ಲೆ,
ಬಂಡಿಯನೊಡಿಸಬಲ್ಲೆ,
ಕಟ್ಟಿದವರ
ಕಣ್ಣೆದುರಲ್ಲೆ.

ಒಸರುತ್ತಿದೆ ಚಿಲುಮೆ
ನನ್ನೊಳಗೆ
ಹಸಿರನುಕ್ಕಿಸುವ ಹಿರಿ
ಬಯಕೆಯೊಂದಿಗೆ.
ನಿಂತಿರಬಹುದು ಅವನಲ್ಲಿ
ಬಿಚ್ಚು ಮುಡಿಯಲ್ಲಿ
ಹಿಡಿದಿಡಲು.
ಅಂಜುತ ಅಳುಕುತ
ಹೆಜ್ಜೆಯಿಡಲು
ಮುನ್ನಿನಂತೆ ನಾನಿಲ್ಲ
ಕೊಡವಿಕೊಂಡಿದ್ದೇನೆ
ಅವನೆಲ್ಲ,

ಕಟ್ಟಿಕೊಂಡಿದ್ದೇನೆ
ಪಕ್ಕೆಗೆ ರೆಕ್ಕೆಯೆರಡನು
ಕಾಡು-ಮೇಡಲ್ಲಿ
ಹಾರಾಡುವ
ಬಯಕೆಯೊಂದಿಗೆ.
ಚಿಮ್ಮಬಲ್ಲೆ ಕವಣೆಕಲ್ಲ
ಗುರಿಯಾಚೆ,
ವಿಹರಿಸಬಲ್ಲೆ ಕೋಟೆ
ಕೊತ್ತಲಾಚೆ.

ಬರುತ್ತಿದ್ದೇನೆ ನಾನು

ದಾರಿಬಿಡಿ
ಎನ್ನುವುದಿಲ್ಲ ,
ದಾರಿ ಮಾಡಿಕೊಳ್ಳುವ ಬಗೆ
ತಿಳಿದಿದೆ ನನಗೆ.
ತಗ್ಗಿನಲ್ಲಿಳಿದು ದಿಣ್ಣೆಯೇರಿ
ಹಾರಿಸಬಲ್ಲೆ ನನ್ನ
ಬಾವುಟ
ಮೊಳಗಿಸಬಲ್ಲೆ ನನ್ನ
ವಿಜಯದುಂದುಭಿ.

‍ಲೇಖಕರು Avadhi

7 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading